ಹಾಕಿಯಲ್ಲಿ ಯಶಸ್ಸಿನ ಉತ್ತುಂಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

7

ಹಾಕಿಯಲ್ಲಿ ಯಶಸ್ಸಿನ ಉತ್ತುಂಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

Published:
Updated:
ಹಾಕಿಯಲ್ಲಿ ಯಶಸ್ಸಿನ ಉತ್ತುಂಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

ಭಾರತ ತಂಡದವರು ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವುದು ನಾಡಿನ ಹಾಕಿ ವಲಯದಲ್ಲಿ ಸಂಚಲನ ಉಂಟು ಮಾಡಿದೆ. ಈಚೆಗೆ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತದ ಆಟಗಾರರು ಅತ್ಯುತ್ತಮ ಸಾಮರ್ಥ್ಯವನ್ನೇ ತೋರಿದ್ದಾರೆ. ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದಕ್ಕೆ ವಿಫಲವಾಗಿದ್ದ ಭಾರತ, ಲಂಡನ್‌ ಒಲಿಂಪಿಕ್ಸ್‌ನಲ್ಲಿ 12ನೇ ಸ್ಥಾನಕ್ಕೆ ಇಳಿದಿತ್ತು. ಆದರೆ ಎರಡು ತಿಂಗಳ ಹಿಂದೆ ನಡೆದ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರಿಕ್ವಾರ್ಟರ್‌ ಫೈನಲ್‌ ತಲುಪಿತ್ತು.

ಲೀಗ್‌ ಹಂತದಲ್ಲಿ ಪ್ರಬಲ ಅರ್ಜೆಂಟಿನಾ ತಂಡವನ್ನೇ ಮಣಿಸಿತ್ತು. ‘ಹಾಕಿ ಇಂಡಿಯಾ’ದವರು ಕೋಚ್‌ ರೋಲಂಟ್‌ ಓಲ್ಟಮಸ್‌ ಮಾರ್ಗದರ್ಶನದಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ಭಾರತ ಕ್ರೀಡಾ ಪ್ರಾಧಿಕಾರ ಕೈಜೋಡಿಸಿದೆ. ದೇಶದಾದ್ಯಂತ ಕಿರಿಯರ ಮಟ್ಟದ ಹೆಚ್ಚು ಟೂರ್ನಿಗಳನ್ನು ಸಂಘಟಿಸುತ್ತಿರುವುದೇ ಅಲ್ಲದೆ, ಪ್ರತಿಭಾನ್ವೇಷಣೆಯನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ. ಇದೀಗ ಭಾರತ ತಂಡ ಅನುಭವಿಗಳ ಮತ್ತು ಕಿರಿಯ ಆಟಗಾರರ ಸಮತೋಲನ ಹೊಂದಿದೆ. ಭಾರತದ ಆಟಗಾರರು ಹತ್ತು ಹಲವು ಟೂರ್ನಿಗಳಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ಈ ಪ್ರಯತ್ನಗಳಿಗೆ ಫಲ ಸಿಗುತ್ತಿದೆ. ಈಚೆಗೆ ಸುಲ್ತಾನ್‌ ಅಜ್ಲನ್‌ ಷಾ ಕಪ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಭಾರತ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿತು. ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅಂತಿಮ ಘಟ್ಟ ತಲುಪುವುದು ಸಾಮಾನ್ಯ ಸಂಗತಿ ಏನಲ್ಲ.

ಆ ಟೂರ್ನಿಯಲ್ಲಿ ಹಾಕಿ ಜಗತ್ತಿನ ಆರು ಅಗ್ರಮಾನ್ಯ ತಂಡಗಳು ಆಡುತ್ತವೆ. ಈ ನಡುವೆ, ಭಾರತ ವಿವಿಧ ಟೂರ್ನಿಗಳಲ್ಲಿ ಹಾಕಿಯ ಪ್ರಬಲ ಶಕ್ತಿ ಕೇಂದ್ರಗಳಾದ ಆಸ್ಟ್ರೇಲಿಯಾ, ನೆದರ್‌ಲೆಂಡ್ಸ್‌, ಜರ್ಮನಿ, ಅರ್ಜೆಂಟಿನಾ  ತಂಡಗಳನ್ನು ಮಣಿಸಿದೆ. ಇವು ಭಾರತದಲ್ಲಿ ಹಾಕಿ ಮತ್ತೆ ಯಶಸ್ಸಿನ ಹೊಸ ದಿಕ್ಕುಗಳತ್ತ ಹೆಜ್ಜೆಗಳನ್ನಿಡತೊಡಗಿರುವುದರ ಸಂಕೇತವಾಗಿವೆ. ಇದೀಗ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯನ್ನು ಭಾರತ ಗೆಲ್ಲುತ್ತಿದ್ದಂತೆಯೇ, ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಮ್ಮ ಕಿರಿಯರ ತಂಡ 4 ರಾಷ್ಟ್ರಗಳ ನಡುವಣ ಟೂರ್ನಿಯಲ್ಲಿಯೂ ಪ್ರಶಸ್ತಿ ಗೆದ್ದಿದೆ. ಅಲ್ಲಿ ಪ್ರಬಲ ಜರ್ಮನಿ ತಂಡವನ್ನೇ ಭಾರತ ಸೋಲಿಸಿದೆ. ಇದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಎಲ್ಲಾ ಯಶಸ್ಸು ದೇಶದಲ್ಲಿ ಹೊಸ ಪೀಳಿಗೆಯ ಮಂದಿ ಹಾಕಿಯತ್ತ ಹೆಚ್ಚು ಆಕರ್ಷಿತರಾಗಲು ಕಾರಣವಾಗಲಿದೆ.ಏಷ್ಯಾದಲ್ಲಿ ಸಂಘಟಿತ ಹಾಕಿ ಚಟುವಟಿಕೆ 50ರ ದಶಕದಲ್ಲಿ ಆರಂಭವಾಯಿತು. 1958ರಷ್ಟು ಹಿಂದೆಯೇ ಏಷ್ಯಾ ಹಾಕಿ ಫೆಡರೇಷನ್‌  ಹುಟ್ಟು ಪಡೆಯಿತು. ಆಗ ಭಾರತ, ಪಾಕಿಸ್ತಾನ, ಮಲೇಷ್ಯಾ, ಜಪಾನ್‌ ಮತ್ತು ಕೊರಿಯಾ ತಂಡಗಳು ಸದಸ್ಯ ರಾಷ್ಟ್ರಗಳಾಗಿದ್ದವು. ಏಷ್ಯನ್‌ ಕ್ರೀಡಾಕೂಟದಲ್ಲಿ ಹಾಕಿ ಹೆಚ್ಚು ಗಮನ ಸೆಳೆಯಿತು. 1971ರಲ್ಲಿ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿಯೂ ಹಾಕಿ ಸೇರ್ಪಡೆಗೊಂಡಿತು. ಇದೀಗ ಏಷ್ಯಾ ಹಾಕಿ ಫೆಡರೇಷನ್‌ನಲ್ಲಿ 31 ಸದಸ್ಯ ದೇಶಗಳಿವೆ. ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಣಾಹಣಿ 2011ರಲ್ಲಿ ಶುರುವಾಯಿತು. ಮೊದಲ ಸಲ ಭಾರತ ತಂಡ ಪಾಕಿಸ್ತಾನ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದ್ದರೆ, ನಂತರದ ಎರಡು ವರ್ಷ ಪಾಕಿಸ್ತಾನ ತಂಡವೇ ಗೆದ್ದಿತ್ತು. ಇದೀಗ ಭಾರತ ಮತ್ತೆ ಪಾಕ್‌ ತಂಡವನ್ನೇ ಮಣಿಸಿ ಪ್ರಶಸ್ತಿ ಎತ್ತಿಕೊಳ್ಳುವ ಮೂಲಕ ಏಷ್ಯಾ ಹಾಕಿಯಲ್ಲಿ  ಪ್ರಬಲ ಶಕ್ತಿ ಎಂಬುದನ್ನು ಸಾಬೀತುಪಡಿಸಿದೆ.

2012ರ ಒಲಿಂಪಿಕ್ಸ್‌ನಲ್ಲಿ 12ನೇ ಸ್ಥಾನಕ್ಕೆ ಇಳಿದಿದ್ದ ಭಾರತ ಅದರ ಮರುವರ್ಷ ಏಷ್ಯಾ ಚಾಂಪಿಯನ್ಸ್‌ ಟ್ರೋಫಿ ಕೂಟದಲ್ಲಿ 5ನೇ ಸ್ಥಾನಕ್ಕಿಳಿದಿತ್ತು. ಈ ಆಘಾತದಿಂದ ಚೇತರಿಸಿಕೊಳ್ಳುವ ದಿಸೆಯಲ್ಲಿ ಭಾರತ ತಂಡಕ್ಕೆ ಕೋಚ್‌ ರೋಲಂಟ್‌  ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಹಿಂದೆ ನೆದರ್‌ಲೆಂಡ್ಸ್‌ ತಂಡ ಒಲಿಂಪಿಕ್ಸ್‌ ಮತ್ತು ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ನಿಟ್ಟಿನಲ್ಲಿ ತರಬೇತಿ ನೀಡಿದ್ದ ರೋಲಂಟ್‌ ಒಬ್ಬ ಯಶಸ್ವಿ ಕೋಚ್‌. ಇವರು ಭಾರತ ಹಾಕಿ ತಂಡಕ್ಕೆ ಕೋಚ್‌ ಆಗಿ ಬಂದ ಮೇಲೆ ಪ್ರತಿಯೊಬ್ಬ ಆಟಗಾರನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಕಂಡುಕೊಂಡರು. ಅವರೆಲ್ಲರಿಗೂ ತಮ್ಮದೇ ಶೈಲಿಯಲ್ಲಿ ತರಬೇತಿ ನೀಡಿದರು.

ಆಕ್ರಮಣಕಾರಿ ತಂತ್ರ, ಅತಿ ಚುರುಕಿನ ಪ್ರತಿದಾಳಿ ನಡೆಸುವ ವಿಭಿನ್ನ ತಂತ್ರಗಾರಿಕೆ, ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ನಿರ್ದಿಷ್ಟ ಆಟಗಾರರಿಗೆ ವಿಶೇಷ ತರಬೇತಿ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು.  ಇವು ಯಶಸ್ವಿಯಾಗಿವೆ. ಈ ತಂಡದಲ್ಲಿ ರೂಪಿಂದರ್‌ ಸಿಂಗ್‌, ಕರ್ನಾಟಕದ ನಿಕಿನ್‌ ತಿಮ್ಮಯ್ಯ ಅವರಂತಹ ಆಟಗಾರರು ಗಮನ ಸೆಳೆದಿದ್ದಾರೆ. ಕೆಲವು ಟೂರ್ನಿಗಳಲ್ಲಿ ಹೊಸ ಪ್ರತಿಭೆಗಳನ್ನು ಕಣಕ್ಕಿಳಿಸುವ ರೋಲಂಟ್‌ ಪ್ರಯೋಗ ಯಶಸ್ವಿ ಎನಿಸಿದೆ.

ಹೊಸ ಪೀಳಿಗೆಯ ಆಟಗಾರರಲ್ಲಿ ಆತ್ಮವಿಶ್ವಾಸ ಪ್ರಖರಗೊಳ್ಳುವಂತಾಗಿದೆ. ಇಂತಹದ್ದೊಂದು ಪ್ರಯೋಗ ಅರ್ಧಕ್ಕೆ ನಿಲ್ಲಬಾರದು. ನಮ್ಮ ಕ್ರೀಡಾ ಆಡಳಿತಗಾರರು ರೋಲಂಟ್‌  ಅವರನ್ನು ಕೋಚ್‌ ಸ್ಥಾನದಲ್ಲಿಯೇ ಇನ್ನೂ ಕೆಲವು ಕಾಲ ಮುಂದುವರಿಸಬೇಕು. ಅವರಿಗೆ ಸಂಪೂರ್ಣ ಬೆಂಬಲ ನೀಡಬೇಕು.  ಇದರಿಂದ ದೇಶದಲ್ಲಿ ಈ ಕ್ರೀಡೆ ಹೊಸ ಆಯಾಮ ಕಂಡುಕೊಳ್ಳಲು ಎಲ್ಲಾ ರೀತಿಯ ಸಾಧ್ಯತೆಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry