ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಆರು ರಾಜ್ಯಗಳು ಬರೆಯುವ ಹಣೆಬರಹ

ಚುನಾವಣಾ ನಾಡಿನಿಂದ
Last Updated 13 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಂದು ವಿಶೇಷ ಇದೆ. ಇಲ್ಲಿ ಚುನಾವಣೆಯ ಗೆಲುವನ್ನು ಎಲೆಕ್ಟೋರಲ್ ಕಾಲೇಜ್ (ಚುನಾಯಿಕರ ಕೂಟ) ಮತಗಳು ನಿರ್ಣಯಿಸುತ್ತವೆ. ಒಂದು ರೀತಿಯಲ್ಲಿ ಇದು, ಸಂಕೀರ್ಣ ಎನಿಸುವ ಲೆಕ್ಕಾಚಾರ.

ಕೇವಲ ಅಮೆರಿಕದ ನಾಗರಿಕರು ಚಲಾಯಿಸುವ ಜನಪ್ರಿಯ ಮತಗಳಷ್ಟೇ ಚುನಾವಣೆಯ ಗೆಲುವನ್ನು ನಿರ್ಧರಿಸಿದ್ದರೆ ಬಹುಶಃ ಚುನಾವಣಾ ಪ್ರಚಾರದ ವೈಖರಿ ಬೇರೆಯ ರೀತಿ ಇರುತ್ತಿತ್ತು. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ತಮಗೆ ಹೆಚ್ಚು ಬೆಂಬಲವಿರುವ ನ್ಯೂಯಾರ್ಕ್‌ನಲ್ಲಿ ಇನ್ನೂ ಹೆಚ್ಚಿನ ಮತ ಗಳಿಸಲು ಪ್ರಯತ್ನಿಸುತ್ತಿದ್ದರು.

ರಿಪಬ್ಲಿಕನ್ ಅಭ್ಯರ್ಥಿ ಟೆಕ್ಸಾಸ್‌ನಲ್ಲಿ ಹೆಚ್ಚು ದಿನ ಜಂಡಾ ಹೂಡುತ್ತಿದ್ದರು. ಆದರೆ ಅಧ್ಯಕ್ಷರ ಆಯ್ಕೆ ನಿಂತಿರುವುದು ಮತದಾರರು ನೀಡುವ ಜನಪ್ರಿಯ ಮತಗಳ ಆಧಾರದಲ್ಲಿ ಅಲ್ಲ. ಬದಲಾಗಿ ಎಲೆಕ್ಟೋರಲ್ ಕಾಲೇಜ್ ಮತಗಳು ಗೆಲುವನ್ನು ನಿರ್ಧರಿಸುತ್ತವೆ.

ಯಾವುದೇ ರಾಜ್ಯದ ಎಲೆಕ್ಟೋರಲ್ ಮತಗಳ ಸಂಖ್ಯೆ, ಆ ರಾಜ್ಯದಿಂದ ಅಮೆರಿಕದ ಕಾಂಗ್ರೆಸ್ಸಿನ ಮೇಲ್ಮನೆ ಮತ್ತು ಕೆಳಮನೆಗಳಿಗೆ ಆಯ್ಕೆಯಾದ ಸದಸ್ಯರ ಒಟ್ಟು ಸಂಖ್ಯೆಗೆ ಸಮನಾಗಿರುತ್ತದೆ. ಈ ಸಂಖ್ಯೆ ರಾಜ್ಯದ ಜನಸಂಖ್ಯೆಯ ಮೇಲೆ ನಿರ್ಧರಿತವಾಗಿರುತ್ತದೆ. ಒಟ್ಟಾರೆಯಾಗಿ ಅಮೆರಿಕ ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆ 538 ಇದೆ. ಅದರಲ್ಲಿ 100 ಮೇಲ್ಮನೆ ಪ್ರತಿನಿಧಿಗಳು, 435 ಕೆಳಮನೆ ಸದಸ್ಯರು ಮತ್ತು ಕೊಲಂಬಿಯಾದ 3 ಹೆಚ್ಚುವರಿ ಚುನಾಯಿಕರು.

ಈ 538 ಮತಗಳು ಅಧ್ಯಕ್ಷ ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತವೆ. ಹಾಗಂತ ಪ್ರತಿ ಸದಸ್ಯನೂ ತನ್ನ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮುಕ್ತ ಸ್ವಾತಂತ್ರ್ಯ ಹೊಂದಿರುವುದಿಲ್ಲ. ಅದು ಆಯಾ ರಾಜ್ಯದ ಜನಪ್ರಿಯ ಮತಗಳ ಮೇಲೆ ಅವಲಂಬಿತವಾಗಿರುತ್ತದೆ. ಉದಾ: ಒಂದು ರಾಜ್ಯದಲ್ಲಿ ಚಲಾವಣೆಯಾದ ಜನ ಮತಗಳಲ್ಲಿ ಶೇಕಡ 51ರಷ್ಟು ಪಡೆದ ಅಭ್ಯರ್ಥಿ, ಆ ರಾಜ್ಯದ ಅಷ್ಟೂ ಎಲೆಕ್ಟೋರಲ್ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ.

ಹಾಗಾಗಿ ಯಾವುದೇ ರಾಜ್ಯದಲ್ಲಿ ಶೇ 51ರಷ್ಟು ಮತಗಳ ಮೇಲೆ ಕಣ್ಣಿಟ್ಟಿದ್ದರೆ ಸಾಕು. ಹೆಚ್ಚಿನ ಮತಗಳಿಕೆಗೆ ತ್ರಾಸಪಡಬೇಕಿಲ್ಲ. ಹೆಚ್ಚಿನ ಮತ ಬುಟ್ಟಿಗೆ ಬಿದ್ದರೂ ಉಪಯೋಗವಿಲ್ಲ.

ಮುಖ್ಯವಾಗಿ ಅಮೆರಿಕದ ಆರು ರಾಜ್ಯಗಳು ಜನಸಂಖ್ಯೆಯ ಆಧಾರದಲ್ಲಿ ಹೆಚ್ಚು ಜನಪ್ರತಿನಿಧಿಗಳನ್ನು ಹೊಂದಿವೆ. ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡ 12ರಷ್ಟು ಜನ ಕ್ಯಾಲಿಪೋರ್ನಿಯಾ ಒಂದರಲ್ಲೇ ಇದ್ದಾರೆ. ಹಾಗಾಗಿ ಆ ರಾಜ್ಯದಿಂದ 55 ಪ್ರತಿನಿಧಿಗಳು ಕಾಂಗ್ರೆಸ್ಸಿಗೆ ಆರಿಸಿ ಬರುತ್ತಾರೆ. ಅಂತೆಯೇ ಟೆಕ್ಸಾಸ್ 38, ನ್ಯೂಯಾರ್ಕ್ 29, ಫ್ಲಾರಿಡಾ 29, ಇಲಿನಾಯ್ಸ್ 20, ಪೆನ್ಸಿಲ್ವೇನಿಯಾ 20 ಪ್ರತಿನಿಧಿಗಳನ್ನು ಕಾಂಗ್ರೆಸ್ಸಿಗೆ ಕಳುಹಿಸುತ್ತವೆ.

ಸಣ್ಣ ರಾಜ್ಯಗಳಾದ ಅಲಾಸ್ಕ, ಮಾಂಟಾನ, ಸೌತ್ ಡಕೋಟಾ, ವರ್ಮಾಂಟ್ ಕೇವಲ ಒಬ್ಬ ಶಾಸನ ಸಭೆ ಸದಸ್ಯ ಮತ್ತು ಇಬ್ಬರು ಮೇಲ್ಮನೆ ಸದಸ್ಯರನ್ನು ಕಾಂಗ್ರೆಸ್ಸಿಗೆ ಕಳುಹಿಸುತ್ತವೆ. ಹಾಗಾಗಿ ಅವುಗಳ ಎಲೆಕ್ಟೋರಲ್ ಮತಗಳ ಸಂಖ್ಯೆ ಕೇವಲ 3.

ಹೀಗೆ ವಿವಿಧ ರಾಜ್ಯಗಳಲ್ಲಿ ಒಟ್ಟುಗೂಡಿದ 538 ಎಲೆಕ್ಟೋರಲ್ ಮತಗಳ ಪೈಕಿ 270 ಮತಗಳಿಸಿದ ಅಭ್ಯರ್ಥಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾರೆ. ಒಂದೊಮ್ಮೆ ಇಬ್ಬರು ಅಭ್ಯರ್ಥಿಗಳು ಸಮನಾಗಿ (269-269) ಎಲೆಕ್ಟೋರಲ್ ಮತ ಗಳಿಸಿದರೆ, ಆಗ ಕಾಂಗ್ರೆಸ್ ಕೆಳಮನೆಯ ಸದಸ್ಯರು ಅಧ್ಯಕ್ಷರನ್ನು, ಮೇಲ್ಮನೆ ಸದಸ್ಯರು ಉಪಾಧ್ಯಕ್ಷರನ್ನು ಆರಿಸುತ್ತಾರೆ. ಇಂತಹ ಸನ್ನಿವೇಶ ಇಲ್ಲ ಎನ್ನುವಷ್ಟು ಅಪರೂಪ.

ಅಮೆರಿಕ ಚುನಾವಣಾ ಇತಿಹಾಸದಲ್ಲಿ 1800ನೇ ಇಸವಿಯಲ್ಲಿ ಇಂತಹದೊಂದು ಸನ್ನಿವೇಶ ಸೃಷ್ಟಿಯಾಗಿತ್ತು ಎಂಬುದನ್ನು ಹೊರತುಪಡಿಸಿದರೆ, ಆನಂತರ ಇಬ್ಬರು ಅಭ್ಯರ್ಥಿಗಳೂ ಸಮ ಮತ ಗಳಿಸಿದ ಉದಾಹರಣೆ ಇಲ್ಲ.

ಅಮೆರಿಕದ ಈ ಚುನಾವಣಾ ಪದ್ಧತಿಯಿಂದ, ಒಮ್ಮೊಮ್ಮೆ ಅತಿ ಹೆಚ್ಚು ಜನಪ್ರಿಯ ಮತ ಪಡೆದ ಅಭ್ಯರ್ಥಿ ಅಧ್ಯಕ್ಷರಾಗದೇ, ಕೇವಲ ಹೆಚ್ಚು ಎಲೆಕ್ಟೋರಲ್ ಮತ ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿದ್ದೂ ಇದೆ. ಇತ್ತೀಚಿನ ಉದಾಹರಣೆ ಎಂದರೆ, 2000ನೇ ಇಸವಿಯಲ್ಲಿ ಅಲ್ ಗೋರ್, ಸರಾಸರಿ ಹೆಚ್ಚು ಜನಪ್ರಿಯ ಮತಗಳನ್ನು ಗಳಿಸಿದ್ದರು. ಆದರೆ ಎಲೆಕ್ಟೋರಲ್ ಮತಗಳ ಆಧಾರದಲ್ಲಿ ಜಾರ್ಜ್ ಬುಷ್ ಶ್ವೇತಭವನ ಹೊಕ್ಕರು.

ಆ ವರ್ಷ ಎಲೆಕ್ಟೋರಲ್ ಮತಗಳಿಗೆ ಹೆಚ್ಚು ಪ್ರಾಶಸ್ತ್ಯವಿರುವ ಚುನಾವಣಾ ಪದ್ಧತಿಯನ್ನು ಮರುಪರಿಶೀಲಿಸುವುದು ಸೂಕ್ತ ಎಂಬ ಚರ್ಚೆ ವ್ಯಾಪಕವಾಗಿ ನಡೆದಿತ್ತು. ಇದರಿಂದಾಗಿ ಜನರ ಆಯ್ಕೆಗೆ ವಿರುದ್ಧವಾಗಿ ಅಧ್ಯಕ್ಷರು ಚುನಾಯಿತರಾದಂತೆ ಆಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ಆ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ.

ಜೊತೆಗೆ ಇಲ್ಲಿ ಎಲೆಕ್ಟೋರಲ್ ಮತಗಳಷ್ಟೇ ಮುಖ್ಯವಾಗುವುದರಿಂದ, ಪ್ರಚಾರದ ವೈಖರಿ ಕೂಡ ಬದಲಾಗಿದೆ. ತಮಗೆ ಅನುಕೂಲಕರ ಎಂದೆನಿಸುವ ರಾಜ್ಯಗಳಿಗೆ ಅಭ್ಯರ್ಥಿಗಳು ಹೆಚ್ಚು ಭೇಟಿಕೊಡುವುದಿಲ್ಲ. ನ್ಯೂಯಾರ್ಕ್ ಈ ಹಿಂದಿನಿಂದಲೂ ಡೆಮಾಕ್ರಟಿಕ್ ಪಕ್ಷದ ಭದ್ರಕೋಟೆ. ಅಲ್ಲಿ ಶೇಕಡ 51ರಷ್ಟು ಜನಪ್ರಿಯ ಮತಗಳು ಡೆಮಾಕ್ರಟಿಕ್ ಪಕ್ಷಕ್ಕೆ ಎನ್ನುವುದು ಖಾತರಿ.

ಶೇಕಡ 51ರಷ್ಟು ಮತ ಗಳಿಸಿದರೂ, ಶೇಕಡ 80ರಷ್ಟು ಮತ ಗಳಿಸಿದರೂ ಸಿಗುವುದು 29 ಎಲೆಕ್ಟೋರಲ್ ಮತಗಳೇ ಆದ್ದರಿಂದ ಹೆಚ್ಚು ಸಮಯ, ಸಂಪನ್ಮೂಲಗಳನ್ನು ಡೆಮಾಕ್ರಟಿಕ್ ಪಕ್ಷ ನ್ಯೂಯಾರ್ಕ್‌ನಲ್ಲಿ ವ್ಯಯಿಸುವುದಿಲ್ಲ. ಅದೇ ಮಾತು ಕ್ಯಾಲಿಫೋರ್ನಿಯಾ, ಮೆಸಾಚುಸೆಟ್ಸ್, ನ್ಯೂಜೆರ್ಸಿಗಳಿಗೂ ಅನ್ವಯಿಸುತ್ತದೆ.

ಇವೆಲ್ಲವೂ ಡೆಮಾಕ್ರಟಿಕ್ ಪಕ್ಷ ಪ್ರಾಬಲ್ಯ ಹೊಂದಿರುವ, ಈ ಹಿಂದಿನ ಚುನಾವಣೆಯಲ್ಲಿ ಗೆದ್ದು ಬರುತ್ತಿರುವ ರಾಜ್ಯಗಳು. ಅಂತೆಯೇ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳು ತಮ್ಮ ಪ್ರಾಬಲ್ಯವಿರುವ ಟೆಕ್ಸಾಸ್, ಅಲಬಾಮ, ಮಿಸಿಸ್ಸಿಪ್ಪಿ, ಒಕ್ಲಾಹೋಮ, ಕನ್ಸಾಸ್ ರಾಜ್ಯಗಳಿಗೆ ಪ್ರಚಾರಕ್ಕೆಂದು ಭೇಟಿ ಕೊಡುವುದು ವಿರಳ.

ಅಕ್ಟೋಬರ್ ಎರಡನೆಯ ವಾರದ ಬಳಿಕ, ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಹುತೇಕ ಅಭ್ಯರ್ಥಿಗಳು ಹೆಚ್ಚು ಸಮಯ ವ್ಯಯಿಸುವುದು ಓಹಿಯೋ, ಫ್ಲಾರಿಡಾ, ಪೆನ್ಸಿಲ್ವೇನಿಯಾ, ವರ್ಜೀನಿಯಾ, ಮಿಶಿಗನ್, ವಿಸ್ಕಾನ್ಸಿನ್ ರಾಜ್ಯಗಳಲ್ಲಿ. ಇಲ್ಲಿ ಅಭ್ಯರ್ಥಿಗಳು ಹೆಚ್ಚು ಹಣವನ್ನು ಪ್ರಚಾರಕ್ಕೆ, ಜಾಹೀರಾತಿಗೆ ವ್ಯಯಿಸುತ್ತಾರೆ. ಸಮಯವನ್ನು ಮೀಸಲಿಟ್ಟು ಜನರ ಮನಗೆಲ್ಲಲು ಪ್ರಯತ್ನಿಸುತ್ತಾರೆ. 

ಈ ಬಗ್ಗೆಯೂ ಆರೋಪಗಳಿವೆ. ಕೇವಲ ಆರೇಳು ರಾಜ್ಯಗಳನ್ನು ಹೊರತುಪಡಿಸಿ, ಉಳಿದ ರಾಜ್ಯಗಳನ್ನು ಅಭ್ಯರ್ಥಿಗಳು ಕಡೆಗಣಿಸುತ್ತಾರೆ, ಸಂಯುಕ್ತ ಒಕ್ಕೂಟದ ಅಧ್ಯಕ್ಷರಾಗುವವರು ಎಲ್ಲ ರಾಜ್ಯಗಳಿಗೂ ಸಮಾನ ಮನ್ನಣೆ ಕೊಡಬೇಕು. ಈ ಎಲೆಕ್ಟೋರಲ್ ಕಾಲೇಜ್ ಮತಗಣನೆ ಅದಕ್ಕೆ ಅಡ್ಡಿಯಾಗಿದೆ ಎನ್ನುವುದು ವಾದ.

ಅದು ನಿಜವೂ ಹೌದು. 1960ರ ಚುನಾವಣೆಯಲ್ಲಿ ಜಾನ್ ಕೆನಡಿ ಮತ್ತು ರಿಚರ್ಡ್ ನಿಕ್ಸನ್ ತಾವು ಪ್ರಚಾರಕ್ಕೆ ಬಳಸಿದ ಒಟ್ಟು ಸಮಯದಲ್ಲಿ ಶೇಕಡ 74ರಷ್ಟನ್ನು ಕೇವಲ 24 ರಾಜ್ಯಗಳಲ್ಲಷ್ಟೇ ಬಳಸಿದ್ದರು. 1976ರ ಚುನಾವಣೆಯಲ್ಲಿ 12 ರಾಜ್ಯಗಳಿಗೆ ಈ ಎರಡೂ ಪಕ್ಷದ ಅಭ್ಯರ್ಥಿಗಳು ಒಮ್ಮೆಯೂ ಭೇಟಿ ಕೊಟ್ಟಿರಲಿಲ್ಲ. ಅದು ಹಿಲರಿ– ಟ್ರಂಪ್ ವಿಷಯದಲ್ಲೂ ಮುಂದುವರೆದಿದೆ.

ಇಲ್ಲಿ ಮತ್ತೊಂದು ಅಂಶವನ್ನೂ ಗಮನಿಸಬೇಕು. ಕೇವಲ ಎರಡು ಸಲ ಹೊರತುಪಡಿಸಿ (1964, 1972), ಉಳಿದ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಅಭ್ಯರ್ಥಿಗಳು ಶೇಕಡ 40ಕ್ಕಿಂತ ಕಡಿಮೆ ಮತಗಳನ್ನು ಗಳಿಸಿಲ್ಲ. ಇದರಿಂದ ತಿಳಿಯುವುದು ಏನೆಂದರೆ, ಶೇಕಡಾ 80ರಷ್ಟು ಮತದಾರರು, ಅಧ್ಯಕ್ಷರ ಆಯ್ಕೆಯ ವಿಷಯ ಬಂದಾಗ ತಮ್ಮ ಒಲವಿನ ಪಕ್ಷಕ್ಕೆ ಸ್ಥಿರವಾಗಿ ಅಂಟಿಕೊಂಡಿರುತ್ತಾರೆ.

ಅದು ಚುನಾವಣೆಯಿಂದ ಚುನಾವಣೆಗೆ ಬದಲಾಗುವುದಿಲ್ಲ. ಹಾಗಾಗಿ ಪಕ್ಷಗಳು ಎರಡು ಮುಖ್ಯ ಗುರಿಗಳನ್ನಷ್ಟೇ ಪ್ರಚಾರದ ಸಮಯದಲ್ಲಿ ಇರಿಸಿಕೊಳ್ಳುತ್ತವೆ. ಒಂದು, ತಮ್ಮ ಪಕ್ಷದ ಬೆಂಬಲಿಗ ಮತದಾರರನ್ನು ಚುನಾವಣೆಯ ದಿನ ಮತಗಟ್ಟೆಗೆ ಬರುವಂತೆ ನೋಡಿಕೊಳ್ಳುವುದು. ಎರಡು, ಯಾವುದೇ ಪಕ್ಷಕ್ಕೆ ಬದ್ಧವಾಗದೇ, ವಿಷಯಾಧಾರಿತವಾಗಿ ಮತ ಹಾಕುವ ನಾಗರಿಕರನ್ನು ತಮ್ಮತ್ತ ಸೆಳೆಯುವುದು.

ಅಭ್ಯರ್ಥಿಯ ಎಲ್ಲ ಕಸರತ್ತೂ ಈ ಎರಡು ಗುರಿಗಳನ್ನು ಮುಟ್ಟುವ ಸಲುವಾಗಿಯೇ ಇರುತ್ತದೆ. ಪಕ್ಷಕ್ಕೆ ಬದ್ಧವಾದ ಮತದಾರರ ಮತಗಳು ಖಾತ್ರಿಯಾದರೂ, ಕೆಲವೊಮ್ಮೆ ಅಭ್ಯರ್ಥಿ, ಅತಿರೇಕದ ಮಾತುಗಳನ್ನಾಡುತ್ತಿದ್ದಾಗ, ಅಧ್ಯಕ್ಷ ಸ್ಥಾನಕ್ಕೆ ಸೂಕ್ತವಲ್ಲ, ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವುದಿಲ್ಲ ಎಂಬ ಸೂಚನೆ ಕಂಡಾಗ, ಈ ಮತದಾರರು ಚುನಾವಣೆಯಲ್ಲಿ ಭಾಗವಹಿಸದೇ ಮನೆಯಲ್ಲೇ ಉಳಿದುಬಿಡುತ್ತಾರೆ.

ಇದು ಆಯಾ ಪಕ್ಷಗಳಿಗೆ ಭಾರಿ ಹಾನಿ ಉಂಟುಮಾಡುತ್ತದೆ. ಅಭ್ಯರ್ಥಿಯ ಚಾರಿತ್ರ್ಯ, ಹಿಂದಿನ ಸಾಧನೆ, ನಾಯಕತ್ವ ಗುಣ, ಆತ ಸಮಸ್ಯೆಗಳನ್ನು ನೋಡುವ ರೀತಿ ಎಲ್ಲವನ್ನೂ ಈ ಮೂರನೆಯ ವರ್ಗದವರು ತೂಗಿ ಅಳೆಯುತ್ತಾರೆ. ಅದಕ್ಕೆ ತಕ್ಕಹಾಗೆ ಮತ ಚಲಾಯಿಸುತ್ತಾರೆ. ಇವರನ್ನು ಪುಸಲಾಯಿಸಿದ ಅಭ್ಯರ್ಥಿಗೆ ಗೆಲುವು ಕಟ್ಟಿಟ್ಟ ಬುತ್ತಿ. ಈ ಚುನಾವಣೆಯಲ್ಲಿ, ಕನಿಷ್ಠ ತಮ್ಮ ಪಕ್ಷದ ನಿಷ್ಠಾವಂತ ಮತದಾರರನ್ನು ಮತಗಟ್ಟೆಗೆ ಕರೆತರುವುದು ಟ್ರಂಪ್ ಅವರಿಗಿರುವ ದೊಡ್ಡ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT