7

ನಮ್ಮ ದೇಶಕ್ಕೆ ಬೇಕೇ ಇಷ್ಟು ರಜೆಗಳು...?

Published:
Updated:
ನಮ್ಮ ದೇಶಕ್ಕೆ ಬೇಕೇ ಇಷ್ಟು ರಜೆಗಳು...?

ಕಳೆದ ಬುಧವಾರ ನನ್ನನ್ನು ಕಚೇರಿಗೆ ಕರೆದುಕೊಂಡು ಬರುತ್ತಿದ್ದ ಉಬರ್‌ ಕಂಪೆನಿಯ ಕಾರು ಚಾಲಕ ‘ಏನು ಸಾರ್‌, ರಜೆಗಳು ಯಾವಾಗ ಮುಗಿಯುತ್ತವೆ’ ಎಂದು ಕೇಳಿದ. ಆತ ಮಲೆಯಾಳಿ. ಹರುಕು ಮುರುಕು ಕನ್ನಡ ಬರುತ್ತಿತ್ತು. ‘ಏನಾಯಿತು? ರಸ್ತೆಗಳು ಎಷ್ಟು ಖಾಲಿ ಖಾಲಿ ಇವೆ, ಒಳ್ಳೆಯದೇ ಅಲ್ಲವೇ’ ಎಂದೆ. ‘ಹೌದು ಸಾರ್‌ ರಸ್ತೆಗಳು ಖಾಲಿ ಖಾಲಿ ಆಗಿವೆ. ನಾನು ನಿಮ್ಮನ್ನು ಇಪ್ಪತ್ತು ನಿಮಿಷದಲ್ಲಿ ಕಚೇರಿಗೆ ಬಿಟ್ಟುಬಿಡುವೆ.

ಆದರೆ, ನಿಮ್ಮದು ಇವೊತ್ತಿನ ಮೊದಲ ಬಾಡಿಗೆ. ಸಂಜೆವರೆಗೆ ಮತ್ತೆ ಬಾಡಿಗೆ ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಇದು ಸತತವಾಗಿ ಐದನೇ ದಿನ. ಹೀಗೆಯೇ ನಡೆದಿದೆ. ನಮ್ಮ ದೇಶದಲ್ಲಿ ತುಂಬ ರಜೆಗಳು ಅಲ್ಲವೇ ಸಾರ್‌’ ಎಂದು ಮತ್ತೆ ಕೇಳಿದ. ‘ನೀವೇನು ಸಾರ್‌ ನೌಕರಿ ಮಾಡುತ್ತೀರಿ ಎಂದು ಕಾಣುತ್ತದೆ. ಕೆಲಸ ಮಾಡಿದರೂ ಸಂಬಳ ಬರುತ್ತದೆ, ಮಾಡದಿದ್ದರೂ ಬರುತ್ತದೆ (!) ನೌಕರಿ ಮಾಡುವ ನಿಮ್ಮಂಥವರಿಗೆ ಯಾವಾಗಲೂ ಸಮಸ್ಯೆ ಇಲ್ಲ. ನಾನು ನನ್ನ ಉಪಜೀವನವನ್ನು ನಿತ್ಯವೂ ಗಳಿಸಬೇಕು. ಇಂದು ಕಳೆದುಕೊಂಡ ಆದಾಯವನ್ನು ನಾಳೆ  ಗಳಿಸಲು ಆಗುವುದಿಲ್ಲ’ ಎಂದು ಗೋಳು ತೋಡಿಕೊಂಡ.

ಹೌದಲ್ಲವೇ? ಆತ ಇಂದು ಕಳೆದುಕೊಂಡ ಆದಾಯವನ್ನು ನಾಳೆ ಹೇಗೆ ಗಳಿಸಲು ಸಾಧ್ಯ? ಅವನಂಥವರು ಎಷ್ಟು ಮಂದಿ ಇಲ್ಲ?

ಈ ತಿಂಗಳು ಐದು ಭಾನುವಾರ, ಒಂದು ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ (ಬ್ಯಾಂಕುಗಳಿಗೆ) ಸೇರಿ ಒಟ್ಟು 12 ರಜೆಗಳು ಬಂದಿವೆ. ಐದು ಭಾನುವಾರದಲ್ಲಿ ಎರಡು ಸರ್ಕಾರಿ ರಜೆಗಳೂ ಸೇರಿಕೊಂಡಿವೆ. ಒಂದು ಗಾಂಧಿ ಜಯಂತಿ, ಇನ್ನೊಂದು  ವಾಲ್ಮೀಕಿ ಜಯಂತಿ. ಅಕಸ್ಮಾತ್‌ ಈ ಎರಡೂ ರಜೆಗಳು ವಾರದ ದಿನಗಳಲ್ಲಿ ಬಂದಿದ್ದರೆ ಈ ತಿಂಗಳಲ್ಲಿನ ರಜೆಗಳ ಸಂಖ್ಯೆ 14ಕ್ಕೆ ಏರುತ್ತಿತ್ತು. ಅಂದರೆ ಒಂದು ತಿಂಗಳಲ್ಲಿ ಕೇವಲ 15 ದಿನ ಕೆಲಸ ಮಾಡಿ ಒಂದು ತಿಂಗಳ ಸಂಬಳವನ್ನು ತೆಗೆದುಕೊಂಡಂತೆ ಆಗುತ್ತಿತ್ತು. ಈಗಲೂ ಬಹಳ ವ್ಯತ್ಯಾಸವೇನೂ ಇಲ್ಲ.

ಸರ್ಕಾರ ಅಥವಾ ಅರೆಸರ್ಕಾರಿ ಕಚೇರಿಗಳಲ್ಲಿ ಅಂದಂದಿನ ಕೆಲಸವನ್ನು ಅಂದಂದೇ ಮಾಡಬೇಕಿಲ್ಲ. ಆದರೆ, ಬ್ಯಾಂಕುಗಳಂಥ ಸಂಸ್ಥೆಗಳಲ್ಲಿ  ಅಂದಂದಿನ ಬಹುಪಾಲು ಕೆಲಸವನ್ನು ಅಂದಂದೇ ಮಾಡಿ ಮುಗಿಸಬೇಕಾಗುತ್ತದೆ. ಐದು ದಿನಗಳ ಕಾಲ ಸಾಲು ರಜೆ ಬಂದರೆ ಎಲ್ಲ ಬ್ಯಾಂಕಿಂಗ್‌ ಚಟುವಟಿಕೆ ಸ್ಥಗಿತಗೊಂಡು ಬಿಡುತ್ತದೆ. ನಮ್ಮದು ಇನ್ನೂ ಅಭಿವೃದ್ಧಿಶೀಲ ರಾಷ್ಟ್ರ. ಇಷ್ಟು ಸಾಲು ಸಾಲು ರಜೆಗಳನ್ನು ಆನಂದಿಸಲು ನಮಗೆ ಅವಕಾಶ ಇದೆಯೇ ಎಂಬ ಪ್ರಶ್ನೆಗೆ ಸಕಾರಾತ್ಮಕ ಉತ್ತರ ಕೊಡುವುದು ಕಷ್ಟ.

ಕಳೆದ ವರ್ಷ ಮಾರ್ಚ್‌ನಲ್ಲಿ ಇದೇ ರೀತಿ ಬ್ಯಾಂಕುಗಳಿಗೆ ಐದು ಸಾಲು ರಜೆಗಳು ಬಂದಿದ್ದುವು. ಸಾಲು ಸಾಲು ರಜೆಗಳು ಬಂದರೆ ಆಗುವ ಆರ್ಥಿಕ ತೊಂದರೆ ಕುರಿತು ಅಸೋಚಾಂ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು. ಇಂಥ ರಜೆಗಳಿಂದ ದೇಶದ ಆರ್ಥಿಕತೆಗೆ ಆಗುವ ನಷ್ಟ ₹10,000 ಕೋಟಿ ಎಂದು ಅದು ಅಂದಾಜು ಮಾಡಿತ್ತು. ಏನಾದರೂ ಮಾಡಿ ಬ್ಯಾಂಕುಗಳ ರಜೆ ಕಡಿತ ಮಾಡಬೇಕು ಎಂದು ರಿಜರ್ವ್‌ ಬ್ಯಾಂಕಿಗೆ ಮನವಿ ಮಾಡಿಕೊಂಡಿತ್ತು. ಆದರೆ, ಏನೂ ಪ್ರಯೋಜನ ಆಗಲಿಲ್ಲ. ಬಹುಶಃ ಅದೇ ಕಾರಣಕ್ಕಾಗಿ ಅಸೋಚಾಂ ಈ ಸಾರಿ ಸುಮ್ಮನೆ ಇದ್ದಿರಬೇಕು!

ಭಾರತ ಬಹುಸಮುದಾಯಗಳು ಇರುವ ಒಂದು ದೇಶ. ಇಲ್ಲಿ ಹಬ್ಬ ಹರಿದಿನಗಳು ಬಹಳ. ಒಟ್ಟು ರಜೆಗಳನ್ನು ಲೆಕ್ಕ ಹಾಕಿದರೆ ಹಿಂದೂಗಳ ಹಬ್ಬಗಳೇ ಜಾಸ್ತಿ ಇವೆ. ಅಧಿಕೃತವಾಗಿ ಕೇಂದ್ರ ಸರ್ಕಾರ ಕೊಡುವುದು 17 ರಜೆಗಳನ್ನು. ಆದರೆ, ರಾಜ್ಯಗಳಲ್ಲಿ ಭಿನ್ನ ಭಿನ್ನ ಸಮುದಾಯಗಳನ್ನು ಸಂತೃಪ್ತಗೊಳಿಸಲು ಆಯಾ ಕಾಲಘಟ್ಟದ ಸರ್ಕಾರಗಳು ಹೆಚ್ಚುವರಿ ರಜೆಗಳನ್ನು ಘೋಷಿಸಿವೆ.

ಆಯಾ ರಜೆಗಳಲ್ಲಿ ಆಯಾ ಧರ್ಮಗುರುಗಳನ್ನು ನಾವು ನೆನಪಿಸಿಕೊಳ್ಳುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ರಜೆಯಂತೂ ಸಿಕ್ಕೇ ಸಿಗುತ್ತದೆ. ಹಾಗೆ ರಜೆ ಕೊಡುವುದು ಆಯಾ ಸಮುದಾಯಗಳನ್ನು ಸಮಾಧಾನ ಮಾಡುವ ಒಂದು ವಿಧಾನ ಎಂದು ಸರ್ಕಾರಗಳು ಭಾವಿಸಿವೆ. ಅಂದು ತಮಗೆ ರಜೆ ಇರುವುದು ತಮ್ಮ ಹಕ್ಕು ಎಂದು ಸಮುದಾಯಗಳೂ ಭಾವಿಸಿವೆ!

ರಾಷ್ಟ್ರನಾಯಕರ ಜಯಂತಿಯನ್ನೇ ಆಚರಿಸುವುದನ್ನು ಮರೆತು ಬಿಟ್ಟಿರುವ ನಾವು ಅವರ ಜೊತೆಗೆ ನಮ್ಮ ನಮ್ಮ ಧರ್ಮಗುರುಗಳ ಜಯಂತಿಯನ್ನೂ ಸರ್ಕಾರವೇ ಆಚರಿಸಬೇಕು ಎಂದು ಬಯಸುತ್ತೇವೆ. ಸರ್ಕಾರವೂ ಇಂಥ ಎಲ್ಲ ಗೊಡವೆಗಳನ್ನು ತನ್ನ ಮೈಮೇಲೆ ಹಾಕಿಕೊಂಡು ತಾನೇ ಜಯಂತಿ ಆಚರಿಸಲು ಮುಂದಾಗುತ್ತಿದೆ. ಇದೆಲ್ಲ ಅಸ್ಮಿತೆಯ ರಾಜಕಾರಣದಿಂದ ಹುಟ್ಟಿಕೊಂಡ ಸಮಸ್ಯೆ. ನಾವು ನಮ್ಮ ನಮ್ಮ ಧರ್ಮಗುರುಗಳ ಜಯಂತಿ ಹೊರತುಪಡಿಸಿ ಉಳಿದ ಧರ್ಮಗುರುಗಳ ಜಯಂತಿ ಆಚರಣೆಯಲ್ಲಿ ತೊಡಗುವುದು ಬಹಳ ವಿರಳ. ದೇಶದಲ್ಲಿ ವಿವಿಧತೆಯಲ್ಲಿ ಏಕತೆ ಇರುವಷ್ಟೇ ಭಿನ್ನತೆಯೂ ಇದೆಯಲ್ಲವೇ? ಅವರವರ ಹಬ್ಬಗಳನ್ನು  ಆಚರಿಸಲು ಇಲ್ಲಿ ಎಲ್ಲರಿಗೂ ಹಕ್ಕು ಇದೆ.

ಅದಕ್ಕಾಗಿ ಅವರಿಗೆ ರಜೆಯೂ ಬೇಕಿರಬಹುದು. ಆದರೆ, ನಾನು ಆಚರಿಸದ ಹಬ್ಬಕ್ಕೆ ನಾನೇಕೆ ರಜೆ ಪಡೆಯಬೇಕು? ಒಂದು ಹಬ್ಬಕ್ಕೆ ಎಷ್ಟು ರಜೆ ಕೊಡಬಹುದು? ದಸರಾ ಹಬ್ಬಕ್ಕೆ ಮಹಾನವಮಿ ಅಮಾವಾಸ್ಯೆ, ಆಯುಧ ಪೂಜೆ ಮತ್ತು ವಿಜಯ ದಶಮಿ ಎಂದು ಮೂರು ರಜೆಗಳು ಇವೆ. ದೀಪಾವಳಿ ಹಬ್ಬದಲ್ಲಿಯೂ ನರಕ ಚತುರ್ದಶಿ, ಪಾಡ್ಯ ಎಂದು ಎರಡು ರಜೆಗಳು ಇವೆ. ದಸರಾ ಹಬ್ಬಕ್ಕೆ ಅಮಾವಾಸ್ಯೆಗೆ ಏಕೆ ರಜೆ? ಆಯುಧ ಪೂಜೆಗೆ ರಜೆ ಇರಲಿ, ವಿಜಯದಶಮಿಗೆ ಏಕೆ? ದೀಪಾವಳಿಗೆ ಒಂದು ರಜೆ ಇರಲಿ, ಎರಡು ರಜೆ ಏಕೆ? ನಾವು ಇಂಥ ಪ್ರಶ್ನೆಗಳನ್ನು ಹಾಕಿಕೊಂಡರೆ ಉತ್ತರಗಳು ಸಿಗಬಹುದು. ರಜೆ ವಿಚಾರದಲ್ಲಿ ನಮಗೆ ಪ್ರಶ್ನೆ ಹಾಕುವುದೇ ಬೇಡವಾಗಿದೆ. ಏಕೆಂದರೆ ಕಚೇರಿ ಕೆಲಸ ತಪ್ಪಿಸಿಕೊಳ್ಳಲು ಅದಕ್ಕಿಂತ ಉತ್ತಮ ಉಪಾಯ ಇನ್ನೊಂದು ಇಲ್ಲ ಎಂದು ನಮಗೆ ಗೊತ್ತಿದೆ! ವಾರದ ಕೊನೆಯಲ್ಲಿ ರಜೆ ಬಂದರಂತೂ ಅದರ ಹಿಂದಿನ ಮತ್ತು ಮುಂದಿನ ಒಂದು ದಿನವೂ ಕಚೇರಿಗಳಲ್ಲಿ ಕೆಲಸ ನಡೆಯುವುದಿಲ್ಲ.

ಇಷ್ಟು ರಜೆಗಳು ಇರಬೇಕೇ ಎಂದು ಚರ್ಚೆ ನಡೆದಿರುವುದು ಇಂದು ನಿನ್ನೆಯಿಂದಲೇನೂ ಅಲ್ಲ. ಭಾರತ ಮತ್ತು ಕೊಲಂಬಿಯಾ ದೇಶಗಳಲ್ಲಿ ಅತಿ ಹೆಚ್ಚು ಅಂದರೆ 17 ರಜೆಗಳು ಇವೆ. ನಮ್ಮನ್ನು ನೂರಾರು ವರ್ಷ ಆಳಿದ ಬ್ರಿಟನ್‌ನಲ್ಲಿ ಇರುವುದು ಎಂಟು ರಜೆಗಳು ಮಾತ್ರ. ಜಗತ್ತಿನಲ್ಲಿ ಅತಿ ಕಡಿಮೆ ರಜೆ ಇರುವುದು ಮೆಕ್ಸಿಕೊ ದೇಶದಲ್ಲಿ. ಅಲ್ಲಿ ಏಳು ರಜೆಗಳು ಮಾತ್ರ ಇವೆ. ಭಾರತದಲ್ಲಿ ಹೇಗೆ ಬೇಕೆಂದರೆ ಹಾಗೆ ರಜೆಗಳನ್ನು ಘೋಷಿಸುವ ಪದ್ಧತಿ ಇದೆ. ಯಾರಾದರೂ ರಾಷ್ಟ್ರನಾಯಕರು ನಿಧನರಾದರೂ, ತೀರಾ ಈಚಿನವರೆಗೆ, ನಮಗೆ ಒಂದು ರಜೆ ಸಿಗುತ್ತಿತ್ತು. ರಾಷ್ಟ್ರನಾಯಕರು ನಿಧನರಾದರೆ ‘ರಜೆ ಘೋಷಣೆಯಾಯಿತೇ’ ಎಂದು ಪತ್ರಿಕಾ ಕಚೇರಿಗೆ ಅನೇಕ ಕರೆಗಳು ಬರುತ್ತಿದ್ದುವು!

ಇಂಗ್ಲೆಂಡಿನಲ್ಲಿ 2012ರಲ್ಲಿ ರಾಜಪ್ರಭುತ್ವದ ಅಧಿಕಾರ ಗ್ರಹಣದ ವಜ್ರಮಹೋತ್ಸವ ಆಚರಣೆಗಾಗಿ ಬ್ಯಾಂಕುಗಳಿಗೆ ಅಧಿಕೃತ ರಜೆಗಳ ಹೊರತಾಗಿ ಒಂದು ದಿನ ಹೆಚ್ಚುವರಿ ರಜೆ ಕೊಡಲಾಗಿತ್ತು. ಹಾಗೆ ರಜೆ ಕೊಡುವುದರಿಂದ ಬೊಕ್ಕಸಕ್ಕೆ 2.3 ಶತಕೋಟಿ ಪೌಂಡ್‌ ನಷ್ಟವಾಗುತ್ತದೆ ಎಂದು ಲೆಕ್ಕ ಹಾಕಲಾಗಿತ್ತು. ರಜೆ ಕೊಡಬೇಕೇ ಕೊಡಬಾರದೇ ಎಂದು ದೀರ್ಘ ಚರ್ಚೆಯೂ ಆಗ ನಡೆದಿತ್ತು.

ನಮ್ಮಲ್ಲಿ ಅಂಥ ಚರ್ಚೆ ನಡೆದುದು ಬಹಳ ವಿರಳ. ಚರ್ಚೆ ನಡೆದರೂ ಈಗ ಕೊಟ್ಟಿರುವ ರಜೆಗಳನ್ನು ರದ್ದು ಮಾಡುವುದು ಬಹಳ ಕಷ್ಟ. ಅದಕ್ಕೆ ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿರುವುದು ಒಂದು ಕಾರಣ ಆಗಿರಬಹುದು; ಸಮುದಾಯಗಳನ್ನು ಸಂಪ್ರೀತಗೊಳಿಸಲು ಸರ್ಕಾರಗಳು ತುದಿಗಾಲ ಮೇಲೆ ನಿಂತಿರುವುದು ಇನ್ನೊಂದು ಕಾರಣ ಆಗಿರಬಹುದು. ಕಾರ್ಮಿಕ ಸಂಘಟನೆಗಳು ಸವಲತ್ತುಗಳನ್ನು ಕೇಳಿ ಮುಷ್ಕರ ಮಾಡುತ್ತವೆಯೇ ಹೊರತು ಹೆಚ್ಚು ಕೆಲಸ ಕೊಡಿ ಎಂದು ಅಲ್ಲ!

ನಾವು ವಿದ್ಯಾರ್ಥಿಗಳಾಗಿದ್ದಾಗ ಜಪಾನ್‌ ದೇಶದ ಉದಾಹರಣೆಯನ್ನು ಮತ್ತೆ ಮತ್ತೆ ಕೊಡಲಾಗುತ್ತಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಪರಮಾಣು ಬಾಂಬ್‌ ದಾಳಿಗೆ ತುತ್ತಾದ ಆ ದೇಶ ಅಕ್ಷರಶಃ ಸುಟ್ಟು ಹೋಗಿತ್ತು. ಅಲ್ಲಿನ ಜನರದು ಅಪ್ರತಿಮ ಎನ್ನುವಂಥ ದೇಶಪ್ರೇಮ. ಎಲ್ಲರೂ ಫೀನಿಕ್ಸ್‌ ಪಕ್ಷಿಗಳ ಹಾಗೆ ಬೂದಿಯಿಂದ ಎದ್ದು ಬಂದರು.

ಹರತಾಳ, ಮುಷ್ಕರ ಎಲ್ಲ ಕೈ ಬಿಟ್ಟರು. ಕಷ್ಟಪಟ್ಟು ದುಡಿದರು. ಜಗತ್ತಿನ ಬಲಿಷ್ಠ ಆರ್ಥಿಕತೆಯಲ್ಲಿ ತಮ್ಮದೂ ಒಂದು ಎನ್ನುವಂತೆ ಪ್ರಪಂಚದ ಎದುರು ಬಿಂಬಿಸಿದರು. ‘ಮೇಡ್‌ ಇನ್‌ ಜಪಾನ್‌’ ಎಂಬ ಬರಹಕ್ಕೆ ಇಡೀ ವಿಶ್ವದಾದ್ಯಂತ ಖ್ಯಾತಿಯನ್ನು ತಂದು ಕೊಟ್ಟರು. ಅವರೇನಾದರೂ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಬೇಕಿದ್ದರೆ ಒಂದು ಗಂಟೆ ಹೆಚ್ಚಿಗೆ ಕೆಲಸ ಮಾಡುತ್ತಾರೆ, ಅಥವಾ ತಮ್ಮ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡುತ್ತಾರೆಯೇ ಹೊರತು ಕೆಲಸ ನಿಲ್ಲಿಸುವುದಿಲ್ಲ ಎಂದು ನಮ್ಮ ಗುರುಗಳು ನಮಗೆ ಪಾಠ ಮಾಡುತ್ತಿದ್ದರು.

ಈಗಲೂ ಜಪಾನ್‌ ಜನರು ಇದೇ ರೀತಿ ಹೆಚ್ಚು ಕೆಲಸ ಮಾಡುತ್ತಾರೆ. ಎಷ್ಟು ಹೆಚ್ಚು ಕೆಲಸ ಮಾಡುತ್ತಾರೆ  ಎಂದರೆ ಅದರ ಒತ್ತಡದಿಂದಲೇ ಅವರು ಸಾಯುತ್ತಿದ್ದಾರೆ. ಹೀಗೆ ಕೆಲಸದ ಒತ್ತಡದಿಂದ ಬರುವ ಸಾವಿಗೆ ‘ಕರೋಷಿ’ ಎಂದು ಹೆಸರೂ ಕೊಟ್ಟಿದ್ದಾರೆ. ಅಲ್ಲಿ ಶ್ರಮಸಂಸ್ಕೃತಿ ಅತಿಯಾಗಿರುವುದಕ್ಕೆ ಇದು ನಿದರ್ಶನ ಆಗಿರಬಹುದು. ಆದರೆ, ಎಂಥ ಶ್ರದ್ಧೆಯ ಶ್ರಮಸಂಸ್ಕೃತಿ ಅಲ್ಲಿ ಇದೆ ಎಂಬುದೂ ಗೊತ್ತಾಗುತ್ತದೆ.

ಹಾಗೆಂದು ರಜೆಗಳು ಇರಲೇಬಾರದು ಎಂದು ಅಲ್ಲ. ಅದರ ಪ್ರಯೋಜನಗಳ ಬಗೆಗೂ ಈಗ ಬಹಳ ಮಾಹಿತಿ ಇದೆ. ‘ರಜೆಗಳಲ್ಲಿ ಜನರು ಸಂತೋಷವಾಗಿರುತ್ತಾರೆ, ಅದರಿಂದ ಅವರ ಉತ್ಪಾದಕ ಶಕ್ತಿ ಹೆಚ್ಚುತ್ತದೆ, ಹಬ್ಬ ಹರಿದಿನಗಳ ಸಮಯದಲ್ಲಿ ಅವರು ಹೆಚ್ಚು ಖರ್ಚು ಮಾಡುತ್ತಾರೆ, ಪ್ರವಾಸ ಹೋಗುತ್ತಾರೆ. ಅದರಿಂದ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುತ್ತದೆ’ ಎಂದೂ ವಿಶ್ಲೇಷಿಸಲಾಗುತ್ತಿದೆ.

‘ಕಬಾಲಿ’ಯಂಥ ಮೂರು ದಿನ ನಡೆಯದ ಸಿನಿಮಾಕ್ಕೆ ಖಾಸಗಿ ಸಂಸ್ಥೆಗಳೂ ಒಂದು ದಿನದ ರಜೆ ಕೊಟ್ಟುದು ತಮ್ಮ ಸಿಬ್ಬಂದಿ ಖುಷಿಯಾಗಿರಲಿ ಎಂಬ ಕಾರಣ ಇರಬಹುದು. ಆದರೆ, ಖಾಸಗಿ ಸಂಸ್ಥೆಗಳು ಒಂದು ರಜೆ ಕೊಟ್ಟರೆ ಇನ್ನೊಂದು ರಜೆ ದಿನದಲ್ಲಿ ಬಂದು ಕೆಲಸ ಮಾಡಬೇಕು ಎಂದು ತಮ್ಮ ಸಿಬ್ಬಂದಿಗೆ ಒತ್ತಾಯಿಸುತ್ತಾರೆ. ಇಲ್ಲವಾದರೆ ಅವರು ಆ ದಿನದ ಸಂಬಳ ಕಳೆದುಕೊಳ್ಳುತ್ತಾರೆ. ಹೀಗೆ ತಮ್ಮ ಸಿಬ್ಬಂದಿಯನ್ನು ದುಡಿಸಿಕೊಳ್ಳಲು ಸಾಧ್ಯವಾಗಲಿ ಎಂದೇ ಐ.ಟಿ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ಇಲ್ಲ. ಅದು ಒಳ್ಳೆಯದೇ, ಕೆಟ್ಟದೇ ಎಂಬ ಬಗೆಗೆ ಭಿನ್ನಾಭಿಪ್ರಾಯಗಳು ಇರಲು ಸಾಧ್ಯ. ಕೆಟ್ಟದು ಎನ್ನುವವರು ಅಲ್ಲಿ ಕೆಲಸ ಮಾಡಲು ಹೋಗಬಾರದು. ಒಳ್ಳೆಯದು ಎಂದು ಹೋದವರು ಗೊಣಗಬಾರದು.

ಇವೆಲ್ಲ ಜಾಗತೀಕರಣದ ಫಲಗಳು. ಶ್ರಮಸಂಸ್ಕೃತಿ, ಸಕಾಲದಲ್ಲಿ ಕೆಲಸ ಮುಗಿಸುವುದು, ವೇಳೆಗೆ ಸರಿಯಾಗಿ ಕೆಲಸಕ್ಕೆ ಬರುವುದು ಎಂಬುವೆಲ್ಲ ಈಗ ಪಾಲಿಸಲೇಬೇಕಾದ ಮೌಲ್ಯಗಳು. ಅಧಿಕೃತವಾಗಿ ಸರ್ಕಾರ ಕೊಡುವ ರಜೆಗಳ ಜೊತೆಗೆ ಹೇಳದೇ ಕೇಳದೇ ಬರುವ ಬಂದ್‌ಗಳು, ಹರತಾಳಗಳು ಈ ಮೌಲ್ಯದ ಪಾಲನೆಗೆ ಧಕ್ಕೆ ತರುತ್ತವೆ ಮತ್ತು ಅಂದಂದಿನ ಉಪಜೀವನವನ್ನು ಅಂದೇ ಗಳಿಸುವವರ ಹೊಟ್ಟೆಯ ಮೇಲೆ ಹೊಡೆಯುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry