7

ನಾವು ಸೋತು ಗೆಲ್ಲಬೇಕು ಕಾವೇರಿಯನ್ನು ...

Published:
Updated:
ನಾವು ಸೋತು ಗೆಲ್ಲಬೇಕು ಕಾವೇರಿಯನ್ನು ...

‘ನಾವು ಈಗ ನೀರು ಬಿಡಬೇಕಲ್ಲವೇ? ಇನ್ನೂ ಎಷ್ಟು ಹಟ ಮಾಡುವುದು?’ ರಾಯರಹುಂಡಿಯ ಆ ಹೆಣ್ಣು ಮಗಳು ನನಗೆ ಸೆಪ್ಟೆಂಬರ್‌ 30ರಂದು ಕಳಿಸಿದ ಸಂದೇಶ ಇದು.ಅಂದು ಸುಪ್ರೀಂ ಕೋರ್ಟಿನಲ್ಲಿ ನಮ್ಮ ಅರ್ಜಿ ಮತ್ತೆ ವಿಚಾರಣೆಗೆ ಬಂದಿತ್ತು. ಕರ್ನಾಟಕದ ಮೇಲೆ ನ್ಯಾಯಾಂಗ ನಿಂದನೆಯ ಕತ್ತಿ ತೂಗುತ್ತಿತ್ತು.ರಾಜ್ಯ ಸರ್ಕಾರ ತಂತ್ರಗಾರಿಕೆಯಿಂದಲೋ, ಹಟಮಾರಿತನದಿಂದಲೋ ಅಥವಾ ನಿಜವಾದ ಅಸಹಾಯಕತೆಯಿಂದಲೋ ತಮಿಳುನಾಡಿಗೆ ನೀರು ಬಿಡಲು ನಿರಾಕರಿಸುತ್ತಿತ್ತು.ನಮ್ಮ ಪರವಾಗಿ ವಾದ ಮಂಡಿಸಬೇಕಿದ್ದ ಹಿರಿಯ, ಗೌರವಾನ್ವಿತ ವಕೀಲ ಫಾಲಿ ನಾರಿಮನ್‌ ಶಸ್ತ್ರತ್ಯಾಗ ಮಾಡಿದ್ದರು.ಆ ಹೆಣ್ಣು ಮಗಳ ಊರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿದೆ. ಅದು ಕಾವೇರಿ ಕಾಲುವೆಯ ಕೊನೆಯ ಹಳ್ಳಿಗಳಲ್ಲಿ ಒಂದು. ಅಲ್ಲಿಯವರೆಗೆ  ನೀರು ಹರಿದು ಬಂದರೆ ಅದು ಒಂದು ಅಚ್ಚರಿ. ನೀರು ಹರಿದು ಬಂದೀತು ಎಂದು ಅವರು ಭತ್ತ ಬಿತ್ತಿದ್ದರು. ಆದರೆ, ನೀರು ಬಂದಿರಲಿಲ್ಲ. ಕರ್ನಾಟಕ ಸರ್ಕಾರ, ‘ಬೆಳೆಗೆ ಕಾವೇರಿ ನೀರು ಬಿಡುವುದಿಲ್ಲ, ಕುಡಿಯಲು ಮಾತ್ರ ಬಳಸುತ್ತೇವೆ’ ಎಂದು ಅದಾಗಲೇ ಸದನದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿತ್ತು.ಆದರೂ ಆ ಹೆಣ್ಣು ಮಗಳು, ‘ಇನ್ನೂ ಎಷ್ಟು ಹಟ ಮಾಡುವುದು, ನೀರು ಬಿಡಬೇಕಲ್ಲವೇ’ ಎಂದು ನನ್ನನ್ನು ಕೇಳುತ್ತಿದ್ದರು. ಅದು ಕನ್ನಡದ ಅಂತಃಕರಣವಾಗಿತ್ತು. ‘ಕಷ್ಟವನ್ನು ಸಹಿಸಿಕೊಳ್ಳಬೇಕು, ನಮ್ಮ ಅನ್ನವನ್ನು ನೆರೆಯವರ ಜೊತೆಗೂ ಹಂಚಿಕೊಂಡು ತಿನ್ನಬೇಕು’ ಎಂಬ ಸಹೃದಯತೆಯಾಗಿತ್ತು.ಬಹುಶಃ ಆ ಹೆಣ್ಣು ಮಗಳ ಹಾಗೆ ಅನೇಕ ಕನ್ನಡಿಗರು ಯೋಚಿಸುತ್ತಿದ್ದಿರಬೇಕು. ನಮ್ಮ ಹಿರಿಯ ವಿಮರ್ಶಕ ಪ್ರೊ.ಸಿ.ಎನ್‌.ರಾಮಚಂದ್ರನ್‌ ನಮ್ಮ ಪತ್ರಿಕೆಯ ವಾಚಕರ ವಾಣಿಗೆ ಪತ್ರ ಬರೆದು ‘ನೀರು ಬಿಡಬೇಕು’ ಎಂದು ಸರ್ಕಾರವನ್ನು ಕೋರಿಕೊಂಡರು. ಇಡೀ ವಾತಾವರಣ ಉದ್ರಿಕ್ತವಾಗಿರುವಾಗ ಹೀಗೆಲ್ಲ ಬಹಿರಂಗವಾಗಿ ಪತ್ರ ಬರೆಯಲು ಯಾರೂ ಸಿದ್ಧರಿರುವುದಿಲ್ಲ. ಏಕೆಂದರೆ ಇವೆಲ್ಲ ಅಪ್ರಿಯ ಸತ್ಯಗಳು.ಹಾಗೆ ನೋಡಿದರೆ ಅಪ್ರಿಯ ಸತ್ಯವನ್ನು ದೇವೇಗೌಡರು ಹೆಚ್ಚು ಹೇಳಿದರು. ಕರ್ನಾಟಕದ ಹಿತಕ್ಕೆ ವಿರುದ್ಧವಾಗಿದ್ದ ಸುಪ್ರೀಂ ಕೋರ್ಟಿನ ಸತತ ಆದೇಶಗಳ ಬಗ್ಗೆ ಅವರಿಗೆ ಎಷ್ಟೇ ಅಸಮಾಧಾನ ವಾಗಿದ್ದರೂ, ‘ನೀರು ಬಿಡಬೇಕು’ ಎಂಬ ನಿಲುವಿನಿಂದ ಅವರು ಹಿಂದೆ ಸರಿಯಲಿಲ್ಲ.ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಭಾವಚಿತ್ರಕ್ಕೆ ಮಂಡ್ಯದಲ್ಲಿ ಅವಮಾನ ಮಾಡುತ್ತಿದ್ದ ವೀರ ಕನ್ನಡಿಗರಿಗೆ ಗೌಡರು ಛೀಮಾರಿ ಹಾಕಿದರು. ‘ಹೀಗೆಲ್ಲ ಮಾಡಿ ನಾವು ಜಲಾಶಯದಲ್ಲಿ ನಮ್ಮ ನೀರು ಉಳಿಸಿಕೊಳ್ಳಲಾಗುವುದಿಲ್ಲ’ ಎಂದರು. ಯಾವ ರಾಜಕಾರಣಿಯೂ ಕನ್ನಡ ಹೋರಾಟಗಾರರಿಗೆ ಹಾಗೆ ಬುದ್ಧಿ ಮಾತು ಹೇಳಿದಂತೆ ಕಾಣಲಿಲ್ಲ.ಸುಪ್ರೀಂ ಕೋರ್ಟು ತೀರಾ ಅಸಹಾಯಕ ಸ್ಥಿತಿಗೆ ನಾಡನ್ನು ತಳ್ಳಿದಾಗ ಗೌಡರು ವಿಕಾಸ ಸೌಧದ ಬಳಿಯ ಗಾಂಧಿ ಪ್ರತಿಮೆ ಮುಂದೆ ಉಪವಾಸ ಕುಳಿತರು. ಅವರು ಮಾಜಿ ಪ್ರಧಾನಿ. ಸಕ್ಕರೆ, ರಕ್ತದೊತ್ತಡ ಮುಂತಾದ ಆರೋಗ್ಯ ಸಮಸ್ಯೆ ಇರುವ ಎಂಬತ್ತು ದಾಟಿದ ವೃದ್ಧ. ಅದುವರೆಗೆ ನಾವು ಕಾವೇರಿ ವಿವಾದವನ್ನು ಬೀದಿಯಲ್ಲಿಯೇ ತೀರ್ಮಾನ ಮಾಡಬಹುದು ಎಂದು ಅಂದುಕೊಂಡಿದ್ದೆವು.ಯಾರದಾದರೂ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರೆ, ರಸ್ತೆ ಮಧ್ಯದಲ್ಲಿ ಟೈರು ಹಾಕಿ ಸುಟ್ಟರೆ ಕಾವೇರಿ ನೀರು ನಮ್ಮಲ್ಲಿಯೇ ಉಳಿಯುತ್ತದೆ ಎಂದು ಭ್ರಮಿಸಿದ್ದೆವು. ಗೌಡರು ಉಪವಾಸ ಕುಳಿತುದು ಕೊಂಚ ನಾಟಕೀಯ ಎನ್ನುವವರೂ ಇದ್ದಾರೆ. ಆದರೆ, ಬೇರೆ ದಾರಿ ಇತ್ತು ಎಂದು ಅನಿಸುವುದಿಲ್ಲ.ಗಾಂಧಿ ಮತ್ತು ಅವರ  ಸತ್ಯಾಗ್ರಹ ತತ್ವಗಳು ಈಗ ಯಾರಿಗಾದರೂ ನೆನಪು ಇವೆಯೇ, ಯಾರಿಗಾದರೂ ಬೇಕಾಗಿವೆಯೇ ಎನ್ನುವ ಕಾಲ ಇದು. ಗಾಂಧೀಜಿ ಹೆಚ್ಚು ಹೀಯಾಳಿಕೆಗೆ ಈಡಾಗಿರುವ ಕಾಲವೂ ಈಗಿನದೇ. ಆದರೂ ಗೌಡರು ಗಾಂಧಿ ಪ್ರತಿಮೆ ಮುಂದೆ ಉಪವಾಸ ಕುಳಿತು ಈಗಲೂ ಅದು ಒಂದು ಪರಿಣಾಮಕಾರಿ ಅಸ್ತ್ರ ಎಂದು ತೋರಿಸಿಕೊಟ್ಟರು. ಪ್ರಧಾನಿ ಕಚೇರಿ ಮೇಲೆ ಅದು ಮಾಡಿದ ಪರಿಣಾಮ ಸುಪ್ರೀಂ ಕೋರ್ಟಿನಲ್ಲಿ ಬಿಂಬಿತವಾಯಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದೇವೇಗೌಡರ ದಾರಿಗಳು ಬೇರೆ ಬೇರೆಯಾಗಿ ಎಷ್ಟೋ ವರ್ಷಗಳೇ ಆಗಿವೆ. ಆದರೆ, ಇಬ್ಬರೂ ಈ ದಿನಗಳಲ್ಲಿ ಒಂದೇ ಹೆಜ್ಜೆಯಲ್ಲಿ ನಡೆಯುತ್ತ ಇದ್ದಂತೆ ಇತ್ತು. ನೀರಾವರಿ ಕುರಿತು ದೇವೇಗೌಡರಿಗೆ ಇರುವ ತಿಳಿವಳಿಕೆಯನ್ನಾಗಲೀ, ಬದ್ಧತೆಯನ್ನಾಗಲೀ ಪ್ರಶ್ನಿಸುವುದು ಬಹಳ ಕಷ್ಟ.ಹಿಂದೆ ದೇವರಾಜ ಅರಸು ಸಂಪುಟದಲ್ಲಿ ಎಚ್‌.ಎಂ.ಚನ್ನಬಸಪ್ಪ (ರಾಣಿ ಸತೀಶ್‌ ಅವರ ತಂದೆ ಇವರು) ಅವರು ಲೋಕೋಪಯೋಗಿ ಸಚಿವರಾಗಿದ್ದರು. ಆಗ ನೀರಾವರಿಯೂ ಅದರ ಭಾಗವಾಗಿಯೇ ಇರುತ್ತಿತ್ತು. ಅವರಿಗೆ ಇಡೀ ರಾಜ್ಯದ ನೀರಾವರಿ ಯೋಜನೆಗಳ ಮಾಹಿತಿ ಬೆರಳ ತುದಿಯಲ್ಲಿಯೇ ಇರುತ್ತಿತ್ತು. ಅವರನ್ನು ಬಿಟ್ಟರೆ ಗೌಡರಿಗೇ ಅಂಥ ಪ್ರಾವೀಣ್ಯ ಇರುವುದು.ಅವರ ರಾಜಕೀಯ ಶೈಲಿಯ ಕುರಿತು ಅನೇಕ ಭಿನ್ನಾಭಿಪ್ರಾಯಗಳು ಇರಲು ಸಾಧ್ಯ. ಆದರೆ, ‘ನಮ್ಮ ನಾಡಿನ ನೀರಾವರಿ ಸಾಮರ್ಥ್ಯ ಹೆಚ್ಚಿಸಬೇಕು’ ಎಂದು  ಮೂರು ದಶಕಗಳ ಹಿಂದೆಯೇ ಅವರು ದನಿ ಎತ್ತಿದ್ದರು. ಎಂಬತ್ತರ ದಶಕದ ಆರಂಭದಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಕೃಷ್ಣಾ ಕೊಳ್ಳದ ಯೋಜನೆಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ಅವರು, ‘ಮುನ್ನೂರು ಕೋಟಿ ಅನುದಾನ ಒದಗಿಸಿ’ ಎಂದು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ದುಂಬಾಲು ಬಿದ್ದಿದ್ದರು.ಹೆಗಡೆಯವರು ಹಣ ಕೊಡಲಿಲ್ಲ. ವಿಪರ್ಯಾಸ ಎಂದರೆ ಕೃಷ್ಣಾ ಕೊಳ್ಳ ಗೌಡರ ರಾಜಕೀಯ ಅಖಾಡ ಆಗಿರಲಿಲ್ಲ. ಅದು ಹೆಗಡೆಯವರ ಅಖಾಡವೇ ಆಗಿತ್ತು. ಇಬ್ಬರ ನಡುವೆ ಏನೋ ಸಮಸ್ಯೆ ಇತ್ತು. ಅದು ಕೊನೆವರೆಗೂ ಪರಿಹಾರ ಆಗಲೇ ಇಲ್ಲ. ಗೌಡರು ಪ್ರಧಾನಿಯಾದ ನಂತರ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ತ್ವರಿತ ನೀರಾವರಿ ಯೋಜನೆಯಡಿ ₹120 ಕೋಟಿ ಅನುದಾನ ಒದಗಿಸಿದರು. ಪ್ರತಿಯಾಗಿ, ಜಲದೇವತೆ ಗೌಡರ ಕುಟುಂಬಕ್ಕೆ ಕೊಟ್ಟ ವರ ಅಪೂರ್ವವಾಗಿತ್ತು.ಗೌಡರು ಈ ಅನುದಾನ ಬಿಡುಗಡೆ ಮಾಡಿದ್ದು 96–97ರಲ್ಲಿ. 2006ರಲ್ಲಿ ಆಲಮಟ್ಟಿ ಅಣೆಕಟ್ಟೆ ಉದ್ಘಾಟನೆಯಾಯಿತು. ಆಗ ಗೌಡರ ಮಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು! ತ್ವರಿತ ನೀರಾವರಿ ಯೋಜನೆಯಡಿ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಗೌಡರು ವಿಶೇಷ ಅನುದಾನ ಬಿಡುಗಡೆ ಮಾಡಿದಾಗ ಮುಂದೆ ತಮ್ಮ ಮಗ ಮುಖ್ಯಮಂತ್ರಿಯಾಗಬಹುದು, ಆಗ ಆತ ಆಲಮಟ್ಟಿ ಅಣೆಕಟ್ಟೆಯನ್ನು ಉದ್ಘಾಟಿಸುವ ಸಮಾರಂಭದಲ್ಲಿ ವೇದಿಕೆ ಮೇಲೆ ಇರಬಹುದು ಎಂದು ಲೆಕ್ಕ ಹಾಕಿರುವುದು ಖಂಡಿತ ಸಾಧ್ಯವಿಲ್ಲ.ಅದಾಗಿ ಮತ್ತೆ ಒಂದು ದಶಕ ಕಳೆದು ಹೋಗಿದೆ. ಜೊತೆಗೆ ಇದ್ದ ಗೌಡರು ಮತ್ತು ಸಿದ್ದರಾಮಯ್ಯ ಬೇರೆ ಬೇರೆ ಪಕ್ಷಗಳಲ್ಲಿ ಇದ್ದಾರೆ. ಆದರೆ, ಗೌಡರು ಇಡೀ ಕಾವೇರಿ ಸಂಕಟದ ಸಮಯದಲ್ಲಿ ರಾಜ್ಯ ಸರ್ಕಾರದ ಪರವಾಗಿ ಟೊಂಕ ಕಟ್ಟಿ ನಿಂತಿದ್ದರು. ಕಾವೇರಿ ಅಚ್ಚುಕಟ್ಟಿನ ಜಲಾಶಯಗಳಿಂದ ನೀರು ಬಿಡಬಾರದು ಎಂದು ಸರ್ವಾನುಮತದಿಂದ ನಿರ್ಣಯಿಸಿದ್ದ ಸದನ ಮತ್ತೆ ಸರ್ವಾನುಮತದಿಂದಲೇ ತನ್ನ ನಿರ್ಣಯವನ್ನು ಮಾರ್ಪಡಿಸಿತು.ಕಳೆದ ಸೋಮವಾರ ಸಭೆ ಸೇರಿದ್ದ ವಿಧಾನ ಮಂಡಲದ ಉಭಯ ಸದನಗಳಲ್ಲಿ ಬಿಜೆಪಿಯವರು ಒಡಕಿನ ಮಾತು ಆಡಿದರೂ ಜೆ.ಡಿ.ಎಸ್‌ನವರು ಅದರಲ್ಲಿಯೂ ಕುಮಾರಸ್ವಾಮಿಯವರು ಸರ್ಕಾರದ ಪರವಾಗಿ ನಿಂತರು. ಕಳೆದ ಭಾನುವಾರ ರಾತ್ರಿವರೆಗೆ ಮುಖ್ಯಮಂತ್ರಿಗಳಿಗೆ ಮರುದಿನ ಸದನದಲ್ಲಿ ಒಮ್ಮತ ಮೂಡುತ್ತದೆಯೋ ಇಲ್ಲವೋ ಎಂಬ ಆತಂಕ ಇತ್ತು. ಗೌಡರು ಬಿಜೆಪಿ ಜೊತೆಗೆ  ಮಾತನಾಡಿದರೋ ಇಲ್ಲವೋ ತಿಳಿಯದು, ಆದರೆ ತಮ್ಮ ಮಗನಿಗೆ ಒಡಕು ಧ್ವನಿ ಎತ್ತದಂತೆ ತಿಳಿ ಹೇಳಿರಬೇಕು. ವಿಧಾನಸಭೆಯಲ್ಲಿ ಕುಮಾರಸ್ವಾಮಿ ಆಡಿದ ಮಾತುಗಳಲ್ಲಿ ಇದು ವ್ಯಕ್ತವಾಗುತ್ತಿತ್ತು. ತಮಿಳುನಾಡಿಗೆ ನೀರು ಬಿಡುವ ಅನಿವಾರ್ಯ ಸಂಕಟಕ್ಕೆ ಕರ್ನಾಟಕ ತನ್ನನ್ನು ತಾನು ಒಡ್ಡಿಕೊಳ್ಳಲೇಬೇಕಿತ್ತು. ಬೇರೆ ದಾರಿ ಇರಲಿಲ್ಲ. ಸುಪ್ರೀಂ ಕೋರ್ಟಿನ ಆದೇಶಗಳು ನಮ್ಮ ಪಾಲಿಗೆ  ನುಂಗಲಾರದ ತುತ್ತು ಎನ್ನುವಂತೆ ಆಗಿದ್ದುವು. ಫಾಲಿ ನಾರಿಮನ್‌ ಅವರಂಥ ಘಟಾನುಘಟಿ ವಕೀಲರೂ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಯು.ಯು.ಲಲಿತ್‌ ಅವರ ಪೀಠದ ಮುಂದೆ ಕೈ ಚೆಲ್ಲಿ ಕುಳಿತುಕೊಳ್ಳಬೇಕಾಯಿತು.ಆದರೆ, ಇವೆಲ್ಲ ಒಕ್ಕೂಟ ವ್ಯವಸ್ಥೆಯ ಇಕ್ಕಟ್ಟುಗಳು, ಬಿಕ್ಕಟ್ಟುಗಳು. ಅನುಸರಿಸಲೇಬೇಕು. ಮಿಶ್ರಾ ಮತ್ತು ಲಲಿತ್‌ ಅವರಿದ್ದ ಪೀಠ ಕರ್ನಾಟಕದ ಬಗೆಗೆ ಖಂಡಿತ ಉದಾರವಾಗಿ ಇರಲಿಲ್ಲ, ಒಂದಾದ ನಂತರ ಒಂದರಂತೆ ಅದು ಕೊಡುವ ಆದೇಶಗಳು ಸೇಡಿನವು ಎಂದು ಭಾಸವಾಗುತ್ತಿತ್ತು. ಆದರೂ ಅದು ನ್ಯಾಯಾಂಗ ನಿಂದನೆಯ ಕುಣಿಕೆಯನ್ನು ರಾಜ್ಯಕ್ಕೆ ಬಿಗಿಯಲಿಲ್ಲ.ಬಿಗಿಯಬಹುದಿತ್ತಲ್ಲ? ಅವರಿಗೆ ಯಾವ ಮುಲಾಜು ಇತ್ತು? ತಮಿಳುನಾಡಿನ ವಕೀಲ ಶೇಖರ್‌ ನಾಫಡೆಯವರು ಅದನ್ನೇ ಕೇಳಿದರು, ‘ರಾಜಕಾರಣಿಗಳ ಬಗೆಗೆ ಸುಪ್ರೀಂ ಕೋರ್ಟಿಗೆ ಏಕೆ ಕರುಣೆ’ ಎಂದು. ‘ಎಸ್‌.ಎಂ.ಕೃಷ್ಣ ಇದೇ ಉಲ್ಲಂಘನೆಗಾಗಿ ಕ್ಷಮೆ ಕೇಳಲು ನಾಲ್ಕು ವರ್ಷ ತೆಗೆದುಕೊಂಡರು’ ಎಂದು ನಾಫಡೆ ನೆನಪಿಸಿದರು.‘ರಾಜ್ಯಗಳು ಒಕ್ಕೂಟ ವ್ಯವಸ್ಥೆಯನ್ನು ಪಾಲಿಸಬೇಕು’ ಎಂದು ಆದೇಶಿಸುವ ಸುಪ್ರೀಂ ಕೋರ್ಟು ಕೂಡ ಅದೇ ವ್ಯವಸ್ಥೆಯ ಒಂದು ಭಾಗ ಅಲ್ಲವೇ? ಬಹುಶಃ ಅದೇ ಕಾರಣಕ್ಕಾಗಿ ನ್ಯಾಯಾಂಗ ನಿಂದನೆಯ ತೂಗುಗತ್ತಿ ರಾಜ್ಯದ ತಲೆಯ ಮೇಲೆ ಇರುವಂತೆ ನ್ಯಾಯಾಲಯ ನೋಡಿಕೊಂಡಿತೇ ಹೊರತು ಆ ಕತ್ತಿಯನ್ನು ತಲೆ ಮೇಲೆ ಬೀಳಿಸಲಿಲ್ಲ! ನ್ಯಾಯಾಲಯಕ್ಕೆ ತನ್ನ ಸಾಮರ್ಥ್ಯ ಗೊತ್ತಿರುವಂತೆಯೇ ಮಿತಿಗಳೂ ಗೊತ್ತಿರುವುದಿಲ್ಲ ಎಂದು ಹೇಗೆ ಭಾವಿಸುವುದು?ನಾರಿಮನ್‌ ಅವರಿಗೆ ಈ ಸೂಕ್ಷ್ಮ ಗೊತ್ತಿತ್ತು. ‘ನ್ಯಾಯ ನಮ್ಮ ಪರ ಇಲ್ಲ’ ಎಂದು ತಿಳಿದೂ ಅವರು ನ್ಯಾಯಾಂಗವನ್ನು ಎದುರು ಹಾಕಿಕೊಳ್ಳದೇ ಅದರ ಘನತೆಯನ್ನು ಎತ್ತಿ ಹಿಡಿಯಲು ಮುಂದಾದರು. ‘ನೀರು ಬಿಡಲು ನಿರಾಕರಿಸಿದ ರಾಜ್ಯದ ಪರ ವಾದಿಸುವುದಿಲ್ಲ’ ಎಂದು ಅವರು ಹಿಂದೆ ಸರಿದರು. ಆದರೆ, ನೀರು ಬಿಡಲು ಅಸಹಾಯಕತೆ ವ್ಯಕ್ತಪಡಿಸಿದ ಮುಖ್ಯಮಂತ್ರಿಯ ಪತ್ರವನ್ನು ನ್ಯಾಯಾಲಯದ ಗಮನಕ್ಕೆ ತರುವ ತಮ್ಮ ಕರ್ತವ್ಯದಲ್ಲಿ ವಿಫಲರಾಗಲಿಲ್ಲ. ನಾರಿಮನ್‌ ಅವರ ಈ ನಡವಳಿಕೆ ಕನ್ನಡದ ಸಜ್ಜನಿಕೆಗೆ  ಪೂರಕವಾಗಿಯೇ ಇತ್ತು.ಆದರೆ, ಬಿಜೆಪಿ ನಾಯಕರಾದ ಕೆ.ಎಸ್‌.ಈಶ್ವರಪ್ಪನವರು ಹಾವೇರಿಯ ‘ಹಿಂದ ಬ್ರಿಗೇಡ್‌’ ವೇದಿಕೆಯಿಂದ ನೇರವಾಗಿ ವಿಧಾನಪರಿಷತ್ತಿಗೆ ಬಂದಂತಿತ್ತು. ಅವರಿಗೆ ನಾರಿಮನ್‌ ಅವರು ಯಡಿಯೂರಪ್ಪನವರ ಹಾಗೆ ಕಾಣುತ್ತಿದ್ದರೋ ಏನೋ ತಿಳಿಯದು! ಯಡಿಯೂರಪ್ಪನವರಿಗೂ ಅಷ್ಟೇ. ಅವರಿಗೆ ನಾರಿಮನ್‌ ಕಂಡರೆ ಈಶ್ವರಪ್ಪ ನೆನಪಾಗುತ್ತಿದ್ದರೋ ಏನೋ! ಇಬ್ಬರೂ ಆ ಮೃದು ಮನುಷ್ಯನ ಬಗೆಗೆ ಆಡಬಾರದ ಮಾತು ಆಡಿದರು.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ನಾರಿಮನ್‌ ಅವರೇ ನಮ್ಮ ವಕೀಲರಾಗಿದ್ದರು. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗಲೂ ಅವರೇ ನಮ್ಮ ವಕೀಲರಾಗಿದ್ದರು. ಯಡಿಯೂರಪ್ಪ, ಈಶ್ವರಪ್ಪ ಅದನ್ನು ಹೇಗೆ ಮರೆತರೋ? ವಕೀಲರಿಗೆ ಮತ್ತು ವೈದ್ಯರಿಗೆ ಕೊಟ್ಟ ಶುಲ್ಕದ ಲೆಕ್ಕವನ್ನು ಆಡಿಕೊಳ್ಳಬಾರದು ಎಂದು ಬಿಜೆಪಿಯವರಿಗೆ ತಿಳಿಯಲಿಲ್ಲ. ಸಮಾಧಾನ ಏನು ಎಂದರೆ ಕೇಂದ್ರ ಸಚಿವರಾದ ಅನಂತಕುಮಾರ್‌ ಮತ್ತು ಸದಾನಂದಗೌಡ ಭಿನ್ನವಾಗಿ ಯೋಚಿಸುತ್ತಿದ್ದರು. ಅವರು ತೆರೆಯ ಹಿಂದೆ ಬಹಳಷ್ಟು ಕೆಲಸ ಮಾಡಿದಂತಿದೆ!ಬಿಜೆಪಿಯ ಕೆಲವು ನಾಯಕರ ಎಲ್ಲ ಭರ್ತ್ಸನೆ, ಟೀಕೆ ಮತ್ತು ನಿಂದನೆಯನ್ನು ಮರೆತು ನಾರಿಮನ್‌ ಮತ್ತೆ ರಾಜ್ಯದ ಪರ ವಾದಕ್ಕೆ ನಿಂತರು. ನಾರಿಮನ್‌ ಎಂಥ ನೈತಿಕ ಸ್ಥೈರ್ಯದ ಮನುಷ್ಯ ಎಂದರೆ ಅದೇ ದ್ವಿಸದಸ್ಯ ಪೀಠಕ್ಕೆ ಬಡ್ಡಿ ಸಮೇತ ಉತ್ತರ ಕೊಟ್ಟರು. ಹೇಗೆ ಕೇವಲ ಗಣಿತದ ಪುಸ್ತಕ ಇಟ್ಟುಕೊಂಡು ಆ ಪೀಠ ಆದೇಶ ಕೊಟ್ಟಿತು ಎಂದು ಕುಟುಕಿದರು. ನ್ಯಾಯಪೀಠಕ್ಕೂ ಮನವರಿಕೆಯಾಗಿತ್ತೋ ಏನೋ? ತನ್ನ ಬಿಗಿಯನ್ನು ಸಡಿಲ ಮಾಡಿತು.ನಾವು ನದಿ ಹರಿವಿನ ದೃಷ್ಟಿಯಿಂದ ಮೇಲಿನ ರಾಜ್ಯ. ನೀರು ಹಿಡಿದುಕೊಳ್ಳುವ ಸಾಮರ್ಥ್ಯ ನಮಗೆ ಇದೆಯೇ ಹೊರತು ಕೆಳಗಿನ ರಾಜ್ಯಗಳಾದ ತಮಿಳುನಾಡಿಗೆ, ಕೇರಳಕ್ಕೆ ಮತ್ತು ಪುದುಚೇರಿಗೆ ಇಲ್ಲ. ಅದೇ ಕಾರಣಕ್ಕಾಗಿ ಸುಪ್ರೀಂ ಕೋರ್ಟು ನಮ್ಮ ಬಗೆಗೆ ಆಗಾಗ ಕಠೋರವಾಗಿ ವರ್ತಿಸುತ್ತದೆ. ಸುಪ್ರೀಂ ಕೋರ್ಟಿಗೆ ಈ ವ್ಯಾಜ್ಯ ಹೋಗುತ್ತಿರುವವರೆಗೆ ಅದು ಕೊಡುವ ಆದೇಶವನ್ನು ನಾವು ಪಾಲಿಸಲೇಬೇಕಾಗುತ್ತದೆ.ನಾವು ಎದುರಿಸುವ ಕಷ್ಟವನ್ನು ನಮ್ಮ ವಾದದ ಮೂಲಕ ಮಾತ್ರ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕೇ ಹೊರತು ಅನ್ಯ ಮಾರ್ಗದಿಂದ ಅಲ್ಲ. ಕಳೆದ 23 ವರ್ಷಗಳಿಂದ ನಾರಿಮನ್‌, ಮೋಹನ್‌ ಕಾತರಕಿ ಮತ್ತು ಅವರ ಗೆಳೆಯರು ನಮ್ಮ ಪರವಾಗಿ ವಾದಿಸುತ್ತಿದ್ದಾರೆ. ಅನೇಕ ಪರಿಹಾರಗಳನ್ನು ರಾಜ್ಯಕ್ಕೆ ಒದಗಿಸಿಯೂ ಕೊಟ್ಟಿದ್ದಾರೆ.ಮಳೆ ಕೈ ಕೊಟ್ಟ ಈಗಿನಂಥ ಸ್ಥಿತಿಯಲ್ಲಿ ಏನು ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ. ಸಂಕಷ್ಟವನ್ನು ಹೇಗೆ ಹಂಚಿಕೊಳ್ಳಬೇಕು ಎಂಬ ಬಗೆಗೂ ನಿರ್ದಿಷ್ಟ ಮಾನದಂಡಗಳು ಇಲ್ಲ. ಆಗಲೂ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನ ಒಳಗೆಯೇ ಪರಿಹಾರಗಳನ್ನು ಕಂಡುಕೊಳ್ಳಬೇಕು.ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದು ಅತ್ಯಂತ ಸಂಕಷ್ಟದ ಸಮಯವಾಗಿತ್ತು. ಒಂದು ಕಡೆಗೆ ಅವರು ಈ ಭಾಗದ ರೈತರ ಹಿತ ಕಾಯಬೇಕಿತ್ತು. ಇನ್ನೊಂದು ಕಡೆಗೆ ಬೆಂಗಳೂರಿನಂಥ ಬಕಾಸುರ ನಗರದ ದಾಹವನ್ನು ತಣಿಸುವ ಹೊಣೆಯನ್ನು ನಿಭಾಯಿಸಬೇಕಿತ್ತು. ಅದನ್ನೆಲ್ಲ ಮೀರಿ ಮುಖ್ಯಮಂತ್ರಿಯಾಗಿ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸಬೇಕಿತ್ತು.ಅದು ತಂತಿಯ ಮೇಲಿನ ನಡಿಗೆಯಾಗಿತ್ತು. ಬಹುಶಃ ಈಚಿನ ದಿನಗಳಲ್ಲಿ ಅತ್ಯಂತ ಸಮರ್ಥವಾಗಿ ಅವರು ನಿಭಾಯಿಸಿದ ತೀವ್ರ ಬಿಕ್ಕಟ್ಟಿನ ಒಂದು ಸಂದರ್ಭವಿದು. ನೀರು ಬಿಡುವ ಅನಿವಾರ್ಯತೆ ಅವರಿಗೆ ಗೊತ್ತಿತ್ತು. ಆದರೆ, ತಮ್ಮ ಸರ್ಕಾರ ಉಳಿಸಿಕೊಳ್ಳಲು ನೀರು ಬಿಟ್ಟರು ಎಂಬ ಅಪಖ್ಯಾತಿಯಿಂದ ಅವರು ಪಾರಾಗಲೂ ಬೇಕಿತ್ತು.ನೀರು ಬಿಡುವುದು ಅನಿವಾರ್ಯ ಎಂಬ ಒಂದು ಸಂದರ್ಭವನ್ನು ಅವರು ಅತ್ಯಂತ ಜಾಣ್ಮೆಯಿಂದ ಸೃಷ್ಟಿಸಿದರು. ಇತ್ತ ಸದನದ ಗೌರವ ಉಳಿಸಿ, ಅತ್ತ ನ್ಯಾಯಾಂಗದ ಘನತೆ ಎತ್ತಿ ಹಿಡಿದು ಮುತ್ಸದ್ದಿತನ ಮೆರೆದರು. ಇನ್ನೇನು ತಮ್ಮ ಸರ್ಕಾರವನ್ನು ಬಲಿ ಕೊಡಬಹುದು ಎಂಬ ಆತಂಕವನ್ನೂ ಅವರು ಸೃಷ್ಟಿಸಿದರು! ಅದು ಹುಸಿಯಾಗಿತ್ತೇ? ಹೇಳುವುದು ಕಷ್ಟ.ಇಡೀ ಒಂದು ತಿಂಗಳು ನಡೆದ ಈ ಎಲ್ಲ ವಿದ್ಯಮಾನದ ಪಾಠ ಏನು ಎಂದರೆ ಕಾವೇರಿ ವಿಚಾರದಲ್ಲಿ. ‘ನಾವು ಸೋತು ಗೆಲ್ಲಬೇಕು’ ಎಂಬುದೇ ಅಲ್ಲವೇ? ತಾತ್ಕಾಲಿಕವಾಗಿ ಗೆದ್ದು ಕಾಯಂ ಆಗಿ ಸೋತರೆ ಏನು ಪ್ರಯೋಜನ?  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry