7

ಬೋಧಕರ ನೇಮಕಾತಿ: ಸಾರ್ವಜನಿಕ ಚರ್ಚೆಯಾಗಲಿ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಬೋಧಕರ ನೇಮಕಾತಿ: ಸಾರ್ವಜನಿಕ ಚರ್ಚೆಯಾಗಲಿ

‘ವಿಶ್ವವಿದ್ಯಾಲಯಗಳ ಬೋಧಕರ ನೇಮಕಾತಿ ಸಾಮಾನ್ಯ ಕೇಂದ್ರ’ವೊಂದನ್ನು ಸ್ಥಾಪಿಸಲು ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ಮುಂದಾಗಿದೆ ಎಂಬ ವರದಿಯು ಬುಧವಾರದಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದೆ. ಈ ಬಗೆಯ ಕೇಂದ್ರವೊಂದು ಸ್ಥಾಪನೆಯಾದರೆ ನೇಮಕಾತಿಯ ವಿಚಾರದಲ್ಲಿ ಈಗ ಕರ್ನಾಟಕದ ವಿಶ್ವವಿದ್ಯಾಲಯಗಳು ಹೊಂದಿರುವ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತವೆ. ರಾಜ್ಯದ ವಿಶ್ವವಿದ್ಯಾಲಯಗಳ ಸ್ವರೂಪವನ್ನೇ ಬದಲಿಸಬಲ್ಲ ಇಂತಹ ಪ್ರಮುಖ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಇದುವರೆಗೆ ಚರ್ಚೆಯಾಗಿಲ್ಲ. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 14ನೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವು ಚರ್ಚಿತವಾಗಿದ್ದರೂ ವಿಶ್ವವಿದ್ಯಾಲಯಗಳ ಕುಲಪತಿಗಳು ತಮ್ಮ ಚಿಂತನೆ-ಆತಂಕಗಳನ್ನು ಬಹಿರಂಗವಾಗಿ ಹಂಚಿಕೊಂಡಿಲ್ಲ.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರರ ನೇಮಕಾತಿ ಪ್ರಕ್ರಿಯೆಯು ವಿವಾದಾತ್ಮಕವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರತ್ಯೇಕ ನೇಮಕಾತಿ ಕೇಂದ್ರವೊಂದರ ಸ್ಥಾಪನೆಯಾಗುವುದು ಉಚಿತವೆಂದು ಹಲವರು ಭಾವಿಸಿದರೆ ಆಶ್ಚರ್ಯವೇನಲ್ಲ. ಕಾಲಕಾಲಕ್ಕೆ ನೇಮಕಾತಿಯಾಗುತ್ತಿಲ್ಲ. ನೇಮಕಾತಿಯಾದಾಗಲೂ ಪಾರದರ್ಶಕತೆಯಿರುವುದಿಲ್ಲ. ರೋಸ್ಟರ್ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ದೊರಕಬೇಕಿರುವ ಮೀಸಲಾತಿ ನಿಯಮಗಳ ಉಲ್ಲಂಘನೆ ಇತ್ಯಾದಿ ಸಮಸ್ಯೆಗಳು ಪದೇಪದೇ ತಲೆದೋರುತ್ತಿವೆ. ಜೊತೆಗೆ ವಿಶ್ವವಿದ್ಯಾಲಯಗಳ ಹುದ್ದೆಗಳಿಗೆ ತೀವ್ರ ಸ್ಪರ್ಧೆಯಿದೆ. ಜಾತಿ, ಮಠ ಮತ್ತು ರಾಜಕೀಯ ಪ್ರಭಾವಗಳ ಬಳಕೆ ಹೆಚ್ಚಾಗಿದೆ. ಇವೆಲ್ಲವೂ ನಿಜವೆ. ಎಲ್ಲರಿಗೂ ಗೊತ್ತಿರುವ ವಿಚಾರವೆ. ಹೀಗಾಗಿ ಯಾವುದೇ ನೇಮಕಾತಿಯು ವಿವಾದಾತ್ಮಕವಾಗುವುದಿಲ್ಲ ಎಂದೊ ಇಲ್ಲವೆ ನ್ಯಾಯಾಂಗ ತನಿಖೆಗೆ ಒಳಗಾಗದ ನೇಮಕಾತಿಯೊಂದು ಕರ್ನಾಟಕದ ವಿಶ್ವವಿದ್ಯಾಲಯವೊಂದರಲ್ಲಿ ನಡೆಯುತ್ತದೆ ಎಂದು ಹೇಳುವ ಧೈರ್ಯ, ವಿಶ್ವಾಸ ನನಗಂತೂ ಖಂಡಿತವಾಗಿಯೂ ಇಲ್ಲ.

ಹಾಗಾದರೆ ಬೋಧಕರ ನೇಮಕಾತಿಯೆಂಬ ಬಿಕ್ಕಟ್ಟನ್ನು ಪರಿಹರಿಸಲು ಅಧಿಕಾರದ ಕೇಂದ್ರೀಕರಣವೆನ್ನುವುದು ಮಾತ್ರ ಉತ್ತರವೆ? ಈಗಲೂ ರಾಜ್ಯ ಸರ್ಕಾರದ (ಹಲವು ಇಲಾಖೆಗಳ) ಮತ್ತು ರಾಜ್ಯಪಾಲರ ಅನುಮತಿಯನ್ನು ಪಡೆದ ನಂತರವೇ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿಲ್ಲವೆ? ಪ್ರತ್ಯೇಕ ನೇಮಕಾತಿ ಕೇಂದ್ರವೊಂದನ್ನು ರಚಿಸಿದರೆ, ಅದರಲ್ಲಿಯೂ ಕೆಪಿಎಸ್‌ಸಿ ಮಾದರಿಯ ಭ್ರಷ್ಟತೆ ಇರುವ ಸಾಧ್ಯತೆಯಿಲ್ಲವೆ? ಇಲ್ಲಿಯೂ ರಾಜ್ಯದ ಹಿರಿಯ ಪ್ರಾಧ್ಯಾಪಕರುಗಳು ತಾನೆ ಕಾರ್ಯ ನಿರ್ವಹಿಸುವುದು? ಹಾಗಾದರೆ ಹೊಸ ಕೇಂದ್ರದಲ್ಲಿ ಪಾರದರ್ಶಕತೆಯಿರುತ್ತದೆ ಮತ್ತು ನಿಯಮಪಾಲನೆಯಾಗುತ್ತದೆ ಎನ್ನುವ ವಿಶ್ವಾಸ ಯಾವ ಕಾರಣದಿಂದ ಹುಟ್ಟುತ್ತದೆ? ಈ ಎಲ್ಲ ಪ್ರಶ್ನೆಗಳು ಉನ್ನತ ಶಿಕ್ಷಣ ಪರಿಷತ್ತಿನ ಸಭೆಗಳಲ್ಲಿ ಮಾತ್ರವಲ್ಲ, ಹೊರಗೆ ಸಹ ಸಾರ್ವಜನಿಕವಾಗಿ ಚರ್ಚೆಯಾಗಬೇಕು.

ಈಗ ನಡೆಯುತ್ತಿರುವ ಚರ್ಚೆಯಲ್ಲಿ ನಮ್ಮ ಬಿಕ್ಕಟ್ಟಿನ ಸ್ವರೂಪವನ್ನು ಸರಿಯಾಗಿ ಗುರುತಿಸಿಲ್ಲ ಎಂದು ನನಗನ್ನಿಸುತ್ತಿದೆ. ಇಂದಿರುವ ವ್ಯವಸ್ಥೆಯಲ್ಲಿಯೂ ನೇಮಕಾತಿಯ ಅಧಿಕಾರವು ವಿಶ್ವವಿದ್ಯಾಲಯಗಳ ಕುಲಪತಿಗಳ ಕಚೇರಿಗಳಲ್ಲಿ ಕೇಂದ್ರೀಕೃತವಾಗಿದೆ ಎನ್ನುವುದು ನಾವು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಹೀಗೆ ನೋಡಿದಾಗ, ರಾಜ್ಯ ಮಟ್ಟದ ನೇಮಕಾತಿ ಕೇಂದ್ರದ ಸ್ಥಾಪನೆಯಾದರೆ ಇಂದು ವಿಶ್ವವಿದ್ಯಾಲಯಗಳ ಕುಲಪತಿಗಳಲ್ಲಿ ಕೇಂದ್ರೀಕೃತವಾಗಿರುವ ಅಧಿಕಾರವು ರಾಜ್ಯ ವ್ಯಾಪ್ತಿಯ ಹೊಸ ನೇಮಕಾತಿ ಸಂಸ್ಥೆಯ ಮುಖ್ಯಸ್ಥ ಮತ್ತು ಸದಸ್ಯರುಗಳಿಗೆ ವರ್ಗಾವಣೆಯಾಗುತ್ತದೆ. ಇಂತಹ ಹೊಸ ಸಂಸ್ಥೆಯು ಮತ್ತಷ್ಟು ಕೇಂದ್ರೀಕರಣಕ್ಕೆ ದಾರಿ ಮಾಡಿಕೊಡುತ್ತದೆಯೆ ಹೊರತು ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವಲ್ಲ. ನನ್ನ ದೃಷ್ಟಿಯಲ್ಲಿ ನಮಗಿಂದು ಬೇಕಿರುವುದು ನೇಮಕಾತಿ ಅಧಿಕಾರದ ವಿಕೇಂದ್ರೀಕರಣ.

ಬಿಕ್ಕಟ್ಟುಗಳ ಪರಿಹಾರಕ್ಕೆ ಅಧಿಕಾರದ ಕೇಂದ್ರೀಕರಣಕ್ಕಿಂತ ವಿಕೇಂದ್ರೀಕರಣ ಹೆಚ್ಚು ಸೂಕ್ತ ಎನ್ನುವ ಸಾಮಾನ್ಯ ತತ್ವವನ್ನು ನಾನು ನಂಬುತ್ತೇನೆ. ಇದು ನನ್ನ ತಾತ್ವಿಕ ಆಶಯ ಮಾತ್ರವಲ್ಲ, ಅನುಭವಜನ್ಯ ವಿಚಾರ ಕೂಡ. ಭಾರತದ ಮತ್ತು ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯ ತೌಲನಾತ್ಮಕ ಅವಲೋಕನದ ಮೂಲಕ ನನ್ನ ಮಾತನ್ನು ಪ್ರಸ್ತುತಪಡಿಸಲು ಬಯಸುತ್ತೇನೆ.

ಯುರೋಪ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೇಮಕಾತಿ ಪ್ರಕ್ರಿಯೆಯು ಬೋಧಕರು ನೇಮಕ ಹೊಂದುತ್ತಿರುವ ವಿಭಾಗದಿಂದಲೇ ಪ್ರಾರಂಭವಾಗುತ್ತದೆ ಮತ್ತು ಹೆಚ್ಚಿನ ಪ್ರಕ್ರಿಯೆಗಳು ಆಯಾ ವಿಭಾಗದೊಳಗೆಯೇ ನಡೆಯುತ್ತವೆ. ಪ್ರತಿ ವಿಭಾಗವೂ ತನ್ನ ಅಗತ್ಯಗಳನ್ನು ಪ್ರತಿ ವರ್ಷವೂ ವಿಶ್ವವಿದ್ಯಾಲಯದ ಆಡಳಿತವರ್ಗಕ್ಕೆ ತಿಳಿಸುತ್ತದೆ. ಹುದ್ದೆ ಮಂಜೂರಾದರೆ, ವಿಭಾಗದ ಹಿರಿಯ-ಕಿರಿಯ ಅಧ್ಯಾಪಕರನ್ನೊಳಗೊಂಡ ಆಯ್ಕೆ ಸಮಿತಿಯೊಂದರ ರಚನೆಯಾಗುತ್ತದೆ. ಕೆಲವೊಮ್ಮೆ ಈ ಸಮಿತಿಯಲ್ಲಿ ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳುವ ಪರಿಪಾಠವಿದೆ. ಅಧಿಕೃತವಾಗಿ ಹೀಗೆ ಸ್ಥಾನ ನೀಡದಿದ್ದರೂ, ವಿದ್ಯಾರ್ಥಿಗಳ ಅಭಿಪ್ರಾಯವನ್ನು ಖಂಡಿತವಾಗಿಯೂ ಆಯ್ಕೆಯ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಸಮಿತಿಯ ಎಲ್ಲ ಸದಸ್ಯರೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ದಾಖಲಿಸುತ್ತಾರೆ ಮತ್ತು ತಮ್ಮನ್ನು ಮೆಚ್ಚಿಸಿದ ಅಭ್ಯರ್ಥಿಯ ಪರವಾಗಿ ಮತ ಹಾಕುತ್ತಾರೆ. ಹೀಗಾಗಿ ಕೇವಲ ಪ್ರಭಾವಶಾಲಿ ಪ್ರಾಧ್ಯಾಪಕರೊಬ್ಬರ ಅಭಿಪ್ರಾಯಕ್ಕೆ ಮನ್ನಣೆ ಸಿಗುತ್ತದೆ ಎಂಬ ಆತಂಕವಿರುವುದಿಲ್ಲ.

ಹೀಗೆ ರಚಿತವಾಗುವ ಆಯ್ಕೆ ಸಮಿತಿಯು ವಿಭಾಗದ ಹುದ್ದೆಗಳಿಗೆ ಬರುವ ಎಲ್ಲ ಅರ್ಜಿಗಳನ್ನೂ ಅಭ್ಯಸಿಸಿ, ಮೊದಲ ಹಂತದ ಸಂದರ್ಶನಕ್ಕೆ ಕರೆಯಬೇಕಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಸಾಮಾನ್ಯವಾಗಿ 45-50 ನಿಮಿಷಗಳ ಕಾಲ ನಡೆಯುವ ಮೊದಲ ಹಂತದ ಸಂದರ್ಶನವನ್ನು ಆಯ್ಕೆ ಸಮಿತಿಯೇ ನಡೆಸುತ್ತದೆ. ನಂತರ ಇದೇ ಸಮಿತಿಯು ಎರಡನೆಯ ಹಂತದ ಸಂದರ್ಶನಕ್ಕೆ 3-4 ಅಭ್ಯರ್ಥಿಗಳನ್ನು ಆಹ್ವಾನಿಸುತ್ತದೆ. ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮಾತ್ರ ವಿಶ್ವವಿದ್ಯಾಲಯದ ಆಡಳಿತವರ್ಗದ ಒಬ್ಬಿಬ್ಬರು- ಸಾಮಾನ್ಯವಾಗಿ ಸಂಬಂಧಪಟ್ಟ ನಿಕಾಯದ ಡೀನ್ ಪಾಲ್ಗೊಳ್ಳುತ್ತಾರೆ. ಅಭ್ಯರ್ಥಿಗಳಿಂದ ಸಂಶೋಧನಾ ಪ್ರಬಂಧ ಮಂಡನೆ, ತರಗತಿಯೊಂದರಲ್ಲಿ ಬೋಧನೆ, ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರೊಡನೆ ಸಂದರ್ಶನ ಇತ್ಯಾದಿ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಮಯದಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆಯ ಜೊತೆಗೆ ಅವರ ಗುಣ, ನಡವಳಿಕೆ, ಸ್ವಭಾವಗಳ ಮೌಲ್ಯಮಾಪನವೂ ಆಗುತ್ತದೆ ಎನ್ನುವುದನ್ನು ಇಲ್ಲಿ ಮರೆಯುವಂತಿಲ್ಲ. ನಂತರದಲ್ಲಿ ಆಯ್ಕೆ ಸಮಿತಿಯು ಮಾಡಿದ ಶಿಫಾರಸನ್ನು ಅನುಸರಿಸಿ, ಡೀನ್ ಅಥವಾ ಪ್ರವೊಸ್ಟ್ (ಕುಲಸಚಿವ) ನೇಮಕಾತಿ ಆದೇಶವನ್ನು ಹೊರಡಿಸುತ್ತಾರೆ. ಅರ್ಜಿ ಸಲ್ಲಿಸಲು ಪ್ರಕಟಣೆ ಹೊರಡಿಸಿದ ದಿನದಿಂದ ನೇಮಕಾತಿಯಾಗುವ ಹೊತ್ತಿಗೆ ಆರರಿಂದ ಎಂಟು ತಿಂಗಳುಗಳು ಕಳೆದಿರುತ್ತದೆ.

ಗಮನಿಸಿ, ನೇಮಕಾತಿ ಪ್ರಕ್ರಿಯೆ ಬಹುಮಟ್ಟಿಗೆ ಸಂಬಂಧಪಟ್ಟ ವಿಭಾಗದೊಳಗೆ, ಅಲ್ಲಿನ ಬೋಧಕ ವರ್ಗದ ಪೂರ್ಣ ಭಾಗವಹಿಸುವಿಕೆಯಿಂದಲೇ ನಡೆಯುತ್ತದೆ. ಇಲ್ಲಿ ಆಡಳಿತ ವರ್ಗದ ಪಾತ್ರ ಕಡಿಮೆ. ಈ ಮಾದರಿಯ ವಿಕೇಂದ್ರೀಕರಣವನ್ನು ನಾವೇಕೆ ಅನುಸರಿಸಬೇಕು? ಇದಕ್ಕೆ ಎರಡು ಬಗೆಯ ತರ್ಕಬದ್ಧ ಕಾರಣಗಳನ್ನು ನೀಡಬಹುದು.

ಮೊದಲನೆಯದು, ನೇಮಕಾತಿ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಪಾರದರ್ಶಕತೆಯ ಆಯಾಮ. ಪ್ರತಿವರ್ಷವೂ ಹತ್ತಾರು ನೇಮಕಾತಿಗಳನ್ನು ವಿಶ್ವವಿದ್ಯಾಲಯದ ಆಡಳಿತಗಾರರೇ ಮಾಡಲು ಸಮಯವಾಗುವುದಿಲ್ಲ. ಹಾಗಾಗಿ ನೇಮಕಾತಿ ಪ್ರಕ್ರಿಯೆಯ ಹಲವು ಪ್ರಮುಖ ಜವಾಬ್ದಾರಿಗಳನ್ನು ಆಡಳಿತಗಾರರು ಸಂಬಂಧಪಟ್ಟ ವಿಭಾಗದ ಅಧ್ಯಾಪಕರುಗಳೊಡನೆ ಹಂಚಿಕೊಳ್ಳುತ್ತಾರೆ. ಇಡೀ ಪ್ರಕ್ರಿಯೆಯಲ್ಲಿ ಕನಿಷ್ಠ 7-8 ಜನರು ಪಾಲ್ಗೊಳ್ಳುತ್ತಿರುವುದರಿಂದ ಸಾಮಾನ್ಯವಾಗಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಜೊತೆಗೆ ಅಭ್ಯರ್ಥಿಗಳು ಸಲ್ಲಿಸುವ ತಮ್ಮ ಅರ್ಹತೆ- ಸಾಧನೆಯ ವಿವರಗಳ ಮೌಲ್ಯಮಾಪನವನ್ನು ಅದೇ ವಿಷಯದಲ್ಲಿ ಪರಿಣತಿ ಹೊಂದಿರುವವರು ಮಾಡುವುದು ಸೂಕ್ತವಲ್ಲವೆ?

ನೇಮಕಾತಿ ಪ್ರಕ್ರಿಯೆಯ ವಿಕೇಂದ್ರೀಕರಣವನ್ನು ಬೆಂಬಲಿಸಲು ಇರುವ ಎರಡನೆಯ ಮುಖ್ಯ ಕಾರಣ ಶೈಕ್ಷಣಿಕವಾದುದು. ಪ್ರತಿ ವಿಭಾಗವೂ ತನ್ನದೇ ಆದ ಶೈಕ್ಷಣಿಕ ಮತ್ತು ಸಂಶೋಧನೆಯ ಆದ್ಯತೆಗಳನ್ನು ಹೊಂದಿರುತ್ತದೆ. ಅದಕ್ಕೆ ಸಾಟಿಯಾಗುವ, ವಿಭಾಗದ ಪರಂಪರೆಯನ್ನು ಮುಂದುವರಿಸಬಲ್ಲ ಅಭ್ಯರ್ಥಿಯನ್ನು ವಿಭಾಗದ ಅಧ್ಯಾಪಕರೇ ಆಯ್ಕೆ ಮಾಡುವುದು ಉಚಿತ. ತಮ್ಮ ಜ್ಞಾನಶಿಸ್ತು ಯಾವ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ, ಅದರಲ್ಲಿ ಪರಿಣತಿ ಹೊಂದಿರುವ ಯುವ ಸಂಶೋಧಕರು ಯಾರು ಎನ್ನುವುದನ್ನು ವೃತ್ತಿಪರವಾಗಿ ವಿಮರ್ಶಿಸುವ ಶಕ್ತಿಯನ್ನು ಪಡೆದಿರುವವರು ನೇಮಕಾತಿಯಾಗಬೇಕಿರುವ ವಿಭಾಗದ ಅಧ್ಯಾಪಕರು ತಾನೆ. 

ನಮ್ಮಲ್ಲಿ ಇಂತಹ ನೇಮಕಾತಿ ಪ್ರಕ್ರಿಯೆಯಿಲ್ಲ ಎಂದು ವಿಶೇಷವಾಗಿ ಗುರುತಿಸಬೇಕಿಲ್ಲ. ಜಾತಿ- ಸ್ವಜನಪಕ್ಷಪಾತ- ರಾಜಕೀಯ ಪ್ರಭಾವಗಳು ತಾಂಡವವಾಡುತ್ತಿರುವ ನಮ್ಮ ವಿವಿಗಳಲ್ಲಿ ಇಂತಹ ಪ್ರಕ್ರಿಯೆ ಸಾಧ್ಯವೂ ಇಲ್ಲ. ಜೊತೆಗೆ ಪಶ್ಚಿಮದ ವೃತ್ತಿಪರತೆಯನ್ನು ನಿರೀಕ್ಷಿಸುವಂತಿಲ್ಲ ಎಂದು ಕೆಲವರು ವಾದಿಸಬಹುದು. ವೃತ್ತಿಪರತೆಯಿರಲಿ, ಗುಣಗ್ರಾಹಿ ಸ್ವಭಾವಗಳು ಹುಟ್ಟಿನಿಂದ ಬರುವುದಿಲ್ಲ. ಅವುಗಳನ್ನು ನಾವು ಪ್ರಜ್ಞಾಪೂರ್ವಕವಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಮಿಗಿಲಾಗಿ, ಪಶ್ಚಿಮದ ವಿಶ್ವವಿದ್ಯಾಲಯಗಳಲ್ಲಿಯೂ ಸ್ವಜನಪಕ್ಷಪಾತವೆನ್ನುವ ಪಿಡುಗು ಖಂಡಿತ ಇದೆ. ಆದರೆ ಅದನ್ನು ಮೀರಲೆಂದೇ ನೇಮಕಾತಿಯ ಸಂದರ್ಭದಲ್ಲಿ ನಾನು ಮೇಲೆ ಗುರುತಿಸಿರುವ ಹಲವು ರೀತಿಗಳಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುತ್ತಾರೆ.

ನಮಗಿಂದು ಅಗತ್ಯವಿರುವುದು ಹೆಚ್ಚು ಪಾರದರ್ಶಕವಾದ, ಹೆಚ್ಚು ಕಠಿಣವಾದ ಹಾಗೂ ತೀವ್ರತೆಯಿಂದ ಕೂಡಿದ ವಿಸ್ತೃತವಾದ ಆಯ್ಕೆ ಪ್ರಕ್ರಿಯೆ. ಇಲ್ಲಿ ಅಭ್ಯರ್ಥಿಯ ಬೌದ್ಧಿಕ, ಶೈಕ್ಷಣಿಕ ಮತ್ತು ಬೋಧನಾ ಸಾಮರ್ಥ್ಯಗಳ ಸರಿಯಾದ ಪರೀಕ್ಷೆಯಾಗಬೇಕು. ಈಗ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯೂ ಕೆಲವೇ ನಿಮಿಷಗಳ ಸಂದರ್ಶನಕ್ಕೆ ಸೀಮಿತವಾಗಿದೆ. ಇದರಲ್ಲಿ ಅಭ್ಯರ್ಥಿಗಳ ಸಾಮರ್ಥ್ಯವನ್ನು ಸರಿಯಾಗಿ ಅಳೆಯಲಾಗುವುದಿಲ್ಲ ಎನ್ನುವುದಂತೂ ಸ್ಪಷ್ಟ. ಇದಕ್ಕೆ ಪರಿಹಾರವೆಂದರೆ ಮತ್ತಷ್ಟು ಕೇಂದ್ರೀಕರಣವಲ್ಲ, ಬದಲಿಗೆ ನಾನು ಮೇಲೆ ಸೂಚಿಸುತ್ತಿರುವ ಬಗೆಯ ವಿಕೇಂದ್ರೀಕರಣ.

ಇತ್ತೀಚೆಗೆ ಸರ್ಕಾರಿ ಕಾಲೇಜುಗಳ ಅಧ್ಯಾಪಕರನ್ನು ಆಯ್ಕೆ ಮಾಡಲು ಬಹುಆಯ್ಕೆ ಪ್ರಶ್ನೆಗಳಿಂದ ಕೂಡಿದ ಪರೀಕ್ಷೆಯನ್ನು ನಡೆಸಿದ ವ್ಯವಸ್ಥೆಯಿಂದ ಯಾವುದೇ ಬಗೆಯ ಅಧಿಕಾರದ ವಿಕೇಂದ್ರೀಕರಣವನ್ನಾಗಲಿ ನಿರೀಕ್ಷಿಸುವಂತಿಲ್ಲ ಎಂಬ ಅರಿವು ನನಗಿದೆ. ಒಂದು ವಾಕ್ಯವನ್ನು ಬರೆಸದೆ, ಒಂದು ಮಾತನ್ನೂ ಆಡಿಸದೆ ಅಧ್ಯಾಪಕನೊಬ್ಬನನ್ನು ಹೇಗೆ ಆಯ್ಕೆ ಮಾಡಲು ಸಾಧ್ಯ ಎಂಬ ಶೈಕ್ಷಣಿಕ ಪ್ರಶ್ನೆ ಮತ್ತೆ ಮತ್ತೆ ನಮ್ಮನ್ನು ಕಾಡುತ್ತದೆ. ಇಂತಹ ವಿಚಾರಗಳು ಕೇವಲ ಉನ್ನತ ಶಿಕ್ಷಣ ಇಲಾಖೆಯ ಇಲ್ಲವೇ ಉನ್ನತ ಶಿಕ್ಷಣ ಪರಿಷತ್ತಿನ ಸಭೆಗಳಲ್ಲಿ ಮಾತ್ರ ಚರ್ಚಿತವಾದರೆ ಸಾಲದು, ಸಾರ್ವಜನಿಕವಾಗಿ ಸಹ ನಡೆಯಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry