ಸೋಮವಾರ, ಜುಲೈ 26, 2021
24 °C

‘‘ದಲಿತರು ಭೂಮಿ ಹೊಂದುವುದು ಇಂದಿನ ಅಗತ್ಯಗಳಲ್ಲೊಂದು...

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

‘‘ದಲಿತರು ಭೂಮಿ ಹೊಂದುವುದು ಇಂದಿನ ಅಗತ್ಯಗಳಲ್ಲೊಂದು...

*ಊನಾ ಘಟನೆ ಮತ್ತು ಅದರ ನಂತರ ಹುಟ್ಟಿಕೊಂಡ ‘ಅಸ್ತಿತ್ವ ಮತ್ತು ಅಸ್ಮಿತ ಚಳವಳಿ’ಗೆ ಪ್ರೇರಕವಾದ ಅಂಶಗಳು ಯಾವುವು?

ನರೇಂದ್ರ ಮೋದಿ ಅವರು ದೇಶಕ್ಕೆ ಕೊಟ್ಟ ‘ಗುಜರಾತ್‌ ಮಾದರಿ’ ಅಭಿವೃದ್ಧಿಯಿಂದ ಸ್ವತಃ ಗುಜರಾತ್‌ ಜನರೇ ರೋಸಿಹೋಗಿದ್ದರು.  ಬಿಜೆಪಿಯ ಆರ್ಥಿಕ ಫಲಾನುಭವಿಗಳಾಗಿದ್ದ ಮಾಧ್ಯಮಗಳು ವಾಸ್ತವವನ್ನು ಮರೆಮಾಚಿ, ಇಲ್ಲದ್ದನ್ನೆಲ್ಲ ವೈಭವೀಕರಿಸಿದವು. ದಲಿತರು, ರೈತರು, ಮಹಿಳೆಯರ ಮೇಲಿನ ದೌರ್ಜನ್ಯಗಳು, ಸಮಸ್ಯೆಗಳು, ಹೋರಾಟಗಳು, ಪ್ರತಿಭಟನೆಗಳು ಹೆಚ್ಚು ಸುದ್ದಿಯಾಗುತ್ತಲೇ ಇರಲಿಲ್ಲ. ಹಾಗಾಗಿ ವ್ಯವಸ್ಥೆಯ ವಿರುದ್ಧ ತಳ ಸಮುದಾಯಗಳಲ್ಲಿ ಅಸಹನೆ ಕುದಿಯುತ್ತಿತ್ತು.

ಊನಾದಲ್ಲಿ ಸತ್ತ ದನ ಸಾಗಿಸುತ್ತಿದ್ದ ದಲಿತರನ್ನು ಗೋರಕ್ಷಕರು ಅತ್ಯಂತ ಅಮಾನವೀಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಎಳೆದಾಡಿ ಥಳಿಸಿದರು. ಇದರಿಂದಾಗಿ, ಜನರ ಅಸಹನೆಯ ಕಟ್ಟೆ ಒಡೆಯಿತು. ಅಲ್ಲದೆ, ಇಂತಹದ್ದೊಂದು ಚಳವಳಿಗಾಗಿ ಜನ ಕಾದಿದ್ದರು ಕೂಡ. ಇದೇ ಸರಿಯಾದ ಸಮಯ ಎಂದುಕೊಂಡು ಸ್ನೇಹಿತರೆಲ್ಲರೂ ಸೇರಿ ಚಳವಳಿ ಸಂಘಟಿಸಿದೆವು. ಕೆಲವರು ಊನಾಕ್ಕಷ್ಟೆ ಚಳವಳಿ ಸೀಮಿತಗೊಳಿಸುವ ಆಲೋಚನೆಯಲ್ಲಿದ್ದರು. ಆದರೆ, ನಾವು ಭೂ ಹಂಚಿಕೆಯ ಅಗತ್ಯ, ಸರ್ಕಾರದ ನೀತಿಗಳಲ್ಲಿ ಕಾಣೆಯಾಗುತ್ತಿರುವ ಮೀಸಲಾತಿ.

ಉದ್ಯೋಗ ಭದ್ರತೆ, ಎಸ್‌.ಸಿ–ಎಸ್‌.ಟಿ ಉಪಯೋಜನೆ ಹಣದ ದುರ್ಬಳಕೆ, ಬಿಪಿಎಲ್‌ ಕಾರ್ಡ್‌ ಸಮಸ್ಯೆ, ವಸತಿ ಸಮಸ್ಯೆಗಳನ್ನಿಟ್ಟುಕೊಂಡು ಅಜೆಂಡಾ ರೂಪಿಸಿದೆವು. ಇದರಿಂದಾಗಿ ರಾಜ್ಯದಾದ್ಯಂತ ಚಳವಳಿ ಬಹುಬೇಗ ಹಬ್ಬಿತು. ಅದರ ಬೆನ್ನಲ್ಲೇ, ‘ದಲಿತ್ ಅಸ್ಮಿತಾ ಯಾತ್ರೆ’ ಆರಂಭಿಸಿ, ‘ದನದ ಬಾಲ ನೀವೇ ಇಟ್ಟುಕೊಳ್ಳಿ. ನಮಗೆ ಭೂಮಿ ಕೊಡಿ’ ಎಂಬ ಬೇಡಿಕೆ ಇಟ್ಟೆವು. ಸಮಾವೇಶದಲ್ಲಿ ಭಾಗವಹಿಸಿದವರು, ‘ಇನ್ನು ಮುಂದೆ ನಾವು ಸತ್ತ ದನಗಳ ದೇಹ ವಿಲೇವಾರಿ ಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡಿದರು. ಇದರಿಂದಾಗಿ ಸತ್ತ ಪ್ರಾಣಿಗಳ ದೇಹ ಎತ್ತುವವರಿಲ್ಲದೆ, ಇಡೀ ರಾಜ್ಯ ಕೆಲವು ದಿನ ಗುಬ್ಬುನಾರಿತು. ದಲಿತರನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ಈ ಚಳವಳಿ ತೋರಿಸಿಕೊಟ್ಟಿತು.*ಹೋರಾಟದ ನಂತರ ಗುಜರಾತ್‌ನಲ್ಲಿ ಆದ ಬೆಳವಣಿಗೆಗಳೇನು?

ಆರಂಭದಲ್ಲಿ ನಮ್ಮ ಚಳವಳಿಯನ್ನು ಸರ್ಕಾರ ಹಗುರವಾಗಿ ಪರಿಗಣಿಸಿತು. ಆದರೆ, ದಿನದಿಂದ ದಿನಕ್ಕೆ ಹೆಚ್ಚಾದ ಚಳವಳಿಯ ಕಾವು, ಮುಖ್ಯಮಂತ್ರಿ ಆನಂದಿ ಬೆನ್ ಅವರನ್ನು ಗಾದಿಯಿಂದ ಕೆಳಗಿಳಿಯುವಂತೆ ಮಾಡಿತು. ಆಗ ಎಲ್ಲರಿಗೂ ಬಿಸಿ ತಟ್ಟಿತು. ಭೂಮಿ ಹಂಚಿಕೆ ಸೇರಿದಂತೆ, ‘ಅಸ್ಮಿತ ಯಾತ್ರೆ’ಯಲ್ಲಿ ನಾವಿಟ್ಟ ಬೇಡಿಕೆಗಳಿಗೆ ಸ್ಪಂದಿಸಿದ ಸರ್ಕಾರ, ಕೆಲವು ಗ್ರಾಮಗಳಲ್ಲಿ ಭೂಮಿ ಹಂಚಿಕೆಗೆ ಸಂಬಂಧಿಸಿದಂತೆ ನೋಟಿಫಿಕೇಷನ್ ಹೊರಡಿಸಿದೆ. ಕೆಲವೆಡೆ ಭೂಮಿ ಹಂಚಿಕೆಯ ಪ್ರಕ್ರಿಯೆ ನಡೆಯುತ್ತಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ರಾಜ್ಯದಾದ್ಯಂತ 16 ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಮುಂದಾಗಿದೆ. ಪೌರ ಕಾರ್ಮಿಕರ ಉದ್ಯೋಗ ಕಾಯಂಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಚಳವಳಿಯಿಂದ.*ಕೃಷಿಕ್ಷೇತ್ರ ಬಿಕ್ಕಟ್ಟಿನಲ್ಲಿರುವ ದಿನಗಳಲ್ಲಿ ನೀವು ಭೂಮಿ ಹಕ್ಕಿನ ಪ್ರಶ್ನೆ ಎತ್ತಿದ್ದೀರಿ. ಸರ್ಕಾರಗಳು ನಿಮ್ಮ ಹೋರಾಟಕ್ಕೆ ಕಿವಿಗೊಟ್ಟು ಭೂಮಿ ಹಂಚಿಕೆಗೆ ಮುಂದಾಗುತ್ತವೆ ಎಂಬ ವಿಶ್ವಾಸ ಇದೆಯೇ?

ನೀವು ಹೇಳುವುದನ್ನು ನಾನು ಒಪ್ಪುತ್ತೇನೆ. ಆದರೆ, ಭೂಮಿ ಇದ್ದವರ ಮೇಲೆ ದೌರ್ಜನ್ಯಗಳು ನಡೆಯುವುದು ವಿರಳ. ರೈತರ ಆತ್ಮಹತ್ಯೆ ಹಿನ್ನೆಲೆಯಲ್ಲಿ ಅವರ ಕಾಳಜಿಯ ಬಗ್ಗೆಯೂ ನಾನು ಹೋರಾಟ ಮಾಡಿಕೊಂಡು ಬಂದವನು. ಭೂಮಿ ಇದ್ದವರ ಹಾಗೂ ಇಲ್ಲದವರ ಸ್ಥಿತಿಗತಿ, ಸಮಾಜ ಅವರನ್ನು ನೋಡುವ ಪರಿ ಹೇಗಿರುತ್ತದೆ ಎಂಬುದು ನನಗೆ ಗೊತ್ತಿದೆ. ಭೂರಹಿತರ ಸ್ಥಿತಿ ತೀರಾ ಕೆಟ್ಟದಾಗಿದೆ. ಸಮಾಜದಲ್ಲಿ ಭೂಮಿ ಎಂಬುದು ಸ್ವಾಭಿಮಾನದ ಪ್ರಶ್ನೆಯಾಗಿದೆ. ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಕ್ಕೂ ಭೂ ಒಡೆತನಕ್ಕೂ ಸಂಬಂಧವಿದೆ. ಹಾಗಾಗಿ ದಲಿತರು ಭೂಮಿ ಹಕ್ಕು ಹೊಂದುವುದು ಇಂದಿನ ಅಗತ್ಯಗಳಲ್ಲೊಂದು. ಅದಾನಿ, ಅಂಬಾನಿ, ಟಾಟಾ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಮಾಲೀಕರಿಗೆ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಸಾವಿರಾರು ಎಕರೆ ಭೂಮಿಯನ್ನು ಪುಕ್ಕಟೆಯಾಗಿ ನೀಡುವ ಸರ್ಕಾರಗಳಿಗೆ, ದಲಿತರಿಗೆ ನೀಡಲು ಭೂಮಿ ಇಲ್ಲವೇ? ಭೂಮಿ ಇಲ್ಲದಿರುವುದು ಇಂದು ಕೇವಲ ದಲಿತರ ಸಮಸ್ಯೆಯಷ್ಟೆ ಅಲ್ಲ; ಹಿಂದುಳಿದವರ ಸಮಸ್ಯೆಯೂ ಹೌದು. ಹಾಗಾಗಿ ಎಲ್ಲರೂ ಭೂಮಿ ಹಕ್ಕಿಗಾಗಿ ದನಿ ಎತ್ತಿದರೆ, ಭೂ ಸುಧಾರಣೆ ಕಾರ್ಯಕ್ರಮ ಜಾರಿಗೆ ಸರ್ಕಾರಗಳು ಮುಂದಾಗಲೇಬೇಕು.*ಜಾತಿ ವಿನಾಶಕ್ಕೆ ನಿಮ್ಮ ಕಾರ್ಯತಂತ್ರವೇನು?

ಜಾತಿ ವಿನಾಶಕ್ಕೆ ಅಂಬೇಡ್ಕರ್‌ವಾದಕ್ಕಿಂತ ಬೇರೆ ಮದ್ದಿಲ್ಲ. ಈ ನಿಟ್ಟಿನಲ್ಲಿ ಅವರು ಬರೆದ ‘ಜಾತಿ ವಿನಾಶ’ ನಮ್ಮೆಲ್ಲರಿಗೂ ಮಾರ್ಗದರ್ಶಿ. ಅಲ್ಲದೆ, ಜಾತಿ ವಿರುದ್ಧ ದನಿ ಎತ್ತುವ ಹಾಗೂ ಸಮಾನತೆ ಬಯಸುವ ಎಲ್ಲಾ ವಾದಗಳು ಒಂದಾಗಬೇಕಾದ ಅಗತ್ಯವಿದೆ. ಆಗ ಮಾತ್ರ ಜಾತಿಯ ಬೇರುಗಳನ್ನು ಅಲುಗಾಡಿಸಲು ಸಾಧ್ಯ. ಇಂದು ಜಾತಿ ನಿಂದನೆ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿರುವ ದಲಿತ–ದಮನಿತರು ಜಾತಿ ವಿನಾಶಕ್ಕಾಗಿ ‘ಜೈ ಭೀಮ್’ ಎನ್ನುವವರನ್ನು ಬೆಂಬಲಿಸಬೇಕು. ಎಡಪಂಥೀಯರು ‘ಕಾರ್ಮಿಕರ ವಿಮೋಚನೆಗಾಗಿ ಒಂದಾಗಿ’ ಎಂದು ಕರೆ ಕೊಟ್ಟಾಗ ನಾವೂ ಅವರನ್ನು ಬೆಂಬಲಿಸಬೇಕು. ಸಮಾನ ಉದ್ದೇಶಕ್ಕಾಗಿ ಎಲ್ಲರೂ ಒಟ್ಟಾಗಬೇಕು.*ರಾಜಸ್ತಾನ, ಗುಜರಾತ್‌, ಮಹಾರಾಷ್ಟ್ರದಲ್ಲಿ ಪ್ರಬಲ ಜಾತಿಗಳೂ ಮೀಸಲಾತಿಗೆ ಆಗ್ರಹಿಸಿ ಬೀದಿಗಿಳಿದಿವೆ. ಈ ಕುರಿತು ಏನು ಹೇಳುವಿರಿ?

ಉದ್ಯೋಗದಲ್ಲಾಗುತ್ತಿರುವ ಕಡಿತ ಹಾಗೂ ಹೆಚ್ಚುತ್ತಿರುವ ನಿರುದ್ಯೋಗ ಇದಕ್ಕೆ ಪ್ರಮುಖ ಕಾರಣ. ಸಮಸ್ಯೆಗಳನ್ನು ನಿಭಾಯಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿರುವುದು ಮೀಸಲಾತಿ ವಿರುದ್ಧ ದನಿ ಮೊಳಗಲು ಕಾರಣವಾಗಿದೆ. ಅಲ್ಲದೆ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮೀಸಲಾತಿಯನ್ನು ಇಲ್ಲವಾಗಿಸಲು ತೆರೆಮರೆ ಪ್ರಯತ್ನಗಳು ನಡೆಯುತ್ತಲೇ ಇವೆ. ಇದರ ಹಿಂದೆ ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳ ಕುತಂತ್ರವನ್ನು ಅಲ್ಲಗಳೆಯಲಾಗದು.*ನಿಮ್ಮ ಹೋರಾಟವನ್ನು ರಾಜಕೀಯ ಹೋರಾಟನ್ನಾಗಿ ಪರಿವರ್ತಿಸುವ ಆಲೋಚನೆ ಇದೆಯಾ?

ನಾವೀಗ ಮಾಡುತ್ತಿರುವುದು ರಾಜಕೀಯವನ್ನೇ. ಆದರೆ ನಮ್ಮದು ಮತ ರಾಜಕೀಯವಲ್ಲ. ಬದಲಿಗೆ, ಚಳವಳಿ ರಾಜಕೀಯ. ರಾಜಕೀಯದಲ್ಲಿ ಮಾಡಲಾಗದ್ದನ್ನು ಹೋರಾಟದ ಮೂಲಕವೂ ಮಾಡಬಹುದಾಗಿದೆ. ಮತ ರಾಜಕೀಯದ ಬಗ್ಗೆ ನಾನೀಗ ತಲೆ ಕೆಡಿಸಿಕೊಂಡಿಲ್ಲ. ದೊಡ್ಡದೊಂದು ವೇದಿಕೆ ಸೃಷ್ಟಿಸಿ, ಆ ಮೂಲಕ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಕುರಿತು ದನಿ ಎತ್ತುವುದು ಸದ್ಯದ ಅಜೆಂಡಾ. ಕಳೆದೆರಡು ದಶಕಗಳಿಂದ ದಲಿತ ಸಂಘಟನೆಗಳು ಹಾಗೂ ನಾಯಕರು ಕೇವಲ ಸಾಂಸ್ಕೃತಿಕ ಸಮಸ್ಯೆಗಳಿಗೇ ಹೆಚ್ಚು ಒತ್ತು ನೀಡಿದ್ದಾರೆ. ಅದರಿಂದಾಗಿ ನಮ್ಮಲ್ಲೂ ಒಂದಿಷ್ಟು ಅರಿವು ಮೂಡಿದೆ. ಈಗ ಆರ್ಥಿಕ ಸಮಸ್ಯೆಗಳತ್ತ ಗಮನಹರಿಸಬೇಕಾದ ಕಾಲ ಬಂದಿದೆ. ಒಂದೇ ಬಗೆಯ ಸಮಸ್ಯೆಗಳ ವಿರುದ್ಧ ಹೋರಾಡಲು, ನಮ್ಮೊಂದಿಗೆ ಇತರರನ್ನೂ ಒಟ್ಟಿಗೆ ಕರೆದೊಯ್ಯಲು ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಮೊದಲಿಗೆ ದಲಿತರು ತಮ್ಮೊಳಗಿರುವ ವರ್ಗ ತಾರತಮ್ಯವನ್ನು ನಿವಾರಿಸಿಕೊಳ್ಳಬೇಕು. ಸಮಾನ ಉದ್ದೇಶಕ್ಕಾಗಿ ಬೇರೆಯವರ ಜತೆ ಕೈ ಜೋಡಿಸಲು ಸಿದ್ಧರಾಗಬೇಕು.*ದಲಿತ ರಾಜಕಾರಣ ಹಾಗೂ ಪರ್ಯಾಯ ರಾಜಕೀಯ ಕುರಿತು ನಿಮ್ಮ ಅಭಿಪ್ರಾಯ ಏನು?

ಅಂಬೇಡ್ಕರ್ ಹೆಸರಿನಲ್ಲಿ ಹುಟ್ಟಿಕೊಂಡಿರುವ ಪಕ್ಷಗಳು, ಅಂಬೇಡ್ಕರ್‌ವಾದದ ಹೆಸರಿನಲ್ಲೇ ಮಂಕುಬೂದಿ ಎರಚಿಕೊಂಡು ಬರುತ್ತಿವೆ. ಅಂಬೇಡ್ಕರ್‌ವಾದ ಹಾಗೂ ಮನು(ಹಿಂದೂ)ವಾದ ಎಂದಿಗೂ ಜೊತೆಯಾಗಿ ಸಾಗದು. ಆದರೆ, ದೇಶದಲ್ಲಿ ‘ದಲಿತ ಬ್ರಾಂಡ್’ ಎನಿಸಿಕೊಂಡಿರುವ ಪಕ್ಷಗಳು ಮನುವಾದಿಗಳ ಸಖ್ಯದಲ್ಲೇ ದಲಿತರ ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ. ಗುಜರಾತ್‌ನಲ್ಲಿ ದಲಿತರು ಸರ್ಕಾರ ರಚಿಸಿ ಆಳುವಷ್ಟು ಪ್ರಮಾಣದಲ್ಲಿಲ್ಲ. ಆದರೆ, ಪ್ರಬಲ ಚಳವಳಿಯ ಮೂಲಕ ಪರ್ಯಾಯ ರಾಜಕಾರಣ ಮಾಡಬಹುದಾಗಿದೆ. ಅದೇ ಪಂಜಾಬ್‌ನಲ್ಲಿ ಶೇ 32ರಷ್ಟು ದಲಿತರಿದ್ದಾರೆ. ಆದರೆ, ಅಲ್ಲಿ ಹುಟ್ಟಿಕೊಂಡ ಚಳವಳಿಗಳು ಹಾಗೂ ರಾಜಕೀಯ ಪಕ್ಷಗಳು, ಹಸಿದ ಜನರಿಗೆ ಊಟ ಕೊಡಿಸಲಿಲ್ಲ. ನಿರ್ಗತಿಕರಿಗೆ ಸೂರು ನೀಡಲು ಶ್ರಮಿಸಲಿಲ್ಲ. ದಶಕಗಳಿಂದ ‘ಜಿಂದಾಬಾದ್’ ಎಂಬ ಘೋಷಣೆಯನ್ನಷ್ಟೆ ಕೊಟ್ಟವು. ಅದೇ ಅವರ ಆರ್ಥಿಕ ಸಮಸ್ಯೆಗಳತ್ತ ಗಮನ ಹರಿಸಿದ್ದರೆ, ಇಂದು ಅಲ್ಲಿನ ದಲಿತರ ಚಿತ್ರಣವೇ ಬದಲಾಗುತ್ತಿತ್ತು. ಈ ಎಲ್ಲ ವೈಫಲ್ಯಗಳಿಂದಾಗಿ ನೆನ್ನೆ ಮೊನ್ನೆ ಹುಟ್ಟಿಕೊಂಡ ‘ಆಮ್‌ ಆದ್ಮಿ ಪಕ್ಷ’ ಪಂಜಾಬ್‌ನಲ್ಲಿ ಅಧಿಕಾರದ ಗದ್ದುಗೆಯ ಕನಸು ಕಾಣುವಷ್ಟರ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು. ಇನ್ನು ಉತ್ತರಪ್ರದೇಶದಲ್ಲಿ ಕಾನ್ಷಿರಾಂ ನಿಧನದ ಬಳಿಕ, ಬಹುಜನ ಸಮಾಜ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನುಸುಳಿದ ಮನುವಾದಿಗಳು, ಆ ಪಕ್ಷವನ್ನು ಎಲ್ಲಿಗೆ ತಂದು ನಿಲ್ಲಿಸಿದ್ದಾರೆ ಎಂಬುದು ನಮ್ಮ ಕಣ್ಣ ಮುಂದಿದೆ.* ಮುಂದಿನ ಹೋರಾಟದ ಬಗ್ಗೆ ಹೇಳಿ?

ದೇಶದ ಗಮನ ಸೆಳೆದಿರುವ ನಮ್ಮ ಚಳವಳಿಯನ್ನು ದೇಶದಾದ್ಯಂತ ವಿಸ್ತರಿಸುವ ಆಲೋಚನೆ ಇದೆ. ಅಲ್ಲದೆ, ನಮ್ಮ ಹೋರಾಟದಿಂದ ಸ್ಫೂರ್ತಿಗೊಂಡು ಕೆಲ ರಾಜ್ಯಗಳ ಪ್ರಗತಿಪರರು ತಮ್ಮ ರಾಜ್ಯಗಳಲ್ಲಿ ಸಭೆ, ಸಮಾರಂಭಗಳನ್ನು ಆಯೋಜಿಸಿ ನನ್ನನ್ನು ಆಹ್ವಾನಿಸಿದ್ದಾರೆ. ಈಗಾಗಲೇ ದೆಹಲಿ, ಮುಂಬೈಗೆ ಹೋಗಿ ಬಂದಿದ್ದೇನೆ. ಇದೀಗ ‘ಚಲೋ ಉಡುಪಿ’ ಜಾಥಾದ ಸಮಾರೋಪ ಸಮಾರಂಭಕ್ಕಾಗಿ ಕರ್ನಾಟಕಕ್ಕೆ ಬಂದಿದ್ದೇನೆ. ಮುಂದೆ, ಕೇರಳ, ಉತ್ತರಪ್ರದೇಶ, ಪಂಜಾಬ್‌ನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದೇನೆ. ಅಲ್ಲದೆ, ಅಧಿಕಾರದ ದೃಷ್ಟಿಯಿಂದಲು ನಾವು ಸಂಘಟಿತರಾಗಬೇಕಾದ ಅಗತ್ಯವಿರುವುದರಿಂದ ‘ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್’ ಎಂಬ ಸಂಘಟನೆ ಹುಟ್ಟು ಹಾಕಲಿದ್ದೇವೆ. ಇದರಿಂದಾಗಿ ರಾಷ್ಟ್ರಮಟ್ಟದಲ್ಲಿ ಸಂಘಟನೆ ಸುಲಭ.*ಊನಾ ಚಳವಳಿಗೂ ಮುಂಚೆ ಜಿಗ್ನೇಶ್ ಏನಾಗಿದ್ದರು? ಕುಟುಂಬದ ಹಿನ್ನೆಲೆ ಏನು?

ನಾನು ವಕೀಲಿಕೆ ಪಾಕ್ಟೀಸ್‌ ಮಾಡುತ್ತಿದ್ದೆ. ಕಾಲೇಜು ದಿನಗಳಿಂದಲೇ ಕಾರ್ಮಿಕ ಮತ್ತು ದಲಿತ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದೆ. ರೈತ ಹಾಗೂ ದಲಿತರನ್ನು ಸಂಘಟಿಸಿ ಹೋರಾಟಗಳನ್ನು ಮಾಡುತ್ತಿದ್ದೆ. ನಾನೊಂದು ರೀತಿಯಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಬೀದಿ ಹೋರಾಟಗಾರ. ವಿದ್ಯಾರ್ಥಿ ದೆಸೆಯಿಂದಲೇ ಚಳವಳಿಗಳ ನಂಟು ಇತ್ತು. ನನ್ನ ಚಟುವಟಿಕೆಗಳಿಗೆ ಮನೆಯವರ ಸಂಪೂರ್ಣ ಬೆಂಬಲವಿದೆ. ಮನೆಯೇ ನನಗೆ ಕಚೇರಿ ಕೂಡ. ಜನ ಬರುತ್ತಲೇ ಇರುತ್ತಾರೆ. ಈಗ ಪೊಲೀಸರೂ ಮನೆಯತ್ತಲೇ ಗಮನ ನೆಟ್ಟಿದ್ದಾರೆ. ಚಳವಳಿ ಆರಂಭವಾದಾಗಿನಿಂದ ಹಲವು ಸಲ ನನ್ನನ್ನು ಬಂಧಿಸಿದ್ದಾರೆ. ಇತ್ತೀಚೆಗೆ ಇದ್ದಕ್ಕಿದ್ದಂತೆ ಬಂಧಿಸಿ, ಯಾರಿಗೂ ಗೊತ್ತಾಗದ ಸ್ಥಳದಲ್ಲಿ ಒಂದೆರಡು ದಿನ ಇರಿಸಿ ಮತ್ತೆ ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.