ಶನಿವಾರ, ಡಿಸೆಂಬರ್ 7, 2019
25 °C
17

ಚುನಾವಣೆಯಲ್ಲಿ ಅನಾವರಣಗೊಳ್ಳುವ ಮಾಧ್ಯಮ ಪಕ್ಷಪಾತ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಚುನಾವಣೆಯಲ್ಲಿ ಅನಾವರಣಗೊಳ್ಳುವ ಮಾಧ್ಯಮ ಪಕ್ಷಪಾತ

ಪತ್ರಕರ್ತನ ವೈಯಕ್ತಿಕ ಅಭಿಪ್ರಾಯ, ನಿಲುವುಗಳು, ಪತ್ರಿಕಾ ವರದಿಯ ಮೇಲೆ ಪ್ರಭಾವ ಬೀರಬಾರದು ಎಂಬುದು ಪತ್ರಿಕೋದ್ಯಮದ ಪಾಠ. ಆದರೆ ಬಹುತೇಕ ಸಂದರ್ಭದಲ್ಲಿ ಇದರ ಅನುಷ್ಠಾನ ಕಷ್ಟ ಎಂಬುದನ್ನು ಬಹುತೇಕ ಪತ್ರಕರ್ತರು ಒಪ್ಪಿಕೊಳ್ಳುತ್ತಾರೆ. ವೈಯಕ್ತಿಕ ಅಭಿಪ್ರಾಯಗಳ ಪಸೆ ಕೊಂಚವೂ ತಾಗದಂತೆ, ವರದಿ ಮಾಡಬಹುದೇ?ಹೌದಾದರೆ, ಎಷ್ಟು ದಿನ ಆ ವ್ರತಕ್ಕೆ ಅಂಟಿಕೊಂಡಿರಲು ಸಾಧ್ಯ ಎಂಬ ಬಗ್ಗೆ ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಅಧ್ಯಯನ ನಡೆದಿದೆ. ಪತ್ರಿಕೋದ್ಯಮವಿಭಾಗ ಆ ಬಗ್ಗೆ ಮೌಲಿಕವಾದ ಪ್ರಬಂಧಗಳನ್ನೂ ಮಂಡಿಸಿದೆ. ವಿಷಯ ಅದಲ್ಲ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿದರೂ, ಅವು ಪಕ್ಷಪಾತದ ಧೋರಣೆ ತಳೆಯುತ್ತವೆಯೇ ಎಂಬುದು ಇಲ್ಲಿರುವ ವಿಷಯ.ಚುನಾವಣಾ ಸಮಯದಲ್ಲಿ ಅಮೆರಿಕದ ಬಹುತೇಕ ಮಾಧ್ಯಮಗಳು ಎಡಕ್ಕೂ, ಬಲಕ್ಕೂ ವಾಲಿ­ಕೊಂಡಿರು­ವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪತ್ರಿಕೆಗಳ ಮೇಲೆ ಕಣ್ಣಾಡಿಸಿದರೆ, ಯಾವ ಪತ್ರಿಕೆ ಯಾವ ಪಕ್ಷದ ಪರವಾಗಿದೆ ಎಂಬುದನ್ನು ಮೊದಲ ನೋಟದಲ್ಲೇ ಹೇಳಿ­ಬಿಡಬಹುದು. ಈ ಬಗ್ಗೆ ವರ್ಜೀನಿಯಾ­ದಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೀಡಿಯಾ ರಿಸರ್ಚ್ ಸೆಂಟರ್, ಪತ್ರಕರ್ತರ 101 ಒಲವುಗಳು ಎಂಬ ಸಂಶೋಧನಾ ಪ್ರಬಂಧ ಪ್ರಕಟಿಸಿತ್ತು. ಅದರಲ್ಲಿ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ, ರಾಬರ್ಟ್ ಲಿಚರ್, ಪ್ರಮುಖ ಮಾಧ್ಯಮ ಸಂಸ್ಥೆಗಳ 240 ಪತ್ರಕರ್ತರನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಿದ್ದರು. ಆ ಪೈಕಿ ಶೇಕಡ 60ರಷ್ಟು ಮಂದಿ ಎಡ ಚಿಂತನೆಯ ಪರ ಗುರುತಿಸಿಕೊಂಡರೆ, ಶೇಕಡ 19ರಷ್ಟು ಜನ ಬಲಪಂಥ ತಮ್ಮ ಆಯ್ಕೆ ಎಂದಿದ್ದರು. ಉಳಿದವರು ನಾವು ಮಧ್ಯಮ ಮಾರ್ಗ ಅನುಸರಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದರು.ಹೀಗೆ ಸೈದ್ಧಾಂತಿಕವಾಗಿ ಗುರುತಿಸಿ­ಕೊಳ್ಳುವುದು ಅಪರಾಧವೇನಲ್ಲ. ಆದರೆ ಇದು ಪತ್ರಕರ್ತರು ಬರೆಯುವ ವರದಿಗಳ ಮೇಲೆ, ಅಂಕಣಕಾರರು ಆಯ್ದುಕೊಳ್ಳುವ ವಿಷಯಗಳ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಂತೂ ನಿಜ. ಇಂಡಿಯಾನ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡೇವಿಡ್ ವೀವರ್ ತಮ್ಮ ‘ದಿ ಅಮೆರಿಕನ್ ಜರ್ನಲಿಸ್ಟ್’ ಕೃತಿಯಲ್ಲಿ, ‘ಬಹುತೇಕ ಪತ್ರಕರ್ತರು, ಪ್ರಗತಿಪರ ಎಂದು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರು ಎಡ ಚಿಂತನೆಯನ್ನು, ಪ್ರಗತಿಪರ ನಿಲುವುಗಳನ್ನು ಹೊಂದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ಸೈದ್ಧಾಂತಿಕ ನಿಲುವುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯ ಪರ ಇವರೆಲ್ಲರ ಸಹಾನುಭೂತಿ ಇರುತ್ತದೆ’ ಎಂಬುದನ್ನು ಉಲ್ಲೇಖಿಸಿದ್ದಾರೆ.ಈ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಪೇಪರ್ಸ್ ಎಡಿಟರ್ಸ್, 1998ರಲ್ಲಿ ಸುಮಾರು 3000 ಓದುಗ

ರನ್ನು ಅಮೆರಿಕದ ವಿವಿಧ ರಾಜ್ಯಗಳಿಂದ ಆಯ್ದು ಅಭಿಪ್ರಾಯ ಸಂಗ್ರಹಿಸಿತ್ತು. ಆ ಪೈಕಿ ಶೇಕಡ 78ರಷ್ಟು ನಾಗರಿಕರು, ‘ಚುನಾವಣಾ ವರದಿಗಾರಿಕೆಯಲ್ಲಿ ಮಾಧ್ಯಮಗಳು ಪಕ್ಷಪಾತ ಮಾಡುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದರು. PEW Research ಸಂಸ್ಥೆ 2000ನೇ ಇಸವಿಯಲ್ಲಿ ಕಂಡುಕೊಂಡದ್ದೇನೆಂದರೆ, ಶೇಕಡ 57ರಷ್ಟು ಮಂದಿ, ‘ಮಾಧ್ಯಮಗಳು ಡೆಮಾಕ್ರಟಿಕ್ ಪಕ್ಷದ ಅಲ್ ಗೋರ್ ಅವರ ಪರ ಇವೆ. ಬುಷ್ ಅವರಿಗೆ ನ್ಯಾಯ ಒದಗಿಸುತ್ತಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದರು. ಇದೇ ಸಂಸ್ಥೆ 2008ರಲ್ಲಿ ಸಮೀಕ್ಷೆ ನಡೆಸಿದಾಗ, ಮಾಧ್ಯಮಗಳು ಒಬಾಮ ಪರ ಹೆಚ್ಚು ಸುದ್ದಿ, ಲೇಖನ ಪ್ರಕಟಿಸುತ್ತವೆ ಎಂಬ ಅಭಿಪ್ರಾಯ ಬಂದಿತ್ತು.ಕೆಲವೊಮ್ಮೆ ಪತ್ರಕರ್ತ ಮತ್ತು ಓದುಗನ ಅಭಿಪ್ರಾಯ ಒಂದೇ ಆಗಿರುವು­ದಿಲ್ಲ ಎಂಬುದೂ ಸಾಬೀತಾಗಿದೆ. 1984ರ ಚುನಾವಣೆಗೆ ಪೂರ್ವಭಾವಿ

ಯಾಗಿ ‘ಲಾಸ್ ಏಂಜಲಿಸ್ ಟೈಮ್ಸ್’ ಈ ಬಗ್ಗೆ ಸಮೀಕ್ಷೆ ನಡೆಸಿತ್ತು. ‘ಅಧ್ಯಕ್ಷ ರೇಗನ್ ಅವರ ಕಾರ್ಯವೈಖರಿ ಬಗ್ಗೆ ನಿಮಗೆ ಮೆಚ್ಚುಗೆ ಇದೆಯೇ’ ಎಂಬ ಪ್ರಶ್ನೆಯನ್ನು ಹಲವು ಓದುಗರು ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರ ಮುಂದೆ ಇಟ್ಟಿತ್ತು. ಆ ಪ್ರಶ್ನೆಗೆ ಬಹುತೇಕ ಪತ್ರಕರ್ತರು ‘ಇಲ್ಲ’ ಎಂದು ಉತ್ತರಿಸಿದ್ದರು. ಆದರೆ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ‘ಹೌದು’ ಎಂದಿದ್ದರು.2007ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯ ಪ್ರಕಟಿಸಿದ ಮಾಹಿತಿ ಪ್ರಕಾರ, ಶೇಕಡ 64ರಷ್ಟು ಅಮೆರಿಕದ ಯುವಕರು, ಮಾಧ್ಯಮಗಳಲ್ಲಿ ಪ್ರಕಟವಾಗುವ ಚುನಾವಣಾ ವರದಿಗಳನ್ನು ತಾವು ನಂಬುವುದಿಲ್ಲ ಎಂದಿದ್ದರು. ಈ ಸಮೀಕ್ಷೆಗಳು, ಚುನಾವಣಾ ವರದಿಗಾರಿಕೆಯಲ್ಲಿ ಮಾಧ್ಯಮಗಳು ಎಡವುತ್ತಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು.ಪ್ರಸಕ್ತ ಚುನಾವಣೆಯಲ್ಲಿ ಮಾಧ್ಯಮ ಪಕ್ಷಪಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿದೆ. ವರ್ಜಿನಿಯಾದ ಮಾಧ್ಯಮ ಸಂಸ್ಥೆ ‘ಪೊಲಿಟಿಕೊ’ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ಪ್ರಕಟಿಸಿತು. ಸಮೀಕ್ಷೆಗಾಗಿ ಸಂದರ್ಶಿಸಿದವರ ಪೈಕಿ ಶೇಕಡ 55 ರಷ್ಟು ಮತದಾರರು, ಮಾಧ್ಯಮಗಳು ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ಅವರ ಬಗ್ಗೆ ಪೂರ್ವಗ್ರಹದಿಂದ ವರ್ತಿಸುತ್ತಿವೆ ಎಂದಿದ್ದಾರೆ. ಟ್ರಂಪ್ ಮಗಳು ಇವಾಂಕಾ ಟ್ರಂಪ್, CNN ವಾಹಿನಿಯೊಂದಿಗೆ ಇತ್ತೀಚೆಗೆ ಮಾತನಾಡುತ್ತಾ ‘ನನ್ನ ತಂದೆಗೆ ಮಾಧ್ಯಮಗಳು ನ್ಯಾಯ ಒದಗಿಸಿಲ್ಲ’ ಎಂಬ ಮಾತನ್ನು ಆಡಿದ್ದಾರೆ.ಇದೇ ಮಾತನ್ನು ಸ್ವತಃ ಟ್ರಂಪ್ ತಮ್ಮ ಪ್ರಚಾರ ಭಾಷಣಗಳಲ್ಲಿ, ಹಲವು ಬಾರಿ ಪ್ರಸ್ತಾಪಿಸಿದ್ದರು. ಎರಡನೆಯ ಚರ್ಚೆಯ ನಿರ್ವಾಹಕರಾಗಿದ್ದ, ಸಿಎನ್ಎನ್ ಸುದ್ದಿ ಸಂಸ್ಥೆಯ ಆ್ಯಂಡರ್ಸನ್ ಕೂಪರ್ ಬಗ್ಗೆ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಕೂಪರ್ ಚರ್ಚೆಯ ನಿರ್ವಾಹಕರಾಗ

ಬಾರದು. ಕೂಪರ್ ಕೆಲಸ ಮಾಡುವುದು ಸಿಎನ್ಎನ್ ಸಂಸ್ಥೆಯಲ್ಲಿ. ಸಿಎನ್ಎನ್ ಎಂದರೆ ಕ್ಲಿಂಟನ್ ನ್ಯೂಸ್ ನೆಟ್‍‍ವರ್ಕ್, ಹಾಗಾಗಿ ಕೂಪರ್ ನ್ಯಾಯಯುತವಾಗಿ ಚರ್ಚೆಯನ್ನು ನಿರ್ವಹಿಸುವುದಿಲ್ಲ’ ಎಂಬ ಅಭಿಪ್ರಾಯಪಟ್ಟಿದ್ದರು.ಜೊತೆಗೆ, ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ, ಪತ್ರಿಕೆಗಳು ಬಹಿರಂಗವಾಗಿ ಅಭ್ಯರ್ಥಿಗಳನ್ನು ಬೆಂಬಲಿಸುವ ಪರಿಪಾಠ ಅಮೆರಿಕದಲ್ಲಿದೆ. ಬಹುತೇಕ ಮಾಧ್ಯಮಗಳು ತಮ್ಮ ಸಂಪಾದಕೀಯದ ಮೂಲಕ, ಡೆಮಾಕ್ರಟಿಕ್ ಇಲ್ಲವೇ ರಿಪಬ್ಲಿಕನ್ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತವೆ. ಪ್ರಮುಖ ಪತ್ರಿಕೆಗಳಾದ ‘ವಾಷಿಂಗ್ಟನ್ ಪೋಸ್ಟ್’, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗಳ ಇತಿಹಾಸ ತೆರೆದರೆ, ಅವು ಈ ಹಿಂದಿನ ಎಲ್ಲ ಚುನಾವಣೆಗಳಲ್ಲೂ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯನ್ನೇ ಬೆಂಬಲಿಸಿವೆ. ಈ ಬಾರಿಯೂ ಹಿಲರಿ ಅವರನ್ನು ಅನುಮೋದಿಸಿವೆ. ಆದರೆ ಈ ಹಿಂದಿನ ಚುನಾವಣೆಯಲ್ಲಿ ಯಾರ ಪರವೂ ನಿಲ್ಲದ ಕೆಲವು ಮಾಧ್ಯಮ ಸಂಸ್ಥೆಗಳು ಈ ಬಾರಿ ಟ್ರಂಪ್ ವಿರುದ್ಧ ಧ್ವನಿ ಎತ್ತಿವೆ ಎನ್ನುವುದು ವಿಶೇಷ.ಹಾಗೆ ನೋಡಿದರೆ, ತನ್ನ 160 ವರ್ಷಗಳ ಇತಿಹಾಸದಲ್ಲಿ, ‘ದಿ ಅಟ್ಲಾಂಟಿಕ್’ ಪತ್ರಿಕೆ ಕೇವಲ ಎರಡು ಬಾರಿ, ಲಿಂಕನ್ ಮತ್ತು ಲಿಂಡನ್ ಜಾನ್ಸನ್ ಅವರನ್ನು ಬಹಿರಂಗವಾಗಿ ಬೆಂಬಲಿಸಿತ್ತು. ಈ ಬಾರಿ, ‘ಇದು ಬಹುಮುಖ್ಯ ಚುನಾವಣೆ, ಹಾಗಾಗಿ ಹಿಲರಿ ಅವರನ್ನು ಬೆಂಬಲಿಸುತ್ತೇವೆ’ ಎಂದು ಪ್ರಕಟಿಸಿತು. ‘ಡಲಸ್ ಮಾರ್ನಿಂಗ್ ನ್ಯೂಸ್’, ಎರಡನೆಯ ವಿಶ್ವಸಮರದ ಬಳಿಕ, ಫ್ರಾಂಕ್ಲಿನ್ ರೂಸ್ವೆಲ್ಟ್ ಅವರನ್ನು ಬೆಂಬಲಿಸಿದ್ದು ಬಿಟ್ಟರೆ, ಕಳೆದ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯನ್ನೇ ಅನುಮೋದಿಸುತ್ತಿತ್ತು. ಈ ಬಾರಿ ಅದು ಹಿಲರಿ ಅವರನ್ನು ಬೆಂಬಲಿಸಿ ಸಂಪಾದಕೀಯ ಬರೆಯಿತು. ‘ಸಿನ್ಸಿನಾಟಿ ಎನ್ಕ್ವೈರರ್’, ‘ಸ್ಯಾನ್ ಡಿಯೇಗೊ ಯೂನಿಯನ್ ಟ್ರಿಬ್ಯೂನ್’ ಪತ್ರಿಕೆಗಳು ರಿಪಬ್ಲಿಕನ್ ಪಕ್ಷದ ಪರವಾಗಿ ನಿಲ್ಲುತ್ತಿದ್ದವು, ಈ ಬಾರಿ ಹಿಲರಿ ಅವರನ್ನು ಬೆಂಬಲಿಸಿವೆ.ಯುಎಸ್ಎ ಟುಡೇ, ‘ಇದುವರೆಗೂ ಚುನಾವಣೆಯ ಸಂದರ್ಭದಲ್ಲಿ ನಾವು ಯಾವುದೇ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿದ ಉದಾಹರಣೆ ಇಲ್ಲ. ಈ ಬಾರಿಯೂ ಯಾರನ್ನೂ ಅನುಮೋದಿಸುವುದಿಲ್ಲ. ಆದರೆ ಟ್ರಂಪ್ ಅವರನ್ನು ಪತ್ರಿಕೆ ಬೆಂಬಲಿಸುವುದಿಲ್ಲ ಎಂದಷ್ಟೇ ಹೇಳುತ್ತಿದ್ದೇವೆ’ ಎಂದು ಬರೆಯಿತು. ‘ಪತ್ರಿಕೆಗಳು ಯಾವುದೇ ಕಾರಣ­ಕೊಟ್ಟು ಅಭ್ಯರ್ಥಿಯನ್ನು ಬೆಂಬಲಿಸಲಿ, ಬಿಡಲಿ. ಆದರೆ ಸುದ್ದಿಯನ್ನು ಬಿತ್ತರಿಸು­ವಾಗ ಇಬ್ಬರಿಗೂ ನ್ಯಾಯವನ್ನು ಒದಗಿಸ­ಬೇಕು. ಹಿಲರಿ ಅವರನ್ನು ಹಾಡಿ ಹೊಗಳಲು ಪುಟಗಳನ್ನು ಮೀಸಲಿಡುವ ಪತ್ರಿಕೆಗಳು, ಟ್ರಂಪ್ ಕುರಿತು ಕೆಟ್ಟ ಸಂಗತಿಗಳನ್ನಷ್ಟೇ ಬರೆಯುತ್ತಿವೆ.ರಿಪ­ಬ್ಲಿಕನ್ ಪಕ್ಷವನ್ನು ಬೆಂಬಲಿಸುವುದು ಎಂದರೆ, ಆಫ್ರಿಕನ್ ಅಮೆರಿಕನ್ ಸಮು­ದಾಯವನ್ನು, ಹಿಸ್ಪಾನಿಕ ಸಮು­ದಾಯವನ್ನು ವಿರೋಧಿಸುವುದು ಎಂಬಂತೆ ಬಿಂಬಿಸಲಾಗುತ್ತದೆ. ಟ್ರಂಪ್ ಮಾನಸಿಕ ಧೃಡತೆ ಇಲ್ಲದವರು ಎಂದು ಹೊರ ಜಗತ್ತಿಗೆ ತೋರಿಸುವ ವರದಿಗಳನ್ನಷ್ಟೇ ಆಯ್ದು ಪ್ರಕಟಿಸಲಾಗು­ತ್ತಿದೆ’ ಎಂಬ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಇಂಗ್ಲೆಂಡ್ ಮೂಲದ ‘ಇಂಡಿಪೆಂಡೆಂಟ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ TheStreet.com ವೆಬ್ ಪತ್ರಿಕೆಯ ಸಂಪಾದಕಿ ಜಾನೆಟ್ ಗ್ಯಾನ್, ಮುಖ್ಯವಾದ ಸಂಗತಿಯೊಂದನ್ನು ವಿವರಿಸಿದ್ದಾರೆ.ವೆಬ್ ಪತ್ರಿಕೆಗಳ ಆದಾಯ, ಎಷ್ಟು ಜನ ವೆಬ್ ಪುಟವನ್ನು ತೆರೆದು ನೋಡುತ್ತಾರೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. 1,000 ಜನ ವೆಬ್ ಪುಟಕ್ಕೆ ಭೇಟಿಕೊಟ್ಟರೆ, 20 ಡಾಲರ್ ಬೇಬು ತುಂಬಿಕೊಳ್ಳಬಹುದು. ಟ್ರಂಪ್ ಅವರ ಪರ ಹೊಸ ಸುದ್ದಿಯಿರಲಿ, ಹಳೆಯ ಸಂಗತಿಗಳ ಮೆಲುಕೇ ಇರಲಿ, ಅದನ್ನು ಪ್ರಕಟಿಸಿದರೆ 20 ಸಾವಿರ ಡಾಲರ್ ಗಳಿಕೆಗೆ ಮೋಸವಿಲ್ಲ. ಆದರೆ ಅದೇ ತರಹದ ಸುದ್ದಿಯನ್ನು ಇತರ ಅಭ್ಯರ್ಥಿಗಳ ಕುರಿತು ಪ್ರಕಟಿಸಿದರೆ, 2 ಸಾವಿರ ಡಾಲರ್ ಗಳಿಕೆಯೂ ಅನುಮಾನ ಎಂದಿದ್ದಾರೆ. ಬಹುಶಃ ಇದು ಮಾಧ್ಯಮಗಳ ಧೋರಣೆಗೆ ಹಿಡಿದಿರುವ ಕನ್ನಡಿ ಎನಿಸುತ್ತದೆ.ಅದಿರಲಿ, ಮೊನ್ನೆ, ನ್ಯೂಯಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಭೋಜನಕೂಟದಲ್ಲಿ, ಹಿಲರಿ ಮತ್ತು ಟ್ರಂಪ್ ಭಾಗವಹಿಸಿದ್ದರು. ಟ್ರಂಪ್ ಮಾತ

ನಾಡುತ್ತಾ, ‘ಇದು ಅಭ್ಯರ್ಥಿಗಳ ಸಮಾಗಮವಷ್ಟೇ ಅಲ್ಲ, ನಮ್ಮ ಗೆಲುವಿಗೆ ಶ್ರಮ ಪಡುತ್ತಿರುವ ಎರಡು ತಂಡಗಳೂ ಇಲ್ಲಿವೆ. ಹಿಲರಿ ಪರ ಸಾಕಷ್ಟು ಕಷ್ಟಪಟ್ಟು ದುಡಿಯುತ್ತಿರುವ NBC, CNN, CBS, ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮುಖ್ಯಸ್ಥರೂ ಇಲ್ಲಿದ್ದಾರೆ’ ಎಂದು ಚಟಾಕಿ ಹಾರಿಸಿದ್ದರು. ಟ್ರಂಪ್ ಅವರ ಮಾತು ಕೇವಲ ವ್ಯಂಗ್ಯೋಕ್ತಿ ಆಗಿರಲಿಕ್ಕಿಲ್ಲ.

ಪ್ರತಿಕ್ರಿಯಿಸಿ (+)