ಗುರುವಾರ , ಡಿಸೆಂಬರ್ 5, 2019
19 °C

ಶ್ವೇತಭವನದ ಓಟಕ್ಕೊಬ್ಬ ಸಾಥಿ, ‘ರನ್ನಿಂಗ್ ಮೇಟ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ವೇತಭವನದ ಓಟಕ್ಕೊಬ್ಬ ಸಾಥಿ, ‘ರನ್ನಿಂಗ್ ಮೇಟ್’

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ವೈಶಿಷ್ಟ್ಯಗಳಲ್ಲಿ ಒಂದು, ಸಹ ಸ್ಪರ್ಧಿಯ ಆಯ್ಕೆ. ಅಧ್ಯಕ್ಷ ಅಭ್ಯರ್ಥಿಯನ್ನು ಆರಿಸುವಂತೆ, ಪಕ್ಷದ ಪ್ರಜಾಪ್ರತಿನಿಧಿಗಳು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಆರಿಸುವ ಪದ್ಧತಿ ಹಿಂದೆ ಚಾಲ್ತಿಯಲ್ಲಿತ್ತು. 1956ರ ನಂತರ ಆ ಪ್ರಕ್ರಿಯೆ ಬದಲಾಯಿತು.ಇದೀಗ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾದವರು, ತಮ್ಮ ‘ರನ್ನಿಂಗ್ ಮೇಟ್’  ಯಾರು ಎಂಬುದನ್ನು ಆಯ್ಕೆ ಮಾಡುತ್ತಾರೆ. ಈ ‘ರನ್ನಿಂಗ್ ಮೇಟ್’, ನಂತರ ಅಧ್ಯಕ್ಷರ ಸಚಿವ ಸಂಪುಟದ ಭಾಗವಾಗಿ, ಉಪಾಧ್ಯಕ್ಷ ಪದವಿ ಅಲಂಕರಿಸುತ್ತಾರೆ.1976ರಲ್ಲಿ ಜಿಮ್ಮಿ ಕಾರ್ಟರ್, ಅಂದು ಮಿನೆಸೋಟ ಸೆನೆಟರ್ ಆಗಿದ್ದ ವಾಲ್ಟರ್ ಮಾನ್ಡೇಲ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ, ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಘೋಷಿಸಿದ್ದರು. ನಂತರದ ವರ್ಷಗಳಲ್ಲಿ ರಾಷ್ಟ್ರೀಯ ಅಧಿವೇಶನದವರೆಗೂ ಕಾಯದೇ, ತಮ್ಮ ‘ರನ್ನಿಂಗ್ ಮೇಟ್’ ಯಾರು ಎಂಬುದನ್ನು ಅಧ್ಯಕ್ಷೀಯ ಅಭ್ಯರ್ಥಿಗಳು ಮೊದಲೇ ಘೋಷಿಸುವುದು ವಾಡಿಕೆ.ಹೀಗೆ ಸಹಸ್ಪರ್ಧಿಯನ್ನು ಆರಿಸಿಕೊಳ್ಳುವಾಗ ಕೂಡ ಹಲವು ಸಂಗತಿಗಳನ್ನು ಪರಿಗಣಿಸಲಾಗುತ್ತದೆ. ಹೆಚ್ಚು ಮತ ಗಳಿಸುವುದೇ ಪ್ರಮುಖ ಮಾನದಂಡವಾಗುತ್ತದೆ. ಹಾಗಾಗಿ ಪ್ರಾಂತೀಯ, ಸೈದ್ಧಾಂತಿಕ ಸಮತೋಲನ ಸಾಧಿಸಲು ಪ್ರಾಶಸ್ತ್ಯ ನೀಡಲಾಗುತ್ತದೆ.ಡೆಮಾಕ್ರಟಿಕ್ ಪಕ್ಷದ 50 ವರ್ಷಗಳ ಇತಿಹಾಸದ ಪುಟಗಳನ್ನು ತಿರುವಿದರೆ, ಅದು ಅನುಸರಿಸಿದ ನೀತಿ ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದೊಮ್ಮೆ ಅಧ್ಯಕ್ಷೀಯ ಅಭ್ಯರ್ಥಿ, ಅಮೆರಿಕದ ಉತ್ತರ ಭಾಗದವರಾಗಿದ್ದರೆ, ಪ್ರಗತಿಪರ ಎಂಬ ಹಣೆಪಟ್ಟಿ ಇದ್ದರೆ, ‘ರನ್ನಿಂಗ್ ಮೇಟ್’ ಸಾಮಾನ್ಯವಾಗಿ ದಕ್ಷಿಣದ, ಸಾಂಪ್ರದಾಯಿಕ ಹಿನ್ನಲೆ ಹೊಂದಿರುವವರಾಗಿರುತ್ತಾರೆ.ಹಾಗಾಗಿ ಕೆನಡಿ, ಲಿಂಡನ್ ಜಾನ್ಸನ್ ಅವರನ್ನು ‘ರನ್ನಿಂಗ್ ಮೇಟ್’ ಆಗಿ ಆರಿಸಿಕೊಂಡಿದ್ದರು. ಕಾರ್ಟರ್, ವಾಲ್ಟರ್ ಮಾನ್ಡೇಲ್ ಅವರನ್ನು ಜೊತೆಯಾಗಿಸಿಕೊಂಡಿದ್ದರು. ಕ್ಲಿಂಟನ್ ಆಯ್ಕೆ, ಅಲ್ ಗೋರ್ ಆಗಿತ್ತು.ಕೆಲವೊಮ್ಮೆ ತಮಗೆ ಪರಿಣತಿಯಿಲ್ಲದ ಕ್ಷೇತ್ರದವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆರಿಸಿಕೊಳ್ಳುವುದೂ ಇದೆ. 2000ನೇ ಇಸವಿಯಲ್ಲಿ ಜಾರ್ಜ್‌ ಬುಷ್ ಅಧ್ಯಕ್ಷ ಅಭ್ಯರ್ಥಿಯಾಗಿ ಕಣದಲ್ಲಿದ್ದಾಗ, ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ಜ್ಞಾನ ಮತ್ತು ಅನುಭವದ ಕೊರತೆ ಇದೆ ಎಂಬ ಮಾತು ಕೇಳಿಬಂದಿತ್ತು. ಹಾಗಾಗಿ ಬುಷ್, ಆ ಹಿಂದೆ ರಕ್ಷಣಾ ಕಾರ್ಯದರ್ಶಿಯಾಗಿದ್ದ ಚೇನೀ ಅವರನ್ನು ಸಹಸ್ಪರ್ಧಿ ಮಾಡಿಕೊಂಡರು.ಸೆನೆಟರ್ ಆಗಿ ಮೊದಲ ಜಿಗಿತದಲ್ಲೇ ಶ್ವೇತಭವನಕ್ಕೆ ಹೊರಟ ಒಬಾಮ ಅವರಿಗೂ ಅದೇ ಸಮಸ್ಯೆಯಿತ್ತು. ಒಬಾಮ ವಿದೇಶಾಂಗ ವ್ಯವಹಾರ ನಿರ್ದೇಶನಾ ಸಮಿತಿಯಲ್ಲಿದ್ದ ಜೋ ಬಿಡೆನ್ ಅವರನ್ನು ಜೊತೆ ಮಾಡಿಕೊಂಡರು.ಉಳಿದಂತೆ, ಪ್ರಾಥಮಿಕ ಹಂತದ ಚುನಾವಣೆಯಲ್ಲಿ ಸೋಲು ಕಂಡ ರಾಜ್ಯಗಳಲ್ಲಿ, ಹೆಚ್ಚಿನ ಮತಗಳನ್ನು ಸೆಳೆಯಬಲ್ಲ ವ್ಯಕ್ತಿಗಾಗಿ ಹುಡುಕಲಾಗುತ್ತದೆ. ಇಲ್ಲಿ ಮುಖ್ಯವಾಗುವುದು ಗೆಲುವಿಗೆ ಬೇಕಾದ 270 ಎಲೆಕ್ಟೋರಲ್ ಮತಗಳು ಮಾತ್ರ.ಆದರೆ ಸಾಮಾನ್ಯವಾಗಿ ಹೀಗೆ ಸಹಸ್ಪರ್ಧಿಯನ್ನು ಆರಿಸಿಕೊಳ್ಳುವಾಗ ಅಧ್ಯಕ್ಷ ಅಭ್ಯರ್ಥಿಗಳು, ತಮಗಿಂತ ವರ್ಚಸ್ವಿಯಾದವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿಕೊಳ್ಳದ ಜಾಣತನ ತೋರುತ್ತಾರೆ. ಈ ಹಿಂದೆ ಅಧ್ಯಕ್ಷ ಅಭ್ಯರ್ಥಿಗಳನ್ನೂ ಮೀರಿ ಉಪಾಧ್ಯಕ್ಷ ಅಭ್ಯರ್ಥಿಗಳು ಚುನಾವಣಾ ಪ್ರಚಾರ ಸಮಯದಲ್ಲಿ ಮಿಂಚಿದ ಉದಾಹರಣೆಗಳಿವೆ. ಒಂದೊಮ್ಮೆ ಸಾಮರ್ಥ್ಯದಲ್ಲಿ, ವರ್ಚಸ್ಸಿನಲ್ಲಿ ಉಪಾಧ್ಯಕ್ಷ ಅಭ್ಯರ್ಥಿಗಳು ಮುಂದಿದ್ದರೆ, ಆ ಆಯ್ಕೆಯನ್ನು ‘ಕಾಂಗರೂ ಟಿಕೆಟ್’ ಎನ್ನಲಾಗುತ್ತದೆ.ಎದುರಾಳಿಯ ಸಾಮರ್ಥ್ಯ ನೋಡಿ, ಅದಕ್ಕೆ ತಕ್ಕಂತೆ ಸಹ ಸ್ಪರ್ಧಿಯನ್ನು ಆಯ್ದುಕೊಳ್ಳುವ ಕ್ರಮವೂ ಇದೆ. ಟ್ರಂಪ್ ತಮ್ಮ ‘ರನ್ನಿಂಗ್ ಮೇಟ್’ ಆಗಿ ಮಹಿಳೆಯನ್ನು ಆಯ್ದುಕೊಳ್ಳುವ ಯೋಚನೆಗೆ ಇಳಿದಿದ್ದರು. ಆ ಮೂಲಕ ಹಿಲರಿ ಪರ ಇರಬಹುದಾದ ಮಹಿಳಾ ಮತದಾರರನ್ನು ಸೆಳೆಯುವ ಉದ್ದೇಶ ಟ್ರಂಪ್ ಅವರದ್ದಾಗಿತ್ತು.ಮೂರ್ನಾಲ್ಕು ಹೆಸರುಗಳು ಅವರ ಪಟ್ಟಿಯಲ್ಲಿದ್ದವು. ಬುಷ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಕಾಂಡೋಲಿನಾ ರೈಸ್ ಅವರ ಹೆಸರೂ ಪ್ರಸ್ತಾಪವಾಗಿತ್ತು. ಆದರೆ ಅವರು ಹುದ್ದೆಯ ಬಗ್ಗೆ ಆಸಕ್ತಿ ತೋರಲಿಲ್ಲ. ಕೊನೆಗೆ ಟ್ರಂಪ್, ಇಂಡಿಯಾನಾದ ಗವರ್ನರ್ ಮೈಕ್ ಪೆನ್ಸ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸಹಸ್ಪರ್ಧಿಯಾಗಿ ಆಯ್ದುಕೊಂಡರು.ಟ್ರಂಪ್ ಅವರಿಗೆ ಹೋಲಿಸಿದರೆ ಪೆನ್ಸ್, ಮೃದುಭಾಷಿ. ರಾಜಕೀಯ ಅನುಭವ ಇರುವ ಸಂಪ್ರದಾಯವಾದಿ ರಿಪಬ್ಲಿಕನ್. ರಾಷ್ಟ್ರೀಯತೆ, ಆರ್ಥಿಕ ಕುಸಿತವನ್ನೇ ಕೇಂದ್ರವಾಗಿಸಿಕೊಂಡು ಸಾಗುತ್ತಿರುವ ಟ್ರಂಪ್ ಪರ ಪ್ರಚಾರಕ್ಕೆ ಸೈದ್ಧಾಂತಿಕ ಆಯಾಮವನ್ನು ಪೆನ್ಸ್ ಜೋಡಿಸಲಿದ್ದಾರೆ ಎಂಬುದು ಅವರ ಆಯ್ಕೆಯ ಹಿಂದಿದ್ದ ಉದ್ದೇಶ.ಪೆನ್ಸ್ ಈ ಹಿಂದೆ ಗರ್ಭಪಾತ, ಸಲಿಂಗ ಕಾಮವನ್ನು ತೀವ್ರವಾಗಿ ವಿರೋಧಿಸಿದ್ದರು. ಪೆನ್ಸ್ ಮತೀಯವಾದಿಯೂ ಹೌದು. ‘ನಾನು ಮೊದಲು ಕ್ರಿಶ್ಚಿಯನ್ ಕನ್ಸರ್ವೇಟಿವ್, ನಂತರ ರಿಪಬ್ಲಿಕನ್’ ಎಂದು ಈ ಹಿಂದೆ ಅವರು ಹೇಳಿದ್ದರು. ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ಟ್ರಂಪ್, ಪೆನ್ಸ್ ಅವರನ್ನು ಬರಸೆಳೆದುಕೊಂಡರು.ಇತ್ತ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ಉಪಾಧ್ಯಕ್ಷ ಹುದ್ದೆಗೆ ತಮ್ಮ ಸಹಸ್ಪರ್ಧಿಯಾಗಿ ವರ್ಜೀನಿಯಾದ ಗವರ್ನರ್ ಟಿಮ್ ಕೈನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟಿಮ್ ಕೈನ್ ಅಪಾರ ರಾಜಕೀಯ ಅನುಭವ ಇರುವ ವ್ಯಕ್ತಿ. ಮೇಯರ್ ಆಗಿ, ಗವರ್ನರ್ ಆಗಿ, ಸೆನೆಟರ್ ಆಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು.ಕೈನ್, ಸ್ಪ್ಯಾನಿಷ್ ಮಾತನಾಡುವ, ಕ್ರಿಶ್ಚಿಯನ್ ಮಿಷನರಿಗಳ ಜೊತೆ ನಿಕಟವಾಗಿ ಕೆಲಸ ಮಾಡಿದ, ಇಂದಿಗೂ ಮತೀಯ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ರಾಜಕಾರಣಿ. ಟಿ.ವಿ ಸಂದರ್ಶನವೊಂದರಲ್ಲಿ ಕೈನ್ ‘ನಾನು ವೈಯಕ್ತಿಕವಾಗಿ ಸಾಂಪ್ರದಾಯಿಕ ಕ್ಯಾಥೋಲಿಕ್. ನಾನು ಗರ್ಭಪಾತವನ್ನು ವಿರೋಧಿಸುವಹಾಗೆ, ಮರಣದಂಡನೆಯನ್ನೂ ವಿರೋಧಿಸುತ್ತೇನೆ’ ಎಂದಿದ್ದರು. ಜೊತೆಗೆ ಕೈನ್, ಆಫ್ರಿಕನ್ ಅಮೆರಿಕನ್ ಸಮುದಾಯದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಆಫ್ರಿಕನ್ ಅಮೆರಿಕನ್ನರು ಬಹುಸಂಖ್ಯೆಯಲ್ಲಿರುವ ರಿಚ್್ಮಂಡ್ ನಗರದಲ್ಲಿ, ಕೈನ್ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು.ಜೊತೆಗೆ ಕೈನ್ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರಿಗೆ ಮಧ್ಯಮ ವರ್ಗದವರ ಬವಣೆಗಳ ಅರಿವಿದೆ. ಹಾಗಾಗಿ ಮಧ್ಯಮ ವರ್ಗದ ಶ್ವೇತವರ್ಣೀಯರು, ಕೈನ್ ಅವರನ್ನು ಬೆಂಬಲಿಸಲಿದ್ದಾರೆ, ಆ ಮೂಲಕ ಹಿಲರಿ ಅವರಿಗೆ ಲಾಭವಾಗುತ್ತದೆ ಎಂಬುದು ಈ ಆಯ್ಕೆಯ ಹಿಂದಿನ ಲೆಕ್ಕಾಚಾರ.ಸಹಸ್ಪರ್ಧಿಯ ಆಯ್ಕೆಗೆ ಇಷ್ಟೆಲ್ಲಾ ಕಸರತ್ತು ಮಾಡಿದರೂ, ಮತದಾರರು ಮತಗಟ್ಟೆಗೆ ಹೋದಾಗ, ಸಾಮಾನ್ಯವಾಗಿ ‘ರನ್ನಿಂಗ್ ಮೇಟ್’ ಯಾರಿದ್ದಾರೆ ಎಂದು ಗಮನಿಸಿ ಮತ ನೀಡುವುದಿಲ್ಲ. ಅಧ್ಯಕ್ಷ ಅಭ್ಯರ್ಥಿಗಳಷ್ಟೇ ಮತದಾರರಿಗೆ ಮುಖ್ಯವಾಗುತ್ತಾರೆ. ಅಧ್ಯಕ್ಷ ಅಭ್ಯರ್ಥಿಗಳ ನಡುವೆ ಮೂರು ಡಿಬೇಟ್ ನಡೆದರೆ, ಉಪಾಧ್ಯಕ್ಷ ಅಭ್ಯರ್ಥಿಗಳ ನಡುವೆ ಒಂದು ಡಿಬೇಟ್ ಸಾಮಾನ್ಯವಾಗಿ ಆಯೋಜನೆಯಾಗಿರುತ್ತದೆ.ಆದರೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆಯುತ್ತದೆ. ಸಂಭಾವ್ಯ ಹೆಸರುಗಳನ್ನು ಇಟ್ಟುಕೊಂಡು ಮಾಧ್ಯಮಗಳೂ ಗಂಟೆಗಟ್ಟಲೆ ಹರಟುತ್ತವೆ. ಕೆಲವೊಮ್ಮೆ ‘ರನ್ನಿಂಗ್ ಮೇಟ್’ ಆಯ್ಕೆ ವಿವಾದಕ್ಕೂ ಕಾರಣವಾಗುತ್ತದೆ.ಆ ಮೂಲಕ ಅಧ್ಯಕ್ಷ ಅಭ್ಯರ್ಥಿಗೆ ಹಿನ್ನಡೆಯಾಗುವುದೂ ಇದೆ. 1972ರಲ್ಲಿ ಹಾಗೆಯೇ ಆಯಿತು. ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸಿದ್ದ ಜಾರ್ಜ್ ಮೆಕ್‌ಗೌರ್ನ್, ತಮ್ಮ ಸಹ ಸ್ಪರ್ಧಿಯಾಗಿ ಥಾಮಸ್ ಈಗಲ್ಟನ್ ಅವರನ್ನು ಆಯ್ದುಕೊಂಡಿದ್ದರು. ಆ ಆಯ್ಕೆಯ ಬಗ್ಗೆ ಮಾಹಿತಿ ಭಿತ್ತರವಾಗುತ್ತಲೇ, ಈಗಲ್ಟನ್ ಪೂರ್ವಾಪರವನ್ನು ಕೆದಕಲಾಯಿತು. ಆಗ ಈಗಲ್ಟನ್, ಈ ಹಿಂದೆ ಮನೋಖಿನ್ನತೆಯಿಂದ ಬಳಲುತ್ತಿದ್ದರು.ಖಿನ್ನತೆಯಿಂದ ಹೊರಬರಲು ಜೌಷಧ ಸೇವಿಸುತ್ತಿದ್ದರು, ಎಲೆಕ್ಟ್ರೋಶಾಕ್ ಚಿಕಿತ್ಸೆಯ ಮೊರೆ ಹೋಗಿದ್ದರು ಎಂಬ ಸುದ್ದಿ ಹೊರಬಿತ್ತು. ಅದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿತು. ಕೊನೆಗೆ ಮೆಕ್‌ಗೌರ್ನ್, ಈಗಲ್ಟನ್ ಅವರನ್ನು ಬದಲಿಸಿ, ಸರ್ಜೆಂಟ್ ಶ್ರಿವರ್ ಅವರನ್ನು ‘ರನ್ನಿಂಗ್ ಮೇಟ್’ ಆಗಿ ಘೋಷಿಸಬೇಕಾಯಿತು. ಒಟ್ಟಿನಲ್ಲಿ, ಉಪಾಧ್ಯಕ್ಷ ಹುದ್ದೆಗೆ ಸಹಸ್ಪರ್ಧಿಯ ಘೋಷಣೆ, ಅಧ್ಯಕ್ಷೀಯ ಚುನಾವಣೆಯಲ್ಲಿ ಮಹತ್ವದ ಘಟ್ಟವಂತೂ ಹೌದು.

ಪ್ರತಿಕ್ರಿಯಿಸಿ (+)