ಸೋಮವಾರ, ಜುಲೈ 26, 2021
23 °C

ಸಾಮಾಜಿಕ ನ್ಯಾಯಕ್ಕೆ ಮೊರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಾಜಿಕ ನ್ಯಾಯಕ್ಕೆ ಮೊರೆ

ಮೈಸೂರು: ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಜಾತಿ, ಧರ್ಮ, ತಂದೆ– ತಾಯಿ ಹೆಸರು, ಆದಾಯ ನಮೂದಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ಅರ್ಹತೆ ಇದ್ದರೂ ಕೆಲವರು ಅವಕಾಶ ವಂಚಿತರಾಗುವಂತೆ ಮಾಡಿದ್ದು, ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಧ್ವನಿ ಎದ್ದಿದೆ.

ಜಾತಿ, ಧರ್ಮ, ತಂದೆ– ತಾಯಿ ಹೆಸರು ಗೊತ್ತಿಲ್ಲದವರ ಮೊರೆಯನ್ನು ನೇಮಕಾತಿ ಸಂಸ್ಥೆಗಳು (ಕೆಪಿಎಸ್‌ಸಿ, ಕೆಇಎ ಮೊದಲಾದವು) ಪರಿಗಣಿಸುತ್ತಿಲ್ಲ. ಇದರಿಂದಾಗಿ ತಂದೆ–ತಾಯಿ ಗೊತ್ತಿಲ್ಲದವರು, ದೇವದಾಸಿಯರ ಮಕ್ಕಳು, ಸೇವಾ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುವ ಅನಾಥ ಮಕ್ಕಳ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಅವಕಾಶ ಕಲ್ಪಿಸುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಬೇಕಾದ ಪರಿಸ್ಥಿತಿ ಬಂದೊದಗಿದೆ ಎಂಬುದು ಅಭ್ಯರ್ಥಿಗಳ ಅಳಲು.

‘ಒಡನಾಡಿ’ ಸೇವಾಸಂಸ್ಥೆಯ ಪರಶುರಾಮ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಜಾತಿ, ಆದಾಯ ಕಾಲಂ ತುಂಬದಿದ್ದರೆ ಅರ್ಜಿ ‘ಅಪ್‌ಲೋಡ್‌’ ಆಗುವುದಿಲ್ಲ. ಜಾತಿ ಗೊತ್ತಿಲ್ಲದ ಕಾರ ಣಕ್ಕೆ, ಅರ್ಹತೆ ಇದ್ದರೂ ನಮ್ಮ ಸಂಸ್ಥೆಯ ಇಬ್ಬರು ಯುವತಿಯರಿಗೆ ಅವಕಾಶ ಕೈ ತಪ್ಪುವ ಹಂತ ತಲುಪಿತ್ತು. ಹೈಕೋರ್ಟ್‌ ನಲ್ಲಿ ಇದನ್ನು ಪ್ರಶ್ನಿಸಿ ಅವಕಾಶ ಪಡೆದುಕೊಂಡಿದ್ದೇವೆ. ಈಗ ಅವರಿಂದ ಕೆಇಎ ಪ್ರತ್ಯೇಕವಾಗಿ ಅರ್ಜಿ ಸ್ವೀಕರಿಸಿದೆ’ ಎಂದು ತಿಳಿಸಿದರು.

‘ಜಾತಿ, ಧರ್ಮ ಮೊದಲಾದ ಕಾಲಂಗಳನ್ನು ತುಂಬಲೇಬೇಕು ಎಂಬುದು ಸಂವಿಧಾನದ ಆಶಯಕ್ಕೆ ವಿರುದ್ಧ. ತಂದೆ–ತಾಯಿ ಯಾರು ಎಂಬುದೇ ಗೊತ್ತಿಲ್ಲ ದಿರುವ ಮಕ್ಕಳಿಗೆ ಜಾತಿ ಹೇಗೆ ಗೊತ್ತಿರುತ್ತದೆ? ಇಂಥವರಿಗಾಗಿ ಜಾತಿ, ಧರ್ಮ, ಆದಾಯ ಮೊದಲಾದ ಕಾಲಂನಲ್ಲಿ ಯಾವುದೂ ಇಲ್ಲ (ನಿಲ್) ಎಂದು ನಮೂದಿಸಲು ‘ಆಯ್ಕೆ’ ಇರಬೇಕು. ಈ ಸಮುದಾಯದವರಿಗೆ ಪ್ರತ್ಯೇಕ ಮೀಸ ಲಾತಿ ಕಲ್ಪಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು’ ಎಂದರು.

ಇಂತಹ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ಮೈಸೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ಐದು ವಿ.ವಿ.ಗಳು ಕೋರ್ಸ್‌ಗಳಲ್ಲಿ ಪ್ರತ್ಯೇಕ ಮೀಸಲಾತಿ ಕಲ್ಪಿಸಿವೆ. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸೇರಿದಂತೆ ವಿವಿಧ ಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಗಳಲ್ಲಿ ಅರ್ಹತೆ ಇದ್ದರೂ ಅವಕಾಶ ಸಿಕ್ಕಿರಲಿಲ್ಲ. ಹೈಕೋರ್ಟ್‌ ಆದೇಶ ಅಭ್ಯರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.

‘ಸರ್ಕಾರವು ಸಾಮಾಜಿಕ ಸಮೀಕ್ಷೆ ನಡೆಸಿ ಇಂಥ ಅಭ್ಯರ್ಥಿಗಳನ್ನು ಗುರುತಿಸಬೇಕು. ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ, ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಮೀಸಲಾತಿ ಕಲ್ಪಿಸಿ ಹಿತ ಕಾಯಬೇಕು’ ಎಂದು  ಹೇಳಿದರು.

ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಸಿ.ಎಂ.ಜಗದೀಶ್, ‘ತಂದೆ–ತಾಯಿ ಹೆಸರು ಜಾತಿ, ಧರ್ಮ ಭರ್ತಿ ಮಾಡುವುದನ್ನು ಕಡ್ಡಾಯ ಮಾಡುವುದು ತಪ್ಪು. ಜಾತಿ, ಧರ್ಮದ ಹೆಸರಿನಲ್ಲಿ ಅವಕಾಶ ನಿರಾಕರಿಸುವಂತಿಲ್ಲ. ಆನ್‌ಲೈನ್‌ ಅರ್ಜಿ ‘ಅಪ್ಲಿಕೇಷನ್‌ ಸಾಫ್ಟ್‌ವೇರ್‌’ ಸಿದ್ಧಪಡಿಸು ವಾಗಲೇ ಈ ಬಗ್ಗೆ ಗಮನಹರಿಸಬೇಕಿತ್ತು ಎಂದರು.

***

ಕೃಪಾಂಕ ನೀಡಿ: ದೇವನೂರ ಮಹಾದೇವ

‘ಸರ್ಕಾರವೇ ಈ ವಿಷಯದಲ್ಲಿ ಸಂವೇದನಾಶೀಲತೆ ತೋರಬೇಕಿತ್ತು. ತಂದೆ–ತಾಯಿ ತಿಳಿಯದ ಮಕ್ಕಳನ್ನು ಸರ್ಕಾರವೇ ಪೋಷಿಸಬೇಕು. ಅವರಿಗೆ 10 ಕೃಪಾಂಕ ನೀಡಬೇಕು’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿದವರಿಗೆ ನೀಡುತ್ತಿರುವ ಕೃಪಾಂಕಕ್ಕಿಂತ ಸ್ವಲ್ಪ ಜಾಸ್ತಿಯೇ ನೀಡಬೇಕು. ಜಾತಿ, ಧರ್ಮ ಕಾಲಂಗಳಲ್ಲಿ ‘ಭಾರತೀಯ’ ಎಂದು ನಮೂದಿಸುವುದಕ್ಕಿಂತ ದೊಡ್ಡದು ಯಾವುದು ಇಲ್ಲ. ಹೀಗೆ ಬರೆದುಕೊಂಡವರಿಗೆ ಆದ್ಯತೆ ನೀಡದಿದ್ದರೆ ಹೇಗೆ? ಜಾತಿ, ಧರ್ಮ ಬರೆದುಕೊಂಡಿರುವವರೇ ಭಾರತವನ್ನು ಛಿದ್ರ ಮಾಡಿದ್ದಾರೆ ಎಂದರು.

‘ತಂದೆ ಯಾರು ಎಂದು ತಿಳಿಯದವರು ನಿರ್ದಿಷ್ಟ ಕಾಲಂನಲ್ಲಿ ತಾಯಿ ಹೆಸರು ಬರೆದರೆ ತಿರಸ್ಕರಿಸುವುದು ತಾರ್ಕಿಕವಾಗಿ ತಪ್ಪು. ಜಾತಿ ನಮೂದಿಸದಿದ್ದರೂ ಅರ್ಜಿ ಸ್ವೀಕರಿಸಿ ಎಂದು ಹೈಕೋರ್ಟ್‌ ಆದೇಶಿಸಿರುವುದು ಸಮಾಧಾನ ಮೂಡಿಸಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.