ಶನಿವಾರ, ಸೆಪ್ಟೆಂಬರ್ 25, 2021
22 °C

ಹಾಕಿ: ಭಾರತಕ್ಕೆ ಏಷ್ಯಾ ಕಪ್

ಪಿಟಿಐ Updated:

ಅಕ್ಷರ ಗಾತ್ರ : | |

ಹಾಕಿ: ಭಾರತಕ್ಕೆ ಏಷ್ಯಾ ಕಪ್

ಕೌಂಟಾನ್, ಮಲೇಷ್ಯಾ : ಭಾರತ ಹಾಕಿ ತಂಡವು ಭಾನುವಾರ ತನ್ನ ಅಭಿಮಾನಿಗಳಿಗೆ ದೀಪಾವಳಿಯ ಕೊಡುಗೆಯಾಗಿ ಏಷ್ಯಾ ಕಪ್ ನೀಡಿತು. ಇಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ 3–2 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆದ್ದಿತು.

ರೂಪಿಂದರ್ ಪಾಲ್ ಸಿಂಗ್ (18ನೇ ನಿಮಿಷ), ಯೂಸುಫ್ ಅಫ್ಫಾನ್ (23ನಿ) ಮತ್ತು ನಿಕಿನ್ ತಿಮ್ಮಯ್ಯ (51ನೇ ನಿ) ಗೋಲು ಗಳಿಸಿದರು. ಪಾಕ್ ತಂಡದ ಮಹಮ್ಮದ್ ಅಲಿ ಬಿಲಾಲ್ (26ನೇ ನಿ) ಮತ್ತು ಅಲಿ ಶಾನ್ (38ನೇ ನಿ) ಗೋಲು ಹೊಡೆದರು.

2014ರಲ್ಲಿ ಇಂಚನ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು. 2011ರಲ್ಲಿ ಮೊದಲ ಬಾರಿಗೆ ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ಫೈನಲ್‌ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು.

2013ರ ಟೂರ್ನಿಯ ಫೈನಲ್‌ನಲ್ಲಿ ಜಪಾನ್ ವಿರುದ್ಧ ಗೆದ್ದಿದ್ದ ಪಾಕಿಸ್ತಾನವೂ ಪ್ರಶಸ್ತಿ ಪಡೆದಿತ್ತು. ಆದರೆ ಈ ಬಾರಿ ವಿಶ್ವ ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿರುವ  ಭಾರತ ತಂಡವು  ಫೈನಲ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಪಿ.ಆರ್. ಶ್ರೀಜೇಶ್ ನೇತೃತ್ವದ ಬಳಗವು ಆರಂಭದಿಂದಲೂ ಪಾಕ್ ತಂಡದ ಮೇಲೆ ಒತ್ತ ಡ ಹೇರಿತ್ತು.

ಏಳನೇ ನಿಮಿಷದಲ್ಲಿ  ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಭಾರತ ತಂಡವು ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. 

12ನೇ ನಿಮಿಷದಲ್ಲಿ ಪಾಕ್ ತಂಡಕ್ಕೂ ಪೆನಾಲ್ಟಿ ಅವಕಾಶ ಸಿಕ್ಕಿತ್ತು. ಆದರೆ, ಆ ತಂಡವು ಅದನ್ನು ಗೋಲಿನಲ್ಲಿ ಪರಿವರ್ತಿಸಲು ಭಾರತದ ಗೋಲ್‌ಕೀಪರ್ ಚಿಕ್ಟೆ ಅವಕಾಶ ನೀಡಲಿಲ್ಲ.

18ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಅವಕಾಶವನ್ನು ಭಾರತ ಹಾಳು ಮಾಡಿಕೊಳ್ಳಲಿಲ್ಲ. ಡ್ರ್ಯಾಗ್ ಫ್ಲಿಕರ್ ರೂಪಿಂದರ್ ಪಾಲ್ ಸಿಂಗ್ ಅವರು ಗೋಲು ಖಾತೆ ತೆರೆಯುವಲ್ಲಿ ಯಶಸ್ವಿಯಾದರು.

ಬರೋಬ್ಬರಿ ಐದು ನಿಮಿಷಗಳ ನಂತರ ರಮಣದೀಪ್ ಸಿಂಗ್ ಅವರು ಡಿಫ್ಲೆಕ್ಟ್ ಮಾಡಿದ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಯೂಸುಫ್ ಅಫ್ಪಾನ್ ಸಂಭ್ರಮಿಸಿದರು. ಇದರಿಂದ ಭಾರತವು 2–0 ಮುನ್ನಡೆ ಗಳಿಸಿತು.

ಆದರೆ, ಪಾಕ್ ತಂಡದ ಮಹಮ್ಮದ್ ಬಿಲಾಲ್ ತಿರುಗೇಟು ನೀಡಿದರು. 26ನೇ ನಿಮಿಷದಲ್ಲಿ ಭಾರತದ ರಕ್ಷಣಾ ಪಡೆಯ ಕಣ್ಣು ತಪ್ಪಿಸಿ ಗೋಲು ಹೊಡೆದರು. 38ನೇ ನಿಮಿಷದಲ್ಲಿ ಅಲಿ ಶಾನ್  ಮತ್ತೊಂದು ಗೋಲು ಗಳಿಸಿ     ಗೋಲು ಸಂಖ್ಯೆಯನ್ನು ಸಮಗೊಳಿಸಿದರು.

ನಂತರ ಎರಡೂ ತಂಡಗಳ ಆಟಗಾರರ ನಡುವಣ ತೀವ್ರ ಹಣಾಹಣಿ ನಡೆಯಿತು. ಆದರೆ, ಕೊನೆಗೂ  ನಿಕ್ಕಿನ್ ತಿಮ್ಮಯ್ಯ ಅವರ ಛಲ ಗೆದ್ದಿತು. 51ನೇ ನಿಮಿಷದಲ್ಲಿ ಅವರು  ಪಾಕ್ ಗೋಲ್‌ಕೀಪರ್ ಫರೀದ್ ಅಹಮದ್  ಕಣ್ತಪ್ಪಿಸಿದರು. ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.