ಬುಧವಾರ, ಅಕ್ಟೋಬರ್ 28, 2020
20 °C
ರಾಜ್ಯದ 13,697 ಗ್ರಾಮಗಳಲ್ಲಿ ಬಾಲಕಿಯರ ಅನುಪಾತ 950ಕ್ಕಿಂತ ಕಡಿಮೆ

ಲಿಂಗ ತಾರತಮ್ಯ: ಕಳೆದುಹೋಗುತ್ತಿದ್ದಾರೆ ಬಾಲೆಯರು

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಲಿಂಗ ತಾರತಮ್ಯ: ಕಳೆದುಹೋಗುತ್ತಿದ್ದಾರೆ ಬಾಲೆಯರು

ಕಲಬುರ್ಗಿ: ‘ಲಿಂಗಾನುಪಾತದ ವ್ಯತ್ಯಾಸ ಹೆಚ್ಚುತ್ತಲೇ ಇರುವುದು ಮುಂದೊಂದು ದಿನ ಬಹುದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ’ ಎಂದು ಪರಿಣತರು ಹೇಳುತ್ತಲೇ ಇದ್ದಾರೆ. ಸುಶಿಕ್ಷಿತರು ಹೆಚ್ಚಿರುವ ನಗರ ಪ್ರದೇಶ ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲಿಯೂ ಈ ಸಮಸ್ಯೆ ಹೆಚ್ಚುತ್ತಿರುವುದಕ್ಕೆ ಅವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

‘ಮಕ್ಕಳ ಲಿಂಗಾನುಪಾತವು ಪ್ರತಿ ಸಾವಿರ ಗಂಡು ಮಕ್ಕಳಿಗೆ ಅನುಗುಣವಾಗಿ ಹೆಣ್ಣು ಮಕ್ಕಳ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ. ನಮ್ಮ ರಾಜ್ಯದ 27,397 ಗ್ರಾಮಗಳ ಪೈಕಿ 13,697 ಗ್ರಾಮಗಳಲ್ಲಿ  ‘0’ರಿಂದ ‘6’ ವರ್ಷ ವಯೋಮಾನದ ಬಾಲಕಿಯರ ಅನುಪಾತ  950ಕ್ಕಿಂತ ಕಡಿಮೆ ಇದೆ. ಇದು ಕಳವಳಕಾರಿ ವಿಷಯ’ ಎನ್ನುತ್ತಾರೆ ಇಲ್ಲಿಯ ಅರ್ಥಶಾಸ್ತ್ರಜ್ಞೆ ಪ್ರೊ.ಸಂಗೀತಾ ಕಟ್ಟಿಮನಿ ಅವರು.

‘ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಅವರು ಅನುಸರಿಸುವ ಅಂತರರಾಷ್ಟ್ರೀಯ ಮಾನದಂಡ (ಅಂದರೆ 1000 ಬಾಲಕರಿಗೆ 952 ಬಾಲಕಿಯರು ಇದ್ದಾರೆ ಎಂಬ ಲೆಕ್ಕಾಚಾರ)ದ ಆಧಾರದ ಮೇಲೆ 2011ರ ಜನಗಣತಿಯ ಅಂಕಿ ಅಂಶ ವಿಶ್ಲೇಷಿಸಿದಾಗ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ’ ಎನ್ನುವುದು ಪ್ರೊ.ಸಂಗೀತಾ ಅವರ ವಿವರಣೆ.

‘ಕರ್ನಾಟಕದಲ್ಲಿ ಲಿಂಗಾನುಪಾತದ ವ್ಯತ್ಯಾಸ ಹೆಚ್ಚುತ್ತಲೇ ಇದೆ ಎಂಬುದಕ್ಕೆ 1961ರಿಂದ 2011ರ ವರೆಗಿನ ಅಂದರೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆದ ಜನಗಣತಿಯ ಅಂಕಿ ಅಂಶಗಳೇ ಸಾಕ್ಷಿ. ಕುಟುಂಬ ಯೋಜನೆ, ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಇನ್ನೊಂದೆಡೆ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತ ಎಂಬಂತಿದೆ. ಬಾಲೆಯರ ಸಂಖ್ಯೆ ಕುಸಿಯಲು ಇದೂ ಕಾರಣ’ ಎಂಬುದು ಅವರ ವ್ಯಾಖ್ಯಾನ.

ಹೈದರಾಬಾದ್‌ ಕರ್ನಾಟಕ: ಹೈದರಾಬಾದ್‌ ಕರ್ನಾಟಕದಲ್ಲಿ 0–6 ವಯೋಮಾನದಲ್ಲಿ ಶೇ 51.26ರಷ್ಟು ಗಂಡು ಮಕ್ಕಳಿದ್ದರೆ, ಹೆಣ್ಣುಮಕ್ಕಳು ಶೇ 48.73ರಷ್ಟು ಮಾತ್ರ.  ಕಲಬುರ್ಗಿ ಜಿಲ್ಲೆ ಕಡಿಮೆ ಮಕ್ಕಳ ಲಿಂಗಾನುಪಾತ ಹೊಂದಿದ್ದು, ಜೇವರ್ಗಿ (934), ಆಳಂದ (939), ಅಫಜಲಪುರ (935) ಮತ್ತು ಕಲಬುರ್ಗಿ ತಾಲ್ಲೂಕು (926)ಗಳಲ್ಲಿ ಲಿಂಗಾನುಪಾತ ಪ್ರತಿಕೂಲವಾಗಿದೆ. ಸೇಡಂ ತಾಲ್ಲೂಕಿನಲ್ಲಿ ಮಕ್ಕಳ ಲಿಂಗಾನುಪಾತ 964 ರಿಂದ 984ಕ್ಕೆ ಹೆಚ್ಚಿದೆ. ರಾಯಚೂರು ಜಿಲ್ಲೆಯ ಮಕ್ಕಳ ಲಿಂಗಾನುಪಾತ 964 ರಿಂದ 950ಕ್ಕೆ ಕುಸಿದಿದೆ.

ಯಾದಗಿರಿ ಜಿಲ್ಲೆಯ ಯಾದಗಿರಿ ತಾಲ್ಲೂಕು (963) ಹೊರತು ಪಡಿಸಿದರೆ ಸುರಪುರ (945) ಮತ್ತು ಶಹಾಪುರದಲ್ಲಿ (946) ಲಿಂಗಾನುಪಾತ ಕಡಿಮೆಯಿದೆ. ಕೊಪ್ಪಳ ಜಿಲ್ಲೆಯ ಲಿಂಗಾನುಪಾತ 958 ಉತ್ತಮವಾಗಿದ್ದರೂ ಯಲಬುರ್ಗಾ (943), ಕುಷ್ಟಗಿ (948) ತಾಲ್ಲೂಕುಗಳಲ್ಲಿ ಲಿಂಗಾನುಪಾತ ಕಡಿಮೆ.

ಬೀದರ್‌ ಜಿಲ್ಲೆಯ ಬಸವ ಕಲ್ಯಾಣ (937), ಭಾಲ್ಕಿ (934), ಬೀದರ್‌ (938) ತಾಲ್ಲೂಕುಗಳಲ್ಲಿ ಪ್ರತಿಕೂಲ ಲಿಂಗಾನುಪಾತ ಕಂಡುಬರುತ್ತಿದೆ. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ (941) ಹೊರತು ಪಡಿಸಿದರೆ ಉಳಿದೆಲ್ಲ ತಾಲ್ಲೂಕುಗಳಲ್ಲಿ ಲಿಂಗಾನುಪಾತ ಉತ್ತಮವಾಗಿದೆ ಎನ್ನುವುದು ಅವರ ವಿವರಣೆ.

ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ನಂತರ ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು ರಾಜ್ಯ ಸರ್ಕಾರ ‘ಭಾಗ್ಯಲಕ್ಷ್ಮೀ’ ಯೋಜನೆ ಜಾರಿಗೆ ತಂದಿದೆ.

ಲಿಂಗಾನುಪಾತದ ಅಸಮತೋಲನ ಮತ್ತು ಹೆಣ್ಣು ಮಕ್ಕಳು ಶಾಲೆ ಬಿಡುವುದುನ್ನು ತಪ್ಪಿಸಲು ಕೇಂದ್ರ ಸರ್ಕಾರ ‘ಭೇಟಿ ಬಚಾವೊ; ಭೇಟಿ ಪಡಾವೊ’ ಕಾರ್ಯಕ್ರಮವನ್ನು ದೇಶದ 100 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದೆ. ಇನ್ನೂ 61 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಲು ಮುಂದಾಗಿದೆ. ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವ ರಾಜ್ಯದ ಈ ತಾಲ್ಲೂಕುಗಳಲ್ಲಿಯೂ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಬೇಕು ಎನ್ನುವುದು ಅವರ ಸಲಹೆ.

**

ಚಿಕ್ಕೋಡಿ (902) ರಾಜ್ಯದಲ್ಲಿಯೇ ಅತಿ ಕಡಿಮೆ ಲಿಂಗಾನುಪಾತ ಹೊಂದಿದೆ.

2ನೇ ಸ್ಥಾನ ಅಥಣಿ (910),

3ನೇ ಸ್ಥಾನ ಹುಬ್ಬಳ್ಳಿ (913),

ನರಗುಂದ (913),

ಸಿಂದಗಿ (921),

ಬೀಳಗಿ (921),

ಬಾಗಲಕೋಟೆ (921),

ಶಿಗ್ಗಾವಿ (924),

ಇಂಡಿ (924),

ರಾಯಬಾಗ (921),

ರಾಣೆಬೆಣ್ಣೂರ (929),

ವಿಜಯಪುರ (930),

ಕುಂದಗೋಳ (930),

ಬೆಳಗಾವಿ (934),

ಕುಮಟಾ (935),

ನವಲಗುಂದ (939),

ಬೆಂಗಳೂರು ವಿಭಾಗದ ಹರಿಹರ (919),

ಪಾವಗಡ (928),

ತುರುವಕೆರೆ(929),

ಕುಣಿಗಲ್ (929),

ಬೆಂಗಳೂರು ದಕ್ಷಿಣ (928),

ಹೊಸಕೋಟೆ (931)

ಮತ್ತು ಚಳ್ಳಕೆರೆ (935).

ಮೈಸೂರು ವಿಭಾಗದ ಮದ್ದೂರು(923),

ಮಳವಳ್ಳಿ  (928) ಮತ್ತು ಪಾಂಡವಪುರ (932) ತಾಲ್ಲೂಕುಗಳು ಕಡಿಮೆ ಲಿಂಗಾನುಪಾತ ಹೊಂದಿವೆ.

**

ತಾಲ್ಲೂಕುಗಳ ಸ್ಥಿತಿಗತಿ: ನಮ್ಮ ರಾಜ್ಯದಲ್ಲಿ 0–6 ವರ್ಷ ವಯೋಮಾನದ ಮಕ್ಕಳ ಸಂಖ್ಯೆ 1991ರಲ್ಲಿ ಶೇ 16.63ರಷ್ಟಿದ್ದರೆ, 2011ರಲ್ಲಿ ಶೇ 11.72ಕ್ಕೆ ಕುಸಿದಿದೆ.  ಮೈಸೂರು ವಿಭಾಗವು ಅತ್ಯುತ್ತಮ ಲಿಂಗಾನುಪಾತ ಹೊಂದಿದ್ದರೆ, ಬೆಳಗಾವಿ ವಿಭಾಗ ಕಡಿಮೆ ಲಿಂಗಾನುಪಾತ ಹೊಂದಿದೆ. ಬೆಳಗಾವಿ ವಿಭಾಗದ ಹಲವು ತಾಲ್ಲೂಕುಗಳ ಲಿಂಗಾನುಪಾತದಲ್ಲಿ ಭಾರಿ ಅಂತರವಿದೆ.

*** ನಮ್ಮ ದೇಶದಲ್ಲಿ ಲಿಂಗದ ನೆಲೆಯಲ್ಲಿ ತಾರತಮ್ಯ ಹೆಚ್ಚುತ್ತಿದೆ. 1991ರ ಜನಗಣತಿ ಪ್ರಕಾರ 945ರಷ್ಟಿದ್ದ ಹೆಣ್ಣುಮಕ್ಕಳ ಅನುಪಾತ,  2011ರ ಜನಗಣತಿಯ ಪ್ರಕಾರ  914ಕ್ಕೆ ಕುಸಿದಿದೆ.

-ಸಂಗೀತಾ ಕಟ್ಟಿಮನಿ, ಅರ್ಥಶಾಸ್ತ್ರಜ್ಞೆ, ಕಲಬುರ್ಗಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.