ಮಹಾಸಾಗರಗಳ ದತ್ತುಪುತ್ರಿಯ ಒಲಿಂಪಿಕ್ಸ್ ಕನಸು

7

ಮಹಾಸಾಗರಗಳ ದತ್ತುಪುತ್ರಿಯ ಒಲಿಂಪಿಕ್ಸ್ ಕನಸು

Published:
Updated:
ಮಹಾಸಾಗರಗಳ ದತ್ತುಪುತ್ರಿಯ ಒಲಿಂಪಿಕ್ಸ್ ಕನಸು

2015ರ ಜನವರಿ 11 ಅಥವಾ 12. ಸರಿಯಾಗಿ ನೆನಪಿಲ್ಲ. ಆ ಪೈಕಿ ಒಂದು ಮುಂಜಾನೆ ದಿನಪತ್ರಿಕೆಯ ಮೂಲೆಯಲ್ಲಿ ಅಡಗಿದ್ದ ವಿಶ್ವದಾಖಲೆಯ ಆ ಸುದ್ದಿ ಓದಿದಾಗ ನನಗರಿವಿಲ್ಲದಂತೆಯೇ ಕಣ್ಣಲ್ಲಿ ಸಂತೋಷದ ಹನಿಗಳು ಉಕ್ಕಿಬಂದವು. ಎರಡೆರಡು ಬಾರಿ ಅದೇ ಸುದ್ದಿಯನ್ನು ಓದಿ ಅದು ಆಕೆಯೇ ಎನ್ನುವುದನ್ನು ಖಚಿತಪಡಿಸಿಕೊಂಡೆ.ಹೌದು, ಅದು ಆಕೆಯೇ! ಎಂದು ಖಚಿತವಾದ ಮೇಲೆ ನನ್ನ ಕಾಲು ನೆಲದ ಮೇಲಿರಲಿಲ್ಲ. ಜೊತೆಗೆ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಯಾವ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲಿ ಎಂಬ ಚಡಪಡಿಕೆ.ಪತ್ರಿಕಾ ವ್ಯವಸಾಯಕ್ಕೆ ಕೊನೆ ಹಾಡಿ, ಒಂಬತ್ತು ತಿಂಗಳ ಮೊದಲ ವನವಾಸ ಮುಗಿಸಿ, 2011ರ ಜೂನ್‌ನಲ್ಲಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ‘ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮಿಡಿಯಾ ಅಂಡ್ ಕಮ್ಯುನಿಕೇಷನ್‌’ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದೆ. ಜುಲೈ ಹೊತ್ತಿಗೆ ಸುಮಾರು 80 ಜನರಿದ್ದ ಹೊಸ ಬ್ಯಾಚ್ ಸಂಸ್ಥೆಯನ್ನು ಪ್ರವೇಶಿಸಿತು.ಆಗಸ್ಟ್‌ನ ಒಂದು ಬೆಳಿಗ್ಗೆ. ಕ್ಯಾಂಪಸ್‌ನ ಐದನೇ ಮಹಡಿಯಲ್ಲಿದ್ದ ಕ್ಯಾಬಿನ್‌ನಲ್ಲಿ ಕೂತು ಮಧ್ಯಾಹ್ನದ ಕ್ಲಾಸ್‌ಗೆ ಸಿದ್ಧತೆ ನಡೆಸುತ್ತಿದ್ದೆ. ಬಾಗಿಲು ತಟ್ಟಿದ ಸದ್ದಾಯಿತು. ಹಿಂತಿರುಗಿ ನೋಡಿದಾಗ ವಿದ್ಯಾರ್ಥಿನಿಯೊಬ್ಬರು ನಿಂತಿದ್ದು ಗಮನಕ್ಕೆ ಬಂತು. ‘ಪ್ಲೀಸ್ ಕಮ್ಮಿನ್’ ಎಂದೆ. ಬಾಗಿಲು ತೆಗೆದು ಒಳಬಂದ ವಿದ್ಯಾರ್ಥಿನಿ, ‘ನನ್ನ ಹೆಸರು ಭಕ್ತಿ ಶರ್ಮ ಅಂತ.ನಿಮ್ಮಿಂದ ನನಗೆ ಒಂದು ಸಹಾಯವಾಗಬೇಕು’ ಎಂದು ವಿನಮ್ರವಾಗಿ ಕೇಳಿಕೊಂಡರು.ಎದುರಿದ್ದ ಕುರ್ಚಿಯ ಮೇಲೆ ಕೂತುಕೊಳ್ಳಲು ಹೇಳಿ. ‘ಏನು ವಿಷಯ?’ ಎಂದೆ. ‘ನೀವು ಮರೆತುಬಿಟ್ಟಿರಿ ಅಂತನ್ನಿಸುತ್ತಿದೆ. ನಾನು ದೂರಗಾಮಿ ಈಜುಪಟು ಭಕ್ತಿ ಶರ್ಮ. ಮೊದಲ ವರ್ಷದ ವಿದ್ಯಾರ್ಥಿನಿ’ ಎಂದು ಹೇಳಿದ ತಕ್ಷಣ ಅವರ ಸಾಹಸಗಾಥೆಯ ಕಟ್ಟು ಮನಸ್ಸಲ್ಲಿ ಬಿಚ್ಚಿಕೊಂಡಿತು. ‘ಸಿಂಬಯಾಸಿಸ್’ ಪ್ರವೇಶಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಅವರ ಜೀವನದ ಕುರಿತೇ ಅರ್ಧಗಂಟೆಯ ಒಂದು ಇಂಟ್ರಡಕ್ಷನ್ ಕ್ಲಾಸ್ ತೆಗೆದುಕೊಳ್ಳುವ ಸಂಪ್ರದಾಯವಿದೆ. ಅದೂ ಉಳಿದೆಲ್ಲ ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳ ಸಮ್ಮುಖದಲ್ಲಿಯೇ! ಆ ಇಂಟ್ರಡಕ್ಷನ್ ವೇಳೆ ಭಕ್ತಿ ಅವರ ಅದ್ಭುತ ಬದುಕಿನ ಚಿತ್ರವನ್ನು ನಮ್ಮೆಲ್ಲರೆದುರು ತೆರೆದಿಟ್ಟಿದ್ದರು.ಮುಂಬೈನಲ್ಲಿ ಹುಟ್ಟಿ ರಾಜಸ್ತಾನದ ಉದಯಪುರದಲ್ಲಿ ಬೆಳೆದ ಭಕ್ತಿ ಅವರ ತಂದೆ ಚಂದ್ರಶೇಖರ ಶರ್ಮ. ತಾಯಿ ಲೀನಾ ಶರ್ಮ. ಮೂಲತಃ ಈಜುಪಟುವಾಗಿದ್ದು, ಈಗ ಮಗಳ ಪಾಲಿಗೆ ಕೋಚ್ ಆಗಿರುವ ಲೀನಾ, ಭಕ್ತಿಗೆ ಎರಡೂವರೆ ವರ್ಷವಾಗಿದ್ದಾಗಲೇ ಈಜುಕೊಳಕ್ಕೆ ತಳ್ಳಿದ್ದರಂತೆ! ಉದಯಪುರದ ಪಂಚತಾರಾ ಹೋಟೆಲ್‌ಗಳು ಮತ್ತು ರಿಸಾರ್ಟ್‌ಗಳಲ್ಲಿರುವ ಈಜುಕೊಳಗಳಲ್ಲಿ ಒಂದೆರಡು ವರ್ಷ ಮೀನಾಗುವ ಯತ್ನ ಮಾಡಿದ ಭಕ್ತಿ ನಂತರದ ನಾಲ್ಕು ವರ್ಷಗಳ ಕಾಲ ಈಜಿನಿಂದ ದೂರವಿರಬೇಕಾಯಿತು.ಕಾರಣ, ವರ್ಷದ ಆರು ತಿಂಗಳು ಚಳಿಯಿಂದ ಅಲ್ಲಿನ ಈಜುಕೊಳಗಳು ಮುಚ್ಚಿರುತ್ತಿದ್ದವು ಮತ್ತು ಪಂಚತಾರಾ ಈಜುಕೊಳಗಳಿಗೆ ಕೊಡುವಷ್ಟು ಶುಲ್ಕ ಅವರ ಪೋಷಕರ ಬಳಿ ಇರುತ್ತಿರಲಿಲ್ಲ. ಆಕೆಗೆ ಸುಮಾರು ಎಂಟು ವರ್ಷ ತುಂಬುವ ವೇಳೆ, ಅಲ್ಲಿನ ಶಾಲೆಯೊಂದರಲ್ಲಿ ಈಜುಕೊಳ ನಿರ್ಮಾಣ ಮಾಡಿದರು. ಭಕ್ತಿ ಮತ್ತೆ ನೀರಿಗೆ ಧುಮುಕಿದರು.ಅಂದಿನಿಂದ ಇಂದಿನವರೆಗೆ ಈ ಮತ್ಸ್ಯಕನ್ಯೆಯ ಪಾಲಿಗೆ ಇಡೀ ಜೀವನವೇ ಈಜಾಟವಾಗಿ ಹೋಯಿತು. ಹದಿನಾಲ್ಕು ವರ್ಷ ತುಂಬುವುದರೊಳಗೆ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯಮಟ್ಟದ ಈಜು ಚಾಂಪಿಯನ್ ಆಗಿ ಹೊರಹೊಮ್ಮಿದ ಆಕೆ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಸಾಕಷ್ಟು ಹೆಸರು ಗಳಿಸಿಯಾಗಿತ್ತು.‘‘ಚಳಿಗಾಲದ ಸಂದರ್ಭದಲ್ಲಿ ನಮ್ಮ ಶಾಲೆಯ ಈಜುಕೊಳ ಕೂಡ ಮುಚ್ಚಿರುತ್ತಿತ್ತು. ಆದರೆ, ಆ ಈಜುಕೊಳದ ಆವರಣಕ್ಕೆ ಹಾಕುತ್ತಿದ್ದ ಬೀಗದ ಕೈ ಮಾತ್ರ ನನ್ನ ಅಮ್ಮನ ಕೈಯಲ್ಲಿ ಇರುತ್ತಿತ್ತು. ಎಂತಹ ಚಳಿಯಿದ್ದರೂ, ಪ್ರತಿದಿನ ಬೆಳಿಗ್ಗೆ ನನ್ನನ್ನು ಕರೆದುಕೊಂಡು ಹೋಗಿ ನೀರಿಗಿಳಿಸುತ್ತಿದ್ದ ಅಮ್ಮ, ಕೊಳದಂಚಿನಲ್ಲಿ ಓಡಾಡುತ್ತಾ ತರಬೇತಿ ಮಾಡಿಸುತ್ತಿದ್ದರು. ಅಂತಹ ಒಂದು ಮಂಜು ತುಂಬಿದ ಮುಂಜಾನೆ ನಾನು ಈಜುಕೊಳದಲ್ಲಿ ಅಭ್ಯಾಸ ಮಾಡುತ್ತಿದ್ದೆ.ಅಮ್ಮ ನನ್ನ ಬಳಿ, ನಿಂಗೆ ಇಂಗ್ಲಿಷ್ ಚಾನೆಲ್ ಗೊತ್ತಾ? ಎಂದು ಕೇಳಿದರು. ಇಲ್ಲ ಎಂದೆ. ನೀನ್ಯಾಕೆ ಇಂಗ್ಲಿಷ್ ಚಾನೆಲ್ ಈಜುವ ಯತ್ನ ಮಾಡಬಾರದು? ಎಂಬ ಅವರ ಪ್ರಶ್ನೆಗೆ ನಾನು ಕೊಟ್ಟ ಉತ್ತರ, ನಾನು ಅದಕ್ಕೆ ಸಿದ್ಧ’’ ಎಂದು ಭಕ್ತಿ ಹೇಳಿದ ಮಾತುಗಳಿವು. ಆ ಹುಮ್ಮಸ್ಸಿನಲ್ಲಿಯೇ ಭಕ್ತಿ ಕೈಹಾಕಿದ ಮೊದಲ ಸಾಹಸ, ನವಿ ಮುಂಬೈನ ಉರಾನ್ ಹಡಗುಕಟ್ಟೆಯಿಂದ ಈಜಿಕೊಂಡು ಮುಂಬೈನ ‘ಗೇಟ್ ವೇ ಆಫ್ ಇಂಡಿಯ’ ತಟ ಸೇರಿದ್ದು.14 ವರ್ಷದ ಹುಡುಗಿ 5 ಗಂಟೆಗಳ ಅವಧಿಯಲ್ಲಿ 16 ಕೀಲೋ ಮೀಟರ್ ಉದ್ದದ ಆ ಜಲಹಾದಿಯನ್ನು ಕ್ರಮಿಸಿದಾಗ ಮಹಾನಗರಿ ನಿಬ್ಬೆರಗಾಗಿತ್ತು. ಅರಬ್ಬಿ ಸಮುದ್ರದಲ್ಲಿ ಯಶಸ್ವಿಯಾದ ಮೇಲೆ ಭಕ್ತಿ ತನ್ನ ತಾಯಿ ಲೀನಾ ಮತ್ತು ಗೆಳತಿ ಪ್ರಿಯಾಂಕ ಗೆಹ್ಲೋಟ್ ಜೊತೆ ಸೇರಿ ರೀಲೆ ತಂಡ ಕಟ್ಟಿದರು. ಆ ರೀಲೆ ತಂಡ ಯಶಸ್ವಿಯಾಗಿ ‘ಇಂಗ್ಲಿಷ್ ಚಾನೆಲ್’ ಈಜಿ ದಾಟಿತು. ಆಗಿನ್ನೂ ಭಕ್ತಿಗೆ 15 ವರ್ಷ. ‘ಇಂಗ್ಲಿಷ್ ಚಾನೆಲ್’ ಜೊತೆಯಾಗಿ ಮತ್ತು ಯಶಸ್ವಿಯಾಗಿ ಈಜಿದ ಜಗತ್ತಿನ ಏಕೈಕ ತಾಯಿ–ಮಗಳ ಜೋಡಿ ಎಂಬ ದಾಖಲೆ ಲೀನಾ ಮತ್ತು ಭಕ್ತಿ ಹೆಸರಲ್ಲಿ ಉಳಿದುಕೊಂಡಿತು.2006ರ ಜುಲೈ 6, ಭಕ್ತಿ ಇಂಗ್ಲೆಂಡ್‌ನ ಡೋವರ್‌ನಲ್ಲಿರುವ ಷೇಕ್ಸ್‌ಪಿಯರ್ ಬೀಚ್‌ನಲ್ಲಿ ಏಕಾಂಗಿಯಾಗಿ ‘ಇಂಗ್ಲಿಷ್ ಚಾನೆಲ್‌’ಗೆ ಹಾರಿದಾಗ ಆಕೆಗೆ 16 ವರ್ಷ. ‘ನನಗಿಂತ ಮೊದಲು ಭಾರತದವರೇ ಆದ ಆರತಿ ಸಹಾ ಮತ್ತು ರೂಪಾಲಿ ರೆಪಾಲೆ ‘ಇಂಗ್ಲಿಷ್ ಚಾನೆಲ್’ ಯಶಸ್ವಿಯಾಗಿ ಈಜಿ ದಾಟಿದ್ದರು. ಅದನ್ನು ಜಗತ್ತಿನ ಅತ್ಯಂತ ಸಾಹಸಮಯ ಈಜು ಎಂದೇ ಪರಿಗಣಿಸಲಾಗಿದೆ.ಶಿಖರಗಾಮಿಗಳಿಗೆ ಮೌಂಟ್ ಎವರೆಸ್ಟ್ ಹೇಗೆ ಜೀವನದ ಅಂತಿಮ ಗುರಿಯೋ, ದೂರಗಾಮಿ ಈಜುಪಟುಗಳ ಪಾಲಿಗೆ ‘ಇಂಗ್ಲಿಷ್ ಚಾನೆಲ್’ ಹಾಗೆ. ಸೆಲ್ಟಿಕ್ ಮತ್ತು ನಾರ್ತ್ ಸಮುದ್ರ ಸೇರುವ, ಇಂಗ್ಲೆಂಡ್ ಮತ್ತು ಫ್ರಾನ್ಸ್ ತೀರವನ್ನು ಜೊತೆಗೂಡಿಸುವ ‘ಇಂಗ್ಲಿಷ್ ಚಾನೆಲ್’ ಈಜುವುದೆಂದರೆ ಸಾವಿನೊಂದಿಗೆ ಸೆಣಸಾಟ. ಆ ಯತ್ನದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಶೇಕಡಾ 80ರಷ್ಟು ಮಂದಿ ಸೋಲನುಭವಿಸಿದ್ದಾರೆ’– ಭಕ್ತಿ ಹೇಳಿದಾಗ ಉಸಿರುಗಟ್ಟಿದ ಅನುಭವ.‘‘ಆ ಮುಂಜಾನೆ ಮೂರು ಗಂಟೆಗೆ ಡೋವರ್‌ನಲ್ಲಿ ನಾನು ನೀರಿಗೆ ಹಾರಿದವಳು ಸುಮಾರು ಒಂಬತ್ತು ಗಂಟೆ ಸತತ ಈಜಾಡಿ ಕಲಾಯಿಸ್ ಹತ್ತಿರ ತಲುಪಿದ್ದೆ. ನನ್ನ ಕಣ್ಣಿಗೇ ಆ ಕಡಲ ತೀರ ಕಾಣುತ್ತಿತ್ತು. ಅಲೆಗಳ ಸೆಳೆತ ಎಷ್ಟಿತ್ತು ಎಂದರೆ ನಂತರ ಸುಮಾರು ಮೂರು ಗಂಟೆ ನಾನು ಈಜುತ್ತಲೇ ಇದ್ದರೂ, ಒಂದೇ ಒಂದು ಅಡಿ ಮುಂದೆ ಸಾಗಲಾಗಲಿಲ್ಲ.ನನ್ನ ನೆರವಿಗೆ ಹಿಂದೆ ಬರುತ್ತಿದ್ದ ಬೋಟ್‌ನ ಕ್ಯಾಪ್ಟನ್– ‘ಆ ಮಗುವನ್ನು ಸಾಯಲು ಬಿಡಬೇಡಿ, ನೀರಿಂದ ಹೊರಗೆ ಎಳೆದುಕೊಳ್ಳಿ’ ಎಂದು ಕೂಗಲಾರಂಭಿಸಿದರು.ಬೋಟ್‌ನಲ್ಲಿದ್ದ ಅಮ್ಮ, ‘ನಿನ್ನ ಕೈಯಲ್ಲಿ ಸಾಧ್ಯವಾಗದಿದ್ದರೆ ಮೇಲಕ್ಕೆ ಬಂದು ಬಿಡು’ ಎಂದರು. ಆ ಹೊತ್ತಿನಲ್ಲಿ ಏನನ್ನಿಸಿತೋ ಏನೋ, ಒಂದು ಕ್ಷಣ ಕಣ್ಣು ಮುಚ್ಚಿ, ತಲೆ ನೀರಿನೊಳಗೆ ಹಾಕಿ ಜೋರಾಗಿ ಈಜಲಾರಂಭಿಸಿದೆ. ಎರಡು ಗಂಟೆಯೊಳಗೆ ಗುರಿ ತಲುಪಿ ಕುಸಿದುಬಿದ್ದೆ’’. ಭಕ್ತಿ ಹೇಳಿದಾಗ ಇಡೀ ಕ್ಲಾಸ್‌ನಲ್ಲಿ ಸೂಜಿ ಬಿದ್ದರೂ ಸದ್ದು ಕೇಳಿಸುವಷ್ಟು ಮೌನ.ಇಂಗ್ಲಿಷ್ ಕಾಲುವೆಯನ್ನು ಈಜಿದ ಕೆಲವೇ ತಿಂಗಳಲ್ಲಿ ಭಕ್ತಿ ಲೇಕ್ ಜ್ಯೂರಿಚ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದರು. 2007ರಲ್ಲಿ ಗಲ್ಫ್ ಆಪ್ ಮೆಕ್ಸಿಕೊ, ಪೆಸಿಫಿಕ್ ಮಹಾಸಾಗರದ ರಾಕ್, ಅಟ್ಲಾಂಟಿಕ್ ಮಹಾಸಾಗರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸ್ವರ್ಣ, ಮೆಡಿಟರೇನಿಯನ್ ಸಮುದ್ರದ ಸ್ಟ್ರೈಟ್ ಆಫ್ ಜಿಬ್ರಾಲ್ಟರ್ ದಾಟಿ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸಿದರು.2010ರಲ್ಲಿ ಅಂದರೆ ‘ಸಿಂಬಯಾಸಿಸ್’ ಸೇರುವ ಒಂದು ವರ್ಷದ ಮೊದಲು ಭಕ್ತಿ ಆರ್ಕಟಿಕ್ ಮಹಾಸಾಗರದಲ್ಲಿ ಈಜಿ ದಾಖಲೆ ಮಾಡಿದರು. ಆ ಮೂಲಕ ಜಗತ್ತಿನ ನಾಲ್ಕು ಮಹಾಸಾಗರಗಳಲ್ಲಿ ಈಜಿದ ಅತ್ಯಂತ ಕಿರಿಯ ಮತ್ತು ಎರಡನೇ ಈಜುಪಟುವಾಗಿದ್ದರು. ಭಾರತದಲ್ಲಿ ಸಾಹಸ ಕ್ರೀಡೆಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ತೇನ್‌ಸಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿ’ ಅವರನ್ನು ಹುಡುಕಿಕೊಂಡು ಬಂದಿತ್ತು. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಕೈಯಿಂದ ಪ್ರಶಸ್ತಿ ಸ್ವೀಕರಿಸಿ, ಸ್ನಾತಕೋತ್ತರ ಪದವಿಯ ಬೆನ್ನು ಹತ್ತಿಕೊಂಡು ನಮ್ಮೆದುರು ಬಂದು ನಿಂತಿದ್ದರು.‘ನಿಮಗೆ ನನ್ನಿಂದ ಏನಾಗಬೇಕು ಹೇಳಿ. ನನ್ನಿಂದ ಸಾಧ್ಯವಾದಲ್ಲಿ ಖಂಡಿತ ಸಹಾಯ ಮಾಡುತ್ತೇನೆ’ ಎಂದು ಭರವಸೆ ನೀಡಿದೆ. ‘ನಾನಿಲ್ಲಿ ಎಂಬಿಎ ಪಡೆಯಲು ಬಂದಿರುವುದು ನಿಜ. ಆದರೆ, ನನ್ನ ಬದುಕು ಈಜಿಗೆ ಮೀಸಲು. ಇಲ್ಲಿಗೆ ಬಂದು ಎರಡು ತಿಂಗಳಾಗಿದೆ. ಒಂದೇ ಒಂದು ದಿನ ಕೂಡ ನಾನು ಈಜುಕೊಳಕ್ಕೆ ಇಳಿದು ಅಭ್ಯಾಸ ಮಾಡಿಲ್ಲ.ಬೆಂಗಳೂರಿನ ಯಾವ ಮೂಲೆಯಲ್ಲಾದರೂ ಪರವಾಗಿಲ್ಲ, ದಿನಾ ಬೆಳಿಗ್ಗೆ ಅಭ್ಯಾಸ ಮಾಡಲು ಒಂದು ಈಜುಕೊಳ ಹುಡುಕಿಕೊಡಿ. ಇಲ್ಲಾ ಎನ್ನಬೇಡಿ’– ಭಕ್ತಿ ನಮ್ರರಾಗಿ ಕೇಳಿಕೊಂಡರು. ಜೀವನದಲ್ಲಿ ಒಮ್ಮೆಯೂ ಈಜುಕೊಳಕ್ಕೆ ಇಳಿಯದ, ಈಜಲು ಬಾರದ, ಹೈಡ್ರೋಫೋಬಿಯ ಇರುವ ವ್ಯಕ್ತಿಗೀಗ ಈಜುಕೊಳ ಹುಡುಕಿಕೊಡುವ ಜವಾಬ್ದಾರಿ!ಸಂದಿಗ್ಧಕ್ಕೆ ಸಿಕ್ಕಿಹಾಕಿಕೊಂಡೆ. ಎದುರು ಕೂತಿದ್ದ ಮಹಾನ್ ಸಾಧಕಿಯನ್ನು ಕಂಡಾಗ, ನನ್ನ ಕೈಯಲ್ಲಿ ಸಾಧ್ಯವಿಲ್ಲ ಎಂದು ಹೇಳಲು ಮನಸ್ಸಾಗಲಿಲ್ಲ. ‘ಡೋಂಟ್ ವರಿ ಭಕ್ತಿ. ಈಗ ನೀವು ಕ್ಲಾಸ್‌ಗೆ ಹೋಗಿ. ಸಂಜೆ ಆರು ಗಂಟೆಗೆ ನೀವು ಕ್ಲಾಸಿಂದ ಹೊರಬರುವಷ್ಟರಲ್ಲಿ ನಿಮಗೊಂದು ಈಜುಕೊಳ ಹುಡುಕಿ, ಸಂಬಂಧಪಟ್ಟವರ ಜೊತೆ ಮಾತನಾಡಿ ಅದಕ್ಕೊಂದು ವ್ಯವಸ್ಥೆ ಮಾಡೋಣ’ ಎಂಬ ಭರವಸೆ ನೀಡಿಯೇ ಬಿಟ್ಟೆ.ಕಣ್ಣೊರೆಸಿಕೊಂಡ ಭಕ್ತಿ ಹೊರನಡೆದರು. ಪಿಳಿಪಿಳಿ ಕಣ್ಣು ಬಿಡುತ್ತಾ ಕೂತವನ ಮನದಲ್ಲಿ ಮುಂದೇನು? ನನಗೆ ಗೊತ್ತಿರುವಂತೆ ವೃತ್ತಿಪರ ಈಜುಪಟುಗಳು ಬಳಸುವ ಕೊಳ ಇದ್ದದ್ದು ಬಸವನಗುಡಿಯಲ್ಲಿ. ಪ್ರತಿದಿನ ಬೆಳಿಗ್ಗೆ ಎಲೆಕ್ಟ್ರಾನಿಕ್ ಸಿಟಿಯಿಂದ ಬಸವನಗುಡಿಗೆ ಅಭ್ಯಾಸಕ್ಕಾಗಿ ಹೋಗಿ ಬರುವುದು ಕನಸಿನ ಮಾತು. ಯೋಚಿಸುತ್ತ ಕುಳಿತಿದ್ದವ ‘ಗೂಗಲ್’ ದೇವರ ಮೊರೆ ಹೋದೆ.ಎಲೆಕ್ಟ್ರಾನಿಕ್ ಸಿಟಿಯ ಆಸುಪಾಸಿನಲ್ಲಿ ಯಾವುದಾದರೂ ಅತ್ಯುತ್ತಮ ಗುಣಮಟ್ಟದ ಈಜುಕೊಳ ಬಿಟ್ಟಿಯಾಗಿ ಸಿಗುವ ಸಾಧ್ಯತೆಗಳ ಬೇಟೆಯಾಡಿದೆ. ಆಗ ಗೊತ್ತಾಗಿದ್ದು, ‘ಇನ್ಫೋಸಿಸ್’ ಆವರಣದಲ್ಲಿ ಹಸಿರ ನಡುವೆ ಒಂದು ಅತ್ಯುತ್ತಮ ಈಜುಕೊಳ ಅಡಗಿದೆ ಎಂದು. ಸಂಜೆ ಆರು ಗಂಟೆಗೆ ಭಕ್ತಿ ಮತ್ತೆ ಹಾಜರಾದರು. ಅಷ್ಟರೊಳಗೆ ಮನದಲ್ಲಿಯೇ ಒಂದು ಯೋಜನೆ ಸಿದ್ಧಮಾಡಿಟ್ಟುಕೊಂಡಿದ್ದೆ.‘ಇನ್ಫೋಸಿಸ್’ ಸಂಸ್ಥಾಪಕರಾದ ಎನ್.ಆರ್. ನಾರಾಯಣ ಮೂರ್ತಿ ಅವರಿಗೆ ಭಕ್ತಿ ಕೈಯಿಂದಲೇ ತಕ್ಷಣ ಒಂದು ಮಿಂಚಂಚೆ ಬರೆಸಿದೆ. ಅವರು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದರು. ವಾರದೊಳಗೆ ಭಕ್ತಿ ಕೈಯಲ್ಲಿ ‘ಇನ್ಫೋಸಿಸ್‌’ನ ಒಂದು ವಿಶೇಷ ಪಾಸ್ ಪ್ರತ್ಯಕ್ಷವಾಯಿತು. ಆಕೆಗೆ ಬೇಕೆಂದಾಗ ‘ಇನ್ಫೋಸಿಸ್’ ಆವರಣ ಪ್ರವೇಶಿಸಿ ಅಲ್ಲಿನ ಈಜುಕೊಳದಲ್ಲಿ ಅಭ್ಯಾಸ ಮಾಡುವ ಮುಕ್ತ ಅನುಮತಿ. ‘ಸಿಂಬಯಾಸಿಸ್‌’ನಲ್ಲಿದ್ದ ಎರಡೂ ವರ್ಷ ಭಕ್ತಿ ನಾರಾಯಣ ಮೂರ್ತಿ ಅವರ ಕೃಪೆಯಿಂದ ತಮ್ಮ ಈಜಿನ ಅಭ್ಯಾಸ ಮುಂದುವರಿಸಿದರು.ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪಡೆದು ಮುಂಬೈಗೆ ತೆರಳಿದ ಭಕ್ತಿ ಒಂದು ಕಾರ್ಪೋರೇಟ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸ ಮಾಡಿದ್ದು ಒಂದೇ ಒಂದು ವರ್ಷ ಮಾತ್ರ! ಕೆಲಸ ಬಿಟ್ಟು ಮರಳಿ ಈಜುಕೊಳಕ್ಕೆ ಧುಮುಕಿದರು. ಅದಾಗಲೇ ನಾಲ್ಕು ಮಹಾಸಾಗರಗಳನ್ನು ಈಜಿದ್ದ ಭಕ್ತಿ ಪಾಲಿಗೆ ಐದನೇ ಮತ್ತು ಕೊನೆಯ ಅಂಟಾರ್ಕಟಿಕ ಮಹಾಸಾಗರಕ್ಕೆ ಲಗ್ಗೆ ಹಾಕುವ ಯೋಜನೆ ಸಿದ್ಧವಾಯಿತು.ಮೊದಲ ಹಂತದಲ್ಲಿ ಮನೆಯಲ್ಲಿಯೇ ದೊಡ್ಡ ಪ್ಲಾಸ್ಟಿಕ್ ಟಬ್‌ನಲ್ಲಿ ನೀರಿನ ಜೊತೆ ಮಂಜುಗಡ್ಡೆ ಹಾಕಿ ಅಮ್ಮ ಮಗಳಿಗೆ ತರಬೇತಿ ನೀಡಿದರು. ನಂತರ ಒಂದು ಪುಟ್ಟ ಈಜುಕೊಳದಲ್ಲಿ ಮಂಜಿನ ಗಡ್ಡೆಗಳನ್ನು ಹಾಕಿ ರಾತ್ರಿಯಿಡೀ ಈಜಿ ದೇಹ ಮತ್ತು ಮನಸ್ಸು ಎರಡನ್ನೂ ಗಟ್ಟಿ ಮಾಡಿಕೊಂಡ ಭಕ್ತಿ ಪಾಲಿಗೆ ಹಣಕಾಸಿನ ಸಮಸ್ಯೆ ಎದುರಾಯಿತು.ಇನ್ನೇನು ಸಾಧ್ಯವಿಲ್ಲ ಎನ್ನುವಾಗಲೇ ಸ್ಥಳೀಯ ಕಂಪೆನಿಯವರೊಬ್ಬರು ಸ್ಪಾನ್ಸರ್‌ಷಿಪ್ ನೀಡಿದರು. ಐದು ಜನರನ್ನು ಒಳಗೊಂಡ ತಂಡ ಉದಯಪುರ, ದೆಹಲಿ, ಫ್ರಾಂಕ್ವರ್ಟ್, ಬ್ಯೂನಸ್ ಏರೀಸ್ ಮೂಲಕ ಅಂಟಾರ್ಕಟಿಕದ ಹೆಬ್ಬಾಗಿಲು ಉಷುವಾಯ್ ತಲುಪಿದ್ದು 2015ರ ಜನವರಿ 7ರಂದು. ಅಲ್ಲಿಂದ ಕ್ರೂಸ್ ಹತ್ತಿ ಈಜುತಾಣ ತಲುಪಿದ್ದು 10ರಂದು.ಆ ದಿನ ಸುತ್ತಲೂ ಹರಡಿದ್ದ ಬಿಳಿ–ನೀಲಿ ಮಂಜುಗಡ್ಡೆಯ ನಡುವೆ ಭಕ್ತಿ ಅಂಟಾರ್ಕಟಿಕ ಮಹಾಸಾಗರಕ್ಕೆ ಧುಮುಕಿದಾಗ ಆ ನೀರಿನ ಉಷ್ಣತೆ ಒಂದು ಡಿಗ್ರಿ ಸೆಲ್ಸಿಯಸ್!ಇತ್ತೀಚೆಗೆ ದೂರವಾಣಿಯಲ್ಲಿ ಮಾತನಾಡಿದ ಭಕ್ತಿ, ‘ಆ ದಿನ ನನಗಿದ್ದ ಒಂದೇ ಗುರಿ ಈಜಬೇಕು ಎನ್ನುವುದು ಮಾತ್ರ. ಆ ನಂಬಿಕೆಯ ಬಲದಿಂದಲೇ ನೀರಿಗೆ ಧುಮುಕಿದ ನಾನು ಈಜುತ್ತಲೇ ಸಾಗಿದೆ. ಪಕ್ಕದಲ್ಲಿಯೇ ಒಂದು ಪೆಂಗ್ವಿನ್ ಕೂಡ ಈಜುತ್ತಿತ್ತು. ಆ ಕೊರೆವ ಚಳಿಯಲ್ಲಿ, ಮಂಜುಗಡ್ಡೆಗಳ ನಡುವಿನ ಹಾದಿಯಲ್ಲಿ ಎಷ್ಟು ಹೊತ್ತು ನಾನು ಈಜಿದೆ ಎನ್ನುವ ಅರಿವು ನನಗಿರಲಿಲ್ಲ. ಒಂದು ಹಂತದಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದ ಬೆಂಗಾವಲಿನಲ್ಲಿದ್ದ ಬೋಟ್‌ನಲ್ಲಿದ್ದವರು ಮೇಲೆ ಬರುವಂತೆ ಹೇಳಿದರು. ತಿರುಗಿ ಬೋಟ್ ಹತ್ತಿದ ಮೇಲೆ ಸುಮಾರು ಎರಡು ಗಂಟೆ ನಾನು ಎಚ್ಚರ ತಪ್ಪಿದ್ದೆ.ಎಚ್ಚರಗೊಂಡ ಮೇಲೆ, ನಾನು 41 ನಿಮಿಷ 14 ಸೆಕೆಂಡುಗಳಲ್ಲಿ 1.4 ಮೈಲು ಈಜಿ ವಿಶ್ವದಾಖಲೆ ಮಾಡಿದ ವಿಷಯ ಅರಿವಿಗೆ ಬಂತು. ಎದ್ದು ಕೇಕೆ ಹಾಕುವ ಶಕ್ತಿ ಕೂಡ ಇರಲಿಲ್ಲ. ಸುತ್ತಮುತ್ತ ಅಭಿಮಾನಿಗಳ ಸಾಗರವಿಲ್ಲ. ಹಿಂದಿದ್ದ ತಂಡದ ಸದಸ್ಯರು ಕೂಡ ಚಳಿಯಲ್ಲಿ ಮುದುಡಿಹೋಗಿದ್ದರು. ಚಪ್ಪಾಳೆಗಳ ಸದ್ದಿಲ್ಲ. ಎದುರಿದ್ದದ್ದು ವಿಶಾಲವಾಗಿ ಹರಡಿದ್ದ ಅಂಟಾರ್ಕಟಿಕ ಮಹಾಸಾಗರ. ನೀಲಾಕಾಶ. ನಡುವೆ ಹರಡಿದ್ದ ಮಂಜುಗಡ್ಡೆಗಳ ಶಿಖರಗಳು’ – ಭಾವುಕರಾಗಿ ನುಡಿದರು.‘ಮುಂದಿನ ಗುರಿ?’ ಎಂಬ ಪ್ರಶ್ನೆಗೆ, ‘2008ರಿಂದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದೂರಗಾಮಿ ಈಜುಸ್ಪರ್ಧೆ ಸೇರಿಸಲಾಗಿದೆ. ಅದು ತೆರೆದ ಸಾಗರದಲ್ಲಿ 10 ಕಿಲೋಮೀಟರ್ ಈಜುವ ಸ್ಪರ್ಧೆ. ಆ ಸ್ಪರ್ಧೆಯ ಮಹಿಳಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದೇನೆ’ ಅವರ ದನಿ ದೃಢವಾಗಿತ್ತು. ಭಕ್ತಿ ಅವರ ಒಲಿಂಪಿಕ್ಸ್ ಕನಸು ನನಸಾಗುವುದು ಅಷ್ಟು ಸುಲಭದ ಮಾತಲ್ಲ. ಆದರೂ, ಆ ನಿಟ್ಟಿನಲ್ಲಿ ದೃಢ ನಿರ್ಧಾರ ಮಾಡಿರುವ ಅವರು, ಈಗಾಗಲೇ ತರಬೇತಿ ಆರಂಭಿಸಿದ್ದಾರೆ.ವಿಶೇಷ ತರಬೇತಿಗಾಗಿ ಅಮೆರಿಕಾಕ್ಕೆ ತೆರಳಲು ಸಿದ್ಧರಾಗುತ್ತಿದ್ದಾರೆ. ಮೂರುವರೆ ವರ್ಷಗಳ ಕಾಲದ ನಿರಂತರ ತರಬೇತಿಗಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಸಹಾಯವನ್ನು ಸ್ಪಾನ್ಸರ್‌ಷಿಪ್ ಮೂಲಕ ನಿರೀಕ್ಷಿಸುತ್ತಿರುವ ಭಕ್ತಿಗೆ ಗುರಿ ಮುಟ್ಟಿಯೇ ಮುಟ್ಟುತ್ತೇನೆ ಎಂಬ ಭರವಸೆಯಿದೆ. ಭಕ್ತಿಯ ಭರವಸೆ ನಿಜವಾಗಲಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry