ಗುರುವಾರ , ಡಿಸೆಂಬರ್ 12, 2019
17 °C

ಅಮೆರಿಕ ಅಧ್ಯಕ್ಷ ಗಾದಿಯ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೆರಿಕ ಅಧ್ಯಕ್ಷ ಗಾದಿಯ ಹಾದಿ

ಅಮೆರಿಕವು ಅಧ್ಯಕ್ಷೀಯ ಪದ್ಧತಿಯ ಆಡಳಿತ ವ್ಯವಸ್ಥೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರ. ಆದರೂ, ಅಲ್ಲಿ ಚಾಲ್ತಿಯಲ್ಲಿರುವುದು ಪರೋಕ್ಷ ಮತದಾನ ಪದ್ಧತಿ. ಅಂದರೆ ಸರ್ಕಾರದ ಮುಖ್ಯಸ್ಥರಾದ ಅಧ್ಯಕ್ಷರನ್ನು ಜನರು ನೇರವಾಗಿ ಆಯ್ಕೆ ಮಾಡುವುದಿಲ್ಲ. ಜನರು ಚಲಾಯಿಸುವ ಮತಗಳು ಅಭ್ಯರ್ಥಿಯ ಗೆಲುವು–ಸೋಲನ್ನು ನಿರ್ಧರಿಸುವುದಿಲ್ಲ. ಬದಲಿಗೆ ಪ್ರತಿ ರಾಜ್ಯಗಳಲ್ಲಿರುವ ಎಲೆಕ್ಟೋರಲ್‌ಗಳು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಅಮೆರಿಕದ ಅಷ್ಟೂ ರಾಜ್ಯಗಳಲ್ಲಿ ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಅಮೆರಿಕದ ಕಾಂಗ್ರೆಸ್‌ನ ಸದಸ್ಯರ (ಸೆನೆಟ್ ಮತ್ತು ಪ್ರತಿನಿಧಿಸಭೆ ಸದಸ್ಯರು) ಸಂಖ್ಯೆ ನಿಗದಿಯಾಗುತ್ತದೆ. ಪ್ರತಿ ರಾಜ್ಯದಲ್ಲಿರುವ ಕಾಂಗ್ರೆಸ್‌ ಸದಸ್ಯರ ಸಂಖ್ಯೆಯಷ್ಟೇ ಎಲೆಕ್ಟೋರಲ್‌ಗಳಿರುತ್ತಾರೆ.

ಹಂತ- 1

ಎಲೆಕ್ಟೋರಲ್ ಕಾಲೇಜ್‌

ಎಲೆಕ್ಟೋರಲ್ ಕಾಲೇಜ್‌ ಅನ್ನು ಚುನಾಯಕರ ಕೂಟ ಎಂದು ಅರ್ಥೈಸಿಕೊಳ್ಳಬಹುದು. ಎಲೆಕ್ಟೋರಲ್‌ಗಳಾಗಿ ಆಯ್ಕೆಯಾಗುವವರು ಸೆನೆಟ್ ಸದಸ್ಯರಾಗಿರಬಾರದು ಮತ್ತು ಸರ್ಕಾರದ ಯಾವುದೇ ಲಾಭದಾಯಕ ಹುದ್ದೆಯಲ್ಲಿರಬಾರದು. ಈ ಅರ್ಹತೆ ಇರುವವರನ್ನು ಎರಡೂ ಪಕ್ಷಗಳು ಆಯ್ಕೆ ಮಾಡುತ್ತವೆ. ಆದರೆ ಅಷ್ಟಕ್ಕೇ ಎಲೆಕ್ಟೋರಲ್‌ಗಳ ಆಯ್ಕೆ ಪೂರ್ಣವಾಗುವುದಿಲ್ಲ. ನವೆಂಬರ್‌ನ ಚುನಾವಣೆಯ ಬಹುಮತದ ಲೆಕ್ಕಾಚಾರದಲ್ಲಿ ಪಕ್ಷಗಳ ಎಲೆಕ್ಟೋರಲ್‌ಗಳು ಆಯ್ಕೆಯಾಗುತ್ತಾರೆ. ಅಧ್ಯಕ್ಷೀಯ ಅಭ್ಯರ್ಥಿ ಪರ ಬಂದಿರುವ ಮತಗಳ ಆಧಾರದಲ್ಲಿ ಪಕ್ಷಗಳ ನಡುವೆ ಎಲೆಕ್ಟೋರಲ್‌ಗಳ ಸಂಖ್ಯೆ ಹಂಚಿಕೆಯಾಗುತ್ತದೆ.

‘ಭಿನ್ನ’ ಮತಗಳು

ಮೈನ್ ಮತ್ತು ನೆಬ್ರಾಸ್ಕ ರಾಜ್ಯಗಳಲ್ಲಿ ಜಿಲ್ಲಾವಾರು ಗರಿಷ್ಠ ಮತಗಳಿಕೆ ಆಧಾರದಲ್ಲಿ ಜಿಲ್ಲೆಗೊಬ್ಬರಂತೆ ಎಲೆಕ್ಟೋರಲ್‌ಗಳನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯವಾರು ಗರಿಷ್ಠ ಮತಗಳಿಕೆ ಆಧಾರದಲ್ಲಿ ತಲಾ ಇಬ್ಬರು ಎಲೆಕ್ಟೋರಲ್‌ಗಳು ಆಯ್ಕೆಯಾಗುತ್ತಾರೆ. ಮೈನ್‌ನ ಎರಡು ಜಿಲ್ಲೆಗಳಿಂದ ಇಬ್ಬರು ಹಾಗೂ ರಾಜ್ಯದಿಂದ ಇಬ್ಬರು ಎಲೆಕ್ಟೋರಲ್‌ಗಳು ಆಯ್ಕೆಯಾಗುತ್ತಾರೆ. ಇನ್ನು ನೆಬ್ರಾಸ್ಕದ ಮೂರು ಜಿಲ್ಲೆಗಳಿಂದ ಮೂವರು ಹಾಗೂ ರಾಜ್ಯದಿಂದ ಇಬ್ಬರು ಆಯ್ಕೆಯಾಗುತ್ತಾರೆ.

51% ಮತ ಪಡೆದರೆ ಸಾಕು...

ಒಬ್ಬ ಅಭ್ಯರ್ಥಿ ಪ್ರತಿ ರಾಜ್ಯದಲ್ಲಿ ಶೇ  51ಕ್ಕಿಂತಲೂ ಹೆಚ್ಚಿನ ಮತಗಳನ್ನು ಪಡೆದರೆ ಸಾಕು, ಆ ರಾಜ್ಯದ ಸಂಪೂರ್ಣ ಎಲೆಕ್ಟೋರಲ್ ಮತಗಳು ಆ ಅಭ್ಯರ್ಥಿಯ ಪಾಲಾಗುತ್ತವೆ.ಉದಾಹರಣೆಗೆ ಅಲಾಸ್ಕದ ಜನ ಟ್ರಂಪ್ (ರಿಪಬ್ಲಿಕನ್ ಪಕ್ಷ) ಪರವಾಗಿ ಹೆಚ್ಚು ಮತ ಚಲಾಯಿಸುತ್ತಾರೆ ಎಂದಿಟ್ಟುಕೊಳ್ಳಿ. ಅಲಾಸ್ಕಾದಲ್ಲಿರುವ ಅಷ್ಟೂ ಎಲೆಕ್ಟೋರಲ್‌ ಮತಗಳು ರಿಪಬ್ಲಿಕನ್ ಪಕ್ಷದ ಪಾಲಾಗುತ್ತದೆ.

ಬಹುಮತ ಪಡೆಯದೆಯೂ ಅಧ್ಯಕ್ಷರಾದ ಬುಷ್

ನೇರ ಮತದಾನದಲ್ಲಿ ಹೆಚ್ಚು ಮತ ಪಡೆದ ಅಭ್ಯರ್ಥಿ ಅಧ್ಯಕ್ಷರಾಗದೇ, ಹೆಚ್ಚು ಎಲೆಕ್ಟೋರಲ್ ಮತ ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿದ್ದೂ ಇದೆ. 2000ನೇ ಇಸವಿಯಲ್ಲಿ ಅಲ್ ಗೋರ್, ಹೆಚ್ಚು ಮತಗಳನ್ನು ಗಳಿಸಿದ್ದರು. ಆದರೆ ಎಲೆಕ್ಟೋರಲ್ ಮತಗಳ ಆಧಾರದಲ್ಲಿ ಜಾರ್ಜ್ ಬುಷ್ ಅಧ್ಯಕ್ಷರಾದರು.

ಹಂತ - 2

ಎಲೆಕ್ಟೋರಲ್‌ಗಳಿಂದ ಮತದಾನ


ಈ ಎಲೆಕ್ಟೋರಲ್‌ಗಳು ತಮ್ಮ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಕೆಂಬ ನಿಬಂಧನೆ ಇಲ್ಲ. ಜತೆಗೆ ಬಹುಮತಕ್ಕೆ ಅನುಗುಣವಾಗೇ ಮತ ಚಲಾಯಿಸಬೇಕು ಎಂಬ ನಿಯಮ ಇಲ್ಲ. ಆದರೂ ಬಹುಮತಕ್ಕೆ ಅನುಗುಣವಾಗಿಯೇ ಎಲೆಕ್ಟೋರಲ್‌ಗಳು ಮತ ಚಲಾಯಿಸುತ್ತಾರೆ.

ಬಹುಮತಕ್ಕೆ ವಿರುದ್ಧವಾಗಿಯೂ ಎಲೆಕ್ಟೋರಲ್‌ಗಳು ಮತ ಚಲಾಯಿಸಲು ಅವಕಾಶವಿದೆ. ಹೀಗಾಗಿ ಜನರ ಮತದಾನದಲ್ಲಿ  ಮತಗಳಲ್ಲಿ ಮುನ್ನಡೆ ಸಾಧಿಸಿದವರು ಅಧ್ಯಕ್ಷರಾಗುವುದು ಖಚಿತ ಎಂದು ಹೇಳಲಾಗದು.

ಹಂತ - 3

270 ಮತ ಪಡೆದವರಿಗೆ ಅಧ್ಯಕ್ಷ ಪೀಠ

270 ಮತ್ತು ಅದಕ್ಕಿಂತಲೂ ಹೆಚ್ಚು ಎಲೆಕ್ಟೋರಲ್‌ ಮತಗಳನ್ನು ಪಡೆದ ಅಭ್ಯರ್ಥಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಒಂದೊಮ್ಮೆ ಇಬ್ಬರು ಅಭ್ಯರ್ಥಿಗಳೂ ತಲಾ 269 ಮತಗಳನ್ನು ಪಡೆದರೆ, ಅಮೆರಿಕದ ಕಾಂಗ್ರೆಸ್‌ನ ಕೆಳಮನೆ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಕಾಂಗ್ರೆಸ್‌ನ ಮೇಲ್ಮನೆ ಸದಸ್ಯರು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ.

ಅಮೆರಿಕದ ಇತಿಹಾಸದಲ್ಲಿ 1800ನೇ ಇಸವಿಯಲ್ಲಿ ಒಮ್ಮೆ ಮಾತ್ರ ಇಬ್ಬರೂ ಅಭ್ಯರ್ಥಿಗಳು ಸಮ ಮತ ಗಳಿಸಿದ್ದು ಹೊರತುಪಡಿಸಿದರೆ, ಈವರೆಗೆ ಮತ್ತೊಮ್ಮೆ ಅಂತಹ ಸನ್ನಿವೇಶ ಸೃಷ್ಟಿಯಾಗಿಲ್ಲ.

ಬದಲಾಗದ ಚುನಾವಣಾ ಕ್ಯಾಲೆಂಡರ್‌

ಅಮೆರಿಕದ ಅಧ್ಯಕ್ಷರ ಅಧಿಕಾರಾವಧಿ ನಾಲ್ಕು ವರ್ಷ. ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಹೊಸ ಅಧ್ಯಕ್ಷರು ಆಯ್ಕೆಯಾಗುತ್ತಾರೆ. ಪ್ರತಿ ನಾಲ್ಕನೇ ವರ್ಷದ ನವೆಂಬರ್‌ನಲ್ಲಿ ಚುನಾವಣೆ ನಡೆಯುತ್ತದೆ ಮತ್ತು ನಂತರದ ಜನವರಿಯಲ್ಲಿ ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಾರೆ. ಆದರೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತದೆ. ಸುಮಾರು 130 ವರ್ಷಗಳಿಂದ ಇದೇ  ವೇಳಾಪಟ್ಟಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ.*ಚುನಾವಣೆಗೆ ಇನ್ನೂ ಒಂದು ವರ್ಷ ಇರುವಂತೆಯೇ ಎರಡೂ ಪಕ್ಷದ ಹಲವರು ಅಧ್ಯಕ್ಷೀಯ ಅಭ್ಯರ್ಥಿಯಾಗಲು ತಮ್ಮ ಉಮೇದುವಾರಿಕೆಯನ್ನು ಘೋಷಿಸುತ್ತಾರೆ.*ಸಾಮಾನ್ಯವಾಗಿ ಜನವರಿಯಿಂದ ಜೂನ್‌ವರೆಗೆ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ಎಲ್ಲಾ ರಾಜ್ಯಗಳಲ್ಲೂ ಚರ್ಚೆ, ಸಂವಾದ ನಡೆಸುತ್ತವೆ.*ಜತೆಗೆ ಸೆಪ್ಟೆಂಬರ್ ಎರಡನೇ ವಾರದವರೆಗೂ ಪ್ರಾಥಮಿಕ ಮತದಾನ ನಡೆಯುತ್ತದೆ.*ಎಲ್ಲಾ ರಾಜ್ಯಗಳಲ್ಲಿ ನಡೆದ ಪ್ರಾಥಮಿಕ ಮತದಾನದಲ್ಲಿ ಹೆಚ್ಚು ಮತಗಳಿಸಿದ ವ್ಯಕ್ತಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತಾರೆ.*ಆಯ್ಕೆಯಾದ ಅಭ್ಯರ್ಥಿ ತಮ್ಮ ಪಕ್ಷದ ಮತ್ತೊಬ್ಬರನ್ನು ಉಪಾಧ್ಯಕ್ಷ ಹುದ್ದೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತಾರೆ.*ಸೆಪ್ಟೆಂಬರ್‌ ಮತ್ತು ನವೆಂಬರ್‌ನಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಮುಖಾಮುಖಿಯಾಗಿ ಟಿ.ವಿ ಚರ್ಚೆಗಳನ್ನು ನಡೆಸುತ್ತಾರೆ.*ನವೆಂಬರ್‌ನಲ್ಲಿ ಮತದಾನ ನಡೆಯುತ್ತದೆ. ನವೆಂಬರ್‌ನ ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರ ಈ ಮತದಾನ ನಡೆಯುತ್ತದೆ. ಸಾಮಾನ್ಯವಾಗಿ ಈ ಮಂಗಳವಾರದ ದಿನಾಂಕ 2ರಿಂದ 8ರ ನಡುವಿನದ್ದಾಗಿರುತ್ತದೆ, ಈ ಬಾರಿ ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರ 8ನೇ ತಾರೀಖಿನಂದು ಬಂದಿದೆ.*ಡಿಸೆಂಬರ್‌ನಲ್ಲಿ ಎಲೆಕ್ಟೋರಲ್‌ಗಳು ತಮ್ಮ ಮತ ಚಲಾಯಿಸುತ್ತಾರೆ.*ಜನವರಿ ಮೊದಲ ವಾರದಲ್ಲಿ ಎಲೆಕ್ಟೋರಲ್‌ ಮತಗಳ ಎಣಿಕೆ ನಡೆಯುತ್ತದೆ.*ಜನವರಿ 20ರಂದು ನೂತನ ಅಧ್ಯಕ್ಷರು ಅಧಿಕಾರ ಸ್ವೀಕರಿಸುತ್ತಾರೆ. ಜನವರಿ 20 ಭಾನುವಾರವಾಗಿದ್ದರೆ, 21ನೇ ತಾರೀಖು ಅಧಿಕಾರ ಸ್ವೀಕಾರ ಪ್ರಕ್ರಿಯೆ ನಡೆಯುತ್ತದೆ.

ಪ್ರತಿಕ್ರಿಯಿಸಿ (+)