ಕನ್ನಡದ ಕೆಲಸ: ಅನುಷ್ಠಾನ ಮುಖ್ಯ

7

ಕನ್ನಡದ ಕೆಲಸ: ಅನುಷ್ಠಾನ ಮುಖ್ಯ

Published:
Updated:
ಕನ್ನಡದ ಕೆಲಸ: ಅನುಷ್ಠಾನ ಮುಖ್ಯಸಿದ್ಧತೆಯ ವಿಷಯದಲ್ಲಿ ವಿಫಲರಾಗುವುದೆಂದರೆ ಸೋಲಿಗೆ ಸಿದ್ಧವಾಗುವುದು ಎಂದರ್ಥ. ಏಕೀಕರಣದ ಅರವತ್ತು ವರ್ಷಗಳ ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿದರೆ ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ. ನಮ್ಮ ವೈಫಲ್ಯಗಳೆಲ್ಲದರ ಹಿಂದಿನ ಕಾರಣವೂ ದೂರಗಾಮಿ ಆಲೋಚನೆಗಳ ಕೊರತೆ. ಸದ್ಯಕ್ಕಷ್ಟೇ ಸ್ಪಂದಿಸುತ್ತಾ ಶಾಶ್ವತವನ್ನು ಮರೆತರೆ ಭಾವಿ ತಲೆಮಾರು ನಮ್ಮನ್ನು ಕ್ಷಮಿಸುವುದಿಲ್ಲ. ಇದು ನೀತಿ ನಿರೂಪಣೆಯ ವಿಚಾರಕ್ಕೆ ಹೆಚ್ಚು ಅನ್ವಯಿಸುವ ಮಾತು. ಇದನ್ನು ಗಮನ ದಲ್ಲಿಟ್ಟುಕೊಂಡು ‘ಕರ್ನಾಟಕದ ನಾಳೆಗಳು ಹೇಗಿರಬೇಕು’ ಎಂಬುದನ್ನು ವರ್ತಮಾನದಲ್ಲಿ ಆಲೋಚಿಸುವ ಪ್ರಕ್ರಿಯೆಯೊಂದಕ್ಕೆ ‘ಪ್ರಜಾವಾಣಿ’ ಚಾಲನೆ ನೀಡುತ್ತಿದೆ. ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಓದುಗರು ಕರ್ನಾಟಕದ ನಾಳೆಗಳನ್ನು ಕಲ್ಪಿಸಿಕೊಳ್ಳುವ ಲೇಖನ ಮಾಲೆ ಇಂದಿನಿಂದ ಆರಂಭವಾಗುತ್ತಿದೆ.

ಭವಿಷ್ಯವೆಂಬುದು ವರ್ತಮಾನದ ಕೂಸು.  ಇಂದು ನಾವು ಹೇಗೆ ನಮ್ಮ ವರ್ತಮಾನವನ್ನು ಗ್ರಹಿಸುತ್ತೇವೆಯೋ, ರೂಪಿಸಿಕೊಳ್ಳುತ್ತೇವೆಯೋ ಹಾಗೆಯೇ ಮುಂದಿನ ಭವಿಷ್ಯವು ಇರುತ್ತದೆಂದು ನಾವು ನಂಬಬೇಕು.  ಎಂದರೆ,  ಇಂದು ನಾವು ಸಮಸ್ಯೆಗಳೆಂದು ಏನನ್ನು ಗ್ರಹಿಸುತ್ತೇವೆಯೋ ಮತ್ತು ಅವುಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತೇವೆಯೋ ಹಾಗೆಯೇ, ಆ ಪ್ರಕ್ರಿಯೆಯೇ ನಾಳೆಗಳನ್ನು ರೂಪಿಸುತ್ತಾ ಹೋಗುತ್ತದೆ ಎಂಬ ನಂಬಿಕೆಯಲ್ಲಿ ನಾವು ಇಂದು ಕ್ರಿಯಾಶೀಲರಾಗಬೇಕು. (ಆದರೆ ಕಾಲಚಕ್ರದ ಉರುಳುವಿಕೆಯಲ್ಲಿ ಅದು ಇನ್ನೇನೋ ಆಗಬಹುದು.

ಹದಿನಾರನೆಯ ಶತಮಾನದ ಬ್ರಿಟಿಷ್ ವಿದ್ವಾಂಸ ಫ್ರಾನ್ಸಿಸ್ ಬೇಕನ್  ತಾನು ತುಂಬಾ ಮಹತ್ವದ್ದೆಂದು ಭಾವಿಸಿದ ತನ್ನ ಕೃತಿಗಳನ್ನು ಲ್ಯಾಟಿನ್ ಭಾಷೆಯಲ್ಲಿ ರಚಿಸಿದ; ಆಗಾಗ್ಗೆ ತನಗೆ ತೋಚಿದ ವಿಷಯಗಳ ಬಗ್ಗೆ ತಾನು ಮಾಡಿಕೊಂಡಿದ್ದ ಲಘು ಟಿಪ್ಪಣಿಗಳನ್ನು ಇಂಗ್ಲಿಷ್‌ನಲ್ಲಿ ಬರೆದ.  Essays ಎಂಬ ಹೆಸರಿನಲ್ಲಿ ಪ್ರಕಟಗೊಂಡ ಅವನ ಟಿಪ್ಪಣಿಗಳು ಇಂದು ಇಂಗ್ಲಿಷ್ ಬಲ್ಲ ಎಲ್ಲರಿಗೂ ಗೊತ್ತು; ಆದರೆ ಅವನ ಲ್ಯಾಟಿನ್ ಉದ್ಗ್ರಂಥಗಳು ಗ್ರಂಥಾಲಯಗಳಲ್ಲಿ ಅಜ್ಞಾತವಾಗಿಯೇ ಉಳಿದಿವೆ.)  ಈ ವಿಚಾರಗಳ ಹಿನ್ನೆಲೆಯಲ್ಲಿ ಈ ಲೇಖನದಲ್ಲಿ ಕನ್ನಡ ಭಾಷೆ-ಸಾಹಿತ್ಯಗಳನ್ನು ಕುರಿತ ಚರ್ಚೆಯಿದೆ. ಚರ್ಚಿಸುವ ವಿಷಯಗಳು ಹಾಗೂ ಸೂಚಿಸುವ ಪರಿಹಾರಗಳು  ಹೊಸತೇನೂ ಅಲ್ಲದಿದ್ದರೂ ಮತ್ತೆ ಮತ್ತೆ ಅದೇ ವಿಚಾರಗಳನ್ನು ಹೇಳುವುದರಿಂದಲಾದರೂ ಕೆಲವು ಸಮಸ್ಯೆಗಳು ಪರಿಹಾರವಾಗಬಹುದು.  ಸ್ಥೂಲವಾಗಿ, ಈ ಲೇಖನದ ಮೊದಲ ಭಾಗದಲ್ಲಿ ಪ್ರಥಮ ಆದ್ಯತೆಯ ಮೇರೆಗೆ ಕೈಗೊಳ್ಳಬೇಕಾದ ಕಾರ್ಯಸೂಚಿಯ ವಿವರಗಳಿದ್ದರೆ ಎರಡನೆಯ ಭಾಗದಲ್ಲಿ ದೀರ್ಘಾವಧಿಯಲ್ಲಿ ಆಗಬೇಕಾದ ಯೋಜನೆಗಳ ಸ್ಥೂಲ ನಕಾಶೆಯಿದೆ.

ಮುಂದುವರೆಯುವ ಮೊದಲು ಮತ್ತೊಂದು ಅಂಶವನ್ನು ಪ್ರಸ್ತಾಪಿಸಬೇಕು.  ‘ಈ ವೆಬ್‌ಸೈಟ್ ಪ್ರಕಾರ ಕನ್ನಡ ಸಾಯುತ್ತಿರುವ ಭಾಷೆ; ಮುಂದಿನ ಐವತ್ತು ವರ್ಷಗಳಲ್ಲಿ ಅದು ಇಲ್ಲವಾಗುತ್ತದೆ’; ‘ಕನ್ನಡಿಗರಿಗೆ ಭಾಷಾಭಿಮಾನವಿಲ್ಲ’; ‘ಇಂದು ಕನ್ನಡ ಸಾಹಿತ್ಯವನ್ನು ಯಾರೂ ಓದುವುದಿಲ್ಲ’ – ಈ ಬಗೆಯ ಆಧಾರ ರಹಿತ ಸಾರ್ವಜನಿಕ ಹೇಳಿಕೆಗಳನ್ನು ಕೊಡುವುದನ್ನು ನಾವೆಲ್ಲರೂ ನಿಲ್ಲಿಸಬೇಕು.  ಜನಪ್ರಿಯತೆಗಾಗಿ ಹೀಗೆ ಮತ್ತೆ ಮತ್ತೆ ಹೇಳುತ್ತಾ ಹೋದರೆ ವಿದ್ಯಾರ್ಥಿಗಳೂ ಮತ್ತು ಕಿಶೋರಾವಸ್ಥೆಯ ತರುಣ-ತರುಣಿಯರು ಅದನ್ನು ನಿಜವೆಂದೇ ನಂಬಿ ಕನ್ನಡ ಭಾಷೆ-ಸಾಹಿತ್ಯಗಳನ್ನು ಕಡೆಗಾಣಿಸುವ ಸಂಭಾವ್ಯತೆಯೇ ಹೆಚ್ಚು. ಎರಡು ಸಾವಿರ ವರ್ಷಗಳ ಇತಿಹಾಸವಿರುವ, ಆರು ಕೋಟಿ ಜನರು ಮಾತನಾಡುವ ಮತ್ತು ಒಂದು ರಾಜ್ಯದ ಅಧಿಕೃತ ರಾಜ್ಯಭಾಷೆಯಾಗಿರುವ ಕನ್ನಡ ಎಂದಿಗೂ ಸಾಯುವುದಿಲ್ಲ.  ಈ ಬಗೆಯ ಭರವಸೆಯನ್ನು  ಕನ್ನಡಿಗರಲ್ಲಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

***

1) ಕನ್ನಡ ಮತ್ತು ಶಿಕ್ಷಣ:  ಸಮಗ್ರ ಶಿಕ್ಷಣ ಅಭಿಯಾನದ ಅವಶ್ಯಕತೆ:

ಅ) ಪ್ರಾಥಮಿಕ ಶಿಕ್ಷಣ:  ಭಾಷಾಕಲಿಕೆಯಲ್ಲಿ ಹಾಗೂ ಭಾಷಾಭಿಮಾನವನ್ನು ಬೆಳೆಸುವಲ್ಲಿ ಪ್ರಾಥಮಿಕ ಶಿಕ್ಷಣದ ಅವಧಿ ಬಹಳ ಮುಖ್ಯವಾದುದು.  ಇಂದು ಹೆಚ್ಚಿನ ಪೋಷಕರು ‘ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಲಿತರೆ ತಮ್ಮ ಮಕ್ಕಳಿಗೆ ಭವಿಷ್ಯವೇ ಇಲ್ಲ; ಅಲ್ಲಿ ಇಂಗ್ಲಿಷ್ ಕಲಿಸುವುದಿಲ್ಲ’ ಎಂದು ನಂಬಿ, ಅಪಾರ ಖರ್ಚುಮಾಡಿ ತಮ್ಮ ಮಕ್ಕಳನ್ನು ದೂರದ ನಗರಗಳಲ್ಲಿರುವ ಖಾಸಗಿ ಶಾಲೆಗಳಿಗೆ ಕಳಿಸುತ್ತಾರೆ. ಖಾಸಗಿ ಶಾಲೆಗಳ ಸಂಪೂರ್ಣ ಆಂಗ್ಲಮಯ ವಾತಾವರಣದಲ್ಲಿ ಕನ್ನಡ ಮಾತನಾಡಿದರೆ ಶಿಕ್ಷೆ ಎಂಬಂತಹ ಅತಿ ಶಿಸ್ತಿನಲ್ಲಿ ಮಕ್ಕಳು ಏಳು ವರ್ಷಗಳನ್ನು ಕಳೆದರೆ, ಅವರಲ್ಲಿ ಕನ್ನಡವನ್ನು ಕುರಿತ ಅಭಿಮಾನ ಹೇಗೆ ಹುಟ್ಟುತ್ತದೆ?ನಿಜ; ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು  ಸರ್ಕಾರಗಳು ಹಾಗೂ ಪೋಷಕರು ಕಡೆಗಣಿಸಿರುವುದರಿಂದ ಅವುಗಳಲ್ಲಿ ಅನೇಕ ಕುಂದುಕೊರತೆಗಳಿವೆ. ಒಂದು ವರದಿಯಂತೆ, ಕರ್ನಾಟಕದಲ್ಲಿರುವ ಒಟ್ಟು 60,913 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ಶಿಕ್ಷಕರ ಹುದ್ದೆಗಳು 2,03,658. ಇವುಗಳಲ್ಲಿ, ಕಳೆದೆರಡು ದಶಕಗಳಿಂದ ಖಾಲಿ ಉಳಿದಿರುವ ಹುದ್ದೆಗಳು 37, 575.  ಹಾಗೆಯೇ, ಸ್ವಂತ ಕಟ್ಟಡಗಳಿಲ್ಲದ ಶಾಲೆಗಳು ಸುಮಾರು 20,000 ಮತ್ತು ವ್ಯವಸ್ಥಿತ ಶೌಚಾಲಯಗಳಿಲ್ಲದ ಶಾಲೆಗಳು ಸುಮಾರು 30,000.  ಈ ಕುಂದು ಕೊರತೆಗಳನ್ನು ಸರಿಪಡಿಸಿದರೆ ಮತ್ತು ಪ್ರತಿ ಶಾಲೆಯಲ್ಲಿಯೂ ಕನ್ನಡದೊಡನೆ ಇಂಗ್ಲಿಷ್ ಭಾಷೆಯನ್ನೂ ಕಡ್ಡಾಯವಾಗಿ ಕಲಿಸಿದರೆ, ಪೋಷಕರೂ ತಮ್ಮ ಮಕ್ಕಳನ್ನು ಆ ಶಾಲೆಗಳಿಗೇ ಕಳಿಸುತ್ತಾರೆ.  ಪೋಷಕರು, ಶಾಸಕರು ಮತ್ತು ಸರ್ಕಾರ ಇವರೆಲ್ಲರೂ ಒಟ್ಟಾಗಿ, ಐದು ವರ್ಷಗಳ ‘ಸಮಗ್ರ ಶಾಲಾ ಅಭಿಯಾನ’ವನ್ನು ಯೋಜಿಸಿದರೆ, ಮಕ್ಕಳೂ ಮುಕ್ತವಾಗಿ ಕನ್ನಡದೊಡನೆ ಇಂಗ್ಲಿಷನ್ನೂ ಕಲಿಯುತ್ತಾರೆ; ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಜಗತ್ತನ್ನು ಪ್ರವೇಶಿಸುತ್ತಾರೆ.ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಸರ್ಕಾರವೇ ಮಕ್ಕಳನ್ನು ಸೇರಿಸಿ, ಅವರ ಖರ್ಚನ್ನು ತಾನೇ ಭರಿಸುವ ನೀತಿಯನ್ನು ಕೈಬಿಡುವುದು ಈ ಅಭಿಯಾನದ ಒಂದು ಮುಖ್ಯ ಕಾರ್ಯಸೂಚಿಯಾಗಬೇಕು.  ಈ ನೀತಿಯಿಂದ ಕಳೆದೆರಡು ವರ್ಷಗಳಲ್ಲಿಯೇ 412 ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು 500 ಹೊಸ ಖಾಸಗಿ ಶಾಲೆಗಳು ಪ್ರಾರಂಭವಾಗಿವೆ.  ಮೇಲೆ ಹೇಳಿದಂತೆ, ಕೇವಲ ಇಂಗ್ಲಿಷ್ ಬೋಧನೆಯನ್ನು ‘ಪ್ರತಿಷ್ಠೆ’ಯ ಅಂಶವನ್ನಾಗಿ ಕಾಣುವ ಇಂತಹ ಖಾಸಗಿ ‘ಇಂಟರ್‌ನ್ಯಾಷನಲ್’  ಶಾಲೆಗಳಲ್ಲಿ ಓದುವ ಮಕ್ಕಳು ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳುವುದು ಹೇಗೆ?  ಪ್ರತಿ ವರ್ಷವೂ ಈ ನೀತಿಗಾಗಿ ಸರ್ಕಾರವು ಆ ಖಾಸಗಿ ಶಾಲೆಗಳಿಗೆ ಕೊಡುವ ಹಣ ₹ 316.67 ಕೋಟಿ.  ಇದೇ ಹಣವನ್ನು ಆ ವಿದ್ಯಾರ್ಥಿಗಳು ಇರುವ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆಯಲು ಅಥವಾ ಇರುವ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉಪಯೋಗಿಸಬಹುದು.ಆ)  ಉಚ್ಚ ಶಿಕ್ಷಣ:  ಐಚ್ಛಿಕ ಕನ್ನಡಕ್ಕೆ ಅವಕಾಶ:

ಸಾಮಾನ್ಯವಾಗಿ, ಹೆಚ್ಚಿನ ಕನ್ನಡ ಶಿಕ್ಷಕರು ಹಾಗೂ ಅಧ್ಯಾಪಕರು ಬಿ. ಎ. ಪದವಿಯ ಕಾಲದಲ್ಲಿ ಐಚ್ಛಿಕ ಕನ್ನಡವನ್ನು ಆರಿಸಿಕೊಂಡವರೇ ಆಗಿರುತ್ತಾರೆ; ಮುಂದೆ ಅವರೇ ಎಂ.ಎ. ಮಾಡಿ, ಅಧ್ಯಾಪನ ಅಥವಾ ಸಂಶೋಧನೆಯನ್ನು ಕೈಗೊಳ್ಳುತ್ತಾರೆ. ಕಳೆದ ಶತಮಾನದ 90ರ ದಶಕದಿಂದ ಖಾಸಗಿ ಕಾಲೇಜುಗಳಿಗೆ ಸ್ವಾಯತ್ತತೆಯನ್ನು ತುಂಬಾ ಉದಾರವಾಗಿ ಯು.ಜಿ.ಸಿ. ನೀಡುತ್ತಿದೆ; ಇದರ ಪರಿಣಾಮವಾಗಿ, ತನ್ನದೇ ಆದ ಪಠ್ಯಕ್ರಮ ರಚಿಸಿಕೊಳ್ಳುವ ಅಧಿಕಾರ ಆ ಕಾಲೇಜುಗಳಿಗೆ ದೊರಕಿ, ಅವು ಐಚ್ಛಿಕ ವಿಷಯಗಳಲ್ಲಿ ಕನ್ನಡವನ್ನು ನಿರಾಳವಾಗಿ ಕೈಬಿಡುತ್ತಿವೆ.  ಕಾರಣ, ಡೊನೇಶನ್ ಕೊಟ್ಟು ಕನ್ನಡ ಕಲಿಯುವವರು ಇಲ್ಲ.  ಪರಿಣಾಮತಃ, ವರ್ಷೇ ವರ್ಷೇ ಐಚ್ಛಿಕ ಕನ್ನಡವನ್ನು ಬೋಧಿಸುವ ಕಾಲೇಜುಗಳು ಅಪರೂಪವಾಗುತ್ತಿವೆ.  ಭಾಷಾವಾರು ಪ್ರಾಂತ್ಯ ರಚನೆಯ ‘To encourage and promote state language and literature’ ಎಂಬ ನೀತಿಯ ಆಧಾರದಲ್ಲಿ, ರಾಜ್ಯ ಸರ್ಕಾರವು ಪ್ರತಿಯೊಂದು ಸ್ವಾಯತ್ತ ಕಾಲೇಜೂ ಕಡ್ಡಾಯವಾಗಿ ಮೂರು ಐಚ್ಛಿಕ ವಿಷಯಗಳ ಗುಂಪುಗಳಲ್ಲಿ ಒಂದು ಗುಂಪಿನಲ್ಲಾದರೂ ಕನ್ನಡವಿರುವಂತೆ ಆಯಾಯಾ ಕಾಲೇಜುಗಳನ್ನು ಆಗ್ರಹಿಸಬೇಕು.ಹಾಗೆಯೇ, ಇತ್ತೀಚೆಗೆ ವೃತ್ತಿಪರ ಹಾಗೂ ಇತರ ಖಾಸಗಿ ಕಾಲೇಜುಗಳಲ್ಲಿ (ಸಾಮಾನ್ಯ) ಕನ್ನಡ ಭಾಷಾಕಲಿಕೆಯನ್ನೂ ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಮಿತಿಗೊಳಿಸಿದ್ದಾರೆ; ಕೆಲ ವೃತ್ತಿಪರ ಪಠ್ಯಕ್ರಮದಲ್ಲಿ ಸಾಮಾನ್ಯ ಕನ್ನಡವೂ ಇಲ್ಲ. ವೃತ್ತಿಪರ-ಅರೆ ವೃತ್ತಿಪರ ಪಠ್ಯಕ್ರಮಗಳಲ್ಲಿ, ಸ್ವಾಯತ್ತ ಅಥವಾ ಇತರ ಎಲ್ಲಾ ಕಾಲೇಜುಗಳಲ್ಲಿಯೂ ಕನ್ನಡ ಭಾಷಾಕಲಿಕೆ ಕಡ್ಡಾಯವಾಗಬೇಕು.2) ಕನ್ನಡ ಮತ್ತು ಸಾಹಿತ್ಯ:  ಉತ್ತಮ ಪ್ರಕಟಣೆ ಹಾಗೂ ವಿತರಣಾ ಜಾಲದ ಅವಶ್ಯಕತೆ:

ಶ್ರೀಮಂತವಾಗಿ ಹಾಗೂ ಪ್ರಯೋಗಶೀಲವಾಗಿ ಬೆಳೆಯುತ್ತಿರುವ ಕನ್ನಡ ಸಾಹಿತ್ಯ ಇಂದು ಕುಂಠಿತವಾಗುತ್ತಿದೆ – ಎರಡು ಕಾರಣಗಳಿಂದ.  ಮೊದಲನೆಯದಾಗಿ, ಪ್ರಕಾಶಕರಿಗೆ ಮತ್ತು ಲೇಖಕರಿಗೆ ಉತ್ಸಾಹ ತುಂಬುತ್ತಿದ್ದ ಸರ್ಕಾರದ ವಾರ್ಷಿಕ ಸಗಟು ಖರೀದಿ ಕಳೆದ ಐದು ವರ್ಷಗಳಿಂದ ನಿಂತಿದೆ.  (ಆದರೂ, ನಗರ-ಪಟ್ಟಣಗಳ ಆಸ್ತಿ-ಶುಲ್ಕ ಮಾತ್ರ ಮುಂದುವರೆದಿದೆ; ಈ ಶುಲ್ಕದ ಶೇಕಡ 6ರಷ್ಟು ಭಾಗ ಸರ್ಕಾರಿ ವಾಚನಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸುವುದಕ್ಕೆ ಮೀಸಲಿಡಬೇಕಾಗಿತ್ತು.)  ಸದ್ಯ,  ತಮ್ಮದೇ ಪುಸ್ತಕ ಮಳಿಗೆಗಳಿರುವ ಬೆರಳೆಣಿಕೆಯಷ್ಟು ಪ್ರಕಾಶಕರು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದಾರೆ – ಅದೂ ನಿಧಾನವಾಗಿ.ಎರಡನೆಯದಾಗಿ, ಪುಸ್ತಕ ಪ್ರಕಾಶನದೊಡನೆ ಅದರ ವಿತರಣಾ ಜಾಲವೂ ವಿಸ್ತರಿಸಬೇಕು.  ಆದರೆ ಇಂದಿಗೂ ಧಾರವಾಡದಿಂದ ಉತ್ತರಕ್ಕೆ ಹೋದರೆ, ಬೀದರ್, ರಾಯಚೂರು, ಕಲಬುರ್ಗಿ ಮುಂತಾದ ಜಿಲ್ಲಾ ಕೇಂದ್ರಗಳಲ್ಲಿಯೂ ಸಮೃದ್ಧ ಪುಸ್ತಕ ಮಳಿಗೆಗಳಿಲ್ಲ.  ಓದುವುದಕ್ಕೆ ಪುಸ್ತಕಗಳೇ ಸಿಕ್ಕುವುದಿಲ್ಲ ಎಂಬಂತಹ ಸ್ಥಿತಿಯಲ್ಲಿ ಉತ್ತರ ಕರ್ನಾಟಕದಲ್ಲಿ ಸಾಹಿತ್ಯವು ಬೆಳೆಯುವುದು ಹೇಗೆ?  ಪ್ರಕಾಶಕರಿಗೆ ಮಾರ್ಗದರ್ಶನ ಮಾಡಲು ಹಾಗೂ ಮಾರಾಟ ಜಾಲವನ್ನು ವಿಸ್ತರಿಸಲು ತೆರೆದ ‘ಪುಸ್ತಕ ಪ್ರಾಧಿಕಾರ’ವೂ ಈ ದಿಕ್ಕಿನಲ್ಲಿ ಅಷ್ಟೇನೂ ಕ್ರಿಯಾಶೀಲವಾಗಿಲ್ಲ.  ಇಂದು ಆದ್ಯತೆಯ ಮೇರೆಗೆ ಆಗಬೇಕಾದುದು ಸಗಟು ಖರೀದಿಯ ಮರು ಪ್ರಾರಂಭ ಮತ್ತು ಉತ್ತರ ಕರ್ನಾಟಕದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಪುಸ್ತಕ ಮಳಿಗೆಗಳ ಸ್ಥಾಪನೆ; ಈ ಕಾರ್ಯದಲ್ಲಿ ‘ಪುಸ್ತಕ ಪ್ರಾಧಿಕಾರ’ವು ತನ್ನ ನೆರವು ನೀಡಬೇಕು.3) ಕನ್ನಡ ಮತ್ತು ಆಡಳಿತ: ತರಬೇತಿಯ ಅವಶ್ಯಕತೆ:

ಜನಸಾಮಾನ್ಯರಿಗೂ ಆಡಳಿತಗಾರರಿಗೂ ನಿಕಟ ಸಂಪರ್ಕವು ಅತ್ಯವಶ್ಯಕ ಎಂಬುದು ಎಲ್ಲರಿಗೂ ಗೊತ್ತು; ಆದರೆ, ಉಚ್ಚ ಅಧಿಕಾರಿಗಳು ರಾಜ್ಯಭಾಷೆಯನ್ನು ಕಲಿಯದಿದ್ದರೆ ಅಂತಹ ಸಂಪರ್ಕಸಾಧ್ಯತೆ ಕಡಿಮೆಯಾಗುತ್ತದೆ. ಆಡಳಿತದಲ್ಲಿ ಕನ್ನಡದ ಉಪಯೋಗವನ್ನು ವ್ಯಾಪಕವಾಗಿ ಮಾಡಲು ಎರಡು ನೆಲೆಗಳಲ್ಲಿ ಪ್ರಯತ್ನಿಸಬೇಕು.  ಮೊದಲನೆಯದು, ಕರ್ನಾಟಕ ಆಡಳಿತಕ್ಕೆ ನಿಯೋಜಿತರಾಗುವ ಎಲ್ಲಾ ವರ್ಗಗಳ ಅಧಿಕಾರಿಗಳಿಗೂ ಆಧುನಿಕ ಕನ್ನಡವನ್ನು (ಮುಖ್ಯವಾಗಿ, ಟಿಪ್ಪಣಿಗಳನ್ನು, ಅಧಿಕೃತ ಪತ್ರಗಳನ್ನು, ಮತ್ತು ಸುತ್ತೋಲೆಗಳನ್ನು ಸರಳ ಕನ್ನಡದಲ್ಲಿ ಬರೆಯುವ ಕಲೆಯನ್ನು) ಕಲಿಸುವ ಕೆಲಸವಾಗಬೇಕು.  ಈಗಲೂ ಈ ಬಗೆಯ ಅಲ್ಪಾವಧಿಯ ಕೋರ್ಸ್‌ಗಳಿವೆ; ಆದರೆ, ಅವುಗಳು ಭಾಷೆಗಿಂತ, ಬರವಣಿಗೆಗಿಂತ ಹೆಚ್ಚಾಗಿ ಕನ್ನಡ ಸಾಹಿತ್ಯವನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿವೆ.  ಎರಡನೆಯದಾಗಿ, ರಾಷ್ಟ್ರೀಯ ನೆಲೆಯಲ್ಲಿ, ಕರ್ನಾಟಕದಿಂದ ಐಎಎಸ್ / ಐಪಿಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವ ಅಭ್ಯರ್ಥಿಗಳ ಸಂಖ್ಯೆ  ಅಷ್ಟೇನೂ ಆಶಾದಾಯಕವಾಗಿಲ್ಲ.  ಆದುದರಿಂದ  ಎಲ್ಲಾ ಜಾತಿ-ವರ್ಗಗಳ ಬಡ ಪ್ರತಿಭಾವಂತರಿಗೆ ಐಎಎಸ್, ಐಪಿಎಸ್, ಕೆಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧಪಡಿಸುವ ತರಬೇತಿ ಶಿಬಿರಗಳನ್ನು ಕಾಲಕಾಲಕ್ಕೆ ಆಯೋಜಿಸಬೇಕು.ಇನ್ನು ದೀರ್ಘಾವಧಿಯಲ್ಲಿ ಆಗಬೇಕಾದ ಕಾರ್ಯಗಳನ್ನು ಪರಿಗಣಿಸಿದರೆ:

ಅ) ಕನ್ನಡ ಮತ್ತು ಪ್ರದರ್ಶನ ಕಲೆಗಳು: ರಂಗಮಂದಿರಗಳ ಅವಶ್ಯಕತೆ:  ಜಿಲ್ಲಾ ಕೇಂದ್ರಗಳು ಹೋಗಲಿ, ಬೆಂಗಳೂರಿನಲ್ಲಿಯೇ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಪ್ರದರ್ಶಿಸಲು ಕೇವಲ ಚಲನಚಿತ್ರ ಅಕಾಡೆಮಿಯ ಕಿರು ಚಿತ್ರಮಂದಿರವನ್ನು ಹೊರತುಪಡಿಸಿ ಬೇರೆಲ್ಲೂ ಅವಕಾಶವಿಲ್ಲ. ಕನಿಷ್ಠ ಪಕ್ಷ ಟಿವಿಯಲ್ಲಾದರೂ ಚಲನಚಿತ್ರಗಳನ್ನು ಅಪರೂಪಕ್ಕೆ ನೋಡಬಹುದು. ಆದರೆ, ನಾಟಕಗಳಿಗೆ ರಂಗಮಂದಿರಗಳು ಬೇಕೇ ಬೇಕು. ಬೆಂಗಳೂರಿನಲ್ಲಿಯೇ ರಂಗಶಂಕರವನ್ನು ಹೊರತುಪಡಿಸಿದರೆ ನಾಟಕಗಳಿಗೆ ಬೇರಾವ ರಂಗಮಂದಿರವೂ ಇಲ್ಲ. ಪುರಭವನ ಮತ್ತು ರವೀಂದ್ರ ಕಲಾಕ್ಷೇತ್ರಗಳು ತಮ್ಮ ದುಬಾರಿ ಬಾಡಿಗೆಯ ಕಾರಣದಿಂದ ಎಲ್ಲಾ ತಂಡಗಳಿಗೂ ದೊರಕುವುದಿಲ್ಲ.  ಶ್ರೇಷ್ಠ ಅಭಿರುಚಿಯ ನಾಟಕಗಳನ್ನು ಪ್ರದರ್ಶಿಸಲು ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ ಸರ್ಕಾರವೇ ಉತ್ತಮ ಗುಣಮಟ್ಟದ ರಂಗಮಂದಿರಗಳನ್ನು ನಿರ್ಮಿಸಿದರೆ ಕನ್ನಡ ನಾಟಕಗಳ ಬೆಳವಣಿಗೆಗೆ ಅಗಾಧ ಪ್ರೋತ್ಸಾಹವು ದೊರೆಯುತ್ತದೆ.ಆ) ಕನ್ನಡ ಮತ್ತು ಅಂತರ್ಜಾಲದ ಉಪಯೋಗ:  ಈ ದಿಕ್ಕಿನಲ್ಲಿ ವೈಯಕ್ತಿಕ ನೆಲೆಯಲ್ಲಿ ಅನೇಕ ವಿದ್ವಾಂಸರು ದುಡಿಯುತ್ತಿದ್ದಾರೆ; ಆದರೆ ಅಂತಹವರು ಪೂರ್ಣಕಾಲಿಕವಾಗಿ ತಮ್ಮನ್ನು ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅಸಾಧ್ಯ.  ಆದುದರಿಂದ, ಸರ್ಕಾರವೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅಂತರ್ಜಾಲದ ಬೆಳವಣಿಗೆ ಮತ್ತು ನಿರ್ವಹಣೆಯನ್ನು ವಹಿಸಿದರೆ, ಆ ಇಲಾಖೆ ಈ ಕ್ಷೇತ್ರದ ಪರಿಣತರನ್ನು ಗುರುತಿಸಿ, ಅವರಿಗೆ ಗೌರವಧನ ಕೊಟ್ಟು, ಕನ್ನಡ ತಂತ್ರಾಂಶಗಳನ್ನು ಬೆಳೆಸುವ ಹಾಗೂ ವಿಕಿಪಿಡಿಯಾದಂತಹ ವಿಶ್ವಕೋಶವನ್ನು ಕನ್ನಡದಲ್ಲಿ ತಯಾರಿಸಬಹುದು. ಈಗಲೂ ‘ಕನ್ನಡ ವಿಕಿಪಿಡಿಯ’ ಇದೆ; ಆದರೆ, ಅದು ಅಪೂರ್ಣವಾಗಿದೆ ಮತ್ತು ಅದರಲ್ಲಿರುವ ಅನೇಕ ವಿಷಯಗಳನ್ನು ಕುರಿತ ಮಾಹಿತಿ ಪ್ರಶ್ನಾರ್ಹವಾಗಿದೆ.  ಏಕೆಂದರೆ, ಕನ್ನಡ ವಿಕಿಪಿಡಿಯಕ್ಕೆ ಬರುವ ಮಾಹಿತಿಯನ್ನು ವಿಮರ್ಶಿಸುವ ಕೆಲಸ (ನನಗೆ ತಿಳಿದಂತೆ) ಯಾರಿಂದಲೂ ಆಗುತ್ತಿಲ್ಲ. ಇನ್ನೊಂದು ಹತ್ತು ವರ್ಷಗಳಲ್ಲಾದರೂ ಕನ್ನಡ ವಿಕಿಪಿಡಿಯಾದಲ್ಲಿಯೇ ಎಲ್ಲ ಬಗೆಯ ವಿಶ್ವಾಸಾರ್ಹ ಮಾಹಿತಿ ಸಿಗುವಂತಾದರೆ ಆಗ ವಿದ್ಯಾರ್ಥಿಗಳಿಗೂ ಬೋಧಕರಿಗೂ ಸೇರಿಯೇ ಅಗಾಧ ಪ್ರಯೋಜನವಾಗುತ್ತದೆ.ಕಳೆದ ದಶಕದಿಂದ ಕಂಪ್ಯೂಟರ್ ಸ್ಥಾನವನ್ನು ನೂತನ ಮೊಬೈಲ್‌ಗಳು ಆಕ್ರಮಿಸಿಕೊಳ್ಳುತ್ತಿವೆ; ಆದರೆ, ಹೆಚ್ಚಿನ ಎಲ್ಲಾ ಮೊಬೈಲ್‌ಗಳಿಗೂ ಕನ್ನಡ ಲಿಪಿಯ ತಂತ್ರಾಂಶವಿದ್ದರೂ (App) ಮಾರಾಟಗಾರರು ಅದನ್ನು ಸೇರಿಸುವುದಿಲ್ಲ. ಈ ಕಾರಣ ಮೊಬೈಲ್ ಉಪಯೋಗಿಸುವ ಲಕ್ಷಾಂತರ ಕನ್ನಡಿಗರು ರೋಮನ್ ಲಿಪಿಯಲ್ಲಿ ಕನ್ನಡ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ. ಎಲ್ಲಾ ಮೊಬೈಲ್ ಮಾರಾಟಗಾರರೂ ಕಡ್ಡಾಯವಾಗಿ ಕನ್ನಡ ಲಿಪಿಯ ತಂತ್ರಾಂಶವನ್ನು  ಜೋಡಿಸಿಕೊಡಬೇಕೆಂದು ಸಂಬಂಧಿಸಿದ ಇಲಾಖೆ ಒಂದು ಸುತ್ತೋಲೆಯನ್ನು ಹೊರಡಿಸಿದರೆ, ಲಕ್ಷಾಂತರ ಗ್ರಾಹಕರು ಕನ್ನಡ ಭಾಷೆಯನ್ನು ಕನ್ನಡ ಲಿಪಿಯಲ್ಲಿಯೇ ಬಳಸಬಹುದು.ಸುಪ್ರೀಂ ಕೋರ್ಟ್‌ನ ತೀರ್ಪುಗಳ ಸಾರಾಂಶವನ್ನು ಕೊಡುವ ಕನ್ನಡ ಕೋಶ, ಹೊರನಾಡಿನ ಕನ್ನಡಿಗರ ಸೇವೆಯನ್ನು ಬಳಸಿಕೊಳ್ಳುವ ಬಗೆ, ಇತರ ರಾಜ್ಯಗಳ-ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಅಧ್ಯಯನ ಪೀಠ ಸ್ಥಾಪನೆ -- ಹೀಗೆ ಈ ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಬಹುದು. ಆದರೆ ಪಟ್ಟಿಯಲ್ಲಿ ಎಷ್ಟು ಅಂಶಗಳಿವೆ ಎಂಬುದು ಮುಖ್ಯವಲ್ಲ, ಅವುಗಳಲ್ಲಿ ಎಷ್ಟು ಅನುಷ್ಠಾನವಾಗುತ್ತವೆ ಎಂಬುದು ಮುಖ್ಯ.

(ಚರ್ಚೆ-ವಿಮರ್ಶೆಗಳ ಮೂಲಕ ಈ ಲೇಖನವನ್ನು ಬರೆಯಲು ಸಹಕರಿಸಿದ ಪ್ರೊ.ಬಿ.ಎ. ವಿವೇಕ ರೈ ಅವರಿಗೆ ನಾನು ಆಭಾರಿ)

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry