ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದಿಷ್ಟ ದಾಳಿಗೆ ಆರ್‌ಎಸ್‌ಎಸ್‌ ಪ್ರೇರಣೆ?

Last Updated 17 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಿರ್ದಿಷ್ಟ ದಾಳಿ ನಡೆಸಲು ಆದೇಶ ನೀಡುವುದರ ಹಿಂದೆ ‘ಆರ್‌ಎಸ್‌ಎಸ್‌ನ ಬೋಧನೆಗಳು’ ಪ್ರೇರಣೆಯಾಗಿರುವ ಸಾಧ್ಯತೆಗಳಿವೆ ಎಂಬ ಸೂಚನೆಯನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ನೀಡಿದರು.

‘ಮಹಾತ್ಮ ಗಾಂಧಿಯ ನಾಡಿನಿಂದ ಬಂದ ಪ್ರಧಾನಿ, ನಿರ್ದಿಷ್ಟ ದಾಳಿಯನ್ನು ಎಂದೂ ನೋಡದ ಗೋವಾದ ನಾನು ರಕ್ಷಣಾ ಸಚಿವ... ಈ ಇಬ್ಬರು ಸೇರಿಕೊಂಡಾಗ ನಿರ್ದಿಷ್ಟ ದಾಳಿ ನಡೆದಿದೆ. ಬಹುಶಃ ಇದರ ಮೂಲದಲ್ಲಿ ಆರ್‌ಎಸ್‌ಎಸ್‌ನ ಬೋಧನೆ ಇದ್ದಿರಬೇಕು. ಆದರೆ ನಮ್ಮಿಬ್ಬರ ಸೇರುವಿಕೆ, ಬೇರೆಯದೇ ಮಾದರಿಯದ್ದು’ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪರಿಕ್ಕರ್ ಹೇಳಿದರು.

ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವವರನ್ನು ಟೀಕಿಸಿದ ಪರಿಕ್ಕರ್, ‘ಸೇನೆಯ ಕಾರ್ಯಾಚರಣೆಯು ರಾಷ್ಟ್ರದ ಭದ್ರತೆ ಬಗ್ಗೆ ದೇಶವಾಸಿಗಳಲ್ಲಿನ ಸಂವೇದನಾಶೀಲತೆಯನ್ನು ಹೆಚ್ಚಿಸಿದೆ’ ಎಂದರು.

‘ನಿರ್ದಿಷ್ಟ ದಾಳಿ ನಡೆದ ದಿನದಿಂದಲೂ ಕೆಲವು ರಾಜಕಾರಣಿಗಳು ಸಾಕ್ಷ್ಯ ಕೇಳುತ್ತಿದ್ದಾರೆ. ಆದರೆ, ಕೆಲವರಿಗೆ ಸಾಕ್ಷ್ಯ ಕೊಟ್ಟರೂ ಸಾಕಾಗುವುದಿಲ್ಲ. ನಮ್ಮದು ವಿಶ್ವದಲ್ಲೇ ಅತ್ಯುತ್ತಮ ಸೇನೆ. ಅದು ಹೇಳುವುದನ್ನು ನಂಬಲೇಬೇಕು’ ಎಂದು ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಹೇಳಿದರು.

‘ನಿರ್ದಿಷ್ಟ ದಾಳಿಯ ನಂತರ ಒಳ್ಳೆಯ ಬೆಳವಣಿಗೆಗಳೂ ನಡೆದಿವೆ. ಕೆಲವು ರಾಜಕಾರಣಿಗಳನ್ನು ಹೊರತುಪಡಿಸಿದರೆ, ಪ್ರತಿ ಭಾರತೀಯನೂ ಧೈರ್ಯಶಾಲಿ ಯೋಧರ ಬೆಂಬಲಕ್ಕೆ ನಿಂತಿದ್ದಾನೆ’ ಎಂದು ಪರಿಕ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗುಜರಾತ್ ಗಡಿಯಲ್ಲಿ ಬೇಲಿ ನಿರ್ಮಿಸುವುದು ಕಷ್ಟದ ಕೆಲಸ. ಅದು ಜವುಗು ಪ್ರದೇಶ. ಆದರೆ, ತಂತ್ರಜ್ಞಾನದ ನೆರವಿನಿಂದ ಅಲ್ಲಿ ಅಕ್ರಮ ನುಸುಳುವಿಕೆ ತಡೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೋದಿ ಕಟುಕ– ಬಿಲಾವಲ್‌ ಆರೋಪ:
ಕರಾಚಿ ವರದಿ): ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಕಾಶ್ಮೀರ ಹಾಗೂ ಗುಜರಾತಿನಲ್ಲಿ ಕಟುಕನಂತೆ ವರ್ತಿಸಿದವರು’ ಎಂದು ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೊ ಜರ್ದಾರಿ ಆರೋಪಿಸಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಗಮನವನ್ನು ಬೇರೆಡೆ ತಿರುಗಿಸಲು ಮೋದಿ ಅವರು ಪಾಕಿಸ್ತಾನವನ್ನು ಬೈಯುತ್ತಿದ್ದಾರೆ ಎಂದು ಜರ್ದಾರಿ ದೂಷಿಸಿದ್ದಾರೆ.

ಭಯೋತ್ಪಾದಕರ ‘ಕಾರ್ಖಾನೆ’ ಮುಚ್ಚಲು ಪಾಕ್‌ಗೆ ನೆರವು: ರಾಜನಾಥ್‌
ಚಂಡೀಗಡ (ಪಿಟಿಐ):
ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಇರುವ ಭಯೋತ್ಪಾದಕ ‘ಕಾರ್ಖಾನೆ‘ಗಳನ್ನು ಮುಚ್ಚಲು ಅಗತ್ಯವಾದ ಜನಾಂದೋಲನ ನಡೆಸಲು ಪಾಕಿಸ್ತಾನಕ್ಕೆ ಸಹಾಯ ಮಾಡಲು ಭಾರತ ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

ಇಡೀ ಪಾಕಿಸ್ತಾನ ಸರ್ಕಾರವೇ ಭಾರತದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆಪಾದಿಸಿದ  ರಾಜನಾಥ್ ಸಿಂಗ್, ಕುಮ್ಮಕ್ಕು ನೀಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈಶಾನ್ಯ ರಾಜ್ಯಗಳ ಮಾಧ್ಯಮಗಳ ಸಂಪಾದಕರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪಾಕಿಸ್ತಾನ ಸರ್ಕಾರವೇ ಭಾರತದ ವಿರುದ್ಧ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರು ವುದರಿಂದ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಕೆಲವು ಭಾಗಗಳ ನಿರ್ವಹಣೆ ಕ್ಲಿಷ್ಟಕರವಾಗಿದೆ’ ಎಂದು ಹೇಳಿದರು.

‘ನಿರ್ದಿಷ್ಟ ದಾಳಿ: ಮಗನ ಸಾವಿಗೆ ಗೌರವ’
ಸಂಭಾಲ್‌ (ಪಿಟಿಐ):
‘ಭಯೋತ್ಪಾದನೆಯನ್ನು ಅಂತ್ಯಗೊಳಿಸಲು ಇನ್ನಷ್ಟು ನಿರ್ದಿಷ್ಟ ದಾಳಿಗಳನ್ನು ನಡೆಸಬೇಕು. ಅದು ನನ್ನ ಮಗನ ಸಾವಿಗೆ ನೀಡುವ ನಿಜವಾದ ಗೌರವ’ ಎಂದು ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನಿ ಪಡೆಗಳ ಗುಂಡಿಗೆ ಬಲಿಯಾದ ಯೋಧ ಸುದೇಶ್‌ ಕುಮಾರ್‌ ಅವರ ತಂದೆ ಹೇಳಿದ್ದಾರೆ.

ಉತ್ತರ ಪ್ರದೇಶದ ಪನ್ಸುಕಾ ಮಿಲಕ್‌ ಗ್ರಾಮದ ರೈತ ಬ್ರಹ್ಮಪಾಲ್‌ ಸಿಂಗ್‌, ತಮ್ಮ  ಮಗ ಸುದೇಶ್‌ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾನೆ. ಆತನ ಬಗ್ಗೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.

ಧರ್ಮಪಾಲ್‌ ಅವರ ಐವರು ಮಕ್ಕಳಲ್ಲಿ ಕೊನೆಯವರಾದ 24 ವರ್ಷದ ಸುದೇಶ್‌, ನಾಲ್ಕು ವರ್ಷದ ಹಿಂದೆ ಸೇನೆ ಸೇರಿದ್ದರು. ಮದುವೆಯಾಗಿ ಮೂರು ವರ್ಷವಾಗಿದ್ದ ಅವರಿಗೆ ನಾಲ್ಕು ತಿಂಗಳ ಮಗಳಿದ್ದಾಳೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲಾ ವಲಯದ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಪಾಕಿಸ್ತಾನ ಸೇನೆ ಭಾರತೀಯ ಸೇನಾ ನೆಲೆಗಳ ಮೇಲೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಸುದೇಶ್‌ ಬಲಿಯಾಗಿದ್ದರು.

* ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಐದಾರು ವರ್ಷಗಳಿಂದ ಆಗುತ್ತಿದೆ. ಆದರೆ ನಾವು ಅದಕ್ಕೆ ಈಗ ತಕ್ಕ ಉತ್ತರ ನೀಡುತ್ತಿದ್ದೇವೆ.
–ಮನೋಹರ ಪರಿಕ್ಕರ್, ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT