ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿನಾಶಕಾರಿ ವಿಧಾನ ಸಾಕು; ಸುಸ್ಥಿರತೆ ಬೇಕು

Last Updated 2 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಕಷ್ಟಪಟ್ಟು ದುಡಿದು, ಇನ್ನೊಬ್ಬರ ಹೊಟ್ಟೆ ತುಂಬಿಸುವ ವ್ಯಕ್ತಿಯು ಸಾಲ- ಹಸಿವಿನಿಂದ ಬಳಲುವ ಶೋಚನೀಯ ದೃಶ್ಯ ಬೇರೆಲ್ಲಾದರೂ ಕಾಣಸಿಕ್ಕೀತೇ? ಶ್ರಮವನ್ನು ಸಮಾಜ ಗುರುತಿಸುವುದಿಲ್ಲ; ಅತ್ತ ಆತನ ಬದುಕು ಹಸನಾಗಿಸುವ ಯೋಜನೆಗಳೂ ಇಲ್ಲ. ಕಿಲುಬು ಕಾಸು ಬೆಲೆಯಿಲ್ಲದ ‘ಅನ್ನದಾತ’ ಎಂಬ ಬಿರುದು ಬೇರೆ!

ಕರ್ನಾಟಕಕ್ಕೆ ಅರವತ್ತು ವರ್ಷಗಳು ತುಂಬಿರುವ ಈ ಸಮಯದಲ್ಲಿ ಆ ಆರು ದಶಕಗಳನ್ನು ನೋಡಿದಾಗ, ರೈತ ಸಮೂಹವೊಂದು ಹೇಗೆ ನೆಮ್ಮದಿಯ ಬದುಕಿನಿಂದ ಅಧೋಗತಿಯತ್ತ ಜಾರಿತು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಕ್ಷಿಣ ಕರ್ನಾಟಕದಲ್ಲಿನ ಕಬ್ಬು ಬೆಳೆಗಾರರಾಗಲೀ, ಹೈದರಾಬಾದ್ ಕರ್ನಾಟಕದ ತೊಗರಿ ಬೆಳಗಾರರಾಗಲೀ ಸಾಲುಸಾಲಾಗಿ ನೇಣಿಗೆ ಕೊರಳೊಡ್ಡುವ ಸ್ಥಿತಿಯನ್ನು ಗಮನಿಸಿದರೂ ಸಾಕು. ವ್ಯವಸಾಯಕ್ಕೆ ಕೈಮುಗಿದು ನಗರಕ್ಕೆ ಗುಳೆ ಹೋಗಲು ನಿರ್ಧರಿಸಿದವರನ್ನು ಮತ್ತೆ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಕೋಟಿಗಟ್ಟಲೆ ಮೊತ್ತದ ಯೋಜನೆ ರೂಪಿಸುವವರ ತಲೆಯಲ್ಲಿ ಸುಸ್ಥಿರ ಎಂಬ ಪರಿಕಲ್ಪನೆ ಇಲ್ಲದೆ ಹೋದರೆ ಇಂಥ ಅಧ್ವಾನ ಸೃಷ್ಟಿಯಾಗುತ್ತದೆ. ಸಮಸ್ಯೆಗಳು ಅವೇ ಇದ್ದರೂ, ಸ್ವರೂಪ ಮಾತ್ರ ಕಾಲದಿಂದ ಕಾಲಕ್ಕೆ ಬದಲಾಗುತ್ತಿದೆ. ಸಮಸ್ಯೆಗೆ ಕರಾರುವಾಕ್ಕಾದ ಪರಿಹಾರ ಕಲ್ಪಿಸಿ, ಕೃಷಿಯನ್ನು ಲಾಭದಾಯಕ ಉದ್ಯಮವಾಗಿಸದೆ ಹೋದರೆ ಉಳಿಗಾಲವಿಲ್ಲ.

ಹವಾಮಾನ ಬದಲಾವಣೆ: ಕೇವಲ ಒಂದು ದಶಕದ ಹಿಂದೆ ಅಪರಿಚಿತವಾಗಿದ್ದ ಈ ಪದ ಈಗ ಜಗತ್ತಿನ ಎಲ್ಲ ರಾಷ್ಟ್ರಗಳನ್ನೂ ಕಂಗೆಡಿಸಿದೆ. ಉಳಿದೆಲ್ಲ ಕ್ಷೇತ್ರಗಳಿಗಿಂತ ಇದು ಕೃಷಿಯನ್ನು ಹೆಚ್ಚು ಬಾಧಿಸಲಿದೆ. ಜನಸಂಖ್ಯೆಯ ಮುಕ್ಕಾಲು ಭಾಗ ರೈತರೇ ಇರುವ ಭಾರತದಂಥ ದೇಶಗಳಿಗೆ ದೊಡ್ಡ ಹೊಡೆತ ಇದು. ಅಕಾಲಿಕ ಮಳೆಯನ್ನು ನಂಬಿಕೊಂಡು ವ್ಯವಸಾಯ ಮಾಡುವ ರೈತನಂತೂ ಏನೂ ತೋಚದೆ ಕಂಗೆಟ್ಟಿದ್ದಾನೆ. ಆ ಸಮಸ್ಯೆಯ ಸ್ವರೂಪ ಅರ್ಥ ಮಾಡಿಕೊಂಡು ನೈಜ ಪರಿಹಾರ ಕೊಡಬೇಕಾದ ಕೃಷಿ ಸಂಶೋಧನಾ ವಲಯ ಇನ್ನೂ ಪುರಾತನ ಕಾಲದ ಪ್ಯಾಕೇಜ್ ಆಫ್ ಪ್ರಾಕ್ಟೀಸ್ (ಪಿಒಪಿ) ವಿಧಾನಕ್ಕೆ ಜೋತುಬಿದ್ದಿದೆ.

‘ಇಷ್ಟರವರೆಗೆ ಆಗಿದ್ದು ಆಯಿತು; ಇನ್ನು ಮೇಲಾದರೂ ರೈತರ ಬದುಕು ಸುಧಾರಿಸಬೇಕು’ ಎನ್ನುವವರು, ಕೃಷಿ ಯೋಜನೆ ಹಾಗೂ ನೀತಿ ನಿರೂಪಿಸುವವರು ಒಮ್ಮೆ ಕೇರಳ ರಾಜ್ಯವನ್ನು ನೋಡಿ ಬರಬೇಕಿದೆ. ಶಾಲಾ ಪಠ್ಯದಲ್ಲಿ ಕೃಷಿ ಅಳವಡಿಕೆ, ಕಡಿಮೆ ದರದಲ್ಲಿ ಯಾಂತ್ರೀಕರಣ ನೆರವು, ತರಕಾರಿ ಬೆಳೆಯುವವರಿಗೆ ಕರಾರುವಾಕ್ಕು ಸಹಕಾರ, ರೈತನಿಗೆ ನೈತಿಕ ಸ್ಥೈರ್ಯ ತುಂಬುವುದು, ನಿಖರ ಕೃಷಿ (ಪ್ರಿಸಿಶನ್ ಫಾರ್ಮಿಂಗ್), ಮೌಲ್ಯವರ್ಧನೆ, ಸ್ಥಳೀಯ ಉತ್ಪನ್ನಕ್ಕೆ ಮಾರುಕಟ್ಟೆ ಹೀಗೆ ಹಲವು ದಾರಿಗಳಲ್ಲಿ ಕೇರಳ ಮುನ್ನಡೆದಿದೆ’ ಎನ್ನುತ್ತಾರೆ, ಹಿರಿಯ ಪತ್ರಕರ್ತ ಶ್ರೀಪಡ್ರೆ.

ಸಾಮಾಜಿಕ ಕಾರ್ಯಕರ್ತ ಸಂತೋಷ್ ಕೌಲಗಿ ಅವರ ಪ್ರಕಾರ, ‘ಈಗ ನಡೆಯುತ್ತಿರುವ ಕೃಷಿ ವಿಧಾನದಲ್ಲಿಯೇ ಏನೋ ತಪ್ಪಿದೆ! ಕೃಷಿ ನಂಬಿಕೊಂಡು ಬಂದಿರುವ ಜನರನ್ನು ಬೇರೆ ಕಡೆ ಹೊರಳಿಸುವ ಕೆಲಸ ಸುಲಭವೇನೂ ಅಲ್ಲ. ಪರಂರಪರಾಗತವಾಗಿ ನೆಚ್ಚಿಕೊಂಡು ಬಂದಿರುವ ವ್ಯವಸಾಯವನ್ನು ಬಿಟ್ಟು ಬೇರೆ ಉದ್ಯೋಗಕ್ಕೆ ಮೊರೆ ಹೋಗಲು ಸಾಧ್ಯವಿಲ್ಲ. ಹೀಗಾಗಿ ಕೃಷಿಯೊಂದನ್ನೇ ಆಧರಿಸಿ ಬದುಕುವ ರೀತಿ ಪರಿಷ್ಕರಿಸಬೇಕು ಹಾಗೂ ಕೃಷಿಗೆ ಪೂರಕವಾದ ಉದ್ಯೋಗಗಳ ಸೃಷ್ಟಿ ಆಗಬೇಕು.

ಆರು ದಶಕಗಳಲ್ಲಿ ಆಗಿರುವ ಪಲ್ಲಟಗಳನ್ನು ಅರ್ಥ ಮಾಡಿಕೊಂಡು, ಒಂದಷ್ಟು ಪ್ರಮುಖ ನಿರ್ಧಾರ ಕೈಗೊಳ್ಳಬೇಕು. ಅದರಲ್ಲಿ ಮೊದಲಿಗೆ, ಈ ಹಿಂದೆ ಇದ್ದಂತೆ ಎಲ್ಲ ಕೆರೆ-ಕಟ್ಟೆಗಳೂ ಸದಾ ಕಾಲ ನೀರಿನಿಂದ ತುಂಬಿಕೊಂಡಿರಬೇಕು; ಮಳೆಯಾಶ್ರಿತ ಬೆಳೆಗೆ ಆದ್ಯತೆ ಸಿಗಬೇಕು. ಹೊಲದ ಶೇಕಡ 50ರಷ್ಟು ಭಾಗದಲ್ಲಿ ಮರಗಿಡಗಳು ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮದ ಅರಣ್ಯ, ಖನಿಜ ಸಂಪತ್ತು ಆಯಾ ಗ್ರಾಮದ ಆಸ್ತಿ ಆಗಬೇಕು. ವಿಧ್ವಂಸಕ ವಿಧಾನದ ರಾಸಾಯನಿಕ ಕೃಷಿಗಿಂತ ಸಾವಯವ ಕೃಷಿ ಬೇಕು; ಆದರೆ ಕೃಷಿಯಷ್ಟೇ ಅಲ್ಲ, ಸಾವಯವ ಬದುಕಿನ ಕಡೆ ಜನರು ವಾಲುವಂತೆ ಮಾಡಬೇಕು’ ಎಂಬ ಸಲಹೆ ಅವರದು.

ಪರಾವಲಂಬನೆ ತಪ್ಪಿಸಿ: ಸರ್ಕಾರಗಳೇ ಎಲ್ಲವನ್ನೂ ಮಾಡಬೇಕು ಎಂಬ ಮನೋಭಾವ ದಟ್ಟವಾಗಿ ಆವರಿಸಿದೆ. ಇದು ಅಭಿವೃದ್ಧಿಗೆ ಅಡ್ಡಿ ಉಂಟುಮಾಡುವ ಅಪಾಯವೂ ಇದೆ!
ಕೇವಲ ಐವತ್ತು ವರ್ಷಗಳ ಹಿಂದೆ ಸ್ವಾವಲಂಬಿಯಾಗಿದ್ದ ರೈತ, ಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಅಂಗಲಾಚುವ ಸ್ಥಿತಿ ಈಗಿನದು. ದೂರದೃಷ್ಟಿಯಿಲ್ಲದೆ ಬರೀ ಕೊಡುವು­ದನ್ನೇ ಮುಂದುವರಿಸುವ ಸರ್ಕಾರದ ಯೋಜನೆಗಳು ರೈತರನ್ನು ಈ ಸ್ಥಿತಿಗೆ ತಂದಿಟ್ಟಿವೆ. ‘ಕಂಪೆನಿಗಳಿಗಾಗಿ ಬಿತ್ತನೆ ಬೀಜ ಉತ್ಪಾದಿಸಿ ಕೊಡುವ ರೈತ, ತನ್ನ ಜಮೀನಿಗೆ ಬೀಜ ಬೇಕೆಂದು ರೈತ ಸಂಪರ್ಕ ಕೇಂದ್ರದ ಎದುರು ನಿಲ್ಲುವುದು ಏನನ್ನು ಹೇಳುತ್ತದೆ? ಇದನ್ನು ಗಮನಿಸಿ, ಗ್ರಾಮ ಅಥವಾ ಹೋಬಳಿ ಮಟ್ಟದಲ್ಲಿ ಬೀಜೋತ್ಪಾದಕರ ಗುಂಪು ರಚಿಸಿ, ಆ ಪ್ರದೇಶದ ಬಿತ್ತನೆ ಬೀಜದ ಬೇಡಿಕೆಯನ್ನು ಅಲ್ಲಿಯೇ ಪೂರೈಸಬಹುದು. ಇದು ಕಂಪೆನಿಗಳ ಲಾಭಕೋರತನಕ್ಕೂ ಕಡಿವಾಣ ಹಾಕುತ್ತದೆ. ರೈತರಲ್ಲಿ ಉದ್ಯಮಶೀಲತೆಗೂ ಪ್ರೇರೇಪಣೆ ನೀಡುತ್ತದೆ’ ಎಂದು ಸಿರಿಧಾನ್ಯ ಬೆಳೆಗಾರರ ಸಂಘದ ಸಂಚಾಲಕ ಹಾಗೂ ಕೃಷಿಕ ಚನ್ನಬಸಪ್ಪ ಕೊಂಬಳಿ ಸಲಹೆ ಮಾಡುತ್ತಾರೆ.

ಕೃಷಿಯನ್ನು ಸಮಗ್ರವಾಗಿ ಯೋಚಿಸದೆ ಸಣ್ಣ ಸಣ್ಣ ಘಟಕಗಳಾಗಿ  ನೋಡುವುದರಿಂದಲೇ ಈ ಬಿಕ್ಕಟ್ಟು ಉಂಟಾಗಿದೆ ಎಂಬ ಟೀಕೆಯೂ ಇದೆ. ಇದರ ಪರಿಣಾಮವಾಗಿ ತೋಟಗಾರಿಕೆ, ಹೈನುಗಾರಿಕೆ, ಕೋಳಿ, ಮೀನು ಸಾಕಣೆ ಎಂಬೆಲ್ಲ ವಿಭಾಗಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನೆಲ್ಲ ಒಂದೇ ಸೂರಿನಡಿ ತರಬೇಕು. ಇದರಿಂದ ಇಲಾಖೆಗಳ ಲಾಜಿಸ್ಟಿಕ್‌ಗೆ ಮಾಡುವ ಖರ್ಚಿನಲ್ಲಿ ಸಾಕಷ್ಟು ಉಳಿತಾಯವಾಗಿ, ಆ ಹಣವನ್ನೇ ಒಂದಷ್ಟು ಹೊಸ ಯೋಜನೆಗಳಿಗೆ ಬಳಸಬಹುದು.

‘ಇಷ್ಟು ದಿನ ರಸವಿಷಗಳ ಪ್ರಚಾರದಲ್ಲಿ ಕಳೆದುಹೋಗಿದ್ದ ವಿಶ್ವವಿದ್ಯಾಲಯಗಳು ಈಗ ಸಾವಯವ ಕೃಷಿ ಹಿಂದೆ ಬಿದ್ದಿವೆ. ಆಗಾಗ್ಗೆ ಅರಣ್ಯ ಕೃಷಿ ಬಗ್ಗೆಯೂ ಮಾತಾಡುತ್ತಿವೆ. ಮಾಧ್ಯಮಗಳು ಆಯಾ ಕಾಲಘಟ್ಟದಲ್ಲಿ ಬಿಂಬಿಸಿದ್ದನ್ನೇ ಕೈಗೆತ್ತಿಕೊಂಡು ತಮ್ಮ ದಾರಿಯಲ್ಲಿ ಓಡಿದ್ದು ಕೃಷಿ ವಿವಿಗಳ ಸಾಧನೆಯಾಗಿದೆ’ ಎಂದು ಅಭಿಪ್ರಾಯಪಡುತ್ತಾರೆ ಕೃಷಿ- ಪರಿಸರ ಕಾರ್ಯಕರ್ತ ಶಿವಾನಂದ ಕಳವೆ.

‘ಮೂರು ವರ್ಷದ ಯೋಜನೆ ಜಾರಿ ಮಾಡುವ ವಿವಿಗಳಿಗೆ ರೈತರ ಮೂಲ ಸಮಸ್ಯೆ ಅರಿವಿರುವುದೇ ಇಲ್ಲ. ಪ್ರಯೋಗಾಲಯದ ಹತ್ತು- ಹತ್ತು ಅಡಿ ಜಾಗದ ಪ್ರಯೋಗದ ಫಲಿತಾಂಶವನ್ನು ಎಕರೆಗೆ ಅನ್ವಯಿಸಿದಾಗ ಸೋತಿದ್ದೇ ಜಾಸ್ತಿ ಎಂಬುದು ಗೊತ್ತಾಗುತ್ತದೆ. ನಾಲ್ಕೈದು ದಶಕಗಳ ಕಾಲ ಯಾರೂ ಕೇಳಲೇ ಇಲ್ಲ. ಇನ್ನು ಮುಂದಾದರೂ ಈ ವೈಫಲ್ಯದ ಉತ್ತರದಾಯಿತ್ವವನ್ನು ಹೊತ್ತುಕೊಳ್ಳುವ ಪರಿಪಾಠವನ್ನು ಶುರುಮಾಡಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ಏಕೈಕ ದಾರಿ ‘ಯೂ-’ ಟರ್ನ್!: ಹಿಂದಿನ ಆರು ದಶಕಗಳಲ್ಲಿ ಆಗಿದ್ದನ್ನು ನೋಡಿದರೆ, ಈಗ ತುರ್ತಾಗಿ ‘ಯೂ-ಟರ್ನ್’ ತೆಗೆದುಕೊಳ್ಳುವುದೇ ಬಿಕ್ಕಟ್ಟಿಗೆ ಪರಿಹಾರ !
…ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ ಹಿಂದೆ ಇದ್ದ ಸುಸ್ಥಿರ ಕೃಷಿ ವಿಧಾನವನ್ನು ಮತ್ತೆ ಅಳವಡಿಸಿಕೊಳ್ಳುವುದು. ಇದರೊಂದಿಗೆ ಶೀಘ್ರ ಹಾಗೂ ದೂರಗಾಮಿ ಕ್ರಮ ಕೈಗೊಳ್ಳುವುದು ಕೂಡ ಅಗತ್ಯ.

ಅಧಿಕ ಇಳುವರಿಗೆ ಪ್ರಚೋದಿಸಿ, ರೈತರನ್ನು ನಾಗಾಲೋಟಕ್ಕೆ ಹಚ್ಚಿದವರು ಆ ಬಳಿಕದ ಪ್ರಕ್ರಿಯೆ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ. ಇದರ ಪರಿಣಾಮವೇ ಬೆಲೆ ಕುಸಿತ. ರಾಜ್ಯದಲ್ಲಿ ಉತ್ಪಾದನೆಯಾಗುವ ಭತ್ತ, ಜೋಳ, ತೊಗರಿ, ಕಬ್ಬು, ಈರುಳ್ಳಿ, ಟೊಮ್ಯಾಟೊ ಉತ್ಪನ್ನಕ್ಕೆಲ್ಲ ಇದೇ ಗತಿ. ಮಾರುಕಟ್ಟೆಗೂ ಉತ್ಪಾದನೆ ಗುರಿಗೂ ತಾಳಮೇಳವಿಲ್ಲ­ದಾಗ ಈ ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ‘ಇಂಥ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬಾರದೆ ಮತ್ತಾರು ಮುಂದಾಗಬೇಕು’ ಎಂದು ಪ್ರಶ್ನಿಸುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ.

ರೈತರ ಆತ್ಮಹತ್ಯೆಯಲ್ಲಿ ದೇಶಕ್ಕೆ ಮೂರನೇ ಸ್ಥಾನ ಪಡೆದ ಕರ್ನಾಟಕದಲ್ಲಿ ದೊಡ್ಡದೊಂದು ಪ್ರಶ್ನೆ ಎದುರಾಗಿದೆ: ಈ ಬಿಕ್ಕಟ್ಟಿನಿಂದ ರೈತರನ್ನು ಪಾರು ಮಾಡುವುದು ಹೇಗೆ? ಇದಕ್ಕೆ ಎರಡು ದಾರಿಗಳನ್ನು  ಮಾನ್ಪಡೆ ಮುಂದಿಡುತ್ತಾರೆ. ‘ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡುವುದು ಬಹುಮುಖ್ಯ. ಬೇಸಾಯ ವೆಚ್ಚಕ್ಕೆ ಶೇಕಡ 50ರಷ್ಟನ್ನು ಸೇರಿಸಿ, ಬೆಲೆ ನಿಗದಿ ಮಾಡಬೇಕು. ಇದು ತಕ್ಷಣಕ್ಕೆ ಕೊಡಬಹುದಾದ ಪರಿಹಾರ.

ಇನ್ನು ದೀರ್ಘಾವಧಿಯಲ್ಲಿ, ಉದಾರೀಕರಣದ ಮಾರ್ಗ ಕೈಬಿಟ್ಟು ಸ್ಥಳೀಯವಾಗಿ ಮಾರುಕಟ್ಟೆ ರೂಪಿಸಬೇಕು. ಒಂದು ಉತ್ಪನ್ನ ನೂರು ಕಿಲೋಮೀಟರ್ ದೂರ ಕ್ರಮಿಸಿ, ಮೌಲ್ಯವರ್ಧನೆಯಾಗಿ ಮತ್ತೆ ಮೂಲಸ್ಥಳಕ್ಕೆ ಬರುವ ಬದಲಿಗೆ ಅದು ಅಲ್ಲಿಯೇ ಬಳಕೆಯಾಗುವಂತೆ ರೂಪಿಸಬೇಕು. ಇದರಿಂದ ಸ್ಥಳೀಯ ಮಾರುಕಟ್ಟೆ ಬಲಗೊಳ್ಳುತ್ತದೆ.’

ಸಮಗ್ರ ಮಾಹಿತಿ (ಡೆಟಾ ಬೇಸ್) ಬೇಕು: ಅಪಾರ ಸಂಪನ್ಮೂಲ, ಸುಲಭ ತಂತ್ರಜ್ಞಾನ ಲಭ್ಯವಿದ್ದರೂ ಲಕ್ಷಾಂತರ ಉತ್ಪಾದಕರು, ಉತ್ಪಾದನೆಯ ಸಮಗ್ರ ಮಾಹಿತಿ (ಡೇಟಾ ಬೇಸ್) ಒಂದೆಡೆ ಇಲ್ಲದೇ ಇರುವುದು ಬಹು ದೊಡ್ಡ ಕೊರತೆ. ಇದರಿಂದಾಗಿ ಯಾವ ಭಾಗದ ರೈತರು ಏನು ಬೆಳೆಯುತ್ತಿದ್ದಾರೆ, ಎಷ್ಟು ಪ್ರಮಾಣದ ಉತ್ಪನ್ನ ಯಾವಾಗ ಸಿಗಲಿದೆ ಎಂಬ ಮಾಹಿತಿ ಯವ ಇಲಾಖೆ ಬಳಿಯೂ ಇಲ್ಲ. ‘ಒಂದು ವೇಳೆ ಈ ಮಾಹಿತಿ ಒಂದೇ ಕಡೆ ಲಭ್ಯವಾಗುವಂತಾದರೆ ಎಷ್ಟು ಸಂಗ್ರಹಾಗಾರ, ಶೀತಲಗೃಹ ಅಗತ್ಯ, ಮೌಲ್ಯವರ್ಧನೆಗೆ ಎಷ್ಟು ಮೀಸಲಿಡಬಹುದು, ಎಷ್ಟು ಪ್ರಮಾಣ ರಫ್ತು ಮಾಡಬಹುದು, ರಾಜ್ಯದ ಬಳಕೆ ಎಷ್ಟು ಎಂಬ ಮಾಹಿತಿಯನ್ನೆಲ್ಲ ತಿಳಿಯಬಹುದು.

ಅಂಕಿ- ಅಂಶಗಳ ಡೇಟಾ ಬೇಸ್ ಇಲ್ಲದೇ ಇರುವುದರಿಂದ ಪ್ರತಿ ವರ್ಷ ಬೆಳೆ ಬೆಳೆಯುವ ಪ್ರಮಾಣ ಗೊತ್ತುಗುರಿಯಿಲ್ಲದಂತೆ ಸಾಗುತ್ತಿದೆ. ಬಿತ್ತನೆಯಿಂದ ಹಿಡಿದು ಮಾರುಕಟ್ಟೆಯವರೆಗೂ ಏನೇನು ನಡೆಯುತ್ತಿದೆ ಎಂಬ ಮಾಹಿತಿ ಸರ್ಕಾರದ ಬಳಿ ಇದ್ದರೆ ಎಷ್ಟೋ ಸಮಸ್ಯೆಗಳಿಗೆ ಸರಳ ಪರಿಹಾರ ಸಿಗುತ್ತದೆ. ಗ್ರಾಮ ಮಟ್ಟದಲ್ಲಿರುವ ಹಾಲು ಸಂಗ್ರಹ ಕೇಂದ್ರಗಳನ್ನು ಬಳಸಿಕೊಂಡರೆ, ನಿತ್ಯದ ಕೃಷಿ ಚಟುವಟಿಕೆಗಳ ಡೇಟಾ ಬೇಸ್ ತಯಾರಿಸಬಹುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ನಾರಾಯಣಗೌಡ ಹೇಳುತ್ತಾರೆ.

ಪ್ರಾಕೃತಿಕ ಸಂಪನ್ಮೂಲ, ರೈತರ ಜಾಣ್ಮೆ, ಪೂರಕ ವಾತಾವರಣ ಇದ್ದುಕೊಂಡೂ ರೈತ ಸೋತಿರುವುದರ ಹಿಂದೆ ಹಲವು ಕಾರಣಗಳಿವೆ. ಹಳೆಯ ಪದ್ಧತಿಗಳ ನಿರ್ಲಕ್ಷ್ಯದಿಂದ ಹಿಡಿದು ಹೊಸ ಹೊಸ ವಿಧಾನಗಳ ವೈಫಲ್ಯದವರೆಗೆ ಕಾರಣಗಳನ್ನು ಪಟ್ಟಿ ಮಾಡಬಹುದು. ರೈತರಿಗೆ ನೆರವಾಗಬೇಕಿರುವ ಆಧುನಿಕ ತಂತ್ರಜ್ಞಾನ ಕೂಡ ಅವರನ್ನು ಬೆಂಕಿಗೆ ದೂಡುತ್ತಿದೆ. ಪರಂಪರೆಯ ಸಾಂಪ್ರದಾಯಿಕ ಜ್ಞಾನವೆಲ್ಲ ವ್ಯರ್ಥ ಎಂದು ಆಚೆಗೆ ಎಸೆದ ರೈತರು, ಇಷ್ಟು ಕಾಲದವರೆಗೂ ಪುಸ್ತಕದ ಬದನೇಕಾಯಿ ಅವಲಂಬಿಸಿದ್ದೇ ದುರಂತಕ್ಕೆ ಕಾರಣ ಎಂಬ ಆರೋಪವನ್ನು ಕೆಲವು ಕೃಷಿ ವಿಜ್ಞಾನಿಗಳೇ ಒಪ್ಪಿಕೊಳ್ಳುತ್ತಾರೆ. ಅಕಾಡೆಮಿಕ್ ಜ್ಞಾನಬಲದಲ್ಲಿ ಬೆಳೆದ ಬದನೇಕಾಯಿ ಬಿಟ್ಟು ಈಗ ಬಿ.ಟಿ. ಬದನೇಕಾಯಿ ಬೆಳೆಯಲು ಹೊರಟವರ ಕಥೆ ಏನಾಗುತ್ತದೋ?

ನಾಳೆಯ ಕೃಷಿ ಯೋಜನೆ ಹೇಗಿರಬೇಕು?
* ರೈತ ಸ್ನೇಹಿ ತಂತ್ರಜ್ಞಾನ: ಲಕ್ಷಾಂತರ ಬೆಲೆಯ ಯಂತ್ರಗಳ ಬದಲಿಗೆ ಸರಳ ಹಾಗೂ ಅಲ್ಪ ವೆಚ್ಚದ ಯಂತ್ರಗಳನ್ನು ವಿನ್ಯಾಸ ಮಾಡಿ, ರೈತರಿಗೆ ಕೊಡಬೇಕು. ವರ್ಷದಲ್ಲಿ ಮೂರ್ನಾಲ್ಕು ತಿಂಗಳು ಮಾತ್ರ ಕೆಲಸಕ್ಕೆ ಬರುವ ಯಂತ್ರಕ್ಕೆ ಸಣ್ಣ- ಮಧ್ಯಮ ರೈತರು ಲಕ್ಷಗಟ್ಟಲೇ ಖರ್ಚು ಮಾಡಲು ಸಾಧ್ಯವೇ?

* ಸ್ಥಳೀಯ ಮಾರುಕಟ್ಟೆ: ಒಂದು ಪ್ರದೇಶದಲ್ಲಿ ಬೆಳೆಯುವ ಉತ್ಪನ್ನಕ್ಕೆ ಅಲ್ಲೇ ಮಾರುಕಟ್ಟೆ ಕಲ್ಪಿಸಬೇಕು. ಮಲೆನಾಡಿನ ಹಲಸು ಬೆಂಗಳೂರು ತಲುಪಿ, ಅಲ್ಲಿಂದ ಮತ್ತೆ ಮಲೆನಾಡಿನ ಹಳ್ಳಿ- ಪಟ್ಟಣಕ್ಕೆ ಹೋಗಿ ಚಿಪ್ಸ್ ಆಗುವುದರಲ್ಲಿ ಯಾವ ಅರ್ಥವಿದೆ?

* ಮಿಶ್ರಬೆಳೆ ಪದ್ಧತಿಗೆ ಮರುಜೀವ: ಕುಟುಂಬವೊಂದಕ್ಕೆ ಅಗತ್ಯವಾಗುವ ಆಹಾರ ಪದಾರ್ಥ ಬೆಳೆದುಕೊಳ್ಳುವ ಮಿಶ್ರಬೆಳೆ (ಅಕ್ಕಡಿ) ವಿಧಾನವನ್ನು ಮತ್ತೆ ಚಾಲ್ತಿಗೆ ತರಬೇಕು. ಇದರಿಂದ ಖಂಡಿತವಾಗಿಯೂ ಮಾರುಕಟ್ಟೆ ಮೇಲಿನ ಅವಲಂಬನೆ ತಪ್ಪುತ್ತದೆ.

* ಮಳೆ ನೀರು ಸಂಗ್ರಹ: ಬರೀ ಕಾಗದದ ಮೇಲಷ್ಟೇ ಉಳಿದಿರುವ ‘ಮಳೆನೀರು ಸಂಗ್ರಹ’ ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ. ಈ ಹಿಂದೆ ಜಾರಿಯಲ್ಲಿದ್ದ ಜಲಾನಯನ ಯೋಜನೆಯನ್ನು ಪರಿಷ್ಕರಿಸಿ, ಲೋಪದೋಷ ಸರಿಪಡಿಸಿ ಸಮರ್ಪಕ ಯೋಜನೆ ರೂಪಿಸಬೇಕು.

* ಉಪಕಸುಬುಗಳಿಗೆ ಉತ್ತೇಜನ: ಬೆಳೆ ಬೆಳೆಯುವುದಷ್ಟೇ ಕೃಷಿಯಲ್ಲ! ಅದರ ಜತೆಗೆ ಹೈನುಗಾರಿಕೆ, ಕೋಳಿ, ಮೀನು, ಜೇನುಸಾಕಣೆಗೂ ಉತ್ತೇಜನ ಕೊಡಬೇಕು.

* ಸಂಸ್ಕರಣೆಗೆ ಆದ್ಯತೆ: ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಅವುಗಳ ಸಂಸ್ಕರಣೆಯೇ ದೊಡ್ಡ ಸಮಸ್ಯೆ. ಹೋಬಳಿ ಮಟ್ಟದಲ್ಲಿ ಸಿರಿಧಾನ್ಯ ಸಂಸ್ಕರಣೆ ಘಟಕ ಸ್ಥಾಪಿಸಲು ಹೆಚ್ಚೆಚ್ಚು ಧನಸಹಾಯ ಕೊಡಬೇಕು.

* ಮೌಲ್ಯವರ್ಧನೆ: ಉತ್ಪನ್ನವನ್ನು ನೇರವಾಗಿ ಮಾರುವುದಕ್ಕಿಂತ ಮೌಲ್ಯವರ್ಧನೆ ಮಾಡುವುದು ಹೆಚ್ಚು ಲಾಭ. ಈ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ಆಹಾರ ವಿಭಾಗವು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು.

* ದೇಸಿ ತಳಿಗೆ ಪ್ರಾಮುಖ್ಯ: ಅಧಿಕ ಇಳುವರಿ ತಳಿಗಳು ವಾತಾವರಣ ವೈಪರೀತ್ಯ ಸಹಿಸಿಕೊಳ್ಳುವಲ್ಲಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಬದಲಾವಣೆ ಬಿಕ್ಕಟ್ಟಿಗೆ ಉತ್ತರ ಕೊಡುವ ದೇಸಿ ತಳಿಗಳನ್ನು ವ್ಯಾಪಕವಾಗಿ ಬಳಸಲು ಪ್ರಚಾರ ನಡೆಸಬೇಕು.

‘ಯೋಜನೆಗೆ ದೂರದೃಷ್ಟಿ ಅಗತ್ಯ’
ನಾವು ನಮಗೇನು ಬೇಕೋ ಅದನ್ನು ಬೆಳೆಯಬೇಕು. ಆದರೆ, ಇವತ್ತು ಬೇಡದ್ದನ್ನೇ ಬೆಳೆಯುವುದು ಹೆಚ್ಚಾಗಿದೆ. ಯೋಜನೆಗಳಲ್ಲಿ ಬೆಳೆಯುವುದಕ್ಕಷ್ಟೇ ಗಮನಕೊಟ್ಟರೆ ಸಾಲದು. ಜತೆಗೆ ನೀರಿನ ಕ್ಷಮತೆ, ಮಣ್ಣಿನ ರಕ್ಷಣೆ, ಜೀವವೈವಿಧ್ಯ, ಆಹಾರ ಸುರಕ್ಷತೆಯ ದೃಷ್ಟಿಯನ್ನು ಗಮನಿಸಬೇಕು. ಇವತ್ತು ಬೆಳೆಗಳ ಕೃಷಿ ವೆಚ್ಚ ಲೆಕ್ಕ ಹಾಕಿದರೆ ನಕಾರಾತ್ಮಕ ಅಂಶವೇ ಎದ್ದು ಕಾಣುತ್ತಿದೆ.

‘ರಸಗೊಬ್ಬರಕ್ಕೆ ಸಬ್ಸಿಡಿ ಕೊಡುವ ಮುನ್ನ, ಲಕ್ಷಾಂತರ ಹೆಕ್ಟೇರ್ ಭೂಮಿ ಸತ್ವಾಂಶ ಕಳೆದುಕೊಳ್ಳುತ್ತದೆ ಎಂಬ ಅರಿವಿರಬೇಕು. ರಸಗೊಬ್ಬರ ಅತಿ ಬಳಕೆಯಿಂದಾಗಿ ಮಣ್ಣಿನಲ್ಲಿ ಮೆಗ್ನೀಷಿಯಂ ಕಡಿಮೆಯಾದರೆ ಮಧುಮೇಹ ಹೆಚ್ಚಾಗುತ್ತದೆ, ಸೆಲಿನಿಯಂ ಕಡಿಮೆಯಾದರೆ ಇನ್ ಫರ್ಟಲಿಟಿ ಪ್ರಮಾಣ ಹೆಚ್ಚಾಗುತ್ತದೆ’ ಎಂಬ ಅಂಶಗಳನ್ನು ಗಮನಿಸಬೇಕು. ವಾಣಿಜ್ಯ ಕೃಷಿಯ ಹೆಸರಲ್ಲಿ ಜಾನುವಾರುಗಳ ‘ಫೀಡ್’ ಮನುಷ್ಯನ ‘ಫುಡ್’ ಜತೆಗೆ ಸ್ಪರ್ಧೆಗೆ ಇಳಿಯುತ್ತಿದೆ. ಇಲ್ಲಿ ಫೀಡ್ ಉತ್ಪಾದಿಸಿ ರಫ್ತು ಮಾಡಿ ನೆರೆಯಿಂದ ಫುಡ್ ತರಿಸಿಕೊಳ್ಳುತ್ತಿದ್ದೇವೆ. ಯೋಜನೆ ತಯಾರಿಗೆ ಮುನ್ನ ಇವುಗಳನ್ನು ಗಮನದಲ್ಲಿಟ್ಟುಕೊಂಡರೆ ಸೂಕ್ತ.
– ಡಾ. ಕೆ.ಸಿ.ರಘು, ಆಹಾರ ತಜ್ಞ

*

‘...ಕೃಷಿಗೇಕೆ ಆಗೋದಿಲ್ಲ’
ಕೃಷಿ ಎಂಬುದು ರೈತನ ಏಕಮಾತ್ರ ಆದಾಯಮೂಲವಾಗಿ ಉಳಿದಿಲ್ಲ. ಆದ್ದರಿಂದ ಉಪಕಸುಬುಗಳು ಮತ್ತು ಕಿರು ಕೃಷಿ ಆಧಾರಿತ ಉದ್ದಿಮೆಗಳನ್ನು ಸ್ಥಳೀಯವಾಗಿ ಜೋಡಿಸಬೇಕು. ಮಾರುಕಟ್ಟೆಯ ಸ್ಥಿರೀಕರಣಕ್ಕೆ ಶಾಶ್ವತ ಮೆಕಾನಿಸಂ ಸ್ಥಾಪಿಸಬೇಕು. ಉದಾಹರಣೆಗೆ,ಯಾವುದೇ ಬೆಳೆಯನ್ನು ಸರ್ಕಾರ ತಾನಾಗಿಯೇ ಬೆಂಬಲ ಬೆಲೆ ಕೊಟ್ಟು ಕೊಂಡುಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡುವಂತಿರಬೇಕು. ಕಬ್ಬು, ತಂಬಾಕು, ಭತ್ತಕ್ಕೆ ಇದು ಸಾಧ್ಯವೆಂದಾದರೆ, ಹಾಲಿನಲ್ಲಿ ಇದು ಆಗುತ್ತೆ ಎಂದಾದರೆ, ಉಳಿದ ಬೆಳೆಗಳಿಗೆ ಕಷ್ಟವೇ?
ಎಲ್ಲರೂ ಕೃಷಿಗೆ ಮರಳುವಂತೆ ಮಾಡುವುದು ಕಷ್ಟ. ಆದರೆ ಹೊಸ ಯುವಕರಿಗೆ -ಮಹಿಳೆಯರಿಗೆ ಆದ್ಯತೆ ಮೇರೆಗೆ ಕೃಷಿ ಸಂಬಂಧಿ ನೆರವು ಒದಗಿಸುವ ವ್ಯವಸ್ಥೆ ಮಾಡುವುದು ಕಷ್ಟವಲ್ಲ. ನವೋದ್ಯಮಗಳಿಗೆ ಕೋಟ್ಯಂತರ ರೂಪಾಯಿ ಸಹಾಯ ಮಾಡಬಹುದಾದರೆ ಇದನ್ನೂ ಮಾಡಬಹುದು. ಗ್ರಾಮದೊಳಗೇ (ಹೋಬಳಿ ಒಳಗೆ) ಕೃಷಿ ಆಧಾರಿತ, ಜೀವನೋಪಾಯಗಳನ್ನು ಹೆಣೆಯುವ ಬಗ್ಗೆ ನಮ್ಮ ಯೋಜನಾ ತಜ್ಞರು ಚಿಂತಿಸಬೇಕಾಗಿದೆ. ಇಳುವರಿಯನ್ನು ಹೆಚ್ಚಿಸುವ ಬಗೆಯನ್ನು ರೈತ ಸ್ನೇಹೀ ಭಾಷೆ ಮತ್ತು ತಾಂತ್ರಿಕತೆ ಮೂಲಕ ತಿಳಿಸಬೇಕಾಗಿದೆ.
- ಕೆ.ಪಿ ಸುರೇಶ್, ಕೃಷಿ ಚಿಂತಕ

*

‘ಸಹಕಾರ ಮಾದರಿಯೇ ಪರಿಹಾರ’
ಭೂ ಸುಧಾರಣೆ ಜಾರಿ, ಕೃಷಿ ನೀತಿ, ಕೃಷಿ ಬಜೆಟ್ ಎಲ್ಲ ವಿಷಯದಲ್ಲೂ ಕರ್ನಾಟಕವೇ ಮುಂದು. ಆದರೆ, ಈ ಸುಧಾರಣೆ ಮುಂದಕ್ಕೆ ಹೋಗಿಲ್ಲ. ಭೂಮಿ ಒಡೆತನ ಸಿಕ್ಕಿತೇ ವಿನಃ, ನಂತರದ ಏನಾಗಬೇಕೆಂಬ ಚಿಂತನೆ ನಡೆಯಲಿಲ್ಲ. ಭೂ ಸುಧಾರಣೆಯಲ್ಲಿ ಸಹಕಾರಿ ಕೃಷಿಗೆ ಒತ್ತು ಕೊಡಬೇಕಂಬ ವಿಚಾರವಿದೆ. ಅದು ಎಲ್ಲೂ ಚಾಲ್ತಿಗೆ ಬರಲಿಲ್ಲ. ಕರ್ನಾಟಕದ ಇವತ್ತಿನ ಪರಿಸ್ಥಿತಿಯಲ್ಲಿ ಕೃಷಿ ಕ್ಷೇತ್ರದ ಎಲ್ಲ ಹಂತದಲ್ಲೂ ಸಹಕಾರಿ ತತ್ವದಡಿ ಯೋಜನೆ ರೂಪಿಸುವ ಅಗತ್ಯವಿದೆ. ಅದು ಕೊಳವೆ ಬಾವಿ ನೀರು ಹಂಚಿಕೊಳ್ಳುವುದು, ವ್ಯವಸಾಯ, ಯಂತ್ರಗಳ ಬಳಕೆ, ಮೌಲ್ಯವರ್ಧನೆಯಿಂದ ಮಾರುಕಟ್ಟೆಯವರೆಗೂ ಜಾರಿಯಾಗಬೇಕು. ಮಹಾಮಂಡಲ, ಒಕ್ಕೂಟದ ಮಾದರಿ­ಯಲ್ಲಿ ರೈತರು ಮಾರುಕಟ್ಟೆಗೆ ಇಳಿದರೆ ತಮ್ಮ ಬೆಳೆಗೆ ತಾವೇ ಬೆಲೆ ನಿರ್ಧರಿಸಲು ಸಾಧ್ಯವಾಗುತ್ತದೆ. ಒಗ್ಗಟ್ಟಿನ ಹೆಜ್ಜೆಗಳಿಂದ ಶ್ರಮ ಕಡಿಮೆಯಾಗಿ, ದುಡಿಮೆ ಹೆಚ್ಚಾಗಿ, ಫಲಿತಾಂಶವೂ ಸುಸ್ಥಿರವಾಗುತ್ತದೆ.
– ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ,
ಅಧ್ಯಕ್ಷರು, ಕೃಷಿ ಬೆಲೆ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT