ಭಾನುವಾರ, ಡಿಸೆಂಬರ್ 8, 2019
20 °C

ಮುನಿಸು, ಜಗಳಗಳಾಚೆ ಪಕ್ಷ ಗೆಲ್ಲಿಸುವಾಸೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿಸು, ಜಗಳಗಳಾಚೆ ಪಕ್ಷ ಗೆಲ್ಲಿಸುವಾಸೆ!

ಈ ಬಾರಿ ಪ್ರಾಥಮಿಕ ಹಂತದ ಚುನಾವಣೆಗಳು ಆರಂಭವಾದಾಗ, ಡೆಮಾಕ್ರಟಿಕ್ ಪಕ್ಷದಿಂದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್ ಮುಖ್ಯ ಉಮೇದುವಾರರಾಗುತ್ತಾರೆ ಎಂಬ ಸನ್ನಿವೇಶ ಇರಲಿಲ್ಲ. ಡೆಮಾಕ್ರಟಿಕ್ ಪಕ್ಷದ ಸಾಮಾನ್ಯ ಮತದಾರರು ಹಿಲರಿ ಅವರಿಗಿಂತಲೂ, ವರ್ಮಾಂಟ್‌ನಿಂದ ಎರಡು ಬಾರಿ ಸೆನೆಟರ್ ಆಗಿದ್ದ ಬರ್ನಿ ಸ್ಯಾಂಡರ್ಸ್ ಪರ ಇದ್ದರು. ಅದಕ್ಕೆ ಸ್ಯಾಂಡರ್ಸ್ ಪ್ರತಿಪಾದಿಸಿಕೊಂಡು ಬಂದ ನಿಲುವುಗಳು ಕಾರಣ. ತಾವೊಬ್ಬ ಸಮಾಜವಾದಿ ಎಂದು ಗುರುತಿಸಿಕೊಂಡಿದ್ದ ಸ್ಯಾಂಡರ್ಸ್, ಮಧ್ಯಮ ವರ್ಗದ ಪರವಾಗಿ, ಕಾರ್ಮಿಕರ ಪರವಾಗಿ ಹೆಚ್ಚು ಮಾತನಾಡಿದವರು.

ಅಧಿಕಾರ, ಹಣವಂತರ ಸೊತ್ತಾಗಬಾರದು ಎಂಬುದನ್ನು ಪ್ರತಿಪಾದಿಸಿದವರು. ವಿದ್ಯಾರ್ಥಿ ದೆಸೆಯಲ್ಲಿ, ನಾಗರಿಕ ಹಕ್ಕುಗಳಿಗಾಗಿ ನಡೆದ ಚಳುವಳಿಯೊಂದಿಗೆ ಜೋಡಿಸಿಕೊಂಡವರು. ರೂಸ್ವೆಲ್ಟ್ ಅವರ ‘ನ್ಯೂಡೀಲ್’ ಕಾರ್ಯನೀತಿಯ ಬಗ್ಗೆ ಒಲವು ಬೆಳೆಸಿಕೊಂಡವರು. ಅದನ್ನು ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಹೇಗೆ ಅಳವಡಿಸಬಹುದು ಎಂಬುದರ ಬಗ್ಗೆ ಮಾತನಾಡಿದವರು.

ಸ್ಯಾಂಡರ್ಸ್‌ ಅವರು ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಮುನ್ನಡೆ ಸಾಧಿಸಿದ ಮೊದಲ ಯಹೂದಿ ಅಮೆರಿಕನ್ ಕೂಡ ಹೌದು. 75 ವರ್ಷದ ಸ್ಯಾಂಡರ್ಸ್ ಬೆನ್ನಿಗೆ ಯುವಕರ ದೊಡ್ಡ ಸಮೂಹ ನಿಂತಿತ್ತು! ಸ್ಯಾಂಡರ್ಸ್, ‘ರಾಜಕೀಯ ಕ್ರಾಂತಿ’ ಆಗಬೇಕು ಎನ್ನುತ್ತಲೇ ಚುನಾವಣೆಗೆ ಇಳಿದರು. ಬದಲಾವಣೆ ಕೆಳ ಹಂತದಿಂದಲೇ ಆಗಬೇಕು. ಪಕ್ಷದ ನಿಲುವುಗಳನ್ನು ಹೆಚ್ಚು ದೇಣಿಗೆ ನೀಡುವ ದಣಿಗಳು ನಿರ್ಧರಿಸುವುದಲ್ಲ, ಕಾರ್ಯಕರ್ತರು ನಿರ್ಧರಿಸಬೇಕು ಎನ್ನುವ ಮೂಲಕ, ಹೆಚ್ಚು ದೇಣಿಗೆ ಸಂಗ್ರಹಿಸಿ ಸುದ್ದಿ ಮಾಡಿದ್ದ ಹಿಲರಿ ಅವರಿಗೆ ತಿರುಗೇಟು ನೀಡಿದ್ದರು.

ಸ್ಯಾಂಡರ್ಸ್, ಮುಖ್ಯವಾಗಿ ಸಮಾಜದಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ, ಮಹಿಳಾ ಹಕ್ಕು, ಸಲಿಂಗಿಗಳ ಲೈಂಗಿಕ ಹಕ್ಕುಗಳ ಬಗ್ಗೆ ಪ್ರಬಲ ವಾದ ಮಂಡಿಸಿದರು. ‘ವಾಲ್ ಸ್ಟ್ರೀಟ್’ ಸುಧಾರಣೆಯ ಬಗ್ಗೆಯೂ ತಮ್ಮ ಅನಿಸಿಕೆ ಮುಂದಿಟ್ಟರು.

ಹಾಗಾಗಿಯೇ, ಒಂದು ಹಂತದಲ್ಲಿ ಟ್ರಂಪ್ ಅವರನ್ನು ಶ್ವೇತಭವನದಿಂದ ಹೊರಗಿಡಲು ಹಿಲರಿ ಅವರಿಗಿಂತ ಸ್ಯಾಂಡರ್ಸ್ ಹೆಚ್ಚು ಸಮರ್ಥರು ಎಂಬ ಅಭಿಪ್ರಾಯವಿತ್ತು. ಸಾಮಾನ್ಯವಾಗಿ ಲ್ಯಾಟಿನ್ ಅಮೆರಿಕನ್ ಮತದಾರರು, ಡೆಮಾಕ್ರಟಿಕ್ ಪಕ್ಷದ ಪರವಿದ್ದರೂ, ಚುನಾವಣಾ ತಂತ್ರಗಳಿಗೆ ಸುಲಭಕ್ಕೆ ಮರುಳಾಗುವವರಲ್ಲ ಎಂಬ ಅಭಿಪ್ರಾಯವಿದೆ. ಆದರೆ ಆ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸ್ಯಾಂಡರ್ಸ್ ಅವರನ್ನು ಬೆಂಬಲಿಸಿತ್ತು. ‘ಸ್ಯಾಂಡರ್ಸ್ ಮತ್ತು ಹಿಲರಿ ಅವರಲ್ಲಿ ಯಾರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಬೇಕು?’ ಎಂಬ ಪ್ರಶ್ನೆ ಮುಂದಿಟ್ಟು, ‘ನ್ಯೂಯಾರ್ಕ್ ಟೈಮ್ಸ್’ ನಡೆಸಿದ ಸಮೀಕ್ಷೆಯಲ್ಲಿ, ಹಿಲರಿ ವಿಶ್ವಾಸಾರ್ಹತೆಯನ್ನೇ ಉಳಿಸಿಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿತ್ತು.

ಪಕ್ಷದ ಕಾರ್ಯಕರ್ತರಲ್ಲಿ ಶೇಕಡ 71ರಷ್ಟು ಜನ ‘ಹಿಲರಿ ಚುನಾಯಿತರಾಗಲು ಏನು ಬೇಕಾದರೂ ಮಾಡುತ್ತಾರೆ’ ಎಂಬ ಅನಿಸಿಕೆ ವ್ಯಕ್ತಪಡಿಸಿದ್ದರೆ, ಶೇಕಡ 66ರಷ್ಟು ಮಂದಿ 'ಹಿಲರಿ ಪ್ರಾಮಾಣಿಕರಲ್ಲ, ಸುಳ್ಳು ಹೇಳುವುದೇ ಹೆಚ್ಚು’ ಎಂದು ಅಭಿಪ್ರಾಯಪಟ್ಟಿದ್ದರು. ಶೇಕಡ 57ರಷ್ಟು ಕಾರ್ಯಕರ್ತರ ಅಭಿಪ್ರಾಯ ‘ಹಿಲರಿ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡಿಲ್ಲ’ ಎಂಬುದಾಗಿತ್ತು. ಈ ಕಾರಣದಿಂದಲೇ ಸ್ಯಾಂಡರ್ಸ್ ಹಲವು ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದರು.

ಈ ಅಭಿಪ್ರಾಯಗಳು ಗಟ್ಟಿಯಾಗುತ್ತಿದ್ದಂತೆ, ಹಿಲರಿ ಗೆಲ್ಲಬಹುದು ಎಂದು ಊಹಿಸಿದ್ದ ವಿಸ್ಕಾಂಸಿನ್‌ನಲ್ಲಿ, ಸ್ಯಾಂಡರ್ಸ್ ವಿಜಯ ಸಾಧಿಸುತ್ತಿದ್ದಂತೇ, ಹಿಲರಿ ತಮ್ಮ ಚುನಾವಣಾ ತಂತ್ರಗಳನ್ನು ಬದಲಿಸಿದರು. ಮೂರು ಗುರಿಗಳನ್ನು ಹಿಲರಿ ತಂಡ ಇರಿಸಿಕೊಂಡಿತು. ಸ್ಯಾಂಡರ್ಸ್ ಅಧ್ಯಕ್ಷ ಸ್ಥಾನಕ್ಕೆ ಅನರ್ಹ ಎಂದು ಸಾಧಿಸುವುದು, ಆ ಮೂಲಕ ಚುನಾವಣೆ ಗೆಲ್ಲುವುದು, ನಂತರ ಪಕ್ಷವನ್ನು ಒಗ್ಗೂಡಿಸಿ ಮುಖ್ಯ ಚುನಾವಣೆಗೆ ಒಟ್ಟಾಗಿ ಹೋಗುವುದು ಹಿಲರಿ ತಂಡದ ಯೋಜನೆ ಆಯಿತು.

ಪ್ರಥಮ ಹಂತವಾಗಿ, ಸ್ಯಾಂಡರ್ಸ್ ಅವರ ಯೋಜನೆಗಳು ಅಪ್ರಾಯೋಗಿಕ ಎಂದು ಬಿಂಬಿಸಲಾಯಿತು. ‘ನ್ಯೂಯಾರ್ಕ್ ಡೈಲಿ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ಯಾಂಡರ್ಸ್ ತಾವು ಪ್ರತಿಪಾದಿಸಿದ್ದ ಯೋಜನೆಗಳನ್ನು ಸಮರ್ಥಿಸಿಕೊಳ್ಳುವಲ್ಲಿ ತಡಬಡಾಯಿಸಿದ್ದರು. ಆ ಪತ್ರಿಕಾ ಸಂದರ್ಶನದ ಪೂರ್ಣ ಪಠ್ಯವನ್ನು ಅಚ್ಚುಮಾಡಿ ಕಾರ್ಯಕರ್ತರಿಗೆ ಹಂಚಲಾಯಿತು.

ಹಿಲರಿ ಅವರಿಗಿರುವ ಅನುಭವವನ್ನೇ ಸ್ಯಾಂಡರ್ಸ್ ಅವರ ವಿರುದ್ಧ, ಪ್ರಬಲ ಅಸ್ತ್ರವಾಗಿ ಬಳಸಲಾಯಿತು. ಆ ಅಸ್ತ್ರ ಕೆಲಸ ಮಾಡಿತು. ಹಿಲರಿ ಮುನ್ನಡೆ ಕಾಯ್ದುಕೊಂಡರು. ಸ್ಯಾಂಡರ್ಸ್ 22 ರಾಜ್ಯಗಳನ್ನು ಗೆದ್ದರೂ, ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಹೆಚ್ಚು ಪ್ರತಿನಿಧಿಗಳ ಬೆಂಬಲ ಗಳಿಸುವ ಮೂಲಕ ಹಿಲರಿ ಅಧಿಕೃತ ಅಭ್ಯರ್ಥಿಯಾದರು.

ರಿಪಬ್ಲಿಕನ್ ಪಕ್ಷದ ಮಟ್ಟಿಗೆ ಟೆಡ್ ಕ್ರೂಸ್, ಟ್ರಂಪ್ ಅವರಿಗೆ ನಿಕಟ ಸ್ಪರ್ಧೆ ಒಡ್ಡಿದವರು. ಟೆಡ್ ಕ್ರೂಸ್, ಟೆಕ್ಸಾಸ್ ಸೆನೆಟರ್ ಆಗಿ, ಜಾರ್ಜ್ ಬುಷ್ ಅವರಿಗೆ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದವರು. ಮಾತಿನ ವಿಷಯದಲ್ಲಿ ಟ್ರಂಪ್ ಅವರಿಗೆ ಸರಿಸಮಾನವಾಗಿ ನಾಲಿಗೆ ಹರಿಬಿಡುತ್ತಿದ್ದ ಕ್ರೂಸ್, ಹಿಂದೆಯೂ ಜಗಳಗಂಟ ಎನಿಸಿಕೊಂಡವರು. ಅಧ್ಯಕ್ಷೀಯ ಚುನಾವಣೆಗೆ ಧುಮುಕಿದಾಗ, ಪಕ್ಷದ ಸಾಂಪ್ರದಾಯಿಕ ಮತಗಳನ್ನು, ಹೆಚ್ಚಾಗಿ ಶ್ವೇತವರ್ಣೀಯರ ಮತಗಳನ್ನು ಇಡಿಯಾಗಿ ಬುಟ್ಟಿಗೆ ಹಾಕಿಕೊಳ್ಳಲು ಪ್ರಯತ್ನಿಸಿದರು. ವಿವಾದಾತ್ಮಕ ಹೇಳಿಕೆ ಕೊಟ್ಟು ಸುದ್ದಿಯಲ್ಲಿರುವ ತಂತ್ರ ಅನುಸರಿಸಿದರು.

ಅಯೋವಾ ಚುನಾವಣೆಯಲ್ಲಿ ಟ್ರಂಪ್ ಅವರನ್ನು ಸೋಲಿಸಲು ಯಶಸ್ವಿಯಾದರು. 12 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದರು. ಆದರೆ ನಂತರ ಟ್ರಂಪ್ ಅವರನ್ನು ಹಿಂದಿಕ್ಕುವುದು ಸಾಧ್ಯವಾಗಲಿಲ್ಲ. ಇಂಡಿಯಾನಾ ಸೋಲಿನ ಬಳಿಕ ಸ್ಪರ್ಧೆಯಿಂದ ಹಿಂದೆ ಸರಿದರು. ಇತ್ತೀಚೆಗಷ್ಟೇ ಮುನಿಸು ಮರೆತು, ಟ್ರಂಪ್ ಅವರನ್ನು ಅನುಮೋದಿಸಿದರು.

ಬಿಡಿ, ಪ್ರಾಥಮಿಕ ಹಂತದ ಚುನಾವಣೆಗಳಲ್ಲಿ ಎಷ್ಟೇ ಪೈಪೋಟಿ ಇದ್ದರೂ, ಭಿನ್ನಾಭಿಪ್ರಾಯ, ಮುನಿಸು, ಜಗಳ ಬಂದರೂ, ಒಮ್ಮೆ ಪಕ್ಷದ ಅಧಿಕೃತ ಅಭ್ಯರ್ಥಿಯ ಘೋಷಣೆಯಾದ ಬಳಿಕ, ಒಗ್ಗಟ್ಟಿನಿಂದ ಮುಖ್ಯ ಚುನಾವಣೆಯನ್ನು ಎದುರಿಸಬೇಕಾಗುತ್ತದೆ. ಎಲ್ಲರನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಮುಖ್ಯ ಉಮೇದುವಾರರ ಮೇಲಿರುತ್ತದೆ. ಕೆಲವೊಮ್ಮೆ ಪಕ್ಷದ ಇತರ ಅಭ್ಯರ್ಥಿಗಳ ಬೆಂಬಲಗಳಿಸುವುದು ದುಸ್ತರ.

2008ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಬರಾಕ್ ಒಬಾಮ ಮತ್ತು ಹಿಲರಿ ಅವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟು, ಜೂನ್ ಹೊತ್ತಿಗೆ ಒಬಾಮ ಮುನ್ನಡೆ ಸಾಧಿಸಿ, ಪಕ್ಷದ ಅಭ್ಯರ್ಥಿಯಾಗಿ ಘೋಷಣೆಯಾದರೂ, ಹಿಲರಿ ಬೆಂಬಲಿಗರು ಒಬಾಮ ಅವರನ್ನು ಮನಃಪೂರ್ವಕವಾಗಿ ಒಪ್ಪಿಕೊಂಡಿರಲಿಲ್ಲ. ಆಗ ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಹಿಲರಿ, ಒಬಾಮ ಬೆನ್ನಿಗೆ ನಿಂತಿದ್ದರು. ‘ಅಮೆರಿಕದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು, ಪಕ್ಷದ ಹಿತಕ್ಕಾಗಿ, ಗೆಲುವೇ ನಮ್ಮ ಗುರಿಯಾಗಿರುವಾಗ, ನಾವು ಒಮ್ಮತದಿಂದ ಬರಾಕ್ ಒಬಾಮ ಅವರನ್ನು ಬೆಂಬಲಿಸಬೇಕಿದೆ’ ಎಂದು ಭಾಷಣ ಮಾಡಿದ್ದರು.

ಹಿಲರಿ ಹೀಗೆ ತಮ್ಮ ಬೆಂಬಲ ಸೂಚಿಸದಿದ್ದರೂ ಒಬಾಮ ಅಭ್ಯರ್ಥಿಯಾಗಿರುತ್ತಿದ್ದರು. ಆದರೆ ಹಿಲರಿ ತಮ್ಮ ಈ ನಡೆಯಿಂದಾಗಿ ಅಪಾರ ಜನ ಮೆಚ್ಚುಗೆ ಗಳಿಸಿದರು. ಈ ಬಾರಿ ತಮ್ಮ ಪಕ್ಷದ ಇತರ ಅಭ್ಯರ್ಥಿಗಳ ಬೆಂಬಲ ಪಡೆಯುವುದು ಹಿಲರಿ ಅವರಿಗೆ ಕಷ್ಟವಾಗಲಿಲ್ಲ. ಬಹುತೇಕ ಎಲ್ಲ ಡೆಮಾಕ್ರಟಿಕ್ ಅಭ್ಯರ್ಥಿಗಳೂ ಇದೀಗ ಹಿಲರಿ ಅವರನ್ನು ಬೆಂಬಲಿಸಿದ್ದಾರೆ. ಒಬಾಮ ಕೂಡ ಪಕ್ಷದ ರಾಷ್ಟ್ರೀಯ ಪ್ರತಿನಿಧಿ ಸಭೆಗೆ ಅಚ್ಚರಿಯ ಭೇಟಿ ಕೊಟ್ಟು ಹಿಲರಿ ಬೆಂಬಲಕ್ಕೆ ನಿಂತರು.

ಆದರೆ ಟ್ರಂಪ್ ಅವರ ವಿಷಯದಲ್ಲಿ ಇದು ಆಗಲಿಲ್ಲ. ಇನ್ನೂ ಹಲವು ರಿಪಬ್ಲಿಕನ್ ಅಭ್ಯರ್ಥಿಗಳು, ಪಕ್ಷದ ಮುಖಂಡರು ಟ್ರಂಪ್ ಉಮೇದುವಾರಿಕೆಯನ್ನು ಅನುಮೋದಿಸಿಲ್ಲ. ಮೊನ್ನೆ ‘ವಾಶಿಂಗ್ಟನ್ ಪೋಸ್ಟ್’ 2005ರಲ್ಲಿ ಟ್ರಂಪ್ ಮಹಿಳೆಯೊಬ್ಬರ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೊ ಬಿಡುಗಡೆಗೊಳಿಸಿದ ಮೇಲಂತೂ, ಹಿಂದೆ ಅನುಮೋದಿಸಿದ್ದ ರಿಪಬ್ಲಿಕನ್ ಪಕ್ಷದ ಹಲವು ಕಾಂಗ್ರೆಸ್ ಸದಸ್ಯರು ಒಬ್ಬೊಬ್ಬರಾಗಿ ತಾವು ಟ್ರಂಪ್ ಅವರನ್ನು ಬೆಂಬಲಿಸುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ. ಟ್ರಂಪ್ ಪತ್ನಿ ಮೆಲನಿಯಾ, ‘ಟ್ರಂಪ್ ಹೇಳಿಕೆಯಿಂದ ನನಗೂ ನೋವಾಗಿದೆ. ಆದರೆ ಆ ಮಾತು ಅವರ ಇಡೀ ವ್ಯಕ್ತಿತ್ವವನ್ನು ಬಿಂಬಿಸುವುದಿಲ್ಲ.

ಟ್ರಂಪ್ ಅವರಲ್ಲಿ ನಾಯಕತ್ವ ಗುಣ ಇದೆ. ಟ್ರಂಪ್ ಅವರನ್ನು ನನ್ನಂತೆ ಜನರೂ ಕ್ಷಮಿಸುತ್ತಾರೆ ಮತ್ತು ದೇಶದ ಮುಂದಿರುವ ಸವಾಲುಗಳ ಬಗ್ಗೆ ಗಮನಹರಿಸುತ್ತಾರೆ ಎಂದು ನಂಬಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಟ್ರಂಪ್ ಕ್ಷಮೆ ಯಾಚಿಸಿದ ಬಳಿಕವೂ, ‘ಟ್ರಂಪ್ ಉಮೇದುವಾರಿಕೆ ತೊರೆದು ಬೇರೊಬ್ಬರಿಗೆ ಅವಕಾಶ ಮಾಡಿಕೊಡಬೇಕು’ ಎಂಬ ಆಗ್ರಹ ರಿಪಬ್ಲಿಕನ್ ಪಕ್ಷದೊಳಗಿನಿಂದ ಕೇಳಿಬರುತ್ತಿದೆ. ಆದರೆ ಅದು ಅಷ್ಟು ಸುಲಭವಲ್ಲ. ಚುನಾವಣಾ ನಿಯಮಗಳ ಅನುಸಾರ ಟ್ರಂಪ್ ಸ್ವಇಚ್ಛೆಯಿಂದ ಕಣದಿಂದ ಹಿಂದೆ ಸರಿಯದ ಹೊರತು, ಅವರನ್ನು ಕೆಳಗಿಸಲು ಪಕ್ಷಕ್ಕೆ ತಾಂತ್ರಿಕ ತೊಡಕುಗಳಿವೆ. ಬೇರೊಬ್ಬ ಅಭ್ಯರ್ಥಿಯನ್ನು ಬಿಂಬಿಸಲು ಸಮಯದ ಕೊರತೆ ಇದೆ.

ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆ ಹೊಸ ತಿರುವು ಪಡೆದುಕೊಂಡಿದೆ. ಒಂದೆಡೆ ಗೆಲುವನ್ನೇ ಗುರಿಯಾಗಿಸಿಕೊಂಡು ಡೆಮಾಕ್ರಟಿಕ್ ಪಕ್ಷ ಒಗ್ಗಟ್ಟಿನ ಹೆಜ್ಜೆ ಇಡುತ್ತಿದ್ದರೆ, ‘ಗ್ರ್ಯಾಂಡ್ ಓಲ್ಡ್ ಪಾರ್ಟಿ’ ಎನಿಸಿಕೊಂಡಿರುವ ರಿಪಬ್ಲಿಕನ್ ಪಕ್ಷ ಟ್ರಂಪ್ ಕಾರಣದಿಂದ ಒಡೆದು ಹೋಗುವಂತೆ ಕಾಣುತ್ತಿದೆ.

ಪ್ರತಿಕ್ರಿಯಿಸಿ (+)