ಕಾವೇರಿ ಕಣಿವೆಯ ರೈತರ ಸ್ಥಿತಿ ಗಂಭೀರ

7
ಸುಪ್ರೀಂಕೋರ್ಟ್‌ಗೆ ಉನ್ನತ ಮಟ್ಟದ ತಜ್ಞರ ತಂಡದ ವರದಿ ಸಲ್ಲಿಕೆ

ಕಾವೇರಿ ಕಣಿವೆಯ ರೈತರ ಸ್ಥಿತಿ ಗಂಭೀರ

Published:
Updated:
ಕಾವೇರಿ ಕಣಿವೆಯ ರೈತರ ಸ್ಥಿತಿ ಗಂಭೀರ

ನವದೆಹಲಿ: ‘ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈಕೊಟ್ಟಿರುವ ಕಾರಣ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿನ ಕಾವೇರಿ ಕಣಿವೆಯ ರೈತರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಉನ್ನತ ಮಟ್ಟದ ತಜ್ಞರ ತಂಡವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ಅಧ್ಯಯನ ವರದಿಯಲ್ಲಿ ತಿಳಿಸಿದೆ.

ಅ. 7ರಿಂದ 14ರವರೆಗೆ ಕಾವೇರಿ ಕಣಿವೆ ಪ್ರದೇಶದಲ್ಲಿರುವ ಜಲಾಶಯಗಳು ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ತಜ್ಞರ ತಂಡವು, ಕರ್ನಾಟಕದ 4.27 ಲಕ್ಷ ಎಕರೆ ಹಾಗೂ ತಮಿಳುನಾಡಿನ 12 ಲಕ್ಷ ಎಕರೆ ವ್ಯಾಪ್ತಿಯಲ್ಲಿನ ಬೆಳೆಗೆ ನೀರಿನ ಅಗತ್ಯವಿದೆ ಎಂದು ಒತ್ತಿ ಹೇಳಿದೆ.

ಎರಡೂ ರಾಜ್ಯಗಳಲ್ಲಿ ನೀರಿನ ಕೊರತೆಯಿಂದಾಗಿ ಕೃಷಿಯು ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ವಿಶೇಷವಾಗಿ ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಕೃಷಿ ಕಾರ್ಮಿಕರು, ಮೀನುಗಾರರು ಉದ್ಯೋಗದಿಂದ ವಂಚಿತರಾಗಿದ್ದು, ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಗುಳೆ ಹೋಗುತ್ತಿದ್ದಾರೆ. ಮಳೆಯ ಕೊರತೆಯು ಈ ವರ್ಗಕ್ಕೆ ಭಾರಿ ಆರ್ಥಿಕ ಹೊಡೆತ ನೀಡಿದೆ ಎಂದು ತಿಳಿಸಲಾಗಿದೆ.

ಕರ್ನಾಟಕದಲ್ಲಿ ಸತತ ಎರಡನೇ ವರ್ಷವೂ ಬರಗಾಲ ಸ್ಥಿತಿ ಮುಂದುವರಿದಿದ್ದು,  ಕಾವೇರಿ ಕಣಿವೆಯ ಒಟ್ಟು 48 ತಾಲ್ಲೂಕುಗಳ ಪೈಕಿ 42 ತಾಲ್ಲೂಕುಗಳನ್ನು ‘ಬರಪೀಡಿತ’ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂಬುದನ್ನು ಮುಖ್ಯವಾಗಿ ಪ್ರಸ್ತಾಪಿಸಲಾಗಿದೆ.

ಕರ್ನಾಟಕದಲ್ಲಿನ ಕಾವೇರಿ ಕಣಿವೆಯ ಒಟ್ಟು 10.87 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ಪೈಕಿ, ಕೇವಲ 6.15 ಲಕ್ಷ ಎಕರೆಯಲ್ಲಿ ಬಿತ್ತನೆ ಮಾಡಲಾಗಿದೆ.

ಅದರಲ್ಲಿ 1.88 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆಯು ನೀರು ದೊರೆಯದೆಯೇ ಒಣಗಿಹೋಗಿದ್ದು, ಮಿಕ್ಕ 4.27 ಲಕ್ಷ ಎಕರೆಯಲ್ಲಿನ ಬೆಳೆಯ ರಕ್ಷಣೆಗೆ ಇನ್ನೂ ಮೂರು ಅಥವಾ ನಾಲ್ಕು ಬಾರಿ ನೀರು ಹರಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.

ತಮಿಳುನಾಡಿನಲ್ಲಿಯೂ ಸಾಂಬಾ ಬೆಳೆ ಸಂಕಷ್ಟ ಸ್ಥಿತಿ ಎದುರಿಸುತ್ತಿದೆ. ಅಲ್ಲಿನ ಒಟ್ಟು 12 ಲಕ್ಷ ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಇನ್ನೂ 18 ಬಾರಿ ನೀರು ಹರಿಸಿದಲ್ಲಿ ಮಾತ್ರ ಬೆಳೆ ಕೈಗೆಟುಕಲಿದೆ. ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ ಅ.13ಕ್ಕೆ ದಾಖಲಾಗಿರುವಂತೆ ಬಳಕೆ ಮಾಡಬಹುದಾದ 22.90 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದರೆ, ಅದೇ ವೇಳೆಗೆ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿನ ಸಂಗ್ರಹ 31.66 ಟಿಎಂಸಿ ಅಡಿ ಇದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ನೀರಿನ ಅಗತ್ಯ:ಕರ್ನಾಟಕದ ರೈತರ 4.27 ಲಕ್ಷ ಎಕರೆ ಭೂಮಿಯಲ್ಲಿನ ಬೆಳೆ ಕೈಗೆಟುಕಲು ಮೂರರಿಂದ ನಾಲ್ಕು ಬಾರಿ ನೀರು ಹರಿಸಬೇಕಿದೆ. ಅದಕ್ಕಾಗಿ ಇನ್ನೂ 36.38 ಟಿಎಂಸಿ ಅಡಿ ನೀರು ಬೇಕಿದೆ. 2017ರ ಮೇ ಅಂತ್ಯದವರೆಗೆ ಕುಡಿಯುವುದಕ್ಕೆ ಸೇರಿದಂತೆ 65.48 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮೇ ಅಂತ್ಯದವರೆಗೆ ಕರ್ನಾಟಕದ ಜಲಾಶಯಗಳಿಗೆ ಒಟ್ಟು 89.16 ಟಿಎಂಸಿ ಅಡಿ ನೀರು ಹರಿದುಬರುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.

ತಮಿಳುನಾಡಿನ ರೈತರ ಬೆಳೆಗಳ ರಕ್ಷಣೆಗೆ 133 ಟಿಎಂಸಿ ಅಡಿ, ಕುಡಿಯುವುದಕ್ಕೆ 22 ಟಿಎಂಸಿ ಅಡಿ, ಆವಿಯಾಗುವ 5 ಟಿಎಂಸಿ ಅಡಿ ನೀರನ್ನು ಒಳಗೊಂಡಂತೆ ಮೇ ಅಂತ್ಯದವರೆಗೆ 160 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಪುದುಚೇರಿಗೆ ಪ್ರತ್ಯೇಕವಾಗಿ 3 ಟಿಎಂಸಿ ಅಡಿ ನೀರು ಹರಿಸಬೇಕಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅವೈಜ್ಞಾನಿಕ ಮಾಪಕಗಳು: ಕರ್ನಾಟಕವು ತಮಿಳುನಾಡಿಗೆ ಹರಿಸುವ ಕಾವೇರಿ ನೀರನ್ನು ಅಳೆಯುವ ಬಿಳಿಗುಂಡ್ಲುವಿನ ಬಳಿಯ ಮಾಪನ ಹಾಗೂ ನಾಲ್ಕು ಜಲಾಶಯಗಳ ಒಳಹರಿವು ಮತ್ತು ಹೊರಹರಿವನ್ನು ಅಳೆಯುವ ಮಾಪನಗಳು ಅವೈಜ್ಞಾನಿಕವಾಗಿದ್ದು, ಕೂಡಲೇ ಆಧುನಿಕ ಮಾಪಕಗಳನ್ನು ಅಳವಡಿಸುವ ಅಗತ್ಯವಿದೆ ಎಂದೂ ಸಮಿತಿ ಅಭಿಪ್ರಾಯಪಟ್ಟಿದೆ.

‘ಪ್ರಸಕ್ತ ಸಾಲಿನಲ್ಲಿ ಉಭಯ ರಾಜ್ಯಗಳಲ್ಲಿ ಶೇ 51ರಷ್ಟು ಮಳೆಯ  ಕೊರತೆ ಎದುರಾಗಿದೆ. ಆದರೆ, ಈಶಾನ್ಯ ಮಳೆಯ ಮಾರುತಗಳು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿರುವುದು ಆಶಾದಾಯಕವಾಗಿ ಪರಿಣಮಿಸಿದೆ. ಒಂದೊಮ್ಮೆ ನಿರೀಕ್ಷಿತ ಪ್ರಮಾಣದ ಮಳೆ ಸುರಿದಲ್ಲಿ ತಮಿಳುನಾಡಿಗೆ ಇನ್ನಷ್ಟು ನೀರು ದೊರೆಯಲಿದೆ. ಜತೆಗೆ ಕರ್ನಾಟಕದ ಜಲಾಶಯಗಳಿಗೆ ಇನ್ನೂ 56.39 ಟಿಎಂಸಿ ಅಡಿ ನೀರು ಹರಿದುಬರಲಿದೆ ಎಂದು ತಿಳಿಸಲಾಗಿದೆ.

ಮಳೆಯ ಪ್ರಮಾಣ, ಒಳಹರಿವು, ನೀರಿನ ಬಳಕೆ, ಅಗತ್ಯ ಕುರಿತಂತೆ ಕಳೆದ 29 ವರ್ಷಗಳ ಅಂಕಿ– ಅಂಶವನ್ನು ಅವಲೋಕಿಸಿ ಅಧ್ಯಯನ ನಡೆಸಲಾಗಿದೆ. ಉಭಯ ರಾಜ್ಯಗಳ ಅಚ್ಚುಕಟ್ಟು ಪ್ರದೇಶಗಳಿಗೆ, ಜಲಾಶಯಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ.

ಮೇಲ್ಮನವಿ ವಿಚಾರಣೆ ಇಂದು

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ಕೋರಿ ತಮಿಳುನಾಡು ಸರ್ಕಾರವು ಕಳೆದ ಆಗಸ್ಟ್‌ 22ರಂದು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮೊದಲ ಬಾರಿಗೆ ಸೆ. 5ರಂದು ನಡೆಸಿದ್ದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು, ಇದೇ 18ರಂದು ಮತ್ತೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಸೆ. 12, ಸೆ. 20, ಸೆ. 27 ಮತ್ತು ಸೆ. 30ರಂದು ವಿಚಾರಣೆ ನಡೆಸಿ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ್ದ ಕೋರ್ಟ್‌, ಕರ್ನಾಟಕವು ಆದೇಶ ಪಾಲನೆ ಮಾಡದ್ದರಿಂದ ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಉನ್ನತ ಮಟ್ಟದ ತಜ್ಞರ ತಂಡಕ್ಕೆ ಅಕ್ಟೋಬರ್‌ 4ರಂದು ಸೂಚಿಸಿತ್ತಲ್ಲದೆ, 10 ದಿನಗಳ ಕಾಲ ನಿತ್ಯ 2,000 ಕ್ಯುಸೆಕ್‌ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿತ್ತು.  ಕೋರ್ಟ್ ಸೂಚ ನೆಯ ಪ್ರಕಾರ ತಂಡವು ಸೋಮವಾರ ವರದಿ ಸಲ್ಲಿಸಿದ್ದು, ವರದಿಯನ್ನು ಆಧರಿಸಿ ಮತ್ತೆ ಆದೇಶ ಹೊರಡಿಸುವ ಸಾಧ್ಯತೆ ಇದೆ.

ವಿಶೇಷ ಅರ್ಜಿ: ಕಾವೇರಿ ಜಲವಿವಾದ ನ್ಯಾಯಮಂಡಳಿ 2007ರಲ್ಲಿ ನೀಡಿರುವ ಐತೀರ್ಪನ್ನು ಪ್ರಶ್ನಿಸಿ ಕರ್ನಾಟಕ, ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳು ಸಲ್ಲಿಸಿರುವ ವಿಶೇಷ ಅರ್ಜಿ ಹಾಗೂ ಕಾವೇರಿ ನಿರ್ವಹಣಾ ಮಂಡಳಿ ರಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಇದೇ 18ರಂದೇ ಆರಂಭಿಸಲಿದೆ.

ನೀರಿನ ತಿಳಿವಳಿಕೆ ಅಗತ್ಯ

‘ಕಾವೇರಿ ಕಣಿವೆಯಲ್ಲಿನ ರೈತರು ಶತಮಾನದಷ್ಟು ಹಳೆಯದಾದ ನೀರಾವರಿ ಪದ್ಧತಿಯನ್ನೇ ಅನುಸರಿಸುತ್ತಿದ್ದು, ಸೂಕ್ತ, ಕ್ರಿಯಾತ್ಮಕ ಮತ್ತು ನೀರಿನ ಗರಿಷ್ಠ ಸದ್ಬಳಕೆಯ ಪದ್ಧತಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂಬ ಅಂಶವನ್ನು ತಜ್ಞರ ತಂಡ ಪ್ರಧಾನವಾಗಿ ಪ್ರಸ್ತಾಪಿಸಿದೆ.

ಮಳೆಯ ಕೊರತೆಯ ಸಂದರ್ಭ ಎದುರಾಗುವ ಸಂಕಷ್ಟ ಸ್ಥಿತಿಯ ನಿವಾರಣೆಗಾಗಿ ಕಾವೇರಿ ಕಣಿವೆಯ ರೈತರಲ್ಲಿ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಸೂಕ್ತ ತಿಳಿವಳಿಕೆ ಮೂಡಿಸಬೇಕಿದೆ. ನೀರಿನ ಮಹತ್ವವನ್ನು ತಿಳಿಯಪಡಿಸುವ ಅಗತ್ಯವೂ ಇದೆ ಎಂಬುದನ್ನು ಮನವರಿಕೆ ಮಾಡಲಾಗಿದೆ.

ಮಳೆಯ ಕೊರತೆಯ ವೇಳೆ, ಲಭ್ಯವಿರುವ ನೀರಿನ ಸಮರ್ಪಕ ಬಳಕೆಗೆ ಆಧುನಿಕ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯ.  ಜಮೀನುಗಳಲ್ಲಿನ ನೀರಿನ ಬಳಕೆಯ ವಿಧಾನವೂ ಅವೈಜ್ಞಾನಿಕವಾಗಿದ್ದು, ರೈತರಿಗೆ ನೀರಿನ ಮಹತ್ವ ಏನು ಎಂಬುದನ್ನೇ ತಿಳಿಸಿಲ್ಲ ಎಂದು ಹೇಳಿದೆ.

ಆಯಾ ಪ್ರದೇಶದಲ್ಲಿರುವ ಮಣ್ಣಿನ ಗುಣಕ್ಕೆ ಅನುಗುಣವಾಗಿ ನೀರಿನ ಬಳಕೆಯನ್ನು ಮಾಡಲಾಗುತ್ತಿಲ್ಲ. ಅಲ್ಲದೆ, ಒಂದು ಜಮೀನಿನಿಂದ, ಪಕ್ಕದ ಜಮೀನಿಗೆ ನೀರು ಹರಿಸುವಾಗ ನೀರನ್ನು ಪೋಲು ಮಾಡಲಾಗುತ್ತಿದೆ. ಅತ್ಯಾಧುನಿಕ ಮಾದರಿಯ ನೀರಾವರಿ ಸೌಲಭ್ಯವನ್ನು ಒದಗಿಸುವ ಮೂಲಕ ನೀರಿನ ಮಿತ ಬಳಕೆಗೂ ಆದ್ಯತೆ ನೀಡಬೇಕಿದೆ. ಕೊಳವೆ ಮೂಲಕ ನೀರು ಹರಿಸುವ ಹನಿ ಮತ್ತು ಸಿಂಪಡಿಸುವ ನೀರಾವರಿ ಸೌಲಭ್ಯ ಒಳಗೊಂಡ ಕಿರು ನೀರಾವರಿ ಪದ್ಧತಿಯನ್ನು ಪರಿಚಯಿಸಬೇಕಿದೆ ಎಂದು ತಿಳಿಸಲಾಗಿದೆ.

ನಾರಿಮನ್‌ ಜತೆ ಪಾಟೀಲ್‌ ಚರ್ಚೆ

ನವದೆಹಲಿ: ಕಾನೂನು ಸಚಿವ ಟಿ.ಬಿ. ಜಯಚಂದ್ರ, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಅಧಿಕಾರಿಗಳು ಸೋಮವಾರ ಸಂಜೆ ಹಿರಿಯ ಕಾನೂನು ತಜ್ಞ ಫಾಲಿ ನಾರಿಮನ್‌ ಅವರನ್ನು ಭೇಟಿ ಮಾಡಿ ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

ಉನ್ನತ ಮಟ್ಟದ ತಜ್ಞರ ತಂಡವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಮಂಗಳವಾರ ಆರಂಭವಾಗಲಿರುವ ವಿಶೇಷ ಅರ್ಜಿಯ ವಿಚಾರಣೆ ಕುರಿತು ಭೇಟಿಯ ವೇಳೆ ಚರ್ಚಿಸಲಾಯಿತು ಎಂದು ಸಚಿವ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.

ಕಾನೂನು ತಂಡದ ಸದಸ್ಯ ಮೋಹನ್‌ ಕಾತರಕಿ, ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌ ಅವ ರೊಂದಿಗೆ ಇಬ್ಬರೂ ಸಚಿವರು ಇದಕ್ಕೂ ಮುನ್ನ ಕರ್ನಾಟಕ ಭವನದಲ್ಲಿ ಸಭೆ ನಡೆಸಿ ಚರ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry