7

ಕನ್ನಡ ಕಾಯುವ ಕೆಲಸ ಯಾರು ಮಾಡುತ್ತಾರೆ...?

Published:
Updated:
ಕನ್ನಡ ಕಾಯುವ ಕೆಲಸ ಯಾರು ಮಾಡುತ್ತಾರೆ...?

‘ಕರ್ನಾಟಕ ಒಂದಾಗಿ ಕಾಲು ಶತಮಾನವಾಗಿದೆ. ಈ ಅವಧಿಯಲ್ಲಿ ಕನ್ನಡಿಗರು ಹಲವು ಕ್ಷೇತ್ರಗಳಲ್ಲಿ ಗಣನೀಯವಾಗಿ ಕೆಲಸ ಮಾಡಿ ತೋರಿಸಿದ್ದಾರೆ; ತಮ್ಮ ಸೃಜನಕ್ರಿಯೆಯಿಂದ ರಾಷ್ಟ್ರೀಯ ಗಮನ ಸೆಳೆದಿದ್ದಾರೆ; ರಾಜಕೀಯದಲ್ಲಿಯೂ ಕೆಲವು ವೈಶಿಷ್ಟ್ಯಗಳನ್ನು ಮೆರೆದಿದ್ದಾರೆ. ಆದರೆ, ತಾವು ಕನ್ನಡಿಗರು ಎಂಬ ಸಮಷ್ಟಿ ಪ್ರಜ್ಞೆಯನ್ನು ಅವರು ತೋರಿಸಿಲ್ಲ. ಕರ್ನಾಟಕದಲ್ಲಿ ಕನ್ನಡವನ್ನು ನೆಲೆಯಾಗಿಸಲು ಅವರು ವಿಫಲರಾಗಿದ್ದಾರೆ. ಕನ್ನಡವಿಲ್ಲದ ಕರ್ನಾಟಕ ಅರ್ಥವಿಲ್ಲದ್ದು. ಎಲ್ಲಿಯವರೆಗೆ ಕರ್ನಾಟಕದಲ್ಲಿ ಕನ್ನಡ ಸಿಂಹಾಸನದ, ಪದವಿ ದಾನದ, ದೈನಂದಿನ ಬಳಕೆಯ ಭಾಷೆ ಆಗಿ ಮೆರೆಯುವುದಿಲ್ಲವೋ ಅಲ್ಲಿಯವರೆಗೆ  ಕರ್ನಾಟಕ ನನಸಾಗದ ಕನಸು. ಎಲ್ಲಿಯವರೆಗೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ಇರುವುದಿಲ್ಲವೋ ಅಲ್ಲಿಯವರೆಗೆ ಕರ್ನಾಟಕ ದೇವರಿಲ್ಲದ ಗುಡಿ. ಕಾಲು ಶತಮಾನವಾದರೂ ಅಷ್ಟೇ. ಅರ್ಧ ಶತಮಾನವಾದರೂ ಅಷ್ಟೆ. ಬೆಳ್ಳಿ ಗಂಟೆ ಬಾರಿಸಿದರೂ ಒಂದೇ, ಚಿನ್ನದ್ದು ಬಾರಿಸಿದರೂ ಒಂದೇ–ಎಲ್ಲ ಒಡಕಲು, ಕೀರಲು!’

 

ಹಾ.ಮಾ.ನಾಯಕರು 1981ರ ನವೆಂಬರ್ ‘ಮಯೂರ’ ಸಂಚಿಕೆಯಲ್ಲಿ ಬರೆದ ‘ದೇವರಿಲ್ಲದ ಗುಡಿ’ ಲೇಖನದ ಕೊನೆಯ ಪರಿಚ್ಛೇದ ಇದು. ನಾಯಕರಿಗೆ ಮತ್ತು ನನಗೆ ಅಂಥ ನಿಕಟ ಪರಿಚಯ ಇರಲಿಲ್ಲ. ಆದರೆ, ನಾನು ಇನ್ನೂ ಕಾಲೇಜಿನ ಎಳವೆಯಲ್ಲಿದ್ದಾಗಲೇ  ನನಗೆ ಕನ್ನಡದ ದೀಕ್ಷೆಯನ್ನು ಕೊಟ್ಟ  ಗುರುಗಳಾಗಿದ್ದರು ಅವರು. ಕುವೆಂಪು ಮತ್ತು ದೇಜಗೌ ಅವರಿಗಿಂತ ಕನ್ನಡ ಪ್ರೇಮದ ವಿಚಾರದಲ್ಲಿ ನಾಯಕರು ನನಗೆ ಒಂದು ಗುಂಜಿ ಹೆಚ್ಚು ಪ್ರಿಯ.

 

1979ನೇ ಇಸವಿ. ಧರ್ಮಸ್ಥಳದಲ್ಲಿ 51ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭ. ನಾಯಕರೂ ಉದ್ಘಾಟನೆ ವೇದಿಕೆ ಮೇಲೆ ಇದ್ದರು. ಕವಿ ಗೋಪಾಲಕೃಷ್ಣ ಅಡಿಗರು ಸಮ್ಮೇಳನದ ಸರ್ವಾಧ್ಯಕ್ಷರು. ನಾಯಕರಿಗೆ ‘ರತ್ನ ಮಂಜೂಷ’ ಸ್ಮರಣ ಸಂಪುಟ ಬಿಡುಗಡೆ ಮಾಡುವ ಕೈಂಕರ್ಯ. ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಕೂಡ ವೇದಿಕೆ ಮೇಲೆ ಇದ್ದರು. ಅವರು ಸಮ್ಮೇಳನದ ಉದ್ಘಾಟಕರು. ನಾಯಕರು ಆ ದಿನ ಆಡಿದ ಮಾತುಗಳು 37 ವರ್ಷ ಕಳೆದರೂ ನನಗೆ ಇನ್ನೂ ಮರೆತಿಲ್ಲ. ಅರಸು ಅವರ ಸಮ್ಮುಖದಲ್ಲಿಯೇ ಅವರು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

 

‘ಕನ್ನಡ ಅನೇಕ ಕುತ್ತುಗಳನ್ನು ಎದುರಿಸಬೇಕಾಗಿದೆ. ಒಂದು ಕಡೆ ಸಂಸ್ಕೃತ, ಇನ್ನೊಂದು ಕಡೆ ಇಂಗ್ಲಿಷ್‌, ಮತ್ತೊಂದು ಕಡೆ ಹಿಂದಿ, ಮಗುದೊಂದು ಕಡೆ ಇತರ ಭಾಷೆಗಳು. ಇವುಗಳ ನಡುವೆ ಕನ್ನಡಕ್ಕೆ ಉಸಿರುಕಟ್ಟುವ ಪರಿಸ್ಥಿತಿ ಒದಗಿದೆ. ಅಭಿಮಾನಶೂನ್ಯರಾದ ಜನರು, ಬಾಯುಪಚಾರದ ಸರ್ಕಾರ, ಕನ್ನಡವನ್ನು ತಿರಸ್ಕಾರದಿಂದ ಕಾಣುವ ಅಧಿಕಾರವರ್ಗ. ಇವರಿಂದ ನಾವು ಏನನ್ನು ನಿರೀಕ್ಷಿಸಬಹುದು?... ಕನ್ನಡವನ್ನು ಅಧಿಕೃತ ಭಾಷೆ ಎಂದು ಘೋಷಿಸಿರುವ ಸರ್ಕಾರದ ಪ್ರತಿನಿಧಿಗಳು ಇಂಗ್ಲಿಷ್‌ ಶಿಲಾಫಲಕ ನೆಡುವ ಚಿತ್ರಗಳನ್ನು ನೋಡಿದಾಗ ನನಗೆ ನಾಚಿಕೆಯಾಗುತ್ತದೆ... ಕನ್ನಡ ನಾಡಿನ ಮುಖ್ಯಮಂತ್ರಿಗಳು ಇದಕ್ಕೆ ತೀವ್ರ ಗಮನ ಕೊಡಬೇಕು. ಇವೆಲ್ಲ ಸಣ್ಣ ವಿಚಾರಗಳೆಂದು ಅವರು ಹೇಳಬಹುದು. ಖಂಡಿತ ಅಲ್ಲ. ಭಾಷೆ, ಮುಖ್ಯಮಂತ್ರಿಗಳ ನಿವಾಸ ಬಾಲಬ್ರೂಯಿಯ ಉದ್ಯಾನ (ಆಗ ಅರಸು ಅವರ ಅಧಿಕೃತ ನಿವಾಸ)ದಲ್ಲಿ ಬೆಳೆಯುವುದಿಲ್ಲ. ರಾಜಭವನದ ಹಿತ್ತಲಿನಲ್ಲಿ ಬೆಳೆಯುವುದಿಲ್ಲ. ಅದು ಬೆಳೆಯುವುದು ಜನರ ಮಧ್ಯೆ. ಜನಜೀವನದಲ್ಲಿ. ಅದಕ್ಕೆ ಅಗತ್ಯವಾದ ವಾತಾವರಣವನ್ನು ನಿರ್ಮಿಸುವುದು ಸರ್ಕಾರದ ಆದ್ಯ ಕರ್ತವ್ಯ.’ ನಾಯಕರು ವೇದಿಕೆ ಮೇಲೆ ನಿಂತುಕೊಂಡು ಹೀಗೆ ಸಿಡಿಲು ಹೊಡೆದಂತೆ ಮುಖ್ಯಮಂತ್ರಿಯ ಸಮ್ಮುಖದಲ್ಲಿಯೇ ಹೇಳುತ್ತಿದ್ದಾಗ ಅರಸು ಮುಖ ಗಂಟಿಕ್ಕಿದರು, ಚಡಪಡಿಸಿದರು. ಇಡೀ ಸಭಾಂಗಣದಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ಮೌನ. ನಾಯಕರು ಭಾಷಣ ಮುಗಿಸಿ ಕುಳಿತಾಗ ಕಿವಿಗಡಚಿಕ್ಕುವಷ್ಟು ಚಪ್ಪಾಳೆ. ಅದೇ ಸಮಯಕ್ಕೆ ವೇದಿಕೆ ಮೇಲೆ ಕುಳಿತವರಿಗೆಲ್ಲ ಕೇಸರಿ ಬಣ್ಣದ ತಂಪು ಪಾನೀಯದ ಸರಬರಾಜು ಆಯಿತು. ಅರಸು ಅವರಿಗೆ ಎಷ್ಟು ಸಿಟ್ಟು ಬಂದಿತ್ತು ಎಂದರೆ ಅವರು ಆ ಪಾನೀಯವನ್ನು ಹತ್ತಿರ ಸರಿಸಲೂ ಬಿಡದೆ ನಿರಾಕರಿಸಿದರು. ಅದೇ ವೇದಿಕೆ ಮೇಲೆ 50ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಿ.ಪಿ.ರಾಜರತ್ನಂ ಅವರೂ ಇದ್ದರು. ಉದ್ಘಾಟನಾ ಸಮಾರಂಭ ಮುಗಿದ ಮೇಲೆ ನಾಯಕರನ್ನು ಪಕ್ಕಕ್ಕೆ ಕರೆದು, ‘ನೀವು ಸರ್ಕಾರಿ ಸೇವೆಯಲ್ಲಿ ಇರುವವರು. ಜೋಪಾನ’ ಎಂದು ಹಿತವಚನ ಹೇಳಿದರಂತೆ. ತಮ್ಮ ಉದ್ಘಾಟನಾ ಭಾಷಣದಲ್ಲಿ ಅರಸು ಅವರು ನಾಯಕರಿಗೆ ಸಮಾಧಾನವಾಗುವ ಮಾತುಗಳನ್ನು ಆಡಲಿಲ್ಲ; ನಂತರ ತೊಂದರೆಯನ್ನೂ ಮಾಡಲಿಲ್ಲ!

 

ಇದಾಗಿ ದಶಕಗಳು ಕಳೆದಿವೆ.  ಕರ್ನಾಟಕ ರೂಪುಗೊಂಡು ಈಗ ಅರುವತ್ತು ವರ್ಷಗಳು ಕಳೆದು ಹೋಗಿವೆ. ಅರುವತ್ತು ವರ್ಷ ಚಿಕ್ಕ ಅವಧಿಯಲ್ಲ. ಕಳೆದ ಅರುವತ್ತು ವರ್ಷಗಳಲ್ಲಿ, ನಾಯಕರು ಬಹುಹಿಂದೆಯೇ ಗುರುತಿಸಿದ ಹಾಗೆ, ಕನ್ನಡಿಗರು ಸೃಜನಶೀಲವಾಗಿ ರಾಷ್ಟ್ರದ ಗಮನವನ್ನು ಇನ್ನಷ್ಟು ಸೆಳೆದಿರಬಹುದು. ನಮಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು, ಎರಡು ಸರಸ್ವತಿ ಸಮ್ಮಾನಗಳು, ಕೆಲವು ಮಾಗ್ಸೆಸೆಗಳು ಬಂದಿರಬಹುದು. ಆದರೆ, ನಾವು ಕನ್ನಡಿಗರು ಎಂಬ ಸಮಷ್ಟಿ ಪ್ರಜ್ಞೆ ನಮ್ಮಲ್ಲಿ ಮೂಡಿದೆಯೇ? ಕುವೆಂಪು ಬಯಸಿದ ಹಾಗೆ, ಕನ್ನಡ ಸಿಂಹಾಸನದಲ್ಲಿ ವಿರಾಜಮಾನ ಆಗಿದೆಯೇ? ಕನ್ನಡ ಮಾಧ್ಯಮದಲ್ಲಿ ನಮ್ಮ ಮಕ್ಕಳನ್ನು ಓದಿಸಬೇಕು ಎಂದು ಹಂಬಲಿಸುವವರಿಗೆ ನಮ್ಮ ಪರಿಸರದಲ್ಲಿ ಒಂದು ಒಳ್ಳೆಯ ಶಾಲೆ ಇದೆಯೇ? ಸರ್ಕಾರದ ಆಡಳಿತದಲ್ಲಿ ಕನ್ನಡಕ್ಕೆ ನಿಜವಾಗಿಯೂ ಅಗ್ರಮಣೆ ಸಿಕ್ಕಿದೆಯೇ? ಕನ್ನಡ ಅನ್ನದ ಭಾಷೆ ಆಗಿದೆಯೇ? ಈ ಎಲ್ಲ ಮತ್ತು ಇಂಥ ಇನ್ನೂ ಅನೇಕ ಪ್ರಶ್ನೆಗಳಿಗೆ ಹೌದು ಎಂದು ಉತ್ತರಿಸಲು ಎಂಟೆದೆಯೇ ಬೇಕು.

 

ನಾಯಕರು ಯಾವ ಭಾಷೆಯ ವಿರೋಧಿಯೂ ಆಗಿರಲಿಲ್ಲ. ಆದರೆ, ಅವರು ಸಂಸ್ಕೃತ ಮತ್ತು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದರು. ನಮ್ಮ ನಾಡಿನ ಭಾಷೆಯನ್ನು ಗೌರವಿಸದೇ ಪರಭಾಷೆಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ‘ರಾಷ್ಟ್ರೀಯತೆ’ಯ ಮನೋಭಾವವನ್ನು ಬಲವಾಗಿ ಖಂಡಿಸುತ್ತಿದ್ದರು. ‘ಕನ್ನಡಿಗರ ಉದಾರ ಮನೋಭಾವನೆಯನ್ನು ಸ್ವಾರ್ಥಸಾಧಕರೂ, ರಾಜಕಾರಣಿಗಳೂ ಕೊಂಡಾಡಿ ಔದಾರ್ಯದ ಉರುಳಿನಲ್ಲಿ ನಮ್ಮನ್ನು ನೇಣು ಹಾಕುತ್ತಿದ್ದಾರೆ. ತಮಿಳರು, ಮಲಯಾಳಿಗಳು, ಬಂಗಾಳಿಗಳು ಈ ರಾಷ್ಟ್ರದ ಜನ ತಾನೇ? ಅವರಿಗಿಂತ ಹೆಚ್ಚಿನ ರಾಷ್ಟ್ರೀಯತೆ ಕನ್ನಡಿಗರಿಗೆ ಯಾಕೆ ಬೇಕು? ಯಾವುದಿದೆ? ಕನ್ನಡ ನಾಡಿನಲ್ಲಿ ಕನ್ನಡಕ್ಕೆ  ಮೊದಲ ಸ್ಥಾನ ಸಿಕ್ಕಲಿ, ಅದು ಅನುಷ್ಠಾನಕ್ಕೆ ಬರಲಿ. ಆಮೇಲೆ ಮಿಕ್ಕದ್ದನ್ನು ಯೋಚನೆ ಮಾಡೋಣ. ಇದನ್ನೇ ನಾನು ಕನ್ನಡ ಕಾಯುವ ಕೆಲಸ ಎಂದು ಕರೆಯುವುದು. 

 

ಕನ್ನಡವನ್ನು ಕಾಯುವ ಕೆಲಸವನ್ನು ಸರ್ಕಾರಕ್ಕೆ ಬಿಟ್ಟು ಜನ ನಿಶ್ಚಿಂತರಾದರೆ ಕನ್ನಡವನ್ನು ಕಸ ಝಾಡಿಸಿದಂತೆ ಝಾಡಿಸಿ ಹಾಕುತ್ತಾರೆ. ಶಾಶ್ವತ ಮೌಲ್ಯಗಳಿಗಾಗಿ ಹೋರಾಟ ಮಾಡುವ ರಾಜಕಾರಣ ಮತ್ತು ಸರ್ಕಾರಗಳು ನಮ್ಮಲ್ಲಿ ಇಲ್ಲ. ಅವುಗಳ ಗುರಿ ಏನಿದ್ದರೂ ತಾತ್ಕಾಲಿಕ ಪ್ರಯೋಜನ ಮೂಲದವು (ಒತ್ತು ನನ್ನದು).’ ಇದು ನಾಯಕರು ಧರ್ಮಸ್ಥಳ ಸಮ್ಮೇಳನದಲ್ಲಿಯೇ ಆಡಿದ ಇನ್ನೊಂದು ಮಾತು. 

 

ಅರಸು ಅವರು ಅತ್ಯಂತ ದೂರದೃಷ್ಟಿಯ ನಾಯಕರಾಗಿದ್ದರು. ಅವರ ಸರ್ಕಾರಕ್ಕೇ ‘ತಾತ್ಕಾಲಿಕ ಪ್ರಯೋಜನ ಮೂಲದವು’ ಎನ್ನುವ ಅರ್ಥದಲ್ಲಿ ನಾಯಕರು ಮೂದಲಿಸಿದ್ದರು. ಅವರು ಈಗ ಬದುಕಿ ಇದ್ದಿದ್ದರೆ ಈಗಿನ ಸರ್ಕಾರಗಳನ್ನು ಕಂಡು ಏನು ಹೇಳುತ್ತಿದ್ದಿರಬಹುದು?

 

 ಮಕ್ಕಳ ಕಲಿಕೆಯ ಭಾಷೆ ಯಾವುದು ಇರಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್‌ ತೀರ್ಪು ನೀಡಿಯಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟು ಅದು ರಾಜ್ಯ ಭಾಷೆಯೇ ಆಗಿರಬೇಕು ಎಂದು ಹೇಳಿದ್ದರೂ ನಾವು ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಿರಲಿಲ್ಲ. ಏಕೆಂದರೆ ರಾಜ್ಯ ರಚನೆಯಾಗಿ ಅರುವತ್ತು ವರ್ಷಗಳು ಕಳೆದು ಹೋದರೂ ಕನ್ನಡ ಶಾಲೆಗಳು ನಮಗೆ ಆದ್ಯತೆಯ ವಿಷಯಗಳು ಎಂದು ನಮ್ಮ ಸರ್ಕಾರಕ್ಕೆ ಅನಿಸಿದ್ದು ಇಲ್ಲ. ನಮ್ಮ ಕನ್ನಡ ಶಾಲೆಗಳ ಮಟ್ಟ  ಎಷ್ಟು ಕುಸಿದು ಹೋಗಿದೆ ಎಂದರೆ ಏಳನೇ ತರಗತಿ ಮುಗಿಸಿದ ವಿದ್ಯಾರ್ಥಿಗಳ ಭಾಷಾ ಜ್ಞಾನ, ವಿಷಯ ತಿಳಿವಳಿಕೆ ತೀರಾ ಕಳವಳಕಾರಿ ಎನ್ನುವಂತೆ ಇದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.

 

ಕುವೆಂಪು ಅವರು ಕನ್ನಡವನ್ನು ಕಲಿಕೆ ಮಾಧ್ಯಮವಾಗಿ ಮಾತ್ರವಲ್ಲ ಉನ್ನತ ಜ್ಞಾನದ ವಾಹಕವಾಗಿಯೂ ಬೆಳೆಸಬೇಕು ಎಂದು ಆಶಿಸಿದ್ದರು, ಪ್ರತಿಪಾದಿಸಿದ್ದರು. ಅನಂತಮೂರ್ತಿಯವರೂ ಈ ಮಾತನ್ನು ಅನೇಕ ಸಾರಿ ಒತ್ತಿ ಹೇಳಿದ್ದರು. ಕನ್ನಡ ಭಾಷೆಯಲ್ಲಿ ಜ್ಞಾನದ ಮಟ್ಟವನ್ನು ಬೆಳೆಸುವ, ಎತ್ತರಿಸುವ ಸಾಕಷ್ಟು ಕೆಲಸವನ್ನು ಶಿವರಾಮ ಕಾರಂತರು ವೈಯಕ್ತಿಕ ನೆಲೆಯಲ್ಲಿ ಏಕಾಂಗಿಯಾಗಿ ಮಾಡಿದರು. ಆದರೆ, ಸರ್ಕಾರಗಳು, ವಿಶ್ವ ವಿದ್ಯಾಲಯಗಳು ಈ ಕೆಲಸ ಮಾಡಲಿಲ್ಲ. ಈಗಲೂ ಅವುಗಳಿಗೆ ಮಾನವಿಕ ವಿಷಯಗಳಲ್ಲಿ ಗುಣಮಟ್ಟದ, ಅನುಸರಿಸಬಹುದಾದ ಪಠ್ಯಸಾಮಗ್ರಿಯನ್ನು ತಯಾರಿಸಲು ಆಗಿಲ್ಲ. ಮುಕ್ತ ವಿಶ್ವವಿದ್ಯಾಲಯಕ್ಕಾಗಿ ಘಟಾನುಘಟಿ  ಪ್ರಾಧ್ಯಾಪಕರು ಸೇರಿಕೊಂಡು ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಗೆ ಕನ್ನಡದಲ್ಲಿ ತಯಾರಿಸಿದ ಪಠ್ಯಕ್ರಮ ನೋಡಿ ನಾನು ನಾಚಿಕೆಯಿಂದ ತಲೆ ತಗ್ಗಿಸಿದೆ. ಅದರಲ್ಲಿನ ವಾಕ್ಯ ರಚನೆ, ಕಾಗುಣಿತ ದೋಷಗಳು ಘೋರ ಎನ್ನುವಂತೆ ಇದ್ದುವು. ಇಂಥ ಪುಸ್ತಕಗಳನ್ನು ಇಟ್ಟುಕೊಂಡು ಕನ್ನಡದಲ್ಲಿ ಓದಬೇಕು ಎಂದು ಒತ್ತಾಯಿಸಿದರೆ ಆ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಷ್ಟೆ. ಏಕೆಂದರೆ ಅದನ್ನು ಓದಿದರೆ ಅವರಿಗೆ ಏನೂ ಅರ್ಥ ಆಗುವುದಿಲ್ಲ!

 

ಕಲಿಕೆ ಮಾಧ್ಯಮಕ್ಕೆ ಮತ್ತೆ ಬರುವುದಾದರೆ ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವೆಂದು ಏನು ಮಾಡಿದೆ? ಪ್ರತಿ ರಾಜ್ಯೋತ್ಸವದ ದಿನ ಕೇಂದ್ರ ಸರ್ಕಾರಕ್ಕೆ ಒಂದು ಕರೆ ಕೊಡುವುದನ್ನು ಬಿಟ್ಟು ಬೇರೆ ಏನಾದರೂ ಆಗಿದೆಯೇ? ಕನ್ನಡ ಎನ್ನುವುದು ಒಂದು ಶಾಶ್ವತ ಮೌಲ್ಯ. ಅದರ ಉಳಿವಿಗಾಗಿ ದೂರದೃಷ್ಟಿಯ ಕೆಲಸಗಳನ್ನು ಸರ್ಕಾರ ಏನಾದರೂ ಮಾಡಿದೆಯೇ? 

 

ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕದ ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದವರು. ನಿನ್ನೆ ಮೊನ್ನೆ ಮತ್ತೆ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಆಗಿರುವವರು ಅರ್ಹರೇ ಆಗಿದ್ದಾರೆ. ಆದರೆ, ಅವರ ನೇಮಕವನ್ನು ಶಾಸಕರ, ಪಕ್ಷದ ಕಾರ್ಯಕರ್ತರ ಜೊತೆಯಲ್ಲಿಯೇ ಮಾಡಬೇಕಿತ್ತೇ? ಹಿಂದೆಯೂ ಇದೇ ಲೋಪ ಆಗಿತ್ತು. ಈ ಹಿಂದೆ ಅಧ್ಯಕ್ಷರಾಗಿದ್ದ ಎಲ್‌. ಹನುಮಂತಯ್ಯ ಪಕ್ಷದ ಕಾರ್ಯಕರ್ತರಾಗಿದ್ದವರು. ಅವರಿಗೆ ಅದು ರಾಜಕೀಯ ಪುನರ್ವಸತಿ ಆಗಿರಬಹುದು. ಆದರೆ, ಎಸ್‌.ಜಿ.ಸಿದ್ದರಾಮಯ್ಯ ಅವರಿಗೆ ಅದು ರಾಜಕೀಯ ಪುನರ್ವಸತಿ ಅಲ್ಲ. ಇಂಥ ಎಲ್ಲ ನೇಮಕಗಳು ‘ರಾಜಕೀಯ ನೇಮಕ’ಗಳೇ ಆಗಿರುತ್ತವೆ. ಆದರೆ, ರಾಜಕೀಯ  ಪುನರ್ವಸತಿ ನೇಮಕಗಳ ಜೊತೆಗೆ ಇಂಥ ನೇಮಕಗಳನ್ನೂ ಸೇರಿಸಿ ಮಾಡಬಾರದು. ಏಕೆಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ವತಂತ್ರವಾಗಿ ಇರಬೇಕಾದ ಮತ್ತು ಕಾರ್ಯನಿರ್ವಹಿಸಬೇಕಾದ ಸಂಸ್ಥೆ.  ವಾಸ್ತವದಲ್ಲಿ ಅದು ಹಲ್ಲಿಲ್ಲದ ಸಂಸ್ಥೆಯಾಗಿರಬಹುದು, ಆದರೆ, ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳ ವಿರುದ್ಧವೂ ಗುಟುರು ಹಾಕುವ ನೈತಿಕ ಸ್ಥೈರ್ಯ ಅದಕ್ಕೆ ಇರಬೇಕು. ಈಗಿನ ಹಾಗೆ ನೇಮಕ ಮಾಡಿದರೆ ಅಂಥ  ಸ್ಥೈರ್ಯವನ್ನು ಹೇಗೆ ನಿರೀಕ್ಷಿಸಲು ಸಾಧ್ಯ? ಅಂದರೆ ಸರ್ಕಾರ ಕೊಡುತ್ತಿರುವ ಸಂದೇಶವೇನು? ಕನ್ನಡದ ಬಗೆಗೆ ಮತ್ತೆ ಅದೇ ಅಸೂಕ್ಷ್ಮತೆ, ಅದೇ ತಾತ್ಸಾರ ಭಾವನೆ.

 

ಹಾ.ಮಾ.ನಾಯಕರು ಹೇಳಿದ್ದರು : ‘ಮುಖ್ಯಮಂತ್ರಿಯಾದವರು–ಮಂತ್ರಿ ಮಂಡಳ ಎಂದೂ ಹೇಳಲಾರೆ– ಸ್ವಲ್ಪ ಮಟ್ಟಿನ ನಿಜವಾದ ಆಸಕ್ತಿ ವಹಿಸಿದರೂ ಸಾಕು. ಕನ್ನಡ ಸಿಂಹಾಸನ ಏರುತ್ತದೆ!’ ಹಾಗಾದರೆ, ಕನ್ನಡ ಸಿಂಹಾಸನ ಏರುವುದು ಯಾರಿಗೂ ಬೇಡವಾಗಿದೆಯೇ? ಬೇಕಾಗಿದೆ ಎಂದು ಅನಿಸುತ್ತಿಲ್ಲ.  ನಾಯಕರು ನಿಧನರಾಗಿ ಈಗ 16 ವರ್ಷಗಳು ಕಳೆದು ಹೋಗಿವೆ. ಕರ್ನಾಟಕದ ನದಿಗಳಲ್ಲಿ ಈ ಅವಧಿಯಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಲ್ಲ. ನಾಯಕರು ಜೀವಿಸಿದ್ದಾಗ ಒಂದಾದರೂ ಇಂಗ್ಲಿಷ್‌ ಮಾಧ್ಯಮ ಅಂತರರಾಷ್ಟ್ರೀಯ ಶಾಲೆ ಇತ್ತೋ ಇಲ್ಲವೋ ತಿಳಿಯದು. ಈಗ ಊರಿಗೆ ಒಂದರಂತೆ ಇಂಥ ಶಾಲೆಗಳು ತಲೆ ಎತ್ತಿವೆ. ಬಹುತೇಕ ಎಲ್ಲ ಶಾಲೆಗಳನ್ನು ರಾಜಕಾರಣಿಗಳೇ ನಡೆಸುತ್ತಿದ್ದಾರೆ. ಅವರು ತಮ್ಮ ಶಾಸಕತ್ವದ ಅವಧಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದು ‘ಜಿ’ ಕೆಟಗರಿ ನಿವೇಶನ ಪಡೆಯುತ್ತಾರೆ. ಇನ್ನೊಂದು, ತಮ್ಮ ಊರಿನ ಹತ್ತಿರದಲ್ಲಿ ಅಂತರರಾಷ್ಟ್ರೀಯ ಇಂಗ್ಲಿಷ್‌  ಮಾಧ್ಯಮ ಶಾಲೆ ತೆರೆಯಲು ಅನುಮತಿಯನ್ನು ಪಡೆಯುತ್ತಾರೆ. ನಮ್ಮ ಜನರಿಗೆ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಶಾಲೆಗಳಿಗೆ  ಕಳಿಸಬೇಕು ಎಂದು ಎಷ್ಟು ಹುಚ್ಚು ಇದೆ ಎಂದರೆ ತಗಡು ಶೆಡ್ಡಿನಲ್ಲಿ ಒಂದು ಶಾಲೆ ನಡೆದರೂ ಅಲ್ಲಿಗೆ ಮಕ್ಕಳನ್ನು ಅಟ್ಟುತ್ತಾರೆ. ಮಾಧ್ಯಮಿಕ ಹಂತದವರೆಗಾದರೂ ಮಕ್ಕಳು ರಾಜ್ಯ ಭಾಷೆಯಲ್ಲಿ ಓದಬೇಕು ಎಂಬ ಶಿಕ್ಷಣ ತಜ್ಞರ ಆಶಯ ಗಾಳಿಗೆ ತೂರಿ ಹೋಗಿ ಎಷ್ಟು ವರ್ಷಗಳಾಯಿತು?

 

ಮತ್ತೆ ನಾಯಕರ ಮಾತು ನೆನಪಾಗುತ್ತದೆ: ‘ಒಂದು ರೀತಿಯಲ್ಲಿ ಕನ್ನಡದ ಪ್ರಶ್ನೆ ವಿಷವರ್ತುಲದಲ್ಲಿ ತೊಳಲುತ್ತಿದೆ. ಆಡಳಿತದಲ್ಲಿ ಕನ್ನಡ ಕಡ್ಡಾಯವಾಗದೆ ಶಿಕ್ಷಣದಲ್ಲಿ ಕನ್ನಡ ಬರುವುದಿಲ್ಲ. ಶಿಕ್ಷಣದಲ್ಲಿ ಕನ್ನಡ ನೆಲೆಯಾಗದೆ ಜನಜೀವನದಲ್ಲಿ ಕನ್ನಡ ಉಳಿಯುವುದಿಲ್ಲ. ಜನಜೀವನದಲ್ಲಿ ಕನ್ನಡ ತುಂಬದೆ ಆಡಳಿತದಲ್ಲಿ ಅದು ಬರುವುದಿಲ್ಲ. ಯಾವುದು ಮೊದಲು ಎಂಬುದು ಸಮಸ್ಯೆ!’.

 

ಈಗಿನ ಸಮಸ್ಯೆಯೇನು ಎಂದರೆ ಕನ್ನಡವನ್ನು ಹೀಗೆಲ್ಲ ವಹಿಸಿಕೊಂಡು, ಸರ್ಕಾರಕ್ಕೆ ಮುಜುಗರವಾದರೂ ಪರವಾಗಿಲ್ಲ ಎಂದು ಯೋಚಿಸುವ, ಬರೆಯುವ ಜನರು ಎಲ್ಲಿ ಇದ್ದಾರೆ? ‘ಕನ್ನಡ ಕಾಯುವ ಕೆಲಸ’ ಈಗ ಯಾರ ಕೈಗೆ ಹೋಗಿದೆ ಎಂದು ನಮಗೆ ಗೊತ್ತಿದೆಯೇ? ಇಷ್ಟೆಲ್ಲ ಅನಾಹುತ ಆಗಿಯೂ ಕನ್ನಡ ಒಂದಿಷ್ಟು ಉಸಿರು ಹಿಡಿದುಕೊಂಡಿರುವುದು ನಿಜವಾಗಿಯೂ ಪವಾಡ ಅಲ್ಲವೇ? ಹತಭಾಗ್ಯರು ನಾವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry