ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷೀಯ ಸಂವಾದ: - ಮಾತು ಬರಿದಾಗುವ ಹೊತ್ತು

ಚುನಾವಣಾ ನಾಡಿನಿಂದ
Last Updated 14 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಧ್ಯಕ್ಷೀಯ ಚುನಾವಣೆಯ ಮುಖ್ಯ ಘಟ್ಟಗಳಲ್ಲಿ, ಅಭ್ಯರ್ಥಿಗಳ ನಡುವೆ ಏರ್ಪಡುವ ಸಾರ್ವಜನಿಕ ಸಂವಾದ ಕೂಡ ಒಂದು. ಇಂತಹ ಸಂವಾದಗಳು ಜನರ ಒಲವು, ನಿಲುವುಗಳನ್ನು ಬದಲಿಸಬಲ್ಲವೇ ಎಂಬುದು ಚರ್ಚಾರ್ಹ ವಿಷಯ. ಆದರೆ ಯಾವುದೇ ಪಕ್ಷದ ಪರ ಒಲವು ತೋರದೇ, ಬೇಲಿಯ ಮೇಲೆ ಕೂತ ಮತದಾರರು ಸೂಕ್ತ ನಿಲುವು ತಳೆಯಲು ಅಭ್ಯರ್ಥಿಗಳ ನಡುವಿನ ಸಂವಾದಗಳು ಅನುಕೂಲವನ್ನಂತೂ ಮಾಡಿಕೊಡುತ್ತವೆ.

ಹಾಗಾಗಿಯೇ ಬಹುತೇಕ ಸುದ್ದಿ ವಾಹಿನಿಗಳು ಅಭ್ಯರ್ಥಿಗಳ ನಡುವಿನ ಸಂವಾದದ ನೇರಪ್ರಸಾರ ಮಾಡುತ್ತವೆ. ರಾಷ್ಟ್ರಮಟ್ಟದ ಸಮೀಕ್ಷೆಗಳಲ್ಲಿ ಶೇಕಡ 15ಕ್ಕೂ ಹೆಚ್ಚಿನ ಮತ ಪಡೆದವರನ್ನು ಮಾತ್ರ ಚರ್ಚೆಗೆ ಆಹ್ವಾನಿಸಲಾಗುತ್ತದೆ. ಹಾಗಾಗಿ ಈ ಬಾರಿ ಗ್ಯಾರಿ ಜಾನ್ಸನ್ ಮತ್ತು ಜಿಲ್ಸ್ ಟೈನ್ ಚರ್ಚೆಯಿಂದ ಹೊರಗುಳಿದರು.

ಪ್ರತಿ ಚುನಾವಣೆಯಲ್ಲೂ, ಅಭ್ಯರ್ಥಿಗಳ ನಡುವಿನ ಸಂವಾದವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುತ್ತದೆ. ಚರ್ಚೆಯ ನಿರ್ವಾಹಕರು ಯಾರು ಎಂಬುದನ್ನು ಮೊದಲೇ ಪ್ರಕಟಿಸಲಾಗುತ್ತದೆ. ಸಾಮಾನ್ಯವಾಗಿ ಮೊದಲ ಸಂವಾದ, ದೇಶದ ಆಂತರಿಕ ಸಮಸ್ಯೆಗಳ ಕುರಿತಾಗಿದ್ದರೆ, ಎರಡನೆಯದು ಟೌನ್ ಹಾಲ್ ಮಾದರಿಯಲ್ಲಿರುತ್ತದೆ. ಅಲ್ಲಿ ಆಯ್ದ ಸಭಿಕರೂ ಪ್ರಶ್ನೆ ಕೇಳಬಹುದು. ಮೂರನೆಯ ಚರ್ಚೆಗೆ ವಿದೇಶಾಂಗ ಕಾರ್ಯನೀತಿಯನ್ನು ಮುಖ್ಯ ವಿಷಯವಾಗಿ ಆರಿಸಿಕೊಳ್ಳಲಾಗುತ್ತದೆ.

ಸಂವಾದದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕೆಲವು ನಿಬಂಧನೆಗಳಿರುತ್ತವೆ. ಸಂವಾದ ಆಯೋಜಕರು, ಅವುಗಳನ್ನು ಉಭಯ ಪಕ್ಷಗಳ ಪ್ರಚಾರ ನಿರ್ವಹಣಾ ತಂಡಗಳೊಂದಿಗೆ ಚರ್ಚಿಸುತ್ತಾರೆ. ಆಕ್ಷೇಪಗಳಿದ್ದರೆ ನಿಬಂಧನೆಗಳನ್ನು ಪರಿಶೀಲಿಸಿ, ಇಬ್ಬರಿಗೂ ಒಪ್ಪಿತವಾಗುವಂತೆ ಮಾರ್ಪಡಿಸಲಾಗುತ್ತದೆ. ಚರ್ಚೆಯ ನಿರ್ವಾಹಕ ತಂಡ ಪ್ರತ್ಯೇಕವಾಗಿರುತ್ತದೆ.

ಈ ತಂಡದಲ್ಲಿ ವಿವಿಧ ಪತ್ರಿಕೆಗಳ, ಸುದ್ದಿವಾಹಿನಿಗಳ ಮುಖ್ಯಸ್ಥರು, ಜನಪ್ರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಇರುತ್ತಾರೆ. ಕೆಲವೊಮ್ಮೆ ಚರ್ಚೆಯ ನಿರ್ವಾಹಕರ ಬಗ್ಗೆ ಅಭ್ಯರ್ಥಿಗಳು ಅಸಮಾಧಾನ ತೋರುವುದಿದೆ. ಈ ವರ್ಷ ಟ್ರಂಪ್, ಮೊದಲಿಗೆ ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿರಲಿಲ್ಲ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ನಿರ್ವಾಹಕರು ಇದ್ದರೆ ಮಾತ್ರ ಭಾಗವಹಿಸುವೆ ಎಂದಿದ್ದರು.

ಇನ್ನು, ಈ ಸಂವಾದದಲ್ಲಿ ಭಾಗವಹಿಸಲು ಅಭ್ಯರ್ಥಿಗಳು ಸಾಕಷ್ಟು ಬೆವರು ಹರಿಸುತ್ತಾರೆ. ತಜ್ಞರ ತಂಡ ಕಟ್ಟಿಕೊಂಡು ತಾಲೀಮು ನಡೆಸುತ್ತಾರೆ. ತಜ್ಞರು ಸಿದ್ಧಪಡಿಸಿದ ಟಿಪ್ಪಣಿಗಳನ್ನು, ಮಾಹಿತಿ ಹೊತ್ತಗೆಯನ್ನು ಪರೀಕ್ಷೆಗೆ ಕುಳಿತ ವಿದ್ಯಾರ್ಥಿಯಂತೆ ಪಟ್ಟಾಗಿ ಕುಳಿತು ಓದುತ್ತಾರೆ. ಎದುರಾಳಿ ಭಾಗವಹಿಸಿದ ಹಿಂದಿನ ಚರ್ಚೆಗಳ ವಿಡಿಯೊ ವೀಕ್ಷಿಸುತ್ತಾರೆ.

ಪ್ರತಿಸ್ಪರ್ಧಿಯ ದೌರ್ಬಲ್ಯವೇನು, ಎಂತಹ ಪ್ರಶ್ನೆಗೆ ಅವರು ತಬ್ಬಿಬ್ಬಾಗಬಹುದು ಎಂಬುದನ್ನು ಊಹಿಸಿ ಸಾಧ್ಯವಾದಷ್ಟು ಬಾಣಗಳನ್ನು ತಮ್ಮ ಬತ್ತಳಿಕೆಗೆ ತುಂಬಿಕೊಳ್ಳುತ್ತಾರೆ. ಶಾಲಾ ವಿದ್ಯಾರ್ಥಿಗಳು ಒಂದೊಮ್ಮೆ ಪರೀಕ್ಷೆಯೇ ಇಲ್ಲವಾಗಿದ್ದರೆ ಎಷ್ಟು ಚೆನ್ನಿತ್ತು ಎಂದುಕೊಳ್ಳುವಂತೆಯೇ, ಅಧ್ಯಕ್ಷೀಯ ಅಭ್ಯರ್ಥಿಗಳು ಚರ್ಚೆಗೆ ಬೆದರುವುದೂ ಇದೆ. ನೌಕರಿಯ ಸಂದರ್ಶನದಲ್ಲಿ ನಿರುದ್ಯೋಗಿ ತಳಮಳಗೊಳ್ಳುವಂತೆ, ಚರ್ಚೆಯ ವೇದಿಕೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಗಳು ತಬ್ಬಿಬ್ಬಾಗುವ ಸಂದರ್ಭ ಇಲ್ಲವೆಂದಲ್ಲ.

ಹಾಗೆ ನೋಡಿದರೆ, ಹಿಲರಿ ಅವರಿಗೆ ಚರ್ಚೆಯಲ್ಲಿ ಭಾಗವಹಿಸಿದ ಅನುಭವ ಸಾಕಷ್ಟು ಇತ್ತು. ಈ ಹಿಂದೆ 2 ಬಾರಿ ಸೆನೆಟರ್ ಚುನಾವಣೆಯ ಚರ್ಚೆಯಲ್ಲಿ, ಒಂದು ಬಾರಿ ಅಧ್ಯಕ್ಷೀಯ ಚುನಾವಣೆಯ ಪ್ರಾಥಮಿಕ ಹಂತದ ಸಂವಾದಗಳಲ್ಲಿ ಹಿಲರಿ ಕ್ಲಿಂಟನ್ ಭಾಗವಹಿಸಿದ್ದರು. ಆದರೂ ಅವರು ತಯಾರಿಯಲ್ಲಿ ಹಿಂದೆ ಬೀಳಲಿಲ್ಲ. ವಾರಗಳ ಮೊದಲೇ ತಾಲೀಮು ಆರಂಭಿಸಿದ್ದರು.

ಹಿಲರಿ, ಡೆಮಾಕ್ರಟಿಕ್ ಪಕ್ಷದ ಉತ್ತಮ ಸಂಸದೀಯ ಪಟುಗಳ ಮಾರ್ಗದರ್ಶನ ಪಡೆದ ಬಗ್ಗೆ, ಸಣ್ಣಪುಟ್ಟ ಸಂಗತಿಗಳನ್ನೂ ಬಿಡದೆ ಗಮನಿಸುತ್ತಿರುವ ಬಗ್ಗೆ ಪತ್ರಿಕೆಗಳು ವರದಿ ಮಾಡಿದ್ದವು. ಮುಖ್ಯವಾಗಿ ತಮಗಿರುವ ಅನುಭವವನ್ನು ವೀಕ್ಷಕರಿಗೆ ಮನವರಿಕೆ ಮಾಡಿಕೊಡಬೇಕು. ಸಾಧ್ಯವಾದಷ್ಟು ಟ್ರಂಪ್ ಹಿನ್ನೆಲೆ ಕೆದಕಿ ಅವರು ಮಹಿಳೆಯರ ಬಗ್ಗೆ, ವಿವಿಧ ಜನಾಂಗಗಳ ಬಗ್ಗೆ ಮಾಡಿರುವ ಟೀಕೆಗಳನ್ನು ಜನರಿಗೆ ನೆನಪಿಸಬೇಕು ಎಂಬುದು ಹಿಲರಿ ತಂಡದ ಯೋಜನೆಯಾಗಿತ್ತು. ಆ ನಿಟ್ಟಿನಲ್ಲಿ ಹಿಲರಿ ಸಿದ್ಧರಾಗಿದ್ದರು.

ರಿಯಾಲಿಟಿ ಶೋ ಒಂದರ ನಿರೂಪಕರಾಗಿ ಕೆಲಸ ಮಾಡಿದ್ದ ಟ್ರಂಪ್ ಅವರಿಗೆ ಸಭಾಕಂಪನ, ಕ್ಯಾಮೆರಾ ಎದುರಿಸುವ ಭಯ ಇಲ್ಲದಿದ್ದರೂ, ತಮ್ಮ ಹಿಂದಿನ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಟ್ರಂಪ್ ನ್ಯೂಯಾರ್ಕ್ ನಗರದ ಮೇಯರ್ ರುಡಾಲ್ಫ್ ಗಿಲಾನಿ, ಟಾಕ್ ರೇಡಿಯೋ ಸಮೂಹದ ಲಾರಾ ಇಂಗ್ರಹಮ್, ಫಾಕ್ಸ್ ಸುದ್ದಿವಾಹಿನಿಯ ಮುಖ್ಯಸ್ಥ ರೋಗರ್ ಐಲ್ಸ್ ಅವರ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಅಭ್ಯಾಸಕ್ಕೆ ತೊಡಗಿದ್ದರು.

ಧ್ವನಿ ಏರಿಳಿತದ ಬಗ್ಗೆ, ಸಂಯಮದಿಂದ ವಾದ ಮಂಡಿಸುವ ಬಗ್ಗೆ, ಮುಖ್ಯ ಸಂಗತಿಗಳನ್ನು ಪ್ರಸ್ತಾಪಿಸಿ ಎದುರಾಳಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ, ಮುಖ್ಯವಾಗಿ ಅಕ್ರಮ ವಲಸೆ, ಕುಸಿಯುತ್ತಿರುವ ಆರ್ಥಿಕತೆಯ ಬಗ್ಗೆ ಪ್ರಶ್ನಿಸಿ ಹಿಲರಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹೇಗೆ ಎಂಬುದನ್ನು ಟ್ರಂಪ್ ಅವರಿಗೆ ಹೇಳಿಕೊಡಲಾಗಿತ್ತು.

ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳ ನಡುವಿನ ಸಂವಾದ, ಅಧ್ಯಕ್ಷೀಯ ಅಭ್ಯರ್ಥಿಗಳ ಸಂವಾದದಷ್ಟು ಜನರ ಗಮನ ಸೆಳೆಯುವುದಿಲ್ಲವಾದರೂ, ಅದಕ್ಕೆ ಮಹತ್ವವಂತೂ ಇದೆ. ಒಂದು ವೇಳೆ, ಅಧಿಕಾರದ ಅವಧಿಯಲ್ಲಿ ದುರದೃಷ್ಟವಶಾತ್ ಅಧ್ಯಕ್ಷರ ಸ್ಥಾನ ತೆರವಾದರೆ, ಉಪಾಧ್ಯಕ್ಷರು ಹಂಗಾಮಿ ಅಧ್ಯಕ್ಷರಾಗಿ ಆಡಳಿತದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.

ಆ ಅರ್ಹತೆ ಉಪಾಧ್ಯಕ್ಷ ಅಭ್ಯರ್ಥಿಗಳಲ್ಲಿ ಇದೆಯೇ ಎಂಬುದಕ್ಕೆ ಈ ಸಂವಾದ ಒಂದು ಮಾಪನವಾಗುತ್ತದೆ. ಸಹ ಸ್ಪರ್ಧಿಗಳೂ ಕೂಡ ಚರ್ಚೆಗೆ ಸಾಕಷ್ಟು ತಾಲೀಮು ನಡೆಸುತ್ತಾರೆ. ಹಿಲರಿ ಅವರೊಂದಿಗಿರುವ ಟಿಮ್ ಕೈನ್ ಹಾರ್ವರ್ಡ್‌ನಲ್ಲಿ ಕಾನೂನು ಕಲಿತು, ವಕೀಲರಾಗಿ ಕೆಲಸ ಮಾಡಿದವರು. ನ್ಯಾಯಾಲಯದಲ್ಲಿ ವಾದ ಮಾಡುವುದರಲ್ಲಿ ಪಳಗಿದವರು. ಹಾಗಾಗಿ ತಮಗೆ ವಿಶೇಷ ತರಬೇತಿ ಬೇಕಿಲ್ಲ ಎಂದು ಕೈನ್ ಹೇಳುತ್ತಲೇ ಬಂದಿದ್ದರು.

ಆದರೂ ಚರ್ಚೆಗೆ ಕೆಲವು ದಿನಗಳಿರುವಾಗ ವಿಶೇಷ ತಂಡದಿಂದ ಮಾಹಿತಿ ಹಾಗೂ ತರಬೇತಿ ಪಡೆದರು. ಪೆನ್ಸ್ ತಂಡ ವಾರದ ಮುಂಚೆಯೇ ಮ್ಯಾಡಿಸನ್ನಿನ ಶೆರಟಾನ್ ಹೋಟೆಲಿನಲ್ಲಿ ಮೊಕ್ಕಾಂ ಹೂಡಿ, ಪೆನ್ಸ್ ಅವರನ್ನು ಚರ್ಚೆಗೆ ಅಣಿಗೊಳಿಸಿತ್ತು. ಅಣಕು ಚರ್ಚೆಗಳನ್ನು ನಡೆಸಿ ತಮ್ಮ ಅಭ್ಯರ್ಥಿಗೆ ಆತ್ಮವಿಶ್ವಾಸ ತುಂಬಿತ್ತು.

ಕಳೆದ ವಾರ ನಡೆದ ಚರ್ಚೆಯಲ್ಲಿ ಪೆನ್ಸ್ ಮತ್ತು ಕೈನ್ ಮಾಡಿಕೊಂಡಿದ್ದ ಪೂರ್ವ ತಯಾರಿ ಎದ್ದು ಕಾಣುತ್ತಿತ್ತು. ಇಬ್ಬರೂ ತಮಗೆ ಏಕೆ ಮತ ನೀಡಬೇಕು ಎನ್ನುವುದಕ್ಕಿಂತ, ತಮ್ಮ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳ ಮುನ್ನೋಟದ ಬಗ್ಗೆ ಪ್ರಸ್ತಾಪಿಸಿದರು. ಚರ್ಚೆಯಲ್ಲಿ ಕೈನ್ ಮತ್ತು ಪೆನ್ಸ್, ಹಿಲರಿ ಮತ್ತು ಟ್ರಂಪ್ ಅವರ ಪ್ರತಿನಿಧಿಗಳಾಗಿ ಕುಳಿತಿದ್ದರು.

ಹಿಲರಿ ಅವರ ಅಧ್ಯಕ್ಷೀಯ ಅವಧಿ ಹೇಗಿರುತ್ತದೆ, ಟ್ರಂಪ್ ನೀತಿ ಏಕೆ ಅಪಾಯಕಾರಿ ಎಂದು ಟಿಮ್ ಕೈನ್ ವಿವರಿಸಿದರೆ, ಪೆನ್ಸ್, ಟ್ರಂಪ್ ಏನೆಲ್ಲಾ ಮಾರ್ಪಾಡು ತರಲು ಯೋಚಿಸಿದ್ದಾರೆ, ಹಿಲರಿ ಏಕೆ ಅಧ್ಯಕ್ಷ ಸ್ಥಾನಕ್ಕೆ ಅನರ್ಹರು ಎಂಬುದನ್ನು ವಿವರಿಸಿದರು.

ಕೈನ್ ಅವರು ಟ್ರಂಪ್ ತೆರಿಗೆ ವಂಚನೆಯ ಬಗ್ಗೆ ಪ್ರಶ್ನೆ ಎತ್ತಿದಾಗ ಪೆನ್ಸ್ ಕೊಂಚ ತಬ್ಬಿಬ್ಬಾದರು. ಟ್ರಂಪ್ ಬಗ್ಗೆ ಬಂದ ಟೀಕೆಗಳಿಗೆ ಸಮರ್ಪಕವಾಗಿ ಉತ್ತರಿಸಿ ತನ್ನ ಮುಖ್ಯ ಉಮೇದುವಾರನನ್ನು ರಕ್ಷಿಸಿಕೊಳ್ಳುವುದು ಪೆನ್ಸ್ ಅವರಿಗೆ ಸವಾಲಾಗಿತ್ತು.

ಹೀಗೆ ಪ್ರತೀ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನು ಸಂವಾದಕ್ಕೆ ಅಣಿಗೊಳಿಸುವ ಕೆಲಸ ನಡೆಯುತ್ತದೆ. ಕಳೆದ ಚುನಾವಣೆಯಲ್ಲಿ ತಮ್ಮ ಮಾತನ್ನೇ ಬಂಡವಾಳವಾಗಿಸಿಕೊಂಡಿದ್ದ ಒಬಾಮ ಕೂಡ, ಚರ್ಚೆಯಲ್ಲಿ ರಾಮ್ನಿ ಮತ್ತು ಮೆಕ್ ಕೈನ್ ಅವರನ್ನು ಎದುರಿಸಲು ಸಾಕಷ್ಟು ಶ್ರಮಪಟ್ಟಿದ್ದರು. 1976ರಲ್ಲಿ ಎರಡನೆಯ ಅವಧಿಗೆ ಸ್ಪರ್ಧಿಸಿದ್ದ ಪೋರ್ಡ್ ಅವರನ್ನು ಚರ್ಚೆಗೆ ಅಣಿಗೊಳಿಸಲು, ಶ್ವೇತಭವನದ ಒಳಗೆ, ಸಂವಾದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು.

ನೂರಾರು ಕುರ್ಚಿಗಳನ್ನು ವೇದಿಕೆಯ ಮುಂದಿಟ್ಟು, ಜೊತೆಗೆ ದೊಡ್ಡ ಪರದೆಯನ್ನು ಅಳವಡಿಸಿ ಅದರಲ್ಲಿ ಪ್ರತಿಸ್ಪರ್ಧಿ ಜಿಮ್ಮಿ ಕಾರ್ಟರ್ ಅವರು ಹಿಂದೆ ಭಾಗವಹಿಸಿದ್ದ ಸಂವಾದಗಳ ವಿಡಿಯೊ ಪ್ರಸಾರ ಮಾಡುತ್ತಾ, ಪೋರ್ಡ್ ಅವರನ್ನು ಚರ್ಚೆಗೆ ಸಿದ್ಧಪಡಿಸಲಾಗಿತ್ತು. ಚರ್ಚೆಯ ವಾತಾವರಣವನ್ನೇ ಸೃಷ್ಟಿಸಿ ಅಭ್ಯರ್ಥಿಗೆ ತರಬೇತಿ ನೀಡಿದರೆ, ನೇರ ಪ್ರಸಾರದ ಚರ್ಚೆಯಲ್ಲಿ ಅಭ್ಯರ್ಥಿ ತಬ್ಬಿಬ್ಬಾಗುವುದಿಲ್ಲ ಎಂಬುದು ತರಬೇತುದಾರರ ಅಭಿಪ್ರಾಯವಾಗಿತ್ತು.

ಹಿಂದೆ ಜಾರ್ಜ್ ಬುಷ್ ಜೂನಿಯರ್ ಅವರು ಚುನಾವಣಾ ಕಣದಲ್ಲಿದ್ದಾಗ ಬುಷ್ ಆಪ್ತ ಜಾಶ್ ಬಾಲ್ಟೆನ್, ಬುಷ್ ಅವರನ್ನು ಚರ್ಚೆಗೆ ಅಣಿಗೊಳಿಸಿದ್ದರು. ಬಾಸ್ಟನ್‌ ಮೊದಲ ಚರ್ಚೆ ಆಯೋಜನೆಗೊಂಡಿತ್ತು. ಸಾಕಷ್ಟು ಬಾರಿ ಅಣಕು ಸಂವಾದ ನಡೆಸಿ, ತಯಾರಾಗಿದ್ದರೂ ಬಾಸ್ಟನ್ ವಿಶ್ವವಿದ್ಯಾಲಯಕ್ಕೆ ಆಗಮಿಸಿದಾಗ ಬುಷ್ ಆತಂಕಕ್ಕೆ ಒಳಗಾಗಿದ್ದರು.

ಆತಂಕ ನಿವಾರಣೆಗಾಗಿ ಚರ್ಚ್ ಒಂದರ ಪಾದ್ರಿಗೆ ಪೋನುಹಚ್ಚಿ, ಪೋನ್ ಮೂಲಕವೇ ಪ್ರಾರ್ಥನೆ ಸಲ್ಲಿಸಿದ್ದರು. ಸಂವಾದ ಮುಗಿಸಿ ಹೊರಬಂದಾಗ ‘ಏನೇ ಹೇಳಿ, ಚರ್ಚೆಯ ವೇದಿಕೆಯಲ್ಲಿ ನಿರ್ವಾಹಕ ಮತ್ತು ಪ್ರತಿಸ್ಪರ್ಧಿ ತೂರಿಬಿಡುವ ಬಾಣಕ್ಕೆ ಗುರಾಣಿ ಹಿಡಿಯುವುದಂತೂ ಕಷ್ಟ’ ಎನ್ನುತ್ತಾ ನಿಟ್ಟುಸಿರು ಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT