ಗುರುವಾರ , ಜೂಲೈ 2, 2020
28 °C

ಮಹಾನಗರದ ಮಥನ

ಗಣೇಶ ವೈದ್ಯ Updated:

ಅಕ್ಷರ ಗಾತ್ರ : | |

ಮಹಾನಗರದ ಮಥನ

ಚಿತ್ರ: ಕಹಿ

ನಿರ್ಮಾಣ: ಬಾಯಿಲ್ಡ್ ಬೀನ್ಸ್ ಪಿಕ್ಚರ್ಸ್

ನಿರ್ದೇಶಕ: ಅರವಿಂದ ಶಾಸ್ತ್ರಿ

ತಾರಾಗಣ: ಕೃಷಿ ತಾಪಂಡ, ಸೂರಜ್ ಗೌಡ, ಮಾತಂಗಿ ಪ್ರಸನ್, ಹರಿ ಶರ್ವ

ಹರಿ (ಹರಿ ಶರ್ವ) ನಿರುದ್ಯೋಗಿ. ಮಾದಕ ಪದಾರ್ಥಗಳನ್ನು ಒಬ್ಬರಿಂದ ಒಬ್ಬರಿಗೆ ಸರಬರಾಜು ಮಾಡುವ ಆತನಿಗೆ ವಿದ್ಯಾ ಎನ್ನುವವಳ ಮೇಲೆ ಪ್ರೇಮವಾಗುತ್ತದೆ. ವಿದ್ಯಾ (ಮಾತಂಗಿ ಪ್ರಸನ್) ದೊಡ್ಡ ಡಾನ್ಸರ್ ಆಗುವ ಮಹಾತ್ವಾಕಾಂಕ್ಷೆ ಹೊತ್ತವಳು. ಅದಕ್ಕಾಗಿ ಅವಳು ಅಡ್ಡ ಮಾರ್ಗಗಳನ್ನು ಹಿಡಿಯಲೂ ಸಿದ್ಧ. ಅವಳು ಬಟ್ಟೆ ಅಂಗಡಿಗೆ ಹೋದಾಗಲೆಲ್ಲ ಒಂದಾದರೂ ಬಟ್ಟೆ ಕದಿಯದೇ ಬಿಡುವುದಿಲ್ಲ. ಕೊನೆಗೆ ಲಕ್ಷಾಂತರ ರೂಪಾಯಿ ಕದ್ದು ತನ್ನ ಕನಸನ್ನು ಪೋಷಿಸುವ ದಾರಿ ಹಿಡಿಯುತ್ತಾಳೆ.

ಅಖಿಲಾ (ಕೃಷಿ) ದೊಡ್ಡ ಲೇಖಕಿ ಆಗುವ ಉತ್ಸಾಹಿ. ಮದುವೆಯಾಗಿ ಮೂರು ವರ್ಷಗಳಾದರೂ ಮಕ್ಕಳಾಗಿಲ್ಲ. ಅವರ ಕುಟುಂಬದಲ್ಲಿ ಅದು ದೊಡ್ಡ ಸುದ್ದಿ. ಅಖಿಲಾಳಲ್ಲಿ ಏನೂ ಸಮಸ್ಯೆ ಇಲ್ಲ. ‘ನೀವೂ ಒಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ವೈದ್ಯರು ಹೇಳಿದಾಗ ಆಕೆಯ ಗಂಡ ಗಲಿಬಿಲಿಗೊಳ್ಳುತ್ತಾನೆ.

ಇನ್ನೊಬ್ಬ ಹುಡುಗ ರಘು (ಸೂರಜ್ ಗೌಡ) ಶ್ರೀಮಂತ ಕುಟುಂಬದಲ್ಲಿ ಬೆಳೆದವ, ಮಾದಕ ವ್ಯಸನಿ. ಹೆಣ್ಣನ್ನು ಭೋಗದ ವಸ್ತುವಾಗಿ ಕಾಣುವ ಸೈಕೋ. ನಾಯಿಯನ್ನು ಹೊಡೆಯುವಷ್ಟೇ ಸುಲಭವಾಗಿ ಮನುಷ್ಯರನ್ನೂ ಕೊಲ್ಲಬಲ್ಲ. ಈ ನಾಲ್ಕು ಭಿನ್ನ ವ್ಯಕ್ತಿತ್ವಗಳನ್ನು ಮಹಾನಗರದ ಕ್ಯಾನ್ವಾಸ್‌ ಹಿನ್ನೆಲೆಯಲ್ಲಿ ತೋರಿಸುವ ಯತ್ನ ಮಾಡಿದ್ದಾರೆ ನಿರ್ದೇಶಕ ಅರವಿಂದ ಶಾಸ್ತ್ರಿ.

ಭಾವುಕತೆಗಿಂತ ರೋಚಕತೆಗೆ ಹೆಚ್ಚು ಮಹತ್ವ ನೀಡಿರುವ ನಿರ್ದೇಶಕರು ನಿರ್ಭಾವುಕವಾಗಿಯೇ ದೃಶ್ಯಗಳನ್ನು ಹೆಣೆದಿರುವಂತಿದೆ. ಯಾವ ಪಾತ್ರಗಳಿಗೂ ಸೂಕ್ತವಾದ ಹಿನ್ನೆಲೆ ಕೊಡುವ ಗೋಜಿಗೆ ಅವರು ಹೋಗಿಲ್ಲ. ಯಾವುದನ್ನೂ ವೈಭವೀಕರಿಸಿಯೂ ಇಲ್ಲ. ತೆರೆಯಲ್ಲಿ ಬಂದುಹೋಗುವ ದೃಶ್ಯಗಳು ಮನಸಿನಲ್ಲಿ ಉಳಿಯುವುದಿಲ್ಲವಾದರೂ ಚಿತ್ರಮಂದಿರದಲ್ಲಿ ಕೂತಾಗ ನೋಡಿಸಿಕೊಳ್ಳುವ ಗುಣ ಚಿತ್ರಕಥೆಗಿದೆ.

ನಾಲ್ಕು ಜನರ ಮುಂದೆ ಎಲ್ಲರಂತೆ ಕಾಣುವ ವ್ಯಕ್ತಿಯ ಅಂತರಂಗದಲ್ಲೂ ಕರಾಳ ಮುಖವಿರಬಹುದು. ಅದು ಆಯಾ ಸಂದರ್ಭಕ್ಕೆ ತಕ್ಕಂತೆ ಪ್ರಕಟವಾಗುತ್ತದೆ ಎಂದು ನಿರ್ದೇಶಕರು ಹೇಳಹೊರಟಿದ್ದನ್ನು ಒಪ್ಪಬಹುದು. ಆದರೆ ಗಂಡನಿಂದ ಮಗುವನ್ನು ಪಡೆಯದ ಅಖಿಲಾ, ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾದಾಗ ‘ಕೆಟ್ಟದ್ದರಿಂದಲೂ ಒಳ್ಳೆಯದು ಹುಟ್ಟುತ್ತದೆ’ ಎಂದುಕೊಳ್ಳುವುದು ತೀರಾ ಅಸಹಜ. ಇಲ್ಲಿ ಕಹಿ ಗುಳಿಗೆಯನ್ನೇ ಕೊಟ್ಟಿರುವ ಅರವಿಂದ್, ಮನುಷ್ಯನೊಳಗಿನ ಕಹಿ ಗುಣಗಳನ್ನು ತೋರಿಸಲಷ್ಟೇ ‘ಕಹಿ’ ಚಿತ್ರವನ್ನು ಸೀಮಿತ ಮಾಡಿದ್ದಾರೆ.

ಪ್ರೇಮ–ದ್ವೇಷದ ಮಾಮೂಲು ಕಥನದ ದಾರಿಯನ್ನು ಬಿಟ್ಟು ಭಿನ್ನ ಮಾರ್ಗ ಹಿಡಿದ ನಿರ್ದೇಶಕರ ಪ್ರಯತ್ನ ಶ್ಲಾಘನಾರ್ಹ. ಆದರೆ ತಾವು ಆಯ್ದುಕೊಂಡಿರುವ ನಾಲ್ಕು ಭಿನ್ನ ಎಳೆಗಳನ್ನು ತೆರೆಯ ಮೇಲೆ ಸಮರ್ಥವಾಗಿ ಪೋಷಿಸಿ ಗಟ್ಟಿಯಾಗಿ ಹೆಣೆಯುವಲ್ಲಿ ಅವರಿಗೆ ದೊಡ್ಡ ಯಶಸ್ಸೇನೂ ದೊರೆತಿಲ್ಲ.

ನಟನೆಯ ವಿಚಾರದಲ್ಲಿ ಕೃಷಿ, ಸೂರಜ್, ಮಾತಂಗಿ, ಹರಿ ಎಲ್ಲರೂ ಭರವಸೆಯ ಕುಡಿಗಳು. ಪ್ರಶಾಂತ್ ಆರ್.ಎಸ್. ತಮಗಿರುವ ಮಿತಿಯಲ್ಲಿಯೂ ಛಾಯಾಗ್ರಹಣದ ಜವಾಬ್ದಾರಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದಾರೆ. ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿಯೂ ಒಮ್ಮೊಮ್ಮೆ ಕಠೋರವಾಗಿಯೂ ಪರಿಣಮಿಸುತ್ತದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.