ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸುಲ್‌ಗೆ ಇರಾಕ್‌ ಸೇನೆ ಮುತ್ತಿಗೆ: ಪತನದತ್ತ ಐಎಸ್‌

Last Updated 6 ನವೆಂಬರ್ 2016, 19:30 IST
ಅಕ್ಷರ ಗಾತ್ರ

2014ರ ಜೂನ್‌ನಲ್ಲಿ ಮೋಸುಲ್‌ ನಗರವನ್ನು ಐಎಸ್‌ ಉಗ್ರರು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿ ಇರಾಕ್‌ನ ಸೇನೆ ಈ
ನಗರವನ್ನು ಪ್ರವೇಶಿಸಿದೆ. ಇರಾಕ್‌ನಲ್ಲಿ ಐಎಸ್‌ ಉಗ್ರರ ಪ್ರಾಬಲ್ಯ ಇರುವ ಪ್ರಮುಖ ಪ್ರದೇಶ ಇದು. ಹಾಗಾಗಿ ಅದರ ಮೇಲಿನ ಹಿಡಿತ ಉಳಿಸಿಕೊಳ್ಳಲು ಐಎಸ್‌ ಶಕ್ತಿಮೀರಿ ಶ್ರಮಿಸುತ್ತಿದೆ.

ಮೋಸುಲ್‌ ನಗರವನ್ನು ವಶಪಡಿಸಿಕೊಳ್ಳುವುದರೊಂದಿಗೆ ಐಎಸ್‌ ಭಾರಿ ಪ್ರಬಲ ಗುಂಪು ಎಂಬ ಭಾವನೆ ಸೃಷ್ಟಿಯಾಗಿತ್ತು. ಆದರೆ 2015ರ ಆರಂಭದಿಂದಲೇ ಐಎಸ್‌ನ ಶಕ್ತಿ ಕುಂದತೊಡಗಿದೆ.

2016ರ ಮೊದಲ ಆರು ತಿಂಗಳಲ್ಲಿ  ಐಎಸ್‌ ತನ್ನ ನಿಯಂತ್ರಣದಲ್ಲಿದ್ದ ಶೇ 12ರಷ್ಟು ಪ್ರದೇಶವನ್ನು ಕಳೆದುಕೊಂಡಿದೆ ಎಂದು ಸಂಘರ್ಷ ವಿಶ್ಲೇಷಣಾ ಸಂಸ್ಥೆ ಐಎಚ್‌ಎಸ್‌ ಹೇಳಿದೆ.

2015ರಲ್ಲಿ 12,800 ಚದರ ಕಿಲೋಮೀಟರ್‌ ಪ್ರದೇಶದ ಮೇಲಿನ ಹಿಡಿತವನ್ನು ಐಎಸ್‌ ಕಳೆದುಕೊಂಡಿತು. ಐಎಸ್‌ ಪ್ರಾಬಲ್ಯದ ಪ್ರದೇಶ 78 ಸಾವಿರ ಚದರ ಕಿಲೋಮೀಟರ್‌ಗೆ ಇಳಿಯಿತು. 2016ರ ಜುಲೈ ಹೊತ್ತಿಗೆ ಇದು 68,300 ಚದರ ಕಿಲೋಮೀಟರ್‌ಗೆ ಕುಸಿಯಿತು.

ವರಮಾನವೂ ಕುಸಿತ: ಹಣಕಾಸಿನ ವಿಚಾರದಲ್ಲಿ ಅತ್ಯಂತ ಸಮೃದ್ಧವಾದ ಉಗ್ರಗಾಮಿ ಸಂಘಟನೆ ಎಂಬ ಹೆಸರನ್ನು ಐಎಸ್‌ ಹೊಂದಿತ್ತು. 2015ರಲ್ಲಿ ಈ ಸಂಘಟನೆಯ ತಿಂಗಳ ವರಮಾನ ಎಂಟು ಕೋಟಿ ಡಾಲರ್‌ (ಸುಮಾರು ₹540 ಕೋಟಿ) ಇತ್ತು.

2016ರ ಮಾರ್ಚ್‌ಗೆ ಅದು 5.6 ಕೋಟಿ ಡಾಲರ್‌ಗೆ (ಸುಮಾರು ₹ 339 ಕೋಟಿ) ಇಳಿಯಿತು. ಮಾರ್ಚ್‌ ನಂತರವೂ ವರಮಾನ ಕುಸಿಯುತ್ತಲೇ ಸಾಗಿದ್ದು ಈಗ ಅದು ಇನ್ನೂ ಶೇ 35ರಷ್ಟು ಕುಸಿದಿರಬಹುದು ಎಂದು ಐಎಚ್‌ಎಸ್‌ ಹೇಳಿದೆ.

ಮುಂದೇನು: ರಮದಿ, ಫಲ್ಲೂಜಾ ರೀತಿಯಲ್ಲಿಯೇ ಇತರ ಹಲವು ನಗರಗಳನ್ನು ಐಎಸ್‌ ಮುಂದಿನ ದಿನಗಳಲ್ಲಿ ಕಳೆದುಕೊಳ್ಳಲಿದೆ.  ಇದರಿಂದಾಗಿ ಐಎಸ್‌ ಛಿದ್ರವಾಗಬಹುದು. ಒಂದು ಗುಂಪಾಗಿ ಐಎಸ್‌  ಅಸ್ತಿತ್ವ ಕಳೆದುಕೊಳ್ಳಬಹುದು ಎಂದು ಐಎಚ್‌ಎಸ್‌ನ ಕೊಲಂಬ್‌ ಸ್ಟ್ರಾಕ್‌ ಹೇಳುತ್ತಾರೆ.
ಆಡಳಿತ ನಡೆಸುವ ಆಕಾಂಕ್ಷೆ ಈಡೇರಬೇಕಿದ್ದರೆ ತನ್ನ ನಿಯಂತ್ರಣದಲ್ಲಿರುವ ಉತ್ತರ ಸಿರಿಯಾದ ಪ್ರದೇಶಗಳನ್ನು ಐಎಸ್‌ ಉಳಿಸಿಕೊಳ್ಳಲೇಬೇಕು. ಆದರೆ ಇಲ್ಲಿ ಐಎಸ್‌ ಮೇಲಿನ ಒತ್ತಡ ಹೆಚ್ಚುತ್ತಿದೆ. ಈಗ ತಮ್ಮ ಆಡಳಿತ ಕೇಂದ್ರ ಎಂದು ಐಎಸ್‌ ಘೋಷಿಸಿರುವ ರಖ್ಖಾ ನಗರ ಒಳಗೊಂಡ ಪ್ರದೇಶವನ್ನು ಉಳಿಸಿಕೊಳ್ಳದಿದ್ದರೆ ಐಎಸ್‌ ಪತನವಾಗುವುದು ಖಚಿತ.

ಮಂಜಿಬ್‌ ಮತ್ತು ಅಲ್‌ ಬಾಬ್‌ ಪಟ್ಟಣಗಳ ಮೂಲಕ ಐಎಸ್‌ ನಿಯಂತ್ರಣದ ಪ್ರದೇಶಕ್ಕೆ ಟರ್ಕಿ ಗಡಿಯೊಂದಿಗೆ ಸಂಪರ್ಕ ಸಾಧ್ಯವಾಗುತ್ತದೆ. ಅಮೆರಿಕ ಬೆಂಬಲದ ಸಿರಿಯಾ ಡೆಮಾಕ್ರಟಿಕ್‌ ಪಡೆ ಈ ಪ್ರದೇಶವನ್ನು ವಶಕ್ಕೆ ಪಡೆದರೆ ರಖ್ಖಾ ನಗರಕ್ಕೆ ಅಗತ್ಯ ಸಾಮಗ್ರಿ ಪೂರೈಕೆ ಸ್ಥಗಿತಗೊಳ್ಳುತ್ತದೆ. ಇದರಿಂದ ಐಎಸ್‌ ಸಾಮ್ರಾಜ್ಯ ವಿಸ್ತರಣೆ ಅಸಾಧ್ಯವಾಗುವುದರ ಜತೆಗೆ ಆಡಳಿತ ನಡೆಸುವುದೂ ಕಷ್ಟವಾಗುತ್ತದೆ.
2015ರ ಜೂನ್‌ನಲ್ಲಿ ತಲ್ ಅಬಯದ್‌ ಪಟ್ಟಣವನ್ನು ಕಳೆದುಕೊಳ್ಳುವುದರೊಂದಿಗೆ ಟರ್ಕಿಯೊಂದಿಗಿನ ಸಂಪರ್ಕವೂ ಕಷ್ಟವಾಗಿದೆ. ಇದು ಐಎಸ್‌ನ ಸಂಪನ್ಮೂಲ ಕ್ರೋಡೀಕರಣದ ಮೇಲೆ ಭಾರಿ ಪರಿಣಾಮ ಬೀರಿದೆ.

ಕಾರ್ಯಾಚರಣೆ ಅಥವಾ ದಾಳಿಗಳ ಮೂಲಕ ತನ್ನ ಅಸ್ತಿತ್ವವನ್ನು ತೋರಿಸುವುದು ಜನರನ್ನು ತನ್ನತ್ತ ಸೆಳೆಯುವುದಕ್ಕಿಂತ ಐಎಸ್‌ಗೆ ಹೆಚ್ಚು ಮುಖ್ಯ. ಇರಾಕ್‌ ಮತ್ತು ಸಿರಿಯಾದಲ್ಲಿ ಹೆಚ್ಚು ಹೆಚ್ಚು ಹಿನ್ನಡೆ ಆದಂತೆ ಈ ಗುಂಪು ಈ ಪ್ರದೇಶದ ಹೊರಭಾಗದ ಮೇಲೆ ನಡೆಸುವ ದಾಳಿಗಳ ಪ್ರಮಾಣ ಹೆಚ್ಚಬಹುದು.

ಅಬು ಬಕರ್‌ ಅಲ್‌ ಬಗ್ದಾದಿ
ಇರಾಕ್‌ನ ಸಮರ್ರಾ ಎಂಬಲ್ಲಿ 1971ರಲ್ಲಿ ಜನಿಸಿದ ಅಬು ಬಕರ್‌ ಅಲ್‌ ಬಗ್ದಾದಿಯ ಮೂಲ ಹೆಸರು ಇಬ್ರಾಹಿಂ ಅವ್ವದ್‌ ಇಬ್ರಾಹಿಂ ಅಲ್‌ ಬದ್ರಿ ಎಂದಾಗಿತ್ತು. ಆತ ಹುಟ್ಟಿದ್ದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ.

ಚಿಕ್ಕಂದಿನಲ್ಲಿಯೇ ಈತ ಕುರ್‌ಆನ್‌ ಪಠಣದಲ್ಲಿ ಭಾರಿ ಆಸಕ್ತಿ ತೋರಿದ್ದ. ಧರ್ಮದ ಕಟ್ಟುನಿಟ್ಟಿನ ನಿಯಮಗಳ ಅನುಸಾರ ಜೀವಿಸದ ಸಂಬಂಧಿಕರನ್ನು  ಈತ ದಂಡಿಸುತ್ತಿದ್ದ. ಹಾಗಾಗಿ ಈತನನ್ನು ಕುಟುಂಬದವರು ‘ದೈವಭಕ್ತ’ ಎಂದು ಕರೆಯುತ್ತಿದ್ದರು.

ಇಸ್ಲಾಂ ಧರ್ಮದ ಅಧ್ಯಯನದಲ್ಲಿ ಪದವಿ ಮತ್ತು ಕುರ್‌ಆನ್‌ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌.ಡಿ ಕೂಡ ಈತ ಪಡೆದಿದ್ದಾನೆ.
2004ರವರೆಗೆ ಬಗ್ದಾದ್‌ನ ಹೊರವಲಯದ ತೊಬ್ಚಿಯಲ್ಲಿ ಈತ ತನ್ನ ಇಬ್ಬರು ಹೆಂಡತಿಯರು ಮತ್ತು ಆರು ಮಕ್ಕಳೊಂದಿಗೆ ನೆಲೆಸಿದ್ದ. ಅಲ್ಲಿನ ಫುಟ್ಬಾಲ್‌ ಕ್ಲಬ್‌ನ ಮುಖ್ಯ ಆಕರ್ಷಣೆಯಾಗಿದ್ದ.

2003ರಲ್ಲಿ ಇರಾಕ್‌ ಮೇಲೆ ಅಮೆರಿಕ ನೇತೃತ್ವದ ಪಡೆಗಳು ದಾಳಿ ನಡೆಸಿದ ನಂತರ ‘ಜೈಷ್‌ ಅಹ್ಲ್‌ಅಲ್‌ ಸುನ್ನಾ ವ ಅಲ್‌ ಜಮಾ‘ ಎಂಬ ಉಗ್ರಗಾಮಿ ಸಂಘಟನೆ ಸ್ಥಾಪನೆಗೆ ಈತ ನೆರವಾಗಿದ್ದ. 2004ರಲ್ಲಿ ಈತನನ್ನು ಅಮೆರಿಕ ಪಡೆ ಬಂಧಿಸಿ ಹತ್ತು ತಿಂಗಳು ಜೈಲಿನಲ್ಲಿಡುತ್ತದೆ.
2006ರಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಇನ್‌ ಇರಾಕ್‌ (ಐಎಸ್‌ಐ) ಎಂಬ ಸಂಘಟನೆ ಸ್ಥಾಪನೆಯಾಗುತ್ತದೆ. ಐಎಸ್‌ಐ ಮುಖ್ಯಸ್ಥನಾಗಿದ್ದ ಅಬು ಅಲ್‌ ಬಗ್ದಾದಿ 2010ರಲ್ಲಿ ಅಮೆರಿಕ ದಾಳಿಯಲ್ಲಿ  ಸಾಯುತ್ತಾನೆ.

ಧಾರ್ಮಿಕ ವಿಷಯಗಳಲ್ಲಿನ ಜ್ಞಾನ, ಐಎಸ್‌ಐ ಸ್ಥಾಪಿಸಿದ ವಿದೇಶಿಯರು ಮತ್ತು  ಇರಾಕಿಗಳ ನಡುವೆ ಸಮನ್ವಯ ಸಾಧಿಸುವ ಸಾಮರ್ಥ್ಯದಿಂದಾಗಿ 2010ರಲ್ಲಿ ಅಬು ಬಕರ್‌ ಅಲ್‌ ಬಗ್ದಾದಿ ಐಎಸ್‌ಐ ಮುಖ್ಯಸ್ಥನಾಗಿ ಆಯ್ಕೆಯಾಗುತ್ತಾನೆ.

ಹಿಮ್ಮೆಟ್ಟದಂತೆ ವಿಡಿಯೊ ಸಂದೇಶ
ಅಬು ಬಕರ್‌ ಅಲ್‌ ಬಗ್ದಾದಿ ಸತ್ತಿದ್ದಾನೆ ಎಂದು ಹಲವು ಬಾರಿ ವರದಿಯಾಗಿದೆ. 2015ರ ಡಿಸೆಂಬರ್‌ ನಂತರ ಈತ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ ಮೋಸುಲ್‌ಗೆ ಇರಾಕ್‌ ಸೇನೆ ಮುತ್ತಿಗೆ ಹಾಕಿದ ನಂತರ ಈತನ ಹೆಸರಿನಲ್ಲಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಲಾಗಿದೆ.

‘ಹಿಮ್ಮೆಟ್ಟುವಂತೆ ಸೈತಾನನು ಮನವೊಲಿಸಲು ಯತ್ನಿಸಿದರೆ ಅದನ್ನು ನಂಬಬೇಡಿ. ಯೋಧರು ತಮ್ಮನ್ನು ನಿಯೋಜಿಸಲಾದ ಕಾವಲು ಠಾಣೆಯಲ್ಲಿಯೇ ಇರಬೇಕು. ಯುದ್ಧವನ್ನು ಮುಂದಕ್ಕೆ ಒಯ್ಯಬೇಕು. ಅವಮಾನದಿಂದ ಹಿಮ್ಮೆಟ್ಟುವುದಕ್ಕಿಂತ ಅವರವರ ನೆಲದಲ್ಲಿ ಇರುವುದು ಸಾವಿರ ಪಾಲು ಮೇಲು’ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಐಎಸ್‌ ನೀತಿ ನಿಯಮಗಳು
* ಪ್ರವಾದಿ ಮೊಹಮ್ಮದ್‌ ಮತ್ತು ಅವರ ಅನುಯಾಯಿಗಳು ಅನುಸರಿಸಿದ್ದ  ಏಳನೇ ಶತಮಾನದ ‘ಪರಿಶುದ್ಧ’ ಇಸ್ಲಾಂ ಧರ್ಮವನ್ನು ಜಾರಿಗೆ ತರುವುದು ಐಎಸ್ ಗುರಿ.
* ಇದನ್ನು ಜಾರಿಗೆ ತರಲು ಹಿಸ್ಬಾ ಎಂಬ ಹೆಸರಿನ ‘ಪೊಲೀಸ್‌’ ವ್ಯವಸ್ಥೆ ಇದೆ.
* ಪ್ರಾರ್ಥನೆ ಸಮಯದಲ್ಲಿ ಅಂಗಡಿಗಳನ್ನು ಮುಚ್ಚಲಾಗುತ್ತಿದೆಯೇ, ಜನರು ಗಡ್ಡ ಬಿಟ್ಟಿದ್ದಾರೆಯೇ, ಮಹಿಳೆಯರು ಸರಿಯಾಗಿ ಬಟ್ಟೆ ಧರಿಸಿದ್ದಾರೆಯೇ ಎಂಬುದನ್ನು ತಪಾಸಣೆ ಮಾಡುವುದು ಹಿಸ್ಬಾದ ಕೆಲಸ.
* ಮೊಬೈಲ್‌ ಫೋನ್‌ಗಳಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ಐಎಸ್‌ ವಿರುದ್ಧ ಬರಹ ಅಥವಾ ಪ್ರತಿಕ್ರಿಯೆ ಇದೆಯೇ ಎಂಬುದನ್ನೂ ಹಿಸ್ಬಾ ತಪಾಸಣೆಗೆ ಒಳಪಡಿಸುತ್ತದೆ. ಟ್ಯಾಕ್ಸಿ ಚಾಲಕರು ಐಎಸ್‌ ರೇಡಿಯೊ ಆಲಿಸುತ್ತಿದ್ದಾರೆಯೇ ಎಂಬುದನ್ನೂ ಅವರು ನೋಡುತ್ತಾರೆ.
* ಧೂಮಪಾನ, ಮದ್ಯಪಾನ, ಸಂಗೀತ ಕೇಳುವುದು, ತಲೆ ಕೂದಲಿಗೆ ಜೆಲ್‌ ಬಳಕೆ ನಿಷಿದ್ಧ

ಮಹಿಳೆಯರ ಸ್ಥಿತಿ
* ಬಾಲಕಿಯರು 9 ವರ್ಷಕ್ಕೆ ಮದುವೆ ಆಗಬಹುದು; 16/17ರೊಳಗೆ ಗಂಡನನ್ನು ಹೊಂದಿರುವುದು ಕಡ್ಡಾಯ
* ಎರಡು ಕಪ್ಪು ಬುರ್ಖಾ ಧರಿಸಬೇಕು, ಕಣ್ಣು ಇತರರಿಗೆ ಕಾಣಿಸದಂತೆ ಮೂರು ಕಪ್ಪು ಪರದೆ ಹಾಕಿಕೊಳ್ಳಬೇಕು
* ವಿವಾಹೇತರ ದೈಹಿಕ ಸಂಬಂಧ ನಡೆಸಿದರೆ ಕಲ್ಲು ಎಸೆದು ಹತ್ಯೆ
* ಮಹಿಳೆಯ ಮೇಲೆ ನಿಗಾ ಇರಿಸಲು ಸಂಪೂರ್ಣ ಮಹಿಳೆಯರೇ ಇರುವ ಅಲ್‌ ಖನ್ಸಾ ಬ್ರಿಗೇಡ್‌
* ಪುರುಷ ಸಂಬಂಧಿ ಜತೆಗಿಲ್ಲದೆ ಹೊರಗೆ ಹೋದ ಅಥವಾ ವಸ್ತ್ರ ಸಂಹಿತೆ ಉಲ್ಲಂಘಿಸಿದ ಮಹಿಳೆಗೆ ಛಡಿಯೇಟು

ಶಿಕ್ಷೆ ಏನು
* ಮದ್ಯಪಾನ: 80 ಛಡಿಯೇಟು
* ಪರ ನಿಂದೆ: 80 ಛಡಿಯೇಟು
* ಗೂಢಚರ್ಯೆ: ಮರಣ ದಂಡನೆ
* ಇಸ್ಲಾಂ ನಿಂದನೆ: ಮರಣ ದಂಡನೆ
* ದರೋಡೆ, ಕೊಲೆ: ಶಿಲುಬೆಗೇರಿಸಿ ಹತ್ಯೆ
* ವಿವಾಹೇತರ ಸಂಬಂಧ: ಕಲ್ಲೆಸೆದು ಹತ್ಯೆ

ಯಾಜಿದಿಗಳ ನಾಶಕ್ಕೆ ಅತ್ಯಾಚಾರದ ಅಸ್ತ್ರ
ಸಿರಿಯಾದ ಪ್ರಮುಖ ಸಮುದಾಯಗಳಲ್ಲಿ ಯಾಜಿದಿಯೂ ಒಂದು.
ಇಸ್ಲಾಂ ಪೂರ್ವ ಸಂಪ್ರದಾಯವನ್ನು ಅನುಸರಿಸುವ ಯಾಜಿದಿಗಳು ಮುಸ್ಲಿಮರೇ ಅಲ್ಲ ಎಂಬುದು ಇಸ್ಲಾಮಿಕ್ ಸ್ಟೇಟ್‌ ಉಗ್ರರ ಪ್ರತಿಪಾದನೆ.  ‘ಮುಸ್ಲಿಮರಲ್ಲದ ಇವರನ್ನು  ಭೂಮಿಯಿಂದಲೇ  ನಿರ್ನಾಮ ಮಾಡಬೇಕು’ ಎಂದು ಐಎಸ್ ಉಗ್ರರು ಬಹಿರಂಗವಾಗಿ ಘೋಷಿಸಿದ್ದರು.

ಮೋಸುಲ್‌ ನಗರವನ್ನು ವಶಕ್ಕೆ ಪಡೆದುಕೊಂಡ ನಂತರ ಉಗ್ರರು ಯಾಜಿದಿ ಬುಡಕಟ್ಟು ಜನರು ನೆಲೆಸಿದ್ದ ಸಿರಿಯಾದ ಸಿಂಜರ್‌ ನಗರದ ಮೇಲೆ ದಾಳಿ ಆರಂಭಿಸಿದರು. ಯಾಜಿದಿ ಪುರುಷರನ್ನು ಸಿಕ್ಕಸಿಕ್ಕಲ್ಲಿ ಉಗ್ರರು ಗುಂಡಿಕ್ಕಿ  ಕೊಂದರು. ಉಗ್ರರ ದಾಳಿಗೂ ಮುನ್ನ ಯಾಜಿದಿ ಸಮುದಾಯದವರ ಸಂಖ್ಯೆ ಸುಮಾರು 7 ಲಕ್ಷದಷ್ಟಿತ್ತು. ಅದರಲ್ಲಿ ಸುಮಾರು 5 ಲಕ್ಷ ಜನರು ಸಿಂಜರ್‌ ಸುತ್ತಮುತ್ತಲೇ ನೆಲೆಸಿದ್ದರು.

ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸುಮಾರು 1.5 ಲಕ್ಷ ಜನ ಸಿಂಜರ್ ನಗರವನ್ನು ಬಿಟ್ಟು ಓಡಿ ಹೋದರು. ಇನ್ನು ಕೆಲವರು ಸಮೀಪದ ಗುಡ್ಡಗಾಡುಗಳನ್ನು ಸೇರಿದರು. ಪರಸ್ಥಳದಲ್ಲಿ ತಮ್ಮ ಧರ್ಮದ ಪವಿತ್ರ ಆಚರಣೆಗಳ ಪಾಲನೆಗೆ ಅನುಕೂಲಗಳಿಲ್ಲ ಎಂಬುದು ಯಾಜಿದಿ ನಾಯಕರ ಅಳಲು. ಆಚರಣೆ, ಸಂಸ್ಕೃತಿಗಳನ್ನು ಪಾಲಿಸದೇ ಹೋದರೆ ಧರ್ಮವೇ ಅಳಿಸಿಹೋಗುತ್ತದೆ ಎಂದು ಯಾಜಿದಿ ಧರ್ಮಗುರು ಬಾಬಾ ಶೇಖ್ ಅಳಲು ತೋಡಿಕೊಂಡಿದ್ದರು.

ಅಸ್ತ್ರವಾದ ಅತ್ಯಾಚಾರ: ಯಾಜಿದಿ ಜನಾಂಗವೇ ಉಳಿಯಬಾರದು ಎಂಬ ಉದ್ದೇಶದಿಂದ ಆ ಸಮುದಾಯದ ಮಹಿಳೆಯರು, ಯುವತಿಯರು ಮತ್ತು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಲು ಆರಂಭಿಸಿದ್ದರು. ಅಲ್ಲದೆ ಯುವತಿಯರನ್ನು ಲೈಂಗಿಕ ದಾಸಿಯರನ್ನಾಗಿ ಬಳಸಿಕೊಂಡರು. ಉಗ್ರರು ಯಾಜಿದಿ ಸಮುದಾಯದ ಸುಮಾರು 150 ಶಾಲಾ  ಬಾಲಕಿಯರನ್ನು ಲೈಂಗಿಕ ದಾಸಿಯರನ್ನಾಗಿ ಬಳಸಿಕೊಂಡಿದ್ದ ವಿಷಯ ಬಹಿರಂಗವಾದಾಗ, ಜಗತ್ತು ಆಘಾತದಿಂದ ಅತ್ತ ನೋಡಿತ್ತು. ಉಗ್ರರ  ಹಿಡಿತದಿಂದ ತಪ್ಪಿಸಿಕೊಂಡು ಬಂದಿದ್ದ ಈ ಬಾಲಕಿಯರು ಬಿಚ್ಚಿಟ್ಟ ಕಥೆ ಕೇಳಿ ಜಗತ್ತು ಬೆಚ್ಚಿಬಿದ್ದಿತ್ತು. ಯಾಜಿದಿ ಜನಾಂಗವನ್ನು ಸಂಪೂರ್ಣವಾಗಿ ಅಳಿಸಿಹಾಕಲು ಉಗ್ರರು ಅತ್ಯಾಚಾರವನ್ನು ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು.

ಸ್ವತಂತ್ರ ಧರ್ಮ: ಮುಸ್ಲಿಂ ಮತ್ತು ಕ್ರೈಸ್ತ ಎರಡೂ ಧರ್ಮಗಳ ಆಚರಣೆಗಳನ್ನು ಯಾಜಿದಿ ಜನರಲ್ಲಿ ಕಾಣಬಹುದು. ಕ್ರೈಸ್ತರ ಪವಿತ್ರೀಕರಣ ಮತ್ತು ಮುಸ್ಲಿಮರ ಸುನ್ನತಿ ಪದ್ಧತಿ ಯಾಜಿದಿ ಜನರಲ್ಲಿ ಈಗಲೂ ಇದೆ. ಹಾಗೆ ನೋಡಿದರೆ ಇದು ಇಸ್ಲಾಂ ಮತ್ತು  ಕ್ರೈಸ್ತ ಧರ್ಮಕ್ಕಿಂತ ಸಂಪೂರ್ಣ ಭಿನ್ನವಾದುದು. ಇವರು ಯಹೂದಿಗಳಂತೆ ಬೆಂಕಿಯನ್ನೂ ಆರಾಧಿಸುತ್ತಾರೆ. ಇವರಲ್ಲಿ ಬಹುಪತ್ನಿತ್ವ ನಿಷಿದ್ಧ. ತಮ್ಮ ಧರ್ಮದ ರಕ್ಷಣೆಗೆ ಈ ಜನರು ಹೆಚ್ಚಿನ ಮಹತ್ವ ಕೊಡುತ್ತಾರೆ. ಇದರ ಅಂಗವಾಗಿ ವಂಶವಾಹಿ ರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ಈ ಜನರು ಅಂತರ್‌ಧರ್ಮೀಯ ವಿವಾಹವನ್ನು ವಿರೋಧಿಸುತ್ತಾರೆ.

* ಉಗ್ರರ ಹಿಡಿತದಿಂದ ತಪ್ಪಿಸಿಕೊಂಡು ಬಂದ ಯಾಜಿದಿ ಯುವತಿ ನಾದಿಯ. ಲೈಂಗಿಕ ದಾಸ್ಯದ ಬಗ್ಗೆ ಮಾಹಿತಿ ನೀಡಿದವರಲ್ಲಿ ನಾದಿಯ ಮೊದಲಿಗರು.

ಆರ್ಥಿಕ ವ್ಯವಸ್ಥೆ
ಇಸ್ಲಾಮಿಕ ಸ್ಟೇಟ್‌ ವಿಶ್ವದ ಅತ್ಯಂತ ಶ್ರೀಮಂತ ಉಗ್ರಗಾಮಿ ಸಂಘಟನೆಯಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಆರ್ಥಿಕತೆಯನ್ನು ಈ ಸಂಘಟನೆ ನಿರ್ವಹಿಸಿದೆ.

ಇರಾಕ್‌ ಮತ್ತು ಸಿರಿಯಾ ಸೇನೆಗಳ ದೌರ್ಬಲ್ಯಗಳನ್ನು ಬಳಸಿಕೊಂಡು, ಜನವಸತಿ ಪ್ರದೇಶ, ತೈಲಾಗಾರಗಳನ್ನು ಈ ಉಗ್ರರು ವಶಕ್ಕೆ ಪಡೆದುಕೊಂಡಿದ್ದರು. ಜನರ ಮೇಲೆ, ಸೇವೆಗಳ ಮೇಲೆ ತೆರಿಗೆ ವಿಧಿಸಿ ಹಣ ಸಂಗ್ರಹಿಸಿದ್ದಾರೆ.

ತಮ್ಮ ಹಿಡಿತದಲ್ಲಿದ್ದ ಹಲವು ನಗರಗಳನ್ನು ಈಗ ಸೇನಾ ಕಾರ್ಯಾಚರಣೆಯಲ್ಲಿ ಕಳೆದುಕೊಂಡಿದ್ದಾರೆ. ಆದರೂ ತಮ್ಮ ನಿಯಂತ್ರಣದಲ್ಲಿ ಉಳಿದಿರುವ ನಗರಗಳಲ್ಲೇ ತೆರಿಗೆ ಪ್ರಮಾಣವನ್ನು ಹೆಚ್ಚಿಸಿ, ಆದಾಯವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.

* ₹540 ಕೋಟಿ 2015ರಲ್ಲಿ ಸಂಘಟನೆಯ ಪ್ರತಿ ತಿಂಗಳ ಆದಾಯ
* ₹339 ಕೋಟಿ ಈಗ ಐಎಸ್‌ನ ಪ್ರತಿ ತಿಂಗಳ ಆದಾಯ

ಆದಾಯದ ಮೂಲಗಳು
1. ಸಿರಿವಂತರ ಮೇಲೆ ತೆರಿಗೆ
2. ಆಸ್ತಿ ತೆರಿಗೆ
3. ತೈಲಬಾವಿ ಮತ್ತು ತೈಲ ಶುದ್ಧೀಕರಣ ಘಟಕಗಳ ಮೇಲಿನ ತೆರಿಗೆ
4. ಮುಸ್ಲಿಮೇತರರ ಮೇಲಿನ ತೆರಿಗೆ
5. ಸ್ವದೇಶಕ್ಕೆ ವಾಪಸಾಗುವ ಮುಸ್ಲಿಮರ ಮೇಲಿನ ತೆರಿಗೆ
6. ಆದಾಯ ತೆರಿಗೆ
7. ಉಗ್ರರ ವಶದಲ್ಲಿರುವ ಸಾರ್ವಜನಿಕ ಸ್ಥಳ, ಕಟ್ಟಡಗಳ ಬಳಕೆ ಶುಲ್ಕ
8. ಸಿರಿಯಾ ಮತ್ತು ಇರಾಕ್‌ನ ನಗರಗಳನ್ನು ವಶಪಡಿಸಿಕೊಂಡಾಗ ಬ್ಯಾಂಕ್‌ ಲೂಟಿ ಮಾಡಿ ಸಂಗ್ರಹಿಸಿದ ಹಣ
9. ಪ್ರವಾಸಿಗರ ಮೇಲಿನ ತೆರಿಗೆ
10. ಮೂತ್ರಪಿಂಡ ಮತ್ತು  ಕಣ್ಣು ಮಾರಾಟ ದಂಧೆ
11. ಕಚ್ಚಾ ತೈಲ ಕಳ್ಳಸಾಗಣೆ
12. ಟರ್ಕಿಯ ಕಾಳಸಂತೆಗಳಲ್ಲಿ ಕಚ್ಚಾ ತೈಲ ಮಾರಾಟ

ಪತನದ ಹಾದಿ...
2015 ಜನವರಿ : ಕುರ್ದ್‌ ಹೋರಾಟಗಾರರು, ಸಿರಿಯಾ ಸೇನೆ ಮತ್ತು ಅಮೆರಿಕದ ವಾಯುಪಡೆಯ ಜಂಟಿ ಕಾರ್ಯಾಚರಣೆ. ಕೋಬಾನಿ ನಗರ ಮರಳಿ ಸಿರಿಯಾ ಸರ್ಕಾರದ ವಶಕ್ಕೆ. ಮೇ : ಸಿರಿಯಾದ ಪಾರಂಪರಿಕ ನಗರ ಪಲ್‌ಮೈರಾ ಉಗ್ರರ ವಶಕ್ಕೆ. ನಗರದ ಪಾರಂಪರಿಕ ಕಟ್ಟಡಗಳ ಧ್ವಂಸ.

ಜೂನ್‌ : ಉಗ್ರರಿಂದ ಸಿರಿಯಾದ ತಲ್ ಅಬಯದ್, ಆಯಿನ್ ಇಸಾ ನಗರಗಳನ್ನು ವಶಪಡಿಸಿಕೊಂಡ ಕುರ್ದ್‌ ಹೋರಾಟಗಾರರು. ಸೆಪ್ಟೆಂಬರ್‌ನಲ್ಲಿ ಉಗ್ರರ ವಿರುದ್ಧ ವಾಯದಾಳಿ ಆರಂಭಿಸಿದ ರಷ್ಯಾ. ಡಿಸೆಂಬರ್‌ನಲ್ಲಿ ಕುರ್ದ್‌ ಹೋರಾಟಗಾರರು ಮತ್ತು ಇರಾಕ್ ಸೇನೆಯ ಬೆಂಬಲಕ್ಕೆ ನಿಂತ ಅಮೆರಿಕದ ವಿಶೇಷ ಕಾರ್ಯಾಚರಣೆ ಪಡೆ.  ರಮದಿ ನಗರವನ್ನು ಮತ್ತೆ ವಶಕ್ಕೆ ಪಡೆದುಕೊಂಡ ಇರಾಕ್‌ ಸೇನೆ.

2016 ಏಪ್ರಿಲ್ : ಉಗ್ರರಿಂದ ಹಿತ್‌ ನಗರವನ್ನು ವಶಪಡಿಸಿಕೊಂಡ ಇರಾಕ್ ಸೇನೆ.
ಜೂನ್‌ : ಫಲ್ಲೂಜಾ ನಗರ ಇರಾಕ್ ಸೇನೆ ವಶಕ್ಕೆ. ಈಗ ಮೋಸುಲ್‌ ನಗರಕ್ಕೆ ಇರಾಕ್ ಸೇನೆ ಮುತ್ತಿಗೆ

* 1 ಕೋಟಿ ಡಾಲರ್‌  (ಸುಮಾರು ₹67 ಕೋಟಿ) ಅಲ್‌ ಬಗ್ದಾದಿ ತಲೆ ತೆಗೆದವರಿಗೆ ಘೋಷಿಸಲಾಗಿರುವ ಬಹುಮಾನ

* 536 ಕೋಟಿ ಡಾಲರ್‌ (₹ 36 ಸಾವಿರ ಕೋಟಿ) ಈವರೆಗೆ ಐಎಸ್‌ ವಿರುದ್ಧದ ಯುದ್ಧಕ್ಕೆ ಅಮೆರಿಕ ಮಾಡಿರುವ ವೆಚ್ಚ

* 1.1 ಕೋಟಿ ಡಾಲರ್‌ (ಅಂದಾಜು ₹73 ಕೋಟಿ) ಪ್ರತಿ ದಿನಕ್ಕೆ ಅಮೆರಿಕಕ್ಕೆ ಆಗುತ್ತಿರುವ ವೆಚ್ಚ

* ಮೋಸುಲ್‌ಗೆ ಮುತ್ತಿಗೆ, 50 ಸಾವಿರ ಯೋಧರ ಪಡೆ; ಇರಾಕ್‌ ಯೋಧರು, ಕುರ್ದ್‌ ಹೋರಾಟಗಾರರು, ಸುನ್ನಿ ಅರಬ್‌ ಬುಡಕಟ್ಟು ಜನರು, ಶಿಯಾ ಅರೆ ಸೇನಾ ಪಡೆ ಯೋಧರು

* ಅಕ್ಟೋಬರ್‌ 17 ಕಾರ್ಯಾಚರಣೆ ಆರಂಭ

* ನವೆಂಬರ್‌ 2 -ಮೋಸುಲ್‌ ನಗರಕ್ಕೆ ಮುತ್ತಿಗೆ; 3,000–5,000 ಐಎಸ್‌ ಸದಸ್ಯರಿಂದ ಪ್ರತಿರೋಧ

ಇರಾಕ್‌, ಸಿರಿಯಾದಲ್ಲಿ ಪ್ರಾಬಲ್ಯ: 2014ರ ಜೂನ್‌ನಲ್ಲಿ ಇರಾಕ್‌ನ ಎರಡನೇ ದೊಡ್ಡ ನಗರ, ದೇಶದ ಉತ್ತರ ಭಾಗದಲ್ಲಿರುವ ಮೋಸುಲ್‌ ಅನ್ನು ವಶಕ್ಕೆ ಪಡೆಯುವುದರೊಂದಿಗೆ ಐಎಸ್‌ ಜಗತ್ತಿನ ಗಮನ ಸೆಳೆಯಿತು.

* 36,000 - 2002ರಿಂದ ಈವರೆಗೆ ಐಎಸ್‌ ಉಗ್ರರ ನೇರವಾದ ದಾಳಿ ಮತ್ತು ಶಿರಚ್ಛೇದದಲ್ಲಿ ಮೃತಪಟ್ಟವರ ಸಂಖ್ಯೆ

* 41,000 ಐಎಸ್‌ ದಾಳಿಗಳಲ್ಲಿ ಗಾಯಗೊಂಡವರು

* 11,000 ಐಎಸ್‌ ಉಗ್ರರು ಈವರೆಗೆ ಅಪಹರಿಸಿದವರ ಸಂಖ್ಯೆ

*  2016ರ ಜನವರಿಯಿಂದ ಐಎಸ್‌ ಬಿಟ್ಟು ಹೋಗುತ್ತಿರುವವರ ಪ್ರಮಾಣ ಹೆಚ್ಚಳ

* ಅಲ್‌ ಇಂತಿಸಾರ್‌ ಪ್ರದೇಶದ ಎರಡು ವಿಭಾಗಗಳನ್ನು ತೆರವುಗೊಳಿಸಿದ ಸೇನೆ
* ಜನರು ಮೋಸುಲ್‌ ನಗರ ತೊರೆಯಲು ಸುರಕ್ಷಿತ ವ್ಯವಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT