ಜನಾಭಿಪ್ರಾಯ ನಿರ್ಲಕ್ಷಿಸಿದರೆ ಬೆಲೆ ತೆರಬೇಕಾದೀತು

7

ಜನಾಭಿಪ್ರಾಯ ನಿರ್ಲಕ್ಷಿಸಿದರೆ ಬೆಲೆ ತೆರಬೇಕಾದೀತು

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ಜನಾಭಿಪ್ರಾಯ ನಿರ್ಲಕ್ಷಿಸಿದರೆ ಬೆಲೆ ತೆರಬೇಕಾದೀತು

ಮ್ಯಾನ್ಮಾರ್‌ನ ಪ್ರಜಾಪ್ರಭುತ್ವದ ಬದಲಾವಣೆ ಪರ್ವಕಾಲದ ಆಸಕ್ತಿದಾಯಕ ಚರ್ಚೆಯಲ್ಲಿ ಒಂದು ವಾರದವರೆಗೆ ಭಾಗಿಯಾಗಿ ಬೆಂಗಳೂರಿಗೆ ಮರಳುತ್ತಿದ್ದಂತೆ, ನನ್ನ ಸ್ವಂತ ರಾಜ್ಯದಲ್ಲಿ ನಡೆದ ಹಲವಾರು ವಿದ್ಯಮಾನಗಳು ನನ್ನ ಗಮನ ಸೆಳೆದಿವೆ. ಒಂದು ತಿಂಗಳಿನಿಂದೀಚೆಗೆ ಅದರಲ್ಲೂ  ಪ್ರಮುಖವಾಗಿ ರಾಜಧಾನಿ ಬೆಂಗಳೂರು ಮತ್ತು ರಾಜ್ಯದ ಇತರೆಡೆ ನಡೆದ ಕೆಲವು ವಿದ್ಯಮಾನಗಳು ಸಾರ್ವಜನಿಕರ ತೀವ್ರ ಗಮನ ಸೆಳೆದಿವೆ. ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆಗೆ ಒಂದೆಡೆ ಸಾರ್ವಜನಿಕರಿಂದ  ತೀವ್ರ ಸ್ವರೂಪದ ಆಕ್ಷೇಪ ವ್ಯಕ್ತವಾಗಿ  ಭಾರಿ ಪ್ರತಿಭಟನೆ ನಡೆಯುತ್ತಿದ್ದರೆ,  ಇನ್ನೊಂದೆಡೆ  ಯೋಜನೆಯನ್ನು ಯಾವುದೇ ಕಾರಣಕ್ಕೂ  ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯ ಸರ್ಕಾರ ಹಟಮಾರಿತನ ಪ್ರದರ್ಶಿಸುತ್ತಿದೆ.ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿಯೂ ರಾಜ್ಯ ಸರ್ಕಾರ ದೃಢ ನಿರ್ಧಾರ ಮಾಡಿರುವಂತಿದೆ.  ಇದಕ್ಕೂ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಹೈಕೋರ್ಟ್‌ ಕೂಡ, ‘ಟಿಪ್ಪು ಜಯಂತಿ ಆಚರಿಸುವುದರಿಂದ   ಸರ್ಕಾರಕ್ಕೆ ಆಗುವ ಪ್ರಯೋಜನವಾದರೂ ಏನು’  ಎಂದು   ರಾಜ್ಯ ಸರ್ಕಾರವನ್ನು   ಪ್ರಶ್ನಿಸಿದೆ.ಅಧಿಕಾರದಲ್ಲಿ ಇರುವವರು ಜನಾಭಿಪ್ರಾಯಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎನ್ನುವುದಕ್ಕೆ ಈ ಎರಡೂ ವಿದ್ಯಮಾನಗಳು ತಾಜಾ ನಿದರ್ಶನಗಳಾಗಿವೆ.  ಚುನಾವಣೆ ಸಂದರ್ಭದಲ್ಲಷ್ಟೆ ಅಲ್ಲದೇ ಎರಡು ಚುನಾವಣೆಗಳ ಮಧ್ಯದ ಸಂದರ್ಭದಲ್ಲಿಯೂ  ನಮ್ಮ ಪ್ರಜಾಸತ್ತಾತ್ಮಕ  ಪ್ರಕ್ರಿಯೆಗಳ ತೀವ್ರತೆ ಮತ್ತು ಬೀರಬಹುದಾದ ಪ್ರಭಾವಗಳ ಬಗ್ಗೆಯೇ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿವೆ.ಮೊದಲಿಗೆ ಉಕ್ಕಿನ ಮೇಲು ಸೇತುವೆ ನಿರ್ಮಾಣ ವಿವಾದ ಪರಿಗಣನೆಗೆ ತೆಗೆದುಕೊಂಡರೆ,  ನಿಗದಿತ ಯೋಜನೆಯಂತೆ ಮುಂದುವರೆಯುವುದಾಗಿ ರಾಜ್ಯ ಸರ್ಕಾರ ಪಟ್ಟು ಹಿಡಿದಿರುವುದಕ್ಕೆ ಸಾರ್ವಜನಿಕರು ತೀವ್ರ ಪ್ರತಿಕ್ರಿಯೆ ದಾಖಲಿಸಿರುವುದರಲ್ಲಿ ಅನುಮಾನಪಡುವಂತಹದ್ದು ಏನೂ ಇಲ್ಲ. ಜನರ ಪ್ರತಿಭಟನೆಗೂ ವಿಭಿನ್ನ ಮುಖಗಳಿವೆ.  ಕೆಲವರು ಈ ಉಕ್ಕಿನ ಸೇತುವೆ ಸಾಗುವ ಮಾರ್ಗವನ್ನೇ ಪ್ರಶ್ನಿಸಿದರೆ, ಅದರ ಉಪಯುಕ್ತತೆಯನ್ನೇ ಹಲವರು ಪ್ರಶ್ನಿಸುತ್ತಿದ್ದಾರೆ. ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಪರಿಸರವಾದಿಗಳು ಗಮನ ಸೆಳೆದಿದ್ದಾರೆ.  ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸದೇ ಯೋಜನೆ ಜಾರಿಗೆ ಮುಂದಾಗಿರುವ ಸರ್ಕಾರದ ನಿಲುವನ್ನು  ಸಾಮಾಜಿಕ ಕಾರ್ಯಕರ್ತರು ಕಟುವಾಗಿ ಟೀಕಿಸಿದ್ದಾರೆ.ಜನರ ಪ್ರತಿಭಟನೆ ಆರಂಭವಾಗುತ್ತಿದ್ದಂತೆ ಮತ್ತು ವಿವಾದವು ದಿನೇ ದಿನೇ ವಿಷಮಗೊಳ್ಳುತ್ತಿದ್ದಂತೆ ಅಧಿಕಾರದಲ್ಲಿರುವ ಪಕ್ಷದ ಮುಖಂಡರು,  ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಉಕ್ಕಿನ ಸೇತುವೆ ವಿರೋಧಿಸುತ್ತಿರುವ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸುವ ವಿವೇಕ ಪ್ರದರ್ಶಿಸಬೇಕಾಗಿತ್ತು. ಚರ್ಚೆ,  ಸಂವಾದ ಮತ್ತು ಸಂವಹನಕ್ಕೆ ಅವಕಾಶ ಮಾಡಿಕೊಡಬೇಕಾಗಿತ್ತು.  ಅಂತಹ ಆಲೋಚನೆಯನ್ನೇ ಮಾಡದ ಸರ್ಕಾರ, ಆಕ್ರಮಣಕಾರಿ ನಿಲುವು ತಳೆದು ದುರಹಂಕಾರದಿಂದ ವರ್ತಿಸುತ್ತಿದೆ.ಉಕ್ಕಿನ ಸೇತುವೆಯ ಮೂಲ ಪರಿಕಲ್ಪನೆಯು ಈ ಮೊದಲು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ್ದು ಎನ್ನುವ ಮಾತೂ ಇದೆ. ಕಾಂಗ್ರೆಸ್ ಕೂಡ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಸೇತುವೆ ನಿರ್ಮಿಸುವ ಭರವಸೆ ನೀಡಿತ್ತು. ಈ ಬಗೆಯ ವ್ಯಾಪಕ ಸ್ವರೂಪದ ಪ್ರತಿಭಟನೆಯು ಎರಡು ಚುನಾವಣೆಗಳ ಮಧ್ಯದ ಅವಧಿಯಲ್ಲಿ ನಡೆಯುತ್ತಿರುವುದರಿಂದ, ಭವಿಷ್ಯದ ಪರಿಣಾಮಗಳನ್ನು ಅಂದಾಜು ಮಾಡಬಲ್ಲ ಜಾಣ ರಾಜಕಾರಣಿಗಳು ಪ್ರತಿಷ್ಠೆಗೆ ಜೋತು ಬೀಳದೆ, ಸಂಧಾನಕ್ಕೆ ವೇದಿಕೆ ನಿರ್ಮಿಸಬೇಕಾಗಿತ್ತೇ ಹೊರತು ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದಿತ್ತು.ಚುನಾವಣಾ ಪ್ರಣಾಳಿಕೆಯಲ್ಲಿನ ಆಯ್ದ ಭರವಸೆಗಳನ್ನಷ್ಟೆ ಉಲ್ಲೇಖಿಸುವುದು ಉದ್ದೇಶಪೂರ್ವಕ ತಂತ್ರ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ರಾಜಕೀಯ ಪಕ್ಷಗಳೆಲ್ಲ ಇಂತಹ ಕ್ರಿಯೆಗಳನ್ನು ಪದೇ ಪದೇ ಮಾಡುತ್ತಲೇ ಇರುತ್ತವೆ.ತಮಗೆ ಅನುಕೂಲ ಎನಿಸುವಂತಹ ಚುನಾವಣಾ ಭರವಸೆಯನ್ನಷ್ಟೇ ರಾಜಕೀಯ ಪಕ್ಷಗಳು ಮತದಾರರಿಗೆ ನೆನಪಿಸುವ ಪ್ರಯತ್ನ ಮಾಡುತ್ತವೆ. ಅಧಿಕಾರದಲ್ಲಿದ್ದವರಿಗೆ ಮತದಾರರಿಗೆ ನೀಡಿದ ವಚನ ಈಡೇರಿಸುವುದು ಸಾಧ್ಯವಾಗದೆ ಹೋದಾಗ  ರಾಜಕೀಯವಾಗಿ ಮುಜುಗರ ಉಂಟು ಮಾಡುವ ಚುನಾವಣಾ ಭರವಸೆಗಳ ಬಗ್ಗೆ ಜಾಣ ಮರೆವಿನ ಮೊರೆ ಹೋಗುತ್ತವೆ.ಚುನಾವಣಾ ಭರವಸೆಗಳನ್ನು ಈಡೇರಿಸುವ ವಿಷಯದಲ್ಲಿ ಪಾರದರ್ಶಕತೆ ಕಂಡುಬರದೇ ಹೋದಾಗಲೂ, ಜನರು ಪ್ರತಿಭಟನೆಯ ಸೊಲ್ಲು ಎತ್ತುವರು.  ಜನಾಭಿಪ್ರಾಯವನ್ನು ಹತ್ತಿಕ್ಕುವುದು ಅಧಿಕಾರಸ್ಥರಿಗೆ  ಅಷ್ಟು ಸುಲಭವೂ ಆಗಲಾರದು.ಯಾವುದೇ  ನಿರ್ಧಾರವೊಂದು ಚುನಾವಣಾ ಭರವಸೆಯ ಭಾಗವಾಗಿದ್ದಾಗ, ಚುನಾವಣೆ ನಂತರದ ಬೆಳವಣಿಗೆಗಳನ್ನು ಪರಿಗಣಿಸಬೇಕಾಗುತ್ತದೆ. ಕಾರ್ಯಗತಗೊಳಿಸಬೇಕಾದ ಯೋಜನೆಯೊಂದರ   ಪರ್ಯಾಯ ಮಾರ್ಗೋಪಾಯಗಳನ್ನೂ ಕಂಡುಕೊಳ್ಳಬೇಕಾಗುತ್ತದೆ.ಹೊಣೆಗಾರಿಕೆಯ ರಾಜಕೀಯ ಪಕ್ಷವೊಂದು, ‘ನನ್ನದೇ ಸರಿ, ನನ್ನ ನಿಲುವೇ ಅಂತಿಮ’ ಎಂದು ತಳೆಯುವ ಧೋರಣೆಯು ಇನ್ನಿಲ್ಲದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಜತೆಗೆ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗೌರವಿಸುವ ಮತ್ತು ಸಂಧಾನ ಮಾತುಕತೆ ನಡೆಸುವ ಸಂಪ್ರದಾಯಕ್ಕೂ    ಧಕ್ಕೆ ಉಂಟು ಮಾಡುತ್ತದೆ. ಈಗ ರಾಜ್ಯ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ತೀರ್ಪಿಗೆ ತಾನು ಬದ್ಧವಾಗಿರುವುದಾಗಿ ಹೇಳುವ ಮೂಲಕ, ಸೇತುವೆ ನಿರ್ಮಾಣದ ಅಂತಿಮ ನಿರ್ಧಾರವನ್ನು  ಮತ್ತು ಅದರ ರಾಜಕೀಯ ಪರಿಣಾಮಗಳನ್ನು ಇನ್ನೊಬ್ಬರ ಹೆಗಲಿಗೆ ಜಾರಿಸಲು ಮುಂದಾಗಿದೆ.ಸರ್ಕಾರವೇ ‘ಟಿಪ್ಪು ಜಯಂತಿ’ ಆಚರಣೆಗೆ ಮುಂದಾಗಿರುವುದಕ್ಕೆ ಸಂಬಂಧಿಸಿದ ವಿವಾದವು ಸರ್ಕಾರ ಮತ್ತು ಜನಸಮುದಾಯದ ಮಧ್ಯೆ  ಸದ್ಯಕ್ಕೆ ಕಂಡು ಬಂದಿರುವ  ಸಂಘರ್ಷ ತಪ್ಪಿಸಬಹುದಾಗಿತ್ತು ಎನ್ನುವುದಕ್ಕೆ ಇನ್ನೊಂದು ತಾಜಾ ನಿದರ್ಶನವಾಗಿದೆ.ಸಮಾಜದಲ್ಲಿ ಸದ್ಯಕ್ಕೆ ಕಂಡುಬರುತ್ತಿರುವ ವ್ಯಾಪಕ ಧ್ರುವೀಕರಣದ ಸಂದರ್ಭದಲ್ಲಿ, ಎಲ್ಲ ವಿಷಯಗಳಿಗೆ ಅದರದ್ದೇ ವಿವಿಧ ಆಯಾಮಗಳಿರುತ್ತವೆ ಎನ್ನುವ ವಾಸ್ತವ ಮರೆಮಾಚಿ  ಬರೀ ವಿವಾದದ ದೃಷ್ಟಿಕೋನದಿಂದಲೇ ನೋಡುತ್ತಿರುವುದೂ ದುರದೃಷ್ಟಕರ ಸಂಗತಿಯಾಗಿದೆ.ಸರ್ಕಾರಿ ಪ್ರಾಯೋಜಕತ್ವದ ಸಂಭ್ರಮಾಚರಣೆ, ಘಟನಾವಳಿಗಳ ಆಚರಣೆ ಮತ್ತು  ಅವುಗಳ ಪರಿಧಿ ಆಚೆ ನಿಂತು ವೀಕ್ಷಿಸುವುದನ್ನು ಬೇರ್ಪಡಿಸುವ   ಅಡ್ಡ ಗೆರೆ ಹಾಕುವುದು ಎಲ್ಲಿ ಎನ್ನುವ ಪ್ರಮುಖವಾದ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ. ಈ ಪ್ರಶ್ನೆ ಬರೀ ಟಿಪ್ಪು ಜಯಂತಿಗೆ ಅಷ್ಟೇ ಸಂಬಂಧಿಸಿರುವುದಿಲ್ಲ.ಎಲ್ಲ ಸಂಭ್ರಮಾಚರಣೆಗಳನ್ನು ಬರೀ ಸಮಾಜದ ಮತ್ತು ಅದರ ಬಹುಬಗೆಯ ಸಂಘಟನೆಗಳ ವಿವೇಚನೆಗೆ ಬಿಟ್ಟುಕೊಡುವುದೂ ಅತ್ಯುತ್ತಮ ನಿರ್ಧಾರವಾಗಲಾರದು.

ಯಾವುದೇ ಒಂದು ಸಂಭ್ರಮಾಚರಣೆಗೆ ಸರ್ಕಾರಿ ಪ್ರಾಯೋಜಕತ್ವ ಪಡೆಯುವ ಸಾಧ್ಯತೆ ಇದ್ದಾಗ, ಅದಕ್ಕೆ ರಾಜಕೀಯ ಬಣ್ಣ ಬಳಿಯದಿರುವ ಮತ್ತು ಕಾರ್ಯಕ್ರಮದ ಮೂಲ ಉದ್ದೇಶವನ್ನೇ ಬದಿಗೆ ಸರಿಸುವ ಸಾಧ್ಯತೆಯೂ ಇದ್ದೇ ಇರುತ್ತವೆ.  ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಗಾಂಧಿ ಜಯಂತಿ, ಅಂಬೇಡ್ಕರ್‌ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತಿತರ ಕಾರ್ಯಕ್ರಮಗಳು ಸರ್ಕಾರದ ಆಶ್ರಯ ಮತ್ತು ಬೆಂಬಲದಿಂದಲೇ ನಡೆಯುವಾಗ, ಅಂತಹ ಕಾರ್ಯಕ್ರಮಗಳಲ್ಲಿ ಅನುಮಾನ ಪಡುವಂತಹದ್ದು ಏನೂ ಇರುವುದಿಲ್ಲ.ಸರ್ಕಾರಿ ಆಡಳಿತ ಯಂತ್ರದ ಬೆಂಬಲ, ಸಂಪನ್ಮೂಲಗಳ ನೆರವು ಇಲ್ಲದೇ, ಸಮಾಜವು ತನ್ನದೇ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಿದಾಗ ಅಲ್ಲಿ ಲಾಭ – ನಷ್ಟದ ಯಾವುದೇ ಗಡಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗಲಾರದು.ಕೆಲವು ಆಯ್ದ ಸಾರ್ವಜನಿಕ ಸಭೆ ಸಮಾರಂಭಗಳನ್ನು ಸರ್ಕಾರವೇ ಪ್ರಚಾರ ಮಾಡುವ ಹೊಣೆ ಹೊತ್ತುಕೊಂಡು, ಪ್ರಾಯೋಜಕತ್ವ ವಹಿಸುವ, ಸಮರ್ಥಿಸಿಕೊಳ್ಳಲು ಮುಂದೆ ಬಂದಾಗ ಅದಕ್ಕೆ  ರಾಜಕೀಯ ರಂಗು ಬಳಿದುಕೊಳ್ಳುತ್ತದೆ.ಇಂತಹ ಕಾರ್ಯಕ್ರಮಗಳ ಆಯೋಜನೆಯಲ್ಲಿ ಹಾಲಿ ಸರ್ಕಾರವೊಂದೇ ಅಪರಾಧಿ ಸ್ಥಾನದಲ್ಲಿ ನಿಲ್ಲುವುದಿಲ್ಲ.  ವಿವಿಧ ಪಕ್ಷಗಳ ಅಧಿಕಾರಾವಧಿಯಲ್ಲಿನ ಈ ಹಿಂದಿನ ಸರ್ಕಾರಗಳೂ, ಕಾಲ ಕಾಲಕ್ಕೆ ತಮ್ಮ, ತಮ್ಮ ರಾಜಕೀಯ ಕಾರ್ಯಸೂಚಿಗೆ ಸೂಕ್ತವಾಗಿ ಹೊಂದಾಣಿಕೆಯಾಗುವ ಘಟನೆ ಮತ್ತು ಕಾರ್ಯಕ್ರಮಗಳಿಗೆ ಸರ್ಕಾರದ ಅಧಿಕೃತ ಮುದ್ರೆ ಒತ್ತುವ ಮೂಲಕ ಅನುಮೋದನೆ ನೀಡುತ್ತಲೇ ಬಂದಿವೆ.ಅಧಿಕಾರದಲ್ಲಿ ಇರುವ ಯಾವುದೇ ರಾಜಕೀಯ ಪಕ್ಷವು ಅಲ್ಪಾವಧಿ ರಾಜಕೀಯ ಲಾಭ ಪಡೆಯಲು ಯಾವುದೇ ವಿವಾದಾತ್ಮಕ ಕಾರ್ಯಕ್ರಮಕ್ಕೆ ಸರ್ಕಾರದ ಸಮರ್ಥನೆ ನೀಡಬಾರದು ಮತ್ತು ರಾಜಕೀಯ ಸಂದೇಶ ನೀಡಬಾರದು ಎನ್ನುವುದು  ಪ್ರಜಾಪ್ರಭುತ್ವದ ಮುಖ್ಯವಾದ ತತ್ವವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನೋಡುವುದಾದರೆ, ಸರ್ಕಾರವೊಂದು ನಿರ್ದಿಷ್ಟ ಕಾರ್ಯಕ್ರಮವನ್ನು ಸಮರ್ಥಿಸುವುದರಿಂದ ಸಮಾಜದಲ್ಲಿ ಸ್ಪಷ್ಟವಾಗಿ ಒಡಕು ಉಂಟಾಗುತ್ತದೆ.  ಕಾರ್ಯಕ್ರಮದ ಬೆಂಬಲಿಗರು ಮತ್ತು ವಿರೋಧಿಗಳ ಮಧ್ಯೆ ಸಂಘರ್ಷಕ್ಕೂ ಎಡೆಮಾಡಿಕೊಡುತ್ತದೆ.ಟಿಪ್ಪು ಜಯಂತಿ ಪ್ರಕರಣದಲ್ಲಿ ಆಗಿರುವಂತೆ, ನ್ಯಾಯಾಂಗದ ಮಧ್ಯಪ್ರವೇಶಕ್ಕೂ ಅವಕಾಶ ಮಾಡಿಕೊಡಲಿದೆ. ಇತಿಹಾಸದಲ್ಲಿನ ನಿರ್ದಿಷ್ಟ ವ್ಯಕ್ತಿಯೊಬ್ಬ ಸ್ವಾತಂತ್ರ್ಯ ಯೋಧ ಹೌದೋ ಅಲ್ಲವೋ ಎನ್ನುವುದರ ಬಗ್ಗೆ ಕೋರ್ಟ್‌ ತೀರ್ಪು ನೀಡುವ ಪ್ರಸಂಗವೂ ಉದ್ಭವಿಸುತ್ತದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ನಡೆಯಲೇಬೇಕು.  ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ರಾಜಕೀಯ. ಆದಾಗ್ಯೂ, ಸಾರ್ವಜನಿಕರ ಭಾವನೆಗಳನ್ನು ಗೌರವಿಸುವುದು ಮತ್ತು ಜನರ ಅನಿಸಿಕೆಗಳಿಗೆ ಸ್ಪಂದಿಸುವುದೂ  ಪ್ರಜಾಪ್ರಭುತ್ವ ಮತ್ತು ರಾಜಕೀಯದ ಮುಖ್ಯ ಗುಣಗಳಾಗಿವೆ ಎನ್ನುವುದನ್ನೂ  ಪ್ರತಿಯೊಬ್ಬರೂ  ಪರಿಗಣಿಸಲೇಬೇಕು.  ಇಲ್ಲದಿದ್ದರೆ ಅಧಿಕಾರದಲ್ಲಿ ಇರುವವರು  ಮುಂದಿನ ಚುನಾವಣೆಯಲ್ಲಿ ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎನ್ನುವುದನ್ನು ಯಾವತ್ತೂ ಮರೆಯಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry