ತಬಲಾ ಆಲಯದ ಸಂಗೀತ ಸಂಭ್ರಮ

7

ತಬಲಾ ಆಲಯದ ಸಂಗೀತ ಸಂಭ್ರಮ

Published:
Updated:
ತಬಲಾ ಆಲಯದ ಸಂಗೀತ ಸಂಭ್ರಮ

ತ್ಯಾಗರಾಜನಗರದಲ್ಲಿರುವ ಗುರು ಸಮರ್ಥ ಸಂಗೀತ ವಿದ್ಯಾಲಯ ಇದೇ ಭಾನುವಾರ (ಅ.23) ತನ್ನ ಸಂಸ್ಥೆಯ 14ನೇ ವಾರ್ಷಿಕೋತ್ಸವ ಮತ್ತು ಹಿರಿಯ ವಿದ್ವಾಂಸರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಜಯನಗರದ ಜೆಎಸ್‌ಎಸ್‌ ಸಭಾಂಗಣದಲ್ಲಿ ನಡೆಸಲು ಸಜ್ಜಾಗಿದೆ.ತಬಲಾ ಗುರು ವಿದ್ವಾನ್‌ ಅಮೃತೇಶ್‌ ಕುಲಕರ್ಣಿ ಅವರು ತಬಲಾ ವಾದನದಲ್ಲಿ ನೂರಾರು ಮಕ್ಕಳನ್ನು ಪಳಗಿಸುತ್ತಾ ಗುರು ಸಮರ್ಥ ವಿದ್ಯಾಲಯದ ಮೂಲಕ ಮಕ್ಕಳನ್ನು ಲಯವಾದ್ಯ ಸಮರ್ಥರನ್ನಾಗಿಸಲು ಪಣ ತೊಟ್ಟಿದ್ದಾರೆ.ಪ್ರತಿವರ್ಷವೂ ತಬಲಾ ಕಲಿಯುವ ಮಕ್ಕಳಿಗೆ ಉತ್ತಮ ವೇದಿಕೆ ಒದಗಿಸುತ್ತಾ, ತೆರೆಮರೆಯಲ್ಲಿರುವ ಹಿರಿಯ ವಿದ್ವಾಂಸರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಮೂಲಕ ನಾದ, ಲಯ, ಗೀತ ವೈಭವವನ್ನು ಏರ್ಪಡಿಸುತ್ತಿದ್ದಾರೆ.ತಮ್ಮ ಗುರು ಪಂ. ಸತೀಶ್‌ ಹಂಪಿಹೊಳಿ ಅವರ ಸತತ ಮಾರ್ಗದರ್ಶನದಲ್ಲಿ ನಡೆಸುವ ಈ ‘ಸಂಗೀತ ಸುಧೆ’ಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಪ್ರತಿವರ್ಷವೂ ಮಾದರಿ ಕಾರ್ಯಕ್ರಮ ನಡೆಸಿ ಕೇಳುಗರ ನೆನಪಿನಂಗಳದಲ್ಲಿ ಸದಾ ಉಳಿಯುವಂತೆ ಮಾಡುವ ಪ್ರಯತ್ನ ಇವರದು.ವಿದ್ಯಾಲಯದಲ್ಲಿ ತಬಲಾ ನುಡಿಸಾಣಿಕೆಯನ್ನು ಅಮೃತೇಶ್‌ ಕುಲಕರ್ಣಿ ಕಲಿಸುತ್ತಿದ್ದರೆ ಇವರ ಪತ್ನಿ ಉಮಾ ಕುಲಕರ್ಣಿ ಹಿಂದೂಸ್ತಾನಿ ಸಂಗೀತ, ವಚನ ಸಂಗೀತ, ದೇವರನಾಮಗಳನ್ನು ಆಸಕ್ತರಿಗೆ ಹೇಳಿಕೊಡುತ್ತಿದ್ದಾರೆ. ಇಲ್ಲಿ ಕಲಿಯುವ ಮಕ್ಕಳ ಪ್ರತಿಭೆ ಅನಾವರಣಕ್ಕಾಗಿ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡು ಪ್ರತಿ ವರ್ಷ ನಿರಂತರವಾಗಿ ಸಂಗೀತ ಸೇವೆ ಮಾಡುತ್ತಾ, ನಾದದ ಕಂಪನ್ನು ಪಸರಿಸುತ್ತಿದ್ದಾರೆ.‘ಈ ವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ತಬಲಾ ಶಿಕ್ಷಣ ಮಕ್ಕಳಿಗೆ ಸಿಗುತ್ತಿದೆ. ಹೀಗಾಗಿ ಕಲಿಯುವ ಆಸಕ್ತ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ’ ಎನ್ನುತ್ತಾರೆ ಬ್ಯಾಂಕ್ ಉದ್ಯೋಗಿ ಪಿ.ನಾಗಭೂಷಣ.‘ನಾದಮೂರ್ತಿ’ಗೆ ಗೌರವ ಸಮರ್ಪಣೆ

ಪಂ.ಕೆ.ವಿ.ನಂದಕುಮಾರ್‌ ಹಿಂದೂಸ್ತಾನಿ ಗಾಯಕರು. ಇವರು ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯವರು. ವಿಕಲಾಂಗ ಕಲಾವಿದರಿಗಾಗಿಯೇ ಇವರು ನಾದಬ್ರಹ್ಮ ಕುರೂಡಿ ವೆಂಕಟಣ್ಣಾಚಾರ್‌ ಟ್ರಸ್ಟ್‌ ಸ್ಥಾಪಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಳಿಯ ಸಲಹೆಗಾರರಾಗಿದ್ದಾರೆ.

ಇವರು ಕರ್ನಾಟಕ ಸಂಗೀತವನ್ನು ತಮ್ಮ ತಂದೆ ವೇದಮೂರ್ತಿ ಕುರೂಡಿ ವೆಂಕಣ್ಣಾಚಾರ್‌ ಅವರಿಂದ ಕಲಿತರು. ತಂದೆ ಜತೆಗೆ ಸುಮಾರು 35 ವರ್ಷ ಕಾಲ ಅನೇಕ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿದ ಅಗ್ಗಳಿಕೆ ಇವರ ಬೆನ್ನಿಗಿದೆ.ಹಿಂದೂಸ್ತಾನಿ ಸಂಗೀತವನ್ನು ಸುಮಾರು ಎರಡು ದಶಕಗಳ ಕಾಲ ಪಂ. ಮಹೇಂದ್ರ ಕಿಶೋರೆ ಅವರ ಬಳಿ ಕಲಿತರು. ಬಳಿಕ ಆಗ್ರಾ ಘರಾಣದ ಮೇರು ಕಲಾವಿದರಾದ ಪಂ. ರಾಮರಾವ್‌ ನಾಯಕ್‌ ಅವರ ಬಳಿ ಸಂಗೀತದ ಉನ್ನತ ತಾಲೀಮು ನಡೆಸಿದರು.ಹಿಂದೂಸ್ತಾನಿ ಸಂಗೀತಕ್ಕೆ ಉತ್ತಮ ತಿರುವು ಪಡೆದುಕೊಂಡು ಇಂದೋರ್‌, ಆಗ್ರಾ ಪಾಟಿಯಾಲ ಹೀಗೆ ಮೂರು ಘರಾಣೆಗಳಲ್ಲಿ ಹಿಡಿತ ಸಾಧಿಸಿದ ಹಿರಿಮೆ ಪಂ. ನಂದಕುಮಾರ್‌ ಅವರದು. ಹಿಂದೂಸ್ತಾನ ಶಾಸ್ತ್ರೀಯ ಸಂಗೀತದ ಜತೆಗೆ ಭಜನ್ಸ್‌, ಠುಮ್ರಿ, ಅಭಂಗ, ದೇವರನಾಮ ಮತ್ತು ಸುಗಮ ಸಂಗೀತಗಳಲ್ಲೂ ಅನುಪಮ ಸೇವೆ ಸಲ್ಲಿಸಿದ ಕಲಾವಿದರು ಇವರು.1989ರಲ್ಲಿ ಅಮೆರಿಕದಲ್ಲಿ ಕಛೇರಿ ನೀಡಿ ಕೇಳುಗರಿಂದ ಶಹಬ್ಬಾಸ್‌ ಗಿಟ್ಟಿಸಿಕೊಂಡದ್ದು ಇವರ ಹೆಚ್ಚುಗಾರಿಕೆ. ಎಂಟು ವಾರಗಳ ಕಾಲ ಅಲ್ಲಿ ತಂಗಿ ಕರ್ನಾಟಕ–ಹಿಂದೂಸ್ತಾನಿ ಎರಡೂ ಶೈಲಿಯ ಅನೇಕ ಕಛೇರಿಗಳನ್ನು ನೀಡಿದವರು. ಆಕಾಶವಾಣಿಯ ಎ ಗ್ರೇಡ್‌ ಕಲಾವಿದರಾದ ಪಂ. ಕುರೂಡಿ ಆಕಾಶವಾಣಿ ದೂರದರ್ಶನಗಳಲ್ಲಿ ಹಲವಾರು ಕಛೇರಿ ನೀಡಿ ಕೇಳುಗರನ್ನು ರಂಜಿಸಿದ್ದಾರೆ.ಸಂಗೀತದಲ್ಲಿ ಸದಾ ಕ್ರಿಯಾಶೀಲತೆ, ಸೃಜನಶೀಲತೆಯನ್ನು ಕಾಯ್ದುಕೊಳ್ಳುತ್ತಾ ಬಂದಿರುವ ಈ ವಿದ್ವಾಂಸರು ‘ಮಧು ವರ್ಷಿಣಿ’ ಎಂಬ ಹೊಸ ರಾಗ ಸೃಷ್ಟಿಸಿ ಅದನ್ನು ಸಾಕಷ್ಟು ಜನಪ್ರಿಯಗೊಳಿಸಿದವರು. ಹಿಂದೂಸ್ತಾನಿ ಸಂಗೀತದಲ್ಲಿ ಅನೇಕ ಚೀಜ್‌ ಮತ್ತು ತರಾನಗಳನ್ನು ರಚಿಸಿ ಹೆಸರುವಾಸಿಯಾದ ಈ ಕಲಾವಿದರು, ಗುರು–ಶಿಷ್ಯ ಪರಂಪರೆಯಡಿಯಲ್ಲಿ ಅನೇಕ ಶಿಷ್ಯಂದಿರನ್ನು ತಯಾರು ಮಾಡಿ ಸಂಗೀತವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಬಂದಿದ್ದಾರೆ.ನಾದಮೂರ್ತಿ, ಸಂಗೀತ ಕಲಾ ಕುಸುಮ, ಸ್ವರ ಕಲಾಗೌರವ, ಸ್ವರ ಸಮರ್ಥ, ಸಂಗೀತ ಕಲಾರವಿಂದ ಇವರಿಗೆ ಸಂದ ಬಿರುದುಗಳು. ‘ಮೈತ್ರಿ, ಪುರಂದರ ನಾದನಮನ, ಶ್ರೀ ರಮಾದೇವಿ ಭಕ್ತಿ ಮಂಜರಿ, ನವರತ್ನಮಾಲಿಕಾ, ಕನಕತರಂಗಿಣಿ ಸೇರಿದಂತೆ ಹಲವು ಸೀಡಿಗಳನ್ನೂ ಹೊರತಂದಿದ್ದಾರೆ.

*

ಏಕಾಗ್ರತೆ ಸಾಧಿಸಲು ತಪಸ್ಸು ಬೇಕು. ಸಂಗೀತ ಸಾಧನೆಯೂ ಒಂದು ತಪಸ್ಸೇ ತಾನೆ. ನನ್ನ ಗುರುಗಳು ಕಲಿಸಿದ ವಿದ್ಯೆಯನ್ನು ಶ್ರದ್ಧೆಯಿಂದ ಶಿಷ್ಯವೃಂದಕ್ಕೆ ಧಾರೆಯೆರೆಯುತ್ತಿದ್ದೇನೆ.

–ಅಮೃತೇಶ್‌

ತಬಲಾ ಗುರು

*

ಸಂಗೀತ ಸಂಜೆ 

ಗುರು ಸಮರ್ಥ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತೋತ್ಸವ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್‌ ಮಹಾಪ್ರಬಂಧಕ ರವೀಂದ್ರ ಭಂಡಾರಿ ಉದ್ಘಾಟಿಸುವರು.

ಹಿರಿಯ ಕವಿ ಡಾ.ದೊಡ್ಡರಂಗೇಗೌಡ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಟಿ.ವೆಂಕಟೇಶ್‌ ಹಾಗೂ ವಿನಯ ಬಿಜ್ಜರಗಿ ಭಾಗವಹಿಸುವರು.

ನಂದಕುಮಾರ್‌ ಕುರೂಡಿ  ಅವರ ಹಿಂದೂಸ್ತಾನಿ ಗಾನ ವೈಭವಕ್ಕೆ ಪಂ.ಎಂ.ನಾಗೇಶ್‌ (ತಬಲಾ) ಮತ್ತು ಸೂರ್ಯ ಉಪಾಧ್ಯಾಯ (ಹಾರ್ಮೋನಿಯಂ) ಸಾಥಿ ನೀಡುವರು.ಇದೇ ಸಂದರ್ಭ ಶ್ರೀ ಗುರುಸಮರ್ಥ ಸಂಗೀತ ವಿದ್ಯಾಲಯದ ಮಕ್ಕಳಿಂದ ತಬಲಾ ವಾದನ, ಹಿಂದೂಸ್ತಾನಿ  ಹಾಗೂ ಸುಗಮ ಸಂಗೀತ ಕಛೇರಿ ನಡೆಯಲಿದೆ.ಸ್ಥಳ: ಶಿವರಾತ್ರೀಶ್ವರ ಕೇಂದ್ರ ಸಭಾಂಗಣ, ಜಯನಗರ ಎಂಟನೇ ಬ್ಲಾಕ್‌. ಭಾನುವಾರ ಸಂಜೆ 4.00

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry