ದೇಶದಲ್ಲಿ 5 ಸಾವಿರ ನ್ಯಾಯಾಧೀಶರ ಕೊರತೆ

7

ದೇಶದಲ್ಲಿ 5 ಸಾವಿರ ನ್ಯಾಯಾಧೀಶರ ಕೊರತೆ

Published:
Updated:
ದೇಶದಲ್ಲಿ 5 ಸಾವಿರ ನ್ಯಾಯಾಧೀಶರ ಕೊರತೆ

ನವದೆಹಲಿ: ಸುಪ್ರೀಂ ಕೋರ್ಟ್‌ ಮತ್ತು ದೇಶದ 24 ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳ ಕೊರತೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಅಧೀನ ನ್ಯಾಯಾಲಯಗಳ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಎಂಬುದರತ್ತ ಕಾನೂನು ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶ ಹೇಳುತ್ತಿದೆ.

ಅಧೀನ ನ್ಯಾಯಾಲಯಗಳಲ್ಲಿ 5,111 ನ್ಯಾಯಾಧೀಶರ ಹುದ್ದೆಗಳು ಖಾಲಿ ಇವೆ.

ಈ ವರ್ಷ ಜೂನ್‌ 30ರ ಅಂಕಿ ಅಂಶ ಪ್ರಕಾರ ದೇಶದಲ್ಲಿ ಮಂಜೂರಾದ ನ್ಯಾಯಾಧೀಶರ ಹುದ್ದೆ 21,303. ಕರ್ತವ್ಯ ನಿರ್ವಹಿಸುತ್ತಿರುವ ನ್ಯಾಯಾಧೀಶರ ಸಂಖ್ಯೆ 16,192 ಮಾತ್ರ.

ದೊಡ್ಡ ರಾಜ್ಯಗಳಲ್ಲಿ ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ಕೆಲಸವನ್ನು ಹೈಕೋರ್ಟ್‌ ಮಾಡುತ್ತದೆ. 11 ರಾಜ್ಯಗಳಲ್ಲಿ ಹೈಕೋರ್ಟ್‌ ಈ ಕೆಲಸ ಮಾಡಿದರೆ 17 ರಾಜ್ಯಗಳಲ್ಲಿ ರಾಜ್ಯಗಳ ಲೋಕ ಸೇವಾ ಆಯೋಗದ ಮೂಲಕ ನೇಮಕಾತಿ ಮಾಡಲಾಗುತ್ತಿದೆ.

ನ್ಯಾಯಾಧೀಶರ ಹುದ್ದೆಗಳು ಅತ್ಯಂತ ಹೆಚ್ಚು ಖಾಲಿ ಇರುವುದು ಗುಜರಾತ್‌ನಲ್ಲಿ ಇಲ್ಲಿ ಖಾಲಿ ಹುದ್ದೆಗಳ ಸಂಖ್ಯೆ 794. ಎರಡನೇ ಸ್ಥಾನದಲ್ಲಿ ಬಿಹಾರ (792) ಮತ್ತು ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ (595) ರಾಜ್ಯಗಳಿವೆ.

ನ್ಯಾಯ ನೀಡಿಕೆ ಮತ್ತು ಕಾನೂನು ಸುಧಾರಣೆಯ ರಾಷ್ಟ್ರೀಯ ಆಯೋಗದ ಸಲಹಾ ಸಮಿತಿಗೆ ಕಾನೂನು ಸಚಿವಾಲಯ ಟಿಪ್ಪಣಿಯೊಂದನ್ನು ಸಿದ್ಧಪಡಿಸಿ ನೀಡಿದೆ. ‘ಪ್ರಕರಣಗಳು ವಿಚಾರಣೆಯಾಗದೆ ಬಾಕಿ ಉಳಿಯಲು ನ್ಯಾಯಾಧೀಶರ ಸಂಖ್ಯೆ ಕಡಿಮೆ ಇರುವುದೇ ಕಾರಣ ಎಂಬುದು ಸರಿಯಾದ ಚಿತ್ರಣ ಅಲ್ಲ’ ಎಂದು ಈ ಟಿಪ್ಪಣಿಯಲ್ಲಿ ಹೇಳಲಾಗಿದೆ.

ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣಗಳ ಅಂಕಿ ಅಂಶದ ವಿಶ್ಲೇಷಣೆಯನ್ನು ಈ ಟಿಪ್ಪಣಿಯಲ್ಲಿ ನೀಡಲಾಗಿದೆ. 2005ರಲ್ಲಿ ದಾಖಲಾದ ಸಿವಿಲ್‌ ಪ್ರಕರಣಗಳ ಸಂಖ್ಯೆ ಸುಮಾರು 40.69 ಲಕ್ಷವಾದರೆ 2015ರಲ್ಲಿ ಈ ಸಂಖ್ಯೆ 36.22 ಲಕ್ಷಕ್ಕೆ ಇಳಿದಿದೆ. ಇಳಿಕೆ ಪ್ರಮಾಣ ಶೇ 11.

2005ರಲ್ಲಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಇದ್ದ ನ್ಯಾಯಾಧೀಶೃ ಸಂಖ್ಯೆ 11,682. ಆದರೆ 2015ರಲ್ಲಿ ಅದು 16 ಸಾವಿರಕ್ಕೆ ಏರಿದೆ.

ನ್ಯಾಯಾಧೀಶರ ಸಂಖ್ಯೆ ಹೆಚ್ಚಾಗಿದೆ, ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಬಾಕಿ ಪ್ರಕರಣಗಳ ಪ್ರಮಾಣ ಮಾತ್ರ ಏರುತ್ತಲೇ ಇದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry