ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮೈಲುಗಲ್ಲು

7
ಮಾನವ ಸಹಿತ ಬಾಹ್ಯಾಕಾಶ ನೌಕೆ ಯಶಸ್ವಿ ಉಡಾವಣೆ * ಅಮೆರಿಕ, ರಷ್ಯಾ, ಯುರೋಪ್‌ಗೆ ಪೈಪೋಟಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮೈಲುಗಲ್ಲು

Published:
Updated:
ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮೈಲುಗಲ್ಲು

ಬೀಜಿಂಗ್‌ : 2022ರ ವೇಳೆಗೆ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಯೊಂದಿಗೆ ಚೀನಾವು ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಇಬ್ಬರು ಗಗನಯಾತ್ರಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.

ಜಿಂಗ್ ಹೈಪೆಂಗ್‌ (50), ಚೆಂಗ್ ಡಾಂಗ್ (37) ಅವರನ್ನು ಒಳಗೊಂಡ ‘ಶೆಂಝೌ–11’ ಬಾಹ್ಯಾಕಾಶ ನೌಕೆ ಉತ್ತರ ಚೀನಾದ ಜಿಯುಖ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಬೆಳಿಗ್ಗೆ 7.30ಕ್ಕೆ ಅಂತರಿಕ್ಷಯಾನ ಕೈಗೊಂಡಿತು. ಇದನ್ನು ಲಾಂಗ್‌ ಮಾರ್ಚ್–2ಎಫ್‌ ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು.

ಬಾಹ್ಯಾಕಾಶ ನೌಕೆ ಉಡಾವಣೆ ಯನ್ನು ಚೀನಾದ ಸರ್ಕಾರಿ ಮಾಧ್ಯಮ ನೇರ ಪ್ರಸಾರ ಮಾಡಿದೆ. ಉಡಾವಣೆ ಯಶಸ್ವಿಯಾಗಿದೆ ಎಂದು ಯೋಜನೆಯ ಮುಖ್ಯ ಕಮಾಂಡರ್ ಘೋಷಿಸಿದ್ದಾರೆ.

‘ಇಬ್ಬರೂ ಗಗನಯಾತ್ರಿಗಳು ಟಿಯಾಂಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 30 ದಿನ ಇರಲಿದ್ದಾರೆ. ಇಷ್ಟೊಂದು ದೀರ್ಘ ಅವಧಿಗೆ ದೇಶದ ಗಗನಯಾತ್ರಿಗಳು ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ತಂಗಲಿರುವುದು ಇದೇ ಮೊದಲು’ ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ಎಂಜಿನಿಯರಿಂಗ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರ ಮತ್ತು ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸುವ ನಿಟ್ಟಿನಲ್ಲಿಯೂ ಈ ಪ್ರಯೋಗ ಮಹತ್ವದ್ದಾಗಲಿದೆ ಎನ್ನಲಾಗಿದೆ.

ಏನು ಮಾಡಲಿದ್ದಾರೆ?: ಪ್ರಯೋಗಾಲಯದಲ್ಲಿ ಗಗನಯಾತ್ರಿಗಳು  ಬಾಹ್ಯಾಕಾಶ ತಂತ್ರಜ್ಞಾನ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಗಳನ್ನು ನಡೆಸಲಿದ್ದಾರೆ.

ಮೈಲುಗಲ್ಲು: ಮಾನವ ಸಹಿತ ಬಾಹ್ಯಾಕಾಶ ನೌಕೆಯ ಯಶಸ್ವಿ ಉಡಾವಣೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶ್ಲಾಘಿಸಿದ್ದಾರೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಗೋವಾದಲ್ಲಿರುವ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲು ಎಂದು ಅವರು ಬಣ್ಣಿಸಿದ್ದಾರೆ.

ಗಗನಯಾತ್ರಿಗಳನ್ನು ಕಳುಹಿಸುವ ಸಲುವಾಗಿ ಬಾಹ್ಯಾಕಾಶ ಪ್ರಯೋಗಾಲಯವನ್ನು ಚೀನಾ ಕಳೆದ ತಿಂಗಳು ಉಡಾವಣೆ ಮಾಡಿತ್ತು. ಸದ್ಯ ಅಮೆರಿಕ, ರಷ್ಯಾ ಮತ್ತು ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳು ಜಂಟಿಯಾಗಿ ಬಾಹ್ಯಾಕಾಶ ನಿಲ್ದಾಣ ಹೊಂದಿವೆ. ಇದಕ್ಕೆ ಪೈಪೋಟಿ ನೀಡುವುದು ಚೀನಾದ ಉದ್ದೇಶವಾಗಿದೆ. ಸದ್ಯ ಅಸ್ತಿತ್ವದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾಲಾವಧಿ 2024ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಚೀನಾದ ಪ್ರಯತ್ನ ಯಶಸ್ವಿಯಾದಲ್ಲಿ 2024ರ ನಂತರ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹೊಂದಿರುವ ಏಕೈಕ ರಾಷ್ಟ್ರ ಎಬ ಹೆಗ್ಗಳಿಕೆ ಆ ರಾಷ್ಟ್ರದ್ದಾಗಲಿದೆ.* ನಿಗದಿತ ಸ್ಥಾನ ತಲುಪಲು ನೌಕೆಗೆ ಎರಡು ದಿನ ಬೇಕು

* ಇಬ್ಬರು ಗಗನಯಾತ್ರಿಗಳು ಪ್ರಯೋಗಾಲಯದಲ್ಲಿ ಒಂದು ತಿಂಗಳು ಕಳೆಯಲಿದ್ದಾರೆ

* ಚೀನಾ ಗಗನಯಾತ್ರಿಗಳಿಂದ ಇಷ್ಟು ದೀರ್ಘ ಅವಧಿಯ ಬಾಹ್ಯಾಕಾಶ ಯಾತ್ರೆ ಇದೇ ಮೊದಲು

* 2022ರ ವೇಳೆಗೆ ಬಾಹ್ಯಾಕಾಶ ನಿಲ್ದಾಣ ಹೊಂದುವುದು ಚೀನಾದ ಗುರಿ

* ಉಡಾವಣೆ ಎಲ್ಲಿಂದ?

– ಉತ್ತರ ಚೀನಾದ ಜಿಯುಖ್ವಾನ್  ಉಪಗ್ರಹ ಉಡಾವಣಾ ಕೇಂದ್ರದಿಂದಉಡಾವಣಾ ಸಮಯ

ಸೋಮವಾರ ಬೆಳಿಗ್ಗೆ 7.30ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 5 ಗಂಟೆಗೆ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry