ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯ ಹೊಟ್ಟೆ ಗಟ್ಟಿ ಮಾಡಿ!

ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್)
Last Updated 11 ಅಕ್ಟೋಬರ್ 2016, 10:51 IST
ಅಕ್ಷರ ಗಾತ್ರ

ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಸೂಕ್ತವಾಗಿತ್ತು, ಸರಿಯಾದ ಸಮಯದಲ್ಲಿ ಅದನ್ನು ನಡೆಸಲಾಗಿದೆ. ಈ ದಾಳಿಗಾಗಿ ಸೇನೆಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳು. ಆದರೆ ಈ ಹೊತ್ತಿನಲ್ಲಿ ನಮ್ಮನ್ನು ಆವರಿಸಿರುವ ಆಡಂಬರದ ದೇಶಭಕ್ತಿಯು ವಾಸ್ತವವನ್ನು ಮರೆಮಾಚುತ್ತಿದೆ.

ನಮ್ಮ ಸೇನೆ ಬಳಿ ಸೂಕ್ತ ಶಸ್ತ್ರಾಸ್ತ್ರಗಳು ಇಲ್ಲ, ಇರುವವೂ ಹಳತಾಗಿವೆ ಎಂಬುದನ್ನು ಮರೆಯಬಾರದು. ಶಸ್ತ್ರಾಸ್ತ್ರ ಖರೀದಿಗೆ ವಿಳಂಬ ಧೋರಣೆ ಅನುಸರಿಸುವ, ಅಲ್ಲೂ ಭ್ರಷ್ಟಾಚಾರಕ್ಕೆ ಆಸ್ಪದ ನೀಡುವ ವ್ಯವಸ್ಥೆಗೆ ಸೇನಾಪಡೆಗಳು ಬಲಿಯಾಗಿವೆ. ಎರಡು ವಿಚಾರಗಳಲ್ಲಿ ರಾಜಕೀಯ ನಾಯಕರು ತ್ವರಿತವಾಗಿ ಕೆಲಸ ಮಾಡುವಂತಾಗಲು ಈಚಿನ ಘಟನೆಗಳು ಕಾರಣವಾಗಬೇಕು.

ಮೊದಲನೆಯದು: ಭಾರತ ಮತ್ತು ಪಾಕಿಸ್ತಾನದ ಅಣ್ವಸ್ತ್ರ ತಾಕತ್ತು, ಇವೆರಡೂ ದೇಶಕ್ಕಿರುವ ಅಣ್ವಸ್ತ್ರ ದಾಳಿಯ ಭೀತಿ ಏನೇ ಇರಲಿ, ಶಸ್ತ್ರಾಸ್ತ್ರ ಖರೀದಿ ನಿರ್ದೇಶನಾಲಯದಲ್ಲಿರುವ ಕೊಳೆಯನ್ನು ತೊಳೆಯಬೇಕು. ನಮ್ಮ ಸೇನೆಯ ಸಾಂಪ್ರದಾಯಿಕ ಯುದ್ಧ ಸಾಮರ್ಥ್ಯ ಹೆಚ್ಚಿಸಬೇಕು.

ಎರಡನೆಯದು: ಗುಪ್ತಚರ ಸಂಸ್ಥೆಗಳ ಮಾಹಿತಿ ಕಲೆಹಾಕುವ ಸಾಮರ್ಥ್ಯ ಹೆಚ್ಚಿಸಬೇಕು. ನಗರಗಳ ಸುಲಭ ಗುರಿಗಳ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ಕಾರ್ಯಾಚರಣೆ ನಡೆಸಲು ವಿಶೇಷ ಪಡೆಗಳಲ್ಲಿನ ತಾಕತ್ತು ಹೆಚ್ಚಿಸಬೇಕು.

ಪಾಕಿಸ್ತಾನವು ತನ್ನ ‘ಸ್ಲೀಪರ್‌ ಸೆಲ್‌’ಗಳ ಮೂಲಕ ದೇಶದ ನಗರಗಳಲ್ಲಿ ಭಯೋತ್ಪಾದನಾ ದಾಳಿ ನಡೆಯುವಂತೆ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಹೀಗೆ ಮಾಡಲು ಪಾಕಿಸ್ತಾನಕ್ಕೆ ಹೆಚ್ಚಿನ ಹಣ ಬೇಕಿಲ್ಲ. ಅಲ್ಲದೆ, ‘ಗಡಿಯಾಚೆಗಿನ ಭಯೋತ್ಪಾದನೆಗೆ ಪ್ರೋತ್ಸಾಹ’ ಎಂಬ ಅಂತರರಾಷ್ಟ್ರೀಯ ಆರೋಪಕ್ಕೆ ಆ ದೇಶ ಗುರಿಯಾಗುವುದಿಲ್ಲ.

ಮುಂಬೈ, ಪುಣೆ, ವಾರಾಣಸಿ ಮೇಲೆ ನಡೆದಂತಹ ದಾಳಿಗಳನ್ನು ತಡೆಯಲು ನಾವು ಮಾಡಬೇಕಿರುವುದು ಸಾಕಷ್ಟಿದೆ ಎನ್ನಲು ಆಧಾರವಿದೆ. ‘ಹೊಟ್ಟೆ ಗಟ್ಟಿಯಾಗಿದ್ದರೆ, ತುಂಬಿದ್ದರೆ ಸೇನೆ ಮುನ್ನಡೆಯುತ್ತದೆ’ ಎಂದು ಫ್ರಾನ್ಸ್‌ನ ಸಾಮ್ರಾಟ, ಮಿಲಿಟರಿ ನಾಯಕ ನೆಪೋಲಿಯನ್ ಉಪಮೆಯನ್ನು ಬಳಸಿ ಹೇಳಿದ್ದ.

ಸೈನಿಕರಿಗೆ ಆಹಾರದ ಜೊತೆ ಉತ್ತಮ ಬಂದೂಕುಗಳು, ಶಸ್ತ್ರಾಸ್ತ್ರ, ಒಳ್ಳೆಯ ಬಟ್ಟೆ ಬೇಕು. ನಮ್ಮವರು ವಿಶ್ವದಲ್ಲೇ ಅತ್ಯುತ್ತಮ ಯೋಧರು. ಆದರೆ ಸಂಪನ್ಮೂಲಗಳ ಕೊರತೆ ಅವರಿಗೆ ಶಾಪವಾಗಿ ಪರಿಣಮಿಸಿದೆ. ಎದುರಾಳಿಯ ಬಳಿ ಹೆಚ್ಚು ಉತ್ತಮವಾದ ಶಸ್ತ್ರಾಸ್ತ್ರ, ಸಾಗಣೆ ಸೌಲಭ್ಯ ಇದ್ದರೆ ನಮ್ಮ ಸ್ಥಿತಿ ಏನಾಗುತ್ತದೆ ಎಂಬುದನ್ನು ಚೀನಾ ಜೊತೆಗಿನ ಯುದ್ಧ ತೋರಿಸಿಕೊಟ್ಟಿದೆ.

ಫಿರಂಗಿ ಮಾತ್ರವಲ್ಲ, ಯುದ್ಧ ಗೆಲ್ಲಲು ಮಿಂಚಿನ ವೇಗವೂ ಬೇಕು ಎಂದು ನೆಪೋಲಿಯನ್ ಹೇಳಿದ್ದ. ಇಂಥ ವೇಗ ಬೇಕಿರುವುದು ಸೇನೆಯ ನಾಯಕರ ಹಂತದಲ್ಲಿ ಮಾತ್ರವಲ್ಲ, ರಾಜಕೀಯ ನಾಯಕರೂ ವೇಗವಾಗಿ ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದರೆ, ದೇಶದ ಸಾರ್ವಭೌಮತೆಯೇ ಅಪಾಯಕ್ಕೆ ಸಿಲುಕಬಹುದು.

ಸಾಮ್ರಾಟರ ಕಾಲದಲ್ಲಿ ಸೇನೆಯು ನೇರವಾಗಿ ಅವರ ನಿಯಂತ್ರಣದಲ್ಲಿ ಇರುತ್ತಿತ್ತು. ಹಾಗಾಗಿ, ಸೇನೆಗೆ ಬೇಕಿರುವ ಸವಲತ್ತುಗಳನ್ನು ಕಲ್ಪಿಸುವ ವಿಚಾರದಲ್ಲಿ ಸಾಮ್ರಾಟರು ಆಲೋಚಿಸಿದಷ್ಟೇ ವೇಗದಲ್ಲಿ ಕೆಲಸವನ್ನೂ ಮಾಡುತ್ತಿದ್ದರು. ವಿಳಂಬ ಮಾಡಿದರೆ ಸಾಮ್ರಾಜ್ಯವೇ ಕೈಬಿಟ್ಟುಹೋಗಬಹುದು ಎಂಬುದು ಅವರಿಗೆ ಗೊತ್ತಿತ್ತು. ಆದರೆ ಇಂದು ವಿಳಂಬ ಧೋರಣೆ ಅನುಸರಿಸಿದರೆ, ಅಬ್ಬಬ್ಬಾ ಎಂದರೆ ನಮ್ಮ ರಕ್ಷಣಾ ಸಚಿವರ ಖಾತೆ ಬದಲಾಗಬಹುದು. ಇಂದಿನ ಕಾಲಕ್ಕೆ ನಮಗೆ ಸರ್ವಾಧಿಕಾರ ಬೇಕಾಗಿಲ್ಲ.

ಒಳ್ಳೆಯ ಅರಸೊತ್ತಿಗೆಗಿಂತ ಕೆಟ್ಟ ಪ್ರಜಾಪ್ರಭುತ್ವವೇ ಬೇಕು ಎಂಬ ಕಾಲ ಇದು. ಪ್ರಜಾತಾಂತ್ರಿಕ ಮಾರ್ಗದ ಮೂಲಕ ಚುನಾಯಿತರಾದ ನಾಯಕರು ವೇಗವಾಗಿ, ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವಂತೆ ಮಾಡುವುದು ಹೇಗೆ ಎಂಬ ಗೊಂದಲದಲ್ಲಿ ನಾವಿದ್ದೇವೆ.

ಒಂದು ಉದಾಹರಣೆ ಗಮನಿಸಿ: ಹೆಲಿಕಾಪ್ಟರ್‌ ಖರೀದಿಗಾಗಿ ಭಾರತೀಯ ಸೇನೆ 15 ವರ್ಷಗಳ ಹಿಂದೆ ಟೆಂಡರ್‌ ಕರೆಯಿತು. ಆ ಟೆಂಡರ್‌ ಕರೆದಿದ್ದೇ 25 ವರ್ಷ ತಡವಾಗಿ! ಈಗಿರುವ ಚೇತಕ್‌ ಹೆಲಿಕಾಪ್ಟರ್‌ಗಳು ತಂತ್ರಜ್ಞಾನದ ವಿಚಾರದಲ್ಲಿ 60 ವರ್ಷಗಳಷ್ಟು ಹಳೆಯವು. ಟೆಂಡರ್‌ ಅನ್ನು ಮೂರು ಬಾರಿ ರದ್ದುಗೊಳಿಸಲಾಗಿದೆ, ಅದನ್ನು ಇನ್ನೂ ಯಾರಿಗೂ ವಹಿಸಿಲ್ಲ. ಈಗ ತರಾತುರಿಯಲ್ಲಿ ರಷ್ಯಾದ ಕಮೌ ಹೆಲಿಕಾಪ್ಟರ್‌ ಖರೀದಿಗೆ ಮುಂದಡಿ ಇಟ್ಟಿದ್ದೇವೆ. ಹೆಲಿಕಾಪ್ಟರ್‌ಗಳ ಪೂರೈಕೆ ಆರಂಭವಾಗಲು ಮೂರು ವರ್ಷ ಬೇಕು.

ಗುತ್ತಿಗೆಯೊಂದನ್ನು ಮೂರು ಅಥವಾ ಅದಕ್ಕಿಂತ ಹೆಚ್ಚು ವರ್ಷ ವಿಳಂಬ ಮಾಡಿದರೆ ತಂತ್ರಜ್ಞಾನ ಹಳೆಯದಾಗುವಿಕೆ, ಗುತ್ತಿಗೆ ನಿರ್ವಹಿಸುತ್ತಿದ್ದ ವ್ಯಕ್ತಿಗಳಲ್ಲಿ ಬದಲಾವಣೆ, ಸರ್ಕಾರಗಳ ಬದಲಾಗುವಿಕೆಯಂತಹ ಸಮಸ್ಯೆಗಳು ಎದುರಾಗುತ್ತವೆ ಎಂಬುದು ಸಾಮಾನ್ಯ ವ್ಯಕ್ತಿಗೂ ತಿಳಿದಿದೆ.

ಈ ವಿಳಂಬದಿಂದಾಗಿ ಇಡೀ ಕಸರತ್ತೇ ವ್ಯರ್ಥವಾಗಿಬಿಡುತ್ತದೆ, ಗುತ್ತಿಗೆ ಅಂತಿಮಗೊಳ್ಳುವುದೇ ಇಲ್ಲ. ವಿಶ್ವದ ಬಹುತೇಕ ದೇಶಗಳಲ್ಲಿ ರಕ್ಷಣಾ ಕ್ಷೇತ್ರದ ಗುತ್ತಿಗೆಗಳು ಪೂರ್ಣಗೊಳ್ಳಲು ಎರಡರಿಂದ ಮೂರು ವರ್ಷ ಸಾಕು ಎಂದು ಏರ್‌ಬಸ್‌, ಬೋಯಿಂಗ್‌, ರೋಲ್ಸ್‌ ರಾಯ್ಸ್‌, ಲಾಕ್‌ಹೀಡ್‌ ಮಾರ್ಟಿನ್‌ ಮತ್ತಿತರ ಕಂಪೆನಿಗಳ ಯಾವುದೇ ಪ್ರತಿನಿಧಿ ಹೇಳಬಲ್ಲ. ಆ ದೇಶಗಳೂ ಸ್ಥಾಪಿತ ಹಿತಾಸಕ್ತಿಗಳು, ಮಧ್ಯವರ್ತಿಗಳಿಂದ ಹೊರತೇನೂ ಅಲ್ಲ.

ಈಗ ಕೇಂದ್ರ ಸಚಿವರಾಗಿರುವ, ಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ಸುತ್ತ ವಿವಾದಗಳು ಏನೇ ಇರಬಹುದು. ಆದರೆ ಸಿಂಗ್ ಅವರು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಸತ್ಯ ಇತ್ತಾ ಎಂಬ ಪ್ರಶ್ನೆಯನ್ನು ನಾವು ಕೇಳಬೇಕು. ಸಿಂಗ್‌ ಅವರು ಬರೆದ ಪತ್ರದಲ್ಲಿ ‘ಎಲ್ಲರಿಗೂ ತಿಳಿದ ರಹಸ್ಯ’ಗಳಿದ್ದವು.

ಭಾರತೀಯ ಸೇನೆ ಎದುರಿಸುತ್ತಿರುವ ಸಂಪನ್ಮೂಲಗಳ ಕೊರತೆಯ ಪ್ರಮಾಣ ತೀರಾ ಗಂಭೀರವಾಗಿದೆ ಎಂದು ಸಿಂಗ್ ಪತ್ರದಲ್ಲಿ ಹೇಳಿದ್ದರು. ನಿವೃತ್ತಿಯ ಅಂಚಿನಲ್ಲಿರುವಾಗ ಸೇನಾ ಮುಖ್ಯಸ್ಥರು ಹೆಚ್ಚು ಮಾತನಾಡುವುದಿಲ್ಲ, ರಾಜಕೀಯವಾಗಿ ತಪ್ಪು ಎನ್ನಬಹುದಾದ ಏನನ್ನೂ ಹೇಳುವುದಿಲ್ಲ.

ನಿವೃತ್ತಿಯ ನಂತರ ಸಿಗಬಹುದಾದ ಲಾಭಗಳ ಮೇಲೆ ಅವರ ಕಣ್ಣಿರುತ್ತದೆ. ಹಾಗಾಗಿ, ಮೋದಿ ಪ್ರವರ್ಧಮಾನಕ್ಕೆ ಬರುವ ಮುನ್ನ, ಚುನಾವಣೆಗೂ ಸಾಕಷ್ಟು ಮುನ್ನ, ಬಿಜೆಪಿ ಸೇರುವ ಮೊದಲೇ ಸಿಂಗ್ ಅವರು ಬರೆದ ಪತ್ರಕ್ಕೆ ಬೆಲೆ ಇದೆ. ಇಂಥ ಪರಿಸ್ಥಿತಿ ಇರುವುದು ಸೇನೆಯಲ್ಲಿ ಮಾತ್ರವಲ್ಲ, ವಾಯುಪಡೆ, ನೌಕಾಪಡೆ ಸ್ಥಿತಿಯೂ ಇದೇ ಆಗಿದೆ.

ನಮ್ಮಲ್ಲಿನ ಯುದ್ಧ ವಿಮಾನಗಳು ತೀರಾ ಹಳೆಯವು. ಜಾಗ್ವಾರ್‌, ಮಿರಾಜ್‌, ಮಿಗ್‌ ಯುದ್ಧ ವಿಮಾನಗಳ ಪೈಕಿ ಅರ್ಧದಷ್ಟು, ಬಿಡಿಭಾಗಗಳು ಇಲ್ಲದೆ ಹಾರಾಟ ನಿಲ್ಲಿಸಿವೆ. ಈ ವಿಮಾನಗಳ ತಯಾರಕರು ಬಿಡಿಭಾಗ ಉತ್ಪಾದನೆ ನಿಲ್ಲಿಸಿದ್ದಾರೆ. ಹಾರಾಟ ನಿಲ್ಲಿಸಿರುವ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ಇನ್ನೊಂದು ವಿಮಾನದಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಈ ರೀತಿಯ ಗಂಭೀರ ಪರಿಸ್ಥಿತಿ ಬಂದೂಕುಗಳು, ಗುಂಡು ನಿರೋಧಕಗಳು, ರಾತ್ರಿ ಕಾರ್ಯಾಚರಣೆಗೆ ಬಳಸುವ ಉಪಕರಣಗಳು, ಎತ್ತರದ ಪ್ರದೇಶಗಳಲ್ಲಿ ಸೈನಿಕರಿಗೆ ಬೇಕಾಗುವ ಬೂಟುಗಳು– ಬಟ್ಟೆಗಳ ವಿಚಾರದಲ್ಲೂ ಇದೆ. ರಕ್ಷಣಾ ಉಪಕರಣಗಳ ಖರೀದಿಯಲ್ಲಿ ವಿಳಂಬ ಆಗುತ್ತಿರುವುದರ ಹಿಂದೆ ಸ್ಥಾಪಿತ ಹಿತಾಸಕ್ತಿಗಳಿವೆ. ಇದರಲ್ಲಿ, ತಿಳಿವಳಿಕೆಯ ಕೊರತೆ ಇರುವ ಅಥವಾ ದುರಾಸೆಯ ರಾಜಕಾರಣಿಗಳಿದ್ದಾರೆ, ಅಧಿಕಾರಿಗಳಿದ್ದಾರೆ, ನಿವೃತ್ತ ಸೇನಾ ಮುಖ್ಯಸ್ಥರಿದ್ದಾರೆ, ಶಸ್ತ್ರಾಸ್ತ್ರ ವ್ಯಾಪಾರಿಗಳಿದ್ದಾರೆ. ರಕ್ಷಣಾ ಒಪ್ಪಂದದ ಮೂಲಕ ಬರುವ ಕಮಿಷನ್ ಹಂಚಿಕೊಳ್ಳಲು ಕಾಯುವವರು ಇದ್ದಾರೆ ಎಂಬುದರಲ್ಲಿ ಅನುಮಾನ ಇಲ್ಲ.

ಹಿಂದಿನ ಸರ್ಕಾರಗಳ ಅವಧಿಯಲ್ಲಿನ ರಕ್ಷಣಾ ಖರೀದಿ ಅವ್ಯವಹಾರಗಳಿಂದ,  ಖರೀದಿ ವಿಚಾರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ, ಅದರಲ್ಲೂ ಎ.ಕೆ. ಆಂಟನಿ ಅವರ ಅವಧಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೆ ಸೇನೆ ದುರ್ಬಲವಾಯಿತು. ಆಂಟನಿ ಅವರನ್ನು ಎಲ್ಲೆಡೆ ಒಳ್ಳೆಯ ಮನುಷ್ಯ ಎನ್ನಲಾಗುತ್ತದೆ. ‘ಸಂತ ಆಂಟನಿ’ ಎಂಬ ಅಡ್ಡಹೆಸರೂ ಇದೆ. ಆದರೆ, ರಕ್ಷಣಾ ಒಪ್ಪಂದಗಳ ವಿಚಾರದಲ್ಲಿ ಅವರು ಯಾವುದೇ ತೀರ್ಮಾನ ಕೈಗೊಳ್ಳುತ್ತಿರಲಿಲ್ಲ ಎಂಬ ಮಾತೂ ಇದೆ.

ಮುಂದಿನ ಹೆಜ್ಜೆ ಏನು ಎಂಬ ಬಗ್ಗೆ ಇಲ್ಲಿ ಕೆಲವು ಸಲಹೆಗಳಿವೆ: ಮೋದಿ ನೇತೃತ್ವದ ಸರ್ಕಾರ ರಕ್ಷಣಾ ಖರೀದಿಗೆ ಸಂಬಂಧಿಸಿದಂತೆ ನೀತಿಯೊಂದನ್ನು ಸಮರೋಪಾದಿಯಲ್ಲಿ ರೂಪಿಸಬೇಕು. ‘ಭಾರತದಲ್ಲೇ ತಯಾರಿಸಿ’ ಅಭಿಯಾನ ಒಳ್ಳೆಯದಿದ್ದರೂ, ಅದರಲ್ಲಿ ಸ್ಪಷ್ಟತೆಯ ಕೊರತೆ ಇದೆ. ಈ ನೀತಿಯಿಂದಾಗಿ, ರಕ್ಷಣಾ ಪಡೆಗಳಿಗೆ ಅಗತ್ಯವಿರುವ ಅನೇಕ ಖರೀದಿಗಳು ನಿಂತುಹೋಗಿವೆ.

ತೀರಾ ಇತ್ತೀಚಿನವರೆಗೆ ಭಾರತದ ಖಾಸಗಿ ವಲಯದಿಂದ ರಕ್ಷಣಾ ಉಪಕರಣಗಳ ಖರೀದಿ ಇರುತ್ತಿರಲಿಲ್ಲ. ರಕ್ಷಣಾ ಪಡೆ ಎಂಬುದು ‘ಪವಿತ್ರ ಗೋವು’ ಆಗಿರುವ ಕಾರಣ, ಅದಕ್ಕೆ ಅಗತ್ಯವಿರುವ ಉಪಕರಣಗಳನ್ನು ಸಾಯುವ ಸ್ಥಿತಿಯಲ್ಲಿರುವ ಸರ್ಕಾರಿ ಕಾರ್ಖಾನೆಗಳಿಂದ ಖರೀದಿಸಲಾಗುತ್ತಿತ್ತು. ಆದರೆ ವಿದೇಶಿ ಖಾಸಗಿ ಕಂಪೆನಿಗಳಿಂದ ಖರೀದಿ ಮಾಡಲು ತಕರಾರು ಇರಲಿಲ್ಲ.

ಭಾರತೀಯ ಕಂಪೆನಿಗಳ ಸಾಮರ್ಥ್ಯ ಹೆಚ್ಚುವವರೆಗೆ, ಕಿರು ಅವಧಿಗೆ ರಕ್ಷಣಾ ಕ್ಷೇತ್ರದಲ್ಲಿ ಶೇಕಡ 100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡಬೇಕು.ಇದರಿಂದಾಗಿ ವಿದೇಶಿ ಕಂಪೆನಿಗಳ ಮೇಲೆ ಹೆಚ್ಚಿನ ನಿಯಂತ್ರಣ ಸಿಗುತ್ತದೆ. ನಮ್ಮ ನಿಯಂತ್ರಣವೇ ಇಲ್ಲದ ವಿದೇಶಿ ಕಂಪೆನಿಗಳಿಂದ ಶಸ್ತ್ರಾಸ್ತ್ರ ಆಮದು ಮಾಡಿಕೊಳ್ಳುವುದಕ್ಕಿಂತ ಇದು ಉತ್ತಮ. ರಕ್ಷಣಾ ಉಪಕರಣಗಳ ಖರೀದಿಗೆ ಒಂದು ಸಮಿತಿ ರಚಿಸಬೇಕು.

ಪ್ರಾಯೋಗಿಕ ಬಳಕೆ ಸೇರಿದಂತೆ ಎಲ್ಲ ರೀತಿಯ ಶಿಷ್ಟಾಚಾರಗಳನ್ನು ಪೂರ್ಣಗೊಳಿಸಿದ ನಂತರ, ಗುತ್ತಿಗೆಯನ್ನು ಮೂರು ವರ್ಷಗಳೊಳಗೆ ನೀಡಬೇಕು ಎಂಬ ನಿಯಮ ವಿಧಿಸಬೇಕು. ಗುತ್ತಿಗೆ ನೀಡುವಲ್ಲಿ ವಿಳಂಬ ಆದರೆ ಅದಕ್ಕೆ ಕಾರಣ ಏನು ಎಂದು ತನಿಖೆ ನಡೆಸಬೇಕು. ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕು ಅಥವಾ ಅವರಿಗೆ ಛೀಮಾರಿ ಹಾಕಬೇಕು.

ರಕ್ಷಣಾ ಸಚಿವಾಲಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಇಷ್ಟೇ ಅಲ್ಲ, ಮೂರೂ ರಕ್ಷಣಾ ಪಡೆಗಳಲ್ಲೂ ಎಲ್ಲವೂ ಸರಿ ಇಲ್ಲ. ಶಸ್ತ್ರಾಸ್ತ್ರ ವ್ಯಾಪಾರಿಗಳು ನಿವೃತ್ತ ಸೇನಾಧಿಕಾರಿಗಳನ್ನು ಬಳಸಿಕೊಂಡು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಅಂಕ, ಪ್ರತಿಸ್ಪರ್ಧಿಗಳ ಉತ್ಪನ್ನಗಳಿಗೆ ಕಡಿಮೆ ಅಂಕ ಸಿಗುವಂತೆ ಮಾಡುತ್ತಾರೆ. ಈ ಕಾರ್ಯ ಸಾಧಿಸಲು ಆತ ಎಲ್ಲ ಬಗೆಯ ತಂತ್ರಗಳನ್ನೂ ಅನುಸರಿಸುತ್ತಾನೆ. ಉಡುಗೊರೆ ನೀಡುವುದು, ಸ್ವಿಸ್‌ ಬ್ಯಾಂಕ್‌ನಲ್ಲಿ ಖಾತೆ ಮಾಡಿಸಿಕೊಡುವುದು, ಹೆಣ್ಣಿನ ಆಮಿಷ ಒಡ್ಡುವುದೂ ಇದರಲ್ಲಿ ಸೇರಿವೆ.

ರಕ್ಷಣಾ ಸಚಿವಾಲಯದಿಂದ ಅನುಮೋದನೆ ಪಡೆದ ಕಂಪೆನಿಗಳು ಅಥವಾ ಅವುಗಳ ನಿರ್ದೇಶಕರಿಗೆ ವಿದೇಶಿ ಹಾಗೂ ಭಾರತದ ಶಸ್ತ್ರಾಸ್ತ್ರ ಕಂಪೆನಿಗಳ ಪ್ರತಿನಿಧಿಗಳಾಗಲು ಅಧಿಕೃತವಾಗಿ ಅವಕಾಶ ನೀಡಬಹುದು. ಇದರಿಂದಾಗಿ, ವ್ಯವಸ್ಥೆ ಪಾರದರ್ಶಕ ಆಗುತ್ತದೆ. ರಕ್ಷಣಾ ಪಡೆಗಳಿಂದ ನಿವೃತ್ತರಾದವರು, ಅಧಿಕಾರಿಗಳು ಮಧ್ಯವರ್ತಿಗಳ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಕಡಿವಾಣ ಬೀಳುತ್ತದೆ. ಕಪ್ಪು ಹಣದ ಪಾವತಿಗೂ ಲಗಾಮು ಬಿದ್ದಂತೆ ಆಗುತ್ತದೆ.

ರಕ್ಷಣಾ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸುವುದನ್ನು ದೇಶದ್ರೋಹಕ್ಕೆ ಸಮ ಎಂದು ಪರಿಗಣಿಸಬೇಕು. ಇದಕ್ಕೆ ಪೂರಕವಾಗಿ ಭಾರತೀಯ ದಂಡ ಸಂಹಿತೆಗೆ ತಿದ್ದುಪಡಿ ತರಬೇಕು. ಸೇನಾಪಡೆಗಳಿಗೆ ಯಾವ ಬಗೆಯ ಶಸ್ತ್ರ ಬೇಕೆಂದು ತೀರ್ಮಾನಿಸುವ ವಿಚಾರದಲ್ಲಿ ರಾಜಕೀಯ ಮುಖಂಡರಿಗೆ ಎಲ್ಲ ಮಾಹಿತಿ ಇರಬೇಕು ಎಂದೇನೂ ಇಲ್ಲ. ಆದರೆ, ಉದಾಸೀನ ಧೋರಣೆಯ ಅಧಿಕಾರಿಗಳಿಂದ ತಪ್ಪುದಾರಿಗೆ ಕಾಲಿಡುವ, ಯಾವುದೇ ತೀರ್ಮಾನ ಕೈಗೊಳ್ಳದ, ತಮ್ಮ ಖಾತೆಗೆ ಸರಿಹೊಂದದ ಸಚಿವರು ನಮಗೆ ಬೇಕಾಗಿಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಮುಂದೆ ನಿಂತು ರಕ್ಷಣಾ ಪಡೆಗಳನ್ನು ಹುರಿದುಂಬಿಸಬಲ್ಲ ರಾಜಕೀಯ ನಾಯಕರು ನಮಗೆ ಬೇಕು.

ಗಡಿಯಾಚೆಗಿನ ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲು ಸೇನೆಗೆ ಸ್ಪಷ್ಟ ಸೂಚನೆ ನೀಡಿದ ನಮ್ಮ ಪ್ರಧಾನಿಯವರ ನಿರ್ಣಾಯಕ, ಚುರುಕಿನ ತೀರ್ಮಾನದಿಂದ ದೇಶ ಸ್ಫೂರ್ತಿ ಪಡೆಯಬೇಕು. ಆದರೆ, ಅವರ ಸಂಪುಟದ ಹಿರಿಯ ಸಹೋದ್ಯೋಗಿಗಳು ದೇಶಪ್ರೇಮವನ್ನು ಒರಟಾಗಿ, ಬಹಿರಂಗವಾಗಿ ವ್ಯಕ್ತಪಡಿಸದಿದ್ದರೆ ಒಳಿತು. ಅಣ್ವಸ್ತ್ರಗಳನ್ನು ಹೊಂದಿರುವುದು ಶತ್ರುವಿನಲ್ಲಿ ಯಾವತ್ತಿಗೂ ಭಯ ಮೂಡಿಸುತ್ತದೆ. ಆದರೆ, ಸಾಂಪ್ರದಾಯಿಕ ಯುದ್ಧದಲ್ಲಿ ಒಂದು ಹೆಜ್ಜೆ ಮುಂದಿರಬೇಕಾಗಿರುವುದು ಇಂದಿನ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT