ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೀವ್ರ ನಿಗಾ ಘಟಕ’ದಲ್ಲಿ ಅಮೂಲ್ಯ ಹವಳದ ದಿಬ್ಬಗಳು!

ವಿದೇಶ– ವಿದ್ಯಮಾನ: ಹವಳ ರಾಶಿಯ ಜತೆ ಕೋಟ್ಯಂತರ ಜೀವಿಗಳ ಸಹಬಾಳ್ವೆ
Last Updated 16 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಸೂಯೆಯಿಂದ ಕಿನಾರೆ ನಿನ್ನ ದಿಟ್ಟಿಸುತ್ತಿದೆ, ವೇಗದ ಮಾರುತ ನಿನ್ನೆದುರು ತಲೆಬಾಗಿದೆ,
ನಿನ್ನ ಆಗಸದೊಳಗೆ ಲವಣ ಮತ್ಸ್ಯಗಳು ತಾರೆಗಳಂತೆ ಮಿನುಗುತ್ತಿವೆ
ಕ್ವೀನ್ಸ್‌ಲ್ಯಾಂಡ್‌ನ ಓ ಅಪ್ರತಿಮ ಸುಂದರಿಯೇ!
ಮಹಾನ್‌ ಹವಳದ ದಿಬ್ಬವೇ ನಿನಗೆ ಅಭಿವಂದನೆ

–ಆಸ್ಟ್ರೇಲಿಯಾದ ಹೊಸ ತಲೆಮಾರಿನ ಕವಿ ಜೆರೆಮಿ ಮಾರ್ಟಿನ್‌, ತನ್ನ ದೇಶದ ವಿಸ್ಮಯ ಹವಳ ದಿಬ್ಬಗಳ  ಕುರಿತು ಬರೆದ ಕವಿತೆಯೊಂದರ ಕೊನೆಯ ಸಾಲುಗಳಿವು.

ನಮ್ಮ ದೇಶದ ಹಿಮಾಲಯ ಗಿರಿ ಶ್ರೇಣಿ, ಪಶ್ಚಿಮ ಘಟ್ಟಗಳಂತೆ ಆಸ್ಟ್ರೇಲಿಯಾದ ಸಾಹಿತ್ಯಿಕ ಪರಂಪರೆಗೆ ಸ್ಫೂರ್ತಿ ಈ ಹವಳದ ದಿಬ್ಬಗಳು. ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಕ್ವೀನ್ಸ್‌ಲ್ಯಾಂಡ್‌ ಕರಾವಳಿಯ ಹವಳದ ದಿಬ್ಬಗಳೂ ಸೇರಿವೆ. ವಿಶ್ವದ ಅತ್ಯಂತ ದೊಡ್ಡ ಹವಳ ದಿಬ್ಬದ ವ್ಯವಸ್ಥೆ ಇದು. ಅತಿ ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ ನೀಡಿರುವ ಪ್ರಮುಖ ಭೌಗೋಳಿಕ ವಲಯವಿದು. ಮಾತ್ರವಲ್ಲ, ದೇಶದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೂ ದಟ್ಟ ಪ್ರಭಾವ ಬೀರಿರುವಂಥಹವು. ಆಸ್ಟ್ರೇಲಿಯಾದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿರುವ ‘ದಿ ಗ್ರೇಟ್‌ ಬ್ಯಾರಿಯರ್‌ ರೀಫ್‌’ಗೆ ಇರುವುದು ಬರೋಬ್ಬರಿ ಎರಡು ಕೋಟಿ ಐವತ್ತು ಲಕ್ಷ ವರ್ಷಗಳ ಬೃಹತ್‌ ಇತಿಹಾಸ. 1,400 ಮೈಲು ದೂರದ 3.44 ಲಕ್ಷ ಚದರ ಕಿಮೀ ವ್ಯಾಪ್ತಿಯ ಪ್ರದೇಶದವರೆಗೆ ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಸಲಹಿಕೊಂಡು ವ್ಯಾಪಿಸಿರುವ ಈ ಹವಳದ ದಿಬ್ಬಗಳ ಸಾವು ಸಮೀಪಿಸುತ್ತಿದೆಯೇ?

ಇಂಥದ್ದೊಂದು ಆತಂಕ ದಶಕಗಳ ಹಿಂದೆಯೇ ಹುಟ್ಟಿಕೊಂಡಿತ್ತು.  ಆ ಕುರಿತ ಚರ್ಚೆ ಈಗ ತೀವ್ರ ಸ್ವರೂಪ ಪಡೆದುಕೊಳ್ಳಲು ಕಾರಣ, ವಿಜ್ಞಾನಿಗಳ ವಲಯ ಈ ಅತ್ಯಮೂಲ್ಯ ಹವಳದ ದಿಬ್ಬಗಳ ಮರಣ ಸಂಭವಿಸಿದೆ ಎಂದು ಘೋಷಿಸಿರುವುದು. ಆಸ್ಟ್ರೇಲಿಯಾದ ಉತ್ತರ ಮತ್ತು ಪೂರ್ವ ಕರಾವಳಿಯ ಉದ್ದಕ್ಕೂ ವರ್ಣ ಚಿತ್ತಾರದಂತೆ ಹರವಿಕೊಂಡಿರುವ ಈ ಹವಳದ ದಿಬ್ಬಗಳು ವೇಗವಾಗಿ ಬಿಳಿಚಿಕೊಳ್ಳುತ್ತಿವೆ. ಹವಳಗಳು ಜೀವ ಕಳೆದುಕೊಳ್ಳುತ್ತಿವೆ. ಕಾಲಾಂತರದಲ್ಲಿ ಉಂಟಾದ ತಾಪಮಾನ ಬದಲಾವಣೆಗಳು, ಮಾನವ ಚಟುವಟಿಕೆ, ಎಲ್‌ನಿನೊದಂತಹ ನೈಸರ್ಗಿಕ ಹೊಡೆತಗಳು ದಿಬ್ಬಗಳ ಅಸ್ತಿತ್ವಕ್ಕೆ ಸಂಚಕಾರ ತಂದಿವೆ. ಸಮುದ್ರದ ನೀರು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. 

ನೈಸರ್ಗಿಕ ಕಾರಣಗಳಿದ್ದರೂ ಹವಳದ ದಿಬ್ಬಗಳ ಮರಣ ಶಾಸನ ಬರೆದಿರುವುದು ಮುಖ್ಯವಾಗಿ ಮನುಕುಲವೇ. ಇದು ಅರ್ಥ ವ್ಯವಸ್ಥೆ, ಪರಿಸರ ಮತ್ತು ಬೃಹತ್‌ ಜೀವ ಜಾಲಕ್ಕೆ ಕುತ್ತು ತರಲಿರುವುದರಿಂದ ಆತಂಕ ದ್ವಿಗುಣಗೊಂಡಿದೆ. ಬಹುತೇಕ ಭಾಗಗಳನ್ನು ಮುಪ್ಪು ಆವರಿಸಿದೆಯಾದರೂ, ಎಲ್ಲವೂ ಜೀವ ಕಳೆದುಕೊಂಡಿಲ್ಲ ಎಂದು ವಿಜ್ಞಾನಿಗಳು ಸಮಾಧಾನಪಡುತ್ತಿದ್ದಾರೆ. ದೀರ್ಘಾವಧಿಯ ತಾಪಮಾನ ವೈಪರೀತ್ಯ, ಕಡಲ ನೀರಿನ ಆಮ್ಲೀಯ ಗುಣ ಜಗತ್ತಿನಾದ್ಯಂತ ಹವಳಗಳ ಉಳಿವಿಗೆ ಬಹುದೊಡ್ಡ ಬೆದರಿಕೆಗಳಾಗಿದ್ದರೂ ಈ ಪರಿಸರ ವ್ಯವಸ್ಥೆ ಚೇತರಿಸಿಕೊಳ್ಳಲಿದೆ ಎಂಬ ವಿಶ್ವಾಸ ಅವರದು.

‘ಪೆಸಿಫಿಕ್‌ನ ಕ್ರಿಸ್‌ಮಸ್‌ ದ್ವೀಪದ ಹವಳಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ್ದೇನೆ. ಶೇ 85ರಷ್ಟು ಹವಳಗಳು ಜೀವ ಕಳೆದುಕೊಂಡಿವೆ. ಈಗ ಅದೊಂದು ಸ್ಮಶಾನ. ಆದರೆ ಅವು ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿರುವುದು ನೋಡಿ ಅಚ್ಚರಿಯಾಯಿತು. ತಾಪಮಾನ ವೈಪರೀತ್ಯವನ್ನು ತಗ್ಗಿಸುವುದು ನಮ್ಮ ಎದುರಿಗೆ ಇರುವ ಅತಿ ಮುಖ್ಯ ಮಾರ್ಗ. ಹವಳಗಳು ಮೃತಪಟ್ಟಿವೆ. ಇನ್ನೇನೂ ಮಾಡುವುದು ಉಳಿದಿಲ್ಲ ಎಂದು ಹೇಳುವ ಬದಲು ಈ ನಿಟ್ಟಿನಲ್ಲಿ ಮುಂದುವರಿಯಬೇಕಿದೆ’ ಎನ್ನುತ್ತಾರೆ ವಿಜ್ಞಾನಿ ಕಿಮ್‌ ಕಾಬ್‌.

2050ರವರೆಗೂ ಹವಳಗಳು ಅಸ್ತಿತ್ವ ಉಳಿಸಿಕೊಳ್ಳುತ್ತವೆ. ಆದರೆ ಅವು ಹೀಗೆಯೇ ದಟ್ಟವಾಗಿ ಬೆಸೆದುಕೊಂಡಿರದೆ, ತುಣುಕುಗಳಾಗಿ ಹಂಚಿಹೋಗಲಿವೆ. ಹವಳ ಜೀವಿಗಳ ನಾಶಕ್ಕೆ ದೀರ್ಘಕಾಲದ ಪರಿಸರ  ಬದಲಾವಣೆಗಳು ಕಾರಣವಾಗಿದ್ದರೂ, ಈ ದಿಬ್ಬಗಳು 1985ರ ಬಳಿಕವೇ ತನ್ನ ಅರ್ಧದಷ್ಟು ಹವಳದ ಮುಚ್ಚುಗೆಯನ್ನು ಕಳೆದುಕೊಂಡಿವೆ ಎಂದು ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ ವರದಿ ತಿಳಿಸಿದೆ.

ಪ್ರವಾಸಿಗರನ್ನು ಕರೆದೊಯ್ಯಲು ಸಮುದ್ರ ಪ್ರವಾಸೋದ್ಯಮವು ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿದೆ. ವೈವಿಧ್ಯಮಯ ದೋಣಿಗಳು, ಹಡಗುಗಳಲ್ಲಿ ಅಲ್ಪಾವಧಿ ಅಥವಾ ದೀರ್ಘಾವಧಿ ಪ್ರವಾಸಗಳನ್ನು ಆಯೋಜಿಸುತ್ತದೆ. ಹೆಲಿಕಾಪ್ಟರ್‌ ವೀಕ್ಷಣೆಗೂ ಅವಕಾಶವಿದೆ. ನೀರಿನೊಳಗೆ ಧುಮುಕಿ ಈಜಾಡುವ ಸೌಲಭ್ಯಗಳಿವೆ. ದಿಬ್ಬಗಳಿಗೆ ಹಾನಿಯಾಗಲು ಪ್ರವಾಸೋದ್ಯಮ ಚಟುವಟಿಕೆಗಳೂ ಕಾರಣ ಎಂಬ ಆರೋಪಗಳಿವೆ.

ಎಲ್ಲೆಲ್ಲೂ ಹವಳಗಳು: ಸಮುದ್ರದಲ್ಲಿನ ಬಂಡೆಗಳು, ಬೆಟ್ಟಗಳನ್ನು ಆಶ್ರಯಿಸುವ ಸೂಕ್ಷ್ಮಾಣು ಜೀವಿಗಳ ಮೊಟ್ಟೆಗಳಿಂದ ಮತ್ತು ಪಾಚಿಗಳು ಕವಲೊಡೆಯುವ ಮೂಲಕ ಹವಳಗಳು ಉತ್ಪತ್ತಿಯಾಗುತ್ತವೆ. ಈ ಹವಳದ ದಿಬ್ಬಗಳ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕು. ಕೋಟಿಗಟ್ಟಲೆ ವರ್ಷಗಳ ಹಿಂದೆ ಬೆಟ್ಟಗುಡ್ಡಗಳು ಸ್ಥಿತ್ಯಂತರ ಹೊಂದುವಾಗ ಈ ಸಾಲು ದಿಬ್ಬಗಳು ಸೃಷ್ಟಿಯಾದವು. ಈಗಿರುವ ದಿಬ್ಬದ ರಚನೆಯು 20 ಸಾವಿರ ವರ್ಷದ ಹಿಂದೆ ರೂಪುಗೊಂಡಿರುವಂಥವು. ಆ ವೇಳೆ ಸಮುದ್ರ ನೀರಿನ ಮಟ್ಟ ಕೇವಲ 60 ಮೀಟರ್‌ ಇತ್ತು. ಹವಳಗಳು ಆಗ ಕರಾವಳಿಯುದ್ದಕ್ಕೂ ಇರುವ ಬೆಟ್ಟಗಳನ್ನು ಆವರಿಸಿಕೊಳ್ಳತೊಡಗಿದವು. ಸಮುದ್ರ ಮಟ್ಟ ಏರಿದಂತೆ ಹವಳದ ವ್ಯಾಪ್ತಿಯೂ ಹಿಗ್ಗತೊಡಗಿತು.

ಹವಳಗಳು ಕೆಂಪು, ಹಳದಿ, ಕಂದು, ಹಸಿರು ಮುಂತಾದ ಬಣ್ಣಗಳಲ್ಲಿ ಕಂಡುಬರುತ್ತವೆ. ಒಂದು ಹವಳ 3 ರಿಂದ 56 ಮಿಲಿ ಮೀಟರ್‌ ಬೆಳೆಯಬಲ್ಲದು. ಹವಳಗಳ ದಿಬ್ಬಗಳು 75 ರಿಂದ 1,500 ಮೀಟರ್‌ ಉದ್ದದವರೆಗೆ ಹರಡುತ್ತವೆ. ಪರಿಸರದ ಮೇಲಿನ ಒತ್ತಡ ಪರಿಣಾಮಗಳಿಂದ ಈ ಹವಳದ ದಂಡೆಗಳು ತಮ್ಮ ಮೆರುಗು ಕಳೆದುಕೊಳ್ಳತೊಡಗುತ್ತವೆ. ಮುಖ್ಯವಾಗಿ, ತಾಪಮಾನ ಬದಲಾವಣೆಯಿಂದ ಸಮುದ್ರದ ನೀರು ಬಿಸಿಯಾದಂತೆ ಹವಳಗಳು ತಮ್ಮ ಸುತ್ತಲಿನ ಪಾಚಿಗಳನ್ನು ಹೊರಹಾಕುತ್ತವೆ. ಪಾಚಿಗಳಿಲ್ಲದೆ ಅವು ಉಳಿದುಕೊಳ್ಳಲು ಸಾಧ್ಯವಿಲ್ಲ. ಈಗ ನಡೆಯುತ್ತಿರುವುದು ಇದೇ ಅಪಾಯಕಾರಿ ಪ್ರಕ್ರಿಯೆ. ಕಡಲ ನೀರು ಬಿಸಿಯಾಗುತ್ತಿರುವುದರಿಂದ ಹವಳಗಳು ತಮ್ಮ ರಕ್ಷಣೆಗೆ ಇರುವ ಪಾಚಿಗಳನ್ನು ಕಳೆದುಕೊಳ್ಳುತ್ತಿವೆ. ಕ್ರಮೇಣ ಹೊಳಪು ಕಳೆದುಕೊಂಡು ಬಿಳಿಬಣ್ಣಕ್ಕೆ ತಿರುಗುತ್ತಿವೆ.

ಉಳಿಸಲು ಯೋಜನೆಗಳು: ಬೃಹತ್‌ ಜೀವ ವೈವಿಧ್ಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಹವಳದ ದಿಬ್ಬದ ಸಾಲನ್ನು ವಿಶ್ವಸಂಸ್ಥೆ 1981ರಲ್ಲಿ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿದೆ. ಈ ಅಪೂರ್ವ ದಿಬ್ಬಗಳನ್ನು ಮತ್ತು ಜೀವಸಂಕುಲವನ್ನು ಉಳಿಸಿಕೊಳ್ಳಲು ಜಗತ್ತಿನ ಹವಳ ಪರಿಣತರು ಸೇರಿ ಸಮಾಲೋಚನೆ ನಡೆಸುತ್ತಿದ್ದಾರೆ.  ಮಲೇಷ್ಯಾ, ಆಂಟಿಗುವಾ, ಹಂಡುರಸ್‌, ಪಪುವಾ ನ್ಯೂಗಿನಿ ದೇಶಗಳಲ್ಲಿಯೂ ಈ ಸಮಸ್ಯೆ ಕಾಡುತ್ತಿದೆ. ಹವಾಮಾನ ಏರಿಕೆಯನ್ನು ತಡೆಯುವುದರ ಜತೆಗೆ, ಪರ್ಯಾಯ ಮಾರ್ಗಗಳನ್ನು ಹುಡುಕುವ ಮತ್ತು ಮಾಹಿತಿ ವಿನಿಮಯದ ಪ್ರಯತ್ನಗಳು ನಡೆಯುತ್ತಿವೆ. ಹವಳದ ದಂಡೆಗಳಿರುವ ಭಾಗಗಳಿಗೆ ಶುದ್ಧ ನೀರು ಹರಿಸುವ ಯೋಜನೆ ಕಾರ್ಯರೂಪದಲ್ಲಿದೆ.

* ಜಗತ್ತಿನ ಅತಿ ದೊಡ್ಡ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದ್ದ ಆಸ್ಟ್ರೇಲಿಯಾದ ಹವಳದ ದಿಬ್ಬಗಳು ಬಹುತೇಕ ‘ಮರಣ ಹೊಂದಿವೆ’ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ. ಹವಾಮಾನ ವೈಪರೀತ್ಯ ನೈಸರ್ಗಿಕ ಅದ್ಭುತವೊಂದರ ವಿನಾಶಕ್ಕೆ ಕಾರಣವಾಗುತ್ತಿದೆ.

ನಿಯಂತ್ರಣ ಕ್ರಮಗಳು
* ನೀರಿನ ಗುಣಮಟ್ಟ ಸುಧಾರಣೆ ಯೋಜನೆ

* ಸಮುದ್ರಕ್ಕೆ ಮಾಲಿನ್ಯಕಾರದ ನೀರು ಸೇರುವುದನ್ನು ತಡೆಯುವ ಪ್ರಯತ್ನ
* ಸಮುದ್ರ ತೀರದ ಕೃಷಿ ಭೂಮಿಯಲ್ಲಿ ರಾಸಾಯನಿಕಗಳ ಬಳಕೆ ನಿಯಂತ್ರಣ
* ಕಠಿಣ ಕಾನೂನು ಮತ್ತು ನಿಯಮಗಳ ಅನುಷ್ಠಾನ

ಪ್ರಮುಖ ಕಾರಣಗಳು
* ಹವಾಮಾನ ವೈಪರೀತ

* ಹವಳಭಕ್ಷಕ ನಕ್ಷತ್ರ ಮೀನುಗಳು
* ಮಾಲಿನ್ಯ
* ಮೀನುಗಾರಿಕೆ
* ಹಡಗು ದುರಂತಗಳು
* ತೈಲ ಸೋರಿಕೆ
* ಚಂಡಮಾರುತಗಳು
* ಗಣಿಗಾರಿಕೆ
* ಹವಳ ಜೀವಿಗಳಿಗೆ ಬರುವ ಮಾರಕ ಕಾಯಿಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT