ಗುರುವಾರ , ಡಿಸೆಂಬರ್ 12, 2019
16 °C
ಚುನಾವಣಾ ನಾಡಿನಿಂದ-14

ಶ್ವೇತಭವನ ಕೊನೆಯ ನಿಲ್ದಾಣ, ಆದರೆ ದುಬಾರಿ ಪ್ರಯಾಣ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಶ್ವೇತಭವನ ಕೊನೆಯ ನಿಲ್ದಾಣ, ಆದರೆ ದುಬಾರಿ ಪ್ರಯಾಣ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯೆಂದರೆ, ಅದು ದೊಡ್ಡ ಮೊತ್ತದ ವ್ಯವಹಾರ. ಶ್ವೇತಭವನದ ಗಮ್ಯ ತಲುಪಲು ಅಭ್ಯರ್ಥಿ ಕೋಟಿಗಟ್ಟಲೆ ಹಣ ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಚುನಾವಣೆ ಬಹುದೀರ್ಘ ಪ್ರಕ್ರಿಯೆಯಾದ್ದರಿಂದ ಹೆಚ್ಚೇ ಹಣ ಬೇಡುತ್ತದೆ.ಅಭ್ಯರ್ಥಿಗಳು ವರುಷದ ಮೊದಲೇ ಪ್ರಚಾರ ತಂಡ ಕಟ್ಟಿಕೊಂಡು, ಹಲವು ಕಾರ್ಯಕರ್ತರನ್ನು, ವಿಷಯ ತಜ್ಞರನ್ನು, ಪ್ರಚಾರ ನಿರ್ವಾಹಕರನ್ನು ಪೂರ್ಣಾವಧಿಗೆ ನೇಮಿಸಿಕೊಳ್ಳಬೇಕಾಗುತ್ತದೆ. ಅವರೆಲ್ಲರ ಸಂಬಳ, ಓಡಾಟದ ಖರ್ಚು, ಜಾಹೀರಾತು, ಸಭೆ ಸಮಾರಂಭ ಎಂದು ಲಕ್ಷಾಂತರ ಡಾಲರ್ ಮೊತ್ತ ವ್ಯಯಿಸಬೇಕಾಗುತ್ತದೆ. ಕೇವಲ ಅಯೋವಾ, ನ್ಯೂ ಹ್ಯಾಂಪ್ಶೈರ್‌ನಂತಹ ಸಣ್ಣ ರಾಜ್ಯಗಳಲ್ಲಿ ಪ್ರಾಥಮಿಕ ಹಂತದ ಚುನಾವಣೆ ಗೆಲ್ಲಲು 20 ದಶಲಕ್ಷ ಡಾಲರ್ ಬೇಕಾಗುತ್ತದೆ!ಈ ಸಂಬಂಧ ರಾಜಕೀಯ ತಜ್ಞರು ಬಳಸುವ ಪದವೊಂದಿದೆ ‘Money Primary'. ತಮ್ಮ ಉಮೇದುವಾರಿಕೆಯನ್ನು ಘೋಷಿಸಿಕೊಳ್ಳುವ ಮೊದಲೇ, ಅಭ್ಯರ್ಥಿಗಳು ದೇಣಿಗೆ ಸಂಗ್ರಹಕ್ಕೆ ಇಳಿಯುವುದರಿಂದ ಈ ಹೆಸರು ಚಾಲ್ತಿಯಲ್ಲಿದೆ.ಸಾಮಾನ್ಯವಾಗಿ ಶ್ವೇತಭವನದ ಕನಸು ಕಂಡವರು, ಚುನಾವಣಾ ಪ್ರಕ್ರಿಯೆ ವಿಧ್ಯುಕ್ತವಾಗಿ ಆರಂಭವಾಗುವ ಮೊದಲೇ, ದೇಣಿಗೆ ಸಂಗ್ರಹಿಸಲು ಮುಂದಾಗುತ್ತಾರೆ, ಶ್ರೀಮಂತರನ್ನು ಓಲೈಸುವ ಕೆಲಸಕ್ಕೆ ನಿಲ್ಲುತ್ತಾರೆ. ಪ್ರಥಮ ಹಂತದಲ್ಲೇ ಹೆಚ್ಚು ದೇಣಿಗೆ ಸಂಗ್ರಹಿಸಲು ಸಫಲವಾದರೆ, ಪಕ್ಷವೂ ಉಮೇದುವಾರಿಕೆಯನ್ನು ಬೆಂಬಲಿಸುತ್ತದೆ.ದೇಣಿಗೆ ಸಂಗ್ರಹದ ಸಾಮರ್ಥ್ಯ, ಅಭ್ಯರ್ಥಿಯಾಗಲು ಮಾನದಂಡವಾಗುತ್ತದೆ!ಅಭ್ಯರ್ಥಿಯಾಗಬೇಕಾದರೆ, ಮೊದಲು ಬಾರೀ ಮೊತ್ತವನ್ನು ಸಂಗ್ರಹಿಸಬೇಕು. ತಮ್ಮ ಹಿಂದೆ ದೊಡ್ಡ ಬೆಂಬಲಿಗ ಪಡೆಯಿದೆ ಎನ್ನುವುದನ್ನು ತೋರಿಸಿಕೊಳ್ಳಬೇಕು. ಆಗ ಮಾಧ್ಯಮಗಳು ಸುದ್ದಿ ಮಾಡುತ್ತವೆ. ಪ್ರಚಾರ ಸಿಕ್ಕಂತೆಲ್ಲಾ ಹಣವೂ ಹೆಚ್ಚೆಚ್ಚು ಹರಿದು ಬರುತ್ತದೆ. ಬೆಂಬಲಿಗರೂ ಜೊತೆಯಾಗುತ್ತಾರೆ ಎಂಬುದು ಒಂದು ರಾಜಕೀಯ ತಂತ್ರಗಾರಿಕೆ. ಬರಾಕ್ ಒಬಾಮ ಈ ಸೂತ್ರವನ್ನು ಬಳಸಿದ್ದರು.ತಮ್ಮ ಚುನಾವಣಾ ಪ್ರಚಾರದ ಪೂರ್ವ ಸಜ್ಜಿಕೆಯಾಗಿ ‘The Audacity of Hope' ಕೃತಿಯನ್ನು 2006ರಲ್ಲಿ ಹೊರತಂದಿದ್ದರು. ಅದರ ಬಿಡುಗಡೆ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಿ, ಆ ಮೂಲಕ ತಮ್ಮ ಚುನಾವಣಾ ಪ್ರಚಾರಕ್ಕೆ ಅನಧಿಕೃತ ಚಾಲನೆ ನೀಡಿದ್ದರು. ಆ ಮೂಲಕ ತಾವು ಹೊರಟಿರುವುದು ಶ್ವೇತ ಭವನದ ಕಡೆಗೇ ಎಂಬುದನ್ನು ತೋರಿಸಿದ್ದರು.ಪುಸ್ತಕ ಪ್ರಚಾರದ ಜೊತೆಯಲ್ಲೇ, ಚುನಾವಣಾ ದೇಣಿಗೆ ಸಂಗ್ರಹದ ಬಗ್ಗೆ ಶ್ರೀಮಂತ ಉದ್ಯಮಿಗಳೊಂದಿಗೆ ಮಾತುಕತೆ ಆರಂಭಿಸಿದ್ದರು. ಅದನ್ನು ಗಮನಿಸಿದ ಟೈಮ್ಸ್ ಪತ್ರಿಕೆ ‘Why Obama could be the Next President' ಎಂಬ ಶೀರ್ಷಿಕೆಯನ್ನು ಮುಖಪುಟದಲ್ಲಿ ಮುದ್ರಿಸಿ ತನ್ನ ಸಂಚಿಕೆಯನ್ನು 2006ರಲ್ಲಿ ಹೊರತಂದಿತ್ತು. ನಂತರ ಒಬಾಮ ಸ್ಪರ್ಧೆಯನ್ನು ದೃಢಪಡಿಸಿದ್ದರು.ಹಾಗೆ ನೋಡಿದರೆ, 1972ರವರೆಗೂ ಚುನಾವಣೆಯಲ್ಲಿ ಬಳಕೆಯಾಗುವ ಹಣದ ಬಗ್ಗೆ, ದೇಣಿಗೆ ಸಂಗ್ರಹದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. 1972ರ ಚುನಾವಣೆಯಲ್ಲಿ ನಿಕ್ಸನ್, ಚುನಾವಣಾ ಖರ್ಚಿಗೆಂದು 10 ಲಕ್ಷ ಡಾಲರನ್ನು, ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಡೆದಿದ್ದರು. ಅದಕ್ಕೆ ಪ್ರತಿಯಾಗಿ ಹಾಲು ಉತ್ಪನ್ನಗಳ ಬೆಲೆ ನಿಗದಿ ಸಂಬಂಧ, ಸಂಘಕ್ಕೆ ಅನುಕೂಲ ಮಾಡಿಕೊಡುವ ವಾಗ್ದಾನ ಮಾಡಿದ್ದರು.ಇದು ‘ವಾಟರ್ ಗೇಟ್ ಹಗರಣ’ದ ತನಿಖೆಯ ಸಂದರ್ಭ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಅಮೆರಿಕ ಏರ್‌ಲೈನ್ಸ್, ಸ್ವಿಸ್ ಬ್ಯಾಂಕಿನಲ್ಲಿರುವ ದೊಡ್ಡ ಇಡುಗಂಟನ್ನು ಮಧ್ಯವರ್ತಿಯ ಮೂಲಕ ನಿಕ್ಸನ್ ತಂಡಕ್ಕೆ ತಲುಪಿಸಿತ್ತು ಎಂಬುದು ಸಾಬೀತಾಗಿತ್ತು. ‘ವಾಟರ್ ಗೇಟ್ ಹಗರಣ’ದ ಬಳಿಕ, ಚುನಾವಣಾ ದೇಣಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ತರಬೇಕು ಎಂಬ ಕೂಗು ಕಾಂಗ್ರೆಸ್ಸಿನಲ್ಲಿ ಕೇಳಿಬಂದಿತ್ತು.ಮೊದಲಿದ್ದ ಕಾನೂನಿಗೆ ತಿದ್ದುಪಡಿ ತರಲಾಯಿತು. ದೇಣಿಗೆ ವಿವರವನ್ನು ಬಹಿರಂಗಗೊಳಿಸಬೇಕು, ಚುನಾವಣಾ ವೆಚ್ಚಕ್ಕೆ ಗರಿಷ್ಠ ಮಿತಿಯನ್ನು ಇರಿಸಬೇಕು, ಚುನಾವಣಾ ಅಯೋಗ ಅಭ್ಯರ್ಥಿಗಳು ಸಂಗ್ರಹಿಸುವ ದೇಣಿಗೆ ಮತ್ತು ಚುನಾವಣಾ ಖರ್ಚಿನ ಬಗ್ಗೆ ನಿಗಾ ವಹಿಸಬೇಕು ಎಂಬುದು ತಿದ್ದುಪಡಿಯ ಆಶಯವಾಗಿತ್ತು. ಆದರೆ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿತು. ಅಮೆರಿಕದ ಸುಪ್ರಿಂ ಕೋರ್ಟ್, ಚುನಾವಣಾ ವೆಚ್ಚಕ್ಕೆ ಮಿತಿ ಹೇರುವ ವಿಷಯದಲ್ಲಿ ಅಸಮ್ಮತಿ ಸೂಚಿಸಿತಾದರೂ, ವಿದೇಶಿ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸಿ ತೀರ್ಪು ಕೊಟ್ಟಿತು.ನ್ಯಾಯಾಲಯದ ಆದೇಶದನ್ವಯ ನೇರವಾಗಿ ಅಭ್ಯರ್ಥಿ ಅಥವಾ ಪಕ್ಷಕ್ಕೆ ವೈಯಕ್ತಿಕ ನೆಲೆಯಲ್ಲಿ ದೇಣಿಗೆ ನೀಡುವ ಬಗ್ಗೆ ಮಿತಿ ಇದೆಯಾದರೂ, ರಾಜಕೀಯ ಕ್ರಿಯಾ ಸಮಿತಿಗಳ (PAC) ಮೂಲಕ ದೇಣಿಗೆ ನೀಡಲು ಅವಕಾಶಗಳಿವೆ. ‘ಸೂಪರ್ ಪ್ಯಾಕ್’ ಪರೋಕ್ಷವಾಗಿ ಅಭ್ಯರ್ಥಿಯ ಪರ ವ್ಯಯಿಸುವ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. ಹಾಗಾಗಿ ಅಭ್ಯರ್ಥಿಗಳು ‘ಸೂಪರ್ ಪ್ಯಾಕ್’ಗಳ ಮೊರೆ ಹೋಗುತ್ತಾರೆ.ರಾಜಕೀಯ ಕ್ರಿಯಾ ಸಮಿತಿಗಳು ಇತರರಿಂದ ಹಣ ಒಟ್ಟುಮಾಡಿ, ಅಭ್ಯರ್ಥಿಗಳ ಪರ ಚುನಾವಣೆಯಲ್ಲಿ ವೆಚ್ಚ ಮಾಡುತ್ತವೆ. ‘Winning our future’, ‘Americans for a Better Tomorrow’, ‘Americans for prosperity' ಎಂಬಿತ್ಯಾದಿ ಹೆಸರಿನಲ್ಲಿ, ಸುಮಾರು 4,000 ರಾಜಕೀಯ ಕ್ರಿಯಾ ಸಮಿತಿಗಳು ಅಮೆರಿಕದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಸಂಸ್ಥೆಗಳು ವಿಷಯಾಧಾರಿತವಾಗಿ, ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆಯಾದರೂ, ಬಹುಪಾಲು ಸಂಸ್ಥೆಗಳು, ಪಕ್ಷಗಳ ಹಿಂಬಾಗಿಲಿನಂತೆ ಕೆಲಸ ಮಾಡುತ್ತಿವೆ.ಪ್ರಸಕ್ತ ಚುನಾವಣೆಯಲ್ಲಿ, ರಾಜಕೀಯ ಕ್ರಿಯಾ ಸಮಿತಿಗಳು ಈವರೆಗೆ ಸುಮಾರು 215 ದಶಲಕ್ಷ ಡಾಲರ್ ಹಣವನ್ನು ಟಿ.ವಿ ಜಾಹೀರಾತು, ಪತ್ರಿಕಾ ಪ್ರಕಟಣೆ, ಮತದಾರರಿಗೆ ನೇರವಾಗಿ ಇ-ಮೇಲ್, ದೂರವಾಣಿ ಕರೆ ಮಾಡಿ ಮತ ಕೋರುವ ಪ್ರಕ್ರಿಯೆಗೆ ಬಳಸಿವೆ ಎಂದು ವರದಿಯಾಗಿದೆ. ಸೆಪ್ಟೆಂಬರ್ 30ರಂದು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ಸುಮಾರು 1.1 ಶತಕೋಟಿ ಡಾಲರ್ ಮೊತ್ತ ಹಿಲರಿ ಅವರ ಬೊಕ್ಕಸ ಸೇರಿದೆ. ಅದರಲ್ಲಿ ಶೇಕಡ 93ರಷ್ಟು ಖರ್ಚಾಗಿದೆ. ಟ್ರಂಪ್ ದೇಣಿಗೆ ಸಂಗ್ರಹದಲ್ಲಿ ಹಿಲರಿ ಅವರಿಗಿಂತ ಹಿಂದಿದ್ದಾರೆ. ಒಟ್ಟು ಟ್ರಂಪ್ ಚುನಾವಣಾ ಪ್ರಚಾರಕ್ಕೆ 700 ದಶಲಕ್ಷ ಡಾಲರ್ ಸಂದಾಯವಾಗಿದೆ. ಅದರಲ್ಲಿ ಶೇಕಡ 86ರಷ್ಟು ಖರ್ಚಾಗಿದೆ.ಅಭ್ಯರ್ಥಿಗಳ ಹೆಸರಿನಲ್ಲಿ ಪರೋಕ್ಷವಾಗಿ, ‘ಸೂಪರ್ ಪ್ಯಾಕ್’ಗಳು ಸಂಗ್ರಹಿಸುವ ನಿಧಿಗೆ, ದೊಡ್ಡ ಮೊತ್ತವನ್ನು ನೀಡುವ ಹಲವು ಪ್ರತಿಷ್ಠಿತ ಕುಟುಂಬಗಳು ಅಮೆರಿಕದಲ್ಲಿವೆ.ಚುನಾವಣೆಯ ಮೊದಲ ಹಂತದಲ್ಲೇ, ಪ್ರತಿಷ್ಠಿತ ಎನಿಸಿಕೊಂಡಿರುವ 157 ಕುಟುಂಬಗಳು, ಶ್ವೇತಭವನದ ಹಣಾಹಣಿಗೆ 176 ದಶಲಕ್ಷ ಡಾಲರ್ ದೇಣಿಗೆ ನೀಡಿವೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಫೆಬ್ರುವರಿಯಲ್ಲಿ ವರದಿ ಮಾಡಿತ್ತು.ದೇಣಿಗೆ ನೀಡಿರುವ ಕುಟುಂಬಗಳ ಪಟ್ಟಿಯನ್ನು ಬಹಿರಂಗಪಡಿಸಿತ್ತು. ಈ ಪಟ್ಟಿಯಲ್ಲಿ ಹಣಕಾಸು ಸಂಸ್ಥೆಗಳ ಮಾಲೀಕರು, ರಿಯಲ್ ಎಸ್ಟೇಟ್ ಕುಳಗಳು, ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿರುವ ಗಣ್ಯರು, ಆರೋಗ್ಯ ವಿಮಾ ಕಂಪನಿ ಒಡೆಯರು, ಸಗಟು ವ್ಯಾಪಾರ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡಿರುವವರು ಇದ್ದರು.ಅದಲ್ಲದೇ ಅಮೆರಿಕದ ರಾಜಕೀಯವನ್ನು ನಿಯಂತ್ರಿಸುವ ಕೆಲವು ಹಿರಿ ತಲೆಗಳಿವೆ, ಅದರಲ್ಲಿ ಲಾಸ್ ವೇಗಸ್ ನಗರದ ಜೂಜು ಕೇಂದ್ರಗಳ ಮಾಲೀಕ ಶೆಲ್ಡನ್ ಅಡಲ್ಸನ್, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಕೋಕ್ ಸಂಸ್ಥೆಗಳ ಒಡೆಯರಾದ ಕೋಕ್ ಸಹೋದರರು, ‘ಸೋರಸ್ ಫಂಡ್ ಮ್ಯಾನೇಜ್ಮೆಂಟ್’ ಮುಖ್ಯಸ್ಥ ಜಾರ್ಜ್ ಸರೋಸ್ ಪ್ರಮುಖರು. ಈ ಚುನಾವಣೆಯಲ್ಲಿ ಟ್ರಂಪ್ ಪರ, ಶೆಲ್ಡನ್ ಅಡಲ್ಸನ್ 100 ದಶಲಕ್ಷ ಡಾಲರ್ ಮೊತ್ತವನ್ನು ಹೂಡಿದ್ದಾರೆ!ಸಾಂಪ್ರದಾಯಿಕವಾಗಿ ರಿಪಬ್ಲಿಕನ್ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದ ಜಾರ್ಜ್ ಸೋರಸ್ ಮತ್ತು ಕೋಕ್ ಸಹೋದರರು ನಿಷ್ಠೆ ಬದಲಿಸಿ, ಡೆಮಾಕ್ರಟಿಕ್ ಪಕ್ಷದ ಜೊತೆಯಾಗಿದ್ದಾರೆ. ಎಚ್.ಪಿ. ಕಂಪನಿಯ ಮುಖ್ಯಸ್ಥೆ ಮೆಗ್ ವಿಟ್ಮೆನ್, ಮೊದಲು ರಿಪಬ್ಲಿಕನ್ ಪಕ್ಷದ ಪರ ಇದ್ದವರು. ಈ ಚುನಾವಣೆಯಲ್ಲಿ ಹಿಲರಿ ಪರ ನಿಂತಿದ್ದಾರೆ. ಹೀಗೆ ದೊಡ್ಡ ಮೊತ್ತದ ದೇಣಿಗೆ ನೀಡುವ ಸಿರಿವಂತರು, ತಮ್ಮ ಸ್ವಹಿತಾಸಕ್ತಿಗೆ ಪೂರಕವಾಗಿ ನಿಬಂಧನೆಗಳನ್ನೂ ಹಾಕುತ್ತಾರೆ. ವಿವಿಧ ವಿಷಯಗಳ ಬಗ್ಗೆ ಅಭ್ಯರ್ಥಿ ತೆಗೆದುಕೊಳ್ಳುವ ನಿಲುವು, ಪ್ರಕಟಿಸುವ ಯೋಜನೆಗಳು ಈ ನಿರಿವಂತರ ಸಮ್ಮುಖದಲ್ಲಿ ನಿರ್ಧಾರವಾಗಿರುತ್ತದೆ.ಒಂದಂತೂ ನಿಜ, ಎಷ್ಟೇ ಆರ್ಥಿಕತೆ ಕುಸಿಯುತ್ತಿದೆ, ಉದ್ಯೋಗ ನಷ್ಟವಾಗುತ್ತಿದೆ ಎಂದು ಬೊಬ್ಬೆ ಹೊಡೆದರೂ, ಅಮೆರಿಕದ ಚುನಾವಣೆಯಲ್ಲಿ ಬಳಕೆಯಾಗುವ ಮೊತ್ತವಂತೂ ಹೆಚ್ಚುತ್ತಲೇ ಇದೆ. ಸಾಮಾನ್ಯವಾಗಿ ಬಂದೂಕು, ಜೂಜು ಲಾಬಿಗಳು ರಿಪಬ್ಲಿಕನ್ ಪಕ್ಷದ ಪರ ಹೂಡಿಕೆ ಮಾಡಿದರೆ, ವಿಮಾ ಕಂಪನಿಗಳು, ಮಾಧ್ಯಮ ಸಂಸ್ಥೆಗಳು, ಡೆಮಾಕ್ರಟಿಕ್ ಪಕ್ಷದ ಪರ ನಿಲ್ಲುತ್ತವೆ. ಆಯಾ ಪಕ್ಷಗಳ ಪ್ರಣಾಳಿಕೆಯನ್ನು ನಿರ್ದೇಶಿಸುತ್ತವೆ. ಒಟ್ಟಿನಲ್ಲಿ ಅಧ್ಯಕ್ಷೀಯ ಚುನಾವಣೆ, ಹಣ ಹೂಡಿಕೆಯ ವ್ಯವಹಾರವಾಗಿ ಬದಲಾಗಿದೆ. ಸಿರಿವಂತರಿಲ್ಲಿ ಸೂತ್ರಧಾರಿಗಳು, ಅಭ್ಯರ್ಥಿಗಳು ಕೇವಲ ಪಾತ್ರಧಾರಿಗಳು ಎನ್ನುವಂತಾಗಿದೆ.

ಪ್ರತಿಕ್ರಿಯಿಸಿ (+)