6

ನಮ್ಮ ನಡುವಿನ ರಿಯಲ್‌ ಹೀರೊಗಳು!

Published:
Updated:
ನಮ್ಮ ನಡುವಿನ ರಿಯಲ್‌ ಹೀರೊಗಳು!

ಇಬ್ಬರು ಗೆಳೆಯರ ಕಾಡು ಹರಟೆ ಕಠಿಣ ಸವಾಲಿನಲ್ಲಿ ಅಂತ್ಯಗೊಂಡಿತು. ಇದು ಊರಿನವರ ಕಿವಿಗೂ ಬಿದ್ದಿತು. ಎಲ್ಲರೂ ಒಂದೇ ಧ್ವನಿಯಲ್ಲಿ ‘ಅಸಾಧ್ಯ’ ಎಂದರು. ಆದರೂ ಮಹಾದೇವಪ್ಪ ಜಗ್ಗಲಿಲ್ಲ. ಪಂದ್ಯ ಶುರುವಾಯಿತು. ಯಾದಗಿರಿ ಜಿಲ್ಲೆ ರಾಮಸಮುದ್ರದಿಂದ ಗುರುಮಠಕಲ್‌ ಬಸ್‌ನಿಲ್ದಾಣದವರೆಗೆ ಟ್ರ್ಯಾಕ್ಟರ್‌ ಅನ್ನು ಟ್ರ್ಯಾಲಿ ಸಹಿತ ಹಿಮ್ಮುಖವಾಗಿ ಚಲಾಯಿಸುವುದೇ ಪಂದ್ಯ!

ಮಹಾದೇವಪ್ಪ ಟ್ರ್ಯಾಕ್ಟರ್‌ ಏರಿದರು. ಎಲ್ಲರಿಗೂ ಈ ಪಂದ್ಯ ಧರ್ಮಪುರ ಬೆಟ್ಟದ ತಿರುವುಗಳಲ್ಲಿ ಕೈತಪ್ಪುತ್ತದೆ ಎನ್ನುವ ಅಂದಾಜು. ಟ್ರ್ಯಾಕ್ಟರ್‌ ಹತ್ತು ಕಿಲೊಮೀಟರ್‌ಗಳಷ್ಟು ಏರುಮುಖವಾಗಿ ಚಲಿಸಬೇಕಿತ್ತು. ತಿರುವುಗಳಿಂದ ಕೂಡಿದ ಕಠಿಣ ಹಾದಿ ಅದಾಗಿತ್ತು. ಹೆಚ್ಚು ಕಡಿಮೆಯಾದರೂ ಟ್ರ್ಯಾಕ್ಟರ್‌ ಸಹಿತ ಮಹಾದೇವಪ್ಪ ಕಣಿವೆ ಪಾಲಾಗುತ್ತಿದ್ದರು. ಆದರೂ ಎಲ್ಲ ಅಡೆತಡೆಗಳನ್ನು ಮೀರಿ 36 ಕಿಲೊಮೀಟರ್‌ಗಳ ಗುರಿಯನ್ನು ಮುಟ್ಟಿದರು.

ನಾಗರ ಪಂಚಮಿ ಬಂತೆಂದರೆ ಈ ಭಾಗದ ಹಳ್ಳಿಗಳಲ್ಲಿ ಜನರು ಹೀಗೆ ಪಂದ್ಯ ಕಟ್ಟುತ್ತಾ, ಆಡುತ್ತಾ, ಗೆಲ್ಲುತ್ತಾ, ಸೋಲುತ್ತಾ, ಕೇಕೆ ಹಾಕುತ್ತಾ, ಸಾಹಸ ಕತೆಗಳನ್ನು ಹೇಳುತ್ತಾ ಉಲ್ಲಾಸ ಭರಿತರಾಗಿರುತ್ತಾರೆ.

ಬೆಳಿಗ್ಗೆ ಆರು ಗಂಟೆಗೆ ಶುರುವಾಗುವ ಕ್ರೀಡೆಗಳು ಕತ್ತಲು ಆವರಿಸುವ ತನಕವೂ ನಡೆಯುತ್ತಲೇ ಇರುತ್ತವೆ.  ಕಬಡ್ಡಿ, ಗೋಲಿ, ಲಗೋರಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೊತ್ತು ಮಾಡಿದ ಸ್ಥಳವನ್ನು ಮುಟ್ಟುವುದು, ಇಂತಿಷ್ಟು ದೂರಕ್ಕೆ ಇಂತಿಷ್ಟು ಎಸೆತದಲ್ಲಿ ಖಾಲಿ ಬೆಂಕಿಪೊಟ್ಟಣ, ನಿಂಬೆಹಣ್ಣು, ಹಾರೆ, ಸಿಪ್ಪೆ ಸಹಿತ ತೆಂಗಿನಕಾಯಿ ಎಸೆಯುವುದು, ಭಾರದ ಕಲ್ಲನ್ನು ಎತ್ತುವುದು, ನಿಗದಿಪಡಿಸಿದ ಸಮಯದಲ್ಲಿ ಹೊಲ ಉಳುವುದು, ಬೆಳೆ ಕಟಾವು ಮಾಡುವುದು, ಕ್ವಿಂಟಲ್‌ ತೂಕದ ಚೀಲವನ್ನು ಹೊತ್ತು ಸಾಗುವ ಆಟಗಳಿಗೆ ಕೊನೆ–ಮೊದಲಿಲ್ಲ. ಇವುಗಳಿಗೆ ‘ನಾಗರ ಪಂಚಮಿ ಜಿದ್ದಿನ ಪಂದ್ಯಗಳು’ ಎಂದು ಕರೆಯಲಾಗುತ್ತದೆ.

ಶಹಾಪುರ ತಾಲ್ಲೂಕು ಇಟಗಾ (ಎಸ್‌) ಗ್ರಾಮದ ಹನುಮಂತನ ಗುಡಿ ಮುಂದೆ ಕುಳಿತವರ ಮೊಬೈಲ್‌ಗಳು ಬ್ಯೂಸಿಯಾಗಿದ್ದವು. ‘ಲೇ, ಅಮರೇಶ ಈಗ ಶರಣಪ್ಪ ಎಲ್ಲಿದ್ದಾನೆ?’. ‘ಮಹಾಲಿಂಗ, ಶರಣಪ್ಪ ಸುಸ್ತಾಗಿದ್ದಾನಾ?’. ‘ಜಿದ್ದು ಪೂರ್ತಿ ಮಾಡ್ತಾನಾ?’ ಎನ್ನುತ್ತಾ ರನ್ನಿಂಗ್‌ ಕಾಮೆಂಟರಿ ಕೇಳುವಂತಹ ಕರೆಗಳು ಅವು.

ಶರಣಪ್ಪ ಸುರಪುರದ ಗೋಪಾಲಸ್ವಾಮಿ ಬೆಟ್ಟದ ಮೆಟ್ಟಿಲುಗಳನ್ನು ಸರಸರನೆ ಏರಿ ಸೆಕೆಂಡೂ ನಿಲ್ಲದೇ ಓಡುತ್ತಲೇ ಇದ್ದರು. ಸಂಜೆ 4.20ಕ್ಕೆ ಮೊಬೈಲ್‌ಗಳು ಬ್ರೆಕಿಂಗ್‌ ನ್ಯೂಸ್‌ ಬಿತ್ತರಿಸುವಂತೆ ‘ಶರಣಪ್ಪ ಊರಿನ ಹತ್ತಿರ ಬರುತ್ತಿದ್ದಾನೆ’ ಎಂದು ಖುಷಿಯಲ್ಲಿ ಸಾರಿದವು.

ಬ್ಯಾಂಡ್‌ಸೆಟ್‌ ಹೊಸಬಟ್ಟೆ, ಹಾರ, ಬೆಳ್ಳಿ ಕಡಗ, ಆರತಿ, ಗುಲಾಲ್‌ನೊಂದಿಗೆ ಜನ ಹೆಬ್ಬಾಗಿಲಲ್ಲಿ ಕಾಯುತ್ತಾ ನಿಂತರು. ಶರಣಪ್ಪನ ಹಿಂದೆ ನೂರಾರು ಮಂದಿ ಜಯಕಾರ ಹಾಕುತ್ತಾ ಓಡುತ್ತಾ ಬರುತ್ತಿದ್ದರು. ಪಂದ್ಯ ಆರಂಭವಾದ ಸ್ಥಳವನ್ನು ತಲುಪಿದಾಗ ಎತ್ತಿ ಕುಣಿದರು. ಮಧ್ಯರಾತ್ರಿ ತನಕ ಮೆರೆಸಿದರು.

ಊರಿನವರ ಸಂಭ್ರಮಕ್ಕೆ ಕಾರಣವಿದೆ. ಶರಣಪ್ಪ ಬರಿಗಾಲಲ್ಲಿ 10 ಗಂಟೆ 33 ನಿಮಿಷ ನಿರಂತರವಾಗಿ ಓಡುತ್ತಾ 82 ಕಿಲೊಮೀಟರ್‌ಗಳನ್ನು ಕ್ರಮಿಸಿದ್ದರು! ಇವರಿಗೆ 12 ಗಂಟೆಗಳನ್ನು ನಿಗದಿಪಡಿಸಲಾಗಿತ್ತು.

ನಮ್ಮದು ಪುರುಷ ಪ್ರಧಾನ ಸಮಾಜ. ಹೀಗಾಗಿ  ಮನೆಯೊಳಗೆ ಅಥವಾ ಮನೆ ಮುಂದೆ ಆಡಬಹುದಾದ ಆಟಗಳಲ್ಲೇ ಖುಷಿಪಡುತ್ತಾರೆ. ಇವರು ಮರಗಳಿಗೆ ಜೋಕಾಲಿ ಕಟ್ಟಿ ಜೀಕುತ್ತಾರೆ. ಜೋಕಾಲಿಯಲ್ಲಿ ಹಿಂದಕ್ಕೆ ಮುಂದಕ್ಕೆ ಚಿಮ್ಮುತ್ತಾ ಗಾಳಿಯಲ್ಲಿ ಮುಗಿಲೆತ್ತರಕ್ಕೆ ಕಾಲು ಚಾಚಿ ಶರವೇಗದಲ್ಲಿ ಹೋಗುತ್ತಾರೆ. ಮರದ ತುದಿಯಲ್ಲಿ ಕಟ್ಟಿರುವ ಕೊಬ್ಬರಿ ಅಥವಾ ಜಿಲೇಬಿಯನ್ನು ಕಚ್ಚಿ ತರುತ್ತಾರೆ. ಈ ದೃಶ್ಯ ರೋಮಾಂಚನಕಾರಿ.

ಸುರಪುರ ತಾಲ್ಲೂಕು ಗೌಡಗೇರಾದ ರಾಜೀಸಾಬ್‌ ಮತ್ತು ಬಸವರಾಜ ಮಡ್ನಾಳ ಜೀವದ ಗೆಳೆಯರು. ಇವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿ. ನಾಗರ ಪಂಚಮಿ ‘ಜಿದ್ದು’ಗೆಲ್ಲುವುದರಲ್ಲಿ ಇವರನ್ನು ಮೀರಿಸುವವರೇ ಇಲ್ಲ.

ಈ ಬಾರಿ ಇವರು ಒಪ್ಪಿಕೊಂಡ ಜಿದ್ದು ಹೀಗಿತ್ತು–ಐದು ಕ್ವಿಂಟಲ್‌ ಜೋಳದಚೀಲಗಳನ್ನು ಎತ್ತಿನಬಂಡಿಯಲ್ಲಿ ಹಾಕಿಕೊಂಡು ನೊಗವನ್ನು ಹಿಡಿದು 25 ಕಿಲೊಮೀಟರ್‌ ದೂರದ ಸುರಪುರವನ್ನು ತಲುಪುವುದು.

ಇವರು ಸರಾಗವಾಗಿಯೇ ಬಂಡಿಯನ್ನು ಎಳೆಯುತ್ತಿದ್ದರು. ಆದರೆ ಸುರಪುರದ ಸಿದ್ದನ ಅಗಸಿಯ ದಿಣ್ಣೆ ಏರಲು ತಿಣುಕಾಡಿದರು. ಪಂದ್ಯ ಕೈಬಿಟ್ಟು ಹೋಗುತ್ತದೆ ಎನ್ನುವ ಸ್ಥಿತಿ ನಿರ್ಮಾಣವಾಯಿತು. ಒಬ್ಬರು ನೊಗವನ್ನು ಹಿಡಿದು ಎಳೆಯುತ್ತಿದ್ದರು. ಮತ್ತೊಬ್ಬರು ಬಂಡಿಯನ್ನು ತಳ್ಳುತ್ತಿದ್ದರು. ನೆರೆದಿದ್ದವರು ಉತ್ತೇಜಿಸುತ್ತಾ, ಸಲಹೆ ನೀಡುತ್ತಾ ಗುರಿ ಮುಟ್ಟಲು ಸಹಕರಿಸುತ್ತಿದ್ದರು. ಅಂತಿಮವಾಗಿ ಗೆಳೆಯರಿಬ್ಬರು ‘ಕೈ ಕಡಗ’ ಧರಿಸಿದರು.

‘ಈ ದಿಣ್ಣೆಯಲ್ಲಿ ಇಷ್ಟು ಭಾರವನ್ನು ಎತ್ತುಗಳೇ ಎಳೆಯಲು ತಿಣುಕಾಡುತ್ತವೆ. ಇಂಥ ಕಡೆ ನೀವು ಬಂಡಿಯನ್ನು ಎಳೆಯುತ್ತಿದ್ದೀರಿ. ನಿಜಕ್ಕೂ ಧೀರರು ಎಂದು ಅಲ್ಲಿಯ ಜನರು ಹೇಳಿದಾಗ ಸೋಲುತ್ತಿದ್ದ ರಟ್ಟೆಗಳಿಗೆ ಶಕ್ತಿ ಬಂದಂತಾಯಿತು’ ಎಂದು ಬಸವರಾಜ ಮಡ್ನಾಳ ಹೇಳುತ್ತಾರೆ.

ಹಳ್ಳಿಗಳಲ್ಲಿ ಕುಳಿತು ಮಾತನಾಡಿದರೆ ಹತ್ತಾರು ಸಾಹಸದ ಕತೆಗಳು ಸಿಗುತ್ತವೆ.

ಇಟಗಾ (ಎಸ್‌) ಗ್ರಾಮದ ಅಮರೇಶ, ಕ್ವಿಂಟಲ್‌ ಜೋಳದಚೀಲವನ್ನು ಒಮ್ಮೆಯೂ ಇಳಿಸದೆ ಕಾಲುಹಾದಿಯಲ್ಲಿ ಮೂರು ಕಿಲೊಮೀಟರ್‌ವರೆಗೆ ಹೊತ್ತು ದಾಖಲೆ ಮಾಡಿದ್ದಾರೆ. ಬಸಲಿಂಗಪ್ಪ ಅಗಸಿಮನಿ 12 ಗಂಟೆಗಳಲ್ಲಿ ನಾಲ್ಕು ಎಕರೆ ತೊಗರಿ ಗಿಡಗಳನ್ನು ಕಟಾವು ಮಾಡಿದ್ದಾರೆ. ಮಹಾಲಿಂಗ ಒಂದೇ ದಿನದಲ್ಲಿ ಹತ್ತಾರು ಬಾರಿ ತೆಂಗಿನಕಾಯಿ ಎಸೆದು ಗೆದ್ದಿದ್ದಾರೆ. ಇವರೆಲ್ಲ ಜನರ ನೆನಪಿನ ಭಿತ್ತಿಯಲ್ಲಿ ಉಳಿದಿದ್ದಾರೆ, ಈ ಸಾಹಸಿಗರು ಕ್ಯಾಲೋರಿ ಲೆಕ್ಕದಲ್ಲಿ ಆಹಾರ ಸೇವಿಸುವವರಲ್ಲ. ಮನೆಯಲ್ಲಿ ಮಾಡುವ ಜೋಳದರೊಟ್ಟಿ, ಪಲ್ಯವನ್ನು ಹೊಟ್ಟೆ ತುಂಬ ಉಣ್ಣುವವರು. ಶರಣಪ್ಪನಿಗೆ ದಿನಕ್ಕೆ45 ಜೋಳದರೊಟ್ಟಿಗಳು ಬೇಕೇಬೇಕು!

‘ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುತ್ತೇನೆ. ಕಲ್ಲುಗುಂಡಿನಂಥ ಮನುಷ್ಯ ನಾನು. ಆದ್ದರಿಂದಲೇ ದೋಸ್ತರು ಓಡಲು ಹಚ್ಚಿದರು. ಓಡಿದೆ. ನಮ್ಮೂರಿನ ಸ್ವಾಮಿ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದೆ’ ಎಂದು ಶರಣಪ್ಪ ಖುಷಿಯಿಂದ ಹೇಳುತ್ತಾರೆ.

ನಾಗರ ಪಂಚಮಿ ವೇಳೆ ಹಳ್ಳಿಗಳು ಕ್ರೀಡಾಸ್ಫೂರ್ತಿಯಲ್ಲಿ ಮುಳುಗಿ ಏಳುತ್ತವೆ. ಈ ನೆಪದಲ್ಲಿ ಹೊಸ ಜೀವ ಪಡೆಯುತ್ತವೆ. ಶ್ರಮ ಸಂಸ್ಕೃತಿಯಿಂದ ಹುಟ್ಟುವ ಇಂತಹ ಸಾಹಸ ಕ್ರೀಡೆಗಳು ಮನರಂಜನೆ ನೀಡುತ್ತವೆ. ಜೀವನ ಪ್ರೀತಿ ಮತ್ತು ಸಾಹಸ ಪ್ರವೃತ್ತಿಯನ್ನು ಚೈತನ್ಯಗೊಳಿಸುತ್ತವೆ. ಏಕತಾನತೆಯ ಬದುಕಿನಲ್ಲಿ ಲವಲವಿಕೆ ಸೃಷ್ಟಿಸುತ್ತವೆ.

ಈ ಕಾರಣಕ್ಕಾಗಿಯೇ ಸುರಪುರದ ಅರಸರು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದರು. ಸ್ವಾತಂತ್ರ್ಯ ನಂತರವೂ ಅರಸರು ಈ ಪರಂಪರೆಯನ್ನು ಮುಂದು ವರೆಸಿಕೊಂಡು ಬಂದಿದ್ದರು. ಆದ್ದರಿಂದ ಈ ಭಾಗದಲ್ಲಿ ಇಂಥ ಸಾಹಸ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತವೆ. ಹೀಗಾಗಿ ಸರ್ಕಾರ ಪ್ರತಿವರ್ಷವೂ ನಾಗರ ಪಂಚಮಿ ಸಮಯದಲ್ಲಿ ‘ಗ್ರಾಮೀಣ ಸಾಹಸ ಕ್ರೀಡಾ ಉತ್ಸವ’ವನ್ನು

ಆಯೋಜಿಸುವುದು ಒಳ್ಳೆಯದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry