ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಂಧ, ಮತಾಂಧ ಟಿಪ್ಪು

Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

* ಟಿಪ್ಪು ಜಯಂತಿಗೆ ನಿಮ್ಮ ವಿರೋಧ ಏಕೆ?
ಬಸವಣ್ಣನವರು ತಮ್ಮ ವಚನವೊಂದರಲ್ಲಿ ‘ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲವಯ್ಯ... ಆರಿಗೂ ಅಂಜುವನಲ್ಲ’ ಎಂದಿದ್ದಾರೆ. ಟಿಪ್ಪು ಜಯಂತಿಯನ್ನು ಆಚರಿಸಲು ಹೊರಟಿರುವ ಸರ್ಕಾರದ ನಿಲುವನ್ನು ಸತ್ಯದ ಪರ ಇರುವವರೆಲ್ಲರೂ ವಿರೋಧಿಸಲೇಬೇಕು. ಏಕೆಂದರೆ ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರ, ಕನ್ನಡಪರ, ಧರ್ಮಸಹಿಷ್ಣು ಎಂದೆಲ್ಲ ಹೇಳುತ್ತಿರುವುದೆಲ್ಲ ಸುಳ್ಳು. ಈ ಸುಳ್ಳನ್ನು ವಿರೋಧಿಸಲೇ ಬೇಕು. ಮೈಸೂರು ದೊರೆಗಳನ್ನು ಕ್ರೌರ್ಯದಿಂದ ಹಿಂದಿಕ್ಕಿ ಅವರ ರಾಜ್ಯವನ್ನು ಆಕ್ರಮಿಸಿ ರಾಜ್ಯವನ್ನು ಆಳಿದ ಟಿಪ್ಪುವಿನ ನಿಜಚಿತ್ರ ಗೊತ್ತಿರುವುದರಿಂದ ಅವನ ಜಯಂತಿಯನ್ನು ವಿರೋಧಿಸಲೇಬೇಕು.

ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಮೈಸೂರಿನ ದೊರೆಗಳು ಕೊಟ್ಟಿದ್ದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹೈದರ್ ಒಂದು ರೀತಿಯಲ್ಲಿ ಸರ್ವಾಧಿಕಾರಿಯಾದ. ಅವನ ಮಗ ತಂದೆಯ ಮಾರ್ಗವನ್ನು ಮುಂದುವರೆಸಿ ಮೈಸೂರು ರಾಜ್ಯದ ದೊರೆಯಾದ. ಅವನು ಸ್ಪಷ್ಟವಾಗಿ ಅನ್ಯಧರ್ಮದ್ವೇಷಿ, ಮತಾಂಧ, ಕ್ರೂರಿ. ಇದಕ್ಕೆ ಸ್ಪಷ್ಟವಾದ ಆಧಾರಗಳಿವೆ.  ಒಂದು ಉದಾಹರಣೆ– ಅವನು ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಾಲಯವನ್ನು ಕೆಡವಿ ಅದರ ಮೇಲೆ ಕಟ್ಟಿಸಿದ ಮಸೀದಿ ಬಳಿಯ ಶಾಸನವೊಂದು ‘ಕಾಫೀರರನ್ನು ಕೊಂದು ಅವರನ್ನು ನೀರಲ್ಲಿ ಮುಳುಗಿಸು’ ಎನ್ನುತ್ತದೆ.

ಈ ಮಸೀದಿ ಹಿಂದೂ ದೇವಾಲಯವಾಗಿತ್ತು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಂಥ ಹಲವಾರು ಉದಾಹರಣೆಗಳಿವೆ. ಟಿಪ್ಪುವಿನ ಮಗ ಪ್ರಿನ್ಸ್‌ ಗುಲಾಮ್‌ ಮಹಮ್ಮದ್‌ ‘The History of Hyder Shah Alias Hyder Ali Khan Bahadur And His Son Tippoo Sultan’ ಎಂಬ ಪುಸ್ತಕವನ್ನು ಪರಿಷ್ಕರಿಸಿ, ಪ್ರಕಟಿಸಿದ್ದಾನೆ. ಮಲಬಾರ್‌ ಪ್ರದೇಶದಲ್ಲಿ ಎಪ್ಪತ್ತು ಸಾವಿರ ಕ್ರೈಸ್ತರನ್ನೂ, ಒಂದು ಲಕ್ಷ ಹಿಂದೂಗಳನ್ನೂ ಟಿಪ್ಪು ಬಲವಂತವಾಗಿ ಮತಾಂತರಿಸಿದ್ದನ್ನು ಅದರಲ್ಲಿ ಉಲ್ಲೇಖಿಸಿದ್ದಾನೆ. ಶ್ರೀರಂಗಪಟ್ಟಣ ಮತ್ತು ಮೇಲುಕೋಟೆಯ ದೇವಾಲಯಗಳನ್ನು ಹೊರತುಪಡಿಸಿ ಅವನ ರಾಜ್ಯದ ಉಳಿದ ಎಲ್ಲ ದೇವಾಲಯಗಳನ್ನೂ ಧ್ವಂಸ ಮಾಡಲು ಸೂಚಿಸಿದ್ದ. ಈ ದೇವಾಲಯಗಳನ್ನು ಉಳಿಸಿಕೊಂಡದ್ದು ಅವನ ರಾಜಕೀಯದ ಕಾರಣಗಳಿಗಷ್ಟೆ. ಹೀಗೆಲ್ಲ ಇರುವಾಗ ಕೆಲವರು ಅವನು ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ‘ಸ್ವಾತಂತ್ರ್ಯ ಹೋರಾಟಗಾರ’ ಎಂದು ವೈಭವೀಕರಿಸುತ್ತಿದ್ದಾರೆ. ಅದು ತಪ್ಪು. ಎಲ್ಲ ರಾಜರಂತೆ ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಶತ್ರುಗಳ ಜೊತೆ ಹೋರಾಡಿ ಮಡಿದನೇ ಹೊರತು ಅವನು ಸ್ವಾತಂತ್ರ್ಯ ಹೋರಾಟಗಾರ ಅಲ್ಲ.

* ಟಿಪ್ಪು ಶೃಂಗೇರಿ, ಮೇಲುಕೋಟೆ ಮಠಗಳಿಗೆ ದತ್ತಿ ಕೊಟ್ಟ ಧರ್ಮಸಹಿಷ್ಣು ಎನ್ನುತ್ತಾರಲ್ಲ? ಇದು ಸುಳ್ಳೆ?
ಅವನು ಹೀಗೆ ಮಾಡಿದ್ದು ಅವನ  ಕೈಕೆಳಗಿನ ಕೆಲವು ಅಧಿಕಾರಿಗಳ ವಿಶ್ವಾಸ ಪಡೆಯುವ ಕಾರಣದಿಂದ. ಆದರೆ ಅವನ ಮೂಲ ಉದ್ದೇಶ ಏನೆಂಬುದನ್ನು ಅವನ ಖಡ್ಗವೇ ಹೇಳುತ್ತದೆ. ಅವನ ಖಡ್ಗದ ಮೇಲೆ ಪರ್ಶಿಯನ್‌ ಭಾಷೆಯ ಮಾತೊಂದಿದೆ. ಅದನ್ನು 1930ರಷ್ಟು ಹಿಂದೆಯೇ ಸಿ.ಹಯವದನರಾಯರು ಇಂಗ್ಲಿಷಿಗೆ ಅನುವಾದಿಸಿದ್ದಾರೆ, ಹೀಗೆ: ‘My victorious sabre is lightning for the destruction of the unbelievers’. ಎಂದರೆ, ‘ನನ್ನ ಗೆಲುವಿನ ಕೊಂಕುಗತ್ತಿ ನಾಸ್ತಿಕರನ್ನು (ಕಾಫೀರರನ್ನು, ಮುಸ್ಲಿಮರಲ್ಲದ ಎಲ್ಲರನ್ನೂ) ಕೊಲ್ಲುವ ಸಿಡಿಲಾಗುತ್ತದೆ.’

ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದ ಏಳು ನೂರು ಬ್ರಾಹ್ಮಣ ಕುಟುಂಬಗಳು ಇಂದಿಗೂ ದೀಪಾವಳಿಯನ್ನು ‘ಶೋಕದಿನ’ವನ್ನಾಗಿ ಆಚರಿಸುತ್ತವೆ. ಏಕೆಂದರೆ ಅಂದೇ ಟಿಪ್ಪು ಆ ಕುಟುಂಬಗಳ ಪೂರ್ವಜರನ್ನು ಕೊಂದದ್ದು. 1788ರ ಡಿಸೆಂಬರ್‌ 14ರಂದು ಕಲ್ಲಿಕೋಟೆಯ ತನ್ನ ಸೇನಾಧಿಕಾರಿಗೆ ಬರೆದ ಪತ್ರವೊಂದರಲ್ಲಿ ‘I am sending two of my followers with Mir Hussain Ali. Along with them you should capture and kill all Hindus’ ಎಂದು ಬರೆದಿದ್ದಾನೆ. ಅವನು ಮೈಸೂರಿನ ಹಲವಾರು ದೇವಾಲಯಗಳನ್ನು ಕೆಡವಿ, ಅದರ ಕಲ್ಲುಗಳನ್ನು ಮೈಸೂರಿನ ಹೊರಗೆ ಕೋಟೆ ಕಟ್ಟಲು ಬಳಸಿದ. ಆ ಜಾಗವನ್ನು ‘ನಜರಾಬಾದ್‌’ ಎಂದು ಕರೆದ. ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿ ವಿಗ್ರಹವನ್ನೂ ನಾಶ ಮಾಡಲು ಪ್ರಯತ್ನಿಸಿದ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗಿನ ಸಾವಿರಾರು ಹಿಂದೂಗಳನ್ನೂ, ಕ್ರೈಸ್ತರನ್ನೂ ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದ. ಅವರೆಲ್ಲರಿಗೂ ಯುದ್ಧ ಶಿಕ್ಷಣದ ತರಬೇತಿಯನ್ನು ನೀಡಿ ಅದಕ್ಕೆ ‘ಅಹಮ್ಮದೀಯ ಪಡೆ’ ಎಂದು ಹೆಸರಿಟ್ಟ. ಹೈದರನೂ ಧರ್ಮಾಂಧ. ಮದಕರಿ ನಾಯಕನನ್ನು ಬಂಧಿಸಿ ಅವನ ಸಂಪತ್ತನ್ನು ಅಪಹರಿಸಿದ. ಚಿತ್ರದುರ್ಗದ ನಾಯಕ ಜನಾಂಗದ ಇಪ್ಪತ್ತು ಸಾವಿರ ಮಂದಿಯನ್ನು ಮತಾಂತರಿಸಿ ‘ಚೇಲಾಪಡೆ’ಯನ್ನು ಕಟ್ಟಿದ. ಪಾಳೇಗಾರರ ಮನೆದೇವತೆಗಳಾದ ಉಚ್ಚಂಗಿ ಎಲ್ಲಮ್ಮ, ಏಕನಾಥೇಶ್ವರಿ, ಸಂಪಿಗೆ ಸಿದ್ಧೇಶ್ವರರ ಅಪಾರ ಸಂಪತ್ತನ್ನು ಲೂಟಿ ಮಾಡಿದ. ಟಿಪ್ಪು ಎಲ್ಲಮ್ಮ ದೇವಾಲಯವನ್ನು ಕೆಡವಿ ಅದರ ಕಲ್ಲುಗಳನ್ನು ಜುಮ್ಮಾ ಮಸೀದಿಯನ್ನು ಕಟ್ಟಿಸಲು ಉಪಯೋಗಿಸಿಕೊಂಡ. ಹೀಗೆ ಇನ್ನೂ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು.

* ಟಿಪ್ಪು ಒಬ್ಬ ಕನ್ನಡಪ್ರೇಮಿ ಎಂದೂ ಹೇಳುತ್ತಾರಲ್ಲ?
ಇದೂ ಸುಳ್ಳು. ಅವನು ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿದ್ದ ಕನ್ನಡವನ್ನು ರದ್ದು ಮಾಡಿ, ಪರ್ಸೋ ಅರೇಬಿಕ್‌ ಭಾಷೆಯನ್ನು ಆಡಳಿತದ ಭಾಷೆಯನ್ನಾಗಿಸಿದ.

* ಹಾಗಾದರೆ ಸರ್ಕಾರ ಏಕೆ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ ಎನಿಸುತ್ತದೆ?
ಮುಸ್ಲಿಮರ ತುಷ್ಟೀಕರಣದಿಂದ ರಾಜಕೀಯ ಲಾಭ ಪಡೆಯುವುದಕ್ಕೆ ಎನಿಸುತ್ತದೆ. ಟಿಪ್ಪು ಇಪ್ಪತ್ತನೇ ಶತಮಾನದ ಹಿಟ್ಲರ್‌. ಅಷ್ಟೇ ಅಲ್ಲ ಕ್ರೂರಿ, ಮತಾಂಧ, ನರಹಂತಕ, ಭಾಷಾಂಧ. ಅವನ ಜಯಂತಿಯ ಆಚರಣೆ ಮಾನವೀಯತೆಗೂ ಇತಿಹಾಸಕ್ಕೂ ಮಾಡುವ ಘೋರ ಅಪಚಾರ. ಇದನ್ನು ವಿರೋಧಿಸುವುದು ಎಲ್ಲರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT