ಭಾನುವಾರ, ಡಿಸೆಂಬರ್ 8, 2019
20 °C

ಅಮೆರಿಕ: ಹೊಸ ಅಧ್ಯಕ್ಷರ ವಿರುದ್ಧ ಬೀದಿಗಿಳಿದ ಜನ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೆರಿಕ: ಹೊಸ ಅಧ್ಯಕ್ಷರ ವಿರುದ್ಧ ಬೀದಿಗಿಳಿದ ಜನ

ನ್ಯೂಯಾರ್ಕ್: ‘ಸ್ತ್ರೀ ದ್ವೇಷಿ ನಮಗೆ ಬೇಕಿಲ್ಲ’, ‘ಅಮೆರಿಕ ಫ್ಯಾಸಿಸ್ಟ್‌ ದೇಶವಲ್ಲ’, ‘ಟ್ರಂಪ್ ನಮ್ಮ ಅಧ್ಯಕ್ಷನಲ್ಲ’... ಮಂಗಳವಾರ ನಡೆದ ಮತದಾನದಲ್ಲಿ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ಖಂಡಿಸಿ, ಅಮೆರಿಕದ ವಿವಿಧೆಡೆ ಸಾವಿರಾರು ಜನರು ನಡೆಸಿದ ಪ್ರತಿಭಟನೆಗಳಲ್ಲಿ ಕೇಳಿಬಂದ ಘೋಷಣೆಗಳಿವು.

ಚುನಾವಣೆಯ ಫಲಿತಾಂಶವನ್ನು ಖಂಡಿಸಿ ‘ಸೋಷಿಯಲಿಸ್ಟ್ ಆಲ್ಟರ್‌ನೇಟಿವ್ಸ್‌್’ ಎಂಬ ಸಂಘಟನೆ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಮಕ್ಕಳಿಂದ ವೃದ್ಧರವರೆಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಿಲಡೆಲ್ಫಿಯ, ಬಾಸ್ಟನ್, ಸಿಯಾಟಲ್, ಲಾಸ್‌ ಏಂಜಲೀಸ್‌, ಅಟ್ಲಾಂಟ, ಆಸ್ಟಿನ್, ಸ್ಯಾನ್‌ ಫ್ರಾನ್ಸಿಸ್ಕೊಗಳ ಹಲವೆಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಟ್ರಂಪ್‌ ವಿರುದ್ಧ ಘೋಷಣೆ ಕೂಗಿದರು. ಆ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. ಗುರುವಾರವೂ ವಾಷಿಂಗ್ಟನ್‌ ಡಿ.ಸಿಯಲ್ಲಿರುವ ಶ್ವೇತಭವನದ ಎದುರು ಕೆಲವರು ಪ್ರತಿಭಟನೆ ನಡೆಸಿದರು. ಬುಧವಾರ ಇಲ್ಲಿ ಮೇಣದಬತ್ತಿ ಬೆಳಗಿ ಪ್ರತಿಭಟನೆ ನಡೆಸಲಾಗಿತ್ತು. ನ್ಯೂಯಾರ್ಕ್‌ನಲ್ಲಿ ಟ್ರಂಪ್‌ ಅವರ ಕಚೇರಿ ಇರುವ ಟ್ರಂಪ್‌ ಟವರ್‌ ಸಮೀಪ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಹಿವಾಟು ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು.

ಲಾಸ್ ಏಂಜಲೀಸ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರಂಪ್‌ ಪ್ರತಿಕೃತಿಯನ್ನು ಸುಡಲಾಗಿದೆ.

‘ಕ್ಯಾಲ್‌ಎಕ್ಸಿಟ್’ ಅಭಿಯಾನ

ಕ್ಯಾಲಿಫೋರ್ನಿಯಾದ 55 ಎಲೆಕ್ಟೋರಲ್ ಮತಗಳನ್ನು ಹಿಲರಿ ಗೆದ್ದಿದ್ದಾರೆ. ಆದರೂ ಚುನಾವಣೆಯಲ್ಲಿ ಟ್ರಂಪ್‌ ಗೆದ್ದು, ಅಮೆರಿಕದ ಅಧ್ಯಕ್ಷರಾಗುತ್ತಿದ್ದಾರೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆಯೇ ಸಿಗುತ್ತಿಲ್ಲ  ಎಂಬುದು ಇಲ್ಲಿನ ಜನರ ಆಕ್ರೋಶ.

ಹೀಗಾಗಿ ಅಮೆರಿಕದಿಂದ ಕ್ಯಾಲಿಪೋರ್ನಿಯಾವನ್ನು ಬೇರ್ಪಡಿಸಿ ಎಂಬ ಕೂಗು ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಲ್‌ಎಕ್ಸಿಟ್ (#Calexit) ಅಭಿಯಾನ ಆರಂಭವಾಗಿದೆ.

ಪ್ರತಿಕ್ರಿಯಿಸಿ (+)