ಸೋಮವಾರ, ಜೂಲೈ 6, 2020
23 °C

ಹೊಸ ಹಳಿಯಲ್ಲಿ ‘ರೈಲ್ವೆ ಚಿಲ್ಡ್ರನ್’

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಹೊಸ ಹಳಿಯಲ್ಲಿ ‘ರೈಲ್ವೆ ಚಿಲ್ಡ್ರನ್’

‘‘ರೈಲ್ವೆ ಚಿಲ್ಡ್ರನ್’ ಪ್ರದರ್ಶನಕ್ಕೆ ಇಡೀ ಚಿತ್ರಮಂದಿರ ತುಂಬಿತ್ತು. ನಮ್ಮ ಸಿನಿಮಾಕ್ಕೆ ಪ್ರಶಸ್ತಿ ಸಿಗದಿದ್ದರೂ ನಿರ್ಣಾಯಕರ ಪ್ರಶಂಸೆ ಸಿಕ್ಕಿದೆ. ಒಂದಿಬ್ಬರು ನಿರ್ಣಾಯಕರು ಈ ಚಿತ್ರವನ್ನು ಬೇರೆ ಎರಡು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಶಿಫಾರಸು ಕೂಡ ಮಾಡಿದ್ದಾರೆ’’ ಎಂದು ಉತ್ಸಾಹದಿಂದ ಮಾತನಾಡುತ್ತಿದ್ದರು ‘ರೈಲ್ವೆ ಚಿಲ್ಡ್ರನ್’ ಚಿತ್ರದ ನಿರ್ದೇಶಕ ಪೃಥ್ವಿ ಕೊಕನೂರು.‘ರೈಲ್ವೆ ಚಿಲ್ಡ್ರನ್’ ಕೆಲವು ದಿನಗಳಿಂದ ಕನ್ನಡ ಸಿನಿಮಾಸಕ್ತರ ಗಮನ ಸೆಳೆಯುತ್ತಿರುವ ಡಾಕ್ಯೂ ಡ್ರಾಮಾ. ಇದು, ಈ ವರ್ಷ ಮುಂಬೈನಲ್ಲಿ ನಡೆದ ‘ಜಿಯೊ ಮಾಮಿ ಅಂತರರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಪ್ರದರ್ಶನಗೊಂಡಿದೆ. ಚಿತ್ರೋತ್ಸವದ ‘ಇಂಡಿಯಾ ಗೋಲ್ಡ್’ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದ ಹನ್ನೊಂದು ಚಿತ್ರಗಳ ಪೈಕಿ ಏಕೈಕ ಕನ್ನಡ ಸಿನಿಮಾ ‘ರೈಲ್ವೆ ಚಿಲ್ಡ್ರನ್’.ಮನೆ ಬಿಟ್ಟು ಬಂದು ರೈಲ್ವೆ ನಿಲ್ದಾಣಗಳಲ್ಲೇ ಜೀವಿಸುತ್ತಿರುವ ಮತ್ತು ರೈಲು ಹಳಿಗಳ ನಡುವೆಯೇ ಬದುಕು ಕಟ್ಟಿಕೊಳ್ಳಲು ಗುದ್ದಾಡುತ್ತಿರುವ ಮಕ್ಕಳನ್ನು ‘ರೈಲ್ವೆ ಚಿಲ್ಡ್ರನ್’ ಅಥವಾ ‘ರೈಲ್ವೆಮಕ್ಕಳು’ ಎಂದು ಕರೆಯಲಾಗುತ್ತದೆ. ಇಂಥ ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣ ಆಗಿರುವ ಸಿನಿಮಾ ‘ರೈಲ್ವೆ ಚಿಲ್ಡ್ರನ್’.ಬಡತನವೂ ಇದ್ದು, ಎಲ್ಲೆಲ್ಲಿ ರೈಲ್ವೆ ಸಂಪರ್ಕವಿದೆಯೋ ಅಲ್ಲೆಲ್ಲ ರೈಲ್ವೆಮಕ್ಕಳು ಇದ್ದಾರೆ ಎನ್ನುವ ಪೃಥ್ವಿ, ‘ರೈಲ್ವೆಮಕ್ಕಳ ಜಗತ್ತು ಹೇಗಿದೆ ಎಂದು ನೋಡುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ’ ಎಂದರು. ದಕ್ಷಿಣ ಭಾರತದಲ್ಲಿ ರೈಲ್ವೆಮಕ್ಕಳ ಕುರಿತಾಗಿ ಕೆಲವು ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿರುವ ಕಾರಣ ಇಲ್ಲಿ ಇಂಥ ಸಮಸ್ಯೆಗಳು ಕಡಿಮೆ, ಆದರೆ ಉತ್ತರ ಭಾರತದಲ್ಲಿ ಈ ಮಕ್ಕಳು ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.ಮಕ್ಕಳು ಜೈಲಿನಿಂದ ಓಡಿಹೋಗುವ ವಸ್ತುವನ್ನು ಇಟ್ಟುಕೊಂಡು ಸಿನಿಮಾ ಮಾಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪೃಥ್ವಿ ಭೇಟಿ ನೀಡಿದಾಗ ಅಲ್ಲಿನ ಸಿಬ್ಬಂದಿ ಅವರ ಗಮನವನ್ನು ರೈಲ್ವೆಮಕ್ಕಳ ಬಗೆಗೆ ಸೆಳೆದರು. ಈ ವಿಚಾರವಾಗಿ ಅನೇಕ ಸರ್ಕಾರೇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ ಎಂಬುದನ್ನು ತಿಳಿದುಕೊಂಡ ಪೃಥ್ವಿ, ಇದೇ ಕಥೆ ಸಿನಿಮಾ ಮಾಡುವ ನಿರ್ಧಾರಕ್ಕೆ ಬಂದರು. ನೈಜ ಘಟನೆಗಳನ್ನೇ ಸಿನಿಮಾಕ್ಕೆ ಅಳವಡಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಲು ಡಾನ್ ಬಾಸ್ಕೊ ಸಂಸ್ಥೆಯ ಸಹಾಯದೊಂದಿಗೆ ಶಾಲೆಗಳಲ್ಲಿ ಆಡಿಶನ್ ಮಾಡಿ ಮಕ್ಕಳನ್ನು ಆಯ್ಕೆ ಮಾಡಿಕೊಂಡರು. ಉಡುಪಿಯ ಪೃಥ್ವಿ ಕೊಕನೂರು ಸಿನಿಮಾ ವಿದ್ಯಾರ್ಥಿ. ‘ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿ’ಯಲ್ಲಿ ಸಿನಿಮಾದ ಪಟ್ಟುಗಳನ್ನು ಅಭ್ಯಾಸ ಮಾಡಿದ ಅವರು ತನ್ನ ಮಿತಿಯೊಳಗೇ ‘ಟಿನ್ ಡ್ರಮ್ ಬೀಟ್್ಸ್’ ಎಂಬ ಸಿನಿಮಾ ನಿರ್ಮಾಣ ಸಂಸ್ಥೆ ಕಟ್ಟಿಕೊಂಡು ಅದರ ಮೂಲಕ ಚಿತ್ರ ನಿರ್ಮಾಣದ ಕನಸು ಕಂಡವರು.

ಕನಸನ್ನು ನಿಜವಾಗಿಸಲು ‘ಕ್ರೌಡ್ ಫಂಡಿಂಗ್’ ಹಾದಿ ಹಿಡಿದರು. ಅದರ ಫಲವೇ ‘ರೈಲ್ವೆ ಚಿಲ್ಡ್ರನ್’. ಹಣದ ಕೊರತೆಯಿಂದಾಗಿ ಸಿನಿಮಾ ನಿರ್ಮಾಣ ಅರ್ಧಕ್ಕೆ ನಿಂತಾಗ ಉಡುಪಿಯ ಚೇತನ್ ಗೋಕುಲ್ ಮತ್ತು ಗಂಗಾಧರ ಬಿರ್ಥಿ ಎನ್ನುವವರು ಪೃಥ್ವಿ ಬೆನ್ನಿಗೆ ನಿಂತಿದ್ದಾರೆ.ಭಾರತದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಕಮರ್ಷಿಯಲ್ ಸಿನಿಮಾಗಳ ಪರಿಭಾಷೆಯಲ್ಲಿ ಹೇಳುವುದಾದರೆ ‘ರೈಲ್ವೆ ಚಿಲ್ಡ್ರನ್’ ಪಕ್ಕಾ ಕಮರ್ಷಿಯಲ್ ಚಿತ್ರ ಅಲ್ಲ. ಹಾಡು, ರೋಚಕ ಸಾಹಸ ದೃಶ್ಯಗಳಿಲ್ಲ. ಆದರೆ, ‘ಪ್ರೇಕ್ಷಕರಿಗೆ ಮನರಂಜನೆಯಂತೂ ಖಂಡಿತ ಇದೆ’ ಎನ್ನುತ್ತಾರೆ ಪೃಥ್ವಿ. ಕಡಿಮೆ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿರುವ ಕಾರಣ ತೊಡಗಿಸಿದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯೂ ಇದೆ ಎಂಬುದು ಅವರ ನಿರೀಕ್ಷೆ. ಬರುವ ಮಾರ್ಚ್–ಏಪ್ರಿಲ್ ತಿಂಗಳಿನಲ್ಲಿ ಸಿನಿಮಾವನ್ನು ಪ್ರೇಕ್ಷಕರ ಎದುರು ತರುವ ಪ್ರಯತ್ನದಲ್ಲಿ ಅವರಿದ್ದಾರೆ.ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ಪೃಥ್ವಿ ಚಿತ್ರರಂಗವನ್ನು ಆಯ್ದುಕೊಂಡ ನಂತರ ಶ್ರೀಲಂಕಾಕ್ಕೆ ತೆರಳಿ ಅಲ್ಲೊಂದು ಕಿರುಚಿತ್ರ ಚಿತ್ರೀಕರಿಸಿದ್ದರು. ಅದಲ್ಲದೆ ‘ಅಲೆಗಳು’ ಎಂಬ ಮಕ್ಕಳ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ತಮ್ಮ ‘ಟಿನ್ ಡ್ರಮ್ ಬೀಟ್ಸ್’ ಮೂಲಕ ಮುಂದಿನ ದಿನಗಳಲ್ಲಿ ಹೊಸಬರಿಗೆ– ಅದರಲ್ಲೂ ಮಹಿಳಾ ನಿರ್ದೇಶಕಿಯರಿಗೆ ಅವಕಾಶ ಮಾಡಿಕೊಡುವ ಉದ್ದೇಶ ಹೊಂದಿದ್ದಾರೆ.

ಹಿತ್ತಲ ಹೊನ್ನು

‘ತಿಥಿ’ ಕನ್ನಡ ಸಿನಿಮಾ ಲೊಕಾರ್ನೊ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸುವ ಮೂಲಕ ಕನ್ನಡಿಗರ ಮತ್ತು ಬೇರೆ ಭಾಷೆಯ ಚಿತ್ರರಸಿಕರನ್ನು ಸೆಳೆದಿತ್ತು. ಇದೀಗ ‘ರೈಲ್ವೆ ಚಿಲ್ಡ್ರನ್’ ಸರದಿ. ಆದರೆ ‘ಕಮರ್ಷಿಯಲ್’ ಎಂದು ಗುರ್ತಿಸಿಕೊಳ್ಳದ ಇಂಥ ಸಿನಿಮಾಗಳು ಕನ್ನಡದಲ್ಲಿ ನಿರ್ಮಾಣ ಆಗಿದೆ ಎನ್ನುವುದು ಗೊತ್ತಾಗುವುದು ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡಾಗಲೇ.‘ಹಿತ್ತಲ ಗಿಡ ಮದ್ದಲ್ಲ’ ಎಂಬಂತೆ ನಮ್ಮ ನೆಲದ ಇಂಥ ಸಿನಿಮಾದ ಬಗೆಗೆ ನಮಗೆ ಹೆಚ್ಚಿನ ಗಮನ ಇರುವುದಿಲ್ಲ. ಅದು ಬೇರೆ ಮಾರ್ಗವಾಗಿ ನಮ್ಮ ಬಾಗಿಲು ತಟ್ಟಿದಾಗ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಹೆಸರು ಮಾಡಿದಾಗಲೇ ಇಂಥದ್ದೊಂದು ಸಿನಿಮಾ ಬಂದಿದೆ ಎಂದು ಗೊತ್ತಾಗುವುದು, ಆದರಿಸುವುದು.

‘ಯು ಟರ್ನ್’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಇಂಥದ್ದೊಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈಗ ಪೃಥ್ವಿ ಕೂಡ ಅದನ್ನು ನಿರಾಕರಿಸುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.