6

ಶಾಸನ ಮಾಡಲು ಇನ್ನೊಂದು ಅಂಗ ಬೇಕು

ನಾರಾಯಣ ಎ
Published:
Updated:
ಶಾಸನ ಮಾಡಲು ಇನ್ನೊಂದು ಅಂಗ ಬೇಕು

ನಮ್ಮ ಕಾಲದಲ್ಲಿ ಅತ್ಯಂತ ಬೋರ್ ಎಂದು ಹೇಳಬಹುದಾದ ಒಂದು ವಿಷಯ ಎಂದರೆ ನಮ್ಮ ಸಂಸದರು ಮತ್ತು ಶಾಸಕರು ಸಂಸತ್ತಿನ ಮತ್ತು ಶಾಸನ ಸಭೆಗಳ ಅಧಿವೇಶನದಲ್ಲಿ ಹಾಜರಿರುವುದಿಲ್ಲ ಮತ್ತು ಕಲಾಪಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದು.ಇಂತಹ ಟೀಕೆಗಳು ಅದೆಷ್ಟು ಬಾರಿ ಪುನರಾವರ್ತನೆ ಆಗುತ್ತವೆ ಎಂದರೆ ಅವನ್ನು ಕೇಳಿದಾಕ್ಷಣ ಕಿವಿ ಮುಚ್ಚಿಕೊಳ್ಳಬೇಕು ಮತ್ತು ನೋಡಿದಾಕ್ಷಣ ಪತ್ರಿಕೆಯ ಪುಟ ತಿರುಗಿಸಬೇಕು ಎನ್ನುವಂತಾಗುವಷ್ಟು.  ವಿಷಯವೇನೋ ತೀರಾ ಗಂಭೀರವಾದದ್ದೇ. ಗಂಭೀರವಾದ ವಿಚಾರಗಳ ಬಗ್ಗೆ ಕೂಡಾ ಹಿಂದು ಮುಂದು ನೋಡದೆ, ಪರಿಸ್ಥಿತಿಯ ಆಳ, ಅಗಲ ತಿಳಿಯದೆ ಮಾಡುವ ಟೀಕೆಗಳು ಒಂಥರಾ ‘ತಿಥಿ’ ಸಿನಿಮಾದ ಸಿಂಗ್ರಿ ಗೌಡ ಅಲಿಯಾಸ್ ಸೆಂಚುರಿ ಗೌಡ ಪಾತ್ರದ ಸ್ವಗತದಂತೆ ಕೇಳಲಾರಂಭಿಸುತ್ತವೆ.ಹೋದ ವಾರ ಈ ವಿಚಾರದಲ್ಲಿ ಹೊಸ ಸುದ್ದಿಯೊಂದು ಬಂತು. ಕರ್ನಾಟಕದ ವಿಧಾನಸಭೆಯ ಸ್ಪೀಕರ್ ಅವರು ಅಧಿವೇಶನದ ಸಮಯದಲ್ಲಿ ಸದಸ್ಯರ ಹಾಜರಾತಿ ಹೆಚ್ಚಿಸಲು ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸುತ್ತಾರಂತೆ. ಅಂದರೆ ಈಗ ಹಲವು ಸದಸ್ಯರು ಒಮ್ಮೆ ಮುಖ ತೋರಿಸಿ, ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ, ಭತ್ಯೆ ಬರುವುದನ್ನು ಖಾತರಿ ಮಾಡಿ, ಕಲಾಪ ನಡೆಯುವ ಹೊತ್ತಿಗೆ ಜಾಗ ಖಾಲಿ ಮಾಡಿರುತ್ತಾರೆ.ಇನ್ನು ಮುಂದೆ ಹೀಗೆಲ್ಲಾ ಆಗಬಾರದೆಂದು, ಮೊದಲಿಗೆ ಸದಸ್ಯರು ಮೂರು ಹೊತ್ತು ಸಹಿ ಹಾಕುವ ವ್ಯವಸ್ಥೆ, ನಂತರ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ಯಾವ ಸದಸ್ಯರು ಎಷ್ಟು ಹೊತ್ತು ಸದನದಲ್ಲಿದ್ದರು ಎನ್ನುವುದನ್ನು ಸ್ಪಷ್ಟವಾಗಿ ದಾಖಲಿಸುವ ಕ್ರಮಗಳೆಲ್ಲಾ  ಜಾರಿಗೆ ಬರುತ್ತವಂತೆ. ಇಷ್ಟೆಲ್ಲಾ ಮಾಡಿ ಶಾಸಕರನ್ನು ಸದನದೊಳಗೆ ಕೂಡಿ ಹಾಕಿದರಾಯಿತೇ? ಅವರು ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಗಮನಿಸಬೇಕಲ್ಲ? ಕಲಾಪದಲ್ಲಿ ಪಾಲ್ಗೊಳ್ಳಬೇಕಲ್ಲ?ಇವೆಲ್ಲ ಎಷ್ಟೇ ಗಂಭೀರ ವಿಚಾರಗಳಾದರೂ ತಮಾಷೆಯಂತೆ ಕಾಣಿಸುತ್ತವೆ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದ ನಂತರವೂ ಒಂದು ಸಾಂವಿಧಾನಿಕ ಸಂಸ್ಥೆ ಸಾಬೀತಿನಿಂದ ಕಾರ್ಯ ನಿರ್ವಹಿಸುವಂತೆ ಮಾಡಲು ಇಷ್ಟೆಲ್ಲಾ ಸರ್ಕಸ್ಸು-ಕಸರತ್ತು ನಡೆಸಬೇಕೇ ಎನ್ನುವುದು ಒಂದು ಪ್ರಶ್ನೆ.ಇನ್ನೊಂದು ಇದಕ್ಕಿಂತಲೂ ಸೂಕ್ಷ್ಮವಾದ ಪ್ರಶ್ನೆ. ಇಡೀ ಶಾಸಕಾಂಗ ಎನ್ನುವುದು ಇರುವುದು ಸರ್ಕಾರ ಅಥವಾ ಕಾರ್ಯಾಂಗ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆಯೋ ಇಲ್ಲವೋ ಎನ್ನುವುದನ್ನು ನೋಡಿಕೊಳ್ಳಲು. ಹಾಗೆ ನೋಡಿಕೊಳ್ಳುವ ಸಂಸ್ಥೆಯೇ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದರೆ ಅದನ್ನು ನೋಡಿಕೊಳ್ಳುವವರು ಯಾರು? ಈ ಪ್ರಶ್ನೆಗೆ ಸದ್ಯದ ರಾಜಕೀಯ ವಿಜ್ಞಾನದಲ್ಲಾಗಲೀ, ವಿವಿಧ ರಾಷ್ಟ್ರಗಳ ಪ್ರಜಾಸತ್ತಾತ್ಮಕ ಅನುಭವದಲ್ಲಾಗಲೀ ಉತ್ತರವಿಲ್ಲ. ಕಾವಲು ಕಾಯುವವರನ್ನು ಯಾರು ಕಾವಲು ಕಾಯುವುದು ಎನ್ನುವ ಪ್ರಶ್ನೆ ಸಾರ್ವಜನಿಕ ಬದುಕಿನ ಹಲವು ಉತ್ತರವಿಲ್ಲದ ಪ್ರಶ್ನೆಗಳ ಸಾಲಿಗೆ ಸೇರುವ ಪ್ರಶ್ನೆಯಾಗಿಯೇ ಉಳಿಯುತ್ತದೆ.ಭಾರತದಲ್ಲಿ ಶಾಸಕಾಂಗದ ಪತನಕ್ಕೆ ಸದಸ್ಯರ ನಡವಳಿಕೆ ಮತ್ತು ಅಶಿಸ್ತು ಕಾರಣವೇ? ಅಥವಾ ಶಾಸಕಾಂಗದ ಅವ್ಯವಸ್ಥೆಯಿಂದಾಗಿ ಸದಸ್ಯರು ಹೀಗೆಲ್ಲಾ ಮಾಡುತ್ತಿದ್ದಾರೆಯೇ? ಇಲ್ಲಿ ಎರಡನೆಯ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ. ಶಾಸಕಾಂಗದ ಎಲ್ಲಾ ಅಧಃಪತನಕ್ಕೆ ಸದಸ್ಯರ ಅಶಿಸ್ತು, ಅನಾಸಕ್ತಿ, ಅಜ್ಞಾನ ಕಾರಣ ಎನ್ನುವ ಸಿದ್ಧಾಂತವನ್ನು ಎಲ್ಲರೂ ಮರುಪ್ರಶ್ನೆ ಇಲ್ಲದೆ ಒಪ್ಪಿಕೊಂಡಿದ್ದೇವೆ. ಆದರೆ ವಿಷಯ ಅಷ್ಟೊಂದು ಸರಳವಲ್ಲ. ಶಾಸಕರನ್ನು ದೂರುವುದರಲ್ಲಿ ಅರ್ಥವಿಲ್ಲ. ನಿಜವಾಗಿ ನೋಡಿದರೆ ಶಾಸಕರಾದವರು ಯಾಕಾದರೂ ಸದನಕ್ಕೆ ಬರಬೇಕು? ಯಾಕಾಗಿ ಸದನದ ಕಲಾಪಗಳಲ್ಲಿ ಪಾಲ್ಗೊಳ್ಳಬೇಕು?ಪ್ರಜಾಸತ್ತಾತ್ಮಕ ಭಾರತದ ಸಂವಿಧಾನದ ಪ್ರಕಾರ ಶಾಸಕಾಂಗದ ಕೆಲಸ ಶಾಸನ ಮಾಡುವುದು ಮತ್ತು ಸರ್ಕಾರದ ಕಾರ್ಯವೈಖರಿಯ ಮೇಲೆ ಕಣ್ಣಿಡುವುದು ಎನ್ನುವ ಕಾರಣಕ್ಕೆ ಅವರು ಸದನಕ್ಕೆ ಬರಬೇಕು, ಚರ್ಚಿಸಬೇಕು ಮತ್ತು ಶಾಸನ ರೂಪಿಸುವ ಕಲಾಪಗಳಲ್ಲಿ ಪಾಲ್ಗೊಳ್ಳಬೇಕು. ಆದರೆ ಈ ಕಾರಣಕ್ಕೆ ಅವರನ್ನು ಜನ ಚುನಾಯಿಸಬೇಕು ಮತ್ತು ಮರು ಚುನಾಯಿಸಬೇಕು ಎಂದು ಸಂವಿಧಾನ ಷರತ್ತು ವಿಧಿಸುವುದಿಲ್ಲವಲ್ಲ.ಹಾಗೊಂದು ಷರತ್ತು ವಿಧಿಸುವುದು ಸಾಧುವೂ ಅಲ್ಲ ಎನ್ನೋಣ. ಇದರ ಪರಿಣಾಮ ಏನು ಎಂದರೆ ಶಾಸಕರು ಅಥವಾ ಸಂಸದರು ಕಾನೂನು ರೂಪಿಸುವ ಕಲಾಪಗಳಲ್ಲಿ ಪಾಲ್ಗೊಳ್ಳುವುದಕ್ಕೂ ಅವರು ಆಯ್ಕೆಯಾಗುವುದಕ್ಕೂ ಯಾವುದೇ ಸಂಬಂಧ ಇಲ್ಲ. ಸಂವಿಧಾನ ಅವರಿಂದ ಆಶಿಸುವ ಕೆಲಸವೇ ಬೇರೆ, ಜನ ಅವರಿಂದ ಬಯಸುವ ಕೆಲಸವೇ ಬೇರೆ. ಅವರನ್ನು ಚುನಾಯಿಸಿ ಕಳುಹಿಸುವವರು  ಜನ ಎನ್ನುವ ಕಾರಣಕ್ಕೆ ಅವರು ಜನ ಬಯಸುವ ಕೆಲಸ ಮಾಡುತ್ತಾರೆ.ಅದರಲ್ಲಿ ಅವರ ತಪ್ಪೇನಿದೆ? ವ್ಯವಸ್ಥೆಯಲ್ಲಿ ಇರುವ ಮೇಲೆ ವಿವರಿಸಿದ ಅಸಂಗತತೆ ನಿವಾರಣೆ ಆಗುವ ತನಕ ಬಯೊಮೆಟ್ರಿಕ್‌ ಅಲ್ಲ ರೇಡಿಯೊಕಾಲರ್ ಹಾಕಿದರೂ ಏನೂ ಆಗುವುದಿಲ್ಲ. ಇಂದಿನ  ಪರಿಸ್ಥಿತಿಯಲ್ಲಿ ಕೆಲವೇ ಕೆಲವು ಮಂದಿ ಶಾಸಕರು, ಸಂಸದರಾದರೂ ನಿಯತ್ತಿನಿಂದ ಸದನಕ್ಕೆ ಬರುತ್ತಾರೆ, ಆಸಕ್ತಿಯಿಂದ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದೇ ದೊಡ್ಡ ವಿಷಯ. ಒಂದು ರೀತಿಯಲ್ಲಿ ಅವರದ್ದೂ ಒಂದು ತ್ಯಾಗ.  ದೇಶ ಅವರಿಗೆ ಋಣಿಯಾಗಿರಬೇಕು. ಈ ಅಸಂಗತತೆಯನ್ನು ಸ್ವಲ್ಪ ವಿಶದವಾಗಿ ನೋಡೋಣ.ನಾವು ಚುನಾಯಿತ ಪ್ರತಿನಿಧಿಗಳ ಸಾಧನೆ ಲೆಕ್ಕ ಹಾಕುವುದು ಅವರು ತಮ್ಮ ಕ್ಷೇತ್ರಕ್ಕಾಗಿ ಏನು ಮಾಡಿದರು ಎನ್ನುವುದರ ಆಧಾರದ ಮೇಲೆ. ಆದರೆ ಶಾಸಕಾಂಗದ ಸಾಧನೆ ಅಳೆಯುವುದು ಸ೦ಸದೀಯ ಕಲಾಪಗಳ ಗುಣಮಟ್ಟದ ಆಧಾರದ ಮೇಲೆ. ಶಾಸಕಾಂಗಕ್ಕೆ  ಒ೦ದು ಮಾನದ೦ಡ. ಅದರ ಸದಸ್ಯರಿಗೆ ಇನ್ನೊ೦ದು ಮಾನದ೦ಡ.ಸ೦ಸದೀಯ ಕೆಲಸ ಮತ್ತು ‘ಅಭಿವೃದ್ಧಿ ಕೆಲಸ’ ಎರಡನ್ನೂ ಚುನಾಯಿತ ಸದಸ್ಯರು ಯಾಕೆ ಮಾಡಬಾರದು ಎ೦ದು ಯಾರಾದರೂ ಕೇಳಬಹುದು. ಕ್ಷೇತ್ರಕ್ಕಾಗಿ ಕೆಲಸ ಮಾಡುವುದು ಮತ್ತು ಉತ್ತಮ ಸ೦ಸದೀಯ ಪಟುಗಳಾಗುವುದು ಏಕಕಾಲಕ್ಕೆ ಸಾಧ್ಯ ಎನ್ನುವುದನ್ನು ತಾತ್ವಿಕವಾಗಿ ಒಪ್ಪಬಹುದು. ಆದರೆ ವಾಸ್ತವದಲ್ಲಿ ಇವೆರಡೂ ವಿಚಾರಗಳಿಗೆ ಏಕಕಾಲದಲ್ಲಿ ನ್ಯಾಯ ಒದಗಿಸುವುದು ಅಸಾಧ್ಯ.ಸ೦ಸದರನ್ನು ಮತ್ತು ಶಾಸಕರನ್ನು ಅಭಿವೃದ್ಧಿಯ ದಲ್ಲಾಳಿಗಳಾಗಬೇಕೆ೦ದು ವಿಪರೀತವಾಗಿ ಬಯಸುವುದರ ಮೂಲಕ ಭಾರತದಲ್ಲಿ ಸ೦ಸದೀಯ ವ್ಯವಸ್ಥೆಯನ್ನು ಕೊಲ್ಲಲಾಗಿದೆ. ಸ೦ವಿಧಾನ ಕೂಡಾ ಶಾಸಕಾಂಗದ ಕಾರ್ಯವ್ಯಾಪ್ತಿ ಎಲ್ಲಿ ಮುಕ್ತಾಯವಾಗುತ್ತದೆ, ಕಾರ್ಯಾಂಗದ ವ್ಯಾಪ್ತಿ ಎಲ್ಲಿ ಪ್ರಾರಂಭವಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟತೆ ಹೊಂದಿಲ್ಲ. ಹಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್, ಶಾಸಕಾಂಗ ಮತ್ತು ನ್ಯಾಯಾಂಗದ ಕಾರ್ಯವ್ಯಾಪ್ತಿಗೆ ಸೇರದ್ದು ಕಾರ್ಯಾಂಗದ ಕಾರ್ಯವ್ಯಾಪ್ತಿ ಎಂದು ಹೇಳಿ ಕೈತೊಳೆದುಕೊಂಡಿದೆ. ಈ ಸ್ಥಿತಿಯಲ್ಲಿ ಚುನಾಯಿತ ಪ್ರತಿನಿಧಿಗಳೆಲ್ಲ ಅದ್ಭುತ ಸಂಸದೀಯ ಪಟುಗಳಾಗಬೇಕು ಎನ್ನುವ ವಾದವೇ ಸರಿ ಕಾಣುವುದಿಲ್ಲ.ಚುನಾಯಿತ ಪ್ರತಿನಿಧಿಗಳನ್ನು ನಾವು ಅಭಿವೃದ್ಧಿಯ ದಲ್ಲಾಳಿಗಳ೦ತೆ ಬಳಸುತ್ತಾ ಇರುವಷ್ಟು ಕಾಲ ಮತ್ತು ಅವರ ಸಾಧನೆಯನ್ನು ಅವರ ಕ್ಷೇತ್ರದಲ್ಲಿ ಎಷ್ಟು ರಸ್ತೆ ಮಾಡಿದರು, ಎಷ್ಟು ಯೋಜನೆಗೆ ಅಡಿಗಲ್ಲು ಹಾಕಿಸಿದರು ಎನ್ನುವ ಮಾನದ೦ಡದಲ್ಲಿ ಮಾತ್ರ ಅಳೆಯುತ್ತಿರುವಷ್ಟು ಕಾಲ ಅವರು  ಮಸೂದೆಗಳ ಮೇಲೆ ಮಾತನಾಡಬೇಕು, ಸ೦ಸತ್ತಿನಲ್ಲಿ ಬಜೆಟ್‌ನ ಬಗ್ಗೆ ಚರ್ಚಿಸಬೇಕು ಎ೦ಬಿತ್ಯಾದಿಗಳನ್ನೆಲ್ಲಾ ಅಪೇಕ್ಷಿಸುವುದರಲ್ಲಿ ಅರ್ಥವಿಲ್ಲ. ವ್ಯಾವಹಾರಿಕ ರಾಜಕೀಯದ ಒಳಮರ್ಮ ತಿಳಿದ ರಾಜಕಾರಣಿಗಳಿಗೆ ಸದನದಲ್ಲಿ  ನಡೆಯುವುದೆಲ್ಲಾ ಅವ್ಯಾವಹಾರಿಕ ಪುಸ್ತಕದ ಬದನೆಕಾಯಿಯ೦ತೆ ಅನ್ನಿಸುತ್ತದೆ. ಅದು ಅವರ ತಪ್ಪಲ್ಲ.ಜನಪ್ರತಿನಿಧಿಗಳು ಸದನದಲ್ಲಿ ಮಾತನಾಡಬೇಕು ಎನ್ನುವವರು ಕೂಡಾ ಹೇಳುವುದು ಅವರು ತಮ್ಮ ಕ್ಷೇತ್ರದ ಸಮಸ್ಯೆಯನ್ನು ಅಲ್ಲಿ ಎತ್ತಬೇಕು, ಅದರ ಕುರಿತು ಚರ್ಚಿಸಬೇಕು ಎಂದು. ಇದು ಸಂಸದೀಯ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳ ಕೆಲಸವನ್ನು ಸ೦ಕುಚಿತವಾಗಿ ನೋಡುವ ಕ್ರಮ. ಕ್ಷೇತ್ರದ ಸಮಸ್ಯೆಯನ್ನು ಹೇಳಲು ಶಾಸಕಾಂಗದ ಸದನವೇ ಬೇಕಾಗಿಲ್ಲ.ಸ೦ಬ೦ಧಪಟ್ಟ ಇಲಾಖೆಯಲ್ಲೇ ಅ೦ತಹ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು. ಒ೦ದು ಸಮಸ್ಯೆ ಒ೦ದು ಇಲಾಖೆಯ ಮಟ್ಟದಲ್ಲಿ ಪರಿಹಾರವಾಗುವುದಿಲ್ಲ ಎನ್ನುವ ಹ೦ತಕ್ಕೆ ಬ೦ದಾಗ ಅದು ಒಬ್ಬ ಚುನಾಯಿತ ಪ್ರತಿನಿಧಿಯ ಅಥವಾ ಒ೦ದು ಕ್ಷೇತ್ರದ ಸಮಸ್ಯೆ ಮಾತ್ರವಾಗುವುದಿಲ್ಲ. ಅದು ಇಡೀ ವ್ಯವಸ್ಥೆಯ ಸಮಸ್ಯೆಯಾಗುತ್ತದೆ. ಅಂತಹ ವಿಚಾರಗಳನ್ನು ಎತ್ತಲು, ಚರ್ಚಿಸಲು, ಅವುಗಳಿಗೆ ಬೇಕಾಗುವ ನೀತಿ, ನಿಯಮ, ಕಾನೂನು ರೂಪಿಸಲು ಶಾಸಕಾಂಗ, ಸದನ ಇರುವುದು.ಇದನ್ನು ಅರ್ಥ ಮಾಡಿಕೊಳ್ಳದೆ ‘ಕ್ಷೇತ್ರದ ಸಮಸ್ಯೆಗಳನ್ನೇ ಎತ್ತಿ’ ಎಂದು ಜನ ಬಯಸುತ್ತಿರುವುದರಿಂದ ನಮ್ಮ ಚುನಾಯಿತ ಪ್ರತಿನಿಧಿಗಳು ಅವರ ಕ್ಷೇತ್ರದಾಚೆಗೆ ಏನನ್ನೂ ತಿಳಿಯುವ ಕುತೂಹಲವಿಲ್ಲದವರಾಗಿ ಬಿಟ್ಟಿದ್ದಾರೆ. ಇಲ್ಲೂ ತಪ್ಪು ಅವರದಲ್ಲ. ಅವರ ಬಗ್ಗೆ ನಾವು ಇರಿಸಿಕೊಂಡಿರುವ ನಿರೀಕ್ಷೆಯದ್ದು.ಇನ್ನು ಕಲಾಪಗಳಲ್ಲಿ ಪಾಲ್ಗೊಳ್ಳಬೇಕು ಎಂದರೆ ವಿಷಯಗಳನ್ನು ಅರಿತಿರಬೇಕು. ವಿಷಯ ಅರಿತಿರಬೇಕು ಎಂದರೆ ಓದುವ ಹವ್ಯಾಸ ಮತ್ತು ಆಸಕ್ತಿ ಇರಬೇಕು. ಹುಟ್ಟಿನಿಂದ ಇಂತಹ ಜಾಯಮಾನವೇ ಇಲ್ಲದೆ, ಯಾವುದೋ ವ್ಯವಹಾರ  ನಡೆಸುತ್ತಾ ಹಣ ಮಾಡಿದ ಮೇಲೆ, ಅದರ ಬಲದಿಂದ ಚುನಾವಣೆ ಗೆಲ್ಲುವವರು, ರಾಜಕೀಯ ಅಧಿಕಾರವು ಕುಟುಂಬದ ಕೈಜಾರಬಾರದು ಎನ್ನುವ ಕಾರಣಕ್ಕೆ ಶಾಸನಸಭೆಗೆ ಆಯ್ಕೆಯಾಗುವವರು, ಸುಮ್ಮನೆ ಅಧಿಕಾರ ನೀಡುವ ಕಿಕ್‌ಗಾಗಿ ಚುನಾವಣೆಗೆ ನಿ೦ತು ಗೆಲ್ಲುವವರು- ಇಂತಹವರೆಲ್ಲಾ  ಒಮ್ಮಿಂದೊಮ್ಮೆಲೆ ಕಲಾಪಗಳಲ್ಲಿ ಆಸಕ್ತಿ ವಹಿಸಬೇಕು ಅಥವಾ ಅದರಲ್ಲಿ ಪಾಲ್ಗೊಳ್ಳಬೇಕು ಎಂದರೆ ಹೇಗೆ?ಇಂದಿನ ಸ್ಥಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು ಸದನಕ್ಕೆ  ಬರಬೇಕು ಮತ್ತು ಕಲಾಪಗಳಲ್ಲಿ ಭಾಗಿಯಾಗಬೇಕು ಎನ್ನುವುದು ಹೇಗಿದೆ ಎಂದರೆ ಮೇಸ್ತ್ರಿಗಳನ್ನು ನೇಮಿಸಿ ಅವರು ಎಂಜಿನಿಯರ್‌ಗಳ ಕೆಲಸ ಮಾಡಬೇಕು ಎಂದು ಬಯಸುವ ಹಾಗಿದೆ. ಕೆಲವು ಮೇಸ್ತ್ರಿಗಳು ಎಂಜಿನಿಯರ್‌ಗಳಿಗಿಂತ ಹೆಚ್ಚು ತಿಳಿದುಕೊಂಡಿದ್ದು ಅವರು ಎಂಜಿನಿಯರಿಂಗ್ ಕೆಲಸವನ್ನೂ ನಿಭಾಯಿಸಬಹುದು. ಅದು ಬೇರೆ ವಿಷಯ. ಆದರೆ ಮೇಸ್ತ್ರಿಯೊಬ್ಬ ಎಂಜಿನಿಯರಿಂಗ್‌ ಕೆಲಸ ಮಾಡದಿದ್ದರೆ ನಾವು ಪ್ರಶ್ನಿಸುವ ಹಾಗಿಲ್ಲ. ಯಾಕೆಂದರೆ ನಾವು ನೇಮಿಸಿದ್ದು ಮೇಸ್ತ್ರಿಗಳನ್ನು. ಎಂಜಿನಿಯರ್‌ಗಳನ್ನಲ್ಲ.ಈ ವ್ಯವಸ್ಥೆಯನ್ನು ಹೀಗೇ ಉಳಿಸಿಕೊಂಡು ಶಾಸಕರನ್ನು ಅಥವಾ ಸಂಸದರನ್ನು ದೂರುವುದರಲ್ಲಿ ಅರ್ಥವಿಲ್ಲ. ಇದಕ್ಕೆ ಪರಿಹಾರ ಬೇಕಾದರೆ ಇಡೀ ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು. ಇದಕ್ಕಿರುವ ಒಂದು ಮಾರ್ಗ ಎಂದರೆ ಭಾರತದ ಲೋಕ ಸಭೆಯನ್ನು ಮತ್ತು ಶಾಸನ ಸಭೆಗಳನ್ನು ಎರಡಾಗಿ ವಿಭಜಿಸಬೇಕು. ಮೊದಲನೆಯ ವಿಭಾಗ ಈಗಿರುವಂತೆಯೇ ಇರಲಿ. ಅಲ್ಲಿ ಅಭಿವೃದ್ಧಿಯ ದಲ್ಲಾಳಿಗಳು ಯಥಾಪ್ರಕಾರ ತಮ್ಮ ಕೆಲಸ ಮುಂದುವರಿಸಲಿ.ಎರಡನೆಯ ವಿಭಾಗ ಮಾತ್ರ ಶಾಸನ ಮಾಡುವ ಮತ್ತು ನೀತಿ ನಿರೂಪಿಸುವ ಕೆಲಸಕ್ಕಾಗಿಯೇ ಮೀಸಲಿರಲಿ. ಇದಕ್ಕೆ ಸದಸ್ಯರ ಆಯ್ಕೆ ಕೂಡಾ ಇಂತಹ ಕಲಾಪಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಇರುವ ಸಾಮರ್ಥ್ಯ ಮತ್ತು ಒಮ್ಮೆ ಆಯ್ಕೆಯಾದ ನಂತರ ಅವರು ಶಾಸನ ರಚನೆ ಮತ್ತು ನೀತಿ ನಿರೂಪಣೆಗಾಗಿ ನೀಡಿದ ಕೊಡುಗೆಗಳ ಆಧಾರದ  ಮೇಲೆ ನಡೆಯುವ ವ್ಯವಸ್ಥೆ ಬರಲಿ. ಆಗ ಮೇಸ್ತ್ರಿ ಕೆಲಸಕ್ಕೆ ಮೇಸ್ತ್ರಿಗಳನ್ನು, ಮತ್ತು ಎಂಜಿನಿಯರಿಂಗ್ ಕೆಲಸಕ್ಕೆ ಎಂಜಿನಿಯರ್‌ಗಳನ್ನು ನೇಮಿಸಿದ ಹಾಗೆ ಆಗುತ್ತದೆ.ಇವೆರಡರಲ್ಲಿ ಮೇಲು, ಕೀಳು ಏನೂ ಇಲ್ಲ. ಎರಡೂ ಭಾರತದ ಪ್ರಜಾಸತ್ತೆಗೆ ಅಗತ್ಯವಿದೆ. ಈಗಾಗಲೇ ಇರುವ ಲೋಕಸಭೆ ಮತ್ತು ರಾಜ್ಯಸಭೆ ಜತೆ (ರಾಜ್ಯ ಮಟ್ಟದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಜತೆ) ಶಾಸಕಾಂಗದ ಈ ಹೊಸ ಅಂಗವನ್ನು ಹೇಗೆ ಹೊಂದಿಸಿಕೊಳ್ಳಬಹುದು ಎನ್ನುವುದನ್ನು ಸಂವಿಧಾನಕ್ಕೂ, ಸಂಬಂಧಪಟ್ಟ ಕಾನೂನುಗಳಿಗೂ ಬದಲಾವಣೆ  ತರುವುದರ ಮೂಲಕ ನಿರ್ಧರಿಸಬಹುದು.ಸಂವಿಧಾನ ಭಾರತದ ಮೇಲೆ  ಅವಸರದಲ್ಲಿ ಹೇರಿದ ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಎಪ್ಪತ್ತು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಪುನರ್ ರೂಪಿಸುವುದರಲ್ಲಿ ಅಪಮಾನದ ಪ್ರಶ್ನೆ ಏನೂ ಇಲ್ಲ. ಈಗ ಸಂಸದೀಯ ವ್ಯವಸ್ಥೆಯ ವೆಸ್ಟ್-ಮಿನಿಸ್ಟರ್ ಮಾಡೆಲ್ ಇರುವ ಹಾಗೆಯೇ ಹೊಸ ಸಂರಚನೆಯ ಸಂಸದೀಯ ವ್ಯವಸ್ಥೆಯನ್ನು ಭಾರತೀಯ ಸಂಸದೀಯ ಮಾದರಿ ಎ೦ದು ರಾಜಕೀಯ ವಿಜ್ಞಾನ ಗುರುತಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry