6

ಪ್ರಗತಿ ವಿರೋಧಿ ಬರವಣಿಗೆಯಲ್ಲಿ ಯುವಕರು ತೊಡಗಿಲ್ಲ

Published:
Updated:
ಪ್ರಗತಿ ವಿರೋಧಿ ಬರವಣಿಗೆಯಲ್ಲಿ ಯುವಕರು ತೊಡಗಿಲ್ಲ

ನವದೆಹಲಿ: ಕಥೆ, ಕವಿತೆ, ಕಾದಂಬರಿ, ವಿಚಾರ ವಿಮರ್ಶೆ, ಲೇಖನ, ಅಂಕಣ ಬರಹ ಸೇರಿದಂತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸೈ ಎನ್ನಿಸಿಕೊಂಡಿರುವ ಪ್ರೊ.ಬರಗೂರು ರಾಮಚಂದ್ರಪ್ಪ ರಾಯಚೂರಿನಲ್ಲಿ ಡಿಸೆಂಬರ್‌ 2ರಿಂದ ಮೂರು ದಿನಗಳವರೆಗೆ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಿನಿಮಾ ಕ್ಷೇತ್ರದೊಂದಿಗೂ ನಂಟನ್ನು ಹೊಂದಿರುವ ಇವರು, ಪ್ರಸ್ತುತ ಸಾಹಿತ್ಯದ ಸ್ಥಿತಿಗತಿ, ಕನ್ನಡ, ಕನ್ನಡಿಗರ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.* ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ?

ಇದು ಕನ್ನಡ ಸಾಹಿತ್ಯ ಲೋಕದಲ್ಲಿ ದೊರೆಯುವ ಅತ್ಯುನ್ನತ ಗೌರವ ಎಂಬುದು ನನ್ನ ಭಾವನೆ. ಸರ್ವಾನುಮತದಿಂದ ನನ್ನನ್ನು ಆಯ್ಕೆ ಮಾಡಿರುವುದು ಸಂತಸ ಮೂಡಿಸಿದೆ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ನನ್ನಂಥವರ ಪ್ರತಿಭೆ ಮೇಲೆ ಬರಲು ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ಇವೆ. ಪ್ರತಿಯೊಬ್ಬ ವ್ಯಕ್ತಿ ಪ್ರತಿಭೆ ಮತ್ತು ಸಂಕಲ್ಪಗಳನ್ನು ಒಗ್ಗೂಡಿಸಿಯೇ ಮೇಲೆ ಬರಬೇಕು. ಸಾಮಾಜಿಕ ನ್ಯಾಯವು ಪ್ರತಿಭೆಗೆ ವಿರೋಧವಾಗಿ ಇರಬಾರದು. ನಾನು ಎಂದಿಗೂ ಇಂಥ ದೊಡ್ಡ ಗೌರವದ ಕನಸನ್ನೇ ಕಂಡವನಲ್ಲ. ಕೊಳೆಗೇರಿಗಳ ನಿವಾಸಿಗಳಿಗೆ, ದುರ್ಬಲರಿಗೆ, ಬಡವರಿಗೆ ಐಡೆಂಟಿಟಿಯ ಪ್ರಶ್ನೆಗಳು ಇರುತ್ತವೆ.

ನಮ್ಮೂರಿನಲ್ಲಿ ನನ್ನ ಐಡೆಂಟಿಟಿ ಏನು ಎಂಬುದು ಆ ಪ್ರಶ್ನೆಗಳ ಸಾಲಿನಲ್ಲಿ ಮೊದಲನೆಯದ್ದು. ಸಾಮಾಜಿಕ, ಆರ್ಥಿಕ ಐಡೆಂಟಿಟಿ ನಮ್ಮಂಥವರಿಗೆ ಕನಸು ಎಂಬ ಸ್ಥಿತಿಯಲ್ಲಿ ನಾನು ಶ್ರೇಷ್ಠತೆಯ ಬೆಂಬಲ ಇದ್ದರೆ ಒಳ್ಳೆಯದು ಎಂದುಕೊಂಡು ಅರಸಿದ್ದು ಶಿಕ್ಷಣದ ಐಡೆಂಟಿಟಿಯನ್ನ. ನಮ್ಮ ಮನೆಯಲ್ಲಿದ್ದ ‘ಜೈಮಿನಿ ಭಾರತ’ದ ಪ್ರತಿಯನ್ನು ಹಿಡಿದಿಕೊಂಡು ಊರೆಲ್ಲ ಓಡಾಡಿದ ಪರಿಯಿಂದಲೇ, ‘ಈತ ಓದುವ ಹುಡುಗ’  ಎಂದು ಕರೆಯಿಸಿಕೊಂಡು, ಐಡೆಂಟಿಟಿ ಕಂಡುಕೊಂಡೆ. ಅದರಿಂದಲೇ ನನ್ನ ಅಸ್ಮಿತೆಯ ಸಮಸ್ಯೆಯನ್ನು ನೀಗಿಸಿಕೊಂಡೆ. ಹಾಗೆಯೇ ಓದುತ್ತ ಸಾಗಿದೆ. ‘ಶ್ರೀಮಂತರಲ್ಲದವರೂ ಬರೆಯುವ ಮೂಲಕ ಬೆಳೆಯಬಹುದು’ ಎಂದು ರವೀಂದ್ರನಾಥ್‌ ಟ್ಯಾಗೋರರು ಹೇಳಿದಂತೆ, ನಾನೂ ಬದ್ಧತೆಯೊಂದಿಗೆ ಬರೆಯಲು ಆರಂಭಿಸಿದೆ. ಎಂದಿಗೂ ಸಾಮಾಜಿಕ ಕಾಳಜಿ, ಸೃಜನಶೀಲತೆಯನ್ನು ಬಿಡದೆ ಬರೆದೆ. ನನ್ನ ಮೂಲಕ ನನ್ನಂತಹ ಅಸಂಖ್ಯಾತ ಪ್ರತಿಭೆಗಳಿಗೆ ಈ ಗೌರವ ಸಂದಿದೆ ಎಂಬುದೇ ನನ್ನ ಭಾವನೆ. ಇದು ಅಸ್ಮಿತೆಯ ಸವಾಲನ್ನು ಎದುರಿಸಿದ ಫಲ.

* ಭಾಷೆ, ನೆಲ, ಜಲದ ಸಮಸ್ಯೆಗಳನ್ನೂ ಹೊರತುಪಡಿಸಿ ಕರ್ನಾಟಕ ಇತರ ಸಮಸ್ಯೆಗಳನ್ನು ಎದುರಿಸುತ್ತಿದೆಯೇ?

ಹೌದು. ಕನ್ನಡ, ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ ಸಿಗುತ್ತಿಲ್ಲ. ನಾಡಿನ ವಿವಿಧೆಡೆ ವಾಸಿಸುವವರ ನಡುವೆ ಸಂವಾದ ಮತ್ತು ಸಮತೋಲನ ಸಾಧಿಸುವ ಪ್ರಕ್ರಿಯೆ ಕಡಿಮೆ ಆಗುತ್ತಿದೆ. ಸಂವಾದ ಸಂಸ್ಕೃತಿಯನ್ನು ಪೋಷಿಸುವುದು ಬಹಳ ಮುಖ್ಯವಾಗಿದೆ. ನೀರಾವರಿ ಸಮಸ್ಯೆಯ ಬಗ್ಗೆ ಚರ್ಚೆ ನಡೆದಂತೆ, ಸದಾ ಬರಪೀಡಿತವಾಗಿರುವ, ನದಿಗಳಿಲ್ಲದ ಜಾಗಗಳಿಗೆ ನೀರು ಹರಿಸುವುದು ಹೇಗೆ ಎಂಬುದೂ ಚರ್ಚೆಗೊಳಗಾಬೇಕಿದೆ.

ದೂರಗಾಮಿ ಯೋಜನೆಗಳನ್ನು ಜಾರಿಗೊಳಿಸುವತ್ತ ನಾವು ತುರ್ತಾಗಿ ಆಲೋಚಿಸಬೇಕಿದೆ. ನಾಡಿನ ವಿವಿಧೆಡೆ ಇರುವ ಜನರಲ್ಲಿನ ಅಪನಂಬಿಕೆಯನ್ನು ದೂರ ಮಾಡಲು ಸಂವಾದ ನಡೆಸಬೇಕು. ಯೋಜನೆಗಳನ್ನು ರೂಪಿಸಿ ಪ್ರಾಮಾಣಿಕವಾದ, ಪ್ರಜಾಸತ್ತಾತ್ಮಕ ಅನುಷ್ಠಾನಕ್ಕೆ ಮುಂದಾಗಬೇಕು. ಡಾ.ನಂಜುಂಡಪ್ಪ ವರದಿಯ ಸ್ಥಿತಿಗತಿ ಏನು ಎಂಬುದನ್ನು ಕಾಲಕಾಲಕ್ಕೆ ಅವಲೋಕಿಸಬೇಕಿದೆ. ರಾಷ್ಟ್ರದಾದ್ಯಂತ ಭಾವೈಕ್ಯತೆ ಸಾಧಿಸಬೇಕಿದೆ. ರಾಜ್ಯದೊಳಗೂ ಸಾಮಾಜಿಕ, ಆರ್ಥಿಕ ಭಾವೈಕ್ಯ ಸಾಧ್ಯವಾಗದಿದ್ದರೆ ಭಿನ್ನಧ್ವನಿ ಹೆಚ್ಚುತ್ತಹೋಗುತ್ತದೆ. ಹಾಗಾಗದಿರುವಂತೆ ನೋಡಿಕೊಳ್ಳಬೇಕಿದೆ.

* ಕನ್ನಡಮಯ ವಾತಾವರಣ ದೂರವಾಗುತ್ತಿದೆಯೇ?

ಬೆಂಗಳೂರಿನಲ್ಲಿ ಕನ್ನಡ ದೂರವಾಗುತ್ತಿದೆ ಎಂಬ ಮಾತು ನಾನು ನಾಲ್ಕು ದಶಕಗಳ ಹಿಂದೆ ಬಂದಾಗಿನಿಂದಲೂ ಕೇಳಿಬರುತ್ತಿದೆ. ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿದೆ. ಅನೇಕರು ತಿಳಿದಂತೆ ಏನೇನೂ ಆಗದೆ ಉಳಿದಿಲ್ಲ. ತಮಿಳುನಾಡಿನ ಸಚಿವಾಲಯದಲ್ಲೂ ತಮಿಳು ಅನುಷ್ಠಾನ ಅಷ್ಟಾಗಿ ಆಗಿಲ್ಲ. ಆದರೆ, ಕರ್ನಾಟಕದಲ್ಲಿ ಆ ಸ್ಥಿತಿ ಇಲ್ಲ. ಮಾಹಿತಿ ತಂತ್ರಜ್ಞಾನ ಬಂದಮೇಲೆ ಅದರೆತ್ತರಕ್ಕೆ ಕನ್ನಡವನ್ನು ಬೆಳೆಸುವುದೂ ಪ್ರಮುಖವಾಗಿದೆ.

ಕಂಪ್ಯೂಟರ್‌ ಹೆಸರಲ್ಲಿ ಇಂಗ್ಲಿಷ್‌ ಹೆಚ್ಚುತ್ತಿದೆ. ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ನಾವೂ ಉನ್ನತ ಮಟ್ಟಕ್ಕೆ ಏರಬೇಕಿದೆ. ಉದ್ಯೋಗ ಮತ್ತು ಕನ್ನಡಕ್ಕೆ ಸಂಬಂಧ ಕಲ್ಪಿಸಬೇಕಿದೆ. ಉದ್ಯೋಗಕ್ಕೆ ಭಾಷೆ ಕಡ್ಡಾಯವಾಗಬೇಕಿದೆ. ಖಾಸಗೀ ವಲಯದಲ್ಲೂ ಅದನ್ನು ಕಡ್ಡಾಯಗೊಳೀಸಬೇಕಿದೆ. ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನು ಉಳಿಸಬೇಕಿದೆ. ಕನ್ನಡಿಗರನ್ನು ಉಳಿಸಿದರೆ ಕನ್ನಡ ಉಳಿಯಬಲ್ಲದು. ಕನ್ನಡವು ಅನ್ನದ ಭಾಷೆಯಾದರೆ ಮಾತ್ರ ಉಳಿಯುತ್ತದೆ. ಹೊರ ನಾಡಿನಲ್ಲಿ ಕನ್ನಡ ಓದಿದ ಕನ್ನಡಿಗರ ಮಕ್ಕಳಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅಗತ್ಯ.

ಭಾಷೆಗೆ ಸಂಬಂಧಿಸಿದ ರಾಷ್ಟ್ರೀಯ ನೀತಿ ಜಾರಿಯಾದಲ್ಲಿ ಆಯಾ ರಾಜ್ಯಭಾಷೆಯನ್ನು ಉಳಿಸುವುದು ಸಾಧ್ಯವಿದೆ. ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ಕಡ್ಡಾಯಗೊಳಿಸುವ ಆಲೋಚನೆಗೆ 2014ರಲ್ಲಿ ಸುಪ್ರೀಂ ಕೋರ್ಟ್‌ ತಡೆ ಒಡ್ಡಿದೆ. ಆಯಾ ರಾಜ್ಯಗಳ ಜನ ತಮ್ಮ ಭಾಷೆಯಲ್ಲೂ ಶಿಕ್ಷಣ ಪಡೆಯಬಹುದು ಎಂದು ಸಂವಿಧಾನದಲ್ಲಿ ನಿಯಮವೇ ಇದೆ. ದೇಶದಾದ್ಯಂತ ಇರುವ ಸಂಸದರು, ಸಚಿವರು, ಚಿಂತಕರು ಒಟ್ಟಿಗೆ ಸೇರಿ ಅದಕ್ಕೆ ತಿದ್ದುಪಡಿ ತರುವುದಕ್ಕೆ ಹೋರಾಟ ನಡೆಸುವ ನಿರ್ಣಯ ತೆಗೆದುಕೊಳ್ಳಬೇಕಿದೆ. ಎಲ್ಲ ರಾಜ್ಯಗಳ ಸಂಘಟಿತ ಹೋರಾಟದಿಂದ ಈ ಕೆಲಸ ಆಗಬಲ್ಲದು.

* ಸಾಹಿತ್ಯದ ಈಗಿನ ಸ್ಥಿತಿಗತಿ ಹೇಗಿದೆ?

ಅನೇಕ ಯುವಕರು ಅತ್ಯುತ್ತಮವಾಗಿ ಬರೆಯುತ್ತಿದ್ದಾರೆ. ನವೋದಯ, ನವ್ಯ, ಬಂಡಾಯ, ದಲಿತ ಸಾಹಿತ್ಯಕ್ಕೆ ಕೇಂದ್ರಸೂಚಿ (ಫೋಕಸ್‌) ಇತ್ತು. ಅದಕ್ಕೊಂದು ಚಳವಳಿಯ ಹಿನ್ನೆಲೆಯೂ ಇತ್ತು. ಕೇಂದ್ರಸೂಚಿಯ ಅಭಾವದಿಂದಾಗಿ ಕನ್ನಡದಲ್ಲಿ ಒಳ್ಳೆಯ ಬರವಣಿಗೆ ಹೊರಬರುತ್ತಿಲ್ಲ ಎಂಬ ಅಭಿಪ್ರಾಯವನ್ನು ಮೂಡಿಸಲಾಗುತ್ತಿದೆ. ಶ್ರೇಷ್ಠತೆಯ ಹೆಸರಲ್ಲಿ ಪ್ರತಿಭಾ ಭ್ರೂಣದ ಹತ್ಯೆಗೆ ಮುಂದಾಗದೆ ಯುವ ಬರಹಗಾರರು, ಬರಹಗಾರ್ತಿಯರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ.

ಬರವಣಿಗೆ ಒಂದು ಬೇಸಾಯ ಎಂಬುದನ್ನು ಅರಿಯಬೇಕಿದೆ. ಬೇಸಾಯ ಎಂದರೆ ಅಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ನಷ್ಟ ಎದುರಾಗುತ್ತದೆ. ಅಂತೆಯೇ ಬರವಣಿಗೆ ಎಂಬ ಬೇಸಾಯದಲ್ಲಿ ನಷ್ಟವನ್ನಷ್ಟೇ ನೋಡದೆ, ಬರಹಗಾರನ ಒಂದೇ ಕೃತಿಯನ್ನು ಅವಲೋಕಿಸಿ ಸಾಧನೆಯನ್ನು ಅಳೆಯದೆ ನಿರಂತರ ಕೃಷಿಯನ್ನು ಪರಿಗಣಿಸಬೇಕಿದೆ. ಈಗಿನ ಬರಹಗಾರರೆಲ್ಲ ಸಾಮಾಜಿಕ, ಮಹಿಳಾ ಸಮಾನತೆ, ದುರ್ಬಲ ವರ್ಗದ ಕಳಕಳಿಯನ್ನು ಒಳಗೊಂಡೇ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆ. ಪ್ರಗತಿವಿರೋಧಿ ಬರವಣಿಗೆಯಲ್ಲಿ ಯಾರೂ ತೊಡಗಿಲ್ಲ ಎಂಬುದು ಸಂತಸದ ಬೆಳವಣಿಗೆ.

ಬರವಣಿಗೆ ಬೇಸಾಯ ಎಂದು ಭಾವಿಸಿದವರಲ್ಲಿ ಅಕ್ಷರದ ಅಹಂಕಾರ ಉಳಿಯುವುದಿಲ್ಲ. ಯಾರಲ್ಲಿ ಅಕ್ಷರ ಅಂತಃಕರಣ ಇರುತ್ತದೋ ಅವರಿಗೆ ಬರವಣಿಗೆಯೂ ಸಿದ್ಧಿಸುತ್ತದೆ. ಅಂತಃಕರಣ ಇದ್ದಲ್ಲಿ ತಾಯ್ತನ ರೂಢಿಯಾಗುತ್ತದೆ. ಸಮಾಜದೊಂದಿಗೆ ಬೆರೆಯುವ ಬರಹಗಾರ ಸಾಮಾಜಿಕ ಜವಾಬ್ದಾರಿಯಿಂದ ವಿಮುಖನಾಗಲಾರ.

ಬರವಣಿಗೆ, ಪಾಠ ಮತ್ತು ಸಿನಿಮಾ

ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಬರಗೂರು ಗ್ರಾಮದವರಾದ ರಾಮಚಂದ್ರಪ್ಪ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು, ಅಕಾಡೆಮಿಯಲ್ಲಿದ್ದಾಗ ಅಲೆಮಾರಿ, ಅರೆ ಅಲೆಮಾರಿ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿ, 40ಕ್ಕೂ ಅಧಿಕ ಕೃತಿಗಳು ಪ್ರಕಟವಾಗಲು ಕಾರಣರಾದರು. ಈಗ ಪ್ರಾಥಮಿಕ, ಪ್ರೌಢಶಾಲಾ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಿನಿಮಾ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿರುವ ಬರಗೂರು, ನಿರ್ದೇಶಿಸಿರುವ 17 ಚಲನಚಿತ್ರಗಳಲ್ಲಿ ಕೆಲವು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮನ್ನಣೆಗೂ ಪಾತ್ರವಾಗಿವೆ. ಒಂದೇ ಪಾತ್ರವನ್ನು ಒಳಗೊಂಡ ವಿಶಿಷ್ಟ ಚಿತ್ರ ‘ಶಾಂತಿ’ ಗಿನ್ನೆಸ್‌ ದಾಖಲೆಗೂ ಪಾತ್ರವಾಗಿದೆ. ‘ಒಂದು ಊರಿನ ಕಥೆ’, ‘ಸೂರ್ಯ’, ‘ಹಗಲುವೇಶ’, ‘ಕರಡೀಪುರ’, ‘ತಾಯಿ’, ‘ಶಬರಿ’, ‘ಕೋಟೆ’ ಮತ್ತಿತರ ಇವರ ಚಿತ್ರಗಳು ಪ್ರಯೋಗಶೀಲತೆಗೆ ಹೆಸರಾದವು. ‘ತಾಯಿ’ ಚಿತ್ರದ ಇವರ ಗೀತರಚನೆಗೆ ರಾಷ್ಟ್ರ ಪ್ರಶಸ್ತಿ ದೊರೆತಿದ್ದು, ಸಂಭಾಷಣಕಾರಾಗಿಯೂ ರಾಜ್ಯ ಪ್ರಶಸ್ತಿ ಗಳಿಸಿರುವುದು ಇವರ ಹೆಗ್ಗಳಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry