ಸೂಪರ್‌ಪವರ್‌ ಆಗುವ ಎಲ್ಲ ಅರ್ಹತೆಗಳಿವೆ...

7

ಸೂಪರ್‌ಪವರ್‌ ಆಗುವ ಎಲ್ಲ ಅರ್ಹತೆಗಳಿವೆ...

Published:
Updated:
ಸೂಪರ್‌ಪವರ್‌ ಆಗುವ ಎಲ್ಲ ಅರ್ಹತೆಗಳಿವೆ...

ವ್ಯಾಪಕ ಸ್ವರೂಪದ, ವೈವಿಧ್ಯಮಯ ಕೈಗಾರಿಕೆಗಳ ವಿಶಾಲ ತಳಹದಿ ಹೊಂದಿರುವ ಕರ್ನಾಟಕ ರಾಜ್ಯವು,  ಅತ್ಯಂತ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ದೇಶದ ರಾಜ್ಯಗಳ ಪೈಕಿ ಒಂದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ‘ಭಾರತದಲ್ಲಿಯೇ ತಯಾರಿಸಿ, ‘ಡಿಜಿಟಲ್‌ ಭಾರತ’,  ‘ಸ್ಟಾರ್ಟ್‌ಅಪ್‌ ಭಾರತ’ ಕಾರ್ಯಕ್ರಮಗಳಲ್ಲಿ  ಮುಂಚೂಣಿಯಲ್ಲಿ ಇರುವ ರಾಜ್ಯವು, ಜಾಗತಿಕ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿಯೂ ಮೊದಲ ಸ್ಥಾನದಲ್ಲಿ ಇದೆ.

ಭಾರತದ ಸಿಲಿಕಾನ್‌ ಕಣಿವೆ (ಮಾಹಿತಿ ತಂತ್ರಜ್ಞಾನ), ಜೈವಿಕ ತಂತ್ರಜ್ಞಾನ, ಸಿದ್ಧ ಉಡುಪು, ವೈಮಾಂತರಿಕ್ಷ ತಂತ್ರಜ್ಞಾನ, ವಿದ್ಯುನ್ಮಾನ, ಸಾಫ್ಟ್‌ವೇರ್‌, ಕೃಷಿ, ಆಹಾರ ಸಂಸ್ಕರಣೆ, ಪುಷ್ಪೋದ್ಯಮ, ತೋಟಗಾರಿಕೆ, ಔಷಧಿ ಮತ್ತು ರಾಸಾಯನಿಕಗಳ ತಯಾರಿಕೆಯು ವಿದೇಶಿ ವ್ಯಾಪಾರಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿವೆ.

ಅಸ್ತಿತ್ವಕ್ಕೆ ಬಂದ ವಜ್ರಮಹೋತ್ಸವ ಸಂಭ್ರಮದಲ್ಲಿ  ಇರುವ ರಾಜ್ಯದ ಪಾಲಿಗೆ ಇದೊಂದು ಮಹತ್ವದ ಕಾಲ ಘಟ್ಟವಾಗಿದೆ. ವ್ಯಕ್ತಿಯ ಬದುಕಿನಲ್ಲಿ 60, ಉತ್ಸಾಹ ಕುಗ್ಗಿಸುವ, ಚಟುವಟಿಕೆಗಳೆಲ್ಲ ನಿಧಾನಗೊಳ್ಳುವ ಹಂತವಾಗಿರುತ್ತದೆ. ಆದರೆ, ರಾಜ್ಯದ ಪಾಲಿಗೆ ಇದೊಂದು  ಸಾಧನೆಯ ಮೇರು ಪರ್ವತ ಏರಲು ತುದಿಗಾಲಲ್ಲಿ ನಿಂತಿರುವ ಹಂತ. ಹೀಗಾಗಿ  ಹಿಂತಿರುಗಿ ನೋಡಿ ತನ್ನ ಹಳೆಯ ಅನುಭವಗಳಿಂದ ಪಾಠ ಕಲಿತು,  ದೇಶದಲ್ಲಿನ ಇತರ ರಾಜ್ಯಗಳ ಪಾಲಿಗೆ ಆದರ್ಶವಾಗುವ ನಿಟ್ಟಿನಲ್ಲಿ  ಹೊಸ ಹುಮ್ಮಸ್ಸಿನಿಂದ ಮುಂದಡಿ ಇಡಬೇಕಾಗಿದೆ. ದೇಶದ ಸೂಪರ್‌ ಪವರ್‌  ರಾಜ್ಯವಾಗುವ ಎಲ್ಲ ಅರ್ಹತೆಗಳೂ ಕರ್ನಾಟಕಕ್ಕೆ ಇವೆ.

ದೀರ್ಘಾವಧಿ ಕಾರ್ಯಕ್ರಮ

ಸುಸ್ಥಿರ ಬೆಳವಣಿಗೆ ಸಾಧಿಸುವ ಮತ್ತು  ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಸುಧಾರಣೆ ತಂದು, ಈ ಸೂಚ್ಯಂಕಗಳ ರಾಷ್ಟ್ರೀಯ ಸರಾಸರಿ ಮಟ್ಟ ಮೀರುವ ದೀರ್ಘಾವಧಿ ಮುನ್ನೋಟವನ್ನು ರಾಜ್ಯವು ಅಳವಡಿಸಿಕೊಳ್ಳಬೇಕಾಗಿದೆ.

ಇಡೀ ರಾಜ್ಯದ ಸಮತೋಲನದ ಬೆಳವಣಿಗೆಗೆ ಕಾರ್ಯಸೂಚಿ ಹಾಕಿಕೊಳ್ಳಬೇಕಾಗಿದೆ. ವಿದ್ಯುತ್‌, ನೀರು,  ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ರಸ್ತೆ, ರೈಲು, ವಿಮಾನ ಸೇವೆ ವಿಸ್ತರಣೆಯಂತಹ ಮೂಲ ಸೌಕರ್ಯಗಳ ಅಭಿವೃದ್ಧಿಗೆ ತೀವ್ರ ಗಮನ ನೀಡಬೇಕಾಗಿದೆ.

ರಾಜಧಾನಿ ಬೆಂಗಳೂರಿನ ಮೂಲ ಸೌಕರ್ಯ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ನಿವಾರಿಸಿಕೊಳ್ಳಬೇಕಾಗಿದೆ. ‘ಉದ್ಯಾನ ನಗರಿ ಖ್ಯಾತಿಯ ಬೆಂಗಳೂರು ತನಗೆ ಅಂಟಿಕೊಂಡಿರುವ ತಿಪ್ಪೆಗುಂಡಿ ನಗರ’ ಕಳಂಕವನ್ನು ಆದಷ್ಟು ಬೇಗ ನಿವಾರಿಸುವ  ರಚನಾತ್ಮಕ ಪ್ರಯತ್ನಗಳು ನಡೆಯಬೇಕಾಗಿದೆ.

ಈ 21ನೆ ಶತಮಾನವನ್ನು ರಾಜ್ಯದ ಶತಮಾನದ ಸಾಧನೆಯನ್ನಾಗಿ  ಮಾಡುವ ನಿಟ್ಟಿನಲ್ಲಿ ಹತ್ತು – ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗಿದೆ. ಇಂತಹ ಕನಸು ನನಸಾಗಿಸಲು ರಾಜಕೀಯ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಬೇಕಾಗಿದೆ.

ಕಿರು, ಸಣ್ಣ ಮತ್ತು ಮಧ್ಯಮ  ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಿ, ಲಭ್ಯ ಇರುವ ವಿದ್ಯುತ್‌ನ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ.

ಕೈಗಾರಿಕೆ

ಮಹಾನ್‌ ದಾರ್ಶನಿಕ ಸರ್‌. ಎಂ. ವಿಶ್ವೇಶ್ವರಯ್ಯ ಅವರು,  ಒಂದು ನೂರು ವರ್ಷಗಳ ಹಿಂದೆಯೇ, ‘ಕೈಗಾರೀಕರಣ ಜಾರಿಗೆ ತನ್ನಿ ಇಲ್ಲವೆ ನಾಶಗೊಳ್ಳಲು ಸಿದ್ಧರಾಗಿ’ಎಂಬ ಅಭಿವೃದ್ಧಿ ಸೂತ್ರ ಪಠಿಸಿದ್ದರು. ತಮ್ಮ ಜೀವಮಾನ ಉದ್ದಕ್ಕೂ ಅವರು ನಡೆಸಿದ ಪ್ರಯತ್ನಗಳ ಫಲವಾಗಿ ಕರ್ನಾಟಕವು ಸರಕುಗಳ ತಯಾರಿಕಾ ರಾಜ್ಯವಾಗಿ ಬೆಳೆಯುವಲ್ಲಿ ಅಸಾಧಾರಣ ಪ್ರಗತಿ ದಾಖಲಿಸಿದೆ.

ರಾಜ್ಯವು ಸದ್ಯಕ್ಕೆ ವೈಮಾಂತರಿಕ್ಷ ವಲಯವೂ ಸೇರಿದಂತೆ ವಿಶಾಲವಾದ ಕೈಗಾರಿಕಾ ವ್ಯಾಪ್ತಿ ಹೊಂದಿದೆ. ಆದರೆ, ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳ ಬೆಳವಣಿಗೆಗೆ ಹಲವಾರು ಅಡಚಣೆಗಳನ್ನು ಎದುರಿಸುತ್ತಿವೆ. ಈ ಘಟಕಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ.

ದೊಡ್ಡ ಕೈಗಾರಿಕೆಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತಿರುವ ‘ಎಸ್‌ಎಂಇ’ ಗಳು, ಬೆಲೆ ನಿಗದಿ ಮತ್ತು ಹಣ ಪಾವತಿ ವಿಳಂಬದಿಂದಾಗಿ ದೊಡ್ಡ ಕೈಗಾರಿಕೆಗಳ ಮರ್ಜಿಯಲ್ಲಿ ಇರಬೇಕಾಗಿದೆ.

ವಿದ್ಯುತ್‌

110 ವರ್ಷಗಳ ಹಿಂದೆಯೇ ರಾಜ್ಯದಲ್ಲಿ ಮೊದಲ ಬಾರಿಗೆ ಜಲ ವಿದ್ಯುತ್‌ ಘಟಕ ಅಸ್ತಿತ್ವಕ್ಕೆ ಬಂದಿತ್ತು. ಕರ್ನಾಟಕ ಗೆಜೆಟಿಯರ್‌ ಪ್ರಕಾರ, ಬ್ರಿಟನ್ನಿನ ಪ್ರಜೆ ಜನರಲ್‌ ಡೋನಾಲ್ಡ್‌ ರಾಬರ್ಟ್‌ಸನ್‌ 1902ರ ಜೂನ್‌ನಲ್ಲಿ ಶಿವನಸಮುದ್ರದಲ್ಲಿ 700 ಕಿಲೊವಾಟ್‌ ಸಾಮರ್ಥ್ಯದ ಜಲ ವಿದ್ಯುತ್ ಸ್ಥಾವರ ಸ್ಥಾಪಿಸಿದ್ದರು.  ಇದು ಏಷ್ಯಾದಲ್ಲಿನ ಮೊದಲ  ಜಲವಿದ್ಯುತ್‌ ಘಟಕ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಕೋಲಾರ್‌ ಚಿನ್ನದ ಗಣಿಗೆ, ಆ ದಿನಗಳಲ್ಲಿನ ವಿಶ್ವದ ಗರಿಷ್ಠ ವೋಲ್ಟೇಜ್‌ (35 ಕಿಲೊವಾಟ್‌) ವಿದ್ಯುತ್‌ ಒದಗಿಸಲು ಹಿಂದಿನ ಮೈಸೂರು ಸಂಸ್ಥಾನವು  140 ಕಿ. ಮೀ ಉದ್ದದ  ವಿದ್ಯುತ್‌ ಪೂರೈಕೆ ಮಾರ್ಗವನ್ನೂ ನಿರ್ಮಿಸಿತ್ತು.

ಈ ರೀತಿಯಲ್ಲಿ, ವಿದ್ಯುತ್‌ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಹೆಗ್ಗಳಿಕೆಯ  ರಾಜ್ಯದಲ್ಲಿ ಈಗ ಅನಿಯಮಿತ ವಿದ್ಯುತ್ ಪೂರೈಕೆ ಪ್ರತಿ ದಿನದ ಸಮಸ್ಯೆಯಾಗಿದೆ.

ದಶಕಗಳಿಂದಲೂ ಅಗತ್ಯವಾದ, ಗುಣಮಟ್ಟದ ಮತ್ತು  ಕೈಗೆಟುಕುವ ಬೆಲೆಯ ವಿದ್ಯುತ್‌ ಸಿಗದೆ ರಾಜ್ಯದ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ. ಯಾವುದೇ ಆರ್ಥಿಕತೆ ಬೆಳೆಯಲು ವಿದ್ಯುತ್‌ ತುಂಬ ಅನಿವಾರ್ಯವಾದ ಮೂಲ ಸೌಕರ್ಯವಾಗಿದೆ. ವಿದ್ಯುತ್‌ ಕೊರತೆಯು ಜನಸಾಮಾನ್ಯರ ಆರ್ಥಿಕ ಸಬಲೀಕರಣದ ಪ್ರಮುಖ ಅಡಚಣೆಯೂ ಆಗಿದೆ.

ಲಭ್ಯ ಇರುವ ವಿದ್ಯುತ್‌ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು  ತುರ್ತಾಗಿ ರಚನಾತ್ಮಕ ಕಾರ್ಯಕ್ರಮ ಹಾಕಿಕೊಳ್ಳಬೇಕಾಗಿದೆ.

ಮಧ್ಯಮಾವಧಿ ಕಾರ್ಯಕ್ರಮಗಳು

ಎಲ್‌ಇಡಿ ಬಲ್ಬ್‌ಗಳ ಬಳಕೆ ವ್ಯಾಪಕವಾಗಿ ಜಾರಿಗೆ ತರಲು ಅಗತ್ಯವಾದ  ಉತ್ತೇಜನಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ರೈತರು ಬಳಸುತ್ತಿರುವ ಶೇ 35ರಷ್ಟು ಮಾತ್ರ ದಕ್ಷತೆಯ  ಪಂಪ್‌ಸೆಟ್ಸ್‌ಗಳನ್ನು ತುರ್ತಾಗಿ ಬದಲಿಸಬೇಕು. ಮೊಬೈಲ್‌ ಮೂಲಕವೇ ಪಂಪಸೆಟ್ಸ್ ಚಾಲೂ ಮಾಡುವ ಪದ್ಧತಿಯನ್ನು ವ್ಯಾಪಕವಾಗಿ ಜಾರಿಗೆ ತರಬೇಕು. ಸ್ಮಾರ್ಟ್‌ ಗ್ರಿಡ್‌ ಸ್ಥಾಪಿಸಿ ವಿದ್ಯುತ್‌ ಸಾಗಣೆ ಮತ್ತು  ವಿತರಣೆಯ ನಷ್ಟ ತಡೆಯಬೇಕು. ವಿದ್ಯುತ್‌ನ ವಾಣಿಜ್ಯ ನಷ್ಟವು ಶೇ 20ರಷ್ಟು ಇರುವುದರಿಂದ ರಾಜ್ಯದ ಆರ್ಥಿಕತೆಗೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ.

ಈ ಸಮಸ್ಯೆ ನಿವಾರಿಸಿಕೊಳ್ಳಲು ದೀರ್ಘಾವಧಿಯಲ್ಲಿ ಪರಿಸರ ಸ್ನೇಹಿ  ಕಟ್ಟಡ, ವಿದ್ಯುತ್‌ ಜಾಲಕ್ಕೆ ವಿದ್ಯುತ್‌ ಪೂರೈಕೆ ಜತೆಗೆ ಬಿಸಿ ನೀರು ಮತ್ತಿತರ ಉದ್ದೇಶಗಳಿಗೆ  ಚಾವಣಿ ಮೇಲೆ ಸೌರ ವಿದ್ಯುತ್‌ ಫಲಕಗಳ ಅಳವಡಿಕೆಗೆ ಸರ್ಕಾರಿ ಯೋಜನೆಗಳು ಉತ್ತೇಜಿಸಬೇಕಾಗಿದೆ.

ಅಸಾಂಪ್ರದಾಯಕ ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆ ಹೆಚ್ಚಿಸಿ ಜಲ ವಿದ್ಯುತ್‌ ಮೇಲಿನ ಅವಲಂಬನೆ   ತಪ್ಪಿಸುವ ಪ್ರಯತ್ನಗಳೂ ನಡೆಯಬೇಕಾಗಿದೆ.

ನೀರು

ಶುದ್ಧ ಕುಡಿಯುವ ನೀರಿನ ಅಲಭ್ಯತೆಯಿಂದಾಗಿ ಕಾಲರಾ, ಹೆಪಟಿಟಿಸ್‌, ವಾಂತಿಭೇದಿ ಮತ್ತಿತರ  ಕಾಯಿಲೆಗಳಿಂದ ಬಳಲುವವರಿಂದ ಉತ್ಪಾದನಾ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬರುತ್ತವೆ.

ರಾಜ್ಯದ ಬಹುತೇಕ ಜನರು ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಅಂತರ್ಜಲದ ಮಟ್ಟ ಮತ್ತು ಪ್ರಮಾಣ ಗಮನಾರ್ಹವಾಗಿ ಕುಸಿಯುತ್ತಿದ್ದು,  ಎಲ್ಲೆಡೆ ನೀರಿನ ಗುಣಮಟ್ಟ ಪ್ರಶ್ನಾರ್ಹವಾಗಿದೆ.

ಸಮುದ್ರ ಮಟ್ಟದಿಂದ 3,000 ಅಡಿಗಳಷ್ಟು ಮೇಲೆ ಇರುವ ಬೆಂಗಳೂರು ನಗರಕ್ಕೆ 100 ಕಿ. ಮೀ ದೂರದಿಂದ ಕಾವೇರಿ ನೀರನ್ನು ಪಂಪ್‌ ಮಾಡುತ್ತಿರುವುದು ಏಷ್ಯಾದಲ್ಲಿಯೇ ಅತ್ಯಂತ ದುಬಾರಿ ನೀರು ಪೂರೈಕೆ ಯೋಜನೆಯಾಗಿದೆ ಎಂದು ಇನ್ಫೊಸಿಸ್‌ ಸಹ ಸ್ಥಾಪಕ ನಂದನ್‌ ನಿಲೇಕಣಿ ಅವರು ಸರಿಯಾಗಿಯೇ ಗುರುತಿಸಿದ್ದಾರೆ. ದೆಹಲಿಯಲ್ಲಿ ಪ್ರತಿ ಕಿಲೊ ಲೀಟರ್‌ ನೀರಿಗೆ ₹ 28 ವೆಚ್ಚವಾದರೆ, ಬೆಂಗಳೂರಿನಲ್ಲಿ ಇದರ ವೆಚ್ಚ ₹ 82 ಇದೆ.

ರಾಜ್ಯದಲ್ಲಿ ಬಳಕೆಗೆ ಮೀಸಲಾದ ಕಾವೇರಿ ನೀರಿನ ಶೇ 50ರಷ್ಟನ್ನು ಬೆಂಗಳೂರು ನಗರದಲ್ಲಿಯೇ ಬಳಸಲಾಗುತ್ತಿದೆ.  ಅಮೂಲ್ಯವಾದ ಕುಡಿಯುವ ನೀರಿನ ಶೇ 49ರಷ್ಟು (50 ಕೋಟಿಗೂ ಹೆಚ್ಚು ಲೀಟರ್‌) ಪೋಲಾಗುತ್ತಿದೆ. ಸೋರಿಕೆ, ಕಳ್ಳತನ ಮತ್ತಿತರ ಕಾರಣಗಳಿಂದ  ನೀರು ವ್ಯರ್ಥವಾಗುತ್ತಿದೆ.

ನೀರಿನ ಪೋಲು ತಡೆಗೆ ಕ್ರಮ

* ಸೋರಿಕೆ ತಡೆಗಟ್ಟಿ, ಕೊಳವೆಗಳನ್ನು ಬದಲಿಸಿ, ಕಳ್ಳತನಕ್ಕೆ ಕಡಿವಾಣ ಹಾಕಬೇಕು

* ಶೌಚಾಲಯಕ್ಕೆ ಬಳಸಿದ ನೀರನ್ನು ಹೊರತುಪಡಿಸಿ, ಗೃಹಬಳಕೆಯ ಇತರ ಉದ್ದೇಶಗಳಿಗೆ ಬಳಸುವ ನೀರನ್ನು ಮರು ಬಳಕೆ ಮಾಡುವಂತೆ ಸುಲಭವಾಗಿ ಶುದ್ಧೀಕರಿಸಬಹುದಾಗಿದೆ.

* ಮರು ಬಳಕೆ ಮಾಡುವ ನೀರನ್ನು ಸಂಗ್ರಹಿಸಲು ಪ್ರತ್ಯೇಕ ಕೊಳವೆ ಮಾರ್ಗ ಹಾಕಿ, ಪ್ರತಿಯೊಂದು ಬಡಾವಣೆಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು.

* ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಕುಡಿಯುವ ನೀರಿನ ಅವಲಂಬನೆಗಾಗಿ ಪುನಶ್ಚೇತನಗೊಳಿಸಬೇಕಾಗಿದೆ.

ಭವಿಷ್ಯದ ಮುನ್ನೋಟ

ಮುಂದಿನ ಎರಡು ಮೂರು ದಶಕಗಳ ದೀರ್ಘಾವಧಿಯಲ್ಲಿ, ವಿಶ್ವದ ಸ್ವರೂಪ ಹೇಗಿರಲಿದೆ ಎನ್ನುವುದನ್ನು ಊಹಿಸಿ ಮುನ್ನಡೆಯಬೇಕಾಗಿದೆ. ಮಾಹಿತಿ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆ, ಕ್ಲೌಡ್‌ ಕಂಪ್ಯೂಟಿಂಗ್‌ ಲಕ್ಷಾಂತರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿವೆ ಎಂದು ಎರಡು ದಶಕಗಳ ಹಿಂದೆ ಊಹಿಸಲು ಯಾರೊಬ್ಬರಿಂದಲೂ ಸಾಧ್ಯವಿರಲಿಲ್ಲ.

ಕಂಪ್ಯೂಟರ್‌ಗಳು ತಮ್ಮ ಉದ್ಯೋಗ ಅವಕಾಶ ಕಸಿದುಕೊಳ್ಳಲಿವೆ ಎಂದು ಜನರು ಆತಂಕಗೊಂಡಿದ್ದರು. ಅದೇ ರೀತಿ ಈ ಹೊತ್ತಿನಲ್ಲಿ ಅಂತರ್‌ ಸಂಪರ್ಕಿತ ಸ್ಮಾರ್ಟ್‌ ಡಿಜಿಟಲ್‌ ಸಾಧನಗಳು (Internet of Things –IoT) ಭವಿಷ್ಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದು ಎನ್ನುವ ಅಂದಾಜು ಮಾಡಬಹುದು.

ರೋಗಿಯ ಅಗತ್ಯಕ್ಕೆ ತಕ್ಕಂತೆ ಸಿದ್ಧಗೊಳ್ಳುವ ಔಷಧಿಗಳು, ಆಕರ ಜೀವಕೋಶಗಳು ಹಲವಾರು ಕಾಯಿಲೆಗಳಿಗೆ ಸರ್ವರೋಗ ನಿವಾರಕಗಳಾಗಿ ಕಾರ್ಯನಿರ್ವಹಿಸಲಿವೆ.  ಸ್ಮಾರ್ಟ್‌ ಗ್ರಿಡ್ಸ್‌ ಮತ್ತು ಚುರುಕಿನ ಸಾಧನಗಳಿಂದ ಇಂಧನ ಬಳಕೆ ಸ್ವರೂಪವೂ ಬದಲಾಗಲಿದೆ. ಈ ಸಾಧನಗಳ ಕಾರ್ಯನಿರ್ವಹಣೆಗೆ ಅತ್ಯಲ್ಪ ಪ್ರಮಾಣದ ವಿದ್ಯುತ್‌ ಬೇಕಾಗಲಿದೆ.

ಉದಾಹರಣೆಗೆ – ಇಂದಿನ ಸ್ಮಾರ್ಟ್‌ಫೋನ್‌ಗಳು ರೇಡಿಯೊ, ಟಾರ್ಚ್‌, ಕ್ಯಾಮೆರಾ ಮತ್ತಿತರ ಸಾಧನಗಳು ಮತ್ತು ಎಲ್‌ಇಡಿ ಬಲ್ಬ್‌ಗಳು ಅತ್ಯಲ್ಪ ಪ್ರಮಾಣದ ವಿದ್ಯುತ್‌ ಬಳಸುತ್ತವೆ. ಈ ಬದಲಾವಣೆಯನ್ನು ಪರಿಗಣಿಸಿ, ಅವಕಾಶಗಳನ್ನು ಬಳಸಿಕೊಳ್ಳಲು ಮುಂದಾಗಬೇಕು.

ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ವಲಯವೂ ಗಮನಾರ್ಹ ಮಹತ್ವ ಪಡೆಯುತ್ತಿದೆ. ಸಂಪೂರ್ಣ ಭಿನ್ನಬಗೆಯ ಕೌಶಲಗಳನ್ನು ಬಯಸುವ  ಹೊಸ ಉದ್ಯೋಗ ಅವಕಾಶಗಳಿಗಾಗಿ ಯುವ ಜನಾಂಗವನ್ನು ಸಿದ್ಧಪಡಿಸಬೇಕಾಗಿದೆ.

ರಾಜ್ಯದಲ್ಲಿನ ಬಹುತೇಕ ಕೌಶಲ ಅಭಿವೃದ್ಧಿ ಕೇಂದ್ರಗಳ ಗುಣಮಟ್ಟವು ಕಳಪೆಯಾಗಿರುವುದು ವಿಷಾದಕರ ಸಂಗತಿಯಾಗಿದೆ.  ತಮ್ಮ ಮಕ್ಕಳು ಪದವೀಧರರಾಗಬೇಕು ಎಂದೇ ಪ್ರತಿಯೊಬ್ಬ ಪಾಲಕರು ಬಯಸುತ್ತಾರೆ. ಈ ಮನಸ್ಥಿತಿಯೂ ಬದಲಾಗಬೇಕಾಗಿದೆ.

ನಮ್ಮ ಯುವ ಜನಾಂಗಕ್ಕೆ ಜಾಗತಿಕ ಮಟ್ಟದ ತರಬೇತಿ ನೀಡಿ ಅವರು ವಿಶ್ವದ ಯಾವುದೇ ಭಾಗದಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳುವಂತೆ ಸನ್ನದ್ಧಗೊಳಿಸಬೇಕಾಗಿದೆ. 

‘ದೇಶವೊಂದನ್ನು ಕಟ್ಟಬೇಕಾದರೆ, ಮೊದಲು ಉತ್ತಮ ನಾಗರಿಕರನ್ನು ರೂಪಿಸಬೇಕು’ ಎಂದು ಸರ್‌. ಎಂ. ವಿಶ್ವೇಶ್ವರಯ್ಯ ಅವರು  ಹಿಂದೊಮ್ಮೆ ಆಡಿದ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು.

ಕರ್ನಾಟಕ ರಾಜ್ಯ ಸರ್ಕಾರವು ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಂಡು  ಉತ್ತಮ ನಾಗರಿಕರನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಾಗಿದೆ.

ಒಂದು ಉಕ್ಕಿನ ಸೇತುವೆ ನಿರ್ಮಾಣದ ಬಗ್ಗೆ ಗೋಪ್ಯತೆ ಕಾಪಾಡಿಕೊಳ್ಳಲು ಹೆಣಗಾಡುವ ಸರ್ಕಾರವೊಂದು, ರಾಜ್ಯದ ಭವಿಷ್ಯದ ಅಗತ್ಯಗಳನ್ನು ರೂಪಿಸುವ ಕುರಿತು ಅಗತ್ಯವಾದ ದೂರದೃಷ್ಟಿಯ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವುದೇ? ಎನ್ನುವ ಪ್ರಶ್ನೆಯೂ ಇಲ್ಲಿ ಪ್ರತಿಯೊಬ್ಬರನ್ನು ಕಾಡುತ್ತಿದೆ.

ಪ್ರಗತಿಯ ಪಥದಲ್ಲಿ ನಿರಂತರವಾಗಿ ಮುಂಚೂಣಿಯಲ್ಲಿದ್ದುಕೊಂಡೇ ಇಡೀ ದೇಶಕ್ಕೆ ಆದರ್ಶ ರಾಜ್ಯವಾಗುವ ನಿಟ್ಟಿನಲ್ಲಿ  ಕಾರ್ಯಪ್ರವೃತ್ತವಾಗಲು  ಇದು ಸಕಾಲ ಎನ್ನುವುದನ್ನು ರಾಜ್ಯ ಸರ್ಕಾರ ಮರೆಯದಿರಲಿ.‘ಎಸ್‌ಎಂಇ’ಗಳು ಎದುರಿಸುತ್ತಿರುವ ಸಮಸ್ಯೆಗಳು

* ಹಣಕಾಸು ನೆರವಿನ ಕೊರತೆ

* ಬ್ಯಾಂಕ್‌ಗಳಿಂದ ವಸೂಲಾಗದ ಸಾಲ (ಎನ್‌ಪಿಎ) ಘೋಷಣೆಗೆ ಗುರಿಯಾಗುವ ಸಾಧ್ಯತೆ

* ವಿವಿಧ ಇಲಾಖೆಗಳ ನಿಯಮಾವಳಿ ಪಾಲಿಸುವ ಅನಿವಾರ್ಯತೆ

* ಸರ್ಕಾರದ ನೆರವಿನ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದಿರುವುದು

ಅಲ್ಪಾವಧಿ ಕಾರ್ಯಕ್ರಮಗಳು

* ‘ಎಂಎಸ್‌ಎಂಇ’ಗಳ ಮಾಲೀಕರ ಜತೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಸರ್ಕಾರ ಅರ್ಥೈಸಿಕೊಂಡು ಪರಿಹಾರ ಉಪಾಯಗಳನ್ನು ಕಂಡುಕೊಳ್ಳಬೇಕಾಗಿದೆ.

* ಸರಕುಗಳ ತಯಾರಿಕೆ, ಉದ್ಯೋಗ ಅವಕಾಶ ಮತ್ತು ರಫ್ತಿಗೆ ನೀಡುವ ಕೊಡುಗೆ ಮೂಲಕ ‘ಎಂಎಸ್‌ಎಂಇ’ಗಳು  ರಾಜ್ಯದ ಆರ್ಥಿಕ  ಬೆನ್ನೆಲುಬುಗಳಾಗಿವೆ.  ಅವುಗಳ ಉಳಿವಿಗೆ ತುರ್ತಾಗಿ ಕ್ರಮ ಕೈಗೊಳ್ಳದಿದ್ದರೆ ‘ಚಿನ್ನದ ಮೊಟ್ಟೆ ಇಡುವ ಕೋಳಿ’ಗೆ ಚೂರಿ ಹಾಕಿದಂತಾಗಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry