ಸೋಮವಾರ, ಡಿಸೆಂಬರ್ 9, 2019
17 °C

ಚರ್ಚೆ ಎಂದರೆ ಬರಿಯ ಮಾತಲ್ಲೋ ಅಣ್ಣಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚರ್ಚೆ ಎಂದರೆ ಬರಿಯ ಮಾತಲ್ಲೋ ಅಣ್ಣಾ!

ಅಧ್ಯಕ್ಷೀಯ  ಅಭ್ಯರ್ಥಿಗಳ ನಡುವೆ ಸಂವಾದ ಆರಂಭವಾದಾಗ, ಇಂತಹ ಸಂವಾದಗಳು ಮತದಾರರ ತಿಳಿವಳಿಕೆಯನ್ನು ಹೆಚ್ಚಿಸುತ್ತವೆ ಮತ್ತು ಅವರು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಅನುವಾಗುತ್ತವೆ ಎಂದು ಹೇಳಲಾಗಿತ್ತು. 90 ನಿಮಿಷಗಳ ಚರ್ಚೆಯಲ್ಲಿ ಹಲವು ಪ್ರಚಲಿತ ವಿಷಯಗಳು ಬರುತ್ತವೆ. ಅಭ್ಯರ್ಥಿಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ.

ಇದರಿಂದ ನವೆಂಬರಿನಲ್ಲಿ ತಾವು ಯಾರಿಗೆ ಮತ ಹಾಕಬೇಕು ಎಂಬುದನ್ನು ಸುಲಭವಾಗಿ ಮತದಾರ ನಿರ್ಧರಿಸಬಹುದು. ಮುಖ್ಯವಾಗಿ ಅಶಿಕ್ಷಿತ ಮತದಾರ ವರ್ಗಕ್ಕೆ ಈ ಚರ್ಚೆ ಸಹಕಾರಿ ಎಂಬ ಅಭಿಪ್ರಾಯವಿತ್ತು. ಅದು ನಿಜವಾದರೂ ರಾಜಕೀಯ ತಜ್ಞರ ಪ್ರಕಾರ, ಈ ಚರ್ಚೆಗಳು ಮಾಧ್ಯಮಕ್ಕೆ ಹೂರಣ ಒದಗಿಸುತ್ತವೆಯೇ ವಿನಾ, ಚುನಾವಣೆಯ ಫಲಿತಾಂಶದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಸಂವಾದದ ಬಳಿಕ ಹೆಚ್ಚೆಂದರೆ ಶೇಕಡ ಮೂರರಷ್ಟು ಮತಗಳು ಆಚೀಚೆ ಆಗಬಹುದು.ಅಮೆರಿಕದ ಚುನಾವಣಾ ಇತಿಹಾಸವನ್ನು ಕೆದಕಿದರೆ, ಮುಖ್ಯವಾಗಿ ಅಬ್ರಹಾಂ ಲಿಂಕನ್ ಮತ್ತು ಸ್ಟೀಫನ್ ಡಾಗ್ಲಸ್ ನಡುವಿನ ಸಂವಾದಗಳು ಎದ್ದು ಕಾಣುತ್ತವೆ. ಲಿಂಕನ್ ಮತ್ತು ಡಾಗ್ಲಸ್ ತಾಸುಗಟ್ಟಲೆ ಜನರ ಮುಂದೆ ನಿಂತು ತಮ್ಮ ನಿಲುವುಗಳನ್ನು ಮಂಡಿಸುತ್ತಿದ್ದರು. ಅಭ್ಯರ್ಥಿಗಳ ಚಿಂತನಾ ಸಾಮರ್ಥ್ಯ, ಮಾತುಗಾರಿಕೆ, ಪ್ರಚಲಿತ ವಿಷಯಗಳ ಬಗ್ಗೆ ಅಭ್ಯರ್ಥಿಗಳಿಗಿರುವ ಮಾಹಿತಿ, ಸಮಸ್ಯೆಗಳನ್ನು ಬಿಡಿಸಿ ನೋಡುವ, ಉತ್ತರ ಹುಡುಕುವ ಜಾಣ್ಮೆ ಎಲ್ಲವನ್ನೂ ಅಳೆಯಲು ಸಂವಾದವನ್ನು ಬಳಸಲಾಗುತ್ತಿತ್ತು.

ರೇಡಿಯೊ ಮತ್ತು ದೂರದರ್ಶನ ಹೆಚ್ಚು ಬಳಕೆಯಲ್ಲಿ ಇರದ ಕಾಲಘಟ್ಟದಲ್ಲಿ ಈ ಚರ್ಚೆಗಳು ಸ್ಥಳೀಯವಾಗಿ ನಡೆಯುತ್ತಿದ್ದವು. ರಾಷ್ಟ್ರದ ಗಮನವನ್ನು ಏಕಕಾಲಕ್ಕೆ ಸೆಳೆಯುತ್ತಿರಲಿಲ್ಲ. ಕೆಲವೊಮ್ಮೆ ಅಭ್ಯರ್ಥಿಗಳು ಸಂವಾದಕ್ಕೆ ಉತ್ಸಾಹ ತೋರುತ್ತಿರಲಿಲ್ಲ. ವೆಂಡೆಲ್ ವಿಲ್ಕಿ 1940ರಲ್ಲಿ ಚರ್ಚೆಗೆ ಬರುವಂತೆ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರಿಗೆ ಸವಾಲು ಹಾಕಿದ್ದರಾದರೂ, ರೂಸ್ವೆಲ್ಟ್ ಚರ್ಚೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿರಲಿಲ್ಲ.ಆದರೆ 1960ರ ನಂತರ ದೂರದರ್ಶನದಲ್ಲಿ ಸಂವಾದದ ನೇರಪ್ರಸಾರ ಆರಂಭವಾದ ಮೇಲೆ ಚರ್ಚೆಗಳು ಹೆಚ್ಚು ಜನಪ್ರಿಯಗೊಂಡವು. ಚರ್ಚೆಗೆ ಹಲವು ಆಯಾಮಗಳು ಬಂದವು. ಮೊದಲಿಗೆ ಅಭ್ಯರ್ಥಿಯ ಬೌದ್ಧಿಕ ಸಾಮರ್ಥ್ಯವಷ್ಟೇ ಚರ್ಚೆಯಲ್ಲಿ ಮುಖ್ಯವಾಗುತ್ತಿತ್ತು. ದೃಶ್ಯಮಾಧ್ಯಮದಿಂದ ತೀರಾ ಸಣ್ಣಪುಟ್ಟ ಸಂಗತಿಗಳನ್ನೂ ಜನ ಗಮನಿಸಲಾರಂಭಿಸಿದರು. ಮುಖ್ಯ ವಿಷಯ ಬದಿಗೆ ಸರಿದು, ಸಣ್ಣ ಸಂಗತಿಗಳಿಗೇ ಪ್ರಾಧಾನ್ಯ ದೊರೆಯಿತು.

ನಿಕ್ಸನ್ ಮತ್ತು ಕೆನಡಿ ನಡುವಿನ ಚರ್ಚೆ ಆ ನಿಟ್ಟಿನಲ್ಲಿ ಹೊಸ ತಿರುವು. 1960ರಲ್ಲಿ ಚುನಾವಣಾ ಕಣದಲ್ಲಿ ಆಡಳಿತದ ಅನುಭವವಿದ್ದ ನಿಕ್ಸನ್ ಮತ್ತು ಯುವ ಉತ್ಸಾಹಿ ಸೆನೆಟರ್ ಕೆನಡಿ ಇದ್ದರು. ನಾಲ್ಕು ಸುತ್ತಿನ ಸಂವಾದ ಈ ಇಬ್ಬರ ನಡುವೆ ನಡೆಯಿತು. ವಿಷಯಗಳ ಪರಿಣಿತಿಯನ್ನಷ್ಟೇ ಜನ ನೋಡಿದ್ದರೆ ನಿಕ್ಸನ್ ಅದರಲ್ಲಿ ಮುಂದಿದ್ದರು. ಅನುಭವವನ್ನು ಒರೆಗೆ ಹಚ್ಚಿ ಕರಾರುವಾಕ್ ವಾದ ಮಂಡಿಸುತ್ತಿದ್ದರು.

ಕೆನಡಿ ಅವರಿಗೆ ಅವರದ್ದೇ ಆದ ನಿಲುವುಗಳಿದ್ದವು. ಆದರೆ ನಿಕ್ಸನ್ ಅವರಿಗೆ ಒಂದು ದೌರ್ಬಲ್ಯವಿತ್ತು. ನಿಕ್ಸನ್ ಹೆಚ್ಚು ಬೆವರುತ್ತಿದ್ದರು. ಜೊತೆಗೆ ಅವರು ಆಗಷ್ಟೇ ಜ್ವರದಿಂದ ಚೇತರಿಸಿಕೊಂಡು ಪೇಲವವಾಗಿ ಕಾಣುತ್ತಿದ್ದರು. ಕೊಂಚ ಮೇಕಪ್‌ ಸಹಾಯ ಪಡೆದಿದ್ದರೆ, ತಮ್ಮ ದಣಿವನ್ನು ಮರೆಮಾಚಬಹುದಿತ್ತೇನೋ, ಆತುರದ ನಿಕ್ಸನ್ ಪ್ರಚಾರ ಮುಗಿಸಿ ಚರ್ಚೆಯ ವೇದಿಕೆಗೆ ನೇರವಾಗಿ ಬಂದಿದ್ದರು.

ಇದು ಕೆನಡಿ ಅವರಿಗೆ ವರದಾನವಾಯಿತು. ರೇಡಿಯೊ ಮೂಲಕ ಡಿಬೇಟ್ ಆಲಿಸಿದವರಿಗೆ ನಿಕ್ಸನ್ ಚರ್ಚೆಯಲ್ಲಿ ಮುನ್ನಡೆ ಸಾಧಿಸಿದರು ಎಂಬ ಅಭಿಪ್ರಾಯವಿತ್ತು. ಆದರೆ ಟಿ.ವಿ ವೀಕ್ಷಕರಿಗೆ ನಿಕ್ಸನ್ ಅವರಿಗಿಂತ, ‘ಯಂಗ್ ಅಂಡ್ ಎನರ್ಜಟಿಕ್’ ಕೆನಡಿ ಇಷ್ಟವಾಗಿದ್ದರು!1984ರಲ್ಲಿ ರೇಗನ್ ಮತ್ತು ವಾಲ್ಡರ್ ಮಾಂಡೇಲ್ ನಡುವೆ ಚರ್ಚೆ ಏರ್ಪಟ್ಟಿತ್ತು. ಮೊದಲ ಚರ್ಚೆಯಲ್ಲಿ ರೇಗನ್ ಹೆಚ್ಚು ಬಳಲಿದಂತೆ ಕಾಣುತ್ತಿದ್ದರು. ಮಾತಿನಲ್ಲೂ ಉತ್ಸಾಹವಿರಲಿಲ್ಲ. ಇದು ರೇಗನ್ ಅವರಿಗೆ ವಯಸ್ಸಾಯಿತೇ ಎಂಬ ಪ್ರಶ್ನೆ ಹುಟ್ಟುಹಾಕಿತ್ತು. ಸಂವಾದ ನಡೆಸಿಕೊಡುತ್ತಿದ್ದ ಪತ್ರಕರ್ತೆ, ವಯಸ್ಸಿನ ವಿಚಾರವಾಗಿ ರೇಗನ್ ಅವರನ್ನು ಪ್ರಶ್ನಿಸಿದರು. ಆಗ ರೇಗನ್ ‘ವಯಸ್ಸು ಈ ವೇದಿಕೆಯಲ್ಲಿ ಚರ್ಚೆಯ ವಿಷಯ ಆಗಬಾರದು, ನನ್ನ ಪ್ರತಿಸ್ಪರ್ಧಿಯ ಕಿರಿ ವಯಸ್ಸು ಮತ್ತು ಅನನುಭವವನ್ನು ನಾನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುವುದಿಲ್ಲ’ ಎಂದರು. ಆ ಮೂಲಕ ತನಗೆ ವಯಸ್ಸಾಗಿದ್ದರೂ, ಅಷ್ಟೇ ಅನುಭವವಿದೆ, ತನ್ನ ಎದುರಾಳಿಗೆ ಅನುಭವದ ಕೊರತೆ ಇದೆ ಎಂಬುದನ್ನು ರೇಗನ್ ಸಭಿಕರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಎರಡನೆಯ ಚರ್ಚೆಯಲ್ಲಿ ರೇಗನ್ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡು ಆ ಪ್ರಶ್ನೆ ಬದಿಗೆ ಸರಿಯುವಂತೆ ಮಾಡಿದರು.ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಸೀನಿಯರ್ ನಡುವಿನ ಸಂವಾದದಲ್ಲಿ ಮತ್ತೊಮ್ಮೆ ವಯಸ್ಸು ಚರ್ಚೆಯ ವಿಷಯವಾಗಿತ್ತು. ಕ್ಲಿಂಟನ್, ಜಾರ್ಜ್ ಬುಷ್ ಅವರಿಗಿಂತ 22 ವರ್ಷಕ್ಕೆ ಕಿರಿಯರಾಗಿದ್ದರು. ವಯಸ್ಸಿನ ಅಂತರ ಎದ್ದುಕಾಣುತ್ತಿತ್ತು. ಬುಷ್ ಒಟ್ಟು 90 ನಿಮಿಷದಲ್ಲಿ ಎರಡು ಬಾರಿ ಕೈಗಡಿಯಾರ ನೋಡಿಕೊಂಡಿದ್ದರು.

ಬುಷ್ ಚರ್ಚೆ ಮುಗಿಯುವುದನ್ನೇ ಕಾಯುತ್ತಿದ್ದರೇ? ಬುಷ್ ಅವರ ಬಳಿ ಸಮರ್ಪಕ ಉತ್ತರಗಳು ಇರಲಿಲ್ಲವೇ? ಕ್ಲಿಂಟನ್ ಎದುರು ತಾನು ಮಂಕಾಗಿ ಕಾಣಿಸುತ್ತಿದ್ದೇನೆ ಎಂದು ಅವರಿಗೆ ಅನಿಸುತ್ತಿತ್ತೇ? ಹೀಗೆ ನಾಲ್ಕಾರು ಪ್ರಶ್ನೆಗಳನ್ನು ಬುಷ್ ನಡವಳಿಕೆ ಹುಟ್ಟುಹಾಕಿತ್ತು. ಎರಡನೆಯ ಚರ್ಚೆಯಲ್ಲಿ ಹೆಚ್ಚು ಅಂಕ ಗಳಿಸಲು, ಕ್ಲಿಂಟನ್ ಚಾರಿತ್ರ್ಯ ಕುರಿತಾದ ಪ್ರಶ್ನೆಯನ್ನು ಬುಷ್ ಎತ್ತಿದ್ದರು.

ಅದಾಗ ಕ್ಲಿಂಟನ್ ಅವರು ಹೊಂದಿದ್ದ ಅಕ್ರಮ ಸಂಬಂಧದ ಬಗ್ಗೆ ಸುದ್ದಿ ಚಾಲ್ತಿಯಲ್ಲಿತ್ತು. ವಾಶಿಂಗ್ಟನ್ನಿನ ಶ್ರೇಷ್ಠ ವಕೀಲ ಬಾಬ್ ಬರ್ನೆಟ್, ಬುಷ್ ಅವರನ್ನು ಅಣಿಗೊಳಿಸಿದ್ದರು. ಆಗ ಚರ್ಚೆ ಬೇಗ ಮುಗಿದರೆ ಸಾಕು ಎನ್ನುವ ಸರದಿ ಕ್ಲಿಂಟನ್ ಅವರದ್ದಾಗಿತ್ತು.ಮೂರನೆಯ ಚರ್ಚೆಯ ಹೊತ್ತಿಗೆ, ನಿರಂತರ ಪ್ರಚಾರ ಮತ್ತು ಭಾಷಣಗಳಿಂದಾಗಿ ಕ್ಲಿಂಟನ್ ಧ್ವನಿ ಕ್ಷೀಣವಾಗಿತ್ತು. ಅದೇ ಸ್ಥಿತಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡರೆ, ತಪ್ಪು ಸಂದೇಶ ರವಾನೆ ಆಗಬಹುದೆಂದು ಅರಿತ ಕ್ಲಿಂಟನ್, ಧ್ವನಿತಜ್ಞರೊಬ್ಬರ ಸಹಾಯ ಪಡೆದು ತಮ್ಮ ಧ್ವನಿಯನ್ನು ಉತ್ತಮಪಡಿಸಿಕೊಂಡಿದ್ದರು.

ಆತಂಕದಿಂದ ಹೊರಬರಲು ‘ಲಿಂಕನ್ ಒಬ್ಬ ಮಹಾನ್ ಭಾಷಣಕಾರ’ ಎಂದು ಪದೇಪದೇ ಹೇಳಿಕೊಳ್ಳುತ್ತಿದ್ದರಂತೆ. ಆ ಮೂಲಕ ಲಿಂಕನ್ ಅವರನ್ನು ನೆನೆದು, ಉತ್ಸಾಹ ತುಂಬಿಕೊಳ್ಳುತ್ತಿದ್ದರಂತೆ. ಕ್ಲಿಂಟನ್ ಮೂರನೇ ಸಂವಾದದಲ್ಲಿ, ಬುಷ್ ಸೀನಿಯರ್ ಆಡಳಿತ ಅವಧಿಯಲ್ಲಿನ ಆರ್ಥಿಕ ಸಂಕಷ್ಟದ ಬಗ್ಗೆ, ಉದ್ಯೋಗ ನಷ್ಟದ ಬಗ್ಗೆ ಮಾತನಾಡಿ, ಜನರನ್ನು ಒಲಿಸಿಕೊಂಡಿದ್ದರು.ನಿಮಗೆ ಅಚ್ಚರಿಯಾಗಬಹುದು. ಕೆಲವೊಮ್ಮೆ ಪಕ್ಷಗಳು ಚರ್ಚೆ ನಡೆಯುವ ವೇದಿಕೆ ಹೇಗಿರುತ್ತದೆ, ಇಬ್ಬರು ಅಭ್ಯರ್ಥಿಗಳ ನಡುವೆ ಅಂತರ ಎಷ್ಟಿರುತ್ತದೆ, ಚರ್ಚೆ ನಡೆಯುವ ಕೋಣೆಯ ತಾಪಮಾನವನ್ನು ಎಷ್ಟು ಇಡಲಾಗುತ್ತದೆ ಎಂಬ ಸಣ್ಣಪುಟ್ಟ ಮಾಹಿತಿಯನ್ನೂ ಮೊದಲೇ ಪರಿಶೀಲಿಸುತ್ತವೆ. 2004ರಲ್ಲಿ ಹಾಗೆಯೇ ಆಯಿತು. ರಿಪಬ್ಲಿಕನ್ ಪಕ್ಷ ತನ್ನ ಬೇಡಿಕೆಯನ್ನು ಮುಂದಿಟ್ಟಿತು.

ನಿಲ್ಲುಪೀಠದ (Lectern) ಎತ್ತರ 50 ಇಂಚಿಗಿಂತ ಹೆಚ್ಚಿರಬಾರದು, ಇಬ್ಬರು ಅಭ್ಯರ್ಥಿಗಳ ನಡುವೆ ಹತ್ತು ಅಡಿ ಅಂತರವಾದರೂ ಇರಬೇಕು ಎಂಬುದು ರಿಪಬ್ಲಿಕನ್ ಪಕ್ಷದ ಬೇಡಿಕೆಯಾಗಿತ್ತು. ಕಾರಣವಿಷ್ಟೇ, ಆ ವರ್ಷ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದ ಜಾರ್ಜ್ ಬುಷ್ ಅವರಿಗಿಂತ ಜಾನ್ ಕೆರ್ರಿ ಐದು ಇಂಚು ಎತ್ತರವಿದ್ದರು. ಒಂದೊಮ್ಮೆ ಇಬ್ಬರ ನಡುವೆ ಕಡಿಮೆ ಅಂತರವಿದ್ದರೆ, ಎತ್ತರದ ವ್ಯತ್ಯಾಸವನ್ನು ನೋಡುಗರು ಸುಲಭವಾಗಿ ಗ್ರಹಿಸಬಹುದು.

ಕೆರ್ರಿ ಹೆಚ್ಚು ಆಕರ್ಷಕವಾಗಿ ಕಾಣಬಹುದು ಎಂಬುದು ರಿಪಬ್ಲಿಕನ್ ಪ್ರಚಾರ ನಿರ್ವಹಣಾ ತಂಡದ ಶಂಕೆಯಾಗಿತ್ತು. ಡೆಮಾಕ್ರಟಿಕ್ ಪಕ್ಷದವರು ಚರ್ಚೆ ನಡೆಯುವ ಕೋಣೆಯ ತಾಪಮಾನವನ್ನು 70 ಡಿಗ್ರಿ ಫ್ಯಾರನೈಟ್ ಇಡಬೇಕೆಂದು ಕೇಳಿದಾಗ, ರಿಪಬ್ಲಿಕನ್ನರು ಒಪ್ಪಿಕೊಂಡಿರಲಿಲ್ಲ. ಈ ಹಿಂದಿನ ಭಾಷಣಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ಬುಷ್ ತಂಡ, ಜಾನ್ ಕೆರ್ರಿ ಕೊಂಚ ತಾಪಮಾನ ಹೆಚ್ಚಾದರೂ ಬೆವರುತ್ತಾರೆ ಎನ್ನುವುದನ್ನು ಗಮನಿಸಿತ್ತು. ಜಾನ್ ಕೆರ್ರಿ ಬೆವರಿ ಆಗಾಗ ಮುಖ ಒವರೆಸಿಕೊಳ್ಳಬೇಕು ಎಂಬುದು ಬುಷ್ ತಂಡದ ಅಪೇಕ್ಷೆಯಾಗಿತ್ತು.ಅಲ್ ಗೋರ್ ಮತ್ತು ಜಾರ್ಜ್ ಬುಷ್ ಜೂನಿಯರ್ ನಡುವಿನ ಚರ್ಚೆಯಲ್ಲಿ ಅಲ್ ಗೋರ್, ನಾಲ್ಕು ಬಾರಿ ನಿಟ್ಟುಸಿರು ಬಿಟ್ಟಿದ್ದರು, ಪದೇಪದೇ ಬುಷ್ ಮಾತಿಗೆ ಮುಖ ಮುರಿದಿದ್ದರು. ಅದು ದೊಡ್ಡ ಸುದ್ದಿಯೇ ಆಯಿತು. ಮಾಧ್ಯಮಗಳು ತಾಸುಗಟ್ಟಲೆ ಚರ್ಚಿಸಿದ್ದವು. ತಮ್ಮ ತಂದೆ ಮಾಡಿದ್ದ ತಪ್ಪುಗಳು, ಬುಷ್ ಜೂನಿಯರ್ ಅವರಿಗೆ ನೆನಪಿತ್ತು.

ಅಲ್ ಗೋರ್ ಅವರೊಂದಿಗಿನ ಚರ್ಚೆಯಲ್ಲಿ ವೇದಿಕೆಗೆ ಬಂದ ಕೂಡಲೇ ತಮ್ಮ ವಾಚ್ ತೆಗೆದು, ನಿಲ್ಲು ಪೀಠದ ಮೇಲಿಟ್ಟು ಚರ್ಚೆಯ ಕಡೆ ಗಮನಹರಿಸಿದ್ದರು. ಏಕಾಗ್ರತೆಯಿಂದ ಸಂವಾದದಲ್ಲಿ ಪಾಲ್ಗೊಂಡು ಜನರ ವಿಶ್ವಾಸ ಗಳಿಸಿದ್ದರು. ಮೊನ್ನೆ ಹಿಲರಿ ಅವರೊಂದಿಗಿನ ಚರ್ಚೆಯಲ್ಲಿ, ಟ್ರಂಪ್ 90 ನಿಮಿಷದಲ್ಲಿ ನಾಲ್ಕು ಬಾರಿ ನೀರುಕುಡಿದದ್ದನ್ನು ಮಾಧ್ಯಮಗಳು ಎರಡು ತಾಸು ಚರ್ಚಿಸಿದ್ದವು!

ಪ್ರತಿಕ್ರಿಯಿಸಿ (+)