ಭಾನುವಾರ, ಜೂಲೈ 5, 2020
23 °C

ವಾಹನ ಪೂಜೆಗೆ ಕೋಟಿ ಲೀಟರ್‌ ನೀರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ಪೂಜೆಗೆ ಕೋಟಿ ಲೀಟರ್‌ ನೀರು!

ಬೆಂಗಳೂರು:  ಮುಂಗಾರಿನಲ್ಲಿ ದಕ್ಷಿಣ ಒಳನಾಡಿನಲ್ಲಿ ಶೇ 17ರಷ್ಟು ಮಳೆ ಅಭಾವದ ಪರಿಣಾಮ ನಗರದ ಮೇಲೂ ಬೀರಲಾರಂಭಿಸಿದೆ. ಫೆಬ್ರುವರಿಯಲ್ಲೇ ನೀರಿನ ಸಮಸ್ಯೆ ಬಿಗಡಾಯಿಸುವ ಲಕ್ಷಣಗಳು ಕಾಣಿಸಿಕೊಂಡಿವೆ. ಆತಂಕದ ಕ್ಷಣಗಳ ನಡುವೆಯೂ ನಗರದ ನಿವಾಸಿಗಳು ಆಯುಧ ಪೂಜೆ ಸಮಯದಲ್ಲಿ ಧಾರಾಳವಾಗಿ ನೀರು ಬಳಸಿದ್ದಾರೆ.ವಾಹನ ಮಾಲೀಕರು ಆಯುಧ ಪೂಜೆಯ ದಿನ ಸಾಮಾನ್ಯವಾಗಿ ವಾಹನಗಳಿಗೂ ಪೂಜೆ ಮಾಡುತ್ತಾರೆ. ಒಂದು ಅಂದಾಜಿನ ಪ್ರಕಾರ ನಗರದ 45 ಲಕ್ಷಕ್ಕೂ ಅಧಿಕ ವಾಹನ ಸವಾರರು ಈ ಕೆಲಸ ಮಾಡಿದ್ದಾರೆ. ಈ ಬಾರಿ ವಾಹನ ಪೂಜೆಯ ಸಂದರ್ಭದಲ್ಲಿ ವಾಹನಗಳನ್ನು ತೊಳೆಯಲು 10 ಕೋಟಿ ಲೀಟರ್‌ಗೂ ಅಧಿಕ  ನೀರನ್ನು ಬಳಸಲಾಗಿದೆ. ಇದರಲ್ಲಿ ಕಾವೇರಿ ನೀರನ್ನು ಬಳಸಿದವರ ಸಂಖ್ಯೆಯೂ ದೊಡ್ಡದಿದೆ. ಉಳಿದವರು ಕೊಳವೆಬಾವಿಗಳ ನೀರಿನಿಂದ ವಾಹನಗಳನ್ನು ತೊಳೆದಿದ್ದಾರೆ.ನಗರದಲ್ಲಿ ಈಗ 59.57 ಲಕ್ಷ ವಾಹನಗಳಿವೆ. ಇದರಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಪಾಲು 53.66 ಲಕ್ಷ ಇದೆ. ನಗರಕ್ಕೆ ಪ್ರತಿನಿತ್ಯ 135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತದೆ. ಕೊಳವೆ ಬಾವಿಗಳ ಮೂಲಕ ಅಂತರ್ಜಲದಿಂದ ದಿನಕ್ಕೆ 20 ಕೋಟಿ ಲೀಟರ್‌ ನೀರು ಎತ್ತಲಾಗುತ್ತದೆ. ಬೇಸಿಗೆಯಲ್ಲಿ ಇದರ ಪ್ರಮಾಣ ದುಪ್ಪಟ್ಟಾಗುತ್ತದೆ.ಭಾನುವಾರ ಹಾಗೂ ಸೋಮವಾರ ವಾಹನಗಳನ್ನು ತೊಳೆಯಲು ಯಥೇಚ್ಛ ಪ್ರಮಾಣದಲ್ಲಿ ನೀರು ಪೋಲು ಮಾಡಲಾಗಿದೆ. ದ್ವಿಚಕ್ರ ವಾಹನ ತೊಳೆಯಲು ಕನಿಷ್ಠ ಒಂದು ಬಕೆಟ್‌, ಕಾರುಗಳಿಗೆ ಕನಿಷ್ಠ 2–3 ಬಕೆಟ್‌ ನೀರು ಬಳಕೆ ಮಾಡಲಾಗಿದೆ.‘ನನ್ನಲ್ಲಿ ಬೈಕ್‌ ಇದೆ. ಸಾಮಾನ್ಯವಾಗಿ ವಾರಾಂತ್ಯದ ದಿನಗಳಲ್ಲಿ ಬೈಕ್‌ ತೊಳೆಯುತ್ತೇನೆ. ಅದಕ್ಕೆ ಬಳಸುವುದು ಒಂದು ಬಕೆಟ್‌ ನೀರನ್ನು. ವರ್ಷಕ್ಕೆ ಒಂದು ಸಲ ವಾಹನಕ್ಕೆ ಪೂಜೆ ಮಾಡುತ್ತೇನೆ. ಹಬ್ಬದ ವೇಳೆ ಜಿಪುಣತನ ತೋರಲು ಆಗುತ್ತದೆಯೇ’ ಎಂದು ಬಸವೇಶ್ವರನಗರದ ನಿವಾಸಿ ಸುಧೀಂದ್ರ ರಾವ್‌ ಪ್ರಶ್ನಿಸಿದರು.‘ಒಂದೆರಡು ದಿನಕ್ಕೆ ನೀರಿನ ಬೇಡಿಕೆ ಪ್ರಮಾಣ ಹೆಚ್ಚಳವಾಗಿದ್ದು ಗೊತ್ತಾಗುವುದಿಲ್ಲ. ವಾಹನಗಳನ್ನು ತೊಳೆಯಲು ಎಲ್ಲರೂ ಕಾವೇರಿ ನೀರನ್ನು ಬಳಸಿಲ್ಲ. ಕೊಳವೆಬಾವಿಗಳ ನೀರನ್ನು ಬಳಸಿದವರೂ ಇದ್ದಾರೆ. ನೀರನ್ನು ಸಂಪ್‌ನಲ್ಲಿ ಸಂಗ್ರಹ ಮಾಡಿರುತ್ತಾರೆ. ಅದನ್ನೂ  ಉಪಯೋಗಿಸಿದ್ದಾರೆ’ ಎಂದು ಜಲಮಂಡಳಿ ಪ್ರಧಾನ ಮುಖ್ಯ ಎಂಜಿನಿಯರ್‌ ಕೆಂಪರಾಮಯ್ಯ ತಿಳಿಸಿದರು.‘ಅಕ್ಟೋಬರ್‌ನಲ್ಲಿ ಸರಣಿ ರಜೆಗಳು ಇವೆ. ಶಾಲಾ ಕಾಲೇಜುಗಳಿಗೆ ರಜೆ ಇರುವುದರಿಂದ ಹೆಚ್ಚಿನವರು ಕುಟುಂಬ ಸಮೇತರಾಗಿ ಊರುಗಳಿಗೆ ತೆರಳುತ್ತಾರೆ.  ಹೀಗಾಗಿ ಈ ತಿಂಗಳಲ್ಲಿ ನೀರಿನ ಬೇಡಿಕೆ ಕಡಿಮೆ ಇರುತ್ತದೆ’ ಎಂದು ಅವರು ಹೇಳಿದರು.‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು. ಈ ಬಗ್ಗೆ ಜಲಮಂಡಳಿ ನಿರಂತರ ಜಾಗೃತಿ ಮೂಡಿಸುತ್ತಿದೆ. ಆದರೂ, ಜನರು ವಾಹನ ತೊಳೆಯಲು, ಕೈತೋಟಕ್ಕೆ ಅದೇ ನೀರನ್ನು ಬಳಸುತ್ತಾರೆ. ಜನರು ನೀರಿನ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು ’ ಎಂದು ಅವರು

ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.