ಶನಿವಾರ, ಜೂಲೈ 4, 2020
25 °C

ಏಣಿ ಇಟ್ಟು ಒಳಗಡೆ ನುಸುಳಿದ ಉಗ್ರರು

ಪಿಟಿಐ Updated:

ಅಕ್ಷರ ಗಾತ್ರ : | |

ಏಣಿ ಇಟ್ಟು ಒಳಗಡೆ ನುಸುಳಿದ ಉಗ್ರರು

ಉರಿ/ನವದೆಹಲಿ: ಕಳೆದ ತಿಂಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಯೋಧರನ್ನು ಕೊಂದ ನಾಲ್ವರು ಪಾಕಿಸ್ತಾನಿ ಉಗ್ರರು ಗಡಿ ನಿಯಂತ್ರಣ ರೇಖೆಯಲ್ಲಿನ (ಎಲ್‌ಒಸಿ) ವಿದ್ಯುತ್ ಸಂಪರ್ಕ ಇರುವ ಬೇಲಿಯನ್ನು ಏಣಿ ಇಟ್ಟು ಹತ್ತಿ ದೇಶಕ್ಕೆ ನುಸುಳಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಉಗ್ರರು ಯಾವ ದಾರಿಯ ಮೂಲಕ ದೇಶದೊಳಕ್ಕೆ ನುಸುಳಿದ್ದಾರೆ ಎಂಬ ಬಗ್ಗೆ ಸೇನೆ ತನಿಖೆ ಆರಂಭಿಸಿದೆ. ಸಲಾಮಾಬಾದ್‌ ನಾಲೆಯ ಸಮೀಪ ಉಗ್ರರು ಒಳಗೆ ನುಸುಳಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಲಾಮಾಬಾದ್‌ ನಾಲೆಯ ಸಮೀಪ ಗಡಿ ಬೇಲಿಯ ತಂತಿಗಳ ನಡುವೆ ಸ್ವಲ್ಪ ಅಂತರ ಇತ್ತು. ಅಲ್ಲಿಂದ ಒಬ್ಬ ಉಗ್ರ ಒಳ ನುಸುಳಿ ಬೇಲಿಗೆ ಭಾರತದ ಕಡೆಯಿಂದ ಏಣಿ ಇರಿಸಿದ್ದಾನೆ. ಉಳಿದ ಮೂವರು ಪಾಕಿಸ್ತಾನ ಕಡೆಯಿಂದ ಏಣಿ ಇಟ್ಟು ಒಳಗೆ ಬಂದಿದ್ದಾರೆ.

ಉಗ್ರರಲ್ಲಿ ಶಸ್ತ್ರಾಸ್ತ್ರ, ಆಹಾರ ಪದಾರ್ಥ ಸೇರಿ ಭಾರಿ ಪ್ರಮಾಣದ ಸಾಮಗ್ರಿಗಳಿದ್ದವು. ಹಾಗಾಗಿ ಎಲ್ಲ ಉಗ್ರರು  ಗಡಿ ಬೇಲಿಯನ್ನು ನುಸುಳುವುದು ಸಾಧ್ಯವಿರಲಿಲ್ಲ. ಸೇನೆಯ ತಂಡವು ಈ ಪ್ರದೇಶದಲ್ಲಿ ಗಸ್ತು ನಡೆಸುತ್ತದೆ. ಹಾಗಾಗಿ ಭಾರಿ ಸಮಯ ತೆಗೆದುಕೊಂಡು ಉಗ್ರರು ನುಸುಳಿರಬಹುದು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ನಾಲ್ವರು ಉಗ್ರರ ಜತೆಗೆ ಮೊಹಮ್ಮದ್‌ ಕಬೀರ್‌ ಅವಾನ್‌ ಮತ್ತು ಬಷರತ್‌ ಎಂಬ ಇಬ್ಬರು ಮಾರ್ಗದರ್ಶಕರಿದ್ದರು. ಉಗ್ರರು ಒಳಗೆ ನುಸುಳಿದ ಮೇಲೆ ಎರಡೂ ಏಣಿಗಳನ್ನು ಅವರಿಗೆ ನೀಡಲಾಗಿದೆ. ಉಗ್ರರು ಹೇಗೆ ಒಳ ಬಂದಿದ್ದಾರೆ ಎಂಬ ಸುಳಿವು ದೊರೆಯಬಾರದು ಎಂಬ ಕಾರಣಕ್ಕೆ ಏಣಿಯನ್ನು ಅವರು ಒಯ್ದಿದ್ದಾರೆ.

ಸೆ. 18ರಂದು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸುವ ಮೊದಲು ಉಗ್ರರು ಸಮೀಪದ ಗೊಹಲ್ಲನ್‌ ಅಥವಾ ಜಬಲಾ ಗ್ರಾಮದಲ್ಲಿ ಆಶ್ರಯ ಪಡೆದಿರಬಹುದು ಎಂಬ ಶಂಕೆ ಇದೆ. ಹಾಗಾಗಿ ಈ ಗ್ರಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ಘಟನೆಯ ಬಗ್ಗೆ ಸೇನೆಯು ಆಂತರಿಕ ತನಿಖೆಯನ್ನೂ ಆರಂಭಿಸಿದೆ. ಉರಿ ಶಿಬಿರದ ಬ್ರಿಗೇಡ್‌ ಕಮಾಂಡರ್‌ ಕೆ. ಸೋಮಾ ಶೇಖರ್‌ ಅವರನ್ನು ವರ್ಗಾಯಿಸಲಾಗಿದೆ.

ದಾಳಿ ನಡೆಸುವುದಕ್ಕೆ ಒಂದು ದಿನ ಮೊದಲೇ ಉಗ್ರರು ಸೇನಾ ಶಿಬಿರದ ಪ್ರದೇಶಕ್ಕೆ ಬಂದಿರಬಹುದು ಎಂದೂ ಶಂಕಿಸಲಾಗಿದೆ.

ಶಿಬಿರದ ಮಾಹಿತಿ ಇತ್ತು:  ಭಾರಿ ಭದ್ರತೆಯ ಸೇನಾ ಶಿಬಿರದ ಆವರಣದ ಬೇಲಿಯ ತಂತಿಯನ್ನು ಕತ್ತರಿಸಿ ಉಗ್ರರು ಒಳಗೆ ಪ್ರವೇಶಿಸಿದ್ದಾರೆ.  ಅಡುಗೆ ಕೋಣೆ ಮತ್ತು ಉಗ್ರಾಣಗಳಲ್ಲಿ ಇದ್ದ ಯೋಧರು ಹೊರಗೆ ಬರುವುದಕ್ಕೆ ಸಾಧ್ಯವಾಗದಂತೆ ಉಗ್ರರು ಹೊರಗಿನಿಂದ ಬೀಗ ಹಾಕಿದ್ದರು. ಹಾಗಾಗಿ ಉಗ್ರರಿಗೆ ಶಿಬಿರದ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಸೆ. 16ರ ರಾತ್ರಿ ಪಾಕ್‌ ಆಕ್ರಮಿತ ಕಾಶ್ಮೀರದಿಂದ ಉಗ್ರರು ದೇಶದೊಳಗೆ ಬಂದಿದ್ದಾರೆ. ಆ ರಾತ್ರಿ ಅವರು ಸುಖದರ್‌ ಗ್ರಾಮದಲ್ಲಿ ತಂಗಿರಬಹುದು. ಈ ಗ್ರಾಮವು ಸೇನಾ ಶಿಬಿರದ ಎದುರುಗಡೆ ಇದೆ. ಇಲ್ಲಿಂದ ಸೇನಾ ಶಿಬಿರದೊಳಗಿನ ಚಲನವಲನಗಳನ್ನು ನೋಡುವುದಕ್ಕೆ ಸಾಧ್ಯ ಇದೆ.

ಇದೇ ಮೊದಲಲ್ಲ: ಉಗ್ರರು ಏಣಿಯ ಮೂಲಕ ಏರಿ ಬಂದಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ ಉತ್ತರ ಕಾಶ್ಮೀರದ ಮಚಿಲ್‌ ವಲಯದಲ್ಲಿ ಉಗ್ರರು ಏಣಿಯ ಮೂಲಕ ಒಳಗೆ ನುಸುಳಿದ್ದರು.

ಸೈನಿಕ ಸಾವು (ಜಮ್ಮು ವರದಿ): ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪಡೆಗಳು ಭಾನುವಾರ ಎರಡು ಬಾರಿ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದರಿಂದ ಭಾರತದ ಒಬ್ಬ ಸೈನಿಕ ಮೃತಪಟ್ಟಿದ್ದಾನೆ. 

ನೌಷೆರಾ ವಲಯದಲ್ಲಿಯೂ ಬೆಳಿಗ್ಗೆ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಯಿತು. ಸೈನಿಕರು ಪ್ರತಿದಾಳಿ ನಡೆಸಿದರು. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಸಂಸತ್‌ ಸಮಿತಿಗೆ ಮಂಗಳವಾರ ನಿರ್ದಿಷ್ಟ ದಾಳಿ ಮಾಹಿತಿ 

ಗಡಿ ನಿಯಂತ್ರಣ ರೇಖೆಯಾಚೆಗೆ ಇರುವ ಉಗ್ರರ ಶಿಬಿರಗಳ ಮೇಲೆ ಭಾರತದ ಸೇನೆ ಸೆ. 28ರಂದು ನಡೆಸಿದ ‘ನಿರ್ದಿಷ್ಟ ದಾಳಿ’ ಬಗ್ಗೆ ಸಂಸದರ ಸಮಿತಿಗೆ ವಿದೇಶಾಂಗ ಕಾರ್ಯದರ್ಶಿ ಮತ್ತು ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರು (ಡಿಜಿಎಂಒ) ಮಾಹಿತಿ ನೀಡಲಿದ್ದಾರೆ. ಸಂಸದರ ಸಮಿತಿಯಲ್ಲಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರೂ ಇರಲಿದ್ದಾರೆ.

ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನೇತೃತ್ವದ ವಿದೇಶಾಂಗ ವ್ಯವಹಾರಗಳ ಸಂಸತ್‌ ಸ್ಥಾಯಿ ಸಮಿತಿಯ ಸಭೆ ಮಂಗಳವಾರ ನಡೆಯಲಿದೆ. ನಿರ್ದಿಷ್ಟ ದಾಳಿ ಮತ್ತು ನಂತರದಲ್ಲಿ ಭಾರತ–ಪಾಕಿಸ್ತಾನ ಸಂಬಂಧದ ಕುರಿತು ಸಮಿತಿಗೆ ಮಾಹಿತಿ ನೀಡಲಾಗುವುದು ಎಂದು ಲೋಕಸಭಾ ಕಾರ್ಯಾಲಯ ತಿಳಿಸಿದೆ.  ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಗೆ ನಿರ್ದಿಷ್ಟ ದಾಳಿ ಬಗ್ಗೆ ಮಾಹಿತಿ ನೀಡುವುದಕ್ಕೂ ಸರ್ಕಾರ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೆ ನಂತರ ಬಿಜೆಪಿ ಸಂಸದ ಬಿ.ಸಿ. ಖಂಡೂರಿ ನೇತೃತ್ವದ ಸಮಿತಿಗೆ ಸೇನೆಯ ಉಪ ಮುಖ್ಯಸ್ಥ ಲೆ. ಜ. ಬಿಪಿನ್‌ ರಾವತ್‌ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.