ಕರ್ನಾಟಕಕ್ಕೆ ತಪ್ಪದ ತೂಗುಗತ್ತಿ!

7

ಕರ್ನಾಟಕಕ್ಕೆ ತಪ್ಪದ ತೂಗುಗತ್ತಿ!

ಡಿ.ಉಮಾಪತಿ
Published:
Updated:

ನವದೆಹಲಿ: ತಜ್ಞರ ಸಮಿತಿಯ ವರದಿಯು ಮೇಲ್ನೋಟಕ್ಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಕಂಡರೂ ಆಳದಲ್ಲಿ ತಮಿಳುನಾಡಿನ ನೀರಿನ ಕೊರತೆಯನ್ನು ಗುರುತಿಸಿದೆ. ಜಲವರ್ಷದ (ಜೂನ್-ಮೇ) ಅಂತ್ಯದ ವೇಳೆಗೆ ತಮಿಳುನಾಡಿನ ಸಂಗ್ರಹ ಕೊರತೆ ಎದುರಿಸಲಿದ್ದು, ಕರ್ನಾಟಕದ ಬಳಿ ಅಗತ್ಯಕ್ಕಿಂತ ಹೆಚ್ಚು ನೀರು ಇರಲಿದೆ ಎಂದು ವರದಿಯ ಅಂಕಿ ಅಂಶಗಳು ಸಾರಿವೆ.

ಹೀಗಾಗಿ ತಮಿಳುನಾಡಿಗೆ ಇನ್ನಷ್ಟು ನೀರು ಬಿಡಿ ಎಂದು ಇಂದಲ್ಲ ನಾಳೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ನೀಡುವ ಸಾಧ್ಯತೆಗಳು ದಟ್ಟವಾಗಿವೆ.

ಕರ್ನಾಟಕ ಸುಮಾರು 24 ಟಿ.ಎಂ.ಸಿ. ಅಡಿಗಳಷ್ಟು ಹೆಚ್ಚುವರಿ ನೀರಿನ ಸಂಗ್ರಹ ಹೊಂದಲಿದ್ದು, ತಮಿಳುನಾಡು ಸುಮಾರು 20 ಟಿ.ಎಂ.ಸಿ. ಅಡಿಗಳಷ್ಟು ಖೋತಾ ಎದುರಿಸಲಿದೆ ಎಂದು ಅಂಕಿ ಅಂಶಗಳು ಹೇಳಿವೆ.

ಕುಡಿಯುವ ನೀರು ಮತ್ತು ನೀರಾವರಿ ಅಗತ್ಯವನ್ನು ಲೆಕ್ಕ ಹಾಕಿದರೆ ಕರ್ನಾಟಕಕ್ಕೆ ಬೇಕಿರುವ ನೀರು 65.48 ಟಿ.ಎಂ.ಸಿ. ಅಡಿಗಳು. ಆದರೆ ಕರ್ನಾಟಕದ ಸಂಗ್ರಹದಲ್ಲಿ 89.16 ಟಿ.ಎಂ.ಸಿ. ಅಡಿಗಳಷ್ಟು ನೀರು ಲಭ್ಯವಿರುವ ನಿರೀಕ್ಷೆ ಇದೆ. ಅಂದರೆ ಅಗತ್ಯಕ್ಕಿಂತ ಸುಮಾರು 24 ಟಿ.ಎಂ.ಸಿ. ಅಡಿಗಳಷ್ಟು ಹೆಚ್ಚುವರಿ ನೀರು ಕರ್ನಾಟಕದ ಸಂಗ್ರಹದಲ್ಲಿ ಇರುವುದೆಂದು ಸಮಿತಿ ಅಂದಾಜು ಮಾಡಿದೆ. ಇದೇ ರೀತಿ ತಮಿಳುನಾಡು ಸುಮಾರು 20 ಟಿ.ಎಂ.ಸಿ. ಅಡಿಗಳಷ್ಟು ಕೊರತೆ ಎದುರಿಸಲಿದೆ ಎಂದೂ ಅಂದಾಜು ಮಾಡಿದೆ.

ಹಿಂಗಾರು ಬೆಳೆಯನ್ನು ತ್ಯಾಗ ಮಾಡಿದ ನಂತರವೂ 4.27 ಲಕ್ಷ ಎಕರೆ ಪ್ರದೇಶದಲ್ಲಿನ ತನ್ನ ಬೆಳೆಗಳಿಗಾಗಿ ಕರ್ನಾಟಕಕ್ಕೆ ಅಗತ್ಯವಿರುವ ನೀರು 65.48 ಟಿ.ಎಂ.ಸಿ. ಅಡಿಗಳು. 2017ರ ಮೇ ಹೊತ್ತಿಗೆ ಕರ್ನಾಟಕದ ಜಲಾಶಯದಲ್ಲಿ ಲಭ್ಯವಿರುವುದು ಎಂದು ನಿರೀಕ್ಷಿಸಲಾಗಿರುವ ನೀರು 89.16 ಟಿ.ಎಂ.ಸಿ.ಅಡಿಗಳು. ಇದೇ ರೀತಿ ಪುದುಚೆರಿಗೆ ಬಿಡುಗಡೆ ಮಾಡಬೇಕಿರುವ ಮೂರು ಟಿ.ಎಂ.ಸಿ. ಅಡಿಗಳು ಸೇರಿದಂತೆ ತಮಿಳುನಾಡಿನ ಅಗತ್ಯ 163 ಟಿ.ಎಂ.ಸಿ. ಅಡಿಗಳು. ಆದರೆ ವಾಸ್ತವ ಲಭ್ಯತೆಯ ಅಂದಾಜು 143.18 ಟಿ.ಎಂ.ಸಿ.ಅಡಿಗಳು.

ಈಶಾನ್ಯ ಮಾರುತದ ಮಳೆಯು ಈ ಬಾರಿ ಎಂದಿನಂತೆ ಬೀಳಲಿದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆಗಳು ತಿಳಿಸಿವೆ. 2017ರ ಮೇ ತಿಂಗಳ ತನಕ ಕರ್ನಾಟಕದ ಜಲಾಶಯಗಳಿಗೆ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿರುವ ಒಟ್ಟು ನೀರಿನ ಪ್ರಮಾಣ 56.39 ಟಿ.ಎಂ.ಸಿ. ಅಡಿಗಳು. ಇದೇ ಅವಧಿಯಲ್ಲಿ ಮೆಟ್ಟೂರಿಗೆ ಹರಿದು ಬರಲಿದೆ ಎಂದು ಅಂದಾಜು ಮಾಡಲಾಗಿರುವ ನೀರಿನ ಪ್ರಮಾಣ 101.72 ಟಿ.ಎಂ.ಸಿ.ಅಡಿಗಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry