‘ಭಾರತದ ಪ್ರತಿಭೆಗಳಿಗೆ ಅವಕಾಶ’

7

‘ಭಾರತದ ಪ್ರತಿಭೆಗಳಿಗೆ ಅವಕಾಶ’

Published:
Updated:
‘ಭಾರತದ ಪ್ರತಿಭೆಗಳಿಗೆ ಅವಕಾಶ’

ಬೆಂಗಳೂರು: ‘ಭಾರತದ ನಿಜವಾದ ಪ್ರತಿಭೆಗಳಿಗೆ  ಬ್ರಿಟನ್‌ ಪ್ರವೇಶಕ್ಕೆ  ತೊಂದರೆ ಇಲ್ಲ’ ಎಂದು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಮಂಗಳವಾರ ಹೇಳಿದ್ದಾರೆ.

‘ವೀಸಾ ನೀಡಿಕೆ ನಿಯಮವನ್ನು ಸಡಿಲಿಸಬೇಕು ಎನ್ನುವ ಬೇಡಿಕೆಯನ್ನು  ಸಹಾನುಭೂತಿಯಿಂದ ಪರಿಶೀಲಿಸುತ್ತೇವೆ’  ಎಂದು ತೆರೆಸಾ ಮೇ ಹೇಳಿದರಾದರೂ  ಖಚಿತವಾದ ಭರವಸೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಭೇಟಿ ಕೊಟ್ಟಿದ್ದ ತೆರೆಸಾ ಮೇ ಅವರ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವೀಸಾ ನಿಯಮವನ್ನು ಹಿಂದಿನಂತೆಯೇ ಮುಂದುವರೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದರು.

‘ಟೆಕ್ಕಿಗಳು ನಮ್ಮ ದೇಶಕ್ಕೆ ಬರುವುದಕ್ಕೆ ವಿರೋಧವಿಲ್ಲ. ಪ್ರತಿಭಾವಂತರು ಬರಬಹುದು’ ಎಂದು ಅವರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

‘ಕರ್ನಾಟಕದ ಜೊತೆ ಬ್ರಿಟನ್‌ ದೀರ್ಘ ಕಾಲದ ವ್ಯಾಪಾರ– ವಾಣಿಜ್ಯ ಸಂಬಂಧಕ್ಕೆ  ಸಿದ್ಧವಾಗಿದೆ. ಕಳೆದ ಒಂದು ವರ್ಷದಲ್ಲಿ  4.5 ಲಕ್ಷ ಭಾರತೀಯರಿಗೆ ವೀಸಾ ನೀಡಲಾಗಿತ್್ತು. ಭಾರತದ ಪ್ರತಿಭಾವಂತರು ನಮ್ಮ ದೇಶ ಪ್ರವೇಶಿಸಲು ಅಡ್ಡಿಯಿಲ್ಲ ಎಂಬುದೇ ಇದರ ಅರ್ಥ’ ಎಂದು ತೆರೆಸಾ ಹೇಳಿದರು.

ಹೊಸ ವೀಸಾ ನೀತಿ ಬದಲಿಸಿ: ಬ್ರಿಟನ್‌ ಜಾರಿ ಮಾಡಿರುವ ಹೊಸ ವೀಸಾ ನೀತಿಯಿಂದ  ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತರು ಬ್ರಿಟನ್‌ಗೆ ತೆರಳಲು ಸಾಕಷ್ಟು ಅಡ್ಡಿಗಳಿದ್ದು, ಅವುಗಳನ್ನು ನಿವಾರಿಸಬೇಕು ಎಂದು ಸಿದ್ದರಾಮಯ್ಯ ತೆರೆಸಾ ಮೇ ಅವರಿಗೆ ಮನವಿ ಮಾಡಿದರು.

ಭಾರತದಿಂದ ತಂತ್ರಜ್ಞರು ಬ್ರಿಟನ್‌ಗೆ ತೆರಳುವುದನ್ನು ವಲಸೆಯ ದೃಷ್ಟಿಯಿಂದ ನೋಡದೆ ಆದ್ಯತಾ ವಿಷಯವಾಗಿ ಪರಿಗಣಿಸಬೇಕು. ಉನ್ನತ ಮಟ್ಟದ ತಂತ್ರಜ್ಞಾನದ ಪರಿಣತಿ ಹೊಂದಿದ ವ್ಯಕ್ತಿಗಳಿಗೆ ಅವಕಾಶ ಕಲ್ಪಿಸುವುದರಿಂದ ಆರ್ಥಿಕ ವಲಯದಲ್ಲಿ  ಗಣನೀಯ ಪ್ರಮಾಣದ ಅಭಿವೃದ್ಧಿ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸ್ಮಾರ್ಟ್‌ ಸಿಟಿಗೆ ಬಂಡವಾಳ ಹೂಡಿ:  ರಾಜ್ಯದಲ್ಲಿ ‘ಸ್ಮಾರ್ಟ್‌ಸಿಟಿ’ ಯೋಜನೆ ಅನುಷ್ಠಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಬ್ರಿಟಿಷ್ ಉದ್ಯಮಿಗಳಿಗೆ ಮನವಿ ಮಾಡಿದರು.

‘ಕರ್ನಾಟಕದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳಿದ್ದು, ಬ್ರಿಟನ್‌ ಮೂಲದ ಕಂಪನಿಗಳು ಈ  ಅವಕಾಶಗಳನ್ನು ಬಳಸಿಕೊಳ್ಳಲಿ’ ಎಂದು ತಿಳಿಸಿದರು.

ಸಂಶೋಧನೆ ಮತ್ತು ಅನ್ವೇಷಣೆ ಕ್ಷೇತ್ರದಲ್ಲಿ ಬ್ರಿಟನ್‌  ಶಕ್ತಿಯನ್ನು ಹೊಂದಿದ್ದರೆ,  ಕರ್ನಾಟಕವು ಅವುಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯ ಪಡೆದಿದೆ. ಭವಿಷ್ಯದಲ್ಲಿ  ಆರ್ಥಿಕ ಬೆಳವಣಿಗೆಗೆ ಕರ್ನಾಟಕ ಮತ್ತು ಬ್ರಿಟನ್‌ ಅದ್ವಿತೀಯ ಪಾಲುದಾರರಾಗುವ ಅವಕಾಶ ಹೊಂದಿವೆ ಎಂದು ತಿಳಿಸಿದರು.

ಬೆಂಗಳೂರು– ಮುಂಬೈ  ಆರ್ಥಿಕ ವಲಯ ಸ್ಥಾಪನೆ  ಪ್ರಕ್ರಿಯೆ ಚಾಲನೆಯಲ್ಲಿದೆ.  ಇದರ ವ್ಯಾಪ್ತಿಯಲ್ಲಿ ಮೂರು ಗ್ರೀನ್‌ ಫೀಲ್ಡ್‌ ಟೌನ್‌ಶಿಪ್‌ಗಳನ್ನು ಸ್ಥಾಪಿಸಲಾಗುತ್ತದೆ.  ದಕ್ಷಿಣ ಮತ್ತು ಪಶ್ಚಿಮ ಭಾಗದ ಭಾರತವನ್ನು ಆರ್ಥಿಕವಾಗಿ ಒಂದುಗೂಡಿಸುವ ಈ ವಲಯದಲ್ಲಿ ಲಾಜಿಸ್ಟಿಕ್‌, ಮೂಲಸೌಕರ್ಯ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಬ್ರಿಟನ್‌ನ ಆಯ್ದ ಕಂಪನಿಗಳ ಜೊತೆ ಕೈಜೋಡಿಸಿ ಕಾರ್ಯ ನಿರ್ವಹಿಸುತ್ತೇವೆ ಎಂದರು.

2017 ರ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲಿ ಏರೋ ಇಂಡಿಯಾ  ಶೋ ನಡೆಯಲಿದೆ. ಬ್ರಿಟಿಷ್‌ ಸರ್ಕಾರ ಮತ್ತು ಉದ್ಯಮಗಳು ಭಾಗವಹಿಸುವುದರ ಜೊತೆಗೆ ವೈಮಾನಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರರ ಶಕ್ತಿಯನ್ನು ವೃದ್ಧಿಮಾಡಿಕೊಳ್ಳುವ ನಿಟ್ಟಿನಲ್ಲಿ ನಿರ್ದಿಷ್ಟ  ಯೋಜನೆಯನ್ನು ರೂಪಿಸಬಹುದು ಎಂದು ತಿಳಿಸಿದರು.

ವಿವಿಧ  ಕೌಶಲಗಳ  ಮತ್ತು ತಾಂತ್ರಿಕ ಪರಿಣತಿಯ ನುರಿತ ಕೆಲಸಗಾರರು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಏರೋಸ್ಪೇಸ್‌, ಆಟೋಮೊಬೈಲ್‌, ಉತ್ಪಾದನೆ, ಮಷೀನ್‌ ಟೂಲ್ಸ್‌,  ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಔಷಧ ಮತ್ತು ಜೀವ ವಿಜ್ಞಾನಗಳ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಗಳೂ ಪ್ರವರ್ಧಮಾನಕ್ಕೆ ಬರುತ್ತಿವೆ. ಇವುಗಳ ಪ್ರಯೋಜನವನ್ನು ಕರ್ನಾಟಕ– ಬ್ರಿಟನ್‌ ಪಡೆಯಬಹುದು ಎಂದು ತೆರೆಸಾ ಅವರಿಗೆ ತಿಳಿಸಿದರು.

ಧಾರವಾಡದಲ್ಲಿ ಹೆಲ್ತ್‌ ಸಿಟಿ

ಧಾರವಾಡದಲ್ಲಿ ‘ಯುಕೆ ಹೆಲ್ತ್‌ ಸಿಟಿ ಪ್ರಾಜೆಕ್ಟ್‌’  ಸ್ಥಾಪಿಸಲು ರಾಜ್ಯ ಸರ್ಕಾರ 400 ಎಕರೆ ಭೂಮಿ ಗುರುತಿಸಿದೆ. ಈ ಸಂಬಂಧ ಈಗಾಗಲೇ ಒಪ್ಪಂದವೂ ಆಗಿದೆ. ಆದಷ್ಟು ಬೇಗ ಸ್ಥಾಪನೆ ಕಾರ್ಯ ಆರಂಭಿಸಬೇಕು. ರಾಜ್ಯದ ಜೊತೆ ಪಾಲುದಾರಿಕೆ ವಹಿಸಲು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry