ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ವಿವಾಹಿತ ಪುರುಷರೇ ಅಧಿಕ

Last Updated 3 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಮೈಸೂರು: ‘ಇದೊಂದು ಅದ್ಭುತ ಬೆಳಗು. ಇಲ್ಲಿ ಹೆಚ್ಚಿನ ನೋವಿಲ್ಲ. ನನಗನಿಸುತ್ತಿದೆ ಜೀವನದಲ್ಲಿ ತೆಗೆದುಕೊಂಡ ಧೈರ್ಯದ ನಿರ್ಧಾರ ಇದೊಂದೆ. ಹ್ಹ... ಹ್ಹ...! ಗುಡ್‌ ಬೈ’
‘ಪ್ರೀತಿಯ ಪಿ... ನಾನು  ಎಸ್‌.. ಅಂಗಡಿಯಿಂದ 154+338+50 ರೂಪಾಯಿ ಸಾಲ ಪಡೆದುಕೊಂಡಿದ್ದೇನೆ. ಇದನ್ನು ದಯವಿಟ್ಟು ಮರಳಿಸು. ನನ್ನ ಪರ್ಸ್‌ನಲ್ಲಿ ₹ 70 ಹಾಗೂ ವಾರ್ಡ್‌ರೋಬ್‌ನಲ್ಲಿ ₹ 200 ಇದೆ. ಕೊರಳಲ್ಲಿರುವ ಚಿನ್ನದ ಸರವನ್ನು ಜಿ... ಚಿಕ್ಕಪ್ಪನಿಗೆ ಕೊಡು..’

ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಮರಣ ಪತ್ರದಲ್ಲಿನ ಸಾಲುಗಳಿವು. ಮೈಸೂರು ಜಿಲ್ಲೆಯಲ್ಲಿ ಲಭ್ಯವಾದ ಮರಣ ಪತ್ರಗಳನ್ನು ಆಧರಿಸಿ ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿನ ನಾಲ್ವರು ವೈದ್ಯರು ಅಧ್ಯಯನವೊಂದನ್ನು ನಡೆಸಿದ್ದಾರೆ. ‘ಆತ್ಮಹತ್ಯೆಗೆ ಶರಣಾದವರ ಮನಸ್ಥಿತಿ ಅರಿಯಲು ಮರಣ ಪತ್ರವೊಂದು ಗವಾಕ್ಷಿ’ ಎಂಬುದು ಸಂಶೋಧನೆಯಿಂದ ಮತ್ತೆ ನಿರೂಪಿತವಾಗಿದೆ. ಆತ್ಮಹತ್ಯೆ ತಡೆ ಕಾರ್ಯವಿಧಾನದ ಸುಧಾರಣೆಗೂ ಈ ಅಧ್ಯಯನ ಸಹಾಯವಾಗಬಲ್ಲದು ಎಂಬುದು ಸಂಶೋಧಕರ ಅಭಿಲಾಷೆ.

ಬಹುತೇಕರು ನಿರ್ದಿಷ್ಟ ವ್ಯಕ್ತಿಯನ್ನು ಸಂಬೋಧಿಸಿ ಮರಣ ಪತ್ರ ಬರೆದಿಲ್ಲ. ಶೇ 36ರಷ್ಟು ಮಂದಿ ಸಂಬಂಧಿಕರನ್ನು, ಶೇ 18ರಷ್ಟು ಮಂದಿ ಪತಿ ಅಥವಾ ಪತ್ನಿ, ಶೇ 13ರಷ್ಟು ಜನ ತಾಯಿಯನ್ನು ಉದ್ದೇಶಿಸಿ ಬರೆದಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಇಬ್ಬರು ಬರೆದ ಪತ್ರಗಳೂ ಇವುಗಳಲ್ಲಿವೆ. ಇಂತಹ ನಿರ್ಧಾರ ಕೈಗೊಂಡಿರುವ ಕುರಿತು ಕೆಲವರು ಸ್ವವಿವರ ಮಾಹಿತಿ ನೀಡಿದ್ದಾರೆ. ಕೆಲವೇ ಶಬ್ದಗಳಿಂದ ಹಿಡಿದು ಪುಟಗಟ್ಟಲೇ ಬರೆದವರೂ ಇದ್ದಾರೆ. ಅರ್ಧದಷ್ಟು ಮಂದಿ ಮರಣ ಪತ್ರವನ್ನು 100 ಶಬ್ದಗಳಲ್ಲಿ ಮುಗಿಸಿದ್ದಾರೆ.

ಅರ್ಧದಷ್ಟು ಮಂದಿ ಯಾರನ್ನು ನಿಂದಿಸಿಲ್ಲ. ನಾಲ್ವರು ತಮ್ಮನ್ನು ತಾವೇ ದೂಷಿಸಿಕೊಂಡಿದ್ದಾರೆ. ಇಬ್ಬರು ಪತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 6 ಮಂದಿ ಆತ್ಮಹತ್ಯೆಗೆ ಯಾವುದೇ ಕಾರಣ ನೀಡಿಲ್ಲ. ಆತ್ಮಹತ್ಯೆಗೆ ಶರಣಾದವರ ಪೈಕಿ 16ರಿಂದ 40 ವರ್ಷದ ಒಳಗಿನವರಲ್ಲಿ ಶೇ 86ರಷ್ಟು ಮಂದಿ ಪತ್ರ ಬರೆದಿಟ್ಟಿದ್ದಾರೆ. ಜೀವನ ಅಂತ್ಯಗೊಳಿಸಿಕೊಂಡವರಲ್ಲಿ ಶೇ 70 ಮಂದಿ ವಿವಾಹಿತರು. ಈ ಪೈಕಿ ಶೇ 41ರಷ್ಟು ಪುರುಷರು ಎಂಬ ಅಂಶ ಬೆಳಕಿಗೆ ಬಂದಿದೆ.
ಸಾಯುವುದಕ್ಕೂ ಮುನ್ನ ಪ್ರೀತಿ ಪಾತ್ರರಿಗೆ ಅನೇಕರು ಶುಭಕೋರಿದ್ದಾರೆ. ಘಟನೆಯ ಬಳಿಕ ತನಿಖೆಯ ನೆಪದಲ್ಲಿ ಪೊಲೀಸರಿಂದ ಎದುರಾಗುವ ತೊಂದರೆಗಳ ಕುರಿತೂ ಕಾಳಜಿ ವ್ಯಕ್ತಪಡಿಸಿದ್ದಾರೆ.

ಮರಣ ಪತ್ರದಲ್ಲಿರುವ ಸಾರಾಂಶ
* ಕ್ಷಮೆ, ಪಾಪಪ್ರಜ್ಞೆ, ಅವಮಾನದ ಕುರಿತು ನಿವೇದನೆ
* ಜೀವನದಲ್ಲಿ ಕಳೆದುಕೊಂಡ ಆಶಾಭಾವನೆ ಬಗ್ಗೆ ಬೇಸರ
* ಕುಟುಂಬದ ಸದಸ್ಯರಿಗೆ, ಪ್ರೀತಿ ಪಾತ್ರರಿಗೆ ಸಲಹೆ
* ಆಸೆ, ಅಗತ್ಯಗಳನ್ನು ಪೂರೈಸುವಂತೆ ಮನವಿ
* ಆಪ್ತರಿಗೆ ಶುಭ ಕೋರಿಕೆ

ಪತ್ರಗಳ ಭಾಷೆ

ಕನ್ನಡ -6

ಕನ್ನಡ ಮತ್ತು ಇಂಗ್ಲಿಷ್‌ ಮಿಶ್ರಣ- 3

ಇಂಗ್ಲಿಷ್‌- 2

ತಮಿಳು- 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT