ಭಾನುವಾರ, ಮಾರ್ಚ್ 26, 2023
31 °C

ರಂಗಮಂದಿರಗಳ ಸಂಗಮದ ಮಠ

ಗಾಣಧಾಳು ಶ್ರೀಕಂಠ Updated:

ಅಕ್ಷರ ಗಾತ್ರ : | |

ರಂಗಮಂದಿರಗಳ ಸಂಗಮದ ಮಠ

ಸಂಜೆ 5.50 ಆದರೂ, ಆ ಸ್ಥಳದಲ್ಲಿ ಒಬ್ಬರೇ ಒಬ್ಬರು ಸುಳಿದಾಡುವುದಿಲ್ಲ. 6 ಗಂಟೆಗೆ ಢಣ್ ಎಂದು ಗಡಿಯಾರದಲ್ಲಿ ಗಂಟೆ ಹೊಡೆಯುತ್ತಲೇ, ದೀಪಗಳು ಜಗಮಗಿಸುತ್ತವೆ.ಐದು ಸಾವಿರ ಆಸನಗಳು ಭರ್ತಿಯಾಗುತ್ತವೆ. ಸ್ವಾಮೀಜಿ ಬಂದು ಕೂರುತ್ತಾರೆ. ಬಣ್ಣದ ಬೆಳಕಿನಲ್ಲಿ ನಾಟಕ ಆರಂಭವಾಗುತ್ತದೆ..!ಹತ್ತೇ ನಿಮಿಷದಲ್ಲಿ ಜನಸಾಗರವಾಗುವ ‘ರಂಗಮಂಚ’ವೇ ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘದ ಬಯಲು ರಂಗಮಂದಿರ. ತರಳಬಾಳು ಶಾಖಾ ಮಠದ ಆವರಣದಲ್ಲಿರುವ ಈ 5 ಹೆಕ್ಟೇರ್‌ ವಿಸ್ತಾರದ ರಂಗಮಂದಿರದಲ್ಲಿ ಕಳೆದ ಒಂದೂವರೆ ದಶಕಗಳಲ್ಲಿ ನೂರಾರು ನಾಟಕಗಳ ಸಾವಿರಾರು ಪ್ರದರ್ಶನಗಳಾಗಿವೆ.ಶ್ರೀಗಳ ರಂಗಾಸಕ್ತಿ

ಸಾಣೆಹಳ್ಳಿ ಶಾಖಾಮಠದ ಪೀಠಾಧ್ಯಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಈ ರಂಗಪಯಣದ ಹಿಂದಿನ ಶಕ್ತಿ. ತರಳಬಾಳು ಬೃಹನ್ಮಠದ ಹಿರಿಯ ಜಗದ್ಗುರು ಶಿವಕುಮಾರ ಸ್ವಾಮೀಜಿ ರಂಗಭೂಮಿ ಮೂಲಕ ತತ್ವ ಪ್ರಚಾರ ಮಾಡುತ್ತಿದ್ದರು.ಶಾಲಾ ಕಾಲೇಜುಗಳಲ್ಲಿ ರಂಗಭೂಮಿ ಆಸಕ್ತಿ ಬೆಳೆಸಿಕೊಂಡಿದ್ದ ಪಂಡಿತಾರಾಧ್ಯ ಶ್ರೀಗಳು, ಪೀಠಾಧ್ಯಕ್ಷರಾದ 10 ವರ್ಷಗಳ ನಂತರ ಹಿರಿಯರ ಹಾದಿ ಅನುಸರಿಸಿದರು. ಅವರ ರಂಗಾಸಕ್ತಿಯ ಮೊದಲ ಹೆಜ್ಜೆ 1987ರಲ್ಲಿ ಶಿವಕುಮಾರ ಕಲಾ ಸಂಘ ಸ್ಥಾಪನೆ. ದಶಕದ ನಂತರ 1997ರಲ್ಲಿ ಶಿವಸಂಚಾರ (ರೆಪರ್ಟರಿ) ಆರಂಭ. ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಅವರ ಆಸಕ್ತಿಯಿಂದ  2003ರಲ್ಲಿ 5 ಸಾವಿರ ಆಸನಗಳ ಸಾಮರ್ಥ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ.ಶಿಸ್ತುಬದ್ಧ ಕಾರ್ಯಕ್ರಮ, ನಿಖರ ಸಮಯ ಪಾಲನೆಯೊಂದಿಗೆ ಶಿವಕುಮಾರ ಕಲಾಸಂಘ, ಶಿವಸಂಚಾರದ ಮೂಲಕ ವರ್ಷಕ್ಕೆ ಮೂರು ನಾಟಕ, 150 ಪ್ರದರ್ಶನ ನೀಡುತ್ತಾ, ಸಾಹಿತ್ಯ, ಸಂಸ್ಕೃತಿ, ಕಲೆ, ಶರಣ ತತ್ವ ಮತ್ತು ಸಾಮಾಜಿಕ ಪರಿವರ್ತನೆ ಕಾರ್ಯಕ್ಕೆ ಮುಂದಾಗಿದೆ. ಮಠದ ಅಂಗಳದಲ್ಲಿ ಸ್ವಾಮೀಜಿ ರಂಗಚಟುವಟಿಕೆ ಆರಂಭವಾದಾಗ ಟೀಕಿಸಿದವರೇ ಹೆಚ್ಚು. ಆದರೆ, ಪಂಡಿತಾರಾಧ್ಯ ಶ್ರೀಗಳು ಕಿವಿಗೊಡಲಿಲ್ಲ. ನಾಟಕ ಪ್ರದರ್ಶನ ಮುಂದುವರಿಸಿದರು. 1997ರಲ್ಲಿ ಶಿವಸಂಚಾರ ಶುರುವಾಯಿತು. ಎರಡು ವರ್ಷದ ಸಂಚಾರದ ಯಶಸ್ಸು, ಎಲ್ಲರನ್ನೂ ಬೆರಗುಗೊಳಿಸಿತು.ಶಿವಸಂಚಾರ ಕರ್ನಾಟಕದಲ್ಲಿ ಮನೆಮಾತಾಯಿತು. ಅನೇಕ ಮಠಾಧೀಶರು ನಾಟಕಗಳನ್ನು ನೋಡಲು ಆರಂಭಿಸಿದರು. ಇವೆಲ್ಲ ಟೀಕೆಗಳನ್ನು ತೊಳೆದು ಹಾಕಿದವು’ ಎನ್ನುತ್ತಾ ಆರಂಭದ ದಿನಗಳ ಸವಾಲನ್ನು ಪಂಡಿತಾರಾಧ್ಯ ಸ್ವಾಮೀಜಿ ನೆನಪಿಸಿಕೊಳ್ಳುತ್ತಾರೆ.ರಂಗಭೂಮಿ ಮತ್ತು ಸಮಾಜ ಪರಿವರ್ತನೆ: ‘ಅಧ್ಯಾತ್ಮ ಮತ್ತು ಸಮಾಜವನ್ನು ಒಂದೇ ನಾಣ್ಯದ ಎರಡು ಮುಖಗಳೆಂದು ಭಾವಿಸುತ್ತಾರೆ. ಸಮಾಜ ಸುಧಾರಣೆಗೆ ಧರ್ಮ ಬೇಕು. ಧರ್ಮವನ್ನು ಹೇಳಲು ಒಂದು ಮಾರ್ಗ ಬೇಕು. ಅದು ಎರಡೂ ರಂಗಭೂಮಿಯಲ್ಲಿದೆ. ಈ ಹತ್ತೊಂಬತ್ತು ವರ್ಷಗಳಲ್ಲಿ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆ ಗುರುತಿಸಿದ್ದೇವೆ’ ಎಂದು ಹಲವು ಉದಾಹರಣೆ ಸಹಿತ ಉಲ್ಲೇಖಿಸುತ್ತಾರೆ.ಶಿವಸಂಚಾರ ತಂಡ 2007ರಲ್ಲಿ ‘ಭಾರತ ಸಂಚಾರ’ ಹಾಗೂ 2013ರಲ್ಲಿ ಶಿವದೇಶ ಸಂಚಾರದ ಮೂಲಕ ಭಾರತಾದ್ಯಂತ ಪರ್ಯಟನೆ ಮಾಡಿ 21 ರಾಜ್ಯಗಳಲ್ಲಿ ‘ಮರಣವೇ ಮಹಾನವಿ’, ‘ಶರಣಸತಿ ಲಿಂಗಪತಿ’, ‘ಜಂಗಮದೆಡೆಗೆ’ ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ ಹತ್ತಾರು ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿತು.ಕರ್ನಾಟಕ ನಾಟಕ ಅಕಾಡೆಮಿಯ ಅಂದಿನ ಅಧ್ಯಕ್ಷ ಶ್ರೀನಿವಾಸ್ ಜಿ.ಕಪ್ಪಣ್ಣ ಅವರ ಸಹಕಾರದಿಂದ, ಶರಣ ತತ್ವ ಪ್ರಚಾರ ದೇಶಾದ್ಯಂತ ಪ್ರದರ್ಶನಗೊಳ್ಳಲು ಸಾಧ್ಯವಾಯಿತು.ಚಂಡೀಗಢದ ರವೀಂದ್ರನಾಥ ಠಾಗೂರ್ ರಂಗಮಂದಿರದಲ್ಲಿ ಪ್ರದರ್ಶನಗೊಂಡ ‘ಶರಣ ಸತಿ ಲಿಂಗಪತಿ’ ನಾಟಕ ಹಾಗೂ ಅಕ್ಕಮಹಾದೇವಿ ಪಾತ್ರ ಮಾಡಿದ್ದು ಮುಸ್ಲಿಂ ಹುಡುಗಿ ಎಂದು ಗೊತ್ತಾದ ಮೇಲೆ, ಪ್ರೇಕ್ಷಕರ ಪ್ರತಿಕ್ರಿಯೆ ‘ಮುಗಿಲಾಚೆ, ಮಿಗಿಲಾಚೆ’ ಎನ್ನುವಂತಿತ್ತು. ಅಲ್ಲಿನ ರಾಜ್ಯಪಾಲರು ಈ ನಾಟಕಕ್ಕೆ 2 ಲಕ್ಷ ರೂಪಾಯಿಗಳನ್ನು  ನೀಡಿದರು’ ಎನ್ನುತ್ತಾ ನಾಟಕ ತಂಡದ ಪ್ರೇಕ್ಷಕರ ಆಕರ್ಷಣೆ ವ್ಯಾಪ್ತಿಯನ್ನು ಸ್ವಾಮೀಜಿ ನೆನಪಿಸಿಕೊಳ್ಳುತ್ತಾರೆ.ಎರಡು ದಶಕಗಳಲ್ಲಿ ಶಿವಸಂಚಾರ ನಾಟಕ ಸಾಗರೋತ್ತರಕ್ಕೂ ತಲುಪಿದೆ. 2014ರಲ್ಲಿ ಅಂತರ್ಜಾಲ ಆಧಾರಿತ ವೆಬ್ ಕಾಸ್ಟ್ (goo.gl/G264B5) ಮೂಲಕ ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಲ್ಲಿರುವ ಕನ್ನಡಿಗರು ರಾಷ್ಟ್ರೀಯ ನಾಟಕೋತ್ಸವ ವೀಕ್ಷಿಸಿದ್ದಾರೆ. ಹೊರ ರಾಜ್ಯಗಳಲ್ಲಿರುವವರು, ಬೆಂಗಳೂರಿನಲ್ಲಿದ್ದು ನಾಟಕ ನೋಡಲು ಸಾಧ್ಯವಾಗದವರು ಎಲ್ಇಡಿ ಪರದೆಗಳ ಮೂಲಕ ಒಂದೆಡೆ ಕುಳಿತು ನಾಟಕ ನೋಡುತ್ತಿದ್ದಾರೆ. ಅಷ್ಟರಮಟ್ಟಿಗೆ ಶಿವಸಂಚಾರ ನಾಟಕ ಜನ-ಮನ ಗೆದ್ದಿದೆ ಎನ್ನುತ್ತಾರೆ ಸ್ವಾಮೀಜಿ.ಎರಡು ದಶಕಗಳ ದಣಿವರಿಯದ ಪಯಣ

ಎರಡು ದಶಕಗಳಿಂದ ನಡೆಯುತ್ತಿರುವ ಶಿವಸಂಚಾರ ನಾಟಕ, ರಾಷ್ಟ್ರೀಯ ನಾಟಕೋತ್ಸವ ಯಾವ ವರ್ಷವೂ ಸ್ಥಗಿತಗೊಂಡಿಲ್ಲ. ಬದಲಿಗೆ, ಆಸಕ್ತರ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ. ಇಲ್ಲಿಯವರೆಗೂ 2800ಕ್ಕಿಂತ ಹೆಚ್ಚು ನಾಟಕದ ಪ್ರಯೋಗಗಳು ನಡೆದಿವೆ. ವರ್ಷಪೂರ್ತಿ ಶಿವಸಂಚಾರ, ಪ್ರತಿ ವರ್ಷ ನವೆಂಬರ್ ತಿಂಗಳ ಮೊದಲ ವಾರದಲ್ಲಿ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತದೆ. ಹೊರ ರಾಜ್ಯದ ಕಲಾವಿದರೂ ನಾಟಕ ಪ್ರದರ್ಶನ ನೀಡುತ್ತಾರೆ. ನೇಪಾಳ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಕಲಾವಿದರೂ, ಈ ರಂಗ ಮಂಚದಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ.ನಾಟಕ ಪ್ರದರ್ಶನಗಳ ಜತೆಗೆ ಇಲ್ಲಿ ರಂಗತರಬೇತಿ ನಡೆಯುತ್ತದೆ. ವರ್ಷಕ್ಕೆ 15 ವಿದ್ಯಾರ್ಥಿಗಳಂತೆ 250ಕ್ಕೂ ಹೆಚ್ಚು ನುರಿತ ಕಲಾವಿದರು, ರಂಗಕರ್ಮಿಗಳು ಈ ಕಲಾಸಂಘದಿಂದ ಹೊರಹೊಮ್ಮಿದ್ದಾರೆ. ಹತ್ತಾರು ಕಲಾವಿದರು ಕಿರುತೆರೆ, ಹಿರಿತೆರೆಗಳಲ್ಲಿ ಹೆಸರು ಮಾಡಿದ್ದಾರೆ. ಸ್ವತಂತ್ರ ನಿರ್ದೇಶನ ಮಾಡುತ್ತಿದ್ದಾರೆ.ರಂಗಭೂಮಿ ಬೆಳೆಸುವ ಜತೆಗೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಿರುವ ಶಿವಕುಮಾರ ಕಲಾ ಸಂಘ, 12 ವರ್ಷಗಳಿಂದ ‘ಶ್ರೀ ಶಿವಕುಮಾರ ರಂಗ ಪ್ರಶಸ್ತಿ’ ನೀಡುತ್ತಿದೆ.ರಂಗಕರ್ಮಿ ಪ್ರಸನ್ನ (2004), ಸಿಜಿಕೆ (2005), ಪಿ ಜಿ ಗಂಗಾಧರಸ್ವಾಮಿ-(2006), ಆಶೋಕಬಾದರದಿನ್ನಿ (2007), ಮಾಲತೀಶ್ರೀ (2008), ಸಿ ಬಸವಲಿಂಗಯ್ಯ (2010), ಬಿ ಜಯಶ್ರೀ (2011), ಡಾ.ಕೆ ಮರುಳಸಿದ್ಧಪ್ಪ (2012), ಚಿದಂಬರರಾವ್ ಜಂಬೆ (2013), ಕೋಟಗಾನಳ್ಳಿ ರಾಮಯ್ಯ(2014) ಹಾಗೂ ಸುಭದ್ರಮ್ಮ ಮನ್ಸೂರ್ (2015) ಅವರಿಗೆ ಪ್ರಶಸ್ತಿ ನೀಡಲಾಗಿದೆ.2009ರಲ್ಲಿ ಅತೀವೃಷ್ಟಿಯ ಕಾರಣ ಪ್ರಶಸ್ತಿ ನೀಡಲಾಗಲಿಲ್ಲ. ಪ್ರಸಕ್ತ ಸಾಲಿನ ಪ್ರಶಸ್ತಿಗೆ ಖ್ಯಾತ ರಂಗಕರ್ಮಿ ಲಕ್ಷ್ಮೀ ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ. ನವೆಂಬರ್ 10ರಂದು ನಡೆಯುವ ರಾಷ್ಟ್ರೀಯ ನಾಟಕೋತ್ಸವದ ಸಮಾರೋಪದಲ್ಲಿ ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ‘ಶಿವಕುಮಾರ ರಂಗ ಪ್ರಶಸ್ತಿ’ಯನ್ನು ಪ್ರದಾನ ಮಾಡಲಿದ್ದಾರೆ.ಸಾಣೆಹಳ್ಳಿಯಂತಹ 400 ಮನೆಗಳ, ಸಾವಿರ ಜನಸಂಖ್ಯೆಯಿರುವ ಪುಟ್ಟ ಗ್ರಾಮದಲ್ಲಿ ಎರಡು ದಶಕಗಳಿಂದ ರಂಗ ಕೈಂಕರ್ಯ ಸಾಂಗವಾಗಿ ಸಾಗಿದೆ. ಬೆಂಗಳೂರಿನಂತಹ ಮಹಾನಗರಗಳಿಗೆ ಸೀಮಿತವಾಗಿದ್ದ ರಂಗ ಚಟುವಟಿಕೆಯನ್ನು ರೆಪರ್ಟರಿ, ಕಲಾಸಂಘದ ಮೂಲಕ ಪುಟ್ಟ ಪುಟ್ಟ ಹಳ್ಳಿಗಳಿಗೂ ವಿಸ್ತರಿಸಿ, ‘ಸಾಣೆಹಳ್ಳಿಯತ್ತ ರಂಗಾಸಕ್ತರ ಚಿತ್ತ’ ಎನ್ನುವಂತೆ ಮಾಡಿದ ಹೆಗ್ಗಳಿಕೆ ಸಂಘದ ಪೋಷಕರಾದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ.ಗ್ರೀಕ್ ಮಾದರಿಯ ವಿಶಿಷ್ಟ ರಂಗಮಂದಿರ

ರಂಗಕರ್ಮಿ ಸಿಜಿಕೆ ಅವರ ಆಸಕ್ತಿ, ಮಠದ ಭಕ್ತರು, ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಆರ್ಥಿಕ ನೆರವಿನಿಂದ ಗ್ರೀಕ್ ಮಾದರಿ ರಂಗ ಮಂದಿರದ ತಯಾರಾಯಿತು.ಅದನ್ನು ನೋಡಿದ ಸ್ವಾಮೀಜಿ, ‘ಇಲ್ಲಿ ಇರೋದೇ ಸಾವಿರ ಮಂದಿ. ಇಷ್ಟು ದೊಡ್ಡ ರಂಗ ಮಂದಿರ ಕಟ್ಟಿಸಿದರೆ ಯಾರು ಬರ್ತಾರೆ’ ಎಂದು ಕೇಳಿದರು. ‘ಈ ರಂಗ ಮಂದಿರಗಳೇ ಹೀಗೆ, ಹಗಲು ದೊಡ್ಡದಾಗಿ ಕಾಣುತ್ತದೆ, ರಾತ್ರಿ ಚಿಕ್ಕದಾಗುತ್ತದೆ’ ಎಂದರು ಸಿಜಿಕೆ.ಮೇ 11, 2003 ಭೂಮಿ ಪೂಜೆ . ಅದೇ ಆಹ್ವಾನ ಪತ್ರಿಕೆಯಲ್ಲಿ, ನವೆಂಬರ್ 1, 2003ರಂದು ಉದ್ಘಾಟನೆ ಅಂತ ಮುದ್ರಿಸಲಾಗಿತ್ತು! ಆ ನಂಬಿಕೆ ಸುಳ್ಳಾಗಲಿಲ್ಲ. ನಿಗದಿತ ಸಮಯಕ್ಕೆ ರಂಗಮಂದಿರ ನಿರ್ಮಾಣವಾಯಿತು. ಮೊದಲ ಪ್ರದರ್ಶನದಲ್ಲೇ ರಂಗಮಂದಿರ ಭರ್ತಿ. ‘ರಾತ್ರಿ ವೇಳೆ ರಂಗಮಂದಿರ ಚಿಕ್ಕದಾಗುತ್ತದೆ’ ಎಂಬ ಸಿಜಿಕೆ ಮಾತು ನಿಜವಾಯಿತು’. ಇವತ್ತಿಗೂ ಸಾಣೆಹಳ್ಳಿ ನಾಟಕ ನೋಡಲು, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಕಲಾಸಕ್ತರು ಸ್ವಂತವಾಹನಗಳಲ್ಲಿ ಬರುತ್ತಾರೆ. ಮೂಲೆ ಮೂಲೆಗಳಲ್ಲೂ ರಂಗಮಂದಿರ: ಸಾಮಾನ್ಯವಾಗಿ ಮಠಗಳ ಆವರಣದಲ್ಲಿ ಪ್ರಾರ್ಥನೆ, ಪ್ರವಚನ ಮಂದಿರ, ದೇವಾಲಯಗಳಿರುತ್ತವೆ, ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿಯಲ್ಲಿರುವ ತರಳಬಾಳು ಪೀಠದ ಶಾಖಾ ಮಠದಲ್ಲಿ ಮಾತ್ರ ಮೂಲೆ ಮೂಲೆಗಳಲ್ಲೂ ರಂಗಮಂದಿರಗಳಿವೆ. ಬೃಹತ್ ರಂಗಮಂದಿರದ ವೇದಿಕೆಯ ಹಿಂಬದಿಯಲ್ಲಿ ದೊಡ್ಡ ಕೊಳವಿದ್ದು, ನಾಟಕದ ಸನ್ನಿವೇಶಕ್ಕೆ ತಕ್ಕಂತೆ ಬಳಸಿಕೊಳ್ಳಲಾಗಿದೆ.  ಹಿಂಬದಿಯಲ್ಲಿ ಒಂದು ಎಕರೆ ಮೈದಾನವಿದ್ದು ಇಲ್ಲೂ ತಾತ್ಕಾಲಿಕ ವೇದಿಕೆಯನ್ನಾಗಿಸಿ ನಾಟಕವಾಡುತ್ತಾರೆ. ಹಳೆಯ ಶಿವಕುಮಾರ ರಂಗಮಂದಿರವೂ  ನವೀಕರಣಗೊಂಡಿದೆ. ‘ಹುಣುಸೇ ಮರ’ದ ಮಿನಿ ಬಯಲ ವೇದಿಕೆ, ರಂಗಶಾಲೆಯ ಅಂತರಂಗವೂ ನಾಟಕದ ವೇದಿಕೆಗಳಾಗಿವೆ. ‌10ರವರೆಗೂ ರಾಷ್ಟ್ರೀಯ ನಾಟಕೋತ್ಸವ

ಇದೇ 5ರಿಂದ ಸಾಣೆಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಕೋತ್ಸವ ಹಾಗೂ ನೂತನ ಶ್ಯಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರ ಉದ್ಘಾಟಿಸಿದ್ದಾರೆ. 10ರವರೆಗೂ ನಾಟಕೋತ್ಸವ ನಡೆಯಲಿದೆ. ಹೊಸದುರ್ಗ-ತರಿಕೆರೆ ರಸ್ತೆಯಲ್ಲಿ 16 ಕಿ.ಮೀ ಕ್ರಮಿಸಿದರೆ ಬಲಕ್ಕೆ ‘ಶರಣರ ಬರವೆಮೆಗೆ ಪ್ರಾಣ ಜೀವಾಳವಯ್ಯ’ ಎಂಬ ಮಹಾದ್ವಾರವಿದೆ. ಅದೇ ಸಾಣೆಹಳ್ಳಿಗೆ ಹೋಗುವ ದಾರಿ.ಸಾಣೇಹಳ್ಳಿಯಲ್ಲಿ ಶಿವಕುಮಾರ ರಂಗಮಂದಿರದಲ್ಲಿ, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು ‘ಚಿತ್ರಪಟ ರಾಮಾಯಣ ಯಕ್ಷಗಾನ ನಾಟಕವನ್ನು ಪ್ರದರ್ಶಿಸಿದರು. ರಂಗಶಾಲೆಯ ವಿದ್ಯಾರ್ಥಿಗಳು ಒಂದು ತಿಂಗಳು ಉಡುಪಿಯಲ್ಲಿದ್ದು, ಯಕ್ಷಗಾನ ತರಬೇತಿ ಪಡೆದುಕೊಂಡು ಅಲ್ಲಿ ಕಲಿತ ನಾಟಕವನ್ನು ಸಾಣೇಹಳ್ಳಿಯಲ್ಲಿ ಪ್ರದರ್ಶಿಸಿದರು.

ರಚನೆ: ಹೊಸತೋಟ ಮಂಜುನಾಥ  ಭಾಗವತ

ನಿರ್ದೇಶನ: ಸುವರ್ಣ ಸಂಜೀವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.