ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲದೇವತೆಗಳ ನೆಲೆ ‘ತನಾಹ್ ಲಾಟ್’

Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಿದೇಶ ಪ್ರವಾಸ ಮಾಡಬೇಕೆನ್ನುವುದು ನನ್ನ ಮತ್ತು ನನ್ನ ಗಂಡ ಅನೂಪ್‌ರ ಬಹಳ ದಿನಗಳ ಆಸೆ. ಎಲ್ಲಿಗೆ ಹೋಗುವುದೆಂಬ ಚರ್ಚೆ ನಡೆದು, ಹಲವು ದೇಶಗಳ  ಹೆಸರು  ಬಂದರೂ ಕೊನೆಗೆ ಇಬ್ಬರೂ ಸೇರಿ ಬಾಲಿಗೆ ಹೋಗೋಣವೆಂದು ನಿರ್ಧರಿಸಿದೆವು. ಎಂದೋ ನೋಡಿದ್ದ ಅಲ್ಲಿನ ದೇವಾಲಯಗಳ ಚಿತ್ರಗಳು ಇದಕ್ಕೆ ಇಂಬು ನೀಡಿದ್ದವು.ಇಂಡೋನೇಷ್ಯಾ ದ್ವೀಪಗಳ ಸಮೂಹ. ಆ ದ್ವೀಪಗಳಲ್ಲೊಂದು ನಾವು ಹೋಗಬೇಕೆಂದಿದ್ದ ಬಾಲಿ.

ಸುತ್ತುವರಿದ ಸಮುದ್ರ, ಬೆಟ್ಟಗುಡ್ಡಗಳು, ಸುಂದರವಾದ ಜಲಪಾತಗಳು, ಅಗ್ನಿಪರ್ವತ, ಅಪಾರ ವನ್ಯಸಂಪತ್ತಿನಿಂದ ಕೂಡಿದ ಬಾಲಿಗೆ ತನ್ನದೇ ಆದ ಸಾಂಸ್ಕೃತಿಕ ನೆಲೆ ಇದೆ.ಹಲವು ಶತಮಾನಗಳ ಹಿನ್ನೆಲೆಯೂ ಇರುವುದರಿಂದ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ.

ಅದು ಬಾಲಿಯಲ್ಲಿನ ಮೊದಲ ಮುಂಜಾವು. ಬೆಳ್ಳಂಬೆಳಗ್ಗೆ ನಾವು ನೋಡಹೊರಟಿದ್ದು ಕಡಲ ತಡಿಯಲ್ಲಿದ್ದ ತನಾಹ್ ಲಾಟ್ ದೇವಾಲಯವನ್ನು. ಐದು ಗಂಟೆಗೆ ಸರಿಯಾಗಿ ನಮ್ಮ ಡ್ರೈವರ್ ಮಾಡೆಗೆ ಬರಲು ಹೇಳಿದ್ದೆವು. ಹಿಂದಿನ ದಿನ ಏರ್‌ಪೋರ್ಟ್‌ನಲ್ಲಿ ನಮ್ಮನ್ನು ಬಹಳ ಹೊತ್ತು ಕಾಯಿಸಿದ್ದ. ಹಾಗಾಗಿ ಅವನು ಹೇಳಿದ ಸಮಯಕ್ಕೆ ಸರಿಯಾಗಿ ಬರುತ್ತಾನೋ ಇಲ್ಲವೋ ಎಂಬ ಅನುಮಾನವಿತ್ತು. ನಮ್ಮ ಅನುಮಾನವನ್ನು ಸುಳ್ಳಾಗಿಸುವಂತೆ ಸರಿಯಾಗಿ ಐದು ಗಂಟೆಗೆ ಹೋಟೆಲ್ ಎದುರು ಟ್ಯಾಕ್ಸಿ ಬಂದು ನಿಂತಿತು.

ಕೆಳಗಿಳಿದ ಮಾಡೆ ‘ಗುಡ್ ಮಾರ್ನಿಂಗ್’ ಎಂದ. ಪ್ರತಿಯಾಗಿ ನಾನು ‘ಸೆಲಾಮತ್ ಪಾಗಿ’ (ಬಹಸಾ ಇಂಡೋನೇಷ್ಯಾ ಭಾಷೆಯಲ್ಲಿ ಗುಡ್‌ ಮಾರ್ನಿಂಗ್‌) ಎಂದಾಗ ಅವನು ಆಶ್ಚರ್ಯದಿಂದ ‘ನಿನಗೆ ಹೇಗೆ ಗೊತ್ತು’ ಎಂಬಂತೆ ನೋಡಿದ. ಸಾವರಿಸಿಕೊಂಡು ನಗುತ್ತಾ, ಮತ್ತೊಮ್ಮೆ ‘ಶುಭೋದಯ’ ಎಂದ. ಮುಂದಿನ ಕೆಲ ನಿಮಿಷಗಳಲ್ಲಿ ನಮ್ಮ ಟ್ಯಾಕ್ಸಿ ತನಾಹ್ ಲಾಟ್ ಕಡೆಗೆ ಸಾಗುತ್ತಿತ್ತು.

ಆಗ ತಾನೇ ಶುರುವಾಗಿತ್ತು ನಮ್ಮ ಕನಸಿನ ಯಾನ. ಇನ್ನು ಒಂಬತ್ತು ದಿನಗಳಲ್ಲಿ ಬಾಲಿಯನ್ನು ಆದಷ್ಟೂ ಸುತ್ತುವ ಹಂಬಲ. ಹೇಗಿರಬಹುದು ಇಲ್ಲಿಯ ಜನ? ಏನಡಗಿರಬಹುದು ನಾವು ಹೋಗಲಿರುವ ಸ್ಥಳಗಳಲ್ಲಿ? ಎಂತಹ ಅನುಭವಗಳು ನಮ್ಮನ್ನು ಇದಿರುಗೊಳ್ಳಬಹುದು? – ಎಂದೆಲ್ಲ ಯೋಚಿಸುತ್ತಿದ್ದೆ. ಆರು ಗಂಟೆ ಸುಮಾರಿಗೆ ತನಾಹ್ ಲಾಟ್ ತಲುಪಿದ್ದೆವು ನಾವು. ಇನ್ನೂ ಮಬ್ಬುಗತ್ತಲೆ ಇತ್ತು.

ಅಲೆಗಳ ಹೊಯ್ದಾಟದ ಶಬ್ದ ತುಸು ದೂರದಿಂದಲೇ ಕೇಳಿಸುತ್ತಿತ್ತು. ಸೂರ್ಯಾಸ್ತಕ್ಕೆ ಪ್ರಸಿದ್ಧವಾದ ಜಾಗಕ್ಕೆ ಸೂರ್ಯೋದಯದ ಸಮಯಕ್ಕೆ ತಲುಪಿದ್ದೆವು. ಪ್ರತೀ ಸಂಜೆ ಇಲ್ಲಿನ ದೇವಾಲಯದ ಹಿಂಬದಿಯಲ್ಲಿ ಹರಡಿರುವ ವಿಶಾಲ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ಕಾಣಲು ನೂರಾರು ಜನ ನೆರೆಯುತ್ತಾರೆ. ಅದೇ ದಿಕ್ಕಿನ ಕಡಲ ತೀರದಲ್ಲಿರುವ  ಉಲುವಾಟು ದೇವಾಲಯದಲ್ಲಿ ಕೂಡ ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಕಾಣಬಹುದು. ಅಂದು ಸಂಜೆ ಉಲುವಾಟುವಿಗೆ ಹೋಗುವುದು ನಮ್ಮ ಯೋಜನೆಯಾಗಿತ್ತು.

ಇನ್ನೂ ಕತ್ತಲೆಯ ಕೈಯೊಳಗೇ ಇತ್ತು ದೇವಾಲಯ. ಪೌರ್ಣಿಮೆಯ ಪೂರ್ಣಚಂದ್ರ ಗುಂಡಗೆ ಮೈತುಂಬಿಕೊಂಡು ಆಕಾಶದಲ್ಲಿನ್ನೂ ಠಳಾಯಿಸುತ್ತಿದ್ದ. ಹುಣ್ಣಿಮೆ ಎಂದ ಮೇಲೆ ಕೇಳಬೇಕೆ? ಉಬ್ಬರ ಇಳಿತಗಳ ಭಾರೀ ಶಬ್ದ ನೀರವತೆಯನ್ನು ಸೀಳಿಬರುತ್ತಿತ್ತು. ಕತ್ತಲಲ್ಲಿಯೇ ಒಂದಷ್ಟು ಛಾಯಾಚಿತ್ರ ತೆಗೆಯುವ ಪ್ರಯತ್ನ ಮಾಡಿದೆವು. ಹೊತ್ತು ಸರಿದಂತೆಲ್ಲಾ ನಿಧಾನವಾಗಿ ಕತ್ತಲೆಯ ಹಿಡಿತ ಸಡಿಲವಾಗಿ ಬೆಳಕು ಹರಡತೊಡಗಿತು. ಆಕಾಶವೆಲ್ಲಾ ತಿಳಿಯಾದ ನೀಲಿ ನೀಲಿ. ಅದನ್ನು ಪ್ರತಿಫಲಿಸುತ್ತಿದ್ದ ಸಮುದ್ರವೂ ನೀಲಿ ನೀಲಿ. ಕತ್ತಲಲ್ಲಿ ಕಂಡ ಕಡುಗಪ್ಪು ಆಕೃತಿಗಳೆಲ್ಲ ಈಗ ಬಣ್ಣ ತಳೆದು ಹೊಸ ರೂಪ ಪಡೆದಿದ್ದವು.

ನಾವು ಹೋದ ಸಮಯ ಮಳೆಗಾಲವಾಗಿರಲಿಲ್ಲ. ಆದರೂ ಆಕಾಶದ ತುಂಬಾ ಬೆಳ್ಮುಗಿಲು! ತನಾಹ್ ಲಾಟ್‌ನ ಬಳಿ ಮುಖ್ಯ ದೇವಾಲಯವಲ್ಲದೆ ಕೆಲವಾರು ಸಣ್ಣ ಸಣ್ಣ ದೇವಾಲಯಗಳಿವೆ. ದಡದಿಂದ ಸಮುದ್ರದೆಡೆಗೆ ಚಾಚಿಕೊಂಡಿರುವ ಕಲ್ಲಿನ ದಾರಿಯ ಕೊನೆಯಲ್ಲಿದೆ ಪುರಾ ಬಾತು ಬೊಲಾಂಗ್. ‘ಪುರಾ’ ಎಂದರೆ ದೇವಸ್ಥಾನ ಎಂದರ್ಥ.

ಅಲ್ಲಿಂದ ಸ್ವಲ್ಪ ಎಡಕ್ಕೆ ಪುರಾ ಬಾತು ಮೆಜಾನ್ ಎಂಬ ನಾಮಫಲಕ ಕಾಣಿಸಿತು. ಇಲ್ಲಿರುವ ದೇವರು ಯಾವುದೆಂದು ಮಾಡೆಯನ್ನು ಪ್ರಶ್ನಿಸಿದೆವು. ಅವನು ‘ಬಾತು ಮೆಜಾನ್’ ಎಂದು ಹೇಳಿ ಸುಮ್ಮನಾದ.

ಭಾರತದಲ್ಲಿನ ಆಚರಣೆಗೂ ಅಲ್ಲಿನ ರೀತಿನೀತಿಗೂ ಅಜಗಜಾಂತರ. ‘ಬಾತು ಮೆಜಾನ್’ ಫಲಕದ ಎದುರು ಕಂಡದ್ದು ಚಿಕ್ಕದೊಂದು ಆವರಣ, ಅದನ್ನು ಸುತ್ತುವರಿದ ಎದೆಯೆತ್ತರದ ಗೋಡೆ, ಮಧ್ಯದಲ್ಲೊಂದು ಚಿಕ್ಕ ಗೇಟು, ಅದಕ್ಕೊಂದು ಪುಟ್ಟ ಬೀಗ, ಒಳಗೆ ಸಣ್ಣ ಸಣ್ಣ ಪಗೋಡಗಳು. ಇವುಗಳನ್ನು ‘ಮೇರು’ ಎಂದೂ ಕರೆಯುತ್ತಾರೆ. ಒಳಗೆ ಯಾವ ವಿಗ್ರಹವೂ ಕಾಣಲಿಲ್ಲ.

ಹಗಲಿರುಳೆನ್ನದೆ ಸಮುದ್ರದ ಅಲೆಗಳು ಅಲ್ಲಿದ್ದ ಹೆಬ್ಬಂಡೆಗಳನ್ನು ಕೊರೆದು ತಮ್ಮದೇ ಆದ ಚಿತ್ತಾರ ಮೂಡಿಸಿದ್ದವು. ಕಣ್ಣು ಹಾಯಿಸುವಷ್ಟು ದೂರದಲ್ಲಿ ನೀಲಿಮಲೆಗಳ ಸಾಲು.ತೆಂಗಿನ ತೋಟಗಳು, ಮಧ್ಯದಲ್ಲಿ ವಿಸ್ತಾರವಾಗಿ ಹರಡಿದ್ದ ಕಲ್ಲುಬಂಡೆಗಳು. ಅವುಗಳ ನಡುವಿನಿಂದೊಂದು ಜಲಪಾತ ನೇರವಾಗಿ ಸಮುದ್ರಕ್ಕೆ ಬೀಳುತ್ತಿತ್ತು.

ಅಪರೂಪದ ದೃಶ್ಯವದು. ಇಷ್ಟೆಲ್ಲ ನೋಡುವಷ್ಟರಲ್ಲಿ ಸುಮಾರಾಗಿ ಬೆಳಕು ಹರಡಿತ್ತು. ತಿಳಿಹಳದಿ ಬಣ್ಣ ಎಲ್ಲೆಡೆ ಹರಡಿ ಸೂರ್ಯನ ಆಗಮನವನ್ನು ಸೂಚಿಸುತ್ತಿತ್ತು. ಪಕ್ಷಿಗಳು ಗಿಡದಿಂದ ಗಿಡಕ್ಕೆ ಹಾರುತ್ತ ಚಿಲಿಪಿಲಿಗುಟ್ಟುತ್ತಿದ್ದವು. ನಂತರ ಅಲ್ಲಿನ ಮುಖ್ಯ ದೇವಾಲಯವನ್ನು ನೋಡಲು ಹೋದೆವು. ಸುತ್ತಲೂ ಸಮುದ್ರದ ನೀರಿನಿಂದ ಆವೃತವಾದ ದೊಡ್ಡ ಬಂಡೆಕಲ್ಲಿನ ಮೇಲೆ ವಿರಾಜಮಾನವಾಗಿದೆ ಪುರಾ ತನಾಹ್ ಲಾಟ್ – ಬಾಲಿಯ ರಾಜಧಾನಿಯಾದ ಡೆನ್‌ಪಸಾರ್‌ನಿಂದ ಸುಮಾರು 20 ಕಿ.ಮೀ. ದೂರದಲ್ಲಿ.

16ನೇ ಶತಮಾನದಲ್ಲಿ ನಿರ್ಮಾಣವಾಯಿತೆಂದು ಹೇಳಲಾದ ಈ ದೇವಾಲಯ ತಬನಾನ್  ಪ್ರಾಂತ್ಯದಲ್ಲಿದೆ. ಈ ಸುಂದರ ದೇಗುಲವನ್ನು ಕಟ್ಟಿಸಿದ್ದು ಡ್ಯಾಂಗ್‌ ಹ್ಯಾಂಗ್‌ ನಿರರ್ಥ ಎನ್ನುವ ವ್ಯಕ್ತಿ. ಪ್ರವಾಸನಿರತನಾಗಿದ್ದ ಡ್ಯಾಂಗ್‌ ಸಮುದ್ರ ತಟದಲ್ಲಿ ಸಂಚರಿಸುತ್ತಿದ್ದಾಗ ಸಾಗರ ನಡುವಣ ಈ ಸುಂದರ ಕಲ್ಲನ್ನು ನೋಡುತ್ತಾನೆ. ಅಲ್ಲಿ ಹೋಗಿ ವಿಶ್ರಾಂತಿ ಪಡೆದುಕೊಳ್ಳುತ್ತಾನೆ. ಅವನು ಅಲ್ಲಿ ಕೂತಿರುವುದನ್ನು ನೋಡಿದ  ಮೀನುಗಾರರು ಅವನಿಗೆ ಉಡುಗೊರೆಗಳನ್ನು ತಂದುಕೊಡುತ್ತಾರೆ.

ಅಂದು ರಾತ್ರಿ ನಿರರ್ಥ ಅಲ್ಲಿಯೇ ಕಳೆಯುತ್ತಾನೆ. ಮರುದಿನ ಅಲ್ಲಿನ ಮೀನುಗಾರರನ್ನು ಸೇರಿಸಿ – ‘ಈ ಕಲ್ಲುದ್ವೀಪ ಸಮುದ್ರದೇವತೆಗಳಿರುವ ಪವಿತ್ರ ಸ್ಥಳ. ಅವರಿಗಾಗಿ ಇಲ್ಲೊಂದು ದೇವಾಲಯ ನಿರ್ಮಿಸಿ’ ಎಂದು ಹೇಳುತ್ತಾನೆ. ಅವನ ಈ ಸೂಚನೆಯ ಪ್ರಕಾರ ಸಮುದ್ರದೇವತೆಗಳ ಆರಾಧನೆಗಾಗಿ ಇದನ್ನು ಕಟ್ಟಲಾಯಿತಂತೆ.

ಕೆಲವು ವರ್ಷಗಳ ಹಿಂದೆ ಅಲೆಗಳ ನಿರಂತರ ಹೊಡೆತದಿಂದ ನೀರಿನಲ್ಲಿಯೇ ಇರುವ ಈ ಮಂದಿರಕ್ಕೆ ತೊಂದರೆಯಾಯಿತು. ಅದನ್ನು ಮತ್ತೆ ಬಲಪಡಿಸಲು ಭದ್ರ ಅಡಿಪಾಯ ಕೊಡಲಾಯಿತು. ನೀರಿನ ಮಟ್ಟ ಹೆಚ್ಚಿದಾಗ ಅಲ್ಲಿಗೆ ಹೋಗಲು ಇರುವ ಕಲ್ಲಿನ ಹಾದಿ ಜಲಸಮಾಧಿಯಾಗುತ್ತದೆ. ಆಗ ದೂರದಿಂದಲೇ ಇದನ್ನು ನೋಡಿ ತೃಪ್ತಿ ಪಡಬೇಕಷ್ಟೆ. ನಾವು ಅಲ್ಲಿಗೆ ಹೋದಾಗಲೂ ನೀರಿನ ಪ್ರಮಾಣ ಜಾಸ್ತಿ ಇದ್ದುದರಿಂದ ಅದನ್ನು ಸಮೀಪಿಸಲು ಸಾಧ್ಯವಾಗಲಿಲ್ಲ. ನಿಧಾನವಾಗಿ ಹಸಿವು ಕಾಡತೊಡಗಿತ್ತು. ದಾರಿಯಲ್ಲಿ ಫಲಾಹಾರ ಮುಗಿಸಿ ಮುಂದಿನ ಸ್ಥಳಕ್ಕೆ ಹೊರಡುವ ವೇಳೆಗೆ ಬಿಸಿಲೇರಿತ್ತು.

ಹತ್ತಿರದ ಪ್ರೇಕ್ಷಣೀಯ ಸ್ಥಳಗಳು
ತನಾಹ್ ಲಾಟ್‌ನಿಂದ ಸುಮಾರು 20 ಕಿ ಮೀ  ದೂರದಲ್ಲಿ ಮೆಂಗ್ವಿ ರಾಜಮನೆತನಕ್ಕೆ ಸೇರಿದ ತಮನ್ ಆಯುನ್ ದೇವಾಲಯವಿದೆ. ಬಾಲಿಯ ರಾಜಧಾನಿಯಾದ ಡೆನ್‌ಪಸಾರ್‌ಗೆ ತನಾಹ್ ಲಾಟ್‌ನಿಂದ 20 ಕಿ.ಮೀ. ದಾರಿ. ಹತ್ತಿರದಲ್ಲೇ ಸುಂದರವಾದ ಕಡಲ ತೀರಗಳಿವೆ. ಸಮುದ್ರದ ತೀರದಲ್ಲಿ ಸಂಜೆಗಳನ್ನು ಕಳೆಯಲು ಬಯಸುವವರಿಗೆ ಕುಟ ಬೀಚ್, ಜಿಂಬರಾನ್ ಬೀಚ್ ಸಮೀಪದಲ್ಲೇ ಇವೆ.

ನೂಸ ದುವಾ ಬೀಚ್‌ನಲ್ಲಿ ಬನಾನಾ ಬೋಟ್, ಪ್ಯಾರಾಚೂಟ್, ಸ್ಪೀಡ್ ಬೋಟ್, ಮುಂತಾದ ಆಟಗಳನ್ನು ಆಡಲು ಅವಕಾಶಗಳಿವೆ. ಬಾಲಿಯ ದಕ್ಷಿಣದ ತುದಿಯಲ್ಲಿರುವ  ಉಲುವಾಟು ದೇವಸ್ಥಾನ  ನೋಡಲೇಬೇಕಾದ ಸ್ಥಳ. ಅಲ್ಲಿ ಪ್ರತೀ ಸಂಜೆ ನಡೆಯುವ ಕೆಚಕ್ ನೃತ್ಯ ಪ್ರದರ್ಶನ ಆಕರ್ಷಕ. ಸನೂರ್ ಕಡಲ ತೀರ ಸೂರ್ಯೋದಯದ ಸೌಂದರ್ಯಕ್ಕೆ ಪ್ರಸಿದ್ಧಿ. ಹತ್ತಿರದಲ್ಲೇ ಸ್ಕೂಬಾ ಡೈವಿಂಗ್ ಕೇಂದ್ರಗಳೂ ಇವೆ.

ಟ್ಯಾಕ್ಸಿ ಮತ್ತು ಮಾರ್ಗದರ್ಶಕ
ಬಾಲಿಯಲ್ಲಿ ಸಾಮೂಹಿಕ ಸಾರಿಗೆ ವ್ಯವಸ್ಥೆ ಇಲ್ಲ. ಓಡಾಡಲು ಟ್ಯಾಕ್ಸಿಗಳನ್ನು ಅವಲಂಬಿಸಬೇಕು. ಈ ಟ್ಯಾಕ್ಸಿಗಳನ್ನು ಅಂತರ್ಜಾಲದಲ್ಲಿ ಮೊದಲೇ ಬುಕ್ ಮಾಡಿಕೊಳ್ಳಬಹುದು.ನಾವು ಮೊದಲೇ ಬುಕ್ ಮಾಡಿದ್ದರಿಂದ ನಮ್ಮ ಡ್ರೈವರ್ ಏರ್‌ಪೋರ್ಟ್‌ಗೂ ನಮ್ಮನ್ನು ಕರೆದೊಯ್ಯಲು ಬಂದಿದ್ದ. ವಸತಿಗೃಹಗಳನ್ನೂ ಮೊದಲೇ ಕಾಯ್ದಿರಿಸಿಕೊಂಡರೆ ಒಳ್ಳೆಯದು. ಎಲ್ಲ ರೀತಿಯ ಸೌಲಭ್ಯ ಒದಗಿಸುವ ಕಡಿಮೆ ಬೆಲೆಯ ಹೋಟೆಲ್‌ಗಳೂ ಸಾಕಷ್ಟಿವೆ. ಇದಕ್ಕಾಗಿ ಅಂತರ್ಜಾಲದಲ್ಲಿ ಒಂದಷ್ಟು ತಡಕಾಡಬೇಕಷ್ಟೇ. ಹೆಚ್ಚಿನ ಸ್ಥಳಗಳಲ್ಲಿ ಗೈಡ್ ಲಭ್ಯವಿರುತ್ತಾರೆ. ಆದರೆ ಅವರು ಹೇಳುವ ದುಬಾರಿ ಬೆಲೆ ತೆತ್ತು ಜೊತೆಗೆ ಕರೆದೊಯ್ಯಬೇಕಾಗುತ್ತದೆ.

ಆಹಾರ ವೈವಿಧ್ಯ
ಸಸ್ಯಾಹಾರಿಗಳಿಗೆ ಬಾಲಿಯಲ್ಲಿ ಆಹಾರದ ಸಮಸ್ಯೆ ಎದುರಾಗುತ್ತದೆ. ಸಸ್ಯಾಹಾರಿ ಹೋಟೆಲ್‌ಗಳು ಇದ್ದರೂ ಮಾಂಸಾಹಾರಿಗಳಿಗೆ ಇಲ್ಲಿ ಹೆಚ್ಚಿನ ಆದ್ಯತೆ. ಅಲ್ಲಿ ಸಿಗುವ ‘ಚಿಪ್ಸ್‌’ ಪೊಟ್ಟಣ ಸಹ ನಾನ್‌ವೆಜ್ ಫ್ಲೇವರ್‌ ಹೊಂದಿತ್ತು. ಹಣ್ಣುಗಳು ಯಥೇಚ್ಛ ಸಿಗುತ್ತವೆ. ಸಸ್ಯಾಹಾರಿಗಳು ಬಿಸ್ಕೆಟ್‌ಗಳನ್ನೂ ತಂಪು ಪಾನೀಯಗಳನ್ನು ಜೊತೆಗೆ ಇರಿಸಿಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT