ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವತ್ತು ವಸಂತಗಳು ಮುದ್ದಿಸಿದ ‘ವಿಧಾನಸೌಧ’

Last Updated 8 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ವಿಧಾನಸೌಧ! ಹಾಗೆಂದ ಕೂಡಲೇ ಕರ್ನಾಟಕದ ಆಗುಹೋಗುಗಳು ನಿರ್ಣಯಗೊಳ್ಳುವ ಕಟ್ಟಡ ನೆನಪಿಗೆ ಬರುತ್ತದೆ. ಸರ್ಕಾರದ ಸಚಿವಾಲಯಗಳು ಕಾರ್ಯ ನಿರ್ವಹಿಸುವ ಭವ್ಯ ಕಟ್ಟಡ ಕಣ್ಮುಂದೆ ಬರುತ್ತದೆ. ಬಿಳಿ ಬಟ್ಟೆಯ ರಾಜಕಾರಣಿಗಳು, ಮಾಸಲು ಉಡುಪಿನ ಅಸಂಖ್ಯ ತಬರರು ಕಣ್ಣೆದುರು ಸುಳಿಯುತ್ತಾರೆ.

‘ಸರ್ಕಾರದ ಕೆಲಸ ದೇವರ ಕೆಲಸ’ ಎನ್ನುವ ನುಡಿಗಟ್ಟೂ ಹಾಗೂ ಸಂವಿಧಾನದ ಪಾಠ ಹೇಳುವಂತೆ ಕಾಣಿಸುವ ಅಂಬೇಡ್ಕರರ ಪ್ರತಿಮೆ ನೆನಪಾಗುತ್ತದೆ. ‘ಇದು ಬರೀ ಕಟ್ಟಡವಲ್ಲ, ಶಿಲಾಕಾವ್ಯ’ ಎನ್ನುವಂಥ ಬಣ್ಣನೆಗಳು ಮನಸ್ಸಿನಲ್ಲಿ ಸುಳಿದುಹೋಗುತ್ತವೆ. ಹೀಗೆ, ಹಲವು ಭಾವಗಳನ್ನು ಉಕ್ಕಿಸುವ ನಾಡಿನ ಅಧಿಕಾರ ಕೇಂದ್ರದ ಕಟ್ಟಡಕ್ಕೀಗ ವಜ್ರಪ್ರಭೆ – ವಿಧಾನಸೌಧಕ್ಕೀಗ ಅರವತ್ತು ವರ್ಷ! (ವಿಧಾನಸೌಧ ಲೋಕಾರ್ಪಣೆಗೊಂಡಿದ್ದು ಅ. 10, 1956ರಂದು).

ವಿಧಾನಸೌಧ ರೂಪುಗೊಂಡಿದ್ದೇ ಒಂದು ರೋಚಕ ಕಥೆ. ಸ್ವಾತಂತ್ರ್ಯ ಆಂದೋಲನ – ಏಕೀಕರಣ ಚಳವಳಿ ಒಟ್ಟಾಗಿ ಸಾಗುತ್ತಿದ್ದ ಕಾಲಘಟ್ಟದಲ್ಲಿ, ಭಾರತಕ್ಕೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕರೂ ಕರ್ನಾಟಕದ ಏಕೀಕರಣ ಆಗಿರಲಿಲ್ಲ. ಮೈಸೂರು ಸಂಸ್ಥಾನ ಭಾರತ ಒಕ್ಕೂಟದೊಂದಿಗೆ ವಿಲೀನವಾದಾಗ, ನಾಡಿನ ರಾಜಧಾನಿ ಬೆಂಗಳೂರಿಗೆ ವರ್ಗಾವಣೆಯಾಯಿತು. ಸರ್ಕಾರ ಬೆಂಗಳೂರಿನಿಂದ ಆಡಳಿತ ಆರಂಭಿಸಿದರೂ, ಅದರದೇ ಆದ ಸ್ವಂತ ಕಟ್ಟಡ ಇರಲಿಲ್ಲ.

ಪ್ರಜಾಪ್ರಭುತ್ವ ಮಾದರಿಯನ್ನು ಅನುಸರಿಸುತ್ತಿದ್ದ ಮೈಸೂರು ಅರಸೊತ್ತಿಗೆಗೆ ಅಧಿವೇಶನ ನಡೆಸಲು ಜಗನ್ಮೋಹನ ಅರಮನೆಯಂತಹ ವಿಶಾಲ ಭವನ ಮೈಸೂರಿನಲ್ಲಿ ಲಭ್ಯವಿತ್ತು. ಬೆಂಗಳೂರಿನಲ್ಲಿ ಪುಟ್ಟಣಚೆಟ್ಟಿ ಪುರಭವನ, ಅಠಾರ ಕಚೇರಿಗಳಲ್ಲಿ ಸಮಾವೇಶಗಳು ಏರ್ಪಡುತ್ತಿದ್ದರೂ ಅವು ಅಷ್ಟು ವಿಶಾಲವಾಗಿರಲಿಲ್ಲ.

ಆಡಳಿತ ಕೇಂದ್ರದ ಕಟ್ಟಡಕ್ಕಾಗಿ ಆಗಿನ ಪ್ರಧಾನಿಗಳಾಗಿದ್ದ ಜವಾಹರಲಾಲ್‌ ನೆಹರೂ, ಬೆಂಗಳೂರು ರೆಸಿಡೆನ್ಸಿ ಪ್ರದೇಶದಲ್ಲಿ 13 ಜುಲೈ 1951ರಂದು ಶಿಲಾನ್ಯಾಸ ನೆರವೇರಿಸಿದ್ದರು. ಆಗ ಯುರೋಪ್‌ನ ಮಾದರಿಯ ವಿನ್ಯಾಸವೂ ಅದಕ್ಕಾಗಿ ಸಿದ್ಧಗೊಂಡಿತ್ತು. ಇದೇ ಸಮಯದಲ್ಲಿ ಗಣತಂತ್ರ ವ್ಯವಸ್ಥೆಯನ್ನು ಅಳವಡಿಸಿಕೊಂಡ ಭಾರತ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು.

ಆಗ ಮೈಸೂರು ಪ್ರಾಂತ್ಯದ ತೋಟಗಾರಿಕೆ ಇಲಾಖೆ ಮುಖ್ಯಸ್ಥರಾಗಿದ್ದವರು ಜೆ.ಎಚ್‌. ಕೃಂಬಿಗಲ್‌. ಕರ್ನಾಟಕದಲ್ಲಿ ಹಸಿರು ಸಿರಿ ಹೆಚ್ಚಿಸಲು ಹಾಗೂ ಹತ್ತಾರು ಕಲಾತ್ಮಕ ಕಟ್ಟಡಗಳು ರೂಪುಗೊಳ್ಳಲು ಕಾರಣರಾಗಿದ್ದ ಕೃಂಬಿಗಲ್‌ ಅವರು ಆಡಳಿತ ಭವನಕ್ಕಾಗಿ ಸೂಕ್ತ ನಿವೇಶನ ಆಯ್ಕೆ ಮಾಡಿದ್ದು – ಕಬ್ಬನ್‌ಪಾರ್ಕ್‌ ಹಾಗೂ ರಾಜಭವನದ ನಡುವಿನ ಸ್ಥಳವನ್ನು.

ಚುನಾವಣೆಗಳ ನಂತರ ಮುಖ್ಯಮಂತ್ರಿ ಗಾದಿಗೆ ಬಂದವರು ಕೆಂಗಲ್‌ ಹನುಮಂತಯ್ಯ. ನಾಡು–ನುಡಿ–ಕಲೆ ಕುರಿತಂತೆ ಅಪಾರ ಒಲವಿದ್ದ ಅವರು, ಆಡಳಿತ ಭವನ ಕಟ್ಟುವ ಹೊಣೆಯನ್ನು ವಹಿಸಿಕೊಂಡರು. ಉದ್ದೇಶಿತ ಕಟ್ಟಡದ ಶಂಕುಸ್ಥಾಪನೆ ಮಾಡುವಾಗ ನೆಹರೂ ಅವರು ಹೇಳಿದ್ದ – ‘ಕಟ್ಟಡ ನಮ್ಮ ಕಲಾಪರಂಪರೆಯ ಪ್ರತಿಬಿಂಬವಾಗಿರಬೇಕು.

ಇದರಲ್ಲಿ ಪ್ರಜಾಪ್ರಭುತ್ವದ ಭಾವನೆಗಳೂ ಕಾಣುವಂತಿರಬೇಕು’ ಎನ್ನುವ ಮಾತುಗಳು ಕೆಂಗಲ್ಲರ ನೆನಪಿನಲ್ಲಿದ್ದವು. ಇನ್ನೂ ಎರಡು ಅಂಶಗಳು ಅವರ ಮನಸ್ಸಿನಲ್ಲಿ ಮನೆ ಮಾಡಿದ್ದವು. ಮಹಾತ್ಮ ಗಾಂಧೀಜಿ ಮತ್ತು ವೈಸ್ರಾಯ್‌ ಲಾರ್ಡ್‌ ಇರ್ವಿನ್‌ ನಡುವೆ ಆದ ಒಪ್ಪಂದದ ಬಗ್ಗೆ ಅಸಹನೆಯಿಂದ ಆಗಿನ ಬ್ರಿಟನ್‌ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್‌ – ‘ಆ ಅರೆಬೆತ್ತಲೆ ಫಕೀರ ವೈಸ್ರಾಯ್‌ ಭವನದ  ಮೆಟ್ಟಿಲು ಹತ್ತುವುದೇ’? ಎಂದು ಪ್ರಶ್ನಿಸಿದ್ದರು.

ಬೆಂಗಳೂರಿಗೆ ಭೇಟಿ ನೀಡಿ ನಗರವನ್ನೆಲ್ಲ ಸುತ್ತಿದ್ದ ವಿದೇಶಿ ಗಣ್ಯರೊಬ್ಬರು ಕೆಂಗಲ್‌ರನ್ನು ಕುರಿತು, ‘ಇಲ್ಲಿರುವ ಕಟ್ಟಡಗಳೆಲ್ಲ ಪಶ್ಚಿಮದ ಶೈಲಿಯ ನಕಲುಗಳಂತಿವೆ. ನಿಮ್ಮದೇ ಆದ ಭಾರತೀಯ ಶೈಲಿಯೆಲ್ಲಿವೆ? ಎಂದು ಪ್ರಶ್ನಿಸಿದ್ದರು. ಈ ಎರಡೂ ಸನ್ನಿವೇಶಗಳು ಕೆಂಗಲ್‌ರನ್ನು ಕೊರೆಯುತ್ತಿದ್ದವು.

ರಾಜ್ಯಾಂಗ ರಚನಾಸಭೆಯ ಸದಸ್ಯರಾಗಿ ಕೆಂಗಲ್‌ ಅವರು ದೆಹಲಿಗೆ ಹೋಗಿದ್ದಾಗ, ‘ವೈಸ್ರಾಯ್‌ ಭವನ’ದ (ಈಗಿನ ರಾಷ್ಟ್ರಪತಿ ಭವನ) ಮೆಟ್ಟಿಲುಗಳನ್ನು ಸಾವಕಾಶವಾಗಿ ನೋಡಿಬಂದಿದ್ದರು. ನಮ್ಮ ವಾಸ್ತುಶೈಲಿಗಳಿದ್ದ ಬೇಲೂರು–ಹಳೇಬೀಡು, ಇನ್ನಿತರ ಕಡೆಗಳಿಗೂ ಅವರು ಹೋಗಿಬಂದರು.

ಯುರೋಪಿಯನ್‌ ಶೈಲಿಯ ವಿನ್ಯಾಸವನ್ನು ಪಕ್ಕಕ್ಕೆ ಸರಿಸಿದ್ದ ಅವರು, ಒಂದು ಅಂತಸ್ತಿನ ಭಾರತೀಯ ಶೈಲಿಯ ಸುಂದರ ಸಭಾಂಗಣವಿದ್ದ ನಕಾಶೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಆ ವಿನ್ಯಾಸ ಅವರಿಗೆ ಮತ್ತೆ ಇಷ್ಟವಾಗಲಿಲ್ಲ. ಹೀಗೆಯೇ ನಾಲ್ಕಾರು ವಿನ್ಯಾಸಗಳು ಬದಲಾದವು. ಕೊನೆಗೆ ಈಗಿನ ಬೃಹತ್‌ ಕಟ್ಟಡದ ನೀಲನಕ್ಷೆ ಸಿದ್ಧವಾಯಿತು. ಇದು ಸಿದ್ಧವಾಗಿದ್ದು ಸರ್ಕಾರದ ಮುಖ್ಯ ವಾಸ್ತು ಶಿಲ್ಪಿ ಬಿ.ಆರ್‌.  ಮಾಣಿಕ್ಯಂ ಅವರ ಮುಂದಾಳತ್ವದಲ್ಲಿ.

ಲೋಕೋಪಯೋಗಿ ಇಲಾಖೆಯಲ್ಲಿ ‘ವಿಧಾನಸೌಧ’ ಎಂಬ ವಿಭಾಗವನ್ನೇ ತೆರೆದ ಕೆಂಗಲ್‌ ಅವರು, ಕೋಲಾರದಲ್ಲಿ ಚುರುಕಾಗಿ ಕೆಲಸ ಮಾಡುತ್ತಿದ್ದ ಮುನಿಯಪ್ಪನವರನ್ನು ವಿಧಾನಸೌಧ ವಿಭಾಗಕ್ಕೆ ವಿಶೇಷ ಎಂಜಿನಿಯರ್‌ ಆಗಿ ನೇಮಕ ಮಾಡಿದ್ದರು. ಹಾಲಿನ ಲೋಟ ಕೈಗೆ ಕೊಟ್ಟು, ಕಟ್ಟಡ ನಿರ್ಮಾಣ ಸುಸೂತ್ರವಾಗಿ ನಡೆಸಲು ನೆರವಾಗಬೇಕೆಂದು ಮುನಿಯಪ್ಪನವರಿಂದ ಕೆಂಗಲ್‌ ಪ್ರಮಾಣ ಮಾಡಿಸಿಕೊಂಡಿದ್ದರಂತೆ.

ಅರವತ್ತು ಎಕರೆ ಪ್ರದೇಶದಲ್ಲಿ ಅಗಾಧವಾದ ಕಟ್ಟಡ ಮೇಲೇಳಲು ಶುರುವಾಯಿತು. ಹೊಸ ಆಡಳಿತ – ಹೊಸ ಆಶಯಗಳ ರೂಪವಾಗಿ ಹೊರಹೊಮ್ಮಿದ ಈ ಕಟ್ಟಡ ಕೇವಲ ಕಟ್ಟಡವಾಗಿರಲಿಲ್ಲ. ದೇಶಿಯ ಶೈಲಿ, ದ್ರಾವಿಡ ರೀತಿ ಚಹರೆ ಇಟ್ಟುಕೊಂಡಿದ್ದ ವಿಧಾನಸೌಧಕ್ಕೆ ಭವ್ಯವಾದ ಮೆಟ್ಟಿಲುಗಳು, ದ್ವಿಗುಣ ಎತ್ತರದ ಪ್ರವೇಶದ್ವಾರ, ಎತ್ತರಕ್ಕೆ ಕಾಣುವ ಗುಮ್ಮಟ, ಅದರ ನೆತ್ತಿಯ ಮೇಲೆ ಸಿಂಹಗಳ ಪುತ್ಥಳಿ ಜೊತೆಗೆ ಧರ್ಮಚಕ್ರ – ಒಂದೇ ಎರಡೇ ಇದರ ವಿಶೇಷಣಗಳು.

ಗುಣಮಟ್ಟದಲ್ಲಿ, ಅಂದದಲ್ಲಿ ಯಾವುದೇ ರಾಜಿಗೂ ಒಪ್ಪದ ಕೆಂಗಲ್‌ – ವಿಧಾನಸೌಧ ನಿರ್ಮಾಣದ ಎಲ್ಲ ಹಂತಗಳಲ್ಲೂ ಪಾಲ್ಗೊಂಡರು. ನಿರ್ಮಾಣಕ್ಕೆ ಬಳಸುವ ವಸ್ತುಗಳಲ್ಲಿ ಬಹಳಷ್ಟು ಸ್ಥಳೀಯವಾಗಿ ಲಭ್ಯವಿದ್ದವು. ಇವುಗಳಲ್ಲಿ ಹೆಸರುಘಟ್ಟ ಮಲ್ಲಸಂದ್ರದ ಕಲ್ಲುಗಳು, ತುರುವೇಕೆರೆಯ ಕಪ್ಪಕಲ್ಲು, ಮಾಗಡಿ ಪಿಂಕ್‌ಗಳು ಸೇರಿದ್ದವು.

ನಿರ್ಮಾಣದಲ್ಲಿ ಕೆಲಸಗಾರರ ಮಹಾಪೂರವೇ ಹರಿದಿತ್ತು. ಅದರಲ್ಲಿ ಎಲ್ಲಾ ಬಗೆಯ ಕುಶಲಕರ್ಮಿಗಳೂ ಇದ್ದರು. ಕಲ್ಲು ಕೆಲಸ, ಮರಗೆಲಸ, ಮೇಸ್ತ್ರಿ ಕೂಲಿಗಳು, ಕೊನೆಗೆ ಸೆಂಟ್ರಲ್‌ ಜೈಲಿನ ಕೈದಿಗಳನ್ನೂ ವಿಧಾನಸೌಧ ನಿರ್ಮಾಣಕ್ಕೆ ತೊಡಗಿಸಲಾಗಿತ್ತು.

ದ್ರಾವಿಡ ರೂಪಗಳೊಂದಿಗೆ ಬೌದ್ಧ–ಇಸ್ಲಾಂ ಶೈಲಿಗಳೂ ಮಿಳಿತಗೊಂಡಿರುವ ಇಲ್ಲಿ ಬೌದ್ಧ ಚೈತ್ಯದ ಕಿಟಕಿಗಳು, ಮೊಗಲ್‌ ಶೈಲಿಯ ಕಮಾನುಗಳು, ಸುಂದರ ಮುಖಮಂಟಪಗಳು, ಕಮಲಾಕಾರದ ಕಂಬಗಳಿವೆ. ಹಳತು ಹೊಸತರ ಹದವಾದ ಸಂಗಮ ವಿಧಾನಸೌಧ.

ನೀಳ ಚೌಕಾಕಾರದ ಮಹಾಮಂದಿರವಾದ ವಿಧಾನಸೌಧ, ದಕ್ಷಿಣೋತ್ತರವಾಗಿ 700 ಅಡಿಗಳು ಹಾಗೂ ಪೂರ್ವ–ಪಶ್ಚಿಮವಾಗಿ 350 ಅಡಿಗಳಷ್ಟು ವಿಸ್ತಾರ ಹೊಂದಿದೆ. ಸರಾಸರಿ 60.5 ಅಡಿ ಎತ್ತರವಿರುವ ಈ ಕಟ್ಟಡ, ದಕ್ಷಿಣ ಭಾಗದಲ್ಲಿ ನೆಲಮಾಳಿಗೆ ಸೇರಿದ್ದರಿಂದ 73.5 ಅಡಿ ಎತ್ತರ ಹೊಂದಿದೆ. ನೆಲ ಮಧ್ಯದಿಂದ 150 ಅಡಿ ಎತ್ತರದ ಮಧ್ಯಗುಮ್ಮಟ ಸೌಧದ ಶೋಭೆಯನ್ನು ಹೆಚ್ಚಿಸಿದೆ.

ವಿಧಾನಸೌಧದ ಮಧ್ಯಭಾಗದ ಮುಂಬದಿಯಲ್ಲಿರುವ, 204 ಅಡಿಗಳಷ್ಟು ವಿಶಾಲವಾದ ಮೆಟ್ಟಿಲುಗಳನ್ನು ಹತ್ತಿಹೋದರೆ ಎತ್ತರವಾದ ಕಂಬಗಳನ್ನು ಹೊತ್ತುನಿಂತ ಮೊಗಸಾಲೆ ಎದುರಾಗುತ್ತದೆ. ಆ ಮೊಗಸಾಲೆಯಿಂದ ಮುಂದೆ ನಡೆದರೆ ಸಿಗುವುದೇ ಕುಸುರಿಯಿಂದ ಕೂಡಿದ ಮಹಾದ್ವಾರ.

ವಿಧಾನಸಭೆ ಜರುಗುವಾಗ 250 ಶಾಸಕರಿಗೆ ಇಲ್ಲಿ ಸ್ಥಳಾವಕಾಶವಿದೆ. ಎಲ್ಲೂ ನೆರಳು ಬೀಳದ ಈ ಸಭಾಂಗಣದಲ್ಲಿ ಎಲ್ಲೆಡೆಗಳಲ್ಲೂ ಸಮಾನವಾದ ಪ್ರಕಾಶವಿರುವ ಬೆಳಕಿನ ವ್ಯವಸ್ಥೆ ಇದೆ. ಛಾವಣಿಗೆ ಫೈಬರ್‌ ಗ್ಲಾಸ್‌ ಹೊದಿಕೆ ಇರುವ ಸಭಾಂಗಣದಲ್ಲಿ ಸದಾಕಾಲ ಸಮತೋಲಿತ ವಾತಾಯನ ಏರ್ಪಾಡು ಉಂಟು.

ವಿಧಾನಸಭೆಯನ್ನು ವರದಿ ಮಾಡಲು ಮಾಧ್ಯಮ ಗ್ಯಾಲರಿ, ಪ್ರೇಕ್ಷಕರ ಗ್ಯಾಲರಿ, ಗಣ್ಯ ವ್ಯಕ್ತಿಗಳು ವೀಕ್ಷಿಸಲು ಗ್ಯಾಲರಿ ಇರುವ ಈ ಸಭಾಂಗಣದಲ್ಲಿಯೇ ಪ್ರತಿಷ್ಠಿತ ‘ಸಾರ್ಕ್‌ ಸಮ್ಮೇಳನ’ ಹಾಗೂ ‘ಜಿ–15’ ಸಮಾವೇಶ ನಡೆದಿದ್ದು.

ವಿಧಾನಸೌಧದ ದಕ್ಷಿಣ ಭಾಗದಲ್ಲಿ ಮೇಲ್ಮನೆ (ವಿಧಾನ ಪರಿಷತ್ತು) ಸಭಾಂಗಣವಿದ್ದು, ಇಲ್ಲಿ 88 ಸದಸ್ಯರು ಕೂಡುವ ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕ್ವೆಟ್‌ಹಾಲ್‌ – ಈ ಔತಣ ಶಾಲೆ ನೆಲೆಗೊಂಡಿರುವುದು ಮಹಾದ್ವಾರದ ನೆಲ ಅಂತಸ್ತಿನಲ್ಲಿ. ವೃತ್ತಾಕಾರದ 8 ಬೃಹತ್‌ ಕಲಾಕುಸುರಿ ಹೊಂದಿದ ಕಂಬಗಳಿರುವ ಈ ಹಾಲ್‌ನಲ್ಲಿ ಮಹತ್ವದ ಕಾರ್ಯಕ್ರಮಗಳು ಜರುಗುತ್ತವೆ. ಇದು ಪೌರ ಸನ್ಮಾನ, ರಾಷ್ಟ್ರೀಯ– ಅಂತರರಾಷ್ಟ್ರೀಯ ಸಮಾವೇಶಗಳು ನಡೆಯುವ ಪ್ರತಿಷ್ಠಿತ ಸ್ಥಳ.

ಕಟ್ಟಡದ ವಿನ್ಯಾಸ ಬದಲಿಸಲಾಗದಂತೆ, ಹೆಚ್ಚಿನ ಅಂತಸ್ತು ಸೇರಿಸಲಾಗದಂತೆ ಮತ್ತು ಯಾವ ಕಡೆಯೂ ವಿಸ್ತರಿಸಲಾಗದಂತೆ ವಿಧಾನಸೌಧದ ವಿನ್ಯಾಸ ರೂಪಿಸಲಾಗಿದೆ. ಕುಸುರಿಯ ಶ್ರೀಗಂಧದ ಬಾಗಿಲುಗಳಿರುವ ಕ್ಯಾಬಿನೆಟ್‌ ಹಾಲ್‌, ಮುಖ್ಯಮಂತ್ರಿಯ ಆಕರ್ಷಕ  ಕೊಠಡಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕೊಠಡಿ ಮೂರನೇ ಅಂತಸ್ತಿನಲ್ಲಿವೆ. ವಿಧಾನಸೌಧದ ಪಶ್ಚಿಮ ದ್ವಾರದ ಮೇಲೆ ತ್ರಿವರ್ಣ ಧ್ವಜ, ಅದರ ಕೆಳಗೆ ಗಂಡಭೇರುಂಡ ಇರುವ ರಾಜಲಾಂಛನ ಇದೆ.

ಸುಂದರ ಬೂದು ಮತ್ತು ಬಿಳಿನೀಲಿ ಗ್ರಾನೈಟ್‌ ಕಲ್ಲಿನ ಉಪಯೋಗವಾಗಿರುವ ವಿಧಾನಸೌಧದ ಹೊರಮೈಗೆ ನಡುನಡುವೆ ಚಿತ್ತಾರಕ್ಕಾಗಿ ಕೆಂಪು ಕರಿಕಲ್ಲು ಬಳಕೆಯಾಗಿದೆ. ವಾಸ್ತುಶಿಲ್ಪಿಗಳ–ಚಿತ್ರಕಾರರ ಚಮತ್ಕಾರದಿಂದ ವಿಧಾನಸೌಧದ ಇಂಚಿಂಚಲ್ಲೂ ಮನಮೋಹಕ ಹೂಬಳ್ಳಿ–ಪುಷ್ಪಗಳು ಅರಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT