ಅಗ್ರಸ್ಥಾನಕ್ಕೇರಿದ ಇರಾನ್‌

7

ಅಗ್ರಸ್ಥಾನಕ್ಕೇರಿದ ಇರಾನ್‌

Published:
Updated:
ಅಗ್ರಸ್ಥಾನಕ್ಕೇರಿದ ಇರಾನ್‌

ಅಹಮದಾಬಾದ್‌ : ರೈಡಿಂಗ್‌ ಮತ್ತು ರಕ್ಷಣಾ ವಿಭಾಗದಲ್ಲಿ ಅಮೋಘ ಆಟ ಆಡಿ ಎದುರಾಳಿಗಳ ಸವಾಲನ್ನು ಮೀರಿ ನಿಂತ ಇರಾನ್‌ ತಂಡ ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಇಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿ ಸಿರುವ ಇರಾನ್‌ 64–23 ಪಾಯಿಂಟ್ಸ್‌ ನಿಂದ ಥಾಯ್ಲೆಂಡ್‌ ತಂಡವನ್ನು ಪರಾಭವಗೊಳಿಸಿತು.

ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 10ಕ್ಕೆ ಹೆಚ್ಚಿಸಿಕೊಂಡು ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಮೊದಲ ಎರಡು ನಿಮಿಷಗಳ ಆಟ ಮುಗಿದಾಗ ಇರಾನ್‌ ತಂಡ 0–2ರ ಹಿನ್ನಡೆ ಅನುಭವಿಸಿತ್ತು. ಆ ಬಳಿಕ ತಂಡ ಲಯ ಕಂಡುಕೊಂಡಿತು. ಶಾಂತಿ ಬುಂಚೊಯೆತ್‌ ಅಮೋಘ ರೈಡಿಂಗ್‌ ನಡೆಸಿ ತಂಡ 2–2ರಲ್ಲಿ ಸಮಬಲ ಸಾಧಿಸುವಂತೆ ನೋಡಿಕೊಂಡರು.

ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆಡಿದ ಅನುಭವ ಹೊಂದಿರುವ ಮೆರಾಜ್‌ ಶೇಖ್‌ ಐದನೇ ನಿಮಿಷದಲ್ಲಿ ದಾಳಿಗಿಳಿದು ಎರಡು ಪಾಯಿಂಟ್‌್ ಹೆಕ್ಕಿ ತಂದರು. ಇದರಿಂದ ತಂಡದ ಮುನ್ನಡೆ 6–2ಕ್ಕೆ ಹೆಚ್ಚಿತು. ಮರು ನಿಮಿಷದಲ್ಲಿ ಥಾಯ್ಲೆಂಡ್‌ ಆಟಗಾರರು ಸೂಪರ್‌ ಟ್ಯಾಕಲ್‌ ಮೂಲಕ ಇರಾನ್‌ ತಂಡದ ರೈಡರ್‌ ಅನ್ನು ಹಿಡಿದರು.ಇದರಿಂದ ತಂಡದ ಖಾತೆಗೆ ಎರಡು ಪಾಯಿಂಟ್‌ ಸೇರ್ಪಡೆಯಾಯಿತು. ಆ ಬಳಿಕ ಮೊದಲ ಬಾರಿಗೆ ಥಾಯ್ಲೆಂಡ್‌ ಅಂಕಣವನ್ನು ಖಾಲಿ ಮಾಡಿದ ಇರಾನ್‌ ಆಟಗಾರರು ಮುನ್ನಡೆಯನ್ನು 12–4ಕ್ಕೆ ಹೆಚ್ಚಿಸಿ ಕೊಂಡರು.

ಆ ನಂತರೂ ಥಾಯ್ಲೆಂಡ್‌ ರೈಡರ್‌ ಗಳು ಇರಾನ್‌ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ವಿಫಲ ರಾದರು. ಹೀಗಾಗಿ ತಂಡ 11ನೇ ನಿಮಿಷದ ಆಟ ಮುಗಿದಾಗ 6–16ರ ಹಿನ್ನಡೆಯಲ್ಲಿತ್ತು.

ಆದರೆ ಇರಾನ್‌ ತಂಡ ಮಾತ್ರ ಪ್ರಾಬಲ್ಯ ಮುಂದುವರಿಸಿತು. ಈ ತಂಡದ ರೈಡರ್‌ಗಳು ಲೀಲಾಜಾಲವಾಗಿ ಎದು ರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸಿದರೆ,  ರಕ್ಷಣಾ ವಿಭಾಗದ ಆಟ ಗಾರರು ಸಲೀಸಾಗಿ ಎದುರಾಳಿ ರೈಡರ್‌ ಗಳನ್ನು ಬಂದಿಸುತ್ತಿದ್ದರು. ಇದರಿಂದ ತಂಡದ ಪಾಯಿಂಟ್ಸ್‌ ಗಳಿಕೆ ವೇಗ ಪಡೆದುಕೊಂಡಿತು.

17ನೇ ನಿಮಿಷದ ಆಟ ಮುಗಿದಾಗ 30–6ರ ಮುನ್ನಡೆ ಹೊಂದಿದ್ದ ಇರಾನ್‌ ಆ ನಂತರವೂ ಎದುರಾಳಿಗಳ ಮೇಲೆ ಸವಾರಿ ನಡೆಸಿತು. ಈ ತಂಡ ಒಟ್ಟು ಆಡು ಬಾರಿ ಥಾಯ್ಲೆಂಡ್‌ ತಂಡವನ್ನು ಆಲೌಟ್‌ ಮಾಡಿ ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿತು.

ಇತರ ಪಂದ್ಯಗಳಲ್ಲಿ ಜಪಾನ್‌ ತಂಡ 45–19ರಲ್ಲಿ ಅಮೆರಿಕ ತಂಡವನ್ನು ಮಣಿಸಿದರೆ, ಕೊರಿಯಾ ತಂಡ 68–42ರಲ್ಲಿ  ಅರ್ಜೆಂಟೀನಾ ವಿರುದ್ಧ ಜಯಭೇರಿ ಮೊಳಗಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry