ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ವಿಭಿನ್ನ ಚಿಂತನೆ

7

ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ವಿಭಿನ್ನ ಚಿಂತನೆ

Published:
Updated:
ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ವಿಭಿನ್ನ ಚಿಂತನೆ

ಕರ್ನಾಟಕ ಏಕೀಕರಣಗೊಂಡು 60 ವರ್ಷಗಳು ಕಳೆಯಿತು. ಈ ಅರವತ್ತು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ ಎನ್ನುವುದನ್ನು ಸಾಕಷ್ಟು ಹಿರಿಯರು ಒಪ್ಪುತ್ತಾರೆ. ಆದರೆ, ತಾಳ್ಮೆ ಕೊಂಚ ಕಡಿಮೆಯೇ ಇರುವ ಇಂದಿನ ಯುವ ಮನಸ್ಸುಗಳು ಯೋಚಿಸುವುದೇ ಬೇರೆ ದಿಕ್ಕಿನಲ್ಲಿ. ‘1956 ರಿಂದ ಈಚೆಗೆ ಇಷ್ಟು ಅಲ್ಪ ಪ್ರಮಾಣದ ಬದಲಾವಣೆಯೇ’ ಎಂದು ಪ್ರಶ್ನಿಸುತ್ತಾರೆ.ಕರ್ನಾಟಕ ಉದಯಗೊಂಡಾಗ  ರಾಜ್ಯದ ಮುಂದಿದ್ದ ಕಾರ್ಯಗಳು ಮತ್ತು ಸವಾಲುಗಳು ಬೃಹತ್‌ ಪ್ರಮಾಣದ್ದು. ಅದರೆ, ಅವು ಸ್ಪಷ್ಟವಾಗಿದ್ದವು. ರಾಜ್ಯದ ಆರ್ಥಿಕ ಬುನಾದಿಯನ್ನು ಗಟ್ಟಿಗೊಳಿಸಿ ಅದನ್ನು ಸದೃಢವಾಗಿ ಬೆಳೆಸುವುದು. ಎಲ್ಲರಿಗೂ ಹೊಸ ಅವಕಾಶಗಳ ಸೃಷ್ಟಿ, ಕೃಷಿ ಇಳುವರಿ ಹೆಚ್ಚಳ ಮತ್ತು ಜನರ ಜೀವಿತಾವಧಿ ಅಧಿಕಗೊಳಿಸುವುದು ಮುಖ್ಯ ಗುರಿಯಾಗಿತ್ತು. ಎಲ್ಲಕ್ಕಿಂತ ಮುಖ್ಯವಾದ ಕಾರ್ಯವೆಂದರೆ ದೇಶದ ವಿವಿಧ ರಾಜ್ಯಗಳ ಮಧ್ಯೆ ಪ್ರಬಲ ಪೈಪೋಟಿ ನೀಡಿ ಅನನ್ಯವಾಗಿ ಬೆಳೆದು ನಿಲ್ಲುವಂತೆ ನಾಡನ್ನು  ಕಟ್ಟುವ ಕೆಲಸ ಆಗಬೇಕಿತ್ತು.ಇವೆಲ್ಲ ಸಾಕಾರಗೊಳಿಸಲು ಸಾಕಷ್ಟು ಸಮಯವೇ ಬೇಕಾಗುತ್ತದೆ. ತರಾತುರಿಯಲ್ಲಿ ಆಗುವ ಕೆಲಸ ಅಲ್ಲ ಎಂದು ಕನ್ನಡ ನಾಡಿನ ಅಂದಿನ ನೇತಾರರು ಮತ್ತು ಸಾಮಾನ್ಯ ಜನರೂ ಭಾವಿಸಿದ್ದರು.  ಬದಲಾವಣೆ ಮತ್ತು ನಾಡು ಕಟ್ಟುವ ಕೆಲಸವನ್ನು ಈಗಷ್ಟೇ ಆರಂಭಿಸಿದ್ದೇವೆ. ರಾತ್ರೋರಾತ್ರಿ ಎಲ್ಲವೂ ಆಗಿ ಬಿಡುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬಾರದು ಎಂಬ ಮಾತು ಆಗ ಸಾಮಾನ್ಯವಾಗಿತ್ತು. ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸುವ ಮೂಲಕ ನವ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಇದನ್ನು ಸಾಧ್ಯವಾಗಿಸಿದ ನೇತಾರರ ಮೇಲೆ ವಿಶ್ವಾಸವನ್ನು ಇಡಬೇಕು.  ಅವರು ಜನರ ಕನಸನ್ನು ಸಾಕಾರಗೊಳಿಸುತ್ತಾರೆ ಎಂಬ ನಂಬಿಕೆ ಬೇಕು ಎಂದು ವಿಶ್ವಾಸ ವ್ಯಕ್ತವಾಗಿತ್ತು.ಆದರೆ, ಆಗಿದ್ದೇನು ?  ಕ್ರಮೇಣ ಜನರ ತಾಳ್ಮೆ ಕರಗಲಾರಂಭಿಸಿತು. ರಾಜ್ಯವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಿ ಅಭಿವೃದ್ಧಿಪಡಿಬೇಕಿತ್ತೋ ಅದು ಸಾಧ್ಯವಾಗಲಿಲ್ಲ. ಅದಕ್ಕೆ ಪೂರಕವಾದ ಅಗತ್ಯವಿರುವ ಯಾವುದೇ ಕೆಲಸ ನಡೆಯುತ್ತಿಲ್ಲ. ಅದರ ಬದಲಿಗೆ  ಕೆಲವರು ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂಬುದು ಬಹುಬೇಗನೇ ಜನರ ಗಮನಕ್ಕೆ ಬಂದಿತು. ಭಾರತದ ಜೊತೆಗೆ ಸ್ವತಂತ್ರಗೊಂಡ ಹಲವು ರಾಷ್ಟ್ರಗಳ ಸ್ಥಿತಿ ಭಾರತಕ್ಕಿಂತ ಉತ್ತಮವಾಗಿತ್ತು. ಆದರೆ, ನಮ್ಮಲ್ಲಿ ಬೆಳವಣಿಗೆ ಮಂದಗತಿಯಲ್ಲಿಯೇ ಇದೆ ಎಂಬುದನ್ನೂ ಜನ ಗುರುತಿಸಲಾರಂಭಿಸಿದರು. ಕೆಲವು ಕ್ಷೇತ್ರಗಳಲ್ಲಿ ಕರ್ನಾಟಕಕ್ಕಿಂತ ಬೇರೆ ರಾಜ್ಯಗಳ ಸಾಧನೆ ಉತ್ತಮವಾಗಿತ್ತು.  ಆ ರಾಜ್ಯಗಳಲ್ಲಿ ಆಗಿರುವ ಪ್ರಗತಿ ನಮ್ಮಲ್ಲಿ  ಏಕೆ ಸಾಧ್ಯವಾಗಿಲ್ಲ ಎಂದು ಜನರು  ಪ್ರಶ್ನಿಸಲಾರಂಭಿಸಿದರು.

ಹೀಗೆ ಏಳುತ್ತಾ– ಬೀಳುತ್ತಾ ಸಾಗಿ ಬಂದಿರುವ ನಾವು ಕನ್ನಡಿಗರು ಈಗ ನಿಶ್ಚಿತವಾಗಿಯೂ ಅಭಿವೃದ್ಧಿಯ ಕವಲು ದಾರಿಯಲ್ಲಿದ್ದೇವೆ. ಮುಂದಿನ ನಲ್ವತ್ತು ವರ್ಷಗಳಲ್ಲಿ ನಮಗೆ ಏನು ಆಗಬೇಕು ಎಂಬುದನ್ನು ಕೇಳಲೇಬೇಕಿದೆ. ಈವರೆಗೆ ನಡೆದುಕೊಂಡು ಬಂದಿರುವ ದಾರಿಯಲ್ಲೇ  ಮುನ್ನಡೆಯಬೇಕೆ? ಅಥವಾ  ವಿಭಿನ್ನ ಕಾರ್ಯತಂತ್ರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕೆ?ಈ ವಿಚಾರದಲ್ಲಿ ನನ್ನ ಖಚಿತ ಅಭಿಪ್ರಾಯವೆಂದರೆ, ಪ್ರಮುಖ ಮೂರು ವಿಚಾರಗಳಲ್ಲಿ ನಾವು ವಿಭಿನ್ನ ಕಾರ್ಯತಂತ್ರವನ್ನು ರೂಪಿಸಬೇಕು. ಇದನ್ನು ಸಾಧ್ಯವಾಗಿಸಿದರೆ, ನಮ್ಮ ರಾಜ್ಯದ ಎಲ್ಲ ನಗರಗಳೂ ಅತಿಬೇಗನೆ ಪರಿವರ್ತನೆ ಕಾಣುತ್ತವೆ. ಕರ್ನಾಟಕವು ಸ್ವಾಭಾವಿಕವಾಗಿ ದೇಶದ ಸಾಮಾಜಿಕ ಮತ್ತು ಆರ್ಥಿಕ ದೀಪ ಸ್ತಂಭವಾಗಿ ಮೆರೆಯಲಿದೆ. ಅದರ ಬದಲಿಗೆ ನಾವು ಇಲ್ಲಿಯವರೆಗೆ ಪೋಷಿಸಿಕೊಂಡು ಬಂದ ಹಾದಿಯಲ್ಲೇ ಮುನ್ನಡೆಯುತ್ತೇವೆ, ಅದರಿಂದ ಆಚೆಗೆ ಬರುವ ಮನಸ್ಸು ಇಲ್ಲ ಎಂದರೆ, ನಮ್ಮ ಪ್ರಗತಿಯೂ ಈಗಿರುವಂತೆ ಸೀಮಿತವಾಗಿರುತ್ತದೆ.ಮೊದಲಿಗೆ, ನಾವು ಜನರನ್ನು ನಂಬುವ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಕೆಲವು ಉತ್ತಮ ಕಾರ್ಯಕ್ಕೆ ಕರ್ನಾಟಕ ನಾಂದಿ ಹಾಡಿದ್ದನ್ನು ಮರೆಯಬಾರದು. ಅದರಲ್ಲೂ ಮುಖ್ಯವಾಗಿ ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು. ರಾಜೀವ್‌ ಗಾಂಧಿಯವರು ದೇಶದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಎಷ್ಟೋ ವರ್ಷಗಳಿಗೆ ಮೊದಲೇ ಕರ್ನಾಟಕದಲ್ಲಿ ಪಂಚಾಯತ್ ರಾಜ್‌ ವ್ಯವಸ್ಥೆ ಅನುಷ್ಠಾನಗೊಂಡು, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ರಾಜ್ಯವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವಲ್ಲಿ ಸ್ಥಳೀಯ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಪ್ರಗತಿಪರ ಚಿಂತನೆಯ ಸ್ವಾಭಾವಿಕ ನಾಯಕರು ಕನ್ನಡಿಗರು. ಪ್ರಜೆಗಳು ಪ್ರಜಾತಂತ್ರದ ಫಲಾನುಭವಿಗಳು ಮಾತ್ರವಲ್ಲ, ಅದರ ನಿರ್ಮಾತೃಗಳೂ ಆಗಿರಬೇಕು.ದುರಾದೃಷ್ಟದ ವಿಚಾರವೆಂದರೆ, ಅಧಿಕಾರ ವಿಕೇಂದ್ರೀಕರಣ ಉತ್ತಮ ಆರಂಭ ಪಡೆದರೂ ಬಳಿಕ ಆ ದಾರಿಯಲ್ಲಿ ಮುಂದುವರೆಯಲೇ ಇಲ್ಲ.  ಎಲ್ಲ ಸರ್ಕಾರಗಳು ಸ್ಥಳೀಯ ಆಡಳಿತಗಳು ಸಶಕ್ತಗೊಳ್ಳುವುದಕ್ಕೆ ನಿರಂತರವಾಗಿ ಅಡ್ಡಿಯಾದವು, ಮಾತ್ರವಲ್ಲ ಅಧಿಕಾರದ ವಿಕೇಂದ್ರಿಕರಣಕ್ಕೆ ಅಡ್ಡಿ ಉಂಟು ಮಾಡಿದವು. ಈಗಂತೂ ತಾನೇ ‘ಪ್ರಭು’ ಮತ್ತು ‘ಒಡೆಯ’ ಎಂಬ ಮನಸ್ಥಿತಿಯಲ್ಲಿ  ರಾಜ್ಯ ಸರ್ಕಾರವಿದೆ. ಎಲ್ಲ ಪಂಚಾಯಿತಿ, ನಗರ ಮತ್ತು ಪಟ್ಟಣಗಳಲ್ಲಿ ಸರ್ಕಾರದ ಕೃಪೆ  ಇಲ್ಲದೆ ಯಾವುದೇ  ದೊಡ್ಡ ಮಟ್ಟದ ಅಭಿವೃದ್ಧಿ ಸಾಧ್ಯವಿಲ್ಲ.ಇದರಿಂದಾಗಿ ರಾಜ್ಯವು ಯಾವ ವೇಗದಲ್ಲಿ ಅಭಿವೃದ್ಧಿ ಹೊಂದಬಹುದಿತ್ತೋ ಆ ವೇಗದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೊಸ ಪರಿಕಲ್ಪನೆಗಳ ಹರಿವಿಗೆ ಅಡ್ಡಿಯಾಗಿದೆ ಮತ್ತು  ಬೇರು ಮಟ್ಟದಲ್ಲಿ ರಾಜಕೀಯ ನಾಯಕರ ಹುಟ್ಟು  ಸಾಧ್ಯವಾಗುತ್ತಿಲ್ಲ. ಆಡಳಿತದಲ್ಲಿ ಒಳಗೊಳ್ಳುವಿಕೆಯ ನಿಧಾನಗತಿಯೇ ನಮ್ಮ ಬೆಳವಣಿಗೆಯ ವೇಗವೂ ಮಂದಗತಿಯಾಗಲು ನೈಜ ಕಾರಣ.ಎರಡನೆಯದಾಗಿ, ಅಭಿವೃದ್ಧಿ ಪರಿಕಲ್ಪನೆ ಸಮಗ್ರ ರಾಜ್ಯವನ್ನು ಒಳಗೊಂಡಿರಬೇಕು. ಪ್ರಸ್ತುತ ರಾಜ್ಯದ ಆರ್ಥಿಕ ಬೆಳವಣಿಗೆಯ ಚಟುವಟಿಕೆ ದಕ್ಷಿಣ ಭಾಗದಲ್ಲಿ ಅದರಲ್ಲೂ ರಾಜಧಾನಿ  ಸುತ್ತಮುತ್ತಲೇ ಕೇಂದ್ರೀಕೃತವಾಗಿದೆ.  ಬೆಂಗಳೂರು ನಗರವು ರಾಜ್ಯದ ಎರಡನೇ ಅತಿ ದೊಡ್ಡ ನಗರಕ್ಕಿಂತ ಹತ್ತು ಪಟ್ಟು ದೊಡ್ಡದ್ದು.  ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳ ನಡುವಿನ ಕಂದಕವು ಬೆಳೆಯುತ್ತಲೇ ಇದೆ. ಈ ಸತ್ಯ ಗೊತ್ತಿದ್ದರೂ ಅದನ್ನು ಸರಿಪಡಿಸುವ ಕಾರ್ಯಕ್ಕೆ ಯಾವುದೇ ಪ್ರಯತ್ನ ನಡೆದಿಲ್ಲ.ರಾಜ್ಯ ಸರ್ಕಾರ ಮತ್ತು ಯೋಜನಾ ಮಂಡಳಿ ಬಹಳ ಹಿಂದೆಯೇ ವಿವಿಧ ನಗರಗಳು ಮತ್ತು ಜಿಲ್ಲೆಗಳ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಬೇಕಿತ್ತು. ಜೊತೆಗೆ ಆಯವ್ಯಯದಲ್ಲಿ ಅಗತ್ಯ ಮೊತ್ತವನ್ನು  ನಿಗದಿ ಮಾಡಬೇಕಿತ್ತು. ಪ್ರತಿಯೊಂದು ನಗರ, ಜಿಲ್ಲೆ  ಮತ್ತು ಪ್ರದೇಶಗಳ ಶಕ್ತಿ, ಸಾಮರ್ಥ್ಯವನ್ನು ಗುರುತಿಸಬೇಕಿತ್ತು.   ವಿಶೇಷ ಶಕ್ತಿ, ಸಾಮರ್ಥ್ಯದ ಆಧಾರದಲ್ಲಿ ಪ್ರತಿಯೊಂದು ನಗರ ಮತ್ತು ಜಿಲ್ಲೆಯನ್ನು ಸ್ಪರ್ಧಾತ್ಮಕವಾಗಿ ಬೆಳೆಸಲು ಅಭಿವೃದ್ಧಿ ಕಾರ್ಯತಂತ್ರ ರೂಪಿಸಬೇಕಿತ್ತು. ಹಾಗಾಗಲಿಲ್ಲ. ಈಗಲೂ ಈ ಕೆಲಸ ಬಾಕಿ ಉಳಿದಿದೆ.ರಾಜ್ಯದ ವೈವಿಧ್ಯ ಹಾಗೂ ಪ್ರಖರ ಶಕ್ತಿಯನ್ನು ಗುರುತಿಸಿ ಅಭಿವೃದ್ಧಿಪಡಿಸಲು ಸಾಧ್ಯವಾಗದೇ ಇರುವುದು ಬೇಸರದ ಸಂಗತಿ. ಏಕೆಂದರೆ ವಿಭಿನ್ನ ಪ್ರದೇಶಗಳು ತಮ್ಮದೇ ಆದ ಅಪಾರ ಸಾಮರ್ಥ್ಯವನ್ನು ಹೊಂದಿವೆ. ಘಟ್ಟ ಪ್ರದೇಶಗಳು, ಕರಾವಳಿ, ಉತ್ತರದ ಭಾಗ ಮತ್ತು ಹೈದ್ರಾಬಾದ್‌– ಕರ್ನಾಟಕ ಪ್ರದೇಶ... ಹೀಗೆ ಎಲ್ಲ  ಪ್ರದೇಶಗಳೂ ವಿಶಿಷ್ಟ ಮತ್ತು ಅಗಾಧ ಸಾಮರ್ಥ್ಯವನ್ನು ಹೊಂದಿವೆ.  ನಾವು  ಸರಿಯಾದ ಆಯ್ಕೆಯ ಮೂಲಕವೇ ಪ್ರತಿ ನಗರ ಮತ್ತು ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು.ಮೂರನೇ ವಿಚಾರವೆಂದರೆ, ಈಗ ನಾವು ಯಾವುದನ್ನು ಅಭಿವೃದ್ಧಿ ಎಂದು ನೋಡುತ್ತಿದ್ದೇವೆಯೋ ಆ ದೃಷ್ಟಿಕೋನವನ್ನು ಬದಲಿಸಬೇಕು. ಈ ಕ್ಷಣದಲ್ಲಿ ನಾವು ಕಾರಣ ಮತ್ತು ಪರಿಣಾಮಗಳ ಕುರಿತು ಗೊಂದಲದಲ್ಲಿ ಇದ್ದೇವೆ.  ಅಂದರೆ, ನಮ್ಮ ಮಕ್ಕಳಿಗೆ ಸಿಗುವ ಉತ್ತಮ ಅವಕಾಶಗಳು, ಸರ್ಕಾರದಿಂದ ಸಿಗುವ ಉತ್ತಮ ಸಾರ್ವಜನಿಕ ಸೇವೆಗಳು, ಉತ್ತಮ ನ್ಯಾಯ ವ್ಯವಸ್ಥೆ ಮತ್ತು ನಾವು ಬಯಸಿದ್ದೆಲ್ಲ ಸಾಕಾರಗೊಳ್ಳುವುದು ಅಭಿವೃದ್ಧಿಯ ಕಾರಣದಿಂದಲೇ ಎಂದು ಭಾವಿಸಿದ್ದೇವೆ. ಆದರೆ, ಅದು ತಪ್ಪು ಗ್ರಹಿಕೆ ಎಂದೇ ನನ್ನ ಭಾವನೆ. ಸಾರ್ವಜನಿಕರಿಗೆ ಒಳಿತಾಗುವ ಮತ್ತು ನ್ಯಾಯೋಚಿತ ಕೆಲಸಗಳನ್ನು ಮೊದಲು ಮಾಡಿದರೆ, ಮುಂದೊಂದು ದಿನ ಪ್ರತಿಫಲವಾಗಿ ಅಭಿವೃದ್ಧಿಯನ್ನು ಪಡೆಯಬಹುದು.ಸರ್ಕಾರವು ಪ್ರತಿ ಮಗುವಿನ ಶಿಕ್ಷಣ ಮತ್ತು ಪೌಷ್ಠಿಕತೆಯ ಅವಶ್ಯಕತೆಗೆ ಸಂಪೂರ್ಣ ಹಣವನ್ನು ಭರಿಸಬೇಕು. ಇದು ಸಾಧ್ಯವಾಗಿಸಲು ರಾಜ್ಯ ಸರ್ಕಾರ ಈ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಮೂರು ಪಟ್ಟು  ಹೆಚ್ಚು ಹಣ ನಿಗದಿ ಮಾಡಬೇಕಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಆಡಳಿತವನ್ನು  ಸುಧಾರಿಸಲು ಪ್ರತ್ಯೇಕ ಉಸ್ತುವಾರಿ ವ್ಯವಸ್ಥೆಯನ್ನು  ಹೊಂದಬೇಕಾಗುತ್ತದೆ.  ಪ್ರತಿಯೊಂದು ಹಳ್ಳಿಗೂ ಸಾರಿಗೆ ವ್ಯವಸ್ಥೆಯನ್ನು ಮಾಡಬೇಕು. ಸ್ಥಳೀಯರು ತಮ್ಮ ಶ್ರಮದಿಂದ ಸೃಷ್ಟಿಸಿದ್ದನ್ನು ಸಮೀಪದ ಮಾರುಕಟ್ಟೆ ಸ್ಥಳಕ್ಕೆ ಒಯ್ಯಲು ಸಂಪರ್ಕ ಸಿಕ್ಕಿದಂತಾಗುತ್ತದೆ. ಆಯವ್ಯಯವನ್ನು ಸಿದ್ಧಪಡಿಸುವಾಗ ಈ ವಿಷಯಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕಾಗುತ್ತದೆ.ಆದರೆ, ನಮ್ಮ ಇಂದಿನ ನಡೆಯು ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಹೇಗಾದರೂ ಸರಿ ಆರ್ಥಿಕ ಅಭಿವೃದ್ಧಿ ಆಗುತ್ತದೆ. ಇದರಿಂದ ಸೃಷ್ಟಿ ಆಗುವ ಸಂಪನ್ಮೂಲವನ್ನು ಬೇರೆ ಬೇರೆ ಗುರಿಗಳನ್ನು ತಲುಪಲು ಬಳಸಿಕೊಳ್ಳಬಹುದು ಎಂಬ ‘ತೃಪ್ತಿ’ಯ ಮನೋಭಾವ ಇದೆ. ನಾವು ಅರ್ಥ ಮಾಡಿಕೊಳ್ಳಬೇಕಾಗಿರುವ ಸಂಗತಿ ಎಂದರೆ, ಈ ಮಹ್ವತದ ಗುರಿಗಳನ್ನು ತಲುಪಲು ಆರ್ಥಿಕ ಅಭಿವೃದ್ಧಿಗೆ ವೇಗ ನೀಡಬೇಕಾಗುತ್ತದೆ.

ವಿಭಿನ್ನ ಹಾದಿ ತುಳಿಯಬೇಕು

ಕರ್ನಾಟಕ ಹೊಸ ಪರಿಕಲ್ಪನೆಗಳಿಗೆ ತೆರೆದುಕೊಳ್ಳುವ ಮನೋಭಾವ ಮತ್ತು ಸಮಾಜದಲ್ಲಿನ ಸುಧಾರಣಾ ಚಿಂತನೆಯ ಇತಿಹಾಸವನ್ನೇ ಹೊಂದಿದೆ. ಉಳಿದ 40 ವರ್ಷಗಳನ್ನು ಕ್ರಿಯಾಶೀಲ  ವಿಭಿನ್ನ ಹಾದಿ ತುಳಿದಿದ್ದೇ ಆದರೆ,  ಅಭಿವೃದ್ಧಿಯ ಗುರಿಯನ್ನು ಬೇಗ ತಲುಪಬಹುದು.

ನಗರಾಭಿವೃದ್ಧಿ ಹೊಣೆಗಾರಿಕೆ

* ನಗರ ಮೂಲ ಸೌಕರ್ಯ ಪೂರೈಕೆ ಮತ್ತು ಉತ್ತಮ ಆಡಳಿತ

* ಕುಡಿಯುವ ನೀರಿನ ಪೂರೈಕೆ– ಒಳಚರಂಡಿ ವ್ಯವಸ್ಥೆ

* ನಗರ ಮತ್ತು ಪಟ್ಟಣಗಳ ಬೆಳವಣಿಗೆ ಹಾಗೂ ಉತ್ತಮ ನಿರ್ವಹಣೆಗಾಗಿ ಅಭಿವೃದ್ಧಿ ಯೋಜನೆ ತಯಾರಿಸುವುದು.

* ಮೂಲ ಸೌಕರ್ಯ ಸುಧಾರಣೆ

* ರಾಜ್ಯ– ಕೇಂದ್ರ ಪುರಸ್ಕೃತ ಹಾಗೂ ಇತರೆ ಯೋಜನೆಗಳ  ಜಾರಿ

* ಕಾಯ್ದೆ,  ನಿಯಮಗಳನ್ನು ಜಾರಿಗೊಳಿಸುವ ಮೂಲಕ ಮೇಲಿನ ಜವಾಬ್ದಾರಿಗಳ ನಿರ್ವಹಣೆ

ನಗರಪಾಲಿಕೆಗಳು

*  ಬೆಳಗಾವಿ

* ಮೈಸೂರು

* ಹುಬ್ಬಳ್ಳಿ–ಧಾರವಾಡ

* ಮಂಗಳೂರು

* ಕಲಬುರ್ಗಿ

* ಬಳ್ಳಾರಿ

* ದಾವಣಗೆರೆ

* ತುಮಕೂರು

* ಶಿವಮೊಗ್ಗ

* ವಿಜಯಪುರ

ಆದ್ಯತಾ ವಲಯಗಳು

* ಕುಡಿಯುವ ನೀರು

* ಗುಣಮಟ್ಟದ ಶಾಲಾ– ಕಾಲೇಜುಗಳು

* ವಿದ್ಯುತ್‌

* ರಸ್ತೆ ಸಂಪರ್ಕ

* ಸಾರಿಗೆ

* ಟೆಲಿಕಾಂ

* ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ

* ವಾಣಿಜ್ಯ–ಉದ್ಯಮ

* ವಿಜ್ಞಾನ, ಸಂಶೋಧನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry