7

ಸೇನೆ, ಪೊಲೀಸ್‌ ನಡುವೆ ಸಮವಸ್ತ್ರವಷ್ಟೇ ಸಮಾನ

ರಾಮಚಂದ್ರ ಗುಹಾ
Published:
Updated:
ಸೇನೆ, ಪೊಲೀಸ್‌ ನಡುವೆ ಸಮವಸ್ತ್ರವಷ್ಟೇ ಸಮಾನ

ಸೇನೆಯ ಯಾವುದೇ ಕಾರ್ಯನಿರ್ವಹಣೆಯನ್ನು ಟೀಕಿಸುವ ಯಾವನೇ ವ್ಯಕ್ತಿ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ವರ್ತಿಸುತ್ತಿಲ್ಲ ಎಂದು ಆಡಳಿತ ಪಕ್ಷದ ಸಿದ್ಧಾಂತಿಗಳು ಮತ್ತು ಕೆಲವು ಸುದ್ದಿವಾಹಿನಿಗಳ ನಿರೂಪಕರು ಇತ್ತೀಚಿನ ಕೆಲವು ತಿಂಗಳುಗಳಿಂದ ವಾದಿಸುತ್ತಿದ್ದಾರೆ. ನಾವು ಮೆಚ್ಚುಗೆ ವ್ಯಕ್ತಪಡಿಸಬಹುದಾದ ಹಲವು ಅಂಶಗಳನ್ನು ಈಗ ಭಾರತದ ಸೇನೆಯು ಹೊಂದಿದೆ. ಸೇನೆಯ ವೃತ್ತಿಪರತೆ ಅದರಲ್ಲಿ ಒಂದು ಅಂಶವಾದರೆ, ದೃಢ ಜಾತ್ಯತೀತ ಮನೋಭಾವ ಇನ್ನೊಂದು ಅಂಶ. ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಣೆ ಮತ್ತೊಂದು ಅಂಶ. ಪ್ರವಾಹ ಮತ್ತು ಭೂಕಂಪ ಸಂದರ್ಭಗಳಲ್ಲಿ ನಡೆಸಿದ ದಿಟ್ಟ ಪರಿಹಾರ ಕಾರ್ಯಾಚರಣೆ ನಾಲ್ಕನೇ ಅಂಶ. ಕಡಿಮೆ ತೀವ್ರತೆಯ ಸಂಘರ್ಷ ಮತ್ತು ಪೂರ್ಣ ಯುದ್ಧದ ಸಂದರ್ಭದಲ್ಲಿ ತೋರಿದ ಶೌರ್ಯ ಐದನೇ ಅಂಶ.ಆದರೆ, ಭಾರತೀಯ ಸೇನೆಯಲ್ಲಿ ಇರುವವರೂ ಮನುಷ್ಯರು, ಹಾಗಾಗಿ ಅದು ದೋಷರಹಿತ ಅಲ್ಲ. ಸೇನಾ ಸಾಮಗ್ರಿ ಖರೀದಿ ಮತ್ತು ವಿತರಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಉದಾಹರಣೆಗೆ, ಸೇವೆಯಲ್ಲಿರುವ ಮತ್ತು ನಿವೃತ್ತರಾದ ಕೆಲವು ಹಿರಿಯ ಅಧಿಕಾರಿಗಳು ಶಸ್ತ್ರಾಸ್ತ್ರ ವ್ಯಾಪಾರಿಗಳ ಜತೆ ಅನುಮಾನಾಸ್ಪದ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. 1962ರ ಚೀನಾ ಜತೆಗಿನ ಯುದ್ಧದಲ್ಲಿ ಪೂರ್ವ ವಲಯದ ಪ್ರದರ್ಶನವನ್ನು ಗಣನೆಗೆ ತೆಗೆದುಕೊಂಡರೆ ಯುದ್ಧ ಭೂಮಿಯಲ್ಲಿಯೂ ಸೇನೆಯ ದಾಖಲೆ ಅತ್ಯಪೂರ್ವ ಎಂದು ಹೇಳುವಂತಿಲ್ಲ.ಹಾಗಿದ್ದರೂ, ಒಟ್ಟಿನಲ್ಲಿ, ಶಾಂತಿ ಕಾಲದಲ್ಲಿಯೂ, ಯುದ್ಧದ ಕಾಲದಲ್ಲಿಯೂ ನಿರ್ವಹಿಸಿದ ಪಾತ್ರದಿಂದಾಗಿ ಈ ಕಪ್ಪು ಚುಕ್ಕೆಯಿಂದ ಸೇನೆಯು ತನ್ನನ್ನು ಗೌರವಪೂರ್ವಕವಾಗಿಯೇ ಆರೋಪಮುಕ್ತವಾಗಿಸಿಕೊಂಡಿದೆ. ಭಾರತ ಮತ್ತು ಭಾರತೀಯರಿಗೆ ನ್ಯಾಯಯುತವಾದ ಮತ್ತು ಉತ್ತಮವಾದ ಸೇವೆ ಸಲ್ಲಿಸಿದ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟಿನ ಜತೆಗೆ ಸೇನೆಯೂ ಸ್ಥಾನ ಪಡೆದುಕೊಂಡಿದೆ.ಹಾಗಾಗಿಯೇ, ದುರುದ್ದೇಶಪೂರಿತ ಅಥವಾ ಸ್ಥಾಪಿತ ಹಿತಾಸಕ್ತಿಯ ಟೀಕೆಗಳಿಂದ ಸೇನೆಯನ್ನು ರಕ್ಷಿಸುವುದಕ್ಕಾಗಿ ರಾಜಕಾರಣಿಗಳು ಮತ್ತು ಸುದ್ದಿವಾಹಿನಿಯ ನಿರೂಪಕರು ಅನುಮಾನದ ಲಾಭವನ್ನು ಸೇನೆಗೆ ನೀಡುವುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಇದೇ ರಕ್ಷಣೆಯನ್ನು ಭಾರತದ ಪೊಲೀಸ್ ವ್ಯವಸ್ಥೆಗೂ ವಿಸ್ತರಿಸಬೇಕೇ?ಕಳೆದ ವಾರ, ಭೋಪಾಲ್‌ನ ಜೈಲಿನಿಂದ ಸಿಮಿ ಕಾರ್ಯಕರ್ತರು ತಪ್ಪಿಸಿಕೊಂಡ ಮತ್ತು ನಂತರ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ದಿನ ‘ದೇಶದ ಆತ್ಮಸಾಕ್ಷಿ’ ಎಂದು ತನ್ನನ್ನು ಭಾವಿಸಿರುವ ಸುದ್ದಿವಾಹಿನಿ ನಿರೂಪಕ ರಜೆಯಲ್ಲಿದ್ದರು. ಮೊದಲ ಸುತ್ತಿನ ಸುದ್ದಿವಾಹಿನಿ ಚರ್ಚೆ ಅವರ ಅನುಪಸ್ಥಿತಿಯಲ್ಲಿಯೇ ನಡೆಯಬೇಕಾದ ದುರಂತಮಯ ಪರಿಸ್ಥಿತಿ ಉಂಟಾಯಿತು. ‘ಭದ್ರತಾ ಪಡೆಗಳ ಬದ್ಧತೆ’ಯನ್ನು ಪ್ರಶ್ನಿಸುವಂತಿಲ್ಲ ಎಂದು ಹೇಳಿ, ನ್ಯಾಯಾಂಗ ತನಿಖೆ ನಡೆಯಬೇಕು ಎಂಬ ಎಲ್ಲ ಬೇಡಿಕೆಗಳನ್ನೂ ಬಿಜೆಪಿ ವಕ್ತಾರರು ತಿರಸ್ಕರಿಸಿದರು. ‘ದೇಶದ ಆತ್ಮಸಾಕ್ಷಿ’ ನಿರೂಪಕ ಕೆಲಸಕ್ಕೆ ಹಿಂದಿರುಗಿದಾಗ ಅವರೂ ಇದೇ ನಿಲುವನ್ನು ತಳೆದರು- ಎನ್‌ಕೌಂಟರ್‌ ಬಗ್ಗೆ ಅಧಿಕೃತವಾಗಿ ನೀಡಲಾದ ವಿವರಗಳನ್ನು ಪ್ರಶ್ನಿಸುವವರು ದೇಶ ವಿರೋಧಿಗಳು ಮತ್ತು ಭಯೋತ್ಪಾದನೆಯಲ್ಲಿ ಷಾಮೀಲಾದವರು ಎಂದು ಅವರು ಹೇಳಿದರು. ಭದ್ರತಾ ಪಡೆಯ ಸಮವಸ್ತ್ರದಲ್ಲಿರುವ ಜನರನ್ನು ಯಾರೂ ಪ್ರಶ್ನಿಸಲೇಬಾರದು ಎಂದು ಅವರು ಗುಡುಗಿದರು.ಪಕ್ಷದ ವಕ್ತಾರರು ಮತ್ತು ಅತಿದೇಶಭಕ್ತ ನಿರೂಪಕರು ಭೋಪಾಲ್ ಎನ್‌ಕೌಂಟರ್‌ಗೆ ಸಂಬಂಧಿಸಿ ‘ಭದ್ರತಾ ಪಡೆಗಳು’ ಎಂಬ ಪದವನ್ನು ಬಳಸಿದರು. ರೂಪ ಮತ್ತು ಕಾರ್ಯವಿಧಾನ ಎರಡರಲ್ಲಿಯೂ ಸೇನೆ ಮತ್ತು ಪೊಲೀಸ್ ನಡುವಣ ವ್ಯತ್ಯಾಸವನ್ನು ಮರೆಮಾಚುವ ಪ್ರಯತ್ನ ಇಲ್ಲಿ ಕಾಣುತ್ತದೆ. ಯೋಧರು ಮತ್ತು ಪೊಲೀಸರು ಧರಿಸುವ ಸಮವಸ್ತ್ರ ಅವರನ್ನು ಸಾಮಾನ್ಯ ನಾಗರಿಕರಿಂದ ಪ್ರತ್ಯೇಕಿಸುತ್ತದೆ. ಸಮಾನ ಅಂಶ ಅಲ್ಲಿಗೆ ಕೊನೆಯಾಗುತ್ತದೆ. ಸಾಮಾನ್ಯವಾಗಿ ಯೋಧರು ಕಟ್ಟುಮಸ್ತು ಮತ್ತು ಆರೋಗ್ಯಪೂರ್ಣವಾಗಿದ್ದರೆ, ಪೊಲೀಸರು ಸಾಮಾನ್ಯವಾಗಿ ಬೊಜ್ಜು ದೇಹ ಹೊಂದಿರುತ್ತಾರೆ.ಗಡಿಯಲ್ಲಿ ಯೋಧರು ರಾತ್ರಿಯೆಲ್ಲ ಎಚ್ಚರವಾಗಿದ್ದರೆ ಪೊಲೀಸರು ಹಗಲಿನಲ್ಲಿಯೂ ಕರ್ತವ್ಯದ ಸಂದರ್ಭದಲ್ಲಿ ನಿದ್ದೆ ಮಾಡುತ್ತಿರುತ್ತಾರೆ. ಸೇನೆಯ ಬಹುಸಂಖ್ಯಾತ ಜನರು (ಅಧಿಕಾರಿಗಳು ಮತ್ತು ಯೋಧರು) ತಮ್ಮ ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದಿಲ್ಲ; ಆದರೆ ಭಾರತದ ಪೊಲೀಸ್ ವ್ಯವಸ್ಥೆಯಲ್ಲಿ ಎಲ್ಲ ಹಂತಗಳಲ್ಲಿಯೂ ಭ್ರಷ್ಟಾಚಾರ ಸರ್ವವ್ಯಾಪಿ. ಕೊನೆಯದಾಗಿ, ಸಾಮಾನ್ಯವಾಗಿ ಸೇನೆಯಲ್ಲಿರುವವರು ರಾಜಕೀಯದಿಂದ ದೂರ ಇರುತ್ತಾರೆ. ಆದರೆ ಎಲ್ಲ ರಾಜ್ಯಗಳಲ್ಲಿಯೂ ಪೊಲೀಸರು ಆಡಳಿತಾರೂಢ ಪಕ್ಷದ ರಾಜಕಾರಣಿಗಳ ಜತೆ ನಂಟು ಹೊಂದಿರುತ್ತಾರೆ.ಭಾರತೀಯ ಸೇನೆಯಲ್ಲಿನ ಬಡ್ತಿ ಮತ್ತು ನಿಯೋಜನೆಗಳು ಬಹುತೇಕ ಸಂಪೂರ್ಣವಾಗಿ ಪ್ರತಿಭೆ ಮತ್ತು ದಕ್ಷತೆಯನ್ನು ಆಧರಿಸಿರುತ್ತವೆ. ಯಾವ ಕಿರಿಯ ಅಧಿಕಾರಿಗೆ ಯಾವಾಗ ಬಡ್ತಿ ನೀಡಬೇಕು ಎಂಬುದನ್ನು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಬಡ್ತಿ ಮತ್ತು ನಿಯೋಜನೆಗಳನ್ನು ಬಹುತೇಕ ರಾಜಕೀಯ ವರ್ಗವೇ ನಿರ್ಧರಿಸುತ್ತದೆ. ಹಾಗಾಗಿಯೇ, ದೇಶದ ಯಾವುದೇ ರಾಜ್ಯದಲ್ಲಿ ಸರ್ಕಾರ ಬದಲಾದಾಗ ಪೊಲೀಸ್ ಅಧಿಕಾರಿಗಳ ಬದಲಾವಣೆ ಭಾರಿ ಮಟ್ಟದಲ್ಲಿಯೇ ನಡೆಯುತ್ತದೆ. ಹಿಂದಿನ ಸರ್ಕಾರಕ್ಕೆ ನಿಷ್ಠರಾಗಿದ್ದ ಅಧಿಕಾರಿಗಳನ್ನು ‘ಅಪ್ರಯೋಜಕ’ ಹುದ್ದೆಗಳಿಗೆ ತಳ್ಳಲಾಗುತ್ತದೆ ಮತ್ತು ಅಧಿಕಾರಕ್ಕೆ ಬಂದ ಪಕ್ಷಕ್ಕೆ ನಿಷ್ಠರಾಗಿದ್ದವರಿಗೆ ಅತ್ಯಂತ ಪ್ರಭಾವಿ ಮತ್ತು ಅತ್ಯಾಕರ್ಷಕ ಹುದ್ದೆಗಳನ್ನು ನೀಡಲಾಗುತ್ತದೆ.ಇದು ಹಿಂದೆ ಹೀಗೆಯೇ ಇರಲಿಲ್ಲ. ಸ್ವಾತಂತ್ರ್ಯ ಬಂದ ಮೊದಲ ಕೆಲವು ದಶಕಗಳಲ್ಲಿ ಪೊಲೀಸರ ಬಡ್ತಿ ಮತ್ತು ನಿಯೋಜನೆಗಳನ್ನು ಬಹುವಾಗಿ ಪೊಲೀಸ್ ಇಲಾಖೆಯು ಆಂತರಿಕವಾಗಿಯೇ ನಡೆಸುತ್ತಿತ್ತು. ಇಂತಹ ಪಾರದರ್ಶಕ ಮತ್ತು ಮುಕ್ತ ವ್ಯವಸ್ಥೆ ಜೂಲಿಯೊ ರಿಬಿರೊ ಅವರಂತಹ ಅತ್ಯುತ್ತಮ ಪೊಲೀಸ್ ಅಧಿಕಾರಿಗಳನ್ನು ಸೃಷ್ಟಿಸಿತ್ತು. ಆದರೆ 1970ರ ದಶಕದ ನಂತರ ಪೊಲೀಸ್ ಅಧಿಕಾರಿಗಳ ಬಡ್ತಿ ಮತ್ತು ನಿಯೋಜನೆಗಳಲ್ಲಿ ಸಚಿವರು ಮತ್ತು ಮುಖ್ಯಮಂತ್ರಿಗಳ ಹಸ್ತಕ್ಷೇಪ ಹೆಚ್ಚಾಗತೊಡಗಿತು. ವೃತ್ತಿಪರ ಉತ್ಕೃಷ್ಟತೆಗಿಂತ ವ್ಯಕ್ತಿಪರ ಮತ್ತು ರಾಜಕೀಯ ನಿಷ್ಠೆಯೇ ನಿರ್ಧಾರಕ ಅಂಶವಾದೊಡನೆ ಅದಕ್ಷತೆ ಮತ್ತು ಅಸಾಮರ್ಥ್ಯ ಅದರ ಜತೆಗೇ ಬಂತು.ಭೋಪಾಲ್‌ನಲ್ಲಿ ಇತ್ತೀಚೆಗೆ ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವುದರಲ್ಲಿ ಈ ಅದಕ್ಷತೆ ಮತ್ತು ಅಸಾಮರ್ಥ್ಯ ಎದ್ದು ಕಾಣುತ್ತದೆ. ಭೋಪಾಲ್ ಕೇಂದ್ರ ಕಾರಾಗೃಹ ಸ್ವಲ್ಪವೂ ಸುರಕ್ಷಿತವಲ್ಲ ಎಂದು 2014ರಲ್ಲಿಯೇ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಮಧ್ಯಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿದೆ. ‘ಸೆರೆಮನೆ ಕಟ್ಟಡದ ವಿನ್ಯಾಸವನ್ನು ಗಮನಿಸಿದರೆ, ಇದರಲ್ಲಿ ಹಲವು ದುರ್ಬಲ ಭಾಗಗಳಿವೆ, ಭದ್ರತಾ ವ್ಯವಸ್ಥೆ ಅತಾರ್ಕಿಕವಾಗಿದೆ ಮತ್ತು ಸಿಬ್ಬಂದಿಯ ಸ್ಥಿತಿ ಶೋಚನೀಯವಾಗಿದೆ. ಯಾವುದೇ ದೊಡ್ಡ ಘಟನೆ ನಡೆದಿಲ್ಲ ಎಂಬ ಕಾರಣಕ್ಕೆ ಎಲ್ಲವೂ ಸರಿ ಇದೆ ಎಂದು ಭಾವಿಸಬಾರದು. ದೇವರ ಸಹಾಯದಿಂದ ಹೀಗೆ ಮುಂದುವರಿಯುತ್ತಿದೆ. ಆದರೆ ದೇವರ ನೆರವು ಸದಾ ಹೀಗೆಯೇ ಇರುತ್ತದೆ ಎಂದು ಭಾವಿಸುವುದು ತಪ್ಪು’ ಎಂದು ಆ ಅಧಿಕಾರಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ವಿವರಿಸಿದ್ದರು.ಭೋಪಾಲ್ ಕೇಂದ್ರ ಕಾರಾಗೃಹದಲ್ಲಿ ಮೂರು ಸಾವಿರದ ಮುನ್ನೂರು ಕೈದಿಗಳಿದ್ದಾರೆ. ಅವರನ್ನು ಕಾಯುವುದಕ್ಕೆ 139 ಜೈಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೇಗೆ ನೋಡಿದರೂ ಇದು ಬಹಳ ಕಡಿಮೆ. ಆದರೆ ಘಟನೆ ನಡೆದ ರಾತ್ರಿ ಭದ್ರತೆಗೆ ನಿಯೋಜನೆಗೊಂಡಿದ್ದವರ ಪೈಕಿ 80 ಸಿಬ್ಬಂದಿ ಮುಖ್ಯಮಂತ್ರಿ ಮತ್ತು ಇತರ ಸಚಿವರ ಮನೆ ಕಾಯುವ ಕರ್ತವ್ಯದಲ್ಲಿದ್ದರು. ಈಗಾಗಲೇ ಸಿಬ್ಬಂದಿ ಕೊರತೆ ಇರುವ ಜೈಲಿನ ದೊಡ್ಡ ಸಂಖ್ಯೆಯ ಸಿಬ್ಬಂದಿಯ ‘ರಾಜಕೀಯ ಗೈರುಹಾಜರಿ’ ಎಂಟು ಕೈದಿಗಳು ತಪ್ಪಿಸಿಕೊಳ್ಳುವುದಕ್ಕೆ ನೆರವಾಗಿರುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಕೈದಿಗಳು ಜೈಲಿನಿಂದ ತಪ್ಪಿಸಿಕೊಂಡಿರುವುದು ಮತ್ತು ಅದನ್ನು ತಡೆಯಲು ಯತ್ನಿಸಿದ ದಿಟ್ಟ ಕಾವಲುಗಾರ ರಾಮಶಂಕರ್ ಯಾದವ್ ಸಾವಿಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಅವರ ನೇತೃತ್ವದ ಸರ್ಕಾರವೇ ಹೊಣೆ.ಜೈಲಿನಿಂದ ತಪ್ಪಿಸಿಕೊಂಡ ಕೈದಿಗಳನ್ನು ಹಿಡಿದು ಯಾವ ಆರೋಪಕ್ಕೆ ಅವರನ್ನು ಬಂಧಿಸಲಾಗಿದೆಯೋ ಅದನ್ನು ಎದುರಿಸುವಂತೆ ಮತ್ತು ಜೈಲಿನಿಂದ ಪರಾರಿಯಾದ ಹೊಸ ಆರೋಪವನ್ನೂ ಎದುರಿಸುವಂತೆ ಮಾಡುವುದು ಪೊಲೀಸರ ಕರ್ತವ್ಯ. ತಪ್ಪಿಸಿಕೊಂಡ ಅಪರಾಧಿಗಳನ್ನು ಹಿಡಿಯಲು ಹೊರಟ ಪೊಲೀಸರು ಭಾರಿ ಶಸ್ತ್ರಸಜ್ಜಿತರಾಗಿದ್ದರು. ಹಾಗಾಗಿ ತಮ್ಮ ಜೀವಕ್ಕೆ ಯಾವುದೇ ಅಪಾಯ ಆಗದಂತೆ ಅವರು ಅಪರಾಧಿಗಳನ್ನು ಹಿಡಿಯಬಹುದಿತ್ತು. ಆದರೆ ಅದರ ಬದಲಿಗೆ ಅವರು ತಪ್ಪಿಸಿಕೊಂಡ ಎಲ್ಲರನ್ನೂ ಗುಂಡು ಹಾರಿಸಿ ಕೊಲ್ಲುವುದನ್ನು ಆಯ್ಕೆ ಮಾಡಿಕೊಂಡರು. ಇದು ಅವರ ವಿರುದ್ಧದ ಸೇಡಿಗಾಗಿ ನಡೆಯಿತೇ ಅಥವಾ ತಮ್ಮ ರಾಜಕೀಯ ಧಣಿಗಳನ್ನು ಸಂಪ್ರೀತಗೊಳಿಸಲು ನಡೆಯಿತೇ ಎಂಬುದು ಯಾರಿಗೂ ಗೊತ್ತಿಲ್ಲ. ಇದು ಹೀಗೆಯೇ ಆಗುತ್ತದೆ ಎಂಬುದು ಮಧ್ಯಪ್ರದೇಶ ಪೊಲೀಸರಿಗೆ ತಿಳಿದಿತ್ತು ಎಂಬುದು ಸ್ಪಷ್ಟ- ಯಾಕೆಂದರೆ ನರಹಂತಕರಾಗಿ ಬದಲಾದ ಅಧಿಕಾರಿಯೊಬ್ಬರು ಇದೊಂದು ನಕಲಿ ಎನ್‌ಕೌಂಟರ್ ಎಂದು ಹೇಳಿದ್ದಾರೆ.ನಮ್ಮನ್ನು ಖಿನ್ನಗೊಳಿಸುವ ಒಂದು ಸಂಗತಿ ಏನೆಂದರೆ, ಭೋಪಾಲ್‌ನಲ್ಲಿ ನಡೆದಿರುವುದು ಭಾರತದ ಯಾವ ಭಾಗದಲ್ಲಿಯಾದರೂ ನಡೆಯಬಹುದಾದ ಘಟನೆ. ಭಾರತದ ಇತರೆಡೆಗಳಲ್ಲಿನ ಜೈಲುಗಳು ಇನ್ನೂ ಕಡಿಮೆ ಸಿಬ್ಬಂದಿಯನ್ನು ಹೊಂದಿವೆ ಮತ್ತು ಕಡಿಮೆ ಸುರಕ್ಷಿತವಾಗಿವೆ. ಕರ್ತವ್ಯದಲ್ಲಿರುವ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಖಾತರಿಪಡಿಸುವ ಬದಲು ಸಚಿವರನ್ನು ಸಂಪ್ರೀತಗೊಳಿಸುವುದಕ್ಕೇ ಹೆಚ್ಚು ಮಹತ್ವ ನೀಡಬಹುದು.

ಭಾರತದ ವಿವಿಧೆಡೆಗಳಲ್ಲಿ ಎನ್‌ಕೌಂಟರ್ ಹತ್ಯೆಗಳು ನಡೆದಿವೆ: ಒಂದು ಕಾಲದಲ್ಲಿ ಕಾಂಗ್ರೆಸ್ ಆಡಳಿತವಿದ್ದ ಆಂಧ್ರಪ್ರದೇಶ ಮತ್ತು ಕಮ್ಯುನಿಸ್ಟ್ ಆಡಳಿತವಿದ್ದ ಪಶ್ಚಿಮ ಬಂಗಾಳಗಳಲ್ಲಿ ಅವು ಸಾಮಾನ್ಯವಾಗಿದ್ದವು. ಈಗ ಬಿಜೆಪಿ ಆಡಳಿತವಿರುವ ಛತ್ತೀಸಗಡದಲ್ಲಿ ಅದು ಸಾಮಾನ್ಯವಾಗಿದೆ. ಬಂಡಾಯ ಚಟುವಟಿಕೆಗಳು ತೀವ್ರವಾಗಿರುವ ಮಣಿಪುರ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿಯೂ ನಿಯಮಿತವಾಗಿ ಎನ್‌ಕೌಂಟರ್‌ಗಳು ನಡೆಯುತ್ತಿವೆ. 

ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದವರು ಹಿಂಸಾಪ್ರಿಯ ಮಾವೊವಾದಿಗಳು ಮತ್ತು ಭಯೋತ್ಪಾದಕರು ಮಾತ್ರವಲ್ಲ; ಸಣ್ಣ ಪುಟ್ಟ ಅಪರಾಧ ಎಸಗಿದವರು, ಹಲವು ಮುಗ್ಧ ಜನರೂ ಈ ಪಟ್ಟಿಯಲ್ಲಿದ್ದಾರೆ.ನಮ್ಮ ಯಾವುದೇ ರಾಜ್ಯದ ಅಥವಾ ಎಲ್ಲ ರಾಜ್ಯಗಳ ಪೊಲೀಸರ ನಡತೆಯನ್ನು ಮೂರು ಪದಗಳು ಅತ್ಯುತ್ತಮವಾಗಿ ಹಿಡಿದಿಡುತ್ತವೆ: ಭ್ರಷ್ಟ, ಅದಕ್ಷ ಮತ್ತು ಪಕ್ಷಪಾತಿ. ಮುಸ್ಲಿಮರಿಗೆ ತಮ್ಮ ಮೇಲೆ ವಿಶ್ವಾಸ ಇಲ್ಲ ಎಂದು 2014ರ ಜುಲೈನಲ್ಲಿ ಮುಂಬೈ ಪೊಲೀಸರು ಒಪ್ಪಿಕೊಂಡ ವಿರಳ ಘಟನೆ ನಡೆದಿದೆ. ಪೊಲೀಸರೆಂದರೆ ‘ಕೋಮುವಾದಿಗಳು, ಪೂರ್ವಗ್ರಹಪೀಡಿತರು ಮತ್ತು ಸೂಕ್ಷ್ಮತೆ ಇಲ್ಲದವರು’; ಮಾತ್ರವಲ್ಲ, ‘ಸರಿಯಾದ ಶಿಕ್ಷಣ ಇಲ್ಲದವರು, ಭ್ರಷ್ಟರು ಮತ್ತು ವೃತ್ತಿಪರತೆ ಇಲ್ಲದವರು’ ಎಂದು ಮುಸ್ಲಿಮರು ಭಾವಿಸಿದ್ದಾರೆ ಎಂದು ಆಗ ಪೊಲೀಸರೇ ಹೇಳಿದ್ದರು. ಮುಸ್ಲಿಮರು ಹೇಳಿರುವ ಎರಡನೇ ಅಂಶವನ್ನು ದೇಶದ ಎಲ್ಲರೂ  ಧರ್ಮಾತೀತವಾಗಿ ಒಪ್ಪಿಕೊಳ್ಳುತ್ತಾರೆ.ಭೋಪಾಲ್‌ನ ಜೈಲಿನಿಂದ ಕೈದಿಗಳು ತಪ್ಪಿಸಿಕೊಂಡ ಮತ್ತು ನಂತರ ಅವರು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಪ್ರಕರಣದ ವಿಮರ್ಶಾತ್ಮಕ ವಿಶ್ಲೇಷಣೆಯನ್ನು ದಮನ ಮಾಡಲು ಪಕ್ಷದ ವಕ್ತಾರರು ಮತ್ತು ಸುದ್ದಿವಾಹಿನಿ ನಿರೂಪಕರು ಶ್ರಮಿಸುತ್ತಿರುವುದನ್ನು ಅಂಕಣದ ಆರಂಭದಲ್ಲಿ ಉಲ್ಲೇಖಿಸಿದ್ದೇನೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಕಿರಣ್‌ ರಿಜಿಜು ಅವರು ಎನ್‌ಕೌಂಟರ್‌ ಬಗ್ಗೆ ನೀಡಿರುವ ಹೇಳಿಕೆ ಅವರು ಹೊಂದಿರುವ ಸ್ಥಾನದಿಂದಾಗಿ ಇನ್ನೂ ಹೆಚ್ಚು ಕೆಡುಕಿನಿಂದ ಕೂಡಿದ್ದು ಅನಿಸುತ್ತಿದೆ. ಎನ್‌ಕೌಂಟರ್‌ ಬಗ್ಗೆ ಮಧ್ಯಪ್ರದೇಶ ಸರ್ಕಾರ ನೀಡಿರುವ ಅಧಿಕೃತ ಹೇಳಿಕೆಯನ್ನು ಪ್ರಶ್ನಿಸಿದವರಿಗೆ ರಿಜಿಜು ಉತ್ತರ ನೀಡಿದ್ದಾರೆ. ‘ದ ಟೆಲಿಗ್ರಾಫ್‌’ ಪತ್ರಿಕೆಯಲ್ಲಿ ಪ್ರಕಟವಾದಂತೆ ಆ ಹೇಳಿಕೆ ಹೀಗಿದೆ: ‘ಪೊಲೀಸರ ಬಗ್ಗೆ ಅನುಮಾನ ವ್ಯಕ್ತಪಡಿಸುವುದನ್ನು ಮತ್ತು ಅವರ ಅಧಿಕಾರವನ್ನು ಪ್ರಶ್ನಿಸುವುದನ್ನು ಮೊದಲಿಗೆ ಬಿಡಬೇಕು. ಇದು ಒಳ್ಳೆಯ ಸಂಸ್ಕೃತಿ ಅಲ್ಲ. ಆದರೆ ಅನಗತ್ಯ ಅನುಮಾನ ವ್ಯಕ್ತಪಡಿಸುವ ಮತ್ತು ಪ್ರಶ್ನೆಗಳನ್ನು ಎತ್ತುವ ಅಭ್ಯಾಸವನ್ನು ನಾವು ಭಾರತದಲ್ಲಿ ಕಾಣುತ್ತಿದ್ದೇವೆ’.ರಿಜಿಜು ಅವರ ಹೇಳಿಕೆ ಮೂರ್ಖತನದಿಂದ ಕೂಡಿದ್ದು ಮತ್ತು ಬೇಜವಾಬ್ದಾರಿಯುತವಾದುದು. ಸಚಿವನಾಗಿ ಅವರು ಸ್ವೀಕರಿಸಿರುವ ಪ್ರಮಾಣದ ಪ್ರಕಾರ, ದೇಶದ ಜನರಿಗೆ ಪ್ರಾಮಾಣಿಕ ಮತ್ತು ದಕ್ಷವಾದ ಪೊಲೀಸ್‌ ಪಡೆಯನ್ನು ನೀಡುವುದು ಅವರ ಹೊಣೆ. ಭಾರತದ ಪೊಲೀಸ್‌ ವ್ಯವಸ್ಥೆ ಎಷ್ಟೊಂದು ಕೆಟ್ಟಿದೆ ಎಂಬುದನ್ನು ಭೋಪಾಲ್‌ನ ಘಟನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ. ಸಾಮಾನ್ಯ ಜನರನ್ನು ರಕ್ಷಿಸುವ ಅಸಾಮರ್ಥ್ಯ,  ಪ್ರಾಮಾಣಿಕತೆಯ ಕೊರತೆ,  ಹಿಂಸಾಪ್ರವೃತ್ತಿ, ತಮ್ಮ ರಾಜಕೀಯ ಧಣಿಗಳ ದುರುದ್ದೇಶಪೂರಿತ ಬೇಡಿಕೆಗಳನ್ನು ತಿರಸ್ಕರಿಸುವ ಶಕ್ತಿ ಇಲ್ಲದಿರುವುದು ಎಲ್ಲವೂ ಭಾರತಕ್ಕೆ ಅಪಮಾನ ಉಂಟು ಮಾಡುತ್ತಿದೆ. ಹಾದಿ ತಪ್ಪಿರುವ ಪೊಲೀಸ್‌ ವ್ಯವಸ್ಥೆಯನ್ನು ಸರಿಪಡಿಸುವುದು ಗೃಹ ಸಚಿವಾಲಯ, ಅದರ ಸಚಿವರು ಮತ್ತು ಅಧಿಕಾರಿಗಳ ಕೆಲಸ ಎಂದು ಸಂವಿಧಾನ ಹೇಳುತ್ತದೆ. ಈ ಕರ್ತವ್ಯ ನೆರವೇರಿಸುವಲ್ಲಿ ಹಿಂದಿನ ಸರ್ಕಾರಗಳು (ಉದ್ದೇಶಪೂರ್ವಕವಾಗಿಯೇ) ವಿಫಲವಾಗಿವೆ. ರಿಜಿಜು ಅವರ ಹೇಳಿಕೆಯ ಅಧಾರದಲ್ಲಿ ನೋಡುವುದಾದರೆ ಈ ಸರ್ಕಾರವೂ ಈ  ಕರ್ತವ್ಯದಲ್ಲಿ (ಉದ್ದೇಶಪೂರ್ವಕವಾಗಿಯೇ) ವಿಫಲವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry