ಹೆಬ್ಬಾವಿನ ಕಣ್ಣಿಗೆ ಹೊಡೆದು ಪಾರಾದೆ: ವೈಶಾಖ್

7

ಹೆಬ್ಬಾವಿನ ಕಣ್ಣಿಗೆ ಹೊಡೆದು ಪಾರಾದೆ: ವೈಶಾಖ್

Published:
Updated:
ಹೆಬ್ಬಾವಿನ ಕಣ್ಣಿಗೆ ಹೊಡೆದು ಪಾರಾದೆ: ವೈಶಾಖ್

ಮಂಗಳೂರು: ‘ಅಜ್ಜನ ಮನೆಗೆ ತೆರಳುತ್ತಿದ್ದೆ. ಹಿಂದಿನಿಂದ ದಾಳಿ ಮಾಡಿದ ಹೆಬ್ಬಾವು ನೆಲಕ್ಕೆ ಬಿದ್ದ ನನ್ನನ್ನು ಸುತ್ತಿಕೊಳ್ಳಲು ಆರಂಭಿಸಿತು. ಅದರಿಂದ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದೆ. ಬಿಗಿ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಹೆಬ್ಬಾವಿನ ಕಣ್ಣಿಗೆ ಹೊಡೆದರೆ, ಕಣ್ಣು ಕಾಣದಂತಾಗಿ ನನ್ನನ್ನು ಬಿಡಬಹುದು ಎಂದು ಕಲ್ಲಿನಿಂದ ಅದರ ಕಣ್ಣಿಗೆ ಹೊಡೆದೆ. ಅದರ ಕಣ್ಣು ಸಂಪೂರ್ಣ ಹಾಳಾಯಿತು. ಕಣ್ಣು ಕಾಣದ ಹಾವು ನನ್ನನ್ನು ಬಿಟ್ಟು ಹೋಯಿತು’.ಹೆಬ್ಬಾವಿನೊಂದಿಗೆ ಸೆಣಸಾಡಿ, ಇದೀಗ ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಗ್ರಾಮದ ಕೊಳಕೆ ಕೂಡೂರಿನ 11 ವರ್ಷ ಬಾಲಕ ವೈಶಾಖ್‌, ತನ್ನನ್ನು ರಕ್ಷಿಸಿಕೊಂಡ ಬಗೆಯನ್ನು ‘ಪ್ರಜಾವಾಣಿ’ಗೆ ವಿವರಿಸಿದ್ದು ಹೀಗೆ.‘ಸುತ್ತಿಕೊಳ್ಳಲು ಆರಂಭಿಸಿದ ಹೆಬ್ಬಾವಿನಿಂದ ಬಿಡಿಸಿಕೊಳ್ಳಲು ಅದರ ತಲೆಗೆ ಗುದ್ದಿದೆ. ಆಗ ನನ್ನ ಕೈ ಅದರ ಬಾಯೊಳಗೆ ಹೋಯಿತು. ಇದರಿಂದ ಕೈ ಬೆರಳುಗಳಿಗೂ ಗಾಯವಾಗಿದೆ’ ಎಂದು ಹೇಳಿದ. ‘ಅಷ್ಟರಲ್ಲೇ ಕಾಲೇಜಿನಿಂದ ನನ್ನ ದೊಡ್ಡಪ್ಪನ ಮಗಳು ಹರ್ಷಿತಾ ಬರುತ್ತಿದ್ದಳು. ಸುತ್ತಿಕೊಂಡಿದ್ದ ಹಾವನ್ನು ಬಿಡಿಸಲು ಮುಂದಾದಳು. ಹತ್ತಿರಕ್ಕೆ ಬರದಂತೆ ಹೇಳಿದೆ’ ಎಂದು ತಿಳಿಸಿದ.‘ನನ್ನ ಮನೆಯ ಹಿಂಭಾಗದಲ್ಲಿ ಎರಡು ಹೆಬ್ಬಾವುಗಳನ್ನು ನೋಡಿದ್ದೆ. ಹಾಗಾಗಿ ಹೆಬ್ಬಾವು ಸುತ್ತಿಕೊಂಡಾಗ ಹೆದರಿಕೆ ಆಗಲಿಲ್ಲ. ನಾನು ಓದುತ್ತಿರುವ ಸಜೀಪ ಆದರ್ಶ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಣಾ ಕ್ರಮಗಳನ್ನು ಹೇಳಿಕೊಡಲಾಗುತ್ತಿತ್ತು. ಇದು ನನಗೆ ಅನುಕೂಲವಾಯಿತು. ಹೆಬ್ಬಾವಿನ ಕಣ್ಣು ಕಾಣದಂತೆ ಮಾಡಿದರೆ, ಅದಕ್ಕೆ ಏನೂ ಮಾಡಲು ಆಗುವುದಿಲ್ಲ ಎಂಬುದು ತಿಳಿದಿತ್ತು. ಇದೆಲ್ಲವನ್ನು ಬಳಸಿಕೊಂಡು ಹಾವಿನ ಒಂದು ಕಣ್ಣನ್ನು ಸಂಪೂರ್ಣವಾಗಿ ಜಜ್ಜಿದೆ’ ಎಂದು ಹೆಬ್ಬಾವಿನಿಂದ ಬಿಡಿಸಿಕೊಂಡ ಬಗೆಯನ್ನು ವಿವರಿಸಿದ.‘ಕಾಲು ಮತ್ತು ಕೈ ಬೆರಳುಗಳಿಗೆ ಗಾಯವಾಗಿದೆ. ಆಸ್ಪತ್ರೆಯಲ್ಲಿನ ಚಿಕಿತ್ಸೆಯಿಂದ ಈಗ ನೋವು ಕಡಿಮೆಯಾಗಿದೆ. ಇನ್ನೆರಡು ದಿನದಲ್ಲಿ ಮನೆಗೆ ಹೋಗಬಹುದು ಎಂದು ವೈದ್ಯರು ಹೇಳಿದ್ದಾರೆ’ ಎಂದು ವೈಶಾಖ್ ತನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ.ತೀವ್ರ ನಿಗಾ ಘಟಕದಿಂದ ವಾರ್ಡ್‌ಗೆ ಸ್ಥಳಾಂತರ ಆಗಿರುವ ವೈಶಾಖ್‌ನನ್ನು ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.ಗಣ್ಯರ ದಂಡು: ವೈಶಾಖ್‌ನ ಭೇಟಿಗೆ ನಗರದ ಫಾದರ್‌ ಮುಲ್ಲರ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ಅನೇಕ ಜನಪ್ರತಿನಿಧಿಗಳು, ಮುಖಂಡರು ವೈಶಾಖ್‌ನ ಆರೋಗ್ಯ ವಿಚಾರಿಸುತ್ತಿದ್ದಾರೆ.ವಿಧಾನ ಪರಿಷತ್‌ ಆಡಳಿತ ಪಕ್ಷದ ಮುಖ್ಯ ಸಚೇತಕ ಐವನ್ ಡಿಸೋಜ, ವೈಶಾಖ್‌ನ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ವೈಶಾಖ್‌ನ ಹೆಸರನ್ನು ಶೌರ್ಯ ಪ್ರಶಸ್ತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ.ಸೆರೆಸಿಕ್ಕ ಹೆಬ್ಬಾವು: ಕೊಳಕೆ ಕೂಡೂರಿನಲ್ಲಿ ವೈಶಾಖ್‌ನ ಮೇಲೆ ದಾಳಿ ಮಾಡಿದ ಹೆಬ್ಬಾವನ್ನು ಸ್ಥಳೀಯರು ಪತ್ತೆ ಹಚ್ಚಿದ್ದು, ಗ್ರಾಮದ ತ್ಯಾಜ್ಯ ಸಂಸ್ಕರಣಾ ಘಟಕದ ಬಳಿ ಬಿಟ್ಟು ಬಂದಿದ್ದಾರೆ ಎಂದು ಗ್ರಾಮದ ಜನರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry