ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಕ್ಷೇತ್ರಕ್ಕೆ ಭವಿಷ್ಯವಲ್ಲದೆ ಇನ್ನೇನು ಇರಲು ಸಾಧ್ಯ?

Last Updated 2 ನವೆಂಬರ್ 2016, 6:39 IST
ಅಕ್ಷರ ಗಾತ್ರ

ಕಳೆದ ಆರು ವಾರಗಳಲ್ಲಿ ನನಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬಂಡವಾಳ ಹೂಡಿಕೆದಾರರಿಂದ ಹತ್ತಾರು ಕರೆಗಳು ಬಂದಿವೆ. ನನ್ನ ಅನುಭವವನ್ನು ಆಧರಿಸಿ ಬರುವ ಈ ವೃತ್ತಿಪರ ಸಲಹಾ ಸಂಬಂಧದ ಕರೆಗಳಲ್ಲಿ ಹೆಚ್ಚಿನ ಪ್ರಶ್ನೆಗಳ ಸ್ವರೂಪವು ಒಂದೇ ಆಗಿದ್ದವು. ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭವಿಷ್ಯವೇನು? ಸದ್ಯದ ಪರಿಸ್ಥಿತಿಯಲ್ಲಿ ತೋರಿಬರುತ್ತಿರುವ  ಬಿಕ್ಕಟ್ಟುಗಳು ತಾತ್ಕಾಲಿಕವೇ ಅಥವಾ ಬರಲಿರುವ ದೀರ್ಘಕಾಲದ ಬರದ ಮುನ್ಸೂಚನೆಯೇ? ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿರುವ  ಬಹುರಾಷ್ಟ್ರೀಯ ಕಂಪೆನಿಗಳಿಗೆ ಹೋಲಿಸಿದರೆ ಭಾರತೀಯ ಮೂಲದ ಕಂಪೆನಿಗಳ ಜಾದೂ ಮುಗಿಯುವ ಹಂತ ತಲಪುತ್ತಿದೆಯೇ?  ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ ನಾಸ್ಕಾಂ ಸೂಚಿಸಿರುವ ಬೆಳವಣಿಗೆಯ ಮಟ್ಟವನ್ನು ಪ್ರಸಕ್ತ ಸಾಲಿನಲ್ಲಿ ಸಾಧಿಸುವುದು ಎಷ್ಟರ ಮಟ್ಟಿಗೆ ವಾಸ್ತವವೆಂದು ನಂಬಬಹುದು? ತಲೆದೋರಿದ ಬಿಕ್ಕಟ್ಟುಗಳ ಪರಿಹಾರಕ್ಕೆ ಕಂಪೆನಿಗಳು ಕೈಗೊಳ್ಳುತ್ತಿರುವ ಕ್ರಮಗಳೇನು?
ಇವೆಲ್ಲ ಪ್ರಶ್ನೆಗಳ ಹಿಂದಿನ ಉದ್ದೇಶವೂ ಕೂಡಾ ಒಂದೇ ಆಗಿರುತ್ತದೆ. ಬಂಡವಾಳ ಹೂಡಿಕೆಯನ್ನು ಹಿಡಿದಿಡಬೇಕೇ? ವಿಸ್ತರಿಸಬೇಕೆ ಅಥವಾ ಮೊಟಕುಗೊಳಿಸಬೇಕೇ?

ಈಗಲೂ ಸಹ ಗೆಲ್ಲುವ ಕುದುರೆ ಎಂದೇ ಪರಿಗಣಿಸಬಹುದಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಬಂದೊದಗಿರುವ ಬಿಕ್ಕಟ್ಟುಗಳೇನು ಎಂದು ಅವಲೋಕಿಸಿದಾಗ ಹಲವು ಬೆಳವಣಿಗೆಗಳು ಎದ್ದು ಕಾಣುತ್ತವೆ. ಜಾಗತಿಕ ಆರ್ಥಿಕ ಸಂಕಷ್ಟಗಳು, ಚುನಾವಣೆಯ ವರುಷದಲ್ಲಿ ಅಮೆರಿಕದ ಕಂಪೆನಿಗಳು ತೋರಿಸುವ ಹಿಂಜರಿಕೆಗಳು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕರೆನ್ಸಿ ವಿನಿಮಯದಲ್ಲಿನ ಏರಿಳಿತ, ಐರೋಪ್ಯ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ನಿನ ‘ಬ್ರೆಕ್ಸಿಟ್’ ನಿರ್ಧಾರ, ಇನ್ನೂ ಚೇತರಿಸಿಕೊಳ್ಳದ ತೈಲ ಉದ್ದಿಮೆ, ಇಂಟರ್ನೆಟ್ ಮತ್ತು ಕ್ಲೌಡ್‌ಗಳಿಂದಾಗಿ ಬದಲಾಗುತ್ತಿರುವ ಸೇವಾ ಬಳಕೆಯ ವಿಧಾನಗಳು, ರೋಬೊಟಿಕ್ಸ್ ಹಾಗೂ ಕೃತಕ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ನಡೆಸಬಹುದಾದ ಯಾಂತ್ರೀಕೃತ ಸೇವೆಗಳು, ಇವೆಲ್ಲವುಗಳಿಂದಾಗಿ ಕುಸಿಯುತ್ತಿರುವ ಒಟ್ಟು ಆದಾಯದ ಬೆಳವಣಿಗೆಯ ಮಟ್ಟ, ಜೊತೆ ಜೊತೆಗೇ ಇಳಿಯುತ್ತಿರುವ ಲಾಭಾಂಶದ ಮಟ್ಟ, ಅಂತಹ ಪ್ರೀತಿಪಾತ್ರದ ಲಾಭಾಂಶವನ್ನು ಹಿಡಿದಿಡುವ ಸಲುವಾಗಿ ನಡೆಯುತ್ತಿರುವ ಕಸರತ್ತುಗಳು... ಹೀಗೆ ಪಟ್ಟಿ ಬೆಳೆಸುತ್ತಲೇ ಇರಬಹುದು.

ಇವೆಲ್ಲವುಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಿಯಂತ್ರಣದಲ್ಲಿಲ್ಲದ ಬೆಳವಣಿಗೆಗಳೆಷ್ಟು ಮತ್ತು ಮುಂದಾಲೋಚನೆಯಿಂದ ಈಗಲೂ ಸಹ ಸರಿಪಡಿಸಿಕೊಂಡು ಕಾರ್ಯನಿರ್ವಹಿಸಿದರೆ ಮುಂಚಿನ ದಿನಗಳ ಹೊಳಪನ್ನು ಕಾಣಬಹುದಾದ ಸಾಧ್ಯಾಸಾಧ್ಯತೆಗಳೆಷ್ಟು ಎಂಬುದು ವಿಚಾರ ಮಾಡಬಹುದಾದ ವಿಷಯವಾಗಿದೆ.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೂ ಇದೆ. ಈಗ ಕೇಳಿಬರುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಂಕಷ್ಟಗಳ ಕುರಿತಾದ ಕೂಗು ನಿಜವಾಗಿಯೂ ಅಷ್ಟೊಂದು ಅಪಾಯಕಾರಿಯಾಗಿರುವ ಸನ್ನಿವೇಶದ ನಿಕಟ ನಿರೂಪಣೆಯೇ ಅಥವಾ ಅತಿಶಯೋಕ್ತಿಯೇ? ನಾಸ್ಕಾಂ ಸಂಸ್ಥೆಯ ಅಧ್ಯಕ್ಷರಾದ ಆರ್. ಚಂದ್ರಶೇಖರ್ ಅವರು ಇತ್ತೀಚೆಗೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ‘ಈಗಿನ ಅಲ್ಪಾವಧಿಯ ಬಿಕ್ಕಟ್ಟುಗಳು ಸಿನಿಕರ ಚರ್ಚೆಗೆ ಗ್ರಾಸವಾಗಿದೆಯೆಂಬ ಮಾತ್ರಕ್ಕೆ ನಾವು ಆತುರಾತುರವಾಗಿ ನಿರಾಧಾರವಾದ ತೀರ್ಮಾನಗಳನ್ನು ಕೈಗೊಳ್ಳಬಾರದು’ ಎಂಬ ಅವರ  ಅಭಿಪ್ರಾಯ ಹೆಚ್ಚಿನಮಟ್ಟಿಗೆ ಸತ್ಯವಾಗಿಯೇ ಇದ್ದು ನಾನು ಅದನ್ನು ಅನುಮೋದಿಸುತ್ತೇನೆ.


ಇವೆಲ್ಲವೂ ವ್ಯವಹಾರ ಚಕ್ರದ ಅವಿಭಾಜ್ಯ ಅಂಗವಾಗಿದ್ದು ತುಲನಾತ್ಮಕವಾದ ವಿಮರ್ಶೆಗಳನ್ನು ನಾವು ಮಾಡಬೇಕೆ ಹೊರತು, ಅನಿಸಿಕೆಯ ಧ್ವನಿಗಳು ‘ತೋಳ ಬಂತು ತೋಳ’ದ ಕೂಗಿನಂತಾಗಿ ನಮ್ಮಲ್ಲಿನ ವಿಶ್ವಾಸ ಕುಂಠಿತವಾಗಬಾರದು.

ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಪ್ರತಿಯೊಬ್ಬ ಭಾರತೀಯನಿಗೂ ವಿದೇಶಗಳಲ್ಲಿ ತಲೆ ಎತ್ತಿ ನಡೆದು, ಕಣ್ಣಲ್ಲಿ ಕಣ್ಣಿಟ್ಟು ಸಂಭಾಷಣೆಯನ್ನು ನಡೆಸುವ ಆತ್ಮವಿಶ್ವಾಸವನ್ನು ಗಳಿಸಿಕೊಟ್ಟಿದೆ. ನನಗೆ ನೆನಪಿದ್ದಂತೆ ಎರಡೂವರೆ ದಶಕಗಳ ಹಿಂದೆ ಅಮೆರಿಕದ ‘ಇಮ್ಮಿಗ್ರೇಶನ್’ ಸಾಲುಗಳಲ್ಲಿ (ವಲಸೆ ಅಧಿಕಾರಿಗಳ ಮುಂದೆ ನಿಂತ ಸಾಲು) ನಿಂತಿರುವ ಭಾರತದ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಒಳಗೆಲ್ಲೋ ಒಂದು ಅಳುಕಿರುತ್ತಿತ್ತು. ಇವರಲ್ಲಿ ಆತ್ಮಸ್ಥೈರ್ಯವನ್ನು ತುಂಬಿದ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆಯೂ ಅಪಾರವಾಗಿದೆ.
ಕರ್ನಾಟಕ ರಾಜ್ಯೋತ್ಸವದ  ಶುಭ ಸಂದರ್ಭದಲ್ಲಿ  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕರ್ನಾಟಕದ, ಅದರಲ್ಲೂ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಬಿಂಬಿಸಲಾಗುವ ಬೆಂಗಳೂರಿನ, ಕೊಡುಗೆ ಹಾಗೂ  ಭವಿಷ್ಯವನ್ನು ಪುನರ್‌ ರೂಪಿಸುವಲ್ಲಿ ಕರ್ನಾಟಕದ ಪಾತ್ರವನ್ನು ವಿಮರ್ಶಿಸಲೇಬೇಕು.

ಕರ್ನಾಟಕದ ಹಿರಿಮೆ: ಸರ್ಕಾರದ ಅಂಕಿ ಅಂಶಗಳ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್‌ಗೆ ಸಂಬಂಧಿಸಿದ ಭಾರತದ ರಪ್ತು 2015-16ನೇ ಸಾಲಿನಲ್ಲಿ ಸುಮಾರು $ 170 ಬಿಲಿಯನ್‌ನಷ್ಟಿದ್ದು (ಅಂದಾಜು ₹ 11.34 ಲಕ್ಷ ಕೋಟಿ) ಅದರಲ್ಲಿ ಕರ್ನಾಟಕದ ಪಾಲು ಶೇಕಡ 36.50ರಷ್ಟಿರುತ್ತದೆ. ನಾಸ್ಕಾಂ ಸಂಸ್ಥೆಯ ವರದಿಯ ಪ್ರಕಾರ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 2 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ನೇರವಾಗಿ ಭಾಗಿಯಾಗಿದ್ದಾರೆ. ಭಾರತದ ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸಾಫ್ಟ್‌ವೇರ್ ರಫ್ತಿನ ಆದಾಯದ ಗಳಿಕೆಯಲ್ಲಿ ಮುಂಚೂಣಿಯಲ್ಲಿದೆ.

1980ರಿಂದಲೇ ಕರ್ನಾಟಕವು  ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿಯಾಗಿ ಹೆಸರು ಮಾಡಿದೆ. 1985ರಲ್ಲಿಯೇ ಮೊದಲ ಬಹುರಾಷ್ಟ್ರೀಯ ಕಂಪೆನಿಯಾಗಿ ಅಮೆರಿಕಾದ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ ಕಂಪೆನಿಯು ಬೆಂಗಳೂರನ್ನು  ತನ್ನ ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದು ಈಗ ಚರಿತ್ರೆಯಾಗಿದೆ.  ಭಾರತದ ಹೆಸರುವಾಸಿ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಟಿಸಿಎಸ್, ಇನ್ಫೊಸಿಸ್, ವಿಪ್ರೊದಂತಹ ಕಂಪೆನಿಗಳು ಕರ್ನಾಟಕದ ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಗಳೂರು, ಹುಬ್ಬಳ್ಳಿ ನಗರಗಳಿಗೂ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿವೆ.

ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾದ ಹಲವಾರು ಅಂಶಗಳು ಒಂದೆಡೆಗೇ ಮೇಳೈಸಿರುವುದರಿಂದಲೇ ಕರ್ನಾಟಕವು ಹಲವಾರು ಕಂಪೆನಿಗಳನ್ನು ಆಕರ್ಷಿಸಲು ಸಾಧ್ಯವಾಯಿತು. ಉತ್ಕೃಷ್ಟ ವಿದ್ಯಾಭ್ಯಾಸವನ್ನು ನೀಡುವ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕಾಲೇಜುಗಳು, ಸಂಶೋಧನೆಗೆ ಸಂಬಂಧಿಸಿದ ಎನ್ಎಎಲ್,  ಇಸ್ರೊ, ಡಿಆರ್‌ಡಿಒ ಮುಂತಾದ ಪ್ರಯೋಗಾಲಯಗಳು, ಎಂಜಿನಿಯರುಗಳೇ ತುಂಬಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಪ್ರಾರಂಭದ ಹಂತದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಪರಿಣತ ಉದ್ಯೋಗಾಂಕ್ಷಿಗಳನ್ನೂ, ಕಾಲೇಜಿನಿಂದ ಹೊರಬರುತ್ತಿರುವ  ಎಂಜಿನಿಯರುಗಳನ್ನೂ ಹಾಗೂ ಬಹುರಾಷ್ಟ್ರೀಯ ಕಂಪೆನಿಗಳನ್ನೂ ಆಕರ್ಷಿಸಿದವು. ಎಲ್ಲರನ್ನೂ ಜೊತೆ ಜೊತೆಗೇ ಕೊಂಡೊಯ್ಯುವ ಮಧುರ ಸ್ವಭಾವದ ಕರ್ನಾಟಕದ ಜನ, ಅನುಕೂಲಕರವಾದ ಬೆಂಗಳೂರಿನ ಹವಾಮಾನ ಹೆಚ್ಚಿನ ಸಂಖ್ಯೆಯಲ್ಲಿ ಐ.ಟಿ. ಕಂಪೆನಿಗಳು ಕರ್ನಾಟಕವನ್ನು, ಅದರಲ್ಲೂ ಬೆಂಗಳೂರನ್ನು ತವರನ್ನಾಗಿಸಿಕೊಳ್ಳುವ ಪ್ರಮೇಯದಲ್ಲಿ ಸಹಕಾರಿಯಾಗಿವೆ.

ಅದರಿಂದಾಗಿಯೇ ಬಹುರಾಷ್ಟ್ರೀಯ ಕಂಪೆನಿಗಳ ಶೇಕಡ 80ರಷ್ಟು ಭಾರತದ ವ್ಯವಹಾರಗಳಿಗೆ ಬೆಂಗಳೂರೇ ಕೇಂದ್ರವಾಗಿದೆ ಮತ್ತು ಭಾರತೀಯ ಮೂಲದ ಐ.ಟಿ. ಕಂಪೆನಿಗಳಲ್ಲಿ ಶೇಕಡ 20ಕ್ಕಿಂತಲೂ ಹೆಚ್ಚು ಕಂಪೆನಿಗಳು ಬೆಂಗಳೂರಿನಲ್ಲಿ ನೋಂದಣಿಯಾಗಿವೆ.

ಸ್ಟಾರ್ಟ್ ಅಪ್ ರಾಜಧಾನಿ: ದಶಕಗಳ ಹಿಂದೆ ಪೂರಕವಾದ ವಾತಾವರಣವಿದ್ದುದರಿಂದ ಐ.ಟಿ. ಕಂಪೆನಿಗಳನ್ನು ಆಕರ್ಷಿಸಿದ ಮಾದರಿಯಲ್ಲೇ ಸ್ಟಾರ್ಟ್ಅಪ್ ಕಂಪೆನಿಗಳನ್ನು ಸ್ಥಾಪಿಸುವುದಕ್ಕೆ ಬೇಕಾದ ಪರಿಸರವನ್ನು ನಿರ್ಮಿಸಿ ಸ್ಟಾರ್ಟ್ಅಪ್ ರಾಜಧಾನಿ ಎಂಬ ಬಿರುದನ್ನೂ ಮುಡಿಗೆ ಬಾಚಿಕೊಂಡಿರುವ ಬೆಂಗಳೂರು ಅಸಾಮಾನ್ಯ ಪ್ರತಿಭೆಯನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿದೆ ಎಂದರೆ ತಪ್ಪಾಗಲಾರದು. 2015ರ ಜಾಗತಿಕ ಮಟ್ಟದ ಸ್ಟಾರ್ಟ್ಅಪ್ ಪರಿಸರ ಶ್ರೇಯಾಂಕದಲ್ಲಿ ಪ್ರಪಂಚದ 20 ಶ್ರೇಷ್ಠ ಪರಿಸರಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಭಾರತದ ಏಕೈಕ ನಗರ ಬೆಂಗಳೂರು ಎಂದು ಇತ್ತೀಚೆಗೆ ತಮ್ಮ ಭಾಷಣವೊಂದರಲ್ಲಿ ರಾಜ್ಯದ ರಾಜ್ಯಪಾಲರೇ ಹೆಮ್ಮೆಯ ನುಡಿ ನುಡಿದಿದ್ದಾರೆ. ಸ್ಟಾರ್ಟ್ಅಪ್ ನೀತಿಯನ್ನು ಪ್ರಚುರಪಡಿಸಿದ ಭಾರತದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಯೂ ಕರ್ನಾಟಕಕ್ಕಿದೆ ಎಂದೂ ಅವರು ಹೇಳಿದ್ದಾರೆ. ಈಗಾಗಲೇ 4,000ಕ್ಕೂ ಹೆಚ್ಚು ಸ್ಟಾರ್ಟ್ಅಪ್ ಕಂಪೆನಿಗಳು ಬೆಂಗಳೂರನ್ನು ತಮ್ಮ ಪ್ರಮುಖ ಕಾರ್ಯಾಗಾರವನ್ನಾಗಿ ಮಾಡಿಕೊಂಡಿವೆ ಎಂಬುದೂ ಸಹ ಇನ್ನೊಂದು ಹೆಗ್ಗಳಿಕೆಯೇ ಸರಿ.

ಭವಿಷ್ಯಕ್ಕೊಂದು ಬುನಾದಿ:
ಇಷ್ಟೆಲ್ಲಾ ಹಿರಿಮೆಯ ಗರಿಯನ್ನು ಮುಡಿಗೇರಿಸಿಕೊಂಡಿರುವ ಕರ್ನಾಟಕ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಸ್ತುತ ಬಿಕ್ಕಟ್ಟನ್ನು ಹಿಮ್ಮೆಟ್ಟಿ ತನ್ನದೇ ಆದ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂದು ಬಯಸುವುದು ಸಮಂಜಸವೇ ಆಗಿದೆ. ನಿತ್ಯ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವ, ಅವಕಾಶಗಳ ಮಹಾಪೂರವೇ ಮುಂದಿನ ದಿನಗಳಲ್ಲಿ ಬಂದೊದಗುತ್ತವೆ ಎಂದು ಸೂಚನೆ ನೀಡುತ್ತಿರುವ, ಒಮ್ಮುಖ ಚಲನೆಯ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಮುಂದಾಳತ್ವವನ್ನು ನೀಡಿ ಮುನ್ನಡೆಸುವುದು ಕರ್ನಾಟಕಕ್ಕಲ್ಲದೇ ಮತ್ತಾವ ರಾಜ್ಯಕ್ಕೆ ಸಾಧ್ಯ?

ಭವಿಷ್ಯದ ಭದ್ರತೆಯ ಬಗೆ: ಆದರೆ ಒಂದಂತೂ ಸತ್ಯ. ಹಳೆಯ ಹೆಗ್ಗಳಿಕೆಯೊಂದೇ ಯಾರಿಗೂ ಭವಿಷ್ಯದ ರಹದಾರಿಗೆ ಖಾತರಿ ನೀಡಲಾರದು. ಭದ್ರ ಬುನಾದಿಯ ಮೇಲೆ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಇಚ್ಛಾಶಕ್ತಿ ಸಂಬಂಧಿಸಿದ ಎಲ್ಲಾ ಸಂಸ್ಥೆಗಳಲ್ಲೂ ಮೂಡಿಬಂದು, ಯೋಜನೆಗಳು ರೂಪುಗೊಂಡು ಕಾರ್ಯಗತವಾಗಬೇಕು. ಸರ್ಕಾರದ ಹಸ್ತಕ್ಷೇಪವೊಂದಿಲ್ಲದೇ ಮುಕ್ತ ಮಾರುಕಟ್ಟೆಯ ಅವಕಾಶ ಕಲ್ಪಿಸಿಕೊಟ್ಟರೆ ಖಾಸಗಿ  ಸಂಸ್ಥೆಗಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತವೆ ಎಂಬ ವಾದವನ್ನು ಸನ್ನಿವೇಶಕ್ಕೆ ಸಂಬಂಧಿಸಿದಂತೆ ಮಾತ್ರ ಅರ್ಥೈಸಿ, ಸರ್ಕಾರವು ಮುಂದಾಲೋಚನೆಯಿಂದ ಬೇಕಾಗುವ ಮೂಲಸೌಕರ್ಯಗಳನ್ನು ಒದಗಿಸಿಕೊಡಬೇಕು.

ಕರ್ನಾಟಕದ ಬೆಂಗಳೂರನ್ನೇ ಪರಿಗಣನೆಗೆ ತೆಗೆದುಕೊಂಡರೆ, ಹೆಚ್ಚುತ್ತಿರುವ ವಾಹನ ದಟ್ಟಣೆ, ಹದಗೆಡುತ್ತಿರುವ ಹವಾಮಾನ, ದುಬಾರಿಯಾಗುತ್ತಿರುವ ನಗರದ ಜನಜೀವನ, ಕುಸಿಯುತ್ತಿರುವ ಮೂಲಸೌಕರ್ಯಗಳನ್ನೇ ಕಾರಣವಾಗಿಟ್ಟುಕೊಂಡು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಹೆದರುತ್ತಿರುವ ಕಂಪೆನಿಗಳ ಉದಾಹರಣೆಗಳು ಅದೆಷ್ಟಿಲ್ಲ? ಹಾಗಾಗಿ, ಸರ್ಕಾರದ ಜೊತೆಗೇ ಖಾಸಗಿ ಕಂಪೆನಿಗಳು, ನಾಸ್ಕಾಂ ಸಂಸ್ಥೆ, ಶೈಕ್ಷಣಿಕ ಸಂಸ್ಥೆಗಳೂ ಸಹ ಕೈ ಜೋಡಿಸಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಇವೆಲ್ಲವೂ ಪ್ರಸ್ತಾವನೆಯಾದರೆ, ನಿಜವಾಗಿಯೂ ಮಾಡಬೇಕಾದುದ್ದೇನು?

ಮೊದಲನೆಯದಾಗಿ, 18 ರಿಂದ 24 ತಿಂಗಳ ಅಲ್ಪಾವಧಿಯಲ್ಲಿ ಈಗ ತಲೆದೋರಿರುವ ಬಿಕ್ಕಟ್ಟುಗಳಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕುಗ್ಗುತ್ತಿರುವ ಬೆಳವಣಿಗೆಯನ್ನು ಸರಿದಾರಿಗೆ ತರುವ ಮತ್ತು ಅದರಿಂದಾಗಿ ಕುಸಿಯುತ್ತಿರುವ ಉದ್ಯೋಗಾವಕಾಶವನ್ನು ತಡೆಹಿಡಿಯುವ ಪ್ರಯತ್ನವಾಗಬೇಕು. ಡಿಜಿಟಲ್ ತಂತ್ರಜ್ಞಾನ, ಕ್ಲೌಡ್‌ಗೆ ಸಂಬಂಧಿಸಿದ ಸಲಹಾ ಸಾಮರ್ಥ್ಯ, ರೋಬೊಟಿಕ್ ಆಟೊಮೇಷನ್‌ಗೆ ಸಂಬಂಧಿಸಿದ ಹೆಚ್ಚುವರಿ ಕೌಶಲ್ಯಗಳಿಗೆ ಈಗಲೂ ಅಪಾರವಾದ ಜಾಗತಿಕ ಬೇಡಿಕೆಯಿರುವುದರಿಂದ ಮತ್ತು ಈ ಕೊರತೆಯು ಎಲ್ಲಾ ಕಂಪೆನಿಗಳ ಕಳವಳಗಳೂ ಆಗಿರುವುದರಿಂದ ಒಟ್ಟಾರೆಯಾಗಿ ಕೌಶಲ್ಯವೃದ್ಧಿಯ ತರಬೇತಿ ಸಮರೋಪಾದಿಯಲ್ಲಿ ನಡೆಯಬೇಕು. ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಮುಂದಾಳತ್ವದಲ್ಲಿ, ನಾಸ್ಕಾಂ ಸಂಸ್ಥೆಯ ನೇತೃತ್ವದಲ್ಲಿ ಇಂತಹದೊಂದು ಒಕ್ಕೂಟವನ್ನು ಸ್ಥಾಪಿಸಿ ತರಬೇತಿ ನೀಡುವ ತುರ್ತು ಕೆಲಸವಾಗಬೇಕು. ಇದರಲ್ಲಿ ತರಬೇತಿ ಹೊಂದಿದ ಉದ್ಯೋಗ ಆಕಾಂಕ್ಷಿಗಳಿಗೆ ಬೇಡಿಕೆಯಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಅವಕಾಶ ಒದಗಿಸುವುದರ ಮೂಲಕ ಕೆಲಸ ಕಳೆದುಕೊಂಡಿರುವ ಮತ್ತು ಕಳೆದುಕೊಳ್ಳುವ ಭೀತಿಯಿರುವ ಮಾನವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡಂತಾಗುತ್ತದೆ. ಅದಲ್ಲದೇ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಖರ್ಚು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಜಾಗತಿಕ ಸಂಸ್ಥೆಗಳಿಗೆ ಭರವಸೆಯನ್ನೊದಗಿಸಿ ಅಗತ್ಯವಿರುವ ಕೌಶಲ್ಯಗಳೊಂದಿಗೆ ನಾವು ತಯಾರಿದ್ದೇವೆ ಎಂಬ ಸಂದೇಶವೂ ಸಹ ರವಾನೆಯಾದಂತಾಗುತ್ತದೆ.  ಇದರಿಂದ ಹೆಚ್ಚುವರಿ ಪ್ರಾಜೆಕ್ಟ್‌ಗಳನ್ನು ನಮ್ಮದಾಗಿಸಿಕೊಂಡು ಕುಸಿಯುತ್ತಿರುವ ಬೆಳವಣಿಗೆಯ ಮಟ್ಟವನ್ನು ಹಿಡಿದಿಡುವ ಪ್ರಯತ್ನ ಅಲ್ಪಾವಧಿಯಲ್ಲಾಗಬೇಕು.

ಎರಡನೆಯದಾಗಿ, 3 ರಿಂದ 5 ವರುಷಗಳ ಮಧ್ಯಮಾವಧಿಯಲ್ಲಿ ಮುಂಬರುವ ತಂತ್ರಜ್ಞಾನದ ಅವಶ್ಯಕತೆಗೆ ಪೂರಕವಾಗಿರುವ ಸಾಮರ್ಥ್ಯದ ಅಭಿವೃದ್ಧಿಗೆ ತಳಪಾಯವಾಗಬಲ್ಲ ಪ್ರಯೋಗಶಾಲೆಗಳ ನಿರ್ಮಾಣವಾಗಬೇಕು. ಉದಾಹರಣೆಗೆ ಐ.ಓ.ಟಿ.ಗೆ (ಇಂಟರ್ನೆಟ್ ಆಫ್ ಥಿಂಗ್ಸ್) ಸಂಬಂಧಿಸಿದಂತಹ ಪ್ರಾಜೆಕ್ಟ್‌ಗಳನ್ನು ನಿಭಾಯಿಸಲು ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸವಾಗದಂತೆ ನಿಗಾವಹಿಸಿ ಈಗಿನಿಂದಲೇ ತಯಾರಿ ನಡೆಸಿ ಪರಿಕಲ್ಪನೆಗಳ ಪುರಾವೆಗಳನ್ನು  ಪೂರ್ವಭಾವಿಯಾಗಿ ಸಿದ್ಧಪಡಿಸಿಟ್ಟುಕೊಂಡು ಜಾಗತಿಕ ಕಂಪೆನಿಗಳಿಗೆ ಸಲಹೆ ನೀಡುವ ಸಾಮರ್ಥ್ಯವನ್ನು ವೃದ್ಧಿಪಡಿಸಿಕೊಳ್ಳಬೇಕು.

ಇಂತಹ ಪ್ರಯತ್ನದಲ್ಲಿ ಸರ್ಕಾರದ ಇಲಾಖೆಗಳು, ಖಾಸಗಿ ಕಂಪೆನಿಗಳು, ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್ಅಪ್‌ ಉದ್ದಿಮೆಗಳು ಕೈಜೋಡಿಸಿ ಒಕ್ಕೂಟವೊಂದರ  ನೇತೃತ್ವದಲ್ಲಿ ಸ್ವತಂತ್ರ ಸಂಸ್ಥೆಗಳನ್ನು ಹುಟ್ಟುಹಾಕಬೇಕು. ಇದರಿಂದಾಗುವ ಉಪಯೋಗವು ಎಲ್ಲಾ ಸಂಸ್ಥೆಗಳಿಗೂ ಲಭ್ಯವಾಗಿ ಈಗ ಎದುರಿಸುತ್ತಿರುವ ಅಗತ್ಯ ಕೌಶಲ್ಯಗಳ ಕೊರತೆ ಇಲ್ಲವಾಗುವಂತೆ ನೋಡಿಕೊಳ್ಳಬೇಕು.

ಮೂರನೆಯದಾಗಿ ಮತ್ತು ಕೊನೆಯದಾಗಿ, 5 ರಿಂದ 10 ವರುಷಗಳ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು ಸಂಶೋಧನಾ ಸಾಮರ್ಥ್ಯವನ್ನು ಬಲಪಡಿಸುವ ಕೆಲಸವಾಗಬೇಕು. ಮಿದುಳಿನ ಸಾಮರ್ಥ್ಯಕ್ಕೆ ಸಂಬಂಧಿಸಿದ, ಧ್ವನಿ ಗ್ರಹಣಕ್ಕೆ ಸಂಬಂಧಿಸಿದ  ತರಂಗಾಂತರಗಳಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವ ನೀಡಿ ಉನ್ನತ ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯತತ್ಪರರಾಗುವಂತಹ ಯೋಜನೆ ರೂಪಿತವಾಗಬೇಕು. ಇಂತಹ ದೀರ್ಘಾವಧಿ ಯೋಜನೆಗಳಿಂದಾಗಿ ಮುಂಬರುವ ವರುಷಗಳಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮ ತಂತ್ರಜ್ಞಾನ ಕ್ಷೇತ್ರದ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳುವುದು ಸಾಧ್ಯ.

ನನ್ನ ವೃತ್ತಿಪರ ಸಲಹಾ ಸಂಬಂಧದ ಕರೆಗಳಲ್ಲಿ ನಾನು ಈ ವಿಚಾರಗಳನ್ನೇ ಪ್ರಸ್ತಾಪಿಸುತ್ತೇನೆ. ಒಂದೆಡೆಯಲ್ಲಿ ಜನಜೀವನದ ಎಲ್ಲಾ ರಂಗಗಳಲ್ಲಿಯೂ ಹಾಸುಹೊಕ್ಕಾಗುತ್ತಿರುವ, ಅವಿಲ್ಲದೇ ಕ್ಷಣವೂ ಬದುಕಲಾಗದ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಅಂತಃಗ್ರಹಣ, ಇನ್ನೊಂದೆಡೆ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹೊಳಪು ಮಾಸುತ್ತಿದೆಯೆಂಬ ಭೀತಿ; ಈ ಎರಡೂ ವಿರೋಧಾಭಾಸಗಳಲ್ಲದೇ ಇನ್ನೇನು?  ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಭವಿಷ್ಯವಲ್ಲದೇ ಇನ್ನೇನು ಇರಲು ಸಾಧ್ಯ? ಸ್ವಯಂಕೃತ ಅಪರಾಧಗಳನ್ನು ಸರಿಪಡಿಸುವ ಯೋಜನೆಯೊಂದನ್ನು ಹಮ್ಮಿಕೊಂಡು ಕಾರ್ಯಪೃವೃತ್ತರಾದರೆ ನಮ್ಮ  ಭವಿಷ್ಯವನ್ನು ನಾವೇ ಸೃಷ್ಟಿಸಲು ಸಾಧ್ಯ.

ಕೊನೆಯ ಮಾತು. ಸಂಭಾಷಣೆಗಳು  ಸಿನಿಕತನದಿಂದ ಕೂಡಿ  ನಮ್ಮ ಮಕ್ಕಳಲ್ಲಿ ಸಂಶಯ ಮೂಡಿಸಿ ಧೃತಿಗೆಡಿಸುವಂತಾಗದೇ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉಜ್ವಲ ಭವಿಷ್ಯವನ್ನು ನಮ್ಮದಾಗಿಸಿಕೊಳ್ಳುವ ಯೋಜನೆಗಳನ್ನು ಕುರಿತಾಗಿರಬೇಕು. ಒಂದು ಮಾದರಿಯ ಉದ್ಯೋಗದ ಸಂಖ್ಯೆಯಲ್ಲಿ ಇಳಿಮುಖವಾದರೆ ಅಪಾರ ಅವಕಾಶವಿರುವ ಇತರೇ ಕವಲುಗಳನ್ನು ಪರಾಮರ್ಶಿಸಿ ಉದ್ಯೋಗ ಸೃಷ್ಟಿಸುವಲ್ಲಿ ಸಂಬಂಧಪಟ್ಟ ಸಂಸ್ಥೆಗಳು ಕಾರ್ಯಪ್ರವೃತ್ತರಾಗಬೇಕು.

-ಚಂದ್ರಶೇಖರ್ ಕಾಕಾಲ್‌
ಉದ್ಯಮಿ

(ಲೇಖಕರು ಉದ್ಯಮಿ, ಸ್ಟಾರ್ಟ್ಅಪ್ ಮೆಂಟರ್ ಮತ್ತು ಇನ್ಫೊಸಿಸ್ ಹಾಗೂ ಎಲ್&&ಟಿ ಇನ್ಫೊಟೆಕ್ ಸಂಸ್ಥೆಗಳಲ್ಲಿ ಹಿರಿಯ ಅಧಿಕಾರಿಯಾಗಿದ್ದವರು)

*********************************************************

ಕರ್ನಾಟಕದ ನಾಳೆಗಳು ಹೇಗಿರಬೇಕು?

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ‘ಪ್ರಜಾವಾಣಿ’ ಓದುಗರ ಸಹಾಯ ಬಯಸುತ್ತಿದೆ. ಪ್ರಗತಿಗೆ ಅತ್ಯಂತ ಅಗತ್ಯವಿರುವುದು ಯೋಜನೆ ಮತ್ತು ನೀತಿಗಳನ್ನು ರೂಪಿಸುವುದು. ಇವು ತಕ್ಷಣದ ಫಲಿತಾಂಶವನ್ನಷ್ಟೇ ಗಮನದಲ್ಲಿಟ್ಟುಕೊಂಡಿದ್ದರೆ ಭವಿಷ್ಯದಲ್ಲಿ ಎದುರಿಸಬೇಕಾದ ಬಿಕ್ಕಟ್ಟುಗಳು ಹೆಚ್ಚು ಸಂಕೀರ್ಣವಾಗಿರಬಹುದು. ಕರ್ನಾಟಕದ ಏಕೀಕರಣಕ್ಕೆ 60 ತುಂಬುತ್ತಿರುವ ಈ ಹೊತ್ತಿನಲ್ಲಿ ಮುಂದಿನ ನಲವತ್ತು ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಬೇಕಾದ ಯೋಜನೆಗಳು, ನೀತಿಗಳು ಹೇಗಿರಬೇಕು? ಈಗ ಇಡುವ ಯಾವ ಹೆಜ್ಜೆ ಭವಿಷ್ಯದಲ್ಲಿ ಫಲ ನೀಡಬಹುದು ಎಂಬುದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.

ಕರ್ನಾಟಕ ನಾಳೆಗಳನ್ನು ನಿರ್ಧರಿಸುವ ಯೋಚನೆ ಮತ್ತು ಯೋಜನೆಗಳು ಯಾವುದಾಗಿರಬೇಕು ಎಂಬುದನ್ನು ನೀತಿ ನಿರೂಪಕರಿಗೆ ತಿಳಿಸುವ ಪ್ರಯತ್ನವೊಂದನ್ನು ಪ್ರಜಾವಾಣಿ ತನ್ನ ಓದುಗರ ಸಹಯೋಗದಲ್ಲಿ ಕೈಗೆತ್ತಿಕೊಳ್ಳುತ್ತಿದೆ.  ಶಿಕ್ಷಣ, ಕೈಗಾರಿಕೆ, ಮೂಲಸೌಕರ್ಯ, ಕಾನೂನು ಮುಂತಾದ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ನಿರ್ದಿಷ್ಟ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುಂದಿನ ನಲವತ್ತು ವರ್ಷಗಳಲ್ಲಿ ಏನಾಗಬೇಕು ಎಂಬುದಕ್ಕೆ ಸಂಬಂಧಿಸಿದ ಬರಹಗಳನ್ನು ಕಳಿಸಿಕೊಡಬಹುದು. ಜೊತೆಗೆ ನಿಮ್ಮ ಭಾವಚಿತ್ರ ಕೂಡ ಇರಲಿ. ಬರಹಗಳನ್ನು ಈ ಕೆಳಗಿನ ವಿಳಾಸಗಳಿಗೆ ಕಳುಹಿಸಬೇಕು.
ಸಂಪಾದಕರು, ಪ್ರಜಾವಾಣಿ, ‘ಕರ್ನಾಟಕದ ನಾಳೆಗಳು’
ನಂ. 75, ಎಂ. ಜಿ. ರಸ್ತೆ, ಬೆಂಗಳೂರು 560001
ಇಮೇಲ್: karnataka100@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT